ಗುರುವಾರ, ನವೆಂಬರ್ 15, 2018

ಸರಿತಪ್ಪರಿಮೆ

ನಮ್ಮ ಸುತ್ತ ಆಗುತ್ತಿರುವ ಆಗುಹಗಳು, ವಾದಗಳು, ವಿವಾದಗಳು ಮತ್ತು ಸರಿ/ತಪ್ಪುಗಳ ಬಗ್ಗೆ ಮಂದಿಯ ಮಾತುಕತೆಗಳನ್ನು ನೋಡಿದರೆ ನನಗೆ ಹೀಗನ್ನಿಸುತ್ತಿದೆ:-

ಎಲ್ಲ ಕೂಡಣಗಳಲ್ಲೂ/ಬುಡಕಟ್ಟುಗಳಲ್ಲೂ ತನ್ನಿಂತಾನೆ ಅರಿವಿಲ್ಲದೆಯೆ ಸರಿತಪ್ಪರಿಮೆ (ಮೊರಾಲಿಟಿ) ಬೆಳೆದು ಬಂದಿರುತ್ತದೆ. ಅಂದರೆ ಮನುಶ್ಯ ಬೇರೆ ಬೇರೆ ಸಂದರ್ಬಗಳಿಗೆ ಒಡ್ಡಿಕೊಂಡಾಗ ಬೇರೆ ಬೇರೆ ತೆರನಾದ ಕಲಿಕೆಗಳು ಅವಳಿಗೆ/ಅವನಿಗೆ ಆಗಿರುತ್ತದೆ. ಈ ಎಲ್ಲ ಕಲಿಕೆಯಿಂದ ಸರಿತಪ್ಪರಿಮೆ ತನ್ನನ್ನು ತಿದ್ದಿಕೊಳ್ಳುತ್ತಾ ಬೆಳೆದು ಬಂದಿದೆ.

ಆದರೆ ೨೦ನೇ ನೂರೇಡಿನಲ್ಲಿ ಪ್ರಪಂಚದ ಮಟ್ಟದಲ್ಲಿ ಹಲವು ದೊಡ್ಡ ದೊಡ್ಡ ಕಾದಾಟಗಳಾಗಿ ತುಂಬ ಸಾವು ನೋವು ಉಂಟಾದವು. ಹಿಂದೆಂದು ಕಂಡರಿಯದ ಅಂಡಲೆಯನ್ನು (ಹಿಂಸೆಯನ್ನು) ಎಸಗಲಾಯಿತು. ಈ ಪಾಡಿನಿಂದ ಹೊರಬರಲು ಹಲವು ಚಿಂತಕರು ಪ್ರಪಂಚದ ಮಟ್ಟದಲ್ಲಿ (ಎಂದೂ ಬದಲಾಗದ) ಸರಿತಪ್ಪರಿಮೆ ಎಂಬುದು ಇದೆಯೇ ಎಂದು ಯೋಚಿಸಲು ತೊಡಗಿದರು.

ಆಗ ಹುಟ್ಟಿಕೊಂಡಿದ್ದೇ ಇಲ್ಲವೆ ಮುನ್ನೆಲೆಗೆ ಬಂದಿದ್ದೆ ಲಿಬರಲ್ ಚಿಂತನೆ. ಅಂದರೆ ವ್ಯಕ್ತಿಯ ಮಟ್ಟದ ಗನತೆ ಮತ್ತು ವ್ಯಕ್ತಿಯ ಮಟ್ಟದ ಸ್ವಾತಂತ್ರ್ಯ ಕ್ಕೆ ಹೆಚ್ಚಿನ ಮನ್ನಣೆ ಕೊಡುವುದು. ಇವುಗಳು ಎಲ್ಲ ಹೊತ್ತಿಗೂ ಸಲ್ಲುವ ಬೆಲೆಗಳು(ಮೌಲ್ಯಗಳು) ಎಂಬುದು ಈ ಚಿಂತನೆಯ ಹುರುಳು. ಈ ಚಿಂತನೆಯ ಗುರಿ ಅಂಡಲೆಯನ್ನು ಇಲ್ಲವಾಗಿಸಸುವುದು. ಇದನ್ನು ಎತ್ತಿಹಿಡಿಯುವ ಏರ್ಪಾಟು ಇದ್ದರೆ ಇನ್ನು ಚೆಂದವೆಂದೂ ಹೆಚ್ಚಿನ ನಾಡುಗಳು ಇಂತಹ ಬೆಲೆಗಳ ಅಡಿಪಾಯ ಹಾಕಿಕೊಂಡು ಸಯ್ಪು ಬರಹವನ್ನು ( ಸಂವಿದಾನ) ಮಾಡಿಕೊಂಡವು. ಆದ್ದರಿಂದ ಇಂತಹ ಒಂದು ಸರಿತಪ್ಪರಿಮೆಯನ್ನು ಲಿಬರಲ್ ಸರಿತಪ್ಪರಿಮೆ/ಸಯ್ಪುಬರಹದ ಸರಿತಪ್ಪರಿಮೆ ಎಂದು ಮುಂದೆ ಬೆಳೆಸಲಾಯಿತು.

ಇಲ್ಲಿ ಗಮನಿಸಬೇಕಾದುದು, ಲಿಬರಲ್ ಸರಿತಪ್ಪರಿಮೆ ಎಂಬುದು ಕ್ರುತಕವಾದುದು. ಅದು ಹುಟ್ಟುವುದಕ್ಕೆ ಮುಂಚೆಯೇ ಕೂಡಣಗಳಲ್ಲಿ 'ಮಂದಿಯ ಸರಿತಪ್ಪರಿಮೆ' ಎಂಬುದು ಬೆಳೆದು ಬಂದಿತ್ತು. ಅಲ್ಲದೆ ಮಂದಿಯ ಸರಿತಪ್ಪರಿಮೆ ಎಂಬುದು ಸಹಜವಾಗಿ ಬೆಳೆದು ಬಂದಿದೆ.

ಇದರಲ್ಲಿ ಕ್ರುತಕ ಎಂದ ಕೂಡಲೆ ಲಿಬರಲ್ ಸರಿತಪ್ಪರಿಮೆಯನ್ನು ಅಲ್ಲಗಳೆಯುವಂತಿಲ್ಲ ಮತ್ತು ಸಹಜ ಎಂದ ಕೂಡಲೆ ಮಂದಿಯ ಸರಿತಪ್ಪರಿಮೆಯನ್ನು ಹೊಗಳಬೇಕಾಗಿಲ್ಲ. ಇವೆರಡಕ್ಕೂ ತಮ್ಮ ತಮ್ಮದೇ ಆದ ಪರಿಚೆಗಳಿವೆ. ತಮ್ಮ ತಮ್ಮ ಹೆಗ್ಗಳಿಕೆ ಮತ್ತು ಮಿತಿಗಳೂ ಇವೆ.

ಆದರೆ ಈಗ ತೊಂದರೆಯಾಗಿರುವುದು ಹೆಚ್ಚಿನೆಡೆಗಳಲ್ಲಿ ಮಂದಿಯ ಸರಿತಪ್ಪರಿಮೆಗೂ ಮತ್ತು ಲಿಬರಲ್ ಸರಿತಪ್ಪರಿಮೆಗೂ ತಿಕ್ಕಾಟ ಶುರುವಾಗಿದೆ. ಎರಡೂ ಸರಿತಪ್ಪರಿಮೆಗಳು 'ತಾನು ಮೇಲು' ಎಂದು ಮೇಲಾಟಕ್ಕೆ ಇಳಿದಂತೆ ಕಂಡುಬರುತ್ತಿದೆ. ಈ ಮೇಲಾಟದಿಂದ ಮಂದಿಯು ಗೊಂದಲಕ್ಕೆ ಒಳಗಾದಂತೆ ಕಂಡುಬರುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ: