ಶನಿವಾರ, ಜನವರಿ 26, 2013

ಮಂದಿಯಾಳ್ವಿಕೆಗೆ ಏಕೆ ಬೆಲೆ ಕೊಡಬೇಕು?

ಹೊಸಗಾಲದ ಮಾನವನ ಕಂಡುಕೊಳ್ಳುವಿಕೆಗಳಲ್ಲಿ ಬಲು ಅರಿದಾದುದು ಈ ಮಂದಿಯಾಳ್ವಿಕೆ. ಹಲವಾರು ವರುಶಗಳಿಂದ ಮಾನವನು ಪರಿಸರದ ಕಟ್ಟಲೆಯನ್ನೇ ಒಪ್ಪಿಕೊಂಡು ತನ್ನ ಬದುಕನ್ನು ಸಾಗಿಸುತ್ತಿದ್ದ. ಆಮೇಲೆ ಕಾರಣಾಂತರಗಳಿಂದ ಅರಸರಾಳ್ವಿಕೆಯನ್ನು ಒಪ್ಪಿಕೊಳ್ಳಬೇಕಾಯಿತು. ಈಗ ಮಂದಿಯಾಳ್ವಿಕೆಯ ಹೊತ್ತು ಬಂದು ನಿಂತಿದೆ. ಹಾಗಾದರೆ ಪರಿಸರದ ಕಟ್ಟಲೆ, ಅರಸರ ಕಟ್ಟಲೆ ಇವನ್ನೆಲ್ಲ ತೊರೆದು ಮಂದಿಯಾಳ್ವಿಕೆಗೇ ಯಾಕೆ ಮಾನವ ಬಂದು ನಿಂತಿದ್ದಾನೆ? ಮಂದಿಯಾಳ್ವಿಕೆಗೂ ಮುಂಚೆ ಇದ್ದ ಏರ್ಪಾಟುಗಳಲ್ಲಿ ಇದ್ದ ಕೊರತೆಗಳೇನು ಎಂಬುದನ್ನು ಇಲ್ಲಿ ಅರಿತುಕೊಳ್ಳಬೇಕಾಗುತ್ತದೆ.
     ಮಾನವನನ್ನೇ ಎತ್ತುಗೆಯಾಗಿ ತೆಗೆದುಕೊಂಡರೆ, ಪರಿಸರದ ಕಟ್ಟಲೆಯಲ್ಲಿ ಸಾಟಿತನ ಇಲ್ಲವಾಗಿದೆ ಯಾಕಂದರೆ ಕೆಲವರು ಹುಟ್ಟಿನಿಂದಲೇ ಒಳ್ಳೆಯ ಮಯ್ ಕಟ್ಟನ್ನು ಪಡೆದುಕೊಂಡಿರುತ್ತಾರೆ; ಕೆಲವರು ಪಡೆದುಕೊಂಡಿರುವುದಿಲ್ಲ. ಇನ್ನು ಕೆಲವರು ಹುಟ್ಟಿನಿಂದಲೇ ಹೆಚ್ಚು ಬುದ್ದಿಶಕ್ತಿಯನ್ನು ಇಲ್ಲವೆ ಸಿರಿತನವನ್ನು ಹೊಂದಿರುತ್ತಾರೆ. ಹಾಗಾಗಿ ಮಯ್ಕಟ್ಟನ್ನು ಹೊಂದಿರುವವರು ಇಲ್ಲವೆ ಬುದ್ದಿಶಕ್ತಿಯನ್ನು ಹೊಂದಿರುವವರು ಇಲ್ಲದಿರುವವರಗಿಂತ ಮುಂದಿರುತ್ತಾರೆ. ಹಾಗಾಗಿ ಪರಿಸರದ ಕಟ್ಟಲೆಯಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ನಡೆಸಬಹುದಾಗಿದೆ ಅಂದರೆ ಇಲ್ಲದವರು ಇರುವವರ ಅಡಿಯಾಳಾಗಿ ಬದುಕಬೇಕಾಗುತ್ತದೆ. ಪರಿಸರದ ಕಟ್ಟಲೆಯಲ್ಲಿ ಇಲ್ಲವೆ ಅರಸರ ಆಳ್ವಿಕೆಯಲ್ಲಿ ಇದು ಎಶ್ಟರ ಮಟ್ಟಿಗೆ ಹೋಗಿತ್ತೆಂದರೆ ಇಲ್ಲದವರು ಇರುವವರ ಅಡಿಯಾಳಾಗಿ ಇರುವುದೇ ಅವರ ದರ್ಮ ಎಂದು ಹೇಳಲಾಗುತ್ತಿತ್ತು!! ಹಾಗಾಗಿ ಇಲ್ಲದವರ ಪಾಡು ಹೇಳತೀರದಾಗಿತ್ತು.

     ಮೇಲಿನಿಂದ ತಿಳಿಯುವುದೇನೆಂದರೆ ಪರಿಸರದಾಳ್ವಿಕೆಯಾಗಲಿ , ಅರಸರಾಳ್ವಿಕೆಯಾಗಲಿ ತುಂಬು ಸಾಟಿತನಕ್ಕೆ ಇಂಬು ಕೊಡುವುದಿಲ್ಲ. ಇದೇ ಈ ಏರ್ಪಾಟುಗಳ ಬಲು ದೊಡ್ಡ ಕೊರತೆ. ತುಂಬು ಸಾಟಿತನವಿಲ್ಲದಿದ್ದರೆ ಅಲ್ಲಿ ಇಲ್ಲದವರು ಗವ್ರವದ ಬದುಕನ್ನು ಬಾಳಲಾಗುವುದಿಲ್ಲ. ಹಾಗಾದರೆ ಮಂದಿಯಾಳ್ವಿಕೆ ತುಂಬು ಸಾಟಿತನವನ್ನು ನೀಡುವುದೇ ಎಂಬ ಕೇಳ್ವಿಯು ಮುಂದೆ ಬರುವುದು. ಮಂದಿಯಾಳ್ವಿಕೆ ತುಂಬು ಸಾಟಿತನವನ್ನು ನೀಡದಿದ್ದರು ಆ ಕಡೆಗೆ ಒಂದು ದೊಡ್ಡ ಹೆಜ್ಜೆಯನ್ನು ಇಡುತ್ತದೆ. ಆ ಹೆಜ್ಜೆಯ ನೆರವಿನಿಂದ ಮಂದಿಯಾಳ್ವಿಕೆಯೆಂಬ ಏರ್ಪಾಟನ್ನು ಸರಿಪಡಿಸಿಕೊಳ್ಳುತ್ತಾ ತುಂಬು ಸಾಟಿತನವನ್ನು ಪಡೆಯುವುದು ಹೊಸಗಾಲದ ಮಾನವನ ಮೇಲಿರುವ ಹೊಣೆಯಾಗಿದೆ. ಹಾಗಾಗಿ ಮಾನವ ಸಾಟಿತನವನ್ನು ಅರಸುತ್ತಾ ಇಂದು ಮಂದಿಯಾಳ್ವಿಕೆಯ ಹೊಸ್ತಿಲಲ್ಲಿ ಬಂದು ನಿಂತಿದ್ದಾನೆ. ಹೀಗೆ ಮಂದಿಯಾಳ್ವಿಕೆಗೆ ಬಂದು ನಿಂತಿರುವುದನ್ನು ನೋಡಿದರೆ ಮಾನವ ಹೆಚ್ಚು ಹೆಚ್ಚು ಮಾನವೀಯತೆಯನ್ನು ಮಯ್ಗೂಡಿಸಿಕೊಳ್ಳಬೇಕೆಂಬ ಹುರುಪು ತೋರುತ್ತಿದ್ದಾನೆ ಎಂದು ತಿಳಿಯಬಹುದು.

 ಮಂದಿಯಾಳ್ವಿಕೆಯಿಂದ ಎಲ್ಲ ಬಗೆಯ ಮನುಶ್ಯರಿಗೂ ಸಮನಾದ ಗಳಿಕೆಯಿದೆ. ಅವುಗಳೇನೆಂದರೆ
   ೧. ಹುಟ್ಟಿನಿಂದ ಏನೇ ಪಡೆದುಕೊಂಡರೂ ಎಲ್ಲರಿಗೂ ಒಂದೇ ಮಟ್ಟದ ಸಾಟಿತನ
   ೨. ಮಂದಿಯೊಲವಿಗೆ ಮನ್ನಣೆ
   ೩. ಹಲತನಕ್ಕೆ ಮನ್ನಣೆ ಮತ್ತು ಅವುಗಳ ನಡುವೆ ಹೊಂದಾಣಿಕೆಗೆ ಒತ್ತು
   ೪. ಎಲ್ಲರಿಗೂ ಬೇರು ಮಟ್ಟದ ಈಳಿಗೆ(ಸ್ವಾತಂತ್ರ್ಯ) ಮತ್ತು ಹಕ್ಕುಗಳು ಎತ್ತುಗೆಗೆ: ಯಾವ ಹೆದರಿಕೆಯಿಲ್ಲದೆ ಮಾತನಾಡುವ ಹಕ್ಕು
   ೫. ಯಾರೇ ಆದರೂ ನೆಮ್ಮದಿಯ ಮೂಲಕ ಮಂದಿಯ ಒಳಿತಿಗೆ ಕೂಡಣದಲ್ಲಿ ಮರ್ಪಾಟುಗಳನ್ನು ತರಬಹುದಾದ ಹಕ್ಕು

ಮಂದಿಯಾಳ್ವಿಕೆ ಹಿಂದಿದ್ದ ಏರ್ಪಾಟುಗಳಲ್ಲಿರುವ ಕೊರತೆಯನ್ನು ನೀಗಿಸುವ ಬರವಸೆಯನ್ನು ತೋರುತ್ತದೆ. ಮಂದಿಯಾಳ್ವಿಕೆಗಿಂತ ಚೆನ್ನಾಗಿರುವ ಏರ್ಪಾಟು ಸದ್ಯಕ್ಕಂತು ಕಾಣುತ್ತಿಲ್ಲ. ಮಂದಿಯಾಳ್ವಿಕೆಯ ಏರ್ಪಾಟನ್ನು ಗಟ್ಟಿಗೊಳಿಸುವುದರ ಮೂಲಕ ಎಲ್ಲರ ಹಿತವನ್ನು ಕಾಪಾಡಬಹುದಾಗಿದೆ. ಹಾಗಾಗಿ ಮಂದಿಯಾಳ್ವಿಕೆಗೆ ಬೆಲೆ ಕೊಡಬೇಕು ಮತ್ತು ಮಂದಿಯಾಳ್ವಿಕೆ ಎಂದರೆ ಅಯ್ದು ವರುಶಕ್ಕೊಮ್ಮೆ ವೋಟು ಕೊಟ್ಟು ಸುಮ್ಮನೆ ಕೂತುಕೊಳ್ಳುವುದಲ್ಲ, ಬದಲಾಗಿ ಮಂದಿಯಾಳ್ವಿಕೆಯ ಚಿಂತನೆಗಳನ್ನು ತಮ್ಮ ದಯ್ನಂದಿನ ಕೆಲಸಗಳಲ್ಲಿ ಜಾರಿಗೆ ತರಬೇಕು.

ಹೆಚ್ಚಿನ ಓದಿಗೆ ಈ ಕೆಳಗಿನ ಹೊತ್ತಗೆಯನ್ನು ಓದಬಹುದು:-
  Democracy: 80 Questions and Answers  - David Beetham & Kevin Boyle, National Book Trust, India

ಗುರುವಾರ, ಜನವರಿ 24, 2013

ಕನ್ನಡದ್ದೇ ಆದ ಪದಗಳನ್ನು ಏಕೆ ಕಟ್ಟಬೇಕು ?

     ಇತ್ತೀಚೆಗೆ ನಡೆದ ಒಂದು ಒಸಗೆಯಲ್ಲಿ ಸುದ್ದಿಯಾಳೊಬ್ಬರು ಮಾತಾಡುತ್ತಾ ಕನ್ನಡ ಸಾಹಿತ್ಯವನ್ನು ಹೆಚ್ಚು ಮಂದಿ ಅದರಲ್ಲೂ ಹಳ್ಳಿಯ ಮಂದಿ ಓದಿಲ್ಲ ಇಲ್ಲವೆ ಓದುತ್ತಿಲ್ಲ, ಆದರೂ ಅವರು ಕನ್ನಡವನ್ನೇ ಉಸಿರಾಗಿಸಿಕೊಂಡವರು, ಕನ್ನಡದಲ್ಲೇ ದುಡಿಮೆ ಮತ್ತು ಬದುಕನ್ನು ಕಟ್ಟಿಕೊಂಡವರು ಎಂದು ಹೇಳಿದರು. ಇಂತಹ ದಿಟಗನ್ನಡಿಗರಿಂದ ಕನ್ನಡ ಸಾಹಿತ್ಯ ದೂರವಾದುದು ಏಕೆ ಎಂಬ ಕೇಳ್ವಿ ನನ್ನನ್ನು ಆಗ ಕಾಡಿತು. ಹೆಚ್ಚಿನ ಮಂದಿಗೆ ಅನ್ನಿಸುವಂತೆ ಹಳ್ಳಿಗರು ಎಂದರೆ ಅಕ್ಶರ ಗೊತ್ತಿಲ್ಲದವರು ಇಲ್ಲವೆ ತಿಳಿವಳಿಕೆ ಇಲ್ಲದವರು, ಅವರ ಅರಿವಿಗೆ ಕನ್ನಡ ಸಾಹಿತ್ಯ ಎಟುಕಲಾರದು ಅಂತ ನನಗೆ ಅನ್ನಿಸಲಿಲ್ಲ. ಬದಲಾಗಿ ಕನ್ನಡ ಸಾಹಿತ್ಯದಲ್ಲೇ ಕೊರತೆ ಇಲ್ಲವೆ ತೊಡಕಿರಬೇಕೆಂದು ನನಗನ್ನಿಸಿತು. ಇದನ್ನು ಇನ್ನೂ ಆಳವಾಗಿ ಬಿಡಿನೋಟಕ್ಕೆ ಒಳಪಡಿಸಿದಾಗ ಈ ಅನಿಸಿಕೆ ದಿಟವೆಂದು ನಿಕ್ಕಿಯಾಯಿತು.

     ಇವತ್ತಿನ ಇಲ್ಲವೆ ಹೊಸಗನ್ನಡದ ಹೊತ್ತಿನಲ್ಲಿ ಉಂಟಾದ ಸಾಹಿತ್ಯ ತೊಡಕು ತೊಡಕಾದ ಪದಗಳನ್ನು ಬಳಸುತ್ತಿರುವುದರಿಂದ ಅದು ಸಾಮಾನ್ಯ ಕನ್ನಡಿಗನಿಗೆ ದೂರವಾಗಿಯೇ ಉಳಿದಿದೆ. ಬರಹದಲ್ಲಿ ಸಂಸ್ಕ್ರುತದ ಪದಗಳ ಬಳಕೆ ಎಲ್ಲೆ ಮೀರಿದೆ. ಎಶ್ಟರ ಮಟ್ಟಿಗೆ ಅಂದರೆ ಹೆಚ್ಚಿನ ಕನ್ನಡಿಗರಿಗೆ ಸಾಹಿತ್ಯ ಎಂಬ ಪದದ ಹುರುಳೇ ತಿಳಿದಿಲ್ಲ,  ಆದರೆ ಇದು ಕನ್ನಡಿಗರ ತಪ್ಪಲ್ಲ ಬದಲಾಗಿ ಇಂತಹ ತಿಳಿಯದ ಸಂಸ್ಕ್ರುತದ ಪದಗಳನ್ನು ಬಳಕೆಗೆ ತಂದವರದೇ ತಪ್ಪು. ಬರವಣಿಗೆ, ನಲ್ಬರಹ ಎಂಬ ಸುಲಬವಾದ ಪದಗಳಿರುವಾಗ ಬೇಡದಿದ್ದರೂ ಈ ರೀತಿ ಸಂಸ್ಕ್ರುತ ಪದಗಳ ಬಳಕೆ ಕನ್ನಡದ ಬರಹಗಳನ್ನು ಕಬ್ಬಿಣದ ಕಡಲೆಯನ್ನಾಗಿಸಿದೆ. ಹಾಗಾಗಿ ಸಲೀಸಾದ ಕನ್ನಡದ್ದೇ ಆದ ಪದಗಳನ್ನು ಕಟ್ಟಬೇಕಾಗಿದೆ. ಅವನ್ನು ಹೆಚ್ಚು ಹೆಚ್ಚು ಬರಹಗಳಲ್ಲಿ ಬಳಸಬೇಕಾಗಿದೆ. ಇಂತಹ ಬರಹಗಳನ್ನು ಹೆಚ್ಚಿನ ಮಂದಿಗೆ ತಲುಪಿಸಬೇಕಾಗಿದೆ. ಯಾವುದೇ ಬರಹಗಾರನಿಗೆ ತನ್ನ ಬರಹವು ಹೆಚ್ಚು ಹೆಚ್ಚು ಮಂದಿ ತಲುಪಬೇಕೆಂಬ ಗುರಿ ಇರುತ್ತದೆ ಏಕೆಂದರೆ ಆ ಬರಹದಲ್ಲಿ ಹೇಳಿರುವ ವಿಶಯಗಳನ್ನು ಹೆಚ್ಚಿನ ಮಂದಿಗೆ ತಿಳಿಸಬೇಕಾಗಿರುತ್ತದೆ. ಸುದ್ದಿಹಾಳೆಗಳನ್ನು ನಡೆಸುವವರ ಗುರಿಯೂ ಕೂಡ ಹೆಚ್ಚಿನ ಮಂದಿಗೆ ಬರಹಗಳ ಮೂಲಕ ಸುದ್ದಿಯನ್ನು ಮುಟ್ಟಿಸುವುದು, ತಮ್ಮ ಸುತ್ತಮುತ್ತ ಆಗುತ್ತಿರುವ ಆಗುಹಗಳ ಬಗ್ಗೆ ಮಂದಿಯಲ್ಲಿ ಅರಿವನ್ನು ಮೂಡಿಸುವುದೇ ಆಗಿದೆ. ಹಾಗಾಗಿ ಆದಶ್ಟೂ ಬರಹಗಳು ಸಲೀಸಾಗಿ ಓದುವಂತೆಯೂ, ತಿಳಿಯುವಂತೆಯೂ ಇರಬೇಕಾಗುತ್ತದೆ. ಇದಕ್ಕೆ ಕನ್ನಡದ್ದೇ ಆದ ಪದಕಟ್ಟಣೆ ನೆರವಿಗೆ ಬರುತ್ತದೆ.
ಪದಕಟ್ಟಣೆಯ ಗುರಿಗಳು:
     ಮೊದಲಿಗೆ, ಕನ್ನಡದ್ದೇ ಆದ ಪದಕಟ್ಟಣೆಯ ಗುರಿಯು ಇಂತಹ ಒಂದು ಕಟ್ಟಣೆಯ ಸಾದ್ಯತೆಯನ್ನು ತೋರಿಸಿಕೊಡುವುದೇ ಆಗಿದೆ. ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ಓದಿಕೊಂಡವರು, ದೊಡ್ಡ ದೊಡ್ಡ ಬರಹಗಾರರು ಕೂಡ ಇಂಗ್ಲಿಶಿನಲ್ಲಿರುವ ಅರಿಮೆಯ ಹಲವು ಪದಗಳಿಗೆ ಕನ್ನಡದ್ದೇ ಆದ ಪದಗಳನ್ನು ಕಟ್ಟಲು ಆಗುವುದೇ ಇಲ್ಲವೆಂದು ನಂಬಿದ್ದಾರೆ. ಈ ನಂಬಿಕೆಯನ್ನು ಪದ ಕಟ್ಟುವುದರ ಮೂಲಕ ಹುಸಿಗೊಳಿಸಬೇಕಾಗಿದೆ.  ಇಲ್ಲಿಯವರೆಗೆ ಪದ ಕಟ್ಟಣೆ ದೊಡ್ಡ ಮಟ್ಟದಲ್ಲಿ ಆಗದಿರುವುದಕ್ಕೆ ಕಾರಣ ಕನ್ನಡ ನುಡಿಯಲ್ಲಿರುವ ಕೊರತೆಯಲ್ಲ, ಬದಲಾಗಿ ಕನ್ನಡಿಗರಲ್ಲಿರುವ ಕನ್ನಡದ ಬಗೆಗಿನ ಅರಿವಿನ ಕೊರತೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.  ಕನ್ನಡದಲ್ಲಿ ಹೆಚ್ಚು ಹೆಚ್ಚು ಅರಿಮೆಯ ಪದಗಳು ಉಂಟಾದರೆ ಅದನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಅರಿಮೆಯ ಬರಹಗಳನ್ನು ಬರೆಯಲು ಬರುತ್ತದೆ. ಒಟ್ಟಿನಲ್ಲಿ ಹೊಸ ಹೊಸ ಅರಿಮೆಗಳನ್ನು ಈ ಮೂಲಕ ಕನ್ನಡಕ್ಕೆ ತರಬಹುದಾಗಿದೆ.
     ಎರಡನೆಯದಾಗಿ, ಯಾವುದೇ ನುಡಿಯ ಮೇಲ್ಮೆಗಳಲ್ಲಿ ಅರಿದಾದುದು ಆ ನುಡಿಯ ಪದಸಿರಿ ಎಂದು ಹೇಳಬಹುದು. ಈ ಪದಸಿರಿಯು ಹೆಚ್ಚು ಹೆಚ್ಚು ಕನ್ನಡದ್ದೇ ಆದರೆ ಕನ್ನಡ ಕನ್ನಡವಾಗಿಯೇ ಉಳಿಯುತ್ತದೆ. ಕನ್ನಡವು ಕನ್ನಡವಾಗಿಯೇ ಉಳಿದರೆ ಕನ್ನಡಿಗರಲ್ಲಿ ಉಳಿದ ಬಾರತೀಯರಿಗಿಂತ ತಾವು ಬೇರೆ ಮತ್ತು ತಮ್ಮ ನುಡಿ ಬೇರೆ ಎಂಬ ಅರಿವು ಬಲವಾಗುತ್ತದೆ. ಈ ಅರಿವು ಆಳ್ಮೆಯ(ರಾಜಕೀಯ) ಅಂಗಳದಲ್ಲಿ ನೆಲೆ ನಿಂತರೆ ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಹೆಚ್ಚು ಗಟ್ಟಿಯಾಗಬಹುದಾಗಿದೆ. ಈ ಗಟ್ಟಿತನದಿಂದ ಕನ್ನಡಿಗರು ತಮ್ಮ ಹಕ್ಕು, ತಮ್ಮ ಈಳಿಗೆ ಮತ್ತು ತಮ್ಮತನವನ್ನು ಉಳಿಸಿ ಬೆಳೆಸಿಕೊಳ್ಳಬಹುದಾಗಿದೆ. ಯಾವ ಜನಾಂಗ ತನ್ನತನವನ್ನು ಬಿಟ್ಟುಕೊಡುವುದಿಲ್ಲವೊ ಆ ಜನಾಂಗ ಕೆಚ್ಚಿನ(ಸ್ವಾಬಿಮಾನದ) ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ. ಈ ಕೆಚ್ಚಿನ ಬದುಕಿನಿಂದ ಕನ್ನಡಿಗರು ಹೆಚ್ಚಿನದನ್ನು ಸಾದಿಸಲು ಬರುತ್ತದೆ.
     ಕೊನೆಯದಾಗಿ, ಹೊಸದಾಗಿ ಕಟ್ಟಿದ ಪದಗಳನ್ನು ಮಂದಿಯ ಮುಂದಿಡಲು ಮತ್ತು ಅದನ್ನು ಬಳಕೆಗೆ ತರಲು ಸುದ್ದಿಹಾಳೆಗಳು ನೆರವೀಯಬಲ್ಲುವು. ಇಂತಹ ಹೊಸ ಆರಯ್ಕೆಗಳಿಗೆ(ಪ್ರಯೋಗಗಳಿಗೆ) ಸುದ್ದಿಹಾಳೆಗಳು ಬೆಂಬಲ ಕೊಡುವುದರಿಂದ ಪದ ಕಟ್ಟುವವರಿಗೆ ಹುರುಪು ತುಂಬಿದಂತಾಗುತ್ತದೆ. ಪದ ಕಟ್ಟುವವರು ಮತ್ತು ಪದ ಬಳೆಕೆ ಮಾಡುವವರ ನಡುವೆ ಸುದ್ದಿಹಾಳೆಯು ಕೊಂಡಿಯಂತೆ ಕೆಲಸ ಮಾಡಬಹುದಾಗಿದೆ. ಇದರಿಂದ ಕನ್ನಡದ ಕಸುವನ್ನು ಇನ್ನು ಚೆನ್ನಾಗಿ ದುಡಿಸಿಕೊಳ್ಳಲು ಬರುತ್ತದೆ. ಇದರಿಂದ ಹೆಚ್ಚಿನ ಮಂದಿಯ ಅರಿವಿನ ಮಟ್ಟ ಮೇಲೇರುತ್ತದೆ. ಮೇಲ್ಮಟ್ಟದ ಅರಿವನ್ನು ಹೊಂದಿರುವ ಕೂಡಣದ ಏಳಿಗೆ ತಾನಾಗಿಯೇ ಆಗುತ್ತದೆ.

ಪದಪಟ್ಟಿ
 ಒಸಗೆ - occasion
 ಆರಯ್ಕೆ - experiment
 ಅರಿದು - important
 ಕೆಚ್ಚು   - pride
 ಸುದ್ದಿಯಾಳು - press reporter
 ಆಳ್ಮೆ - politics

ಬುಧವಾರ, ಜನವರಿ 23, 2013

ಕನ್ನಡ, ಇರ್ನುಡಿತನ ಮತ್ತು ಕೂಡಣ

ಇತ್ತೀಚಿನ ದಿನಗಳಲ್ಲಿ ಮಂದಿಯ ಇರ್ನುಡಿತನದಲ್ಲಿರುವ  ಹೆಚ್ಚುಗಾರಿಕೆಯ ಬಗ್ಗೆ ಮಾತನಾಡಲಾಗುತ್ತಿದೆ ಯಾಕಂದರೆ ಇರ್ನುಡಿತನದಿಂದ ಮಂದಿಯ ಅರಿವಿನ ಮತ್ತು ಕಲಿಯುವ ಚಳಕಗಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ ಎಂಬುದನ್ನು ಅರಕೆಗಳ ಮೂಲಕ ತೋರಿಸಿಕೊಡಲಾಗಿದೆ. ಹಾಗಾಗಿ ಇರ್ನುಡಿತನವು ಕಲಿಯುವ ಮಕ್ಕಳಿಗೆ ಒಳ್ಳೆಯದು ಎಂದು ತೀರ್ಮಾನಿಸಲಾಗಿದೆ. ಮಿಂಬಲೆಯಲ್ಲಿ ಹುಡುಕಿದರೆ ಇದರ ಬಗ್ಗೆ ಹೆಚ್ಚಿನ ತಿಳಿವು ಸಿಗುತ್ತದೆ.

      ಆದರೆ ದಿಟವಾಗಲೂ ಯಾವುದೇ ಒಂದು ಕೂಡಣದಲ್ಲಿ ಸಂಪೂರ್ಣವಾಗಿ ಇರ್ನುಡಿತನದ ಪರಿಸರವು ಇರುವುದಿಲ್ಲ. ಒಂದು ಕೂಡಣದಲ್ಲಿ ಅಂದರೆ ಕನ್ನಡದಂತಹ(ಕರ್ನಾಟಕದಂತಹ) ಕೂಡಣದಲ್ಲಿ ಎಲ್ಲರೂ ಇರ್ನುಡಿಗರಾಗಿರುವುದಿಲ್ಲ. ಹಾಗೆ ಎಲ್ಲರೂ ಇರ್ನುಡಿಗರಾಗಬೇಕೆಂದು ನಾವು ಬಯಸುವುದು ಕೂಡ ತಪ್ಪಾಗುತ್ತದೆ ಯಾಕಂದರೆ ಯಾರೇ ಆದರೂ ಇರ್ನುಡಿಗರಾಗಬೇಕಾದರೆ ಎರಡನೇ ನುಡಿಯ ಪರಿಸರ ಬೇಕಾಗುತ್ತದೆ. ಎಲ್ಲರಿಗೂ ಇರ್ನುಡಿಯ ಪರಿಸರ ಇರುವುದಿಲ್ಲ. ಒಂದು ಊಹೆಯ ಪ್ರಕಾರ ಕನ್ನಡದಲ್ಲಿ ಇರ್ನುಡಿತನವು ಹೀಗೆ ಇರಬಹುದು.

ಕನ್ನಡದ ಕೂಡಣ

ಚಿತ್ರದಲ್ಲಿ ಕಾಣುವಂತೆ ಕನ್ನಡದ ಕೂಡಣವನ್ನು ಎರಡು ಪದರಗಳಲ್ಲಿ ತೋರಿಸಲಾಗಿದೆ. ಹೊರಪದರದಲ್ಲಿ ಇರ್ನುಡಿತನವಿದೆ ಅಂದರೆ ಕನ್ನಡಿಗರಲ್ಲಿ ಕೆಲವು ಮಂದಿ ಮಾತ್ರ ಕನ್ನಡ ಮತ್ತು ಇಂಗ್ಲಿಶ್ ನುಡಿಗಳಲ್ಲಿ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ನುಡಿಚಳಕವನ್ನು ಹೊಂದಿದ್ದಾರೆ. ಆದರೆ ಹಲವು ಮಂದಿ ಇನ್ನು ಒರ್ನುಡಿಗರಾಗಿಯೇ ಉಳಿದಿದ್ದಾರೆ. ಇಲ್ಲಿ ಒರ್ನುಡಿಗರ(ಕನ್ನಡವೊಂದನ್ನೇ ಓದಿ, ಬರೆದು, ಮಾತನಾಡಬಲ್ಲವರು) ಮತ್ತು ಇರ್ನುಡಿಗರ(ಕನ್ನಡ ಮತ್ತು ಇಂಗ್ಲಿಶ್ ಎರಡನ್ನೂ ಓದಿ, ಬರೆದು, ಮಾತನಾಡಬಲ್ಲವರು)ಎಣಿಕೆ ಎಶ್ಟೆಶ್ಟಿದೆ ಎಂದು ನಿಶ್ಚಿತವಾಗಿ ಹೇಳಲಾಗದಿದ್ದರೂ  ಒರ್ನುಡಿಗರ ಎಣಿಕೆ ಇರ್ನುಡಿಗರ ಎಣಿಕೆಗಿಂತ ತುಂಬ ಹೆಚ್ಚಿದೆ ಎಂದು ನಿಶ್ಚಿತವಾಗಿ ಹೇಳಬಹುದು. ಕನ್ನಡದ ಕೂಡಣದಲ್ಲಿ ಇನ್ನು ಹಲವು ನುಡಿಗಳು (ತುಳು, ಕೊಂಕಣಿ ಇತರೆ) ಇದ್ದರೂ ಕರ್ನಾಟಕದಲ್ಲಿ ಕಲಿಕೆಯ ಒಯ್ಯುಗೆಯಾಗಿ ಹೆಚ್ಚಾಗಿ ಕನ್ನಡ ಮತ್ತು ಅದನ್ನು ಬಿಟ್ಟರೆ ಇಂಗ್ಲಿಶ್ ನುಡಿಯನ್ನು ಬಳಸಲಾಗುತ್ತಿದೆ. ಹಾಗಾಗಿ ಈ ಬರಹದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡು ನುಡಿಗಳನ್ನು ಮಾತ್ರ ಪರಿಗಣಿಸಲಾಗಿದೆ. 
        ಮೇಲೆ ತೋರಿಸಿದಂತೆ ಕನ್ನಡದ ಕೂಡಣದಲ್ಲಿ ಇರ್ನುಡಿತನದ ಒತ್ತರ ಕಡಿಮೆ ಇರುವಾಗ ಹೆಚ್ಚಿನ ಕನ್ನಡಿಗರ (ಒರ್ನುಡಿಗರ) ಅರಿಮೆ ಮತ್ತು ಚಳಕಗಳು ಮೇಲ್ಮೆಯನ್ನು ಪಡೆಯಲಾರದು ಎಂದು ಹೇಳುವವರು ಇದ್ದಾರೆ. ಅದು ದಿಟವಾದರೆ ಕನ್ನಡದ ಕೂಡಣವನ್ನು ಒಮ್ಮಿಂದೊಮ್ಮೆಗೆ ಇರ್ನುಡಿತನದೆಡೆಗೆ ಕೊಂಡೊಯ್ಯಬೇಕೆ? ಇದಕ್ಕೆ ಬಗೆಹರಿಕೆಗಳೇನು?  ಎಂಬ ಕೇಳ್ವಿಯು ನಮ್ಮ ಮುಂದೆ ಬರುತ್ತದೆ.
       ಎಲ್ಲ ಕಡೆಗಳಿಂದ ಅಳೆದು, ತೂಗಿ ನೋಡಿದರೂ ಎಲ್ಲ ಕನ್ನಡಿಗರು ಸಂಪೂರ್ಣವಾಗಿ ಒರ್ನುಡಿಗರಾಗಿಯೇ ಉಳಿಯಬೇಕಾಗಿಲ್ಲ ಇಲ್ಲವೆ ಎಲ್ಲರೂ ಇರ್ನುಡಿಗರಾಗಬೇಕಾಗಿಯೂ ಇಲ್ಲ ಯಾಕಂದರೆ ಎರಡೂ ಕೂಡ ವಿರುದ್ದ ದಿಕ್ಕಿನಲ್ಲಿ ವಿಪರೀತ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುತ್ತವೆಯತ್ತ ಹೊರತು ಒಂದು ಸಮನ್ವಯ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುವುದಿಲ್ಲ. ಈ ಸಮನ್ವಯ ಸ್ತಿತಿಯಿಂದ ಮಾತ್ರ ಕೂಡಣದ ಏಳಿಗೆ ಸಾದ್ಯ ಎಂಬುದನ್ನು ಇಲ್ಲಿ ಮನಗಾಣಬಹುದಾಗಿದೆ.
       ಹಾಗಾದರೆ ಇಂತಹ ಸಮನ್ವಯ ಸ್ತಿತಿಯತ್ತ ಕನ್ನಡದ ಕೂಡಣವನ್ನು ಕೊಂಡೂಯ್ಯುವುದು ಹೇಗೆ? - ಇದಕ್ಕೆ ಉತ್ತರ ಹೀಗಿದೆ- ಕನ್ನಡದ ಕೂಡಣವನ್ನು ಒಂದು ಸಮನ್ವಯ ಸ್ತಿತಿಯತ್ತ ಕೊಂಡೊಯ್ಯಲು ಒರ್ನುಡಿಗರ ಏಳಿಗೆಗೆ ಬೇಕಾದ ಎಲ್ಲ ಅರಿಮೆಗಳು ಕನ್ನಡದಲ್ಲಿಯೇ ದೊರಯುವಂತಾಗಬೇಕು ಯಾಕಂದರೆ ಒರ್ನುಡಿಗರ ಕಲಿಕೆಯು ಕನ್ನಡದಲ್ಲಿಯೇ ಆಗುತ್ತಿರುತ್ತದೆ. ಒರ್ನುಡಿಗರಿಗೆ ಕನ್ನಡದಲ್ಲಿ ಕಲಿಕೆ ಆದರೇನೆ ಅವರ ಕಲಿಕೆ ಚೆನ್ನಾಗಿ ನಡೆಯಬಲ್ಲುದು. ಕನ್ನಡದಲ್ಲೇ ಎಲ್ಲ ಅರಿಮೆಗಳು ದೊರೆಯಬೇಕಾದರೆ ಇರ್ನುಡಿಗರ ಮೇಲೆ ಕೆಲವು ಹೊಣೆಗಾರಿಕೆಗಳು ಬೀಳುತ್ತವೆ. ಇರ್ನುಡಿಗರು ತಮ್ಮ ಚಳಕಗಳನ್ನು ಬಳಸಿಕೊಂಡು ಇಂಗ್ಲಿಶಿನಲ್ಲಿರುವ ಎಲ್ಲ ಅರಿಮೆಗಳನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಇದನ್ನು ಒರ್ನುಡಿಗರು ಬಳಸಿಕೊಂಡು ತಮ್ಮ ಅರಿವನ್ನು ಮತ್ತು ಮಾಡುಗತನವನ್ನು ಹೆಚ್ಚಿಸಿಕೊಂಡು ಅದನ್ನು ಕಲಿಕೆಯಲ್ಲಿ ಮತ್ತು ದುಡಿಮೆಯಲ್ಲಿ ಬಳಸಿಕೊಳ್ಳಬಹುದು. ಇದಲ್ಲದೆ ಒರ್ನುಡಿಗರು ತಮ್ಮ ಕಲಿಕೆಯಲ್ಲಿ ಇಲ್ಲವೆ ದುಡಿಮೆಯಲ್ಲಿ ಪಡೆದ ’ಕಂಡುಕೊಳ್ಳುವಿಕೆ’ಗಳನ್ನು ಪ್ರಪಂಚಕ್ಕೆ ಮುಟ್ಟಿಸಲು ಇರ್ನುಡಿಗರ ನೆರವನ್ನು ಪಡೆದುಕೊಳ್ಳಬಹುದು. ಹೀಗೆ ಅವರು ತಮ್ಮ ಒರ್ನುಡಿತನವನ್ನು ಉಳಿಸಿಕೊಂಡು  ಇರ್ನುಡಿತನದ ಇಲ್ಲದಿರುವ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇದು ಚೆನ್ನಾಗಿ ನಡೆಯಲು ಇರ್ನುಡಿಗರ ಮತ್ತು ಒರ್ನುಡಿಗರ ನಡುವೆ ಪಾಲುದಾರಿಕೆ ಏರ್ಪಡಬೇಕಾಗುತ್ತದೆ. ಸರ್ಕಾರದವರು ಇಲ್ಲವೆ ಕಾಸಗಿ ಸಂಗ/ಸಂಸ್ತೆಗಳು ಈ ಪಾಲುದಾರಿಕೆ ಏರ್ಪಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಪಾಲುದಾರಿಕೆಯು ಕನ್ನಡದ ಕೂಡಣದ ಒಳಗೆಯೇ ನಡೆಯುವುದರಿಂದ ಇದು ಪರಿಣಾಮಕಾರಿಯಾಗಬಲ್ಲುದು ಯಾಕಂದರೆ ಕನ್ನಡದ ಕೂಡಣದ ಒಳಗೆಯೇ ಒಗ್ಗಟ್ಟನ್ನು ಸಾದಿಸುವುದು ಅಶ್ಟು ಕಶ್ಟವಲ್ಲ. ಕನ್ನಡದ ಕೂಡಣವನ್ನು ಹಿಡಿದಿಟ್ಟಿರುವುದು ’ಕನ್ನಡ’ ನುಡಿಯೇ ಅಲ್ಲವೆ?
      ಒರ್ನುಡಿತನವೂ ಬೇಕು , ಇರ್ನುಡಿತನವೂ ಬೇಕು ಆದರೆ ಒರ್ನುಡಿತನಕ್ಕೆ ಇಂಬು ಕೊಡುವಂತೆ ಇರ್ನುಡಿತನ ಇರಬೇಕೇ ಹೊರತು ಒರ್ನುಡಿತನವನ್ನು ನುಂಗಿಹಾಕುವ ಇರ್ನುಡಿತನವು ಕಂಡಿತ ಕನ್ನಡದ ಕೂಡಣಕ್ಕೆ ಬೇಡ ಅಂದರೆ ಕನ್ನಡವನ್ನು ನುಂಗಿ ಹಾಕುವಶ್ಟರ ಮಟ್ಟಿಗೆ ಇಂಗ್ಲಿಶಿನ ಅವಶ್ಯಕತೆ ಕನ್ನಡದ ಕೂಡಣಕ್ಕಿಲ್ಲ.

ಪದಪಟ್ಟಿ
ಒರ್ನುಡಿತನ - Monolingualism
ಇರ್ನುಡಿತನ - Bilingualism
ಒಯ್ಯುಗೆ      - Medium
ಮಿಂಬಲೆ     - Internet
ಕೂಡಣ      - Society

ಶುಕ್ರವಾರ, ಜನವರಿ 18, 2013

’ವ್’ ಮುಚ್ಚುಲಿಯ ಬೀಳುವಿಕೆ


ಆಡುಗನ್ನಡದಲ್ಲಿ ’ವ’ ಇಂದ ಸುರುವಾಗುವ ಪದಗಳಲ್ಲಿ ಒಂದು ಉಲಿಯೊಲವನ್ನು ಗಮನಿಸಿಬಹುದು. ಇಲ್ಲಿ ’ವ’ಇಂದ ಸುರುವಾಗುವ ಕೆಲವು ಪದಗಳನ್ನು ಕೊಡಲಾಗಿದೆ.

ಬರಹಗನ್ನಡ  ಆಡುಗನ್ನಡ              ಬಿಡಿಸಿಕೆ
ವಿರೋದ         ಇರೋದ              ವ್+ಇ           (’ವ್’ ಬೀಳುವಿಕೆ ಆಗಿದೆ)
 ವೀರ             ಈರ                   ವ್+ಈ             (’ವ್’ ಬೀಳುವಿಕೆ ಆಗಿದೆ)
 ವೆಟ್ಟೆ             ಎಟ್ಟೆ(ಯೆಟ್ಟೆ)            ವ್+ಎ           ( ’ವ್’ ಬೀಳುವಿಕೆ ಆಗಿದೆ)
(Heat)     
 ವೆಂಕಟ         ಎಂಕಟ(ಯಂಕಟ)       ವ್+ಎ         (’ವ್’ ಬೀಳುವಿಕೆ ಆಗಿದೆ)
ವೇಶ             ಏಸ(ಯಾಸ)            ವ್+ಏ           (’ವ್’ ಬೀಳುವಿಕೆ ಆಗಿದೆ)

ಈ ಮೇಲಿನ ಪದಗಳಲ್ಲಿನ ಬಿಡಿಸಿಕೆ ನೋಡಿದಾಗ ’ವ್’ ಎಂಬ ಮುಚ್ಚುಲಿಯು ’ಯ್’ ಗುಂಪಿನ ತೆರೆಯುಲಿಯೊಂದಿಗೆ ಸೇರಿ ವಿ, ವೀ, ವೆ, ವೇ ಎಂಬ ’ಉಲಿಕಂತೆ’ಗಳುಂಟಾಗಿದೆ. ಹಾಗಾಗಿ ’ವ್’ಬೀಳುವಿಕೆಗೂ ಮತ್ತು ಅದರ ಮುಂದಿರುವ ತೆರೆಯುಲಿಗೂ ನಂಟಿದೆ ಎಂದು ಹೇಳಬಹುದು.

ಉಲಿಯೊಲವಿನ ಹೇಳಿಕೆ: 
       "ಯಾವಾಗ ’ವ್’ ಮುಚ್ಚುಲಿಯು ’ಯ್’ ಗುಂಪಿನ ತೆರೆಯುಲಿಯೊಂದಿಗೆ(ಇ, ಈ, ಎ, ಏ) ಸೇರಿಕೆಯಾಗುವುದೋ ಆಗ ಆಡುಗನ್ನಡದಲ್ಲಿ ’ವ್’ ಮುಚ್ಚುಲಿಯು ಬಿದ್ದು ಹೋಗುತ್ತದೆ’

ಬರಹಗನ್ನಡ     ಆಡುಗನ್ನಡ           ಬಿಡಿಸಿಕೆ
೧ ವರಸೆ           ವರಸೆ                  ವ್+ಅ        (’ವ್’ ಬೀಳುವಿಕೆ ಆಗಿಲ್ಲ)
೨ ವಾಲು           ಓಲು                   ವ್+ಆ        (’ವ್’ ಬೀಳುವಿಕೆ ಆಗಿಲ್ಲ)
೩ ವೊಲ್           ಒಲ್                   ವ್+ಒ        (’ವ್’ ಬೀಳುವಿಕೆ ಆಗಿಲ್ಲ)
೪ ವೋಮ         ಓಮ                   ವ್+ಓ        (’ವ್’ ಬೀಳುವಿಕೆ ಆಗಿಲ್ಲ)
 (weed)

ಮೇಲಿನ ’ವ್’ ಎಂಬ ಮುಚ್ಚುಲಿಯು ’ವ್’ ಗುಂಪಿನ ತೆರೆಯುಲಿಗಳೊಂದಿಗೆ(ಅ,ಆ,ಒ,ಓ) ಸೇರಿಕೆಯಾಗಿ ಉಲಿಕಂತೆಗಳುಂಟಾಗಿವೆ.

೩, ೪ ರಲ್ಲಿ  ವೊ->ಒ, ವೋ->ಓ ಎಂಬ ಎತ್ತುಗೆಯನ್ನು ನೋಡಿದಾಗ ಅಲ್ಲಿ ’ವ್’ಮುಚ್ಚುಲಿಯ ಬೀಳುವಿಕೆಯಾಗಿರುವಂತೆ ಕಂಡರೂ ಅಲ್ಲಿ ದಿಟವಾಗಲೂ ಬೀಳುವಿಕೆಯಾಗಿಲ್ಲ. ಬದಲಾಗಿ  ಒ ಮತ್ತು ಓ ’ವ್’ ಗುಂಪಿನ ತೆರೆಯುಲಿಗಳೇ ಆಗಿರುವುದರಿಂದ ಒಂದರ ಬದಲು ಬೇರೊಂದು(ಒ<->ವ, ಓ<->ವೋ(ವಾ)) ಬದಲಾಗುವುದು ಇತರ ಕನ್ನಡದ ಪದಗಳಲ್ಲೂ ಕಾಣಬಹುದು

ಓಟ <->ವಾಟ
ಒತ್ತು <->ವತ್ತು (ವೊತ್ತು)
ಓಲೆ <->ವಾಲೆ

ತಿರುಳು:  ಕನ್ನಡ ಉಲಿಯೊಲವನ್ನು ಗುರುತಿಸುವ ಮತ್ತು ಅದರ ಬಗ್ಗೆ ಬಿಡಿನೋಟಗಳನ್ನು ಬರೆದಿಡಬೇಕಾಗಿದೆ. ಅಂತಹ ಮೊಗಸಿನಲ್ಲಿ ಈ ಮೇಲಿನ ’ವ್’ ಮುಚ್ಚುಲಿಯ ಬೀಳುವಿಕೆಯನ್ನು ವಿವರಿಸಲಾಗಿದೆ.