ಶನಿವಾರ, ಮಾರ್ಚ್ 24, 2018

ತನ್ನೆದುರ‍್ತನ - ಏನು? ಎತ್ತ?

ನಾವು ಯಾವಾಗಲೂ ’ತನ್ನೆದುರ‍್ತನ’(contradiction) ಎಂಬುದೆ ಕೆಟ್ಟದ್ದು ಇಲ್ಲವೆ ತನ್ನೆದುರ‍್ತನವೇ ಒಂದು ದೊಡ್ಡ ತೊಂದರೆ ಎಂದು ಕಯ್ ಚೆಲ್ಲಿ ಕೂರುತ್ತೇವೆ. ಆದರೆ ತನ್ನೆದುರ‍್ತನ ಎಂಬುದು ನಮ್ಮ ಸುತ್ತಲ್ಲೆಲ್ಲಾ ಇದೆ.
ಎತ್ತುಗೆಗೆ, ಬೆಳಕು ಒಂದು ಅಲೆಯೂ ಹವ್ದು ಅಲ್ಲದೆ ತುಣುಕು ಹವ್ದು. ಆದರೆ ಹೇಗೆ ಅಲೆಯೂ ಆಗಿ ಮತ್ತು ತುಣುಕೂ ಆಗಿ ಅದು ಇರಲು ಸಾದ್ಯ ಎಂದು ನೀವು ಕೇಳಿದರೆ ಅಲ್ಲಿ ತನ್ನೆದುರ‍್ತನ ತಾನಾಗಿಯೇ ಉಂಟಾಗಿದೆ ಎಂದು ಹೇಳಬಹುದಶ್ಟೇ.
ಅಶ್ಟೇ ಏಕೆ, ನಮ್ಮೊಳಗೂ ಇಂತಹದ್ದೇ ಒಂದು ತನ್ನೆದುರ‍್ತನ ಇದೆ. ಅದೇನೆಂದರೆ, ನಮ್ಮ ಮಯ್ ಮತ್ತು ಬಗೆಗೂ ಇರುವ ತನ್ನೆದುರ‍್ತನ. ಬಗೆಗೆ ತನ್ನದೇ ಆದ ಇರುವಿಕೆ ಇಲ್ಲ. ಅದಕ್ಕೆ ಒಂದು ಮಯ್ ಬೇಕೇ ಬೇಕು. ಆದರೂ ನಮ್ಮ ಮಯ್ ಬೆಂಗಳೂರಿನ ದಾರಿಗಳಲ್ಲಿ ಓಡಾಡುತ್ತಿದ್ದಾಗ, ನಮ್ಮ ಬಗೆ ಇದರಿಂದ ತುಂಬ ದೂರವಿರುವ ಸ್ಯಾನ್ ಪ್ರಾನ್ಸಿಸ್ಕೊದ ದಾರಿಗಳಲ್ಲಿ ಅಲೆಯುತ್ತಿರಬಹುದು. ಮಯ್ ಒಂದೇ ಎಡೆಯಲ್ಲಿ ನೆಲೆ ನಿಂತಾಗಲೂ ಬಗೆಯು ಅಲೆಯುತ್ತಿರಬಹುದು. ಆದರೂ ಹೀಗೆ ಬಗೆಯನ್ನು ಒಂದು ಮಯ್ಯಲ್ಲಿ ಹಿಡಿದಿಟ್ಟಿದ್ದರೂ ಅದರ ಮೇಲೆ ಯಾವ ಕಟ್ಟನ್ನು ಹೇರಲಾಗುವುದಿಲ್ಲ. ಮಯ್ಯ ಮೇಲೆ ಬಗೆ ಗಮನ ಹರಿಸದಿದ್ದರೆ ಇಲ್ಲವೆ ಮಯ್ಯನ್ನು ಅಂಕೆಯಲ್ಲಿಟ್ಟಕೊಳ್ಳದಿದ್ದರೆ ನಮಗೆ ನಾವು ಕೆಲವು ತೊಂದರೆಗಳನ್ನು ತಂದೊಡ್ಡಿಕೊಳ್ಳಬಹುದು ಇಲ್ಲವೆ ಬೇರೆಯವರಿಗೆ ನಮ್ಮಿಂದ ತೊಂದರೆಯಾಗಬಹುದು.
ನಮ್ಮ ಹುಟ್ಟಿನ ಪಕ್ಕದಲ್ಲಿ ಸಾವು ಇದೆ ಎಂದು ತನ್ನರಕೆಗಾರರು ಹೇಳುವಾಗ ಸಾಯುವುದೇ ಇದ್ದರೆ ಹುಟ್ಟುವುದೇ ಯಾಕೆ? ಎಂಬ ’ತನ್ನೆದುರ‍್ತನ’ದ ಕೇಳ್ವಿಯನ್ನು ಕೇಳಬಹುದು. ಆದರೆ ನಮ್ಮ ಸುತ್ತಣ ಇರುವುದೇ ಹೀಗೆ; ಇದೇ ತೆರನಾದ ಹಲವು ಕೇಳ್ವಿಗಳನ್ನು ಹಾಲು-ತುಪ್ಪ, ಹೂವು-ಹಣ್ಣು ಇವೆಲ್ಲವುಗಳ ಬಗ್ಗೆ ಕೇಳಬಹುದು.
ಹಾಗಾದರೆ ಈ ತನ್ನೆದುರ‍್ತನದೊಂದಿಗೆ ಹೇಗೆ ಏಗುವುದು?
ಮೊದಲು, ತನ್ನೆದುರ‍್ತನವೇ ಒಂದು ತೊಂದರೆ ಎಂಬುದನ್ನು ನಮ್ಮ ಬಗೆಯಿಂದ ತೆಗೆದುಹಾಕಬೇಕು. ಆದರೆ ತನ್ನೆದುರ‍್ತನದಿಂದ ತೊಂದರೆಯಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು. ನಾವು ಈ ’ತನ್ನೆದುರ‍್ತನ’ಗಳನ್ನು ಹೆಚ್ಚು ಹೆಚ್ಚು ಅರಿತುಕೊಂಡಶ್ಟು ಅದರಿಂದಾಗುವ ತೊಂದರೆಗಳನ್ನು ಇಲ್ಲವಾಗಿಸಬಹುದು ಇಲ್ಲವೆ ತಪ್ಪಿಸಬಹುದು.
ನಮ್ಮ ಸುತ್ತಲೂ ಕಟ್ಟಿಕೊಂಡಿರುವ ಏರ್ಪಾಟುಗಳಲ್ಲೂ ಇಂತಹದೇ ಹಲವು ತನ್ನೆದುರ‍್ತನಗಳು ಇವೆ. ಅದನ್ನು ನಾವು ಅರಿತುಕೊಂಡರೆ ಸುತ್ತಣವನ್ನು ನೋಡುವ ನೋಟವೇ ಬದಲಾಗುತ್ತದೆ. ಬದಲಾದ ನೋಟದಿಂದ ಕೆಲವು ಒಳನೋಟಗಳು ನಮಗೆ ದೊರೆಯುತ್ತವೆ.

ಕಾಮೆಂಟ್‌ಗಳಿಲ್ಲ: