ಶನಿವಾರ, ಏಪ್ರಿಲ್ 30, 2016

’ರಾಶ್ಟ್ರೀಯತೆ’ಯ ಬಗೆಗಿನ ಚರ‍್ಚೆಗಳು - ಒಂದು ಸೀಳುನೋಟ

ಇತ್ತೀಚೆಗೆ ಕೆಲವು ಚಿಂತಕರು ’ರಾಶ್ಟ್ರೀಯತೆ’ ಎಂಬುದನ್ನು ಈ ನೆಲದ ಬೇರ‍್ಮೆ(Diversity)ಗಳಲ್ಲಿ ಹುಡುಕಲು ನೋಡುತ್ತಿದ್ದಾರೆ. ಹಾಗೆ ಮಾಡುವಾಗ ಇಂಡಿಯಾದ ನೆಲದಲ್ಲಿರುವ ಹಲವು ತೆರನಾದ ಬೇರ‍್ಮೆಗಳನ್ನು ಅವರು ಬರಹಕ್ಕಿಳಿಸುತ್ತಾ ಹೋಗುತ್ತಾರೆ. ಹೀಗೆ ಬೇರ‍್ಮೆಗಳನ್ನು ಬರಹಕ್ಕೆ ಇಳಿಸುವುದರಿಂದ ಅವುಗಳನ್ನು ಗುರುತಿಸಿದ ಹಾಗೆ ಆಗುತ್ತದೆಯೇ ಹೊರತು ’ರಾಶ್ಟ್ರೀಯತೆ’ಯನ್ನು ವಿವರಿಸಲಾಗುವುದಿಲ್ಲ. ಆದ್ದರಿಂದ ಬೇರ‍್ಮೆಗಳ ಮೂಲಕ ’ರಾಶ್ಟ್ರೀಯತೆ’ಯನ್ನು ಕಲ್ಪಿಸಿಕೊಳ್ಳುವುದು ಮಂದಿಗೆ ತೊಡಕು ತೊಡಕಾಗಿದೆ. ಅಲ್ಲದೆ ’ದೇಶ’ ಮತ್ತು ’ರಾಶ್ಟ್ರ’ ಎಂಬ ಪದಗಳನ್ನು ಒಂದರ ಬದಲು ಇನ್ನೊಂದನ್ನು ಸಲೀಸಾಗಿ ಬಳಸುವುದರಿಂದ ಚಿಂತನೆಗಳಲ್ಲಿ ಗೊಂದಲಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ರಾಶ್ಟ್ರೀಯತೆಯನ್ನು ಸರಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ.

ಮೊದಲನೆಯದಾಗಿ, ’ದೇಶ’ ಎಂಬುದನ್ನು ’country’ ಎಂಬುದಕ್ಕೂ, ’ರಾಶ್ಟ್ರ’ ಎಂಬುದನ್ನು ’Nation’ ಎಂಬುದಕ್ಕೂ ಬಳಸುವುದು ಸರಿ. ಅಲ್ಲದೆ ’ದೇಶ’ ಮತ್ತು ’ರಾಶ್ಟ್ರ’ ಎಂಬೆರಡು ಪದಗಳಲ್ಲಿರುವ ಬೇರೆತನವನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ದೇಶ ಎಂಬುದು ಆ ’ನೆಲ’ವನ್ನಶ್ಟೆ ಸೂಚಿಸುತ್ತದೆ ಆದರೆ ’ರಾಶ್ಟ್ರ’ ಅಂದರೆ ’ನೇಶನ್’ ಎಂಬುದು ಸೂಚಿಸುವುದು ನೆಲವನ್ನಲ್ಲ. ಅದರ ಗುರಿಗಳು ಬೇರೆಯೇ ಆಗಿವೆ.

ಎರಡೆನೆಯದಾಗಿ, ನೇಶನ್ ಎಂಬುದಕ್ಕೆ ಕನ್ನಡವೂ ಸೇರಿದಂತೆ ಇಂಡಿಯಾದ ಇತರೆ ನುಡಿಗಳಲ್ಲಿ ಸರಿಯಾದ ಪದವೇ ಇಲ್ಲ. ಅಂದರೆ ಈ ತಿಳುವಳಿಕೆ ಇಂಡಿಯ ದೇಶದಲ್ಲಿ/ನೆಲದಲ್ಲಿ ಹುಟ್ಟಿದ್ದಲ್ಲ; ಇದು ಹುಟ್ಟಿದ್ದು ಯೂರೋಪಿನ ನೆಲದಲ್ಲಿ. ಈ ತಿಳುವಳಿಕೆಯನ್ನು ಎರವಲು ಪಡೆದುಕೊಂಡು ಸಂಸ್ಕ್ರುತದ ’ರಾಶ್ಟ್ರ’ ಎಂಬ ಪದವನ್ನು ’ನೇಶನ್’ ಎಂಬುದಕ್ಕೆ ಸಾಟಿಯಾಗಿ ಬಳಸುವ ಪರಿಪಾಟ ಬೆಳೆದು ಬಂದಿದೆ. ಯೂರೋಪಿನಲ್ಲಿ ಹುಟ್ಟಿ ಬೆಳೆದ ಈ ನೇಶನ್ ಎಂಬುದನ್ನು ಒಂದು ನೆಮ್ಮು(religion), ಒಂದು ಜಾತಿ, ಒಂದು ನಡವಳಿ, ಒಂದು ಹಳಮೆ, ಒಂದು ನುಡಿಯನ್ನು ನೆಚ್ಚಿಕೊಂಡು ವಿವರಿಸಲು ಆಗುವುದಿಲ್ಲ. ಹಾಗೆ ವಿವರಿಸಲು ಹೋದರೆ ಇವತ್ತಿನ ಇಂಡಿಯ ಸೇರಿದಂತೆ ಹಲವು ’ನೇಶನ್’ಗಳ ಏರ್ಪಾಟುಗಳನ್ನು ಹೇಗೆ ವಿವರಿಸುತ್ತೀರಿ?
ಆದ್ದರಿಂದ ನೇಶನ್ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ನಾವು ರಬೀಂದ್ರನಾತ್ ಟಾಕೂರ್ ಅವರ ಚಿಂತನೆಗಳ ಮೊರೆ ಹೋಗಬೇಕಾಗುತ್ತದೆ. ಅವರು ತಮ್ಮ ’ನ್ಯಾಶನಾಲಿಸಮ್’[Nationalism - Rabindranath Tagore, 1917] ಎಂಬ ಹೊತ್ತಗೆಯಲ್ಲಿ ಹೀಗೆ ಹೇಳಿದ್ದಾರೆ - ’When this organization of politics and commerce, whose other name is Nation’ . ಇದರಲ್ಲಿ ನಮಗೆ ನೇಶನ್ ಎಂಬುದರ ಸರಿಯಾದ ಹುರುಳು ಸಿಗುತ್ತದೆ. ಅದೇನೆಂದರೆ ಆಳ್ಮೆ(ರಾಜಕೀಯ) ಮತ್ತು ಕೊಳುಕೊಡೆ(ವಾಣಿಜ್ಯ)ಗಳ ಒಂದು ಕೂಟಗೆಯೇ ನೇಶನ್ ಎಂಬುದನ್ನು ಇಲ್ಲಿ ಮನಗಾಣಬಹುದು. [ಇಲ್ಲಿ ’ಕೊಳುಕೊಡೆ’ ಎಂಬ ಪದವನ್ನು ಹಣಕಾಸಿನಿಂದ ನಡೆಯುವ ಸರಕುಗಳ ’ಮಾರಾಟ ಮತ್ತು ಅದರ ಏರ‍್ಪಾಟು’ ಎಂದು ತಿಳಿದುಕೊಳ್ಳಬೇಕು]

ಮೂರನೆಯದಾಗಿ, ನೇಶನ್ ಎಂಬುದರ ಗುರಿ ಈ ಎರಡು ಎಂಜಿನ್ಗಳಾದ ಅಂದರೆ ಆಳ್ಮೆ ಮತ್ತು ಕೊಳುಕೊಡೆಗಳನ್ನು ಹೇಗೆ ಚೆನ್ನಾಗಿ ನಡೆಸುವುದು ಎಂಬುದೇ ಆಗಿರುತ್ತದೆ. ಇದರಲ್ಲಿ ನೇರವಾಗಿ ಮಾನವೀಯ ಅಂಶಗಳಾದ ನುಡಿ, ನಡವಳಿ ಇವುಗಳಿಗೆ ಬೆಲೆಯಿಲ್ಲ. ಇಂಡಿಯಾದಲ್ಲಿ ಈ ಎರಡು ಎಂಜಿನ್ಗಳನ್ನು ದೆಹಲಿಯ ಆಳ್ವಿಕೆಯು ತನ್ನ ಅಂಕೆಯಲ್ಲಿಟ್ಟುಕೊಂಡಿದೆ. ರಾಜ್ಯಗಳ ಆಳ್ವಿಕೆಗಳು ಅವುಗಳನ್ನು ಪಾಲನೆ ಮಾಡುವುದಕ್ಕಶ್ಟೆ ಇರುವಂತೆ ಇವೆ. ಆಳ್ಮೆ ಮತ್ತು ಹಣಕಾಸಿಗೆ ನಂಟಿರುವ ಯಾವುದೇ ಕಟ್ಟಲೆಗಳನ್ನು ಕಟ್ಟುವುದರಲ್ಲಿ ಮತ್ತು ಅವುಗಳನ್ನು ರೂಪಿಸುವಲ್ಲಿ ಹೆಚ್ಚಾಗಿ ದೆಹಲಿ (ನೇಶನ್ ಎಂಬುದರ ಕೇಂದ್ರ) ಆಳ್ವಿಕೆಯ ಕಯ್ವಾಡವಿದೆ. ಸಂವಿದಾನದ ಪ್ರಕಾರವಾಗಿ ಇಂಡಿಯ ಎಂಬುದನ್ನು ಒಂದು ಒಪ್ಪುಕೂಟವೆಂದು ಹೇಳಿದ್ದರೂ ಒಪ್ಪುಕೂಟದ ಗುಣಗಳನ್ನು ಅದು ಹೊಂದಿಲ್ಲ.ಅದರ ಬದಲು ಹೆಚ್ಚಾಗಿ ’ನೇಶನ್’ ಎಂಬುದರ ಗುಣಗಳನ್ನು ಹೊಂದಿದೆ. ಅಂದರೆ ಆಳ್ಮೆ ಮತ್ತು ಕೊಳುಕೊಡೆಗಳನ್ನು ಒಂದು ಕೇಂದ್ರ ತಾಣದಿಂದ ನಿಯಂತ್ರಿಸಲಾಗುತ್ತಿದೆ.

ಯುವ ಚಿಂತಕರಾದ ಕಿರಣ್ ಬಾಟ್ನಿಯವರು ತಮ್ಮ ’The Pyramid of Corruption’ [Kiran Batni, 2014] ಎಂಬ ಹೊತ್ತಗೆಯಲ್ಲಿ ಬ್ರಿಟಿಶರು ಬರುವುದಕ್ಕೆ ಮುಂಚೆ ’ಇಂಡಿಯ’ ಎಂಬ ನೇಶನ್ ಇರಲಿಲ್ಲ. ಬ್ರಿಟಿಶರು ತಮ್ಮ ಗಳಿಕೆಗಾಗಿ ಈ ’ಇಂಡಿಯನ್ ನೇಶನ್’ ಎಂಬುದನ್ನು ಹುಟ್ಟುಹಾಕಿದರು ಎಂದು ಹೇಳುತ್ತಾರೆ. ಈ ನೇಶನ್ ಎಂಬುದು ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುವ ಹಲವು ಕಾಯ್ದೆ-ಕಾನೂನುಗಳನ್ನು ಅವರು ಮಾಡಿದರು. ಅಲ್ಲದೆ ಈ ನೇಶನ್ ಚೆನ್ನಾಗಿ ಕೆಲಸ ಮಾಡಿದಶ್ಟು ಹೆಚ್ಚು ಗಳಿಕೆ ಬ್ರಿಟಿಶರಗೆ ಆಗುತ್ತಿತ್ತಲ್ಲದೆ ಈ ನೆಲದ ಸಾಮಾನ್ಯ ಮಂದಿಯ ಏಳಿಗೆಯಲ್ಲ. ಈಗಲೂ ಹಾಗೆಯೇ ಆಗಿದೆ; ಆದರೆ ಬ್ರಿಟಿಶರ ಜಾಗಕ್ಕೆ ದೆಹಲಿ ಆಳ್ವಿಕೆ ನಡೆಸುತ್ತಿರುವವರು ಬಂದು ಕೂತಿದ್ದಾರೆ. ದೆಹಲಿ ಆಳ್ವಿಕೆಯಲ್ಲಿ ಯಾರ ಕಯ್ ಮೇಲಾಗಿದಿಯೋ ಅವರಿಗೆ ಈ ನೇಶನ್ನಿನಿಂದ ಬಳಕೆ ಮತ್ತು ಗಳಿಕೆಗಳೆರಡೂ ಇವೆ. ಹಾಗೆ ನೋಡಿದರೆ ದೆಹಲಿಯ ಆಳ್ವಿಕೆಯಲ್ಲಿ ಕನ್ನಡಿಗರ ಪಾಲು ತುಂಬಾ ಕಡಿಮೆ.

ಆದರೆ ಈ ನೇಶನ್ ಎಂಬುದನ್ನು ಇಂಡಿಯದಂತಹ ಹಲತನವಿರುವ, ಬೇರ‍್ಮೆಯಿರುವ ನೆಲದಲ್ಲಿ ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಅದರ ಸ್ವರೂಪವೂ ಹೇಗಿರಬೇಕು ಎಂಬುದರ ಬಗ್ಗೆ ಚರ‍್ಚೆಗಳು ನಡೆಯಬೇಕಾಗಿದೆ. ಯೂರೋಪಿನಲ್ಲಿ ನುಡಿಯನ್ನು ಮುನ್ನೆಲೆಯಲ್ಲಿರಿಸಿ ಕಟ್ಟಿರುವ ನೇಶನ್ಗಳು ನಮ್ಮ ಕಣ್ಣಿಗೆ ರಾಚುತ್ತವೆ. ಅವುಗಳಿಂದ ನಾವು ಕಲಿತುಕೊಳ್ಳಬೇಕಾದುದು ಬಹಳಶ್ಟಿದೆ. ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತ ಮುಂದೆ ಮುಂದೆ ನೋಡುತ್ತಾ ನಮ್ಮ ನಾಳೆಗಳನ್ನು ಕಟ್ಟಿಕೊಳ್ಳಬೇಕಾಗಿದೆ.