ಈ ಮೂರು ಪದಗಳು ಸದ್ಯಕ್ಕೆ ಲಿಂಗಾಯತ/ವೀರಶಯ್ವ ತತ್ವದ ನೆಲೆಯಲ್ಲಿ ಬಳಕೆಯಲ್ಲಿವೆ. ಆದರೆ ಇದನ್ನು ನಾವು ಹೊಸಗಾಲದ ಕೆಲವು ಕುರಿಪುಗಳ ಕಣ್ಣಿಂದ ನೋಡಬಹುದು, ಯಾಕಂದರೆ ನಮ್ಮ ಹಿನ್ನಡವಳಿಯಲ್ಲಿ ಈಗಾಗಲೆ ಕತೆಗಳನ್ನು ಒಡೆದು ಕಟ್ಟುವುದು ಎಡೆಬಿಡದೆ ನಡೆದುಕೊಂಡು ಬಂದಿದೆ. ಈ ಒಡೆದು-ಕಟ್ಟುವ ಕೆಲಸ ಮುಂದುವರೆಯುತ್ತಿರುವ ಒಂದು ಕೂಡಣದ ಕುರುಹು.
ಹೊಸಗಾಲದ ಮಂದಿಯಾಳ್ವಿಕೆಯ ನೆಲೆಯಲ್ಲಿ ವ್ಯಕ್ತಿ ಮಟ್ಟದ ಸ್ವತಂತ್ರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಯಾಕಂದರೆ ಲಿಬರಲ್ ಡೆಮಾಕ್ರಟಿಕ್ ತತ್ವಗಳ ಮೇಲೆ ಹೆಚ್ಚಿನ ಮಂದಿಯಾಳ್ವಿಕೆಗಳು ಇಂದು ಕೆಲಸ ಮಾಡುತ್ತಿವೆ.
'ಇಶ್ಟಲಿಂಗ' ಎಂಬ ಕುರಿಪು(ಕಾನ್ಸೆಪ್ಟ್) ವ್ಯಕ್ತಿಯ ಮಟ್ಟದ ಸ್ವತಂತ್ರವನ್ನು ಎತ್ತಿ ಹಿಡಿಯುವುದನ್ನು ಸೂಚಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಯಾಕಂದರೆ ಬಡವ-ಬಲ್ಲಿದ, ಗಂಡಸು-ಹೆಂಗಸು, ಮೇಲು-ಕೀಳು ಎಂಬುದನ್ನು ಲೆಕ್ಕಿಸದೆ ಎಲ್ಲರಿಗೂ ಇಶ್ಟಲಿಂಗದ ಪೂಜೆಗೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ, ಅದರ ಮೂಲಕ ತಮ್ಮ ತಮ್ಮ ತನ್ನರಕೆಯ ಹಾದಿಯನ್ನು ತಾವೇ ಹುಟ್ಟಿಹಾಕಿಕೊಳ್ಳುವ ಸ್ವತಂತ್ರವನ್ನು ವ್ಯಕ್ತಿಗೆ ಬಿಡಲಾಗಿದೆ. ಇಲ್ಲಿ ಯಾವುದೇ ಒತ್ತಾಯ ಮತ್ತು ಅಂಡಲೆಗೆ/ಹಿಂಸೆಗೆ ಎಡೆಯಿಲ್ಲ. ಹಾಗಾಗಿ ಇದು ಲಿಬರಲ್ ಡೆಮಾಕ್ರಟಿಕ್ ಚವ್ಕಟ್ಟಿನಲ್ಲಿ ಒಪ್ಪಿತವಾಗುತ್ತದೆ.
'ಗುರು' ಎಂಬುದು ಒಬ್ಬೊಬ್ಬ ವ್ಯಕ್ತಿಯ ಮಟ್ಟದ ಅರಿವನ್ನು ಗೌರವಿಸುವುದನ್ನು ಸೂಚಿಸುತ್ತದೆ; ಯಾಕಂದರೆ 'ಅರಿವೇ ಗುರು' ಎಂಬುದು ಶರಣರ ನಿಲುವು. ಅಂದರೆ ಲಿಂಗವು ವ್ಯಕ್ತಿಯ ಹೊರಗಿನ ಸ್ವತಂತ್ರಕ್ಕೆ ಒತ್ತು ಕೊಟ್ಟರೆ 'ಗುರು' ಎಂಬುದು ಒಳಗಿರುವ ಅರಿವಿಗೆ ಬೆಲೆ ಕೊಡುತ್ತದೆ. ಪ್ರತಿಯೊಬ್ಬ ಮನುಶ್ಯನಿಗೆ, ಯಾವುದೇ ಹಿನ್ನೆಲೆಯಿದ್ದರೂ, ಅವನಲ್ಲಿ 'ಅರಿವು' ಇದೆ ಎಂಬುದನ್ನು ಇಲ್ಲಿ ಗುರುತಿಸಲಾಗಿದೆ. ಹೀಗೆ ಗುರುತಿಸುವಿಕೆಯೇ ಇದರ ಹೆಗ್ಗಳಿಕೆ. ಅರಿವನ್ನು ಬಳಸಿಕೊಂಡು 'ಸೂಳ್ನುಡಿ'ಗಳನ್ನು ಕಟ್ಟಬೇಕೆಂಬುದೇ ಶರಣರ ಬಯಕೆ. ಇದರಂತೆ ನಾವು ಹಲವು ಬೇರೆ ಬೇರೆ ಹಿನ್ನೆಲೆಯುಳ್ಳ ಸೂಳ್ನುಡಿಕಾರರನ್ನು ಕಾಣಬಹುದು.
ಹೀಗೆ, ಶರಣ ತತ್ವದ ಮೊದಲ ಎರಡು ಕುರಿಪುಗಳು ಹೊಸಗಾಲದ 'ಲಿಬರಲ್ ಡೆಮೊಕ್ರಾಟಿಕ್'ನ ತತ್ವಗಳನ್ನು ಎತ್ತಿಹಿಡಿಯುತ್ತದೆ. ಅವೇನೆಂದರೆ ಪ್ರತಿಯೊಬ್ಬ ವ್ಯಕ್ತಿಗೆ ದೊರೆಯಬೇಕಾದ ಗೌರವ ಮತ್ತು ಸ್ವತಂತ್ರ. ಇವೇ ಲಿಬರಲ್ ಡೆಮೊಕ್ರಾಟಿಕ್ ತತ್ವಗಳ ಅಡಿಪಾಯವಾಗಿದೆ.
ಆದರೆ ಶರಣರು 'ಲಿಬರಲ್ ಡೆಮಕ್ರಾಟಿಕ್'ನಂತೆ ಗುರು-ಲಿಂಗ ಎಂಬ ಎರಡೇ ವ್ಯಕ್ತಿಮಟ್ಟದಲ್ಲಿರುವ ಕುರಿಪುಗಳನ್ನು ಕೊಟ್ಟಿಲ್ಲ. ಇವೆರಡಕ್ಕಿಂತಲೂ ಕೊಂಚ ಬೇರೆಯಾದ 'ಜಂಗಮ' ಎಂಬ ಕುರಿಪನ್ನು ನಮಗೆ ಕೊಟ್ಟಿದ್ದಾರೆ. ಹಿರಿಯ ಬರಹಗಾರರಾದ ಎಚ್ಚೆಸ್ಕೆಯವರು(ವಿಚಾರ ವಿಹಾರ) 'ಜಂಗಮ' ಎಂಬುದಕ್ಕೆ ದೊಡ್ದದಾದ ಹುರುಳಿದೆ ಅಂದರೆ ಅದಕ್ಕೆ 'ಸಮಾಜ', 'ಸುತ್ತಣ' ಎಂಬ ಹುರುಳಿದೆ ಎಂದು ಹೇಳಿದ್ದಾರೆ. ಯಾರೇ ಆದರೂ ತನ್ನ ಗೌರವ ಮತ್ತು ಸ್ವತಂತ್ರದ ಜೊತೆಗೆ ತನ್ನ ಸುತ್ತಣದ ಜೊತೆಗೆ ಒಂದು ಹೊಂದಾಣಿಕೆಯಲ್ಲಿ ಬದುಕು ನಡೆಸಬೇಕೆಂಬುದೇ ಇಲ್ಲಿ ಶರಣರ ಬಯಕೆಯಾಗಿದೆ. ಅಂದರೆ ನಮ್ಮ ಗಳಿಕೆಯನ್ನು ನಮ್ಮ ಸುತ್ತಣದ ಜೊತೆಗೆ ಹಂಚಿಕೊಂಡು ಹೊಂದಿಕೊಂಡು ಬಾಳ್ವಿಕೆ ನಡೆಸುವುದು; ಇದನ್ನೇ 'ದಾಸೋಹ' ಎಂದು ಬಗೆಯಬೇಕು. ಈ ದಾಸೋಹವೇ ವ್ಯಕ್ತಿಯ ಮತ್ತು ಸುತ್ತಣದ ನಂಟನ್ನು ಹಸನಾಗಿಸುತ್ತದೆ. ಹಾಗು ಇದು ಮುಂದುವರಿಸ್ಕೊಂಡು ಹೋಗಬಹುದಾದ ಅಲ್ಲದೆ ಗಟ್ಟಿಯಾದ ಸಮಾಜವನ್ನು ಕಟ್ಟಲು ಅನುವು ಮಾಡಿಕೊಡುತ್ತದೆ.
ಇಂದು, ನಮ್ಮ ಚಿಂತನೆಯಲ್ಲಿ ವ್ಯಕ್ತಿಯ ಮಟ್ಟದ ಹಕ್ಕುಗಳಿಗಶ್ಟೆ ಹೆಚ್ಚುಗಾರಿಕೆ ಕೊಟ್ಟಿದ್ದೇವೆ. ನಾವು, ಜಂಗಮ ಮತ್ತು ಅದಕ್ಕೆ ಅಂಟಿಕೊಂಡಿರುವ ದಾಸೋಹದ ಕುರಿಪುಗಳನ್ನು ಮರೆತಿದ್ದೇವೆ ಇಲ್ಲವೆ ಅದನ್ನು ನಡೆಸಲಾಗುತ್ತಿಲ್ಲ. ಕೂಡಲೆ ಎಚ್ಚೆತ್ತುಕೊಂಡು 'ಜಂಗಮ'ದ ಕಡೆ ನಮ್ಮ ಗಮನವನ್ನು ಹರಿಸಬೇಕಾಗಿದೆ. ಆವಾಗಲೇ, ನಾವು ಒಂದು ಹಸನಾದ ಮತ್ತು ದಿಟವಾಗಲೂ ಮುಂದುವರೆಯುತ್ತಿರುವ ಕೂಡಣದ ಕನಸನ್ನು ಕಾಣಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ