ಮಂಗಳವಾರ, ಡಿಸೆಂಬರ್ 15, 2009

ಮನೆತಿಂಡಿ -ಕನ್ನಡಿಗರ ತಿಂಡಿ



ಬೆಂಗಳೂರಿನಲ್ಲಿ ದೇವೆಗೌಡ ಪೆಟ್ರೋಲ್ ಬಂಕ್ ಮತ್ತು ಕಾಮಾಕ್ಯ ಸಿನಿಮನೆಗಳ ನಡುವೆ ಈ ’ಮನೆತಿಂಡಿ’ ಹೋಟೆಲು ತಲೆಯೆತ್ತಿದೆ.
ಅಪ್ಪಟ ಕನ್ನಡದ/ಕನ್ನಡಿಗರ ತಿನಿಸುಗಳಾದ ಮನೆ ಉಪ್ಪಿಟ್ಟೂ, ಬೆಣ್ಣೆ ತಟ್ಟೆ ಇಡ್ಲಿ, ಗೋಳಿ ಬಜ್ಜಿ, ಮದ್ದೂರ್ ವಡೆ...ಇನ್ನು ಎಶ್ಟೋಂದು ತಿನಿಸುಗಳು ಸಿಗುತ್ತವೆ. ಹೆಸರಹಲಗೆಯನ್ನ ದೊಡ್ಡದಲ್ಲಿ ಬರೀ ’ಕನ್ನಡ’ದಲ್ಲೆ ಹಾಕಿಸಿ(ಪೋಟೋ ಗಮನಿಸಿ) ಮತ್ತು ’ರುಬ್ಬೋಕಲ್ಲ’ನ್ನೇ ಲೋಗೊ ಮಾಡಿಕೊಂಡು ಅಪ್ಪಟ ಕನ್ನಡ ಸಂಸ್ಕ್ರುತಿಯನ್ನ ಈ ಹೋಟೆಲು ಎತ್ತಿ ಹಿಡಿದಿದೆ ಎಂದು ಹೇಳಿದರೆ ತಪ್ಪಲ್ಲ. ನನಗಂತೂ ತುಂಬ ನಲಿವಾಯಿತು.

ಮನೆತಿಂಡಿ ಸವಿದು ನಾಲಿಗೆಗೆ ಬೆಚ್ಚಗೆ ಮಾಡ್ಕೊಳ್ಳಿ. :)

ಸೋಮವಾರ, ನವೆಂಬರ್ 30, 2009

ಬರತೇಶನ ವಚನಗಳು

ಅರಿವು
-----
ಅರಿವೇ ಗುರುವೆಂದರು ಶರಣರು
ತನ್ನರಿವಿಲ್ಲದೆ ನಿನ್ನರಿವಿಲ್ಲದೆ
ಬಾಳಹೊಳೆ ಹರಿಯಬಲ್ಲುದೇ ಹೇಳು ಬರತೇಶ


ಅರಿವೊಳಗೆ ಸುಳಿವನ್ನಿತ್ತು
ಪರಿವೇ ಇಲ್ಲದೆ ಪರದಾಡಿಸಿ
ಮತ್ತದೆ ನಿಲುವುಗಳನ್ನು ಎಡತಾಕಿಸಿ
ಮೊತ್ತ ಸೊನ್ನೆಯಾಯಿತಲ್ಲೊ ಬರತೇಶ

ಉಂಕು
-----
ಉಂಕಿಸಿದೇ ಇರಲಾರೆ
ಅಂಕು-ಡೊಂಕುಗಳು ತಿದ್ದಲಾರೆ
ಉಂಕು,ಡೊಂಕುಗಳ ನಡುವಿನ
ಸೋಂಕಿಗೆ ಸಿಕ್ಕಿಕೊಂಡೆ ಕಾಣಾ ಬರತೇಶ

ಶನಿವಾರ, ನವೆಂಬರ್ 07, 2009

ತೊರೆದು ನೀ...

ತೊರೆದು ನೀ ಹೋಗದಿರು
ಬರಡೆನ್ನ ಒಡಲು ನೀನಿಲ್ಲದೆ
ಬದುಕ ತುದಿ ಕೂಡಲೆ ಮುಟ್ಟುವೆನು
ತದುಕಬೇಡ ಹೀಗೆ ನಿನ್ನ ಎದೆಗೂಡಿಂದ

ಹಲವು ಅಡತಡೆಗಳನ್ನು ದಾಟಿ
ಒಲಿಸಿ ನಿನ್ನ

ಶನಿವಾರ, ಫೆಬ್ರವರಿ 21, 2009

ಇಂದು ತಾಯ್ನುಡಿ ನಾಳು - ೨೧ ಪೆಬ್ರವರಿ ೨೦೦೯


ಇಂದು ಹಲವು ತಾಯಿನುಡಿಗಳು/ಆಡುನುಡಿಗಳು ಕಣ್ಮರೆ ಆಗಿವೆ/ಆಗುತ್ತಿವೆ. ಇದಕ್ಕೆ ಕೆಲವು ಅಂತೆ ಹೇಳುವ 'ದೊಡ್ಡ'(ಶಿಶ್ಟ) ನುಡಿಗಳು ಓಸುಗರವಾಗಿದೆ.
ಯುನೆಸ್ಕೊ ಇದರ ಬಗ್ಗೆ ಒಂದು ಬರಹ ಹೊರತಂದಿದೆ. ಇಲ್ಲಿಂದ ಪಿಡಿಎಪ್ ಅನ್ನು ಇಳಿಸಿ ನಮ್ಮ ನಾಡಿನಲ್ಲಿ ಕಾಣೆಯಾಗುತ್ತಿರುವ ನುಡಿಗಳ ಬಗ್ಗೆ ತಿಳಿದುಕೊಳ್ಳಬಹುದು.



ಅಲ್ಲಿ ಕೊಟ್ಟಿರುವಂತೆ ನಮ್ಮ ಕನ್ನಡನಾಡಿನಲ್ಲಿರುವ ಕೆಲವು ನುಡಿಗಳು ಇವೆ.
೧. ಕುರುಬ
೨. ಇರುಳ
೩. ತೋಡ (ಊಟಿ ಗುಡ್ಡ ಗಾಡಿನ ನುಡಿ)
೪. ಕೋಟ
೫. ತುಳು
೬. ಕೊಡಗು
೭. ಕೊರಗ
೮. ಬಳ್ಳಾರಿ ( ಈ ತೆರ ನುಡಿ ಇದೆ ಎಂದು ತಿಳಿದಿರಲಿಲ್ಲ)
೯. ಬಡಗ (ಊಟಿ ಗುಡ್ಡಗಾಡಿನ ನುಡಿ)

ಇದರಲ್ಲಿ ಯುನೆಸ್ಕೊದವರು ಹೇಳಿರುವಂತೆ ಕೇವಲ ಕೊಲೊನಿಯಲ್ ನುಡಿಗಳಾದ ಇಂಗಳೀಸ್,ಪ್ರೆಂಚ್,ಸ್ಪಾನಿಶ್ ನುಡಿಗಳು ಇತರೆ ನುಡಿಗಳನ್ನು ನುಂಗಿ ಹಾಕಿದೆ ಎಂದು ಹೇಳಲಾಗುವುದಿಲ್ಲ . ಇದಕ್ಕೆ ಹಲವು ಓಸುಗರಗಳು ಇದ್ದಿರಬೇಕು ಎಂದು ಆಸ್ಟ್ರೇಲಿಯಾದ ಒಬ್ಬ ನುಡಿಯರಿಗರು ಹೇಳಿದ್ದಾರೆ. ಇವುಗಳನ್ನು ಹುಡುಕುವುದೆ ಈ ಯುನೆಸ್ಕೊದವರು ಹಾಕಿಕೊಂಡಿರುವ ಕೆಲಸಗಳು. ಅವುಗಳಲ್ಲಿ ಕೆಲವು ನುಡಿಗಳು ಹಾಳಾಗುವ ಅಂಚಿನಲ್ಲಿವೆ. ಇನ್ನು ಕೆಲವು ಕೆಡುಕಿನ ಹಾದಿಯಲ್ಲಿವೆ. ಇವುಗಳಲ್ಲಿ ಕೊಡಗು, ತುಳು ಗಳ ಅಶ್ಟು ಹದಗೆಟ್ಟಿಲ್ಲ. ಆದರೆ ಇತರೆ ನುಡಿಗಳು ಮಾಡರನಯ್ಸೇಶನ್ ಹೊಳೆಯಲ್ಲಿ ಕೊಚ್ಚುವೋಗುತ್ತಿವೆ.

ಇವಲ್ಲದೆ ಆಂದ್ರ, ಬಿಹಾರ, ಒರಿಸ್ಸಾದ ಹಲವು ಗುಡ್ಡಗಾಡು ನುಡಿಗಳು ಮತ್ತು ಪಾಕಿಸ್ತಾನದಲ್ಲಿರುವ ಒಂದೇ ಒಂದು ದ್ರಾವಿಡ ನುಡಿ ಬ್ರಹೂಯಿ ಕೂಡ ಕೆಡುಕಿನ ದಾರಿ ಹಿಡಿದಿವೆ.

ಕೊನೆಯದಾಗಿ, ಯಾವುದೇ ನುಡಿ ಹಲವು ಗುಟ್ಟುಗಳನ್ನು ತನ್ನೊಳಗೆ ಮತ್ತು ಕೆಲವು ನಡಾವಳಿಗೆ, ಪರಿಸರಕ್ಕೆ ಹತ್ತಿರವಾದ ವಿಶಯಗಳನ್ನು ಅಡಗಿಸಿಕೊಂಡಿರುತ್ತವೆ. ಒಂದು ನುಡಿ ಸತ್ತರೆ ಅದರ ಜೊತೆಗಿರುವ ನಡಾವಳಿ, ಗುಟ್ಟುಗಳು, ಮನಕೆದುಕುವ ಹುರುಪಿನ ಸಂಗತಿಗಳು ಸತ್ತಂತೆ.

ಎಲ್ಲ ನುಡಿಗಳು ಬಾಳಿ ಬದುಕಲಿ ಎಂದು ನಂಬಿ ಬಯ್ಸೋಣ.

ಶುಕ್ರವಾರ, ಜನವರಿ 16, 2009

ಬೆಳಕುನೆಳಲಿನಾಟ

ಎಶ್ಟು ತೋಡಿದರೂ
ಸಿಗಲಿಲ್ಲ ಎನೂ
ಅಗೆಯುತ ಮೊಗೆಯುತ
ಅರಿವಿಗೆ ಬರಲಿಲ್ಲ ದಣಿತ
ಹುಡುಕ ಹೊರಟಿತ್ತು ನೆಮ್ಮದಿ
ಇಳಿದಿತ್ತು ಸುಳಿಯಲ್ಲಿ ಕಾಣದಿ
ಎಡೆಬಿಡದ ಬಾಳಹೋರಾಟ
ಸಾಗಲಿ ಬೆಳಕುನೆಳಲಿನಾಟ

ಸೋಮವಾರ, ಜನವರಿ 12, 2009

ಸುಳ್ಳಿನ ಬೇಲಿ

ಸುಳ್ಳಿನ ಬೇಲಿಯ ಮುಳ್ಳು
ಚುಚ್ಚುವುದೆಂದೆಂದೂ ಸುಳ್ಳಿನ
ಬೇಲಿಗಿಂತ ದಿಟದ
ಬಯಲೇ ಲೇಸು ಕೇಳೆನ್ನ ಬರತೇಶ

ಭಾನುವಾರ, ಜನವರಿ 04, 2009


ನಿನ್ನ ಎತ್ತರ ಬಾನಿನತನಕ
ಯಾವ ಕಲೆಗಾರನ ಕಯ್ಚಳಕ
ಸುತ್ತಿರುವ ಹಸಿರು ಪೂರಕ
ಮಯ್ಯೆಲ್ಲೆಲ್ಲಾ ಎನೋ ಪುಳಕ


ಚಿತ್ರ/ಪಾಪೆ :- ಗೋಪಾಲಸ್ವಾಮಿ ಬೆಟ್ಟದ ಗುಡಿಯ ಹತ್ತಿರ ಇರುವ ಬೆಟ್ಟ-ಗುಡ್ಡ-ಹಸಿರು

ನವಿರುನೇಸರ

ಎಳೆಯ ನವಿರುನೇಸರ
ಬಾನ ತುಂಬಿದ ಕೆಂಗದಿರ
ಈ ಚೆಲುವ ನೋಡಿದಿರಾ?
ಚಳಿಯಕೊಳೆಯ ನೀಗುವ
ಇಳೆಯಬೆಳೆಗೆ ಉಸಿರು ಕೊಡುವ
ಬೆಳ್ಳಂಬೆಳಿಗ್ಗೆಯ ನಲಿಸುವ ಎಲ್ಲವ

ಶನಿವಾರ, ಜನವರಿ 03, 2009

ಗಿಡ-ಮರ

ಹೀರಿ ಇಳೆಯ ಸಾರ
ಎದುರಿಸಿ ಬಿಸಿಲು ಬರ
ನೆನ್ನೆಯ ಗಿಡವಾಗಿದೆ ಮರ
ನೆರಳ ನೀಡುತ ನಿರಂತರ
ನಿನ್ನ ಬಾಳು ಸಾಗಿತು ಈ ತೆರ
ಹೆಸರಾಗಲಿ ಎಂದೆಂದಿಗೂ ನಿನ್ನ ಈ ಅಱ


ಅಱ = Ka. aṟa, aṟu virtue, charity, alms, law, dharma, Yama.? Cf. 405 Ta. āṟu. DED 262.

ಗೆಲುವೆಂಬ ಪಲ

ಚುಚ್ಚಿದರೂ ನುಗ್ಗು ನೂರುಸಲ
ಕೆಚ್ಚಿರಲಿ ಬಗ್ಗುಬಡಿಯುವ ಬಲ
ಕಟ್ಟಿಕೊ ತಾಳ್ಮೆ ಎಲ್ಲಸಲ
ಮೆಟ್ಟಿ ನಿಲ್ಲಲು ಸೋಲ
ಕೊಟ್ಟೆ ಕೊಡುವ ಗೆಲುವೆಂಬ ಪಲ

ಕಡಲಾಟ

ನೋಟದಂಚಿನಾಗೆ ಎನೋ ಮಾಟ
ಕಡಲ್ಬಾನುಗಳ ಮುತ್ತಿಕ್ಕುವ ಆಟ
ನಲಿಯುತಿಹ ಅಲೆಗಳು ತಾಳವಾಕಿತು ತಟತಟ
ಓಡುತಿವೆ ಮೋಡಗಳು ಮುಟ್ಟಲು ಇಳೆಬಾನ್ಕೂಟ

ಮುಸ್ಸಂಜೆಯ ಬಳ್ಳಿ

ಮುಸ್ಸಂಜೆ ಹೊತ್ನಲ್ಲಿ
ಅಂದಚೆಂದದ ಹೂಬಳ್ಳಿ
ನಲಿಯುತ ನಿಂತಿತ್ತು ಬಿಂಕ ಚೆಲ್ಲಿ
'ನಲಿಯುವೆ ಏತಕೆ' ಕೇಳಲು ನಾನಲ್ಲಿ
ತಾಳಲಾರೆ ತಂಗಾಳಿಕಚಗುಳಿ
ಎಂದಾಗ ಆ ಬಳ್ಳಿ ನನ್ನಕೆನ್ನೆಯಲ್ಲಿ ಗುಳಿ

ಶುಕ್ರವಾರ, ಜನವರಿ 02, 2009

ಹಳ್ಳಿ-ಹಾಡು

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು
ಹೊಂಟ್ಯಾನ ಎನಗಂಡ ಹೊಲದೆಡೆಗೆ
ಹೊತ್ತು ಮುಳುಗೊ ಮುಂದ ಬಾರಪ್ಪ ಮನಿಗೆ

ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆಕಣಮ್ಮಿ
ಆಳು ಕಾಳು ಕಡ್ದಿನೆಲ್ಲ ಸಮರಿಯಲು
ಹೊತ್ತು ಮುಳುಗುವುದು ಎನ್ನೊಡತಿ

ಹೊತ್ತು ಮುಳುಗಿದ ಮ್ಯಾಲೆ ಗುಂಡಿಗಿ ನಡಗಯ್ತಿ
ನೀನಿಲ್ಲದ ಮನಿ ಹೂವಿಲ್ಲದ ಗಿಡದಂತಿ
ಲಗೂನ ಮನಿಗೆ ಬಂದ್ಸೇರು ನನಗೆ ನಿನ್ನ ಚಿಂತಿ

ಆಡಾಕ ಆಡ್ಮರಿಗಳು, ನೋಡಾಕ ಹೂದೊಟ
ಕೂಡಿ ಮಾತಾಡಾಕ ನೆರೆಹೊರೆಯವರ ಕೂಟ
ಹಂಗ್ಯಾಕ ಹುಲುಬುತಿ ನಾ ಬರಗಂಟ

ಗದ್ದೆಯ ತೆವರಿಯಲ್ಲಿ ನಲಿಯುತ ಬಂದವಳೆ
ಮುದ್ದೆ ಉಪ್ಪೆಸರು ಹೊತ್ತು ತಂದವಳೆ
ಯಾಕೀಟ್ ತಡವಾಯಿತು ನೀ ಹೇಳೆ

ಮನಿಯಾಗ ಮಗು ಅಳಾಕಹತ್ತಿತ್ತು
ಕಟ್ಟಿದ ಕರುವು ಹಗ್ಗವ ಬಿಡಿಸ್ಕೊಂಡಿತ್ತು
ಮಗುವನ್ನ ಮಲಗಿಸಿ, ಕರುವನ್ನ ಕಟ್ಟಾಕಿ
ಬರಾಕ ಹೊತ್ತಾತು, ಈ ಕೊಂಕು ಮಾತ್ಯಾಕ

ಗುರುವಾರ, ಜನವರಿ 01, 2009

ಕಣ್ ಸನ್ನೆಯಲಿ...

ಕಣ್ ಸನ್ನೆಯಲಿ ನೀ ಕೊಂದುಬಿಡುವೆ
ಎಣಿಸಲು ಆಗದು ನಿನ್ನಾ ಒಲುಮೆ
ಬರೆದು ಕೊಡಲೆ ನನ್ನೆನಾ
ಕಟ್ಟ ಬೇಡ ಇದಕೆ ಬೆಲೆಯ

ತೊರೆದು ಹೋದರೆ ನೀ ನನ್ನ
ಮೊರೆತ ಕೇಳುವರ್ ಯಾರೆನ್ನ
ಬರಿದು ಮಾಡಬೇಡ ಬದುಕ
ತೆರೆದು ನೋಡಬೇಡ ಕೆದುಕಿ

ಪಾರು ಮಾಡೆನ್ನ ಈ ತೊಡರಿಂದ
ಸೊರಗುತಿದೆ ಈ ನನ್ನೊಡಲು
ಎಳಸುತಿದೆ ನಿನ್ನ ಆ ನಗೆಯು
ಬಳಸಬಿಡು ನನ್ನ ಎದೆಯನ್ನು