ಪದನೆರಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪದನೆರಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಜೂನ್ 28, 2011

ಕಬ್ಬಾಳಮ್ಮ - ಯಾರು?

ಎಶ್ಟೊಂದು ಟ್ಯಾಕ್ಸಿಗಳ ಮುಂದೆ ಕಡೆ ’ಕಬ್ಬಾಳಮ್ಮನ ಕ್ರುಪೆ’ ಅಂತ ಹಾಕಿಕೊಂಡಿರುತ್ತಾರೆ.

ಕಬ್ಬಾಳ = ಕರು+ಪಾಳಮ್ಮ = ಕರ್ಬಾಳಮ್ಮ = ಕಬ್ಬಾಳಮ್ಮ

ಕರು=ದೊಡ್ಡ, ಮಹಾ
ಪಾಳಮ್ಮ = ಪಾಳ್ಯದಮ್ಮ = ಹಳ್ಳಿಯಮ್ಮ = ಗ್ರಾಮದೇವತೆ

ಮಹಾ ಗ್ರಾಮದೇವತೆ = ಕಬ್ಬಾಳಮ್ಮ :)

’ಆರ್ಯ’ ಪದ ಹೇಗೆ ಬಂತು?

1. Latin Canarese ( ಲತೀನ - ಕನ್ನಡ ನಿಗಂಟು 2010 - ಲೂಯಿ ಶಾರ್ಬೊನೊ) ನೋಡುತ್ತಾ ಇದ್ದೆ
ಈ ಪದಗಳು ಗಮನ ಸೆಳೆಯಿತು
೧. aratio (Latin) ಈ ಪದಕ್ಕೆ ಸಾಗುವಳಿ, ಉಳುವಿಕೆ
೨. arator (Latin) ಈ ಪದಕ್ಕೆ ಆರಂಬಕಾರ, ಒಕ್ಕಲಿಗ, ರೈತ, ಉಳುವವ
೩. aratr um(Latin) ಈ ಪದಕ್ಕೆ ಆರು, ಏರು, ನೇಗಿಲ್
- ಈ ಅರಿತಗಳನ್ನು ಕೊಟ್ಟಿದ್ದಾರೆ

2. ಇನ್ನೊಂದು ಹೊತ್ತಗೆ ಡಾ| ಎಸ್. ವೇಣುಗೋಪಾಲಾಚಾರ್ಯ ಎಂ.ಎ. ಪಿ.ಎಚ್.ಡಿ ಇವರು ಬರೆದಿರುವುದು- ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲಿಶ್ ಮತ್ತು ಹಿನ್ದಿ ಚೀಣೀ ಸ್ವಬೋಧಿನಿ’(1983) - ಇದರ ಮುನ್ನುಡಿಯಲ್ಲಿ ಬರೆಯುತ್ತ " ಹಿಂದಿ, ಇಂಗ್ಲಿಶ್, ಲ್ಯಾಟಿನ್, ಸಂಸ್ಕ್ರುತ, ಮುಂತಾದುವು ಆರ್ಯ ಬಾಶೆಗಳೆಂದೂ ಆರ್ಯ ಎಂಬುದು ಲ್ಯಾಟಿನ್ನಿನಲ್ಲಿ ’ಉಳುವನೇಗಿಲು’ ಎಂಬರ್ತವುಳ್ಳ ’AR' ಪದಾಂಶದಿಂದ ರಚಿತವಾದುದೆಂದು, ಕನ್ನಡ ನಾಡಿನ ಹಳ್ಳಿಹಳ್ಳಿಯ ರೈತರು ಬೆಳಿಗ್ಗೆ ಎದ್ದೊಡನೆ, ಎತ್ತಿಗೆ ನೇಗಿಲನ್ನು ಸೇರಿಸುವಾಗ ’ಏರ್’ ಕಟ್ಟುವುದಿಲ್ಲವೆ? ’ಏರ್’ ನ ಲ್ಯಾಟಿನ್ ಸಮಪದವಾದ ’ಆರ್’ ದ್ರಾವಿಡ ಶಬ್ದವಲ್ಲವೆ?" ಅಂತ ಹೇಳಿದ್ದಾರೆ
3. ಸೇಡಿಯಾಪು ಅವರ ಹೊತ್ತಗೆ ’ ಶಬ್ದಾರ್ತಶೋದ’ ದಲ್ಲಿಯೂ ಕೂಡ ’ಆರ್ಯ’ ಎಂಬುದಕ್ಕೆ ಉಳುವವ, ಕ್ರುಶಿಕಾರ ಎಂಬ ಅರಿತವನ್ನೇ ಪದೇ ಪದೇ ಹೇಳಿದ್ದಾರೆ.

ಹಾಗಾದರೆ ’ಆರ್ಯ’ ಎಂಬ ಪದವೇ ದ್ರಾವಿಡ ಬೇರಿನ ಪದವೆ? ’ಬಗೆ’( ಯೋಚನೆ)ಯಬೇಕಾದ ವಿಚಾರ.!!!

’ಆರಂಬ’ ಎಂಬ ಪದ ಹೇಗೆ ಬಂತು?

’ಆರಂಬ’ ಎಂಬ ಪದಬಳಕೆ ನಮ್ಮ(ಮಂಡ್ಯ, ಮೈಸೂರು) ಕಡೆ ಇದೆ.
ಏರಂಬ =ಆರಂಬ = ಉಳುಮೆ= ಬೇಸಾಯ
ಕನ್ನಡದಲ್ಲಿ *ಆರ್*/ಆರು (ಹಾಸನದ ಕಡೆ) ಮತ್ತು *ಏರ್*(ಮಂಡ್ಯ, ಮೈಸೂರು ಕಡೆ) ಪದಬಳಕೆಯೂ ಕೂಡ ಇನ್ನು ಇದೆ. ಇದಕ್ಕೆ ದ್ರಾವಿಡ ನಿಘಂಟಿನಲ್ಲಿ ಈ ಅರ್ಥ ಕೊಡಲಾಗಿದೆ. Ka. ēru, ār pair of oxen yoked to a plough.

ಇದನ್ನು ಬಿಡಿಸಲು ತಲೆಗೆ ಹುಳ ಬಿಟ್ಟುಕೊಂಡಾಗ ನನ್ನ ಚಿಕ್ಕ ತಿಳಿವಿಗೆ ಎಟಕಿದ್ದು ಇಶ್ಟು.
ಏರ್ಂ+ಪು = ಏರಂಪು =ಏರಂಬ
ಆರ್ಂ+ಪು = ಆರಂಪು =ಆರಂಬ

ಯಾಕಂದರೆ,
ತೆನ್=> ತೆನ್ಪು= ತೆಂಪು = ತೆಂಬು( ದಕ್ಷಿಣ)
ತೆಂಬು +ಎಲರ್ = ತೆಂಬೆಲರ್ = ತೆಂಕಣ ಗಾಳಿ ( ಮಲಯ ಮಾರುತ, ದಕ್ಷಿಣದಿಂದ ಬೀಸುವ ಗಾಳಿ)

ತೆಂಬೆಲರ್ ಎಂಬ ಪದ ಬಳಕೆ ಪಂಪನಿಂದ ಹಿಡಿದು ಆಂಡಯ್ಯನವರೆಗೂ ಹಲವು ಹಳಗನ್ನಡದ ಬರಹಗಳಲ್ಲಿ ಬಳಕೆಯಾಗಿದೆ

ಡಾ| ಡಿ.ಎಸ್. ಶಿವಪ್ಪನವರ ಹೊತ್ತಗೆಗಳ ಬಗ್ಗೆ

ಕೆಲವು ದಿನಗಳ ಹಿಂದೆ ಬೆಂಗಳೂರು ಪ್ರಸರಾಂಗದ ಮಳಿಗೆ(ಸೆಂಟ್ರಲ್ ಕಾಲೇಜು)ಗಳಿಂದ ಕೆಲವು ಹೊತ್ತಗೆಗಳನ್ನು ಕೊಂಡ್ಕೊಂಡೆ.

೧. ವೈದ್ಯಕ ಪದಗಳ ಹುಟ್ಟು ಮತ್ತು ರಚನೆ - ಡಾ ಡಿ.ಎಸ್. ಶಿವಪ್ಪ
೨. ವೈದ್ಯರನ್ನು ಯಾವಾಗ ಕಾಣಬೇಕು - ಡಾ ಡಿ.ಎಸ್. ಶಿವಪ್ಪ
೩. ಮೊಳೆ ರೋಗ ಮತ್ತು ಗುದದ ಇತರ ಕಾಯಿಲೆಗಳು - ಡಾ ಡಿ.ಎಸ್. ಶಿವಪ್ಪ

(೧) ನೇ ಹೊತ್ತಗೆಯ ಮುನ್ನುಡಿಯಲ್ಲಿ ಡಾಶಿವಪ್ಪನವರು ಬರೆದಿರುವ ಸಾಲುಗಳು ನನ್ನ ಗಮನ ಸೆಳೆದವು:-

" ಅರೆ ಶತಮಾನಕ್ಕೂ ಹಿಂದೆ ಮೈಸೂರು ವೈದ್ಯ ಕಾಲೇಜಿನಲ್ಲಿ ನಾನು ಅಂಗಕ್ರಿಯೆ ಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಆ ವಿಷಯದ ಪರೀಕ್ಷೆ ಹತ್ತಿರವಾದಾಗ ಪ್ರಶ್ನೆಪತ್ರಿಕೆಯಲ್ಲಿ ಸಂಕ್ಷಿಪ್ತ ಟಿಪ್ಪಣಿಗಾಗಿ oestrogen, progesterone ಬರುವ ಸಂಭವದ ಸುಳಿವು ಸಿಕ್ಕಿತು. ನಾನು ಕೂಡಲೇ ಪುಸ್ತಕದಿಂದ ಅವುಗಳ ವಿಚಾರವಾಗಿ ವಿವರಗಳನ್ನು ಸಂಗ್ರಹಿಸಿದೆ. ಭರವಸೆಗಾಗಿ ನಮ್ಮ ತರಗತಿಯಲ್ಲಿ ಅತ್ಯಂತ ಮೇಧಾವಿ ಎನಿಸಿಕೊಂಡ ಸಹಪಾಠಿಗೆ ತೋರಿಸಿದಾಗ, ಎಲ್ಲ ಸರಿಯಾಗಿದೆ, ಆದರ ತಲೆಬರಹಗಳು ಅದಲುಬದಲಾಗಿವೆ ಎಂದಾಗ,
ನಾನು ಕೂಡಲೇ ಬದಲಾಯಿಸಿಬಿಟ್ಟೆ. ಏಕೆಂದರೆ ಆ ತಾಂತ್ರಿಕ ಪದಗಳು ನನಗೆ ಏನೂ ಅರ್ಥ ಕೊಡಲಿಲ್ಲ. ಆದರೀಗ ಗ್ರೀಕ್ oestrus ಅಂದರೆ ಬೆದೆಯಿಂದ oestrogen ಬೆದೆಜನಕವೆಂದೂ, ಲ್ಯಾಟಿನ್ನಿನ gestare ಅಂದರೆ (ಗರ್ಭದಲ್ಲಿ ಕೂಸನ್ನು) ಹೊರು ಎನ್ನುವುದಕ್ಕೆ
ಬಸಿರಿಗೆ ಅಣಿ ಮಾಡುವುದರಿಂದ progesterone ಬಸಿರಣಿಕವೆಂದೂ ಅಂದು ನನಗೆ ಗೊತ್ತಿದ್ದರೆ ನಾನು ಹಾಗೆ ಅದಲು ಬದಲು ಮಾಡುತ್ತಿರಲಿಲ್ಲ"

ಇದು ಓದಿದ ಮೇಲೆ ಶಿವಪ್ಪನವರು ಹೇಳಿರುವ ಹಾಗೆ ಬೆದೆಜನಕ ಮತ್ತು ಬಸಿರಣಿಕ ತೆರದ ಪದಗಳನ್ನು ಹುಟ್ಟಿಸಿ ಕನ್ನಡದಲ್ಲೇ MBBS ಮಾಡುವ ಹಾಗಿದ್ದರೆ ಎಶ್ಟು ಚೆನಾಗಿರುತ್ತಿತ್ತು ಅಂತ ಅನ್ನಿಸಿತು. ಹೇಗೆ ಪಾರಿಭಾಶಿಕ ಪದಗಳನ್ನು ಸುಲಬಗೊಳಿಸಿಕೊಳ್ಳುವುದರಿಂದ ಕಲಿಕೆಯ ವೇಗ ಮತ್ತು ಗುಣಮಟ್ಟ ಹೆಚ್ಚುತ್ತದೆ ಎಂಬುದಕ್ಕೆ ಶಿವಪ್ಪನವರ ಈ ಮೇಲಿನ ಪ್ರಸಂಗವೇ ಉದಾಹರಣೆಯಾಗಿದೆ ಎಂಬುದನ್ನ ನಾವು ಇದರಿಂದ ಅರಿತುಕೊಳ್ಳಬಹುದು.

ಅಲ್ಲಿ ಮಳಿಗೆಯವರನ್ನು ವಿಚಾರಿಸಿದಾಗ "ವೈದ್ಯಕ ಪದಗಳ ಹುಟ್ಟು ಮತ್ತು ರಚನೆ" -- ಈ ಹೊತ್ತಗೆಯನ್ನು ಮೈಸೂರಿನಿಂದ ಹಲವು ವೈದ್ಯರಗಳು ಬಂದು ೨೦-೩೦ ಹೊತ್ತಗೆಗಳನ್ನು ಒಮ್ಮೆಲೆ ಕೊಂಡು ಹೋಗುತ್ತಾರೆ ಮತ್ತು ಅವುಗಳನ್ನು ಆರೈಕೆಗಾರ್ತಿಯರಿಗೆ ಹಂಚುತ್ತಾರೆಂದು ತಿಳಿಸಿದರು