ಶನಿವಾರ, ಡಿಸೆಂಬರ್ 27, 2008

ಹಾಡು ಮತ್ತು ಸಂಗೀತ

ಹಾಡು ಮತ್ತು ಸಂಗೀತ ಒಂದಕ್ಕೊಂದು ಜೊತೆಯಾಗೇ ಬರುವ ನಾವೇ ಕಂಡುಕೊಂಡ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ ಎರಡು ತೆಲೆಮೆಯ ಸರಕುಗಳು. ಆದರೆ ಇವುಗಳಲ್ಲಿ ಬೇರೆಬೇರೆಯಾಗಿ ಗುರುತಿಸಬಲ್ಲ ಹಲ ಅಂಶಗಳ ಬಗ್ಗೆ ನೋಡೋಣ.
ಹಳೇ ಕಾಲದಿಂದಲೂ ನಮ್ಮಲ್ಲಿ ಹಾಡು ಕಟ್ಟುವುದು, ಕುಣಿಯುವುದು ನಮ್ಮ ನಡಾವಳಿಯ ಒಂದು ಚೂರಾಗಿ ಬಂದಿದೆ. ಇದೇ ಈಗ ಬೆಳೆದು ಜನಪದವೆಂಬ ಹೆಮ್ಮರವಾಗಿ ನಮ್ಮ ಇಂದಿನ ಹಾಡು-ಕುಣಿತಕ್ಕೆ ತಳಪಾಯವಾಗಿ ನಿಂತಿದೆ.

"ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ - ಹೀಗೆಂದು ಕವಿರಾಜಮಾರ್ಗಕಾರನು ಕನ್ನಡಿಗರಿಗೆ ಹಾಡುಗಬ್ಬ, ಬಾಯಿಗಬ್ಬಗಳ ಬಗ್ಗೆ ಇರುವ ಒಲವನ್ನು ತೋರಿಸಿಕೊಟ್ಟಿದ್ದಾನೆ. ಆದರೆ ಹಾಡು ಎಂಬ ಕಲೆಯ ಬಗೆ ಉಂಟಾಗುವಾಗ, ಉಂಟಾಗುತ್ತಿರುವಾಗ ಅದು ಒಂದು ಮರುಕಳಿಕೆ(rhythm) ಹೊಂದಿಕೊಳ್ಳಬಲ್ಲ ಪದಕಂತೆಗಳಾಗಿ ಹೊರಹೊಮ್ಮುತ್ತಿದ್ದವು. ಆಗ ಈ ಶ್ರುತಿ, ತಾಳ ಇವುಗಳ ಬಗ್ಗೆ ಹಾಡು ಕಟ್ಟುವವರ ಅತವ ಹಾಡುವವರ ಅರಿವಿಲ್ಲದಂತೆ ಅವು ಹಾಡಿನೊಂದಿಗೆ ಬೆರೆತಿರುತ್ತಿದ್ದವು. ಅಂದರೆ ಆಗ 'ಇನಿ'/ಸಂಗೀತ(ನಯಗೊಳಿಸಿದ, ಒಪವೋರಣಗೊಳಿಸಿದ ಹಾಡು ಅಂತ ಇದರ ತಿರುಳಿರಬಹುದು. ಆದರೆ ಈ ತಿರುಳು ಅಶ್ಟು ಸರಿಯಾಗಿಲ್ಲವೆಂದು ಮುಂದೆ ತಿಳಿಸುವೆ) ಎನ್ನುವ ಕಲೆ ಇನ್ನು ಎಳೆಸಾಗಿ ಉಳಿದಿತ್ತು. ಅಂದರೆ ಹಾಡಿನಲ್ಲಿ ಮೊದಲು ಅದರಲ್ಲಿರುವ ಪದಗಳು ಮತ್ತು ಪದಗಳನ್ನು ಕಟ್ಟುವ ಬಗೆ, ಕಟ್ಟುವಾಗ ಹೇಗೆ ಅದನ್ನು ಮರುಕಳಿಸುವ ಬಗೆಯಲ್ಲಿ (ಲಯಬದ್ದ) ಅದನ್ನು ಹೇಳಬಹುದು/ಹಾಡಬಹುದು ಎಂಬುವುದರ ಮೇಲೆ ಹಾಡು ಕಟ್ಟುಗರು ಹಾಡುಗಳನ್ನು ಕಟ್ಟುತ್ತಿದ್ದರು ಎಂದು ಅಯ್ಬಿಲ್ಲದೆ ಹೇಳಬಹುದು. ಹಾಗದರೆ ಹಿಂದಿನಿಂದಲೂ ಹಾಡಿನಲ್ಲಿರುವ ಪದಗಳಿಗೆ( ಸಾಹಿತ್ಯಕ್ಕೆ) ಹೆಚ್ಚು ಒತ್ತೇ ಹೊರತು ಈಗಿನ ಕಾಲದ ಹಾಡಿಗೆ ಬೇಕಾದ ಶ್ರುತಿ, ತಾಳ ಇವುಗಳಲ್ಲ ಎಂದು ಹೇಳುವುದಕ್ಕೆ ಅಡ್ಡಿಯಿಲ್ಲ. ಈ ಮಾತು ಇಂದಿಗೂ ಜನರ ಬಾಯಲ್ಲಿ ನಲಿಯುವ ಹಾಡಿಗಳಿಗೂ ಹೊಂದುತ್ತದೆ ಏಕೆಂದರೆ ಒಂದು ಸಿನಿಮಾಹಾಡು ಮೇಣ್ ಅನಿಸುವಾಡು(ಬಾವಗೀತೆ) ಇವುಗಳಲ್ಲಿ ಹಾಡಿನ ಪದಗಳಿಗೇ ಹೆಚ್ಚು ಮನ್ನಣೆ ಹೊರತು ಸಂಗೀತಕ್ಕಲ್ಲ. ಸಂಗೀತವಿದ್ದರೂ ಅದು ಹಾಡಿನ ಅನಿಸು/ಪದಗಳನ್ನು ಇನ್ನು ಹೆಚ್ಚು ಮೇಲ್ಮೆಗೊಳಿಸುವಂತೆ ಮಾಡಲು ಮಾತ್ರ. ಈಗಲೂ ಹಾಡುಗಳಲ್ಲಿ ಬರುವ ಪದಗಳಲ್ಲಿ ತಪ್ಪುಗಳಾದರೆ ತಟ್ಟನೆ ಮಂದಿ ಅದನ್ನ ಎತ್ತಿ ತೋರಿಸುವರು ಆದರೆ ಶ್ರುತಿ, ತಾಳಗಳಲ್ಲಿ ತಪ್ಪುಗಳಾದರೆ ಹೆಚ್ಚು ಮಂದಿಗೆ ಆ ತಪ್ಪುಗಳನ್ನು ಎತ್ತಿ ತೋರಿಸಲಾಗುವುದಿಲ್ಲ. ಅಂದರೆ ಇಂದಿಗೂ ಹೆಚ್ಚು ಮಂದಿಯ ಮಟ್ಟಿಗೆ ಪದಗಳಿಗೆ ಹೆಚ್ಚು ಬೆಲೆ ಹೊರತು ಶ್ರುತಿ, ತಾಳಕ್ಕಲ್ಲ.
ಇಂದಿಗೂ ಜನಪದ ಹಾಡುಗಳು ಮಂದಿಯ ಮನಸ್ಸಿಗೆ ಹತ್ತಿರವಾಗಿರುವುದು ಇದಕ್ಕೋಸ್ಕರವಾಗಿಯೇ. ಹಾಡು ಕಟ್ಟುವುದು ನಮ್ಮ ಬುಡಕಟ್ಟಿಗೆ ಹೆಚ್ಚು ಪಳಗಿರುವ ಕಲೆ ಆದರೆ ಸಂಗೀತ ಹಾಡು ಕಟ್ಟುವುದಕ್ಕೆ ಹೋಲಿಸಿದರೆ ತೀರ ಇತ್ತೀಚಿನದು. ಅಂತೆ ಹೇಳುವ 'ಶಾಸ್ತ್ರೀಯ ಸಂಗೀತ'ವೆನ್ನುವುದು ಕೆಲವೇ ಮಂದಿಗೆ ಅರ್ತವಾಗುವ ಕಲೆಯಬಗೆ. ಮತ್ತು ಹಲವು ಬಾರಿ ನನಗೆ ಅದು ಕೆಲವೇ ಮಂದಿಗೋಸ್ಕರವಾಗಿಯೇ ಇದೆಯಂದೂ ನನ್ನ ಅಯ್ಬು.
ಕವಿರಾಜಮಾರ್ಗದಲ್ಲಿರುವಂತೆ ಹಾಡುಗಬ್ಬ(ಜನಪದ), ನೋಟಗಬ್ಬ(ಯಕ್ಸಗಾನ, ಬಯಲಾಟ) ಎಂಬೆರೆಡು ಕಲೆಬಗೆಗಳು ಬಹಳ ಹಿಂದಿನ ಕಾಲದಿಂದಲೂ ಬಳಕೆಗೆ ಬಂದಿದೆ.

ಕೊನೆಯದಾಗಿ, ಹಾಡುಗಬ್ಬಗಳು ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿಕೊಂಡ ಕಲೆ. ಇದು 'ಮಂದಿಯಾಳ್ವಿಕೆ' ಯ 'ಅರಿವಿನರಿಮೆ'ಗಳ ಹುರುಪಿಗೆ ಹೊಂದುತ್ತದೆ. ಹಾಗಾಗಿ ಪದಗಳಿಗೆ ಬೆಲೆಕೊಡುವ ಕಲೆಯಬಗೆಗಳು ಬಹಳ ಕಾಲ ಬಾಳುತ್ತವೆ ಎಂದು ಹೇಳಬಹುದು.

2 ಕಾಮೆಂಟ್‌ಗಳು:

Khavi ಹೇಳಿದರು...

ಹಾಡಿನಬಗ್ಗೆ ಚೆಲುವಾಗಿ ಬರೆದಿದ್ದೀರ... ನೋಟಗಬ್ಬದ ಬಗ್ಗೆ ತುಸು ಹೆಚ್ಚಿಗೆ ಬರೆಯಿರಿ..

ಮೊದಲು ಅಚ್ಚಕನ್ನಡದಲಿ ಬರೆದುದನ್ನು ಜನ ಓದಿದಾಗ ಅದು ನನಗೆ ಅರಿತವಾಗಿಲ್ಲ ಎಂದು ಮೂದಲಿಸುವುದನ್ನು ನಾನು ಸಂಪದದಲ್ಲಿ ಕಾಣ್ತಿದ್ದೆ... ಅದು ಏಕೆಂದರೆ ಅಚ್ಚಕನ್ನಡದಲ್ಲಿ ಬರೆದಿದ್ದು ಸಾದಾರಣವಾಗಿ ಹೊಸ ಬಗೆ ಬರಹವಾಗಿರುವುದರಿಂದ ಜನರ ಮನಸ್ಸು ಅಲ್ಲಿರುವ ಹೊಸ ಪದಗಳ ಬಳಕೆ, ಅವುಗಳ ಹೊಸಕೂಡುವಿಕೆಗೆ ಮನಸು ಹರಿದು.. ಅದರ ಒಟ್ಟಾಗಿ ಬರಹದ ಮೂಲ ತಿಳಿವಿಗೆ ಹೆಚ್ಚು ಒತ್ತು ಕೊಡದೇ ಹೋಗುತಾರೆ.. ಅದರಿಂದ ಮತ್ತೆ ಮತ್ತೆ ಓದಬೇಕಾಗುತ್ತೆ... ಇದನ್ನೆ ಅವರು ಇದು ನನಗೆ ಸರಿಯಾಗಿ ಅರಿತವಾಗಿಲ್ಲ ಅನೊ ದೂರು ಕೊಡ್ತಾರೆ..

ಹಾಗೆ ನೋಡಿದರೆ ಅಚ್ಚಕನ್ನಡದಲ್ಲಿ ಬರೆದುದನ್ನು ಹೆಚ್ಚು ಹೆಚ್ಚು ಓದಿದ ಹಾಗೆ ಅದರ ಸೊಬಗು ಸವಿದು..ಜೊತೆಗೆ ಅದರ ಬರಹದ ಒಳ ತಿಳಿವು ಅರಿವಾಗುವುದು... ಅಲ್ಲದೆ ಇದು ಹೊಸಬಗೆಯ ಬರವಣಿಗೆಗೆ ನಾಂದಿಯು ಹೌದು... ಹೊಸರುಚಿಯು ಹೌದು.. ಒಂತರ ಹೇಗೆ ಅಂದರೆ ಒಂದೆ ತೆರನಾದ ಸಿನೆಮಾ ನೋಡಿ ನೋಡಿ ಬೇಜಾರದಮನಕ್ಕೆ ಹೊಸತರದ ಸಿನೆಮ ಮೊದಲು ಹಿಡಿಸುವುದಿಲ್ಲ.. ಆದರೆ ಆಮೆಲೆ ಅದಕ್ಕೆ ಒಮ್ಮೆ ಅಂಟಿದರೆ ಸಾಕು ಅದು ಬಿಡುವುದಿಲ್ಲ ಅಲ್ಲವೆ.. ಹಾಗೆ.. ಸರಿ.. ಇಸ್ಯ ಬೆರೆ ಎಲ್ಲೊ ಹೋಯ್ತು ಮನ್ನಿಸಿ..

ಒಟ್ಟಿನಲ್ಲಿ ಚೆನ್ನಾಗಿ ಜತುನಗೈದಿರುವಿ..

Bharath ಹೇಳಿದರು...

ವಿನಾಯಕ ನಿಮ್ಮ ಕಮೆಂಟುಗಳಿಗೆ ನನ್ನಿ..
ನೋಟಗಬ್ಬ ಅಂದರೆ ಯಕ್ಸಗಾನದ ಬಗ್ಗೆ ಬರೆಯಲು ನನಗೆ ಅಶ್ಟು ತಕ್ಕುಮೆ ಇಲ್ಲ. ಅದರ ಬಗ್ಗೆ ಹೊತ್ತಿಗೆಗಳು ಬಂದಿವೆ. ಓದಿ ತಿಳಿಯಬೇಕು.