ಶನಿವಾರ, ಮಾರ್ಚ್ 24, 2018

ಮಾರ್ಗ-ದೇಸಿ

ನಾನು ತುಂಬ ಮೆಚ್ಚಿಕೊಳ್ಳುವ ಚಿಂತಕರಲ್ಲಿ ಡಿ.ಆರ್.ನಾಗರಾಜ್ ಅವರೂ ಒಬ್ಬರು. ಆದರೆ ಅವರ ಸಂಸ್ಕ್ರುತ ತುಂಬಿದ ಮಾತುಗಳು ಇಲ್ಲವೆ ಬರಹದ ಬಗ್ಗೆ ನನ್ನ ಒಪ್ಪಿಗೆಯಿಲ್ಲ.
ಮಾರ್ಗ-ದೇಸಿ ಎಂಬ ನಲ್ಬರಹದ ಕುರಿಪುಗಳ ಬಗ್ಗೆ ಮಾತಾಡುತ್ತಾ ಆಂಡಯ್ಯನ ಬಗ್ಗೆ ಮಾತು ಬಂದಾಗ ಅವನ ಮಾದರಿಯನ್ನು 'ಶುದ್ದ ದೇಸಿ' ಎಂದೂ ಮತ್ತು ಪಂಪನದ್ದು 'ಅದಿಕ್ರುತ ದೇಸಿ' ಎಂದು ಕರೆಯುತ್ತಾರೆ. ಪಂಪನ ಬಗ್ಗೆ ಅವರು ಹೇಳಿರುವುದು ನನಗೆ ಸರಿಯೆನಿಸುತ್ತದೆ. ಆದರೆ ಆಂಡಯ್ಯನ ಬಗ್ಗೆ ಅಶ್ಟು ಸರಿಯೆನಿಸಲಿಲ್ಲ. ಯಾಕಂದರೆ 'ಶುದ್ದ ದೇಸಿ' ಎಂದರೆ ನಾನು ಬಾಯ್ತನ ಮತ್ತು ಬಾಯ್ತನದಿಂದ ಹೊರಬಂದ ಮಾಳ್ಕೆಗಳು (ಎತ್ತುಗೆಗೆ ಮಲೆ ಮಾದಪ್ಪನ ಹಾಡು, ಮಂಟೇಸ್ವಾಮಿ ಹಾಡು) ಎಂದು ನಾನು ಅರಿತುಕೊಂಡಿದ್ದೇನೆ. ಅಲ್ಲದೆ ಅವನು ಬರೀ ಅಣ್ಣೆಗನ್ನಡದ ಪದಗಳನ್ನು ಬಳಸಿಲ್ಲ ಬದಲಾಗಿ 'ತದ್ಬವ'ಗಳನ್ನೂ ಬಳಸಿದ್ದಾನೆ. ತದ್ಬವ ಅಂದಾಗ ಅದಕ್ಕೊಂದು ತತ್ಸಮವೂ ಇರಬೇಕಲ್ಲವೆ? ಅಂದ ಮೇಲೆ ಆ ತತ್ಸಮವು 'ಮಾರ್ಗ' ವನ್ನು ಪ್ರತಿನಿದಿಸುತ್ತದೆಯಲ್ಲವೆ? ಅಲ್ಲದೆ ಚಂದಸ್ಸು ಮತ್ತಿನ್ನಿತರ ನಲ್ಬರಹದ ಇಟ್ಟಳಗಳಲ್ಲಿ ಪಂಪನಿಗೂ ಆಂಡಯ್ಯನಿಗೂ ಅಂತಹ ಬೇರ್ಮೆಗಳಿಲ್ಲ. ಆದ್ದರಿಂದ ಆಂಡಯ್ಯನದು ಕೂಡ ಡಿ.ಆರ್.ನಾಗರಾಜ್ ಅವರು ಹೇಳುವ ಮಾರ್ಗ ಮತ್ತು ದೇಸಿ ನಡುವಿನ ದಾರಿಯಾದ 'ಅದಿಕ್ರುತ ದೇಸಿ'ಯ ದಾರಿ ಎಂಬುದು ನನ್ನ ನಿಲುವು. ಆದರೆ, ಒಟ್ಟಂದದಲ್ಲಿ ಆಂಡಯ್ಯನ 'ಅದಿಕ್ರುತ ದೇಸಿ' ಪಂಪನ 'ಅದಿಕ್ರುತ ದೇಸಿ'ಗಿಂತ ಕನ್ನಡದ ಮಾತಿಗೆ ಹೆಚ್ಚು ಹತ್ತಿರ.

ಕಾಮೆಂಟ್‌ಗಳಿಲ್ಲ: