ಶನಿವಾರ, ಫೆಬ್ರವರಿ 06, 2016

'ಕಾವ್ಯ'ದ ಬಗೆಗಿನ ವಾದ

ಸಾಹಿತಿಗಳಲ್ಲಿ ಇಲ್ಲವೆ ಸಾಹಿತ್ಯ ವಲಯದಲ್ಲಿ ಈ ಬಗೆಯ ಒಂದು ವಾದವಿದೆ:-
'ಕಾವ್ಯ' ಎಂಬುದು ಸುಲಬದಲ್ಲಿ ದಕ್ಕುವ ಹಾಗೆ ಇರಬಾರದು. ಅದನ್ನು ಅರ್ತ ಮಾಡಿಕೊಳ್ಳುವುದಕ್ಕೆ ಆ ಕಾವ್ಯದ ಓದುಗನು ಹೆಣಗಾಡಬೇಕು. ಆದ್ದರಿಂದ ಸಂಸ್ಕ್ರುತದ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟು ಆ ಕಾವ್ಯವು ಕಶ್ಟವಾಗುತ್ತಾ ಹೋಗುತ್ತದೆ. ಆದ್ದರಿಂದ ಕಾವ್ಯದ 'ಕಾವ್ಯಾತ್ಮಕ' ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.
ಇದಕ್ಕೆ ನನ್ನ ಉತ್ತರ:-
ಈ ವಾದವನ್ನೇ ಮುಂದುವರೆಸಿ ಹೇಳುವುದಾದರೆ, ಬರೀ ಸಂಸ್ಕ್ರುತ ಪದಗಳನ್ನೇ ಬಳಸಿ ಕನ್ನಡದಲ್ಲಿ ಕಾವ್ಯವನ್ನು ಕಟ್ಟಿದರೆ ಅದನ್ನು ಅರ್ತ ಮಾಡಿಕೊಳ್ಳಲು ಕನ್ನಡಿಗರಿಗೆ ಆಗುವುದೇ ಇಲ್ಲ. ಆದ್ದರಿಂದ ಯಾವ ಕಾವ್ಯವು ಕನ್ನಡಿಗರಿಗೆ ತಿಳಿಯುವುದಿಲ್ಲವೊ/ಮುಟ್ಟುವುದಿಲ್ಲವೊ ಅದೇ 'ಕಾವ್ಯ' ಅನಿಸಿಕೊಳ್ಳುತ್ತದೆ. ಹಾಗಾಗಿ ಮೇಲಿನ ವಾದದಲ್ಲಿರುವ ವಿಪರ್ಯಾಸವನ್ನು ನಾವು ಗಮನಿಸಬಹುದು.
ಸಮಾದಾನವಾಗಿ ಹೇಳುವುದಾದರೆ, ಹವ್ದು - ಸಾಹಿತಿಗಳ ಮೇಲಿನ ವಾದದಲ್ಲಿ ಕೊಂಚ ಮಟ್ಟಿಗೆ ಹುರುಳಿದೆ. ಅಂದರೆ ಕಾವ್ಯ ಎನ್ನುವುದು ನಮ್ಮನ್ನು ಕಾಡಬೇಕು. ಅದರಲ್ಲೇನೊ ಒಂದು ವಿಶಯವು ಗುಟ್ಟಾಗಿರಬೇಕು. ಅದು ಕಶ್ಟವಾಗಿದ್ದಶ್ಟು ನಮಗೆ ಸವಾಲನ್ನು ಒಡ್ಡುತ್ತದೆ. ಆದರೆ ಇಂತಹವು ಕಾವ್ಯದ ಒಂದು ಬಗೆಯಶ್ಟೇ. ಇಂತಹ ಬಗೆಯೊಂದೇ 'ಕಾವ್ಯ'ವಲ್ಲ ಎಂಬುದನ್ನು ಗಮನಿಸಬಹುದು.
ಅಲ್ಲದೆ, ಈ ಬಗೆಯ ಕಾವ್ಯಕ್ಕೆ ಸಂಸ್ಕ್ರುತ ಪದಗಳ ಮೊರೆ ಹೋಗಬೇಕೆನ್ನುವುದು ಅಶ್ಟು ಸರಿಯಲ್ಲ. ಅದನ್ನು ನಾವು ಕನ್ನಡದ ಪದಗಳನ್ನೇ ಹೊಸ ಬಗೆಯಲ್ಲಿ ದುಡಿಸಿಕೊಳ್ಳುವ ಚಳಕಗಳನ್ನು ಕಂಡುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬಹುದು.
ಕೆಲವು ಸಾಹಿತಿಗಳು ಹೇಳುವಂತೆ ಸಿನಿಮಾ ಹಾಡುಗಳಿಗೆ ಅಂತಹ 'ಕಾವ್ಯಾತ್ಮಕ' ಗುಣವಿರುವುದಿಲ್ಲ. ಹವ್ದು -ಅದು ಅಲ್ಲಿ ಬೇಕಾಗಿಲ್ಲ, ಯಾಕಂದರೆ ಅದಕ್ಕೆ 'ಸಿನಿಮಾ'ದ ಬೆಂಬಲವಿದೆ. ಅದು ಆ ಹೊತ್ತಿಗೆ ನೋಡುಗನನ್ನು ತಣಿಸಿದರೆ ಸಾಕು.
ಕಾವ್ಯದ ಎಲ್ಲ ಬಗೆಗಳೂ/ರೂಪಗಳೂ ನಮಗೆ ಬೇಕು.

ಗುರುವಾರ, ಫೆಬ್ರವರಿ 04, 2016

ನಲ್ಗೊಳದ ಮೊಗದೊಳ್...

ನಲ್ಗೊಳದ ಮೊಗದೊಳ್
ನಸುಗೆಂಪಿನ ನನೆಹಲ್ಮರೆಯ
ನುಣ್ಣಿಂಪಿನ ಬಂಡನು ನೆನೆ
ನೆನೆದು ಬಗೆ ಸೊಂಪಾಗಿರಲ್

ಕೊಳಮೊಗದ ಚೆಲುವನೀರಲಿ
ಅಲೆನಗುವು ಮೆಲ್ಲಗೇಳುತಿರಲ್
ಒಲುಮೆ ಹೆರೆಯನು ಮಾರ‍್ವೊಳೆದು
ಬಳುಕುವನು ಸುಂಯ್ಯೆಲರ್ ಬೀಸುತಿರಲ್