ಭಾನುವಾರ, ನವೆಂಬರ್ 27, 2011

ಕನ್ನಡ ಲಿಪಿ ಸರಳಿಸುವಿಕೆ - ಒಂದು ಪ್ರತಿಕ್ರಿಯೆ



ವಿಜಯ ಕರ್ನಾಟಕದಲ್ಲಿ ೨೦ ನವೆಂಬರ್ ೨೦೧೧ ರಂದು ಪ್ರಕಟವಾದ ಶ್ರೀ ಎಮ್.ಆರ್.ಪಿ. ರವಿಕಿರಣ್ ಅವರ ’ಲಿಪಿ ಸರಳೀಕರಣ: ಅತಿರೇಕದ ಮುನ್ಸೂಚನೆ’(ಅದರ ಪ್ರತಿ ಈ ಮಿಂಚೆಯೊಂದಿಗೆ ಅಂಟಿಸಲಾಗಿದೆ) ಈ ಬರಹಕ್ಕೆ ಪ್ರತಿಕ್ರಿಯೆ.

ಮೊದಲಿಗೆ, ರವಿಕಿರಣ್ ಅವರೇ ಹೇಳುವಂತೆ ಅವರಿಗೆ ನುಡಿಯ ಬಗೆಗಿನ ಹುರುಪು, ಆಸಕ್ತಿ ತೀರ ಇತ್ತೀಚಿನದು. ಆದ್ದರಿಂದ ಅವರ ಬರಹದಲ್ಲಿ ತಾನಾಗಿಯೇ ಆಗಿರುವ ಹಲವು ತಪ್ಪುಗಳನ್ನು ಎತ್ತಿ ತೋರಬೇಕಾಗಿದೆ.
ಇದಲ್ಲದೆ ಅವರು ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಲು ಯಾವ ನುಡಿಯರಿಗರ/ಭಾಷಾವಿಜ್ಞಾನಿಗಳ ಯಾವ ಕೆಲಸವನ್ನು ಉದಾಹರಿಸಿಲ್ಲ. ಇದರಿಂದಲೇ ಗೊತ್ತಾಗುವುದು ಅವರು ತಮ್ಮದೇ ಲೋಕದಲ್ಲಿ ಓಡಾಡುತ್ತಿದ್ದಾರೆ ಅಂತ.
ಇರಲಿ, ಕನ್ನಡದಲಿ ಲಿಪಿ ಸರಳಿಸುವಿಕೆಗೆ ತಮಿಳಿನ ’ಮಾದರಿ’ಯಾಗಿ ತೆಗೆದುಕೊಳ್ಳಲಾಗುವುದಿಲ್ಲ. ಲಿಪಿ ಸರಳ ಮಾಡಬೇಕೆನ್ನುವವರು ಕೂಡ ಅದನ್ನು ಯಾರೂ ಮಾದರಿಯಾಗಿ ತೆಗೆದುಕೊಂಡಿಲ್ಲ. ಯಾವುದೇ ಲಿಪಿ ಸರಳಿಸುವಿಕೆ ಆ ನುಡಿಯಾಡುವ ಮಂದಿಯ ’ಉಲಿಕೆ’ಯ ಓದಿನ ಮೇಲೆ ನಿಂತಿರುತ್ತದೆ. ಉಲಿಕೆಯಲ್ಲಿಲ್ಲದ/ಉಚ್ಚಾರಣೆಯಲ್ಲಿಲ್ಲದ ಆದರೆ ಬರವಣಿಗೆಯಲ್ಲಿರುವ ಅಕ್ಷರಗಳು ಹೊರೆಯಾಗುತ್ತದೆ. ಯಾಕಂದರೆ ಆ ನುಡಿಯಾಡುವವರು ಅದನ್ನು ಮಾತಿನಲ್ಲಿ ಎಂದು ಬಳಸುವುದೇ ಇಲ್ಲ. ಮೊದಲು ಹೊರೆಯಾಗಿ ಇದು ಕಂಡರೂ ಮುಂದೆ ಇದು ಹಲವು ಗೊಂದಲಕ್ಕೆಡೆ ಮಾಡುತ್ತವೆ. ಉದಾಹರಣೆಗೆ: ಕನ್ನಡಿಗರಲ್ಲಿ ಹೆಚ್ಚಿನವರು ಮಹಾಪ್ರಾಣ ಮತ್ತು ಅಲ್ಪಪ್ರಾಣವನ್ನು ತಮ್ಮ ಉಲಿಕೆಯಲ್ಲಿರುವ ಬೇರೆತನವನ್ನು ತೋರಿಸುವುದಿಲ್ಲ. ಆದ್ದರಿಂದ ಅವರ ಬರವಣಿಗೆಯಲ್ಲಿ ’ತಪ್ಪು’ಗಳು ಕಂಡುಬರುತ್ತದೆ. ಇದರಿಂದ ಹೆಚ್ಚಿನ ಕನ್ನಡಿಗರಿಗೆ ಇಂದಿನ ಬರಹವು ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಚೆನ್ನಾಗಿ ಮಾತು ಬಲ್ಲವರನ್ನು ಕೂಡ ’ಓಲೆ ಬರೆಯಿರಿ’ ಎಂದು ಹೇಳಿದಾಗ ದಿಗಿಲಿಗೆ ಒಳಗಾಗುತ್ತಾರೆ. ಇದಕ್ಕೆ ಈಗಿನ ಕನ್ನಡ ಬರಹದಲ್ಲಿರುವ ಹಲವು ಗೊಂದಲಗಳು ಮುಖ್ಯ ಕಾರಣ.

ಇನ್ನು ರವಿಕಿರಣ್ ಅವರು ಹೇಳುತ್ತಾರೆ: " ಸನ್ನಿಧಿ, ಮಂಟಪ, ಕೃಪಾನಿಧಿ, ಸೂರ್ಯ, ಸುಧಾ - ಇವುಗಳನ್ನು ಕನ್ನಡದಲ್ಲಿ ಹೇಗೆ ಉಚ್ಚರಿಸುತ್ತೇವೆಯೋ ಹಾಗೆ ಬರೆಯುತ್ತೇವೆ" - ಈ ವಾಕ್ಯದಲ್ಲಿ ತಪ್ಪಿದೆ. ದಿಟವಾಗಲೂ ಕನ್ನಡಿಗರೂ ಇದನ್ನು ಉಚ್ಚರಿಸುವುದು ಸನ್ನಿದಿ , ಮಣ್ಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ ಅಂತ. ಹಾಗಾಗಿ ನಾವು ಉಚ್ಚರಿಸಿದಂತೆ ಕನ್ನಡದಲ್ಲಿ ಬರೆಯುತ್ತಿಲ್ಲ. ಆದರೆ ಈ ತೊಂದರೆಯಿರುವುದು ಸಂಸ್ಕೃತ ಪದಗಳಿಗೆ ಮಾತ್ರ. ಕೆಲವು ಕಡೆ ಹೊರತುಪಡಿಸಿ ಕನ್ನಡದಲ್ಲಿ ಕನ್ನಡದ್ದೇ ಆದ ಪದಗಳನ್ನು ಉಚ್ಚರಿಸಿದಂತೆ ಬರೆಯಲಾಗುತ್ತಿದೆ. ಉದಾಹರಣೆಗೆ ಕನ್ನಡದಲ್ಲಿ ಅನುನಾಸಿಕಗಳನ್ನು ’೦’ ಗುರುತಿಸುವ ಅಭ್ಯಾಸ ಮೊದಲಿನಿಂದಲೂ ನಡೆದುಬಂದಿದೆ. ’ಗಣ್ಡ’ ಎಂದು ಉಲಿದರೂ ’ಗಂಡ’ ಎಂದೇ ಬರೆಯುವುದು. ’ಮಞ್ಚ’ ಎಂದು ಉಲಿದರೂ ’ಮಂಚ’ ಎಂದೇ ಬರೆಯುವುದು. ಆದರೆ ಇಲ್ಲಿ ಉಚ್ಚರಿಸದಂತೆ ಬರೆಯದಿರುವುದು, ಬರವಣಿಗೆಯನ್ನು ಸುಲಭ ಮಾಡುವುದೇ ಗುರಿಯಾಗಿದೆ. ಆದರೆ ಮಹಾಪ್ರಾಣಗಳು(ಖ,ಘ,ಛ,ಝ,ಠ,ಢ,ಥ,ಧ,ಫ,ಭ) ಮತ್ತು ಷ, ಃ, ಇವುಗಳು ಉಲಿಕೆಯಿಲ್ಲಿಲ್ಲದಿದ್ದರೂ ಅದನ್ನು ಬರವಣಿಗೆಯಲ್ಲಿ ಇಟ್ಟಿಕೊಂಡಿರುವುದೇಕೆ ಎಂಬ ಕೇಳ್ವಿ ಹಾಕಿಕೊಂಡರೆ, ಆಗ ತಿಳಿಯುವುದು ಇದು ಸಂಸ್ಕೃತ ಪದಗಳನ್ನು ಎರಡು ಸಾವಿರ ವರ್ಷಗಳ ಹಿಂದೆ ಹೇಗೆ ಬರೆಯಲಾಗುತ್ತಿತ್ತೊ ಅದನ್ನ ಹಾಗೆ ಉಳಿಸಿಕೊಳ್ಳಲು ಕನ್ನಡದ ಬರೆವಣಿಗೆಯ ಮೇಲೆ ಹೇರಿರುವ ಬೇಕಿಲ್ಲದ ಕಟ್ಟಲೆ ಎಂದು.

ಇನ್ನು " ೧. ತಮಿಳಿನಲ್ಲಿ ಮಹಾಪ್ರಾಣ ಬಿಟ್ಟರು. ನಾವು ಅದನ್ನೂ ಬಿಡಬಹುದು" ಎಂಬುದು ಹೇಗೆ ಹೇಳಿದರೊ ತಿಳಿದಿಲ್ಲ. ಕನ್ನಡದಲ್ಲೇ(ಮಾತಿನ) ಆಗಲಿ, ತಮಿಳಿನಲ್ಲೇ ಆಗಲಿ ಎಂದೂ ಮಹಾಪ್ರಾಣ ಇರಲಿಲ್ಲ, ಇನ್ನು ಬಿಡುವುದೆಲ್ಲಿಂದ ಬಂತು? ಇಲ್ಲಿ ಬರಹಗಾರರು ’ಮಾತು ಮತ್ತು ಬರಹ’ ನಡುವೆ ತುಂಬ ಗೊಂದಲಗೊಂಡಿದ್ದಾರೆ ಎನ್ನುವುದು ತಿಳಿಯದೇ ಇರದು. ಒಂದು ನುಡಿ/ಭಾಷೆಯೆಂದರೆ ಅದನ್ನ ’ಮಾತು’ ಎಂಬ ಅರ್ಥದಲ್ಲಿ ತೆಗೆದುಕೊಳ್ಳುವುದು ಸರಿ ಎಂದು ನುಡಿಯರಿಗರು ಹೇಳುತ್ತಾರೆ. ಮಾತಿಗೆ ಹೋಲಿಸಿದರೆ ’ಬರಹ’ ತೀರ ಇತ್ತೀಚಿನದು. ಅಲ್ಲದೆ ಮಾತಿಗಿರುವ ಸ್ವಾಭಾವಿಕತೆ ಬರಹಕ್ಕೆ ಇಲ್ಲ. ಬರಹ ಎಂದಿಗೂ ಕೃತಕ. ಹಾಗಾಗಿ ಒಂದು ನುಡಿಯನ್ನು ಚೆನ್ನಾಗಿ ಅರಿಯಬೇಕಿದ್ದರೆ ’ಮಾತಿನ’ ಬಗ್ಗೆ ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ಈ ಮಾತಿನ ಬಗೆಗಿನ ಸಂಶೋಧನೆಯಿಂದ ಹೊರ ಹೊಮ್ಮಿರುವುದೇ ಕನ್ನಡ ’ಲಿಪಿಕ್ರಾಂತಿ’ ಇಲ್ಲವೆ ’ಲಿಪಿ ಸರಳಿಸುವಿಕೆ’. ಲಿಪಿ ಸುದಾರಣೆ ಮಾಡಿದರೆ ಇವರು ಕೊಟ್ಟಿರುವ ಪದಗಳನ್ನು ಹೀಗೆ ಬರೆಯಬಹುದು :- ಸನ್ನಿದಿ, ಮಂಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ’. ಅದ್ದರಿಂದ ಇದು ಮಾತಿಗೆ ಹೆಚ್ಚು ಹತ್ತಿರವಾಗಿದೆಯಲ್ಲದೆ ಕೃತಕತೆಯು ಮಾಯವಾಗಿದೆ. ’೦’ ಅನ್ನು ಹೇಗೆ ಉಲಿಯಬೇಕೆಂಬುದು ಅದರ ಮುಂದಿನ ಅಕ್ಷರ ನಿರ್ಧರಿಸಿರುವುದರಿಂದ ಎಲ್ಲ ಅನುನಾಸಿಕ/ಮೂಗುಲಿಗಳಿಗೆ (ಪದದ ಮೊದಲು ಬರದಿದ್ದರೆ) ಅದನ್ನು ಬಳಸಲಾಗುತ್ತಿದೆ. (ಗಣ್ಡ = ಗಂಡ, ಹೆಞ್ಚು= ಹೆಂಚು, ಶಙ್ಕರ=ಶಂಕರ). ಈ ಸೊನ್ನೆಯನ್ನು (೦) ಹಾಗೆ ಉಳಿಸಿಕೊಳ್ಳಬೇಕೆಂದು ನುಡಿಯರಿಗರು ಹೇಳುತ್ತಾರೆ ಯಾಕಂದರೆ ಇದರಿಂದ ಕನ್ನಡ ಬರಹ ಸುಲಬವಾಗಿದೆ.
ಹಾಗೇನೆ ಮಹಾಪ್ರಾಣಗಳನ್ನು , ಷ, ಃ, ಇವುಗಳನ್ನು ಕೂಡ ಬಿಡಬಹುದು. ಇದರಿಂದ ಕನ್ನಡ ಬರಹ ಹೆಚ್ಚು ಸುಲಬ ಮತ್ತು ಗೊಂದಲರಹಿತವಾಗುತ್ತದೆ.


ಒತ್ತಕ್ಷರದ ಬಗ್ಗೆ ’ಲಿಪಿ ಸರಳಿಸುವಿಕೆ’ಯನ್ನು ಹಿಂದೆ ಬಿ.ಎಮ್.ಶ್ರೀಯವರು ಮೊದಲು ’ಕನ್ನಡ ಬಾವುಟ’ ಎಂಬ ಪುಸ್ತಕದಲ್ಲಿ ಬರೆದಿದ್ದರು. ಅದರ ಗುರಿ ಪುಸ್ತಕಗಳನ್ನು ’ಅಚ್ಚು’ ಮಾಡುವುದನ್ನು ಸುಲಬಗೊಳಿಸುವುದಲ್ಲದೇ ಬೇರೆ ಏನೂ ಇರಲಿಲ್ಲ. ಆದರೆ ಈಗ ಕಂಪ್ಯೂಟರ್ ಮತ್ತು ಪ್ರಿಂಟರ್ ತುಂಬ ಮುಂದುವರೆದಿರುವುದರಿಂದ ಆ ತೊಂದರೆಗಳಾವುವು ಇಲ್ಲ. ಹಾಗಾಗಿ ಒತ್ತಕ್ಷರಗಳನ್ನು ಉಳಿಸಿಕೊಳ್ಳುವುದಕ್ಕೇ ಯಾವುದೇ ಅಡ್ಡಿಯಿಲ್ಲ.

ಇನ್ನು ಕನ್ನಡ ತಮಿಳಿನಿಂದ ಬೇರ್ಪಟ್ಟು ಸಂಸ್ಕೃತದ ಕಡೆಗೆ ಹೋಗಿದೆ ಎನ್ನುವುದಕ್ಕೆ ಬರಹಗಾರರು ಯಾವುದೇ ಉಲಿಕೆಯರಿಮೆ(phonetics), ನುಡಿಯರಿಮೆ(Linguistics) ಮತ್ತು ಸೊಲ್ಲರಿಮೆ(grammar)ಗಳ ಪುರಾವೆಗಳನ್ನು ಒದಗಿಸಿಲ್ಲ. ಕೇವಲ ಕನ್ನಡ ಬರಹಗಳಲ್ಲಿ ಸಂಸ್ಕೃತ ಪದಗಳನ್ನು ಎರವಲು ಪಡೆದುದನ್ನು ನೋಡಿ ಹಾಗೆ ಅವರು ತಿಳಿದುಕೊಂಡಂತಿದೆ. ಮೊದಲೇ ಹೇಳಿದಂತೆ ಯಾವುದೇ ನುಡಿ/ಭಾಷೆಗೆ ’ಮಾತೇ’ ಆಧಾರ. ಹಾಗೆ ನೋಡಿದರೆ ಕನ್ನಡದ ಸೊಲ್ಲರಿಮೆ/ವ್ಯಾಕರಣ ಸಂಸ್ಕ್ರುತಕ್ಕಿಂತ ತಮಿಳಿಗೆ ಹತ್ತಿರವಾಗಿದೆ.

ಇಂಗ್ಲಿಶಿನಲ್ಲಿರುವ ’ಸ್ಪೆಲ್ಲಿಂಗ್’ ತೊಡಕು ಇಂದು ಆಳವಾಗಿ ಹಲವರನ್ನು ಕಾಡುತ್ತಿದೆ. ಅಮೆರಿಕಾದಲ್ಲಿ ಸ್ಪೆಲ್ಲಿಂಗ್ ಸಮಸ್ಯೆಯನ್ನು ಕಡಿಮೆ ಮಾಡಲು ಹಲವು ಸಂಶೋದನೆಗಳನ್ನು ಮಾಡಲಾಗುತ್ತಿದೆ. ಇವತ್ತು ಇಂಗ್ಲಿಶನ್ನು ಚೆನ್ನಾಗಿ ಓದಲು, ಬರೆಯಲು ಬೇಕೆಂದರೆ ಸುಮಾರು ೧೩೦೦೦ ಪದಗಳ ಸ್ಪೆಲ್ಲಿಂಗನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ ಆದರೆ ಫಿನ್ನಿಶ್(Finnish) ನುಡಿಯನ್ನು ಕಲಿಯಲು ಒಂದೇ ಒಂದು ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳಬೇಕಾಗಿಲ್ಲ. ಅಶ್ಟು ಚೆನ್ನಾಗಿ ಫಿನ್ನಿಶ್ ಬರಹವನ್ನು ಮಾಡಲಾಗಿದೆ. ಈ ಕಾರಣದಿಂದ ಪಿನ್ ಲ್ಯಾಂಡಿನಲ್ಲಿ ಜಗತ್ತಿನಲ್ಲೇ ಅತ್ಯುತ್ತಮವಾದ ’ಕಲಿಕೆ ವ್ಯವಸ್ಥೆ’ ಇದೆ. ರಾಜಕೀಯ, ಸಾಮಾಜಿಕ ಕಾರಣಗಳಿಂದ ಇಂಗ್ಲಿಶ್ ಬರಹ ಇಂದು ಹೆಚ್ಚು ಚಲಾವಣೆಯಲ್ಲಿರುವ ನುಡಿಯಾಗಿದ್ದರೂ ಅದರ ಬರಹ ವೈಜ್ಞಾನಿಕವಾಗಿಲ್ಲ ಎಂದು ಇದರಿಂದ ತಿಳಿಯಬಹುದು.

ಕೊನೆಗೆ ಬರಹಗಾರರು ಕನ್ನಡವನ್ನು ಬಲಪಡಿಸಬೇಕೆಂದು ಹೇಳುತ್ತಾರೆ ಅಲ್ಲದೆ ಲಿಪಿ ಸರಳಗೊಳಿಸುವುದರಿಂದ ’ಘನ’ವಾದುದನ್ನು ಕಳೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಹೇಗೆ ಬಲಪಡಿಸುವುದು ಎಂದು ಹೇಳುವುದಿಲ್ಲ. ಈಗಾಗಲೆ ಕನ್ನಡ ಬಲವಾಗಿದ್ದರೆ ಯಾಕೆ ಕನ್ನಡದಲ್ಲಿ ಹೊಸ ಅರಿವುಗಳು, ಹೊಸ ತಂತ್ರಜ್ಞಾನಗಳು ಹುಟ್ಟುತ್ತಿಲ್ಲ ? ಯಾವ ’ಘನ’ವನ್ನು ಕಳೆದುಕೊಳ್ಳುತ್ತೇವೆ ಎಂದು ಅವರು ಹೇಳುವುದಿಲ್ಲ. ಕನ್ನಡವನ್ನು ಬಲಪಡಿಸುವುದು ಅಂದರೆ ಕನ್ನಡದ್ದೇ ಸೊಗಡನ್ನು ಬಲಪಡಿಸುವುದು. ಕನ್ನಡದ್ದೇ ಆದ ಸೊಲ್ಲರಿಮೆಯನ್ನು/ವ್ಯಾಕರಣವನ್ನು ಗಮನಿಸಿವುದು ಮತ್ತು ಅದಕ್ಕೆ ಇಂಬು ಕೊಡುವುದು , ಹೊಸ ಹೊತ್ತಿಗೆ ಬೇಕಾದ ಕನ್ನಡದ್ದೇ ಆದ ಪದಗಳನ್ನುಂಟು ಮಾಡುವುದು ಅದರಿಂದ ಕಲಿಕೆಯನ್ನು ಇನ್ನು ಹೆಚ್ಚು ಚೆನ್ನಾಗಿ ಮಾಡುವುದು. ಕಲಿಕೆ ಚೆನ್ನಾಗಿ ಆದಾಗ ಜನರಿಗೂ ಕೂಡ ಹೊಸದನ್ನು ಸಾಧಿಸುವುದಕ್ಕಾಗುತ್ತದೆ. ಇದರಿಂದ ನಾಡ ಏಳಿಗೆ ಆಗುವುದರಲ್ಲಿ ಎರಡು ಮಾತಿಲ್ಲ.

ಗುರುವಾರ, ನವೆಂಬರ್ 17, 2011

ಬೈರಪ್ಪನವರು ಮತ್ತು ಪೊಳ್ಳು ಮಾತುಗಳು

ಬೈರಪ್ಪನವರ ಜೊತೆ ಮಾತುಕತೆಯನ್ನು ನೆನ್ನೆಯ(೧೬ ನೇ ನವೆಂಬರ್ ೨೦೧೧) ಕನ್ನಡಪ್ರಬದಲ್ಲಿ ಬಂದಿದೆ - ಇದರ ಬಗ್ಗೆ ಎರಡು ಮಾತು.

ಮೊದಲಿಗೆ, ಬೈರಪ್ಪನವರ ಕಾದಂಬರಿಗಳನ್ನು(ನಾಯಿನೆರಳು, ಜಲಪಾತ.) ಮೆಚ್ಚಿಕೊಂಡವರಲ್ಲಿ ನಾನೂ ಒಬ್ಬ. ಆದರೆ ಈ ಮೇಲಿನ ಮಾತುಕತೆಯಲ್ಲಿ ಅವರ ನಿಲುವುಗಳಲ್ಲಿರುವ ಪೊಳ್ಳುತನದ ಬಗ್ಗೆ ನಾನು ಹೇಳಲೇಬೇಕಿದೆ.

ಕೇಳ್ವಿ.೫ ಕ್ಕೆ ಉತ್ತರಿಸುವಾಗ ಹೀಗೆ ಹೇಳಿದ್ದಾರೆ.- "ವಿಶಯ ಎಶ್ಟೆ ಗಾಡವಾಗಿರಲಿ ಬಾಶೆಯು ಬಾರವಾಗಿರುವುದು ನನಗೆ ಸೇರುವುದಿಲ್ಲ. ಶಬ್ದಗಳು ಕವಿಯನ್ನು ಸುತ್ತುವರೆದು ನನ್ನನ್ನು ಪ್ರಯೋಗಿಸು ಎಂದು ಓಲಿಡುತ್ತವೆ ಎಂದು ನಾನು ಕಾಲೇಜು ಓದುವಾಗ ಒಬ್ಬ ಕನ್ನಡ ಅದ್ಯಾಪಕರು ಪದೇ ಪದೇ ಹೇಳುತ್ತಿದ್ದರು..ನನಗೆ ಎಂದು ಹಾಗೆ ಆಗಿಲ್ಲ" - ಇಲ್ಲಿ ಹೀಗೆ ಹೇಳುವ ಬೈರಪ್ಪನವರು

ಕೇಳ್ವಿ ೧೪ ಕ್ಕೆ ಉತ್ತರಿಸುವಾಗ ಹೀಗೆ ಹೇಳಿದ್ದರೆ - "ಪಾರಿಬಾಶಿಕ ಶಬ್ದಗಳ ಕೈಪಿಡಿಯನ್ನು ಸಿದ್ದಪಡಿಸುವ ಒಮ್ದು ಸಮಿತಿಯಲ್ಲಿ ನಾನು ಸದಸ್ಯನಾಗಿದ್ದೆ. oxy+gen(=ಜನಕ). hydro(ನೀರು)+gen(ಜನಕ) - ಹೀಗೆ ಶಾಸ್ತ್ರ ಮತ್ತು ವಿಜ್ಞಾನದ ಪರಿಬಾಶೆಗಳು ಬಾರತದ ಎಲ್ಲ ಬಾಶೆಗಳಲ್ಲೂ ಬಹುತೇಕ ಒಂದೇ ಆಗಿರುವುದನ್ನು ಗಮನಿಸಿ. ಇಲ್ಲಿ ಬಾಶೆಗಳು ಸಾದ್ಯವಾದಶ್ಟು ಈ ಶಬ್ದಗಳನ್ನೇ ಇಟ್ಟುಕೊಳ್ಳಬೇಕು. ಇದರಿಂದ ಒಂದು ಬಾಶೆಯಲ್ಲಿ ಬರೆದ ವಿಗ್ನಾನ ಮತ್ತು ಶಾಸ್ತ್ರ ಗ್ರಂತಗಳನ್ನು ಇತರ ಬಾಶೆಗಳಿಗೆ ಅನುವಾದಿಸುವುದು ಸುಲಬವಾಗುತ್ತದೆ"

೫ ಮತ್ತು ೧೪ ರಲ್ಲಿರುವ ತನ್ನೆದುರನ್ನು(contradiction) ಯಾರು ಬೇಕಾದರೂ ಸುಳುವಾಗಿ ಗುರುತಿಸುಬಹುದು. ’೫’ರಲ್ಲಿ ಬಾಶೆ ಸರಳವಾಗಿರಬೇಕು ಮತ್ತು ಸರಳ ಬಾಶೆಯಲ್ಲಿ ಗಾಡವಾದ ವಿಚಾರವನ್ನು ತಿಳಿಸಬೇಕು ಎಂದು ಹೇಳುವ ಬೈರಪ್ಪ ’೧೫’ರಲ್ಲಿ ಬೇರೆ ಬಾಶೆಗೆ ಅನುವಾದ ಮಾಡಲು ಸುಲಬ ಮಾಡಲು ಸಂಸ್ಕ್ರುತದ ಕಟಿಣ ಪದಗಳಿಗೆ ಮೊರೆ ಹೋಗಬೇಕು ಎನ್ನುತ್ತಾರೆ. ಬೈರಪ್ಪನವರೆ, ನೀವು ನಿಮ್ಮ ಕಾದಂಬರಿಗಳಲ್ಲಿ ಹೀಗೆ ಯಾಕೆ ಮಾಡಲಿಲ್ಲ... ನೀವು ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸಿದ್ದರೆ ಅದನ್ನು ಇತರ ಬಾಶೆಗಳಿಗೆ ಅನುವಾದ ಮಾಡುವುದು ಸುಳುವಾಗುತ್ತಿರಲಿಲ್ಲವೆ? ಹಾಸನದ ಆಡುನುಡಿಯನ್ನು ಯಾಕೆ ಹೆಚ್ಚು ಬಳಸಿದ್ದೀರಿ. ? ಇದು ನಿಮ್ಮ ಇಬ್ಬಂದಿತನವಲ್ಲವೆ?
ಯಾವುದೇ ನುಡಿಯಲ್ಲಿ ಪಾರಿಬಾಶಿಕ ಪದಗಳನ್ನು ಉಂಟು ಮಾಡುವಾಗ ಆಯ ನುಡಿ ಆಡುವ ಮಂದಿಗೆ ಸುಲಬವಾಗಿ ತಿಳಿಯುವಂತೆ ಪದವನ್ನು ಉಂಟು ಮಾಡಬೇಕು. ಇದರಿಂದ ಆ ನುಡಿಜನಾಂಗವು ಕಲಿಕೆಯಲ್ಲಿ ಮುನ್ನಡೆಯಬಹುದು. ಅದನ್ನು ಬಿಟ್ಟು ಬೇರೆ ಯಾವುದೋ ಬಾಶೆಗೆ ಅನುವಾದ ಮಾಡಲು ಅನುವಾಗುವಂತೆ ಪಾರಿಬಾಶಿಕ ಉಂಟುಮಾಡುವುದು ಎಶ್ಟು ಸರಿ? ಪಾರಿಬಾಶಿಕ ಪದಗಳ ಮೊದಲ ಗುರಿ ಆ ನುಡಿಜನಾಂಗಕ್ಕೆ ಯಾವುದೇ ಕಲಿಕೆಯನ್ನು ಸುಲಬಗೊಳಿಸುವುದು ಮತ್ತು ಕಲಿಕೆಯಲ್ಲಿ ಮುನ್ನಡೆಯುವಂತೆ ಮಾಡುವುದೇ ಆಗಿರಬೇಕು. ಹಾಗಾಗಿ ಆಯ ನುಡಿಯಲ್ಲಿರುವ ಸರಳ ಪದಗಳನ್ನು ಬಳಸಿ ಪಾರಿಬಾಶಿಕ ಪದನೆರಕೆಯನ್ನು ಕಟ್ಟಬೇಕು.

"ಕೇಳ್ವಿ ೧೪. ಈ ಹೊತ್ತು ಪ್ರಾದೇಶಿಕ ಭಾಶೆಗಳ, ಪ್ರಾಂತಗಳ ಮತ್ತು ಸಂಸ್ಕ್ರುತಿಗಳ ಬಗ್ಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಶಣವೆನಿಸಿದೆ. ಆದರೆ, ಬಾರತದ ಬಗೆಗೆ ಮಾತನಾಡುವುದು ಸಂಕುಚಿತತೆ ಎನಿಸಿದೆ.ಏಕೆ?"
ಮತ್ತೆ ಕೇಳ್ವಿ೧೫ ಕ್ಕೆ ಹೀಗೆ ಉತ್ತರಿಸಿದ್ದಾರೆ:-

ಮೊದಲಿಗೆ ಈ ಕೇಳ್ವಿಯಲ್ಲೇ ಎಡವಟ್ಟಾಗಿದೆ. ಪ್ರಾದೇಶಿಕ ಬಾಶೆ ಎಂದರೇನು. ಬಾರತದ ಬಗೆಗೆ ಮಾತನಾಡುವುದು ಎಂದರೇನು. ಎರಡು ಬೇರೆ ಬೇರೆ ಹೇಗೆ? ನನಗೆ ಬಾರತ ಅಂದರೆ ಕರ್ನಾಟಕ; ನಾನು ಕನ್ನಡಿಗನಾಗಿರುವುದರಿಂದಲೇ ನಾನು ಬಾರತೀಯ. ಎರಡು ಬೇರೆ ಬೇರೆ ಅಲ್ಲ. ಕೇಳ್ವಿಯಲ್ಲಿ ಕನ್ನಡಿಗ ಮತ್ತು ಬಾರತೀಯ ಎಂಬುದನ್ನು ಬೇರೆ ಬೇರೆಯಾಗಿ ನೋಡುವ ಹುನ್ನಾರ ಅಡಗಿದೆ. ಅಲ್ಲದೆ ಈ ಕೇಳ್ವಿಯಲ್ಲಿ ’ಬಾರತೀಯತೆ ಮೇಲು ಕನ್ನಡತನ ಕೀಳು’ ಎನ್ನುವುದನ್ನು ಸೂಚ್ಯವಾಗಿ ಹೇಳುವಂತೆ ತೋರುತ್ತಿದೆ.

ಸರಿ ಈ ಕೇಳ್ವಿಗೆ ಬೈರಪ್ಪನವರು ಕೊಡುವ ಉತ್ತರದ ಬಗ್ಗೆ ನೋಡೋಣ. ಅವರು ಹೇಳುತ್ತಾರೆ:-
"ಈ ಬಾವನೆ ಪ್ರದಾನವಾಗಿ ಡಿಎಮ್ಕೆಯದು. ಅವರಿಂದ ಕರ್ನಾಟಕದ ಕೆಲವು ಅಕಾಡೆಮಿಕ್ ವಲಯಕ್ಕೆ ಹಬ್ಬಿದೆ. ಇದು ಮಹಾರಾಶ್ಟ್ರದಲ್ಲಿಲ್ಲ. ಗುಜರಾತಿನಲ್ಲಿಲ್ಲ. ಪಂಜಾಬಿನಲ್ಲಿಲ್ಲ. ನಾನು ತಿಳಿದಂತೆ ಆಂದ್ರದಲ್ಲಿಲ್ಲ. ಕರ್ನಾಟದಲ್ಲಿ ಯಾಕೆ ಬೆಳೆದಿದೆ. ಹಿಂದಿಯವರ ಪ್ರಾಬಲ್ಯ, ತಮಿಳು, ಮಲೆಯಾಳಗಳ ಒತ್ತುವರಿ ಕಾರಣವೆ."
ಇಲ್ಲಿ ಬೈರಪ್ಪನವರ ಅರಿಯಮಿಕೆ(ignorance) ಎದ್ದು ಕಾಣುತ್ತಿದೆ. ಪಂಜಾಬ್, ಆಂದ್ರದಲ್ಲಿ ಮೊದಲಿನಿಂದಲೂ ಆ ರಾಜ್ಯಗಳ ’ಪ್ರಾದೇಶಿಕ ಪಕ್ಶಗಳು’(ತೆಲುಗು ದೇಶಂ, ಅಕಾಲಿದಳ) ಹಿಂದಿನಿಂದಲೂ ಬಲವಾಗಿಯೇ ಇವೆ. ಅಲ್ಲದೇ ಪಂಜಾಬಿಗರು ’ಕಲಿಸ್ತಾನ” ಎಂಬ ಬೇರೆಯದೇ ಪಂಜಾಬಿ ದೇಶ ಮಾಡಲು ಹೊರಟಿದ್ದರು ಎಂಬುದನ್ನು ಬೈರಪ್ಪ ಮರೆತರೇಕೆ? ಇನ್ನು ಮಹಾರಾಶ್ಟ್ರದಲ್ಲಿ ’ಹೊರಬರ’ ವಿರುದ್ದ ಮರಾಟಿಗಳ ಕಾದಾಟ ಹೊತ್ತು ಹೊತ್ತಿಗೂ ಹೆಚ್ಚುತ್ತಿದೆ. ಅದಲ್ಲದೆ ’ಮಹಾರಾಶ್ಟ್ರ ನವನಿರ್ಮಾಣ ವೇದಿಕೆ’ ಮಹಾರಾಶ್ಟ್ರ ವಿದಾನಸಬೆಯಲ್ಲಿ ೧೩ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದಿದ್ದಾರೆ. ಅಲ್ಲದೆ ಬೈರಪ್ಪನವರು ಕವಿರಾಜಮಾರ್ಗ ಓದಿದ್ದರೆ(ಓದೂ ಜಾಣ ಮರೆವು ಇರಬಹುದು) ಹೀಗೆ ಹೇಳುತ್ತಿರಲಿಲ್ಲ. ಕನ್ನಡ ನಾಡು/ದೇಶ ಇರದಿದ್ದರೆ ೯ನೇ ನೂರೇಡಿನ ಕವಿರಾಜಮಾರ್ಗದಲ್ಲೇ ಕನ್ನಡ ನಾಡಿನ ಗಡಿಯನ್ನು ಯಾಕೆ ಗುರುತಿಸಬೇಕಿತ್ತು. ಇದು ತಿರುಳ್ಗನ್ನಡ ನಾಡಿನ ಗಡಿ ಅಂತ ಯಾಕೆ ಹೇಳಬೇಕಿತ್ತು. ೯ ನೇ ಶತಮಾನದಲ್ಲಿ ಯಾವ ಡಿಎಮ್ಕೆ ಇತ್ತು? ಇಲ್ದೇದ್ ಮೇಲೆ ಹೇಗೆ ತಮಿಳುನಾಡಿನಿಂದ ಹಬ್ಬಕ್ಕಾಗುತ್ತೆ?

ಮುಂದುವರೆದೂ ಬೈರಪ್ಪನವರು,
" ಭಾರತವನ್ನು ಒಡೆಯಲು ಬ್ರಿಟಿಶರು ಹುಟ್ಟುಹಾಕಿದ ಸಿದ್ದಾಂತಗಳ ಪರಿಣಾಮವೇ"ಬಾರತ ಅಂತ ಎಲ್ಲಿ ಇತ್ತು ಅದನ್ನ ಒಡೆಯಕ್ಕೆ? ಹಾಗೆ ನೋಡಿದರೆ ಬ್ರಿಟಿಶರೆ ಆಡಳಿತದ ಅನುಕೂಲಕ್ಕೆ ’ಇಂಡಿಯಾ’ ಅಂತ ಒಟ್ಟು ಮಾಡಿದ್ದು. ಅದಕ್ಕೂ ಮೊದಲು ಇದ್ದುದು ಕನ್ನಡ ನಾಡು, ತಮಿಳು ನಾಡು, ತೆಲುಗುನಾಡು ( Kannada Country, Tamil Country, Telugu Country...etc). ಆಯ ನಾಡುಗಳನ್ನು ಆಳಿದವರು ತಮ್ಮವೇ ಆದ ಪಡೆ/ಸೈನ್ಯವನ್ನು ಹೊಂದಿದ್ದರು. ಬ್ರಿಟಿಶರು ಬರುವ ಮುನ್ನ ’ಬಾರತ ಸೇನೆ’ ಅಂತ ಯಾವುದೂ ಇರಲಿಲ್ಲ.

ಇನ್ನು ಮುಂದೆ ಹೋಗಿ ,
" ನಾವು ಪ್ರಾದೇಶಿಕ ಬೇರನ್ನು ಅರಸಿ ಹೊರಟರೆ ಒಬ್ಬರ ಜೊತೆ ಬೆರೆಯದ ಜಾತಿ, ಉಪಜಾತಿಗಳಲ್ಲಿ ನಿಲ್ಲುತ್ತೇವೆ."
ಸರಿ, ಹಾಗಾದರೆ ’ಪ್ರಾದೇಶಿಕತೆ’ಯಿಂದ ಬಹುದೂರ ಸಾಗೋಣ. ಇಡೀ ಮಾನವರೆಲ್ಲ ಒಂದೇ. ಬಾರತ, ಪಾಕಿಸ್ತಾನ . ಯು ಎಸ್ ಎ ಅಂತ ಬೇರೆ ಬೇರೆ ದೇಶಗಳು ಯಾಕೆ ಬೇಕು ? ಎಲ್ಲರೂ ಒಂದೇ. ಎಲ್ಲವನ್ನು ಒಗ್ಗೂಡಿಸಲು ಆಗುತ್ತದೆಯೆ? ಅದಕ್ಕೆ ನಮ್ಮ ಹಿರಿಯರು ಬಾರತವನ್ನು ನುಡಿಯ ಮೇಲೆ ನಾಡುಗಳನ್ನಾಗಿ ವಿಂಗಡಣೆ ಮಾಡಿದ್ದಾರೆ . ಯಾಕಂದರೆ ನುಡಿಯ ಆದಾರದ ಮೇಲೆ ಪ್ರಪಂಚದಲ್ಲಿ ದೇಶಗಳಾಗಿವೆ. ಜಾತಿಯ ಆದಾರದ ಮೇಲೆ ದೇಶಗಳನ್ನು ಎಲ್ಲೂ ಮಾಡಿಲ್ಲ. ಆಯ ನುಡಿ ಆಯ ನುಡಿಜನಾಂಗದ ಜೀವನಾಡಿಯೇ ಆಗಿದೆ. ಇದರಿಂದಲೇ ಅವರ ಏಳಿಗೆ ಎಂಬುದನ್ನ ಹಲವು (ಯೂರೋಪಿನ)ನಾಡುಗಳನ್ನು ನೋಡಿ ಕಲಿತುಕೊಳ್ಳಬಹುದು.

ಕೊಸರು:-
ತಿಳಿದೊ ತಿಳಿಯದೆಯೋ ಬೈರಪ್ಪನವರು ಹಲವು ಪೊಳ್ಳು ವಾದಗಳನ್ನು ಮುಂದಿಟ್ಟಿದ್ದಾರೆ. ಇನ್ನಾದರೂ ಬೈರಪ್ಪನವರು ಅರಿತು ತಮ್ಮ ದೊಡ್ಡತನಕ್ಕೆ ತಕ್ಕಂತೆ ಮಾತನಾಡಲಿ ಎಂದು ಬಯಸುತ್ತೇನೆ. ಇಶ್ಟಾದರೂ ನಾನು ಅವರ ಕಾದಂಬರಿಯಾದ ’ನಾಯಿ-ನೆರಳು’ನ್ನು ಬಲು ಒಲವಿಂದ ಮೆಚ್ಚಿದ್ದೇನೆ ಯಾಕಂದರೆ ದಿಟವಾಗಲೂ ಬೈರಪ್ಪನವರಿಗೆ ನಮ್ಮ ನುಡಿಯ ಬಲ ಅರಿತುಕೊಂಡಿದ್ದಾರೆ ಅಂತ ಆಗ ನನಗನ್ನಿಸಿತ್ತು. ಆದರೆ ಈಗ ಅದು ಸುಳ್ಳು ಅಂತ ಬೈರಪ್ಪನವರೇ ತೋರಿಸಿಕೊಟ್ಟಿದ್ದಾರೆ. ಬೂಟಾಟಿಕೆಗೋಸ್ಕರ ಹಾಸನದ ಆಡುನುಡಿಯನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿದ್ದಾರೇನೊ ಅಂತ ಈಗ ಅನ್ನಿಸತೊಡಿಗಿದೆ.