ಭಾನುವಾರ, ಡಿಸೆಂಬರ್ 24, 2006

ಅನಕೃ ರವರ "ಸಂಧ್ಯಾರಾಗ" ಕಾದಂಬರಿ - ವಿಶ್ಲೇಷಣೆ

ಅನಕೃ ರವರ "ಸಂಧ್ಯಾರಾಗ" ಕಾದಂಬರಿ - ವಿಶ್ಲೇಷಣೆ
------------------------------------------
ಅನಕೃರವರು ಕತೆಯ ವೇಗವನ್ನು ನಿಭಾಯಿಸುವರಲ್ಲಿ ನಿಷ್ಣಾತರು. ಅವರ ಬಹಳ ಕಥೆಗಳು/ಕಾದಂಬರಿಗಳು ಸ್ವಾತಂತ್ರ್ಯಪೂರ್ವ ಜನಜೀವನವನ್ನು ಕಣ್ಣಿಗೆ ಕಟ್ಟುತ್ತವೆ. ಸಂಧ್ಯಾರಾಗದಲ್ಲಿ ಅವರೇ ಹೇಳಿದಂತೆ ಒಬ್ಬ ಪ್ರಾಮಾಣಿಕ ಹಾಗು ಪರಿಪೂರ್ಣ ಸಂಗೀತಗಾರನು ಆತನ ಕಲೆಯ ಸಮಷ್ಠಿಯ ಕಡೆಗೆ ಹೋಗುವ ಹಿನ್ನಲೆಯುಳ್ಳ ಒಂದು ಸಾಮಾಜಿಕ ಕಾದಂಬರಿ. ಹೇಗೆ ಸಂಗೀತಗಾರನು ತನ್ನ ತೃಪ್ತಿಗೆ ಸಂಗೀತವನ್ನು ಆಶ್ರಯಿಸುವನೊ ಹಾಗೆ ಸಂಗೀತವು ಸಂಗೀತಗಾರನನ್ನು ತನ್ನ ಬೆಳವಣಿಗೆ ಆಶ್ರಯಿಸುತ್ತದೆ.

ಕಾದಂಬರಿಯಲ್ಲಿ ಬರುವ ರಾಮಚಂದ್ರ, ಲಕ್ಷ್ಮಣ ಪಾತ್ರಗಳ ಗುಣ, ಸ್ವಭಾವಗಳ ವೈರುಧ್ಯ ಕೆಲವು ಸಲ ಅತಿಶಯವಾಗಿ ಕಾಣುತ್ತವೆ. ರಾಮಚಂದ್ರನ ಗುಣ ಸ್ವಭಾವಗಳು ವಿಲಕ್ಷಣವಾಗಿ ಕಂಡು ಬಂದರೆ ಲಕ್ಷ್ಮಣನ ಗುಣ ಸ್ವಭಾವಗಳು ವಾಸ್ತವಕ್ಕೆ ದೂರವಾಗಿದೆಯೇನೊ ಎಂದು ಭಾಸವಾಗುತ್ತದೆ. ಆದರೆ ವೆಂಕಟೇಶ ಮತ್ತು ಗೋಪಾಲನ ಪಾತ್ರಗಳು ವಾಸ್ತವತೆಗೆ ಬಹಳ ಹತ್ತಿರವಾಗಿದೆ. ಕತೆಯ ವೇಗದ ತೀವ್ರತೆ ಎಷ್ಟಿದೆ ಎಂದರೆ ಕೆಲವು ಸಲ ಪುಟಗಳನ್ನು ಓದುಗ ಎರಡು ಸಲ ತಿರುವಿ ಹಾಕಿ ಓದಬೇಕಾಗುತ್ತದೆ. ನಿಜಕ್ಕೂ ಕತೆಯು ಇಷ್ಟು ದೂರ ಸಾಗಿದೆಯೇ ಎಂಬ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಕತೆಯು ಸಂಗೀತಪ್ರಧಾನವಾಗಿರುವುದರಿಂದ ಸಂಗೀತದ ಙ್ನಾನ ಇದ್ದವರಿಗೆ ಇದು ಹೆಚ್ಚು ಇಷ್ಟವಾದರೆ ಇತರರಿಗೆ ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವುದಕ್ಕೆ ಈ ಕಾದಂಬರಿ ಸಹಾಯಕವಾಗುತ್ತದೆ. ಒಂದೆ ಕುಟುಂಬದಿಂದ ಬಂದ ರಾಮಚಂದ್ರ, ಲಕ್ಷ್ಮಣ ಮತ್ತು ಗೋಪಾಲರ ಗುಣ, ಸ್ವಭಾವ ಮತ್ತು ಅಭಿರುಚಿಗಳು ಹೇಗೆ ಭಿನ್ನವಾಗಿರುತ್ತವೆಯೆಂದು ನಮಗೆ ಅರ್ಥವಾಗುತ್ತವೆ. ವಿದ್ಯೆಯೊಂದ್ದಿಂದರೆ ಏನೂ ಪ್ರಯೋಜನವಿಲ್ಲ ಅದರ ಜೊತೆ ಪ್ರೀತಿ, ಸಹನೆ ಮತ್ತು ಸಾಮಾಜಿಕ ಪ್ರಙ್ನೆ ಅತ್ಯಂತ ಅವಶ್ಯ ಎಂಬುದು ರಾಮ-ಲಕ್ಷ್ಮಣ ಪಾತ್ರಗಳ ಮೂಲಕ ಅನಕೃರವರು ಚಿತ್ರಿಸುವ ರೀತಿ ಮನಕ್ಕೆ ತಟ್ಟುತ್ತದೆ.

ನಮ್ಮ ಸಂಗೀತಗಾರರ ಬೇರೆ ಭಾಷೆಗಳ ವ್ಯಾಮೋಹವನ್ನು ತೊಡೆದುಹಾಕಲು ಸಂಗೀತದ ಮೂಲಕ ಕನ್ನಡ ವಚನಕಾರರ, ದಾಸರ ಪದಗಳನ್ನು ಹೇಗೆ ಜನಪ್ರಿಯಗೊಳಿಸಬಹುದು ಎಂಬುದು ಗಮನಾರ್ಹ. ಇದು ಅನಕೃರವರ ಕನ್ನಡದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ.

ಲಕ್ಷ್ಮಣ ಮತ್ತು ಗೋಪಾಲನ ನಡುವೆ ನಡೆಯುವ ಕಲೆಯ ಸಾರ್ಥಕತೆ ಬಗ್ಗೆ ತತ್ವಯುಕ್ತ ಸಂಭಾಷಣೆಗಳು ಅರ್ಥಪೂರ್ಣವಾಗಿವೆ. "ಸಂಗೀತ ಹುಟ್ಟಿಸುವುದು ಕ್ಷುಲ್ಲಕವಾದ ಪ್ರಾಪಂಚಿಕ ಅಶಾಂತಿಯನ್ನಲ್ಲ. ಸುಪ್ತವಾದ ಚೇತನವನ್ನು ಹೊಡೆದೆಬ್ಬಿಸುವ ಗುರುವಲ್ಲವೆ ಅದು? ಮನುಷ್ಯ ತನ್ನ ನಿದ್ರೆಯಿಂದ ಎಚ್ಚೆತ್ತು ಹೊಸ ಲೋಕಗಳನ್ನು ಜಯಿಸಬೇಕೆಂದು ಬಯಸುವುದಕ್ಕಿಂತಲೂ ಹೆಚ್ಚು ಯಾವುದು? ಜೀವನಕ್ಕಿಂದು ಬೇಕಾದದ್ದು ಜಾಗೃತಿ... ಕ್ರಾಂತಿ". ಈ ಮಾತುಗಳು ಇಂದಿಗೂ ಎಷ್ಟು ಪ್ರಸ್ತುತವಾಗಿವೆಯಲ್ಲವೆ?

ಆ ಕಾಲದ ಮೈಸೂರು ಮತ್ತು ಬೆಂಗಳೂರು ನಗರಗಳ ಜನ-ಜೀವನದ ಇಣುಕು ನೋಟ ಇಲ್ಲಿದೆ. ಶ್ರೀನಿವಾಸರಾಯ-ಮೀನಾಕ್ಷಮ್ಮನವರ ಆದರ್ಶ ದಾಂಪತ್ಯ, ಲಕ್ಷ್ಮಣ-ಜಯರ ಅದಮ್ಯ ಪ್ರೀತಿ, ಶಾಮಣ್ಣನವರ ನಿಸ್ವಾರ್ಥ, ತ್ಯಾಗ ಆದರ್ಶಪ್ರಾಯವಾಗಿವೆ. ಹಾಗೆ ಆಗಿನ ಕಾಲದ ಗ್ರಾಮೀಣ ಜನರ ಮುಗ್ಧತೆ ಮತ್ತು ಅವರ ಆತಿಥ್ಯದ ಚಿತ್ರಣ ಬಲುವಿಶಿಷ್ಠವಾಗಿದೆ.

ಕಾಮೆಂಟ್‌ಗಳಿಲ್ಲ: