ಶನಿವಾರ, ಮಾರ್ಚ್ 24, 2018

'ಅಲ್ಲಮ' ಪದದ ಬೇರು

"ಅಲ್ಲಮ ಪ್ರಬು -ಚಿಂತನ "( ಸಂ: ಎಸ್.ಕೆ.ಕೊಪ್ಪಾ, ಕರ್ನಾಟಕ ಸಾಹಿತ್ಯ ಅಕಾಡೆಮಿ) ಎಂಬ ಹೊತ್ತಗೆಯಲ್ಲಿ ಎಸ್.ಎಮ್.ವಿ.ಸ್ವಾಮಿಯವರು 'ಅಲ್ಲಮ' ಪದದ ಬೇರು ಹುಡುಕಲು ತುಂಬ ಮೊಗಸಿದ್ದಾರೆ.
ಅವರು ಕೊಟ್ಟಿರುವುದು:-
೧. ಅಲ್ಲಾಹ್ (ಅರೇಬಿಕ್ ನುಡಿ) ಇಂದ ಬಂದಿದೆ - ಇದನ್ನು ಮೊದಲು ಕಿಟ್ಟೆಲ್ ತಮ್ಮ ಪದನೆರಕೆಯಲ್ಲಿ ಕೊಟ್ಟಿದ್ದರು, ಅದು ಅಶ್ಟು ಸರಿಯಾದ ಎಟಿಮಾಲಜಿ ಅಲ್ಲ ಅಂತ ಬಗೆದು ಮರಿಯಪ್ಪ ಬಟ್ಟರು ತಿದ್ದಿ ತೊಡ್ಡದು ಮಾಡುವಾಗ ಅದನ್ನು ತೆಗೆದಿದ್ದಾರೆ.
೨. ಅಲ್ಲ - ಇದು 'ಅಥರ್ವಣದ ವೇದ'ದಲ್ಲಿ ಬರುವ ಒಂದು ಪದ. ಬಹುಶಹ 'ಶಿವ' ಎಂಬುದು ಎಂದು.
೩. ಅಲ್ಲ - ಕನ್ನಡದ್ದೇ ಪದ 'ಅಲ್ಲ' ಇಂದ ಬಂದಿದೆ. ಅಂದರೆ ಇದ್ದರು ಇಲ್ಲದ ಹಾಗೆ ಇರುವವನು ಅಂದರೆ 'ದೇವರು' ಎಂದು ಬಿಡಿಸಿದ್ದಾರೆ.
----------------------
ನನಗೆ ಹೊಳೆದಿದ್ದು:-
----------------------
ಇವಿಶ್ಟರಲ್ಲಿ ೧, ೨ ನ್ನು ಅವರೇ ಸರಿಯಲ್ಲ ಎಂದು ಹೇಳಿದ್ದಾರೆ. ೩ ಕೂಡ ಅಶ್ಟು ಸರಿಯಲ್ಲವೆಂದು ನನಗೆ ಅನಿಸುತ್ತಿದೆ.
ಕನ್ನಡದಲಿ 'ಅಲ್ಲು' ಎಂಬ ಇನ್ನೊಂದು ಪದವಿದೆ. ಅಂದರೆ ಸೇರು, ಜೋಡಿಸು, ಹೊಂದು, ಹೆಣೆ ಎಂಬ ಹುರುಳುಗಳಿವೆ. ನಮಗೆ ಏನೇ ವಸ್ತು ಇಲ್ಲವೆ ವಿಶಯ ಇಶ್ಟವಾದಲ್ಲಿ ನನಗೆ ಅದು 'ಸೇರು'ತ್ತದೆ ಎಂದು ಹೇಳುತ್ತೇವೆ. ನಮಗೆಲ್ಲರಿಗೂ ನಮ್ಮ ಮಕ್ಕಳು ತುಂಬ ಇಶ್ಟವಾಗುತ್ತಾರೆ.
ಹಾಗಾಗಿ, ಮೊದಲೆಲ್ಲ ಒಲವಿನಿಂದ ಮುದ್ದಣ್ಣ, ಚಿಕ್ಕಣ್ಣ, ಕೂಸಣ್ಣ, ಕೂಸಮ್ಮ, ಕೂಸಪ್ಪ ಎಂದು ಹೆಸರಿಡುತ್ತಿದ್ದರು.
ಹಾಗೆಯೇ,
ಅಲ್ಲು+ಮ (ಅಮ್ಮ ಎಂಬುದರ ಅಡಕ ರೂಪ) = ಅಲ್ಲುಮ => ಅಲ್ಲಮ
ಅಲ್ಲಮ ಎಂದರೆ ಪ್ರೀತಿಪಾತ್ರ, ಒಲವಿಗೆ ತಕ್ಕವನು ಎಂದಾಗುತ್ತದೆ. ಚಿಕ್ಕ ಮಕ್ಕಳಿಗೆ ಹೀಗೆ ಹೆಸರಿಡುವುದು ಸಹಜವಾಗಿದೆ.
'ಮ' ಎಂಬುದು ಒಂದು ಗಂಗುರುತಿನ ಒಟ್ಟು ಇರಬಹುದು ಎತ್ತುಗೆಗೆ- ಆಣ್-ಮ(ruler)

ಕಾಮೆಂಟ್‌ಗಳಿಲ್ಲ: