ಶನಿವಾರ, ಮಾರ್ಚ್ 24, 2018

ಮಾತು, ಬರಹ, ಕೊಳುಕೊಡೆ ಮತ್ತು ಆಳ್ಮೆ

ಬರಹ ಬರುವ ಮೊದಲು ನಮ್ಮಲ್ಲಿ ಎಲ್ಲ ಕೊಳುಕೊಡೆಗಳು(ಕಾಮರ್ಸ್) ಮಾತುಗಳ ಮೂಲಕವೇ ನಡೆಯುತ್ತಿತ್ತು. ಮಾತಿಗೆ ಅಶ್ಟು ಬೆಲೆ ಇತ್ತು. ಮಂದಿ 'ಮಾತು ಕೊಡು'ತ್ತಿದ್ದರು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೆಂದರೆ ಅದೊಂದು ಸಯ್ಪಿನ ಕೆಲಸವಾಗಿತ್ತು.
ಆದರೆ ಬರಹ ಬಂದ ಮೇಲೆ ಇಲ್ಲವೆ ಬರಹವನ್ನು ಹೆಚ್ಚು ಹೆಚ್ಚು ಬಳಸಲು ಶುರು ಮಾಡಿದ ಮೆಲೆ ಮಾತಿಗಿದ್ದ ಬೆಲೆ ಬರಹಕ್ಕೆ ಬಂತು. ಮಾತು ತನ್ನ ಬೆಲೆ ಕಳೆದುಕೊಂಡಿತು. ಆದರೆ ಯಾವುದೇ ನುಡಿಗೆ ಮಾತೇ ಮೊದಲು, ಮಾತಿಲ್ಲದ ಬರಹವಿಲ್ಲ. ಮಾತು ಕಿವಿಗೆ ಸಂಬಂದಪಟ್ಟಿದ್ದಾದರೆ ಬರಹ ಕಣ್ಣಿಗೆ ಸಂಬಂದಪಟ್ಟಿದ್ದು. ಮಾತು ತಾನಾಗಿಯೇ ಬರುವಂತ್ತದ್ದು; ಬರಹವನ್ನು ಕಲಿಯಬೇಕಾಗುತ್ತದೆ. ಆದರೂ ಬರಹಕ್ಕೇ ಯಾಕೆ ಇಶ್ಟೊಂದು ಬೆಲೆ?
೧. ಇತ್ತೀಚೆಗೆ ಹೆಚ್ಚು ಹೆಚ್ಚು ಕೊಳುಕೊಡೆಗಳು ನಡೆಯುತ್ತಿದೆಯಲ್ಲದೆ ಹಿಂದೆಂದಿಗಿಂತಲೂ ಬಿರುಸಾಗಿ ನಡೆಯುತ್ತಿದೆ. ಈ ಕೊಳುಕೊಡೆಗಳು ನಡೆಯಲು ಯಾವುದೇ ತೊಂದರೆ ಇರದಂತೆ ನೋಡಿಕೊಳ್ಳಲು ಅಚ್ಚುಕಟ್ಟಾದ ಏರ್ಪಾಟುಗಳು ಬೇಕಾಗುತ್ತವೆ. ಏರ್ಪಾಟುಗಳ ಅಡಿಮಟ್ಟದಲ್ಲಿ ಬರಹವೇ ಇರುತ್ತದೆ. ಅಂದರೆ ಕೊಡುಕೊಳೆಗಳ ಸರಿಯಾಗಿ ನಡೆಯಲು ಬೇಕಾದ ಕಟ್ಟಲೆಗಳನ್ನು ಬರೆದಿಡಬೇಕಾಗುತ್ತದೆ. ಅಲ್ಲದೆ ಕೊಳುಕೊಡೆಗಳು ಆಗಿರುವುದಕ್ಕೆ ನಿಂದರಿಕೆಯಾಗಿ ಅದನ್ನು ಬರಹಕ್ಕೆ ಇಳಿಸಬೇಕಾಗುತ್ತದೆ.
೨. ಒಮ್ಮೆ ಮೂಡಿಸಿದ ಬರಹ ಸಾವಿರಾರು/ನೂರಾರು ವರುಶಗಳ ವರೆಗೆ ಅಳಿಯದೇ ಇರುತ್ತದೆ. ಬರಹವನ್ನು ಯಾವಾಗ ಬೇಕಾದರೂ ತೆಗೆದು ಓದಬಹುದು. ಆದರೆ ಮಾತು ಬಾಯಲ್ಲಿ ಮೂಡುತ್ತಿರುವಂತೆಯೇ ಮಾಯವಾಗಿರುತ್ತದೆ.
೩. ಮಂದಿಯಾಳ್ವಿಕೆಯಲ್ಲಿ ಕೊಳುಕೊಡೆಯನ್ನು ಅಂಕೆಯಲ್ಲಿಡಲು ಇಲ್ಲವೆ ಸರಿಯಾಗಿ ನಡೆಸಲು ಆಳ್ಮೆಯ ಏರ್ಪಾಟನ್ನು ಕಟ್ಟಿಕೊಳ್ಳಲಾಗಿದೆ. ಇಲ್ಲೂ, ಆಳ್ಮೆಯ ಏರ್ಪಾಟುಗಳು ಬರಹದ ಮೇಲೆ ನಿಂತಿವೆ. ಅಂದರೆ ಯಾವುದೇ ನಾಡಿನ ಸಯ್ಪುಬರಹ( ರಿಟನ್ ಕಾನ್ಸ್ಟಿಟೂಶನ್) ಮತ್ತು ಕಾನೂನುಗಳನ್ನು (ಎತ್ತುಗೆ: ಇಂಡಿಯನ್ ಪೀನಲ್ ಕೋಡ್) ಬರೆದಿಡಲಾಗಿದೆಯೆ ಹೊರತು ಬಾಯಲ್ಲಿ ಇಲ್ಲ.
ಬರಹವಿಲ್ಲದೆ ಈ ಆಳ್ಮೆ ಮತ್ತು ಕೊಳುಕೊಡೆಯ ಏರ್ಪಾಟುಗಳು ಕೆಲಸ ಮಾಡಲು ಸಾದ್ಯವೇ ಇಲ್ಲ. ಮಂದಿಯಾಳ್ವಿಕೆಯಲ್ಲಿ ಆಳ್ಮೆ ಮತ್ತು ಕೊಡುಕೊಳೆಗಳೇ ಇಲ್ಲದೆ ಮಂದಿ ಬದುಕಲು ಸಾದ್ಯವೇ ಇಲ್ಲ ಅನ್ನುವಂತಾಗಿದೆ.
ಹಾಗಾಗಿ, ಬರಹಕ್ಕೆ ಹಿಂದೆಂದಿಗಿಂತಲೂ ಇಲ್ಲದ ಬೆಲೆ ಬಂದಿದೆ.

ಕಾಮೆಂಟ್‌ಗಳಿಲ್ಲ: