ಮಂಗಳವಾರ, ಡಿಸೆಂಬರ್ 20, 2011

ಕನ್ನಡಿಗರು ಹಿಂದಿಯನ್ನು(ಸಂವಹನ ಬಾಶೆಯಾಗಿಯೂ ಕೂಡ) ಯಾಕೆ ಒಪ್ಪಬಾರದು?

ಮೊನ್ನೆ ಕನ್ನಡ ಪ್ರಭದಲ್ಲಿ ಚಂದ್ರಶೇಖರ ಕಂಬಾರರ ಬಗೆಗೆ ಮೂಡಿ ಬಂದ ವರದಿಯೊಂದರ ಬಗ್ಗೆ ನನ್ನ ಪ್ರತಿಕ್ರಿಯೆ:-

"ಬಾರತೀಯರು, ರಾಶ್ಟ್ರೀ ಯ ವಿಷಯಗಳು ಬಂದಾಗ ಹಿಂದಿ ಬಳಸಬೇಕು ಎಂಬುದು"-
ಹೀಗೆ ಹೇಳುವುದರಿಂದ ರಾಷ್ಟ್ರೀಯ ವಿಷಯಗಳನ್ನು ಕನ್ನಡದಲ್ಲಿ ಹೇಳಲಾಗದು ಎಂಬ ಕೀಳರಿಮೆಯನ್ನು ನಾವೇ ಕನ್ನಡದಲ್ಲಿ ಬಿತ್ತಿದಂತಾಗುವುದಿಲ್ಲವೆ? ಭಾರತದಲ್ಲಿದ್ದು, ಕನ್ನಡಿರಾಗಿದ್ದುಕೊಂಡು ಮತ್ತು ಕನ್ನಡದ ಹಿರಿಮೆಯನ್ನು ಬಲ್ಲ ಕನ್ನಡಿಗರು ಹಿಂದಿಯಲ್ಲಿ ಸಂವಹನ ಮಾಡುವುದು ಇಂಗ್ಲಿಶಿನಲ್ಲಿ ಸಂವಹನ ಮಾಡಿದಶ್ಟೆ ಕ್ರುತ್ರಿಮ ಮತ್ತು ಕೀಳ್ತನವಾಗುವುದಿಲ್ಲವೆ?. ಯಾವ ತರದಲ್ಲಿ ನೋಡಿದರೂ ಕನ್ನಡಕ್ಕಿಂತ ಹಿಂದಿ ಮಿಗಿಲಲ್ಲ. ಯಾವುದೇ ವಿಶಯವಲ್ಲಾಗಲಿ ಇಂತಹ ನುಡಿಯನ್ನು ಬಳಸಬೇಕೆಂದು ಹೇಳುವುದು ಮಂದಿಯಾಳ್ವಿಕೆಯ ಬಯಕೆಗಳಿಗೆ ವಿರೋಧವಾಗಿದೆ.

ಇನ್ನು ಶ್ರೀ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಮುಂದೆ ಹೋಗಿ ಕನ್ನಡ ಸಾಹಿತ್ಯದ ಪ್ರಚಾರಕ್ಕೆ ಕನ್ನಡಿಗರು ಹಿಂದಿಯನ್ನು ಸಂವಹನ ಭಾಷೆಯಾಗಿ ಸ್ವೀಕರಿಸಲೇಬೆಕು ಎಂದು ಹೇಳಿದ್ದಾರೆ. ಹಿಂದಿಗೂ ಹಲವು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಹಿಂದಿ ಸಾಹಿತ್ಯದ ಪ್ರಚಾರಕ್ಕಾಗಿ ಹಿಂದಿಗರು ಕನ್ನಡ ಕಲಿಯುತ್ತಿದಾರೆಯೆ? ನಾವೇ ಏಕೆ ಹಿಂದಿ ಕಲಿಯಬೇಕು? ಇಶ್ಟಕ್ಕೂ ಇಂತಹ ಸಾಹಿತ್ಯ ಪ್ರಚಾರಕ್ಕಾಗಿ ಹಿಂದಿ ಕಲಿಯಬೇಕಿರುವ ಕನ್ನಡಿಗರ ಎಣಿಕೆ ಎಶ್ಟಿರಬೇಕು? ತೀರ ಕಡಿಮೆ ಜನಕ್ಕೆ ಬೇಕಾದ ಈ ಅವಶ್ಯಕತೆಗೆ ಇಡೀ ಕನ್ನಡಿಗರೇ ಏಕೆ ಹಿಂದಿಯನ್ನು ಸ್ವೀಕರಿಸಬೇಕು? ಒಂದು ವೇಳೆ ಹೀಗೆ ಸ್ವೀಕರಿಸಿದರೆ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಇದರಿಂದ ಆಗುವ ತೊಂದರೆಗಳ ಬಗ್ಗೆ ಇವರು ಚಿಂತಿಸಿದ್ದಾರೆಯೆ?

ಈ ಎಲ್ಲ ಕೇಳ್ವಿಗಳಿಗೆ ಉತ್ತರ ಹುಡುಕಲು ಹೊರಟಾಗ ಸಿಗುವುದು ಈ ಉತ್ತರಗಳು
* ೦.೦೧% ಮಂದಿಗೆ ಬೇಕಾದ ಈ ಸಾಹಿತ್ಯದ ಅನುವಾದದ ಕೆಲಸಕ್ಕೆ ಎಲ್ಲ ಕನ್ನಡಿಗರು ಹಿಂದಿಯನ್ನು ಸಂವಹನ ಬಾಶೆಯಾಗಿ ಒಪ್ಪುವುದು ಎಂದೂ ವೈಗ್ನಾಕವಲ್ಲ.
* ಈ ರೀತಿ ಸಂವಹನ ಬಾಶೆಯಾಗಿ ಹಿಂದಿ ನುಸುಳಿದರೆ ಇದರಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮುಂದೆ ಅಪಾಯ ಕಾದಿದೆ. ಯಾಕಂದರೆ ಹಿಂದಿಯನ್ನು ಕನ್ನಡಿಗರು ಒಪ್ಪಿದರೆ ಇದು ತಂಡತಂಡವಾಗಿ ಹಿಂದಿಗರ ವಲಸೆಗೆ ಕಾರಣವಾಗಿ
ಕನ್ನಡಿಗರ ತಮ್ಮ ನಾಡಿನಲ್ಲೇ ತಬ್ಬಲಿಗಳಾಗಬಹುದು.
* ಈವತ್ತಿಗೂ ಉತ್ತರಬಾರತದಲ್ಲಿ ದಕ್ಶಿಣ ಬಾಶೆಗಳನ್ನು ಕಲಿಸಲಾಗುತ್ತಿಲ್ಲ. ಎಶ್ಟೊ ಉತ್ತರ ಬಾರತೀಯರಿಗೆ ದಕ್ಶಿಣ ಬಾಶೆಗಳ ಪರಿಚಯವೇ ಇಲ್ಲ. ನಾವೇ(ಕನ್ನಡಿಗರೇ) ಯಾಕೆ ಮೇಲೆ ಬಿದ್ದು ಹಿಂದಿ ಕಲಿತು ಅವರಿಗೆ (ಹಿಂದಿಗರಿಗೆ) ಅನುಕೂಲ ಮಾಡಿಕೊಡಬೇಕು.
* ಹಿಂದಿಯನ್ನು ಸಂವಹನ ಬಾಶೆಯಾಗಿ ಒಪ್ಪಿದರೆ ಕರ್ನಾಟಕದಲ್ಲಿ ಹಿಂದಿಗರು ಬಂದು "ನಿಮಗೆ ಹೇಗಿದ್ದರೂ ಹಿಂದಿ ಗೊತ್ತಿದೆಯಲ್ಲ, ಕರ್ನಾಟಕದಲ್ಲೂ ಹಿಂದಿಯಲ್ಲೇ ಮಾತನಾಡಿ" ಅಂದರೆ ಮುಗೀತು. ಅಲ್ಲಿಗೆ ಕನ್ನಡ, ಕರ್ನಾಟಕ ಅಳಿದು ಹಿಂದಿ ನಾಡಾಗುವುದರಲ್ಲಿ ಎರಡು ಮಾತಿಲ್ಲ.

ಕನ್ನಡಿಗರೆಲ್ಲರೂ ಹಿಂದಿಯನ್ನು(ಸಂವಹನಕ್ಕೆ)ಒಪ್ಪಬೇಕೆನ್ನುವುದು ಕನ್ನಡ ವಿರೋದಿ ನಿಲುವಲ್ಲದೆ ಮಂದಿಯಾಳ್ವಿಕೆಯ ವಿರೋಧಿ ನಿಲುವು ಕೂಡ ಎಂಬುದನ್ನು ಮಹನೀಯರು ಕನ್ನಡಿಗರು ಇನ್ನಾದರೂ ಅರಿಯಲಿ.

ಶನಿವಾರ, ಡಿಸೆಂಬರ್ 03, 2011

ಲಿಪಿ ಸರಳಿಸುವಿಕೆ - ಬಿಡಿ ೨
ಹೋದ ಭಾನುವಾರ(27 ನವೆಂಬರ್ 2011) ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಾವಾದ ಡಾ ಉದಯರವಿ ಶಾಸ್ತ್ರಿ ಅವರ ಬರಹಕ್ಕೆ ಪ್ರತಿಕ್ರಿಯೆ -

ಬರಹಗಾರರು ’ಇಂದಿನಿಂದ ಋ ಎಂಬ ಅಕ್ಷರವನ್ನು ಶಾಲೆಗಳಲ್ಲಿ ಬೋದಿಸಬಾರದು, ಪಠ್ಯದಲ್ಲಿ ಸೇರಿಸಬಾರದು’ ಎಂಬಂತಹ ಆಜ್ಞೆಗಳನ್ನು ಹೊರಡಿಸಲು ಬರುವುದಿಲ್ಲ’ ಎಂದು ಹೇಳುತ್ತಾರೆ.ಆದರೆ ಈಗ ಇರುವ ಹೊಸಗನ್ನಡದ ಅಕ್ಷರಮಾಲೆಯಲ್ಲಿ ಇಂತಿಶ್ಟೆ ಅಕ್ಷರಗಳು ಇರಬೇಕು. ಅದರಲ್ಲಿ ಇಶ್ಟೆ ಸ್ವರಗಳು, ಇಶ್ಟೆ ವ್ಯಂಜನಗಳು ಇರಬೇಕು ಎಂದು ಸೆಲವು/ಆಜ್ಞೆ ಹೊರಡಿಸಿದವರು ಯಾರು? ಹಳೆಗನ್ನಡದಲ್ಲಿರದ ’ಋ’, ’ಷ’ ಎಂಬ ಅಕ್ಷರಗಳನ್ನು ಹೊಸಗನ್ನಡಕ್ಕೆ ’ಯಾವುದೊ ಒಂದು ದಿನ’ ಆಜ್ಞೆ ಹೊರಡಿಸರಲೇ ಬೇಕಲ್ಲವೆ? ಹೊರಡಿಸಿದ್ದಾರೆ. ಅಂದ ಮೇಲೆ ಮಹಾಪ್ರಾಣ, ಋ, ಷ, ಃ - ಇವುಗಳನ್ನು ಕನ್ನಡ ಬರಹದಿಂದ ಕೈ ಬಿಡಿಲಾಗಿದೆ ಎಂದು ಆಜ್ಞೆ ಯಾಕೆ ಹೊರಡಿಸಲು ಬರುವುದಿಲ್ಲ ಎಂದು ಉದಯರವಿಯವರೇ ತಿಳಿಸಬೇಕು.
ದಿಟವಾಗಲೂ ಯಾವುದೇ ನುಡಿಗೆ ಆಗಲಿ ಯಾವುದೊ ಒಂದು ಕಾಲಗಟ್ಟದಲ್ಲಿ ಎಶ್ಟು ಅಕ್ಷರಗಳು ಆ ನುಡಿಗೆ ಬೇಕು. ಅದರ ರೂಪುರೇಶೆಗಳೇನು ಎಂದು ನಿಗದಿಪಡಿಸಲೇಬೇಕಾಗುತ್ತದೆ. ಇದು ಎಲ್ಲ ನುಡಿಗಳಲ್ಲೂ ನಡೆಯುತ್ತದೆ. ಪ್ರೆಂಚಿಗೆ ಅಕೆಡಿಮಿಯ ಪ್ರಾಂಕ್ ಇದೆ, ಬೇರೆ ಬೇರೆ ಭಾಷೆಗಳಿಗೆ ಅವುಗಳದೇ ಆದ ಭಾಷಾ ಸಂಬಂಧಿಸಿದ ಸಂಸ್ಥೆಗಳಿವೆ. ಆದರೆ ಆ ನುಡಿಯ ಮಾತು ಇಲ್ಲವೆ ಉಲಿಕೆಯರಿಮೆಯನ್ನು ಬಿಡಿಯರಸಿ ಒಂದು ಬರಹವನ್ನು ಸಿದ್ದಪಡಿಸಿದರೆ ಅದು(ಲಿಪಿ) ವೈಜ್ಞಾನಿಕವಾಗಿರುತ್ತದೆ. ಅಲ್ಲದೆ ಅಂತಹ ಬರಹ ಆ ನುಡಿಯಾಡುವ ಮಂದಿಗೆ ಹೆಚ್ಚು ಬಳಕೆಗೆ ಬರುತ್ತದೆ.

ಇನ್ನು ಲಿಪಿ ಸರಳಿಸುವಿಕೆಯನ್ನು ’ಪ್ರಿಸ್ಕ್ರಿಪ್ಟಿವ್’ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ದಿಟವಾಗಲು ನೋಡಿದರೆ ಲಿಪಿ ಸರಳಿಸುವಿಕೆ ಒಂದು ’ಡಿಸ್ಕ್ರಿಪ್ಟಿವ್’ ಪ್ರಯತ್ನವೇ ಹೊರತು ಪ್ರಿಸ್ಕ್ರಿಪ್ಟಿವ್ ಆಗಲಾರದು ಯಾಕಂದರೆ ಈಗಿರುವ ಬರಹದಲ್ಲಿರುವ ’ಷ’,ಮಹಾಪ್ರಾಣ, ಃ, ಋ ಇವುಗಳೆಲ್ಲ ಕನ್ನಡದ ಮಾತಿನಲ್ಲಿಲ್ಲ. ಆದರೂ ಅಕ್ಷರಮಾಲೆಯನ್ನು ಸಿದ್ದಪಡಿಸುವಾಗ ಇದನ್ನು ’ಪ್ರಿಸ್ಕ್ರಿಪ್ಟಿವ್’ ಆಗಿ ಹೇರಲಾಯಿತು. ಅಂದರೆ ಸಂಸ್ಕೃತದಲ್ಲಿರುವ ಋ, ಷ ಮತ್ತು ಮಹಾಪ್ರಾಣ ಕನ್ನಡದ್ದಲ್ಲಿರಲೇಬೇಕು ಎಂಬ ತಪ್ಪು ತಿಳುವಳಿಕೆಯೇ ಇದಕ್ಕೆ ಕಾರಣ. ಆದರೆ ಇದರಿಂದ ಕನ್ನಡ ಬರಹದಲ್ಲಿ ಗೊಂದಲ ಉಂಟಾಗಿದೆ. ಇದಕ್ಕೆ ಲಿಪಿ ಸರಳಿಸುವಿಕೆ ಬೇಕು. ಇನ್ನು ಗಣಿತದ ಲೆಕ್ಕಕ್ಕೆ ಅನುಗುಣವಾಗಿ ಕನ್ನಡ ಅಕ್ಷರಗಳಿರಬೇಕೆ? ಕಡಿಮೆ ಅಕ್ಷರಗಳು ಇಲ್ಲವೆ ಹೆಚ್ಚು ಅಕ್ಷರಗಳಿರಬೇಕು ಎನ್ನುವ ವಾದ ಸರಿಯಿಲ್ಲ. ಇದರಿಂದ ಕನ್ನಡ ಬರಹವನ್ನು ನಿರ್ದರಿಸಲಾಗುವುದಿಲ್ಲ. ನಿರ್ದರಿಸಲೂ ಬಾರದು. ಕನ್ನಡ ಉಲಿಕೆಯರಿಮೆಯೇ (phonetics) ಕನ್ನಡ ಬರಹಕ್ಕೆ ಅಡಿಪಾಯವಾಗಬೇಕು.
’ಭಾಷೆಗೆ ತನ್ನದೇ ಆದ ಧಾರಣ ಶಕ್ತಿ ಇರುತ್ತದೆ..ಅದು ತಾನಾಗಿಯೇ ಸ್ವೀಕಾರ -ತಿರಸ್ಕಾರಗಳನ್ನು ನಿರ್ದರಿಸುತ್ತದೆ" ಎಂದು ಅವರು ಹೇಳಿದ್ದಾರೆ. ಇದು ಅವರು ಭಾಷೆಯನ್ನು ಮಾತು ಎಂಬ ಅರ್ಥದಲ್ಲಿ ಹೇಳಿದ್ದರೆ ಸರಿ. ಆದರೆ ಭಾಷೆ ಎಂದರೆ ಬರಹ ಎಂಬ ಅರ್ಥವೂ ಇರುವುದರಿಂದ ಅದಕ್ಕೆ ಈ ಮೇಲಿನ ಹೇಳಿಕೆ ಹೊಂದುವುದಿಲ್ಲ. ಯಾವುದೇ ಭಾಷೆಗೆ ಒಂದು ಬರಹವನ್ನು ನಿರ್ಧರಿಸುವುದು/ನಿಗದಿಪಡಿಸುವುದು ಒಂದು ಗುಂಪೇ. ಈಗಿರುವ ಕನ್ನಡಕ್ಕೆ ಬರಹವನ್ನು ನಿಗದಿಪಡಿಸಿದ್ದು ಒಂದು ಗುಂಪೇ. ನಡುಗನ್ನಡ ಬರಹದಲ್ಲಿ ’ಱ’/ೞ ಎಂಬ ಅಕ್ಶರಗಳನ್ನು ಮೊದಲು ಬಿಟ್ಟಿದ್ದು ಹರಿಹರನೊಬ್ಬನೇ. ಆದರೆ ಮಾತಿನಲ್ಲಾಗುವ ಬದಲಾವಣೆಗೆ ಕಡಿವಾಣ ಹಾಕಲಾಗುವುದಿಲ್ಲ. ಸಾಮಾನ್ಯ ಮಂದಿಗೆ ಸಂಸ್ಕ್ರುತಜನ್ಯ ಮತ್ತು ಕನ್ನಡದ್ದೇ ಆದ ಪದಗಳಲ್ಲಿರುವ ಬೇರೆತನ ಗುರುತಿಸಲಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಸಂಸ್ಕ್ರುತಜನ್ಯ ಪದಗಳು ಸಂಸ್ಕ್ರುತದಲ್ಲಿರುವ ಹಾಗೆ ನಮ್ಮ ಕನ್ನಡ ಮಾತಿನಲ್ಲಿರುವುದಿಲ್ಲ. ಉದಾಹರಣೆಗೆ ಸಂಸ್ಕೃತದ ಮಹಾಪ್ರಾಣಗಳು ಕನ್ನಡಿಗರ ಮಾತಿನಲ್ಲಿ ಅಲ್ಪಪ್ರಾಣವಾಗುತ್ತದೆ. ಇದು ಕನ್ನಡದ ಮಾತಿನ ಹರಿವು.
ಕೊನೆಗೆ, ಕನ್ನಡದ ಒಳನುಡಿಗಳು ಕನ್ನಡವನ್ನು ಒಡೆಯುತ್ತವೆ ಎಂಬ ಅಭಿಪ್ರಾಯದಲ್ಲಿ ಅವರು ಹೇಳಿದ್ದಾರೆ. ಒಳನುಡಿಗಳಲ್ಲಿ ಬೇರೆತನವಿರುವುದು ಕೊರತೆಯಲ್ಲ ಇಲ್ಲವೆ ತಪ್ಪಲ್ಲ. ಇದೇ ಕಾರಣ ಒಡ್ಡಿ ಕನ್ನಡದ ಒಳನುಡಿಗಳಿಂದ ದೂರ ಸರಿಯುವುದು ಕೂಡ ಸರಿಯಿಲ್ಲ. ಎಲ್ಲ ಒಳನುಡಿಗಳಿಗೂ ಕಾಮನ್ ಆಗಿರುವ ಒಂದು ಕನ್ನಡ(ಬರಹಗನ್ನಡ) ನುಡಿ ಇದ್ದೇ ಇರುತ್ತದೆ. ಇದೆ. ಅದು ಕೆಲವರಿಗೆ ಹತ್ತಿರವಿರಬಹುದು ಕೆಲವರಿಗೆ ಸೊಲ್ಪ ದೂರವಿರಬಹುದು. ಆದರೆ ಸಂಸ್ಕೃತದ ಹಾಗೆ ಇಲ್ಲವೆ ಇಂಗ್ಲಿಶಿನ ಹಾಗೆ ತುಂಬ ದೂರವಿಲ್ಲ..... ನಮ್ಮ ನಮ್ಮ ಕನ್ನಡಗಳಲ್ಲಿ ಬೇರೆತನವಿದೆಯೆಂದು ತೀರ ದೂರದಲ್ಲಿರುವ ಸಂಸ್ಕೃತದ ಇಲ್ಲವೆ ಇಂಗ್ಲಿಶಿನ ಸೊಲ್ಲರಿಮೆ/ವ್ಯಾಕರಣವನ್ನು ಹೇರುವುದು ಎಶ್ಟು ಸರಿ? ಮೈಸೂರಿನವರಿಗೆ ಹುಬ್ಬಳ್ಳಿಯ ಕನ್ನಡದಲ್ಲಿ ಮಾತಾಡಿದರೆ ಅರ್ಥವಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮಾತಾಡಿದರೆ ಮೈಸೂರಿನವರಿಗಾಗಲಿ , ಹುಬ್ಬಳ್ಳಿಯವರಿಗಾಗಲಿ ಅರ್ಥವಾಗುವುದೇ ಇಲ್ಲ. ಮೈಸೂರಿನವರಿಗೆ ಹುಬ್ಬಳ್ಳಿಯ ಕನ್ನಡ ಸಂಸ್ಕೃತಕ್ಕಿಂತ ಹತ್ತಿರವಿದೆ. ಹಾಗಾಗಿ ’ಕಾಮನ್’ ಆಗಿರುವ ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡದ ಒಳನುಡಿಗಳಿಗೆ ಒಗ್ಗಿಸುವುದೇ ನಮಗಿರುವ ದಾರಿ. ಅದಕ್ಕೆ ಹೆಚ್ಚು ಹೆಚ್ಚು ಕನ್ನಡದ ಒಳನುಡಿಗಳ ಸಂಶೋಧನೆ ಮತ್ತು ಓದು ನಡೆಯಬೇಕಿದೆ. ಈ ಸಂಶೋಧನೆಗಳಿಂದ ಕಲೆ ಹಾಕಿದ ಅರಿವನ್ನು ಮಕ್ಕಳ ಕಲಿಸುವಾಗ ಬಳಸಿಕೊಳ್ಳಬಹುದು. ಇದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಮಾತಿನಲ್ಲಾಗುವ ಬದಲಾವಣೆಗೆ ಯಾರ ಹಿಡಿತವೂ ಇಲ್ಲ. ಆದರೆ ಬರಹದಲ್ಲಾಗುವ ಬದಲಾವಣೆಗೆ ಹಿಡಿತವಿದ್ದೇ ಇರುತ್ತದೆ. ಈಗ ಬಳಸುತ್ತಿರುವ ಬರಹಕ್ಕೂ ಒಂದು ಕಾಲಗಟ್ಟದಲ್ಲಿ ’ಲಿಪಿ’ಯನ್ನು ಯಾರೊ ಒಬ್ಬರು ಇಲ್ಲವೆ ಒಂದು ಚಿಕ್ಕ ಗುಂಪೇ ನಿರ್ದರಿಸಿದೆ.