ಶನಿವಾರ, ಮಾರ್ಚ್ 24, 2018

ಕುವೆಂಪು

ಕುವೆಂಪುರವರ ಎಲ್ಲ ರಚನೆಗಳನ್ನು ನಾನು ಓದಿಲ್ಲ. ಆದರೆ ಕೆಲವರು ಹೇಳುವ ಹಾಗೆ ಕುವೆಂಪುರವರ ರಚನೆಗಳನ್ನು ಓದಿ ತಿಳಿದುಕೊಳ್ಳಲು ಕಶ್ಟ. ತಲೆ ಮೇಲೆ ಹೋಗುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ; ಇರಬಹುದು. ಆದರೆ ನಾನು ಕುವೆಂಪುರವರ ಈ ನಾಟಕಗಳನ್ನು ಓದಿದ್ದೇನೆ. ಓದಿದ್ದೇನೆ ಅನ್ನುವುದಕ್ಕಿಂತ ಒಳಗೆ ನಾಟುವಂತೆ ಓದಿದ್ದೇನೆ ಎನ್ನಬಹುದೇನೊ.
೧. ಜಲಗಾರ
ಚಿಕ್ಕವನಿದ್ದಾಗ ಓದಿದ್ದು; ಮತ್ತೆ ಮತ್ತೆ ಓದಿದ್ದೇನೆ. ಎಶ್ಟು ಸಲ ಓದಿದ್ದೇನೊ ತಿಳಿಯದು. ಇದರಲ್ಲಿ ಬರುವ ಹಲವು ಮಾತುಗಳು ಮತ್ತು ಸಂದರ್ಬಗಳಲ್ಲಿ ಕನ್ನಡದ ಮಣ್ಣಿನ ಸೊಗಡಿದೆ, ಚೆಲುವಿದೆ. ಕಡು ನೆಲಮಟ್ಟದಿಂದ ಬಂದ ಮಂದಿಯ ಹಾಡಿದೆ, ಬದುಕಿದೆ ಮತ್ತು ಅರಿವೂ ಇದೆ. ಕಂಡಿತ ಮಯ್-ಬಗೆಗಳನ್ನು ದಟ್ಟವಾಗಿ ತುಂಬುತ್ತದೆ. ನಲ್ಬರಹ ಅಂದರೆ ಹೀಗೆ ಇರಬೇಕು ಅಂತ ನನಗೆ ಬಹಳ ಸಲ ಅನ್ನಿಸಿದೆ.
೨. ಬೆರಳ್ ಗೆ ಕೊರಳ್
ಇದು ಇತ್ತೀಚೆಗೆ ಓದಿದ್ದು. ಇದರಲ್ಲಿ ಕುವೆಂಪು ಎಶ್ಟು ಕನ್ನಡ ಪರವಾಗಿ ನಿಂತುಬಿಡುತ್ತಾರೆ ಎಂದರೆ 'ಹಸ್ತಿನಪುರ' ಎಂಬ ಊರಿನ ಹೆಸರನ್ನೂ ಬಿಡಿವುದಿಲ್ಲ; ಕನ್ನಡವಾಗಿಸುತ್ತಾರೆ ಅಂದರೆ ಅದನ್ನು 'ಆನೆವೂರ್' ಎಂದು ಕರೆಯುತ್ತಾರೆ. ಅಲ್ಲದೆ, 'ಧನುರ್ವಿದ್ಯಾ' ಎಂಬ ಸಂಸ್ಕ್ರುತ ಪದವನ್ನು ಬಳಸದೆ 'ಬಿಲ್ಕಲ್ಪಿ' ಎಂದೇ ಅಣ್ಣೆಗನ್ನಡದ ಪದ ಬಳಸುತ್ತಾರೆ. ಏಕಲವ್ಯನೂ 'ಬಚ್ಚ' ಆಗಿಬಿಡುತ್ತಾನೆ. ಬೇಡರ ಬದುಕಿದೆ, ಚೆಲುವಿದೆ, ನೋವು ಮತ್ತು ನಲಿವುಗಳೂ ಇವೆ.
ಮೇಲಿನ ಎರಡೂ ನಾಟಕಗಳನ್ನು ನಾನು ಅರಗಸಿಕೊಂಡ ಬಗೆ ನನ್ನದೇ ಆದ ಬಗೆಯದ್ದು. ಇದರಲ್ಲಿ ಯಾರ ಮದ್ಯಸ್ತಿಕೆಯೂ ಇರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಯಾವ ವಿಮರ್ಶಕನ ಹಂಗೂ ಇಲ್ಲದೆ ಯಾರೂ ಬೇಕಾದರೂ ಇದನ್ನು ಓದಬಹುದು ಮತ್ತು ಅವರದೇ ಆದ ಬಗೆಯಲ್ಲಿ ಅರಗಿಸಿಕೊಳ್ಳಬಹುದು ಎಂದು ಕಂಡಿತ ಹೇಳಬಲ್ಲೆ.
ಹಾಗಾಗಿ, ಕುವೆಂಪುರವರನ್ನು ಜನಸಾಮಾನ್ಯರಿಗೆ ಎಟುಕದ ಕವಿ ಎಂದು ಜೆನರಲಯ್ಸ್ ಮಾಡುವುದು ಕಂಡಿತ ಸರಿಯಲ್ಲ. ಕುವೆಂಪುರವರು ಸೋಶಿಯೊ ಸೆಂಟ್ರಿಕ್ ಆದ ಪ್ರಬಾವವನ್ನು ಬೀರಲಿಲ್ಲ ಎನ್ನುವುದು ಅಶ್ಟು ಸರಿಯಲ್ಲ; ಒಪ್ಪಲಾಗದು.

ಕಾಮೆಂಟ್‌ಗಳಿಲ್ಲ: