ಭಾನುವಾರ, ನವೆಂಬರ್ 27, 2011

ಕನ್ನಡ ಲಿಪಿ ಸರಳಿಸುವಿಕೆ - ಒಂದು ಪ್ರತಿಕ್ರಿಯೆ



ವಿಜಯ ಕರ್ನಾಟಕದಲ್ಲಿ ೨೦ ನವೆಂಬರ್ ೨೦೧೧ ರಂದು ಪ್ರಕಟವಾದ ಶ್ರೀ ಎಮ್.ಆರ್.ಪಿ. ರವಿಕಿರಣ್ ಅವರ ’ಲಿಪಿ ಸರಳೀಕರಣ: ಅತಿರೇಕದ ಮುನ್ಸೂಚನೆ’(ಅದರ ಪ್ರತಿ ಈ ಮಿಂಚೆಯೊಂದಿಗೆ ಅಂಟಿಸಲಾಗಿದೆ) ಈ ಬರಹಕ್ಕೆ ಪ್ರತಿಕ್ರಿಯೆ.

ಮೊದಲಿಗೆ, ರವಿಕಿರಣ್ ಅವರೇ ಹೇಳುವಂತೆ ಅವರಿಗೆ ನುಡಿಯ ಬಗೆಗಿನ ಹುರುಪು, ಆಸಕ್ತಿ ತೀರ ಇತ್ತೀಚಿನದು. ಆದ್ದರಿಂದ ಅವರ ಬರಹದಲ್ಲಿ ತಾನಾಗಿಯೇ ಆಗಿರುವ ಹಲವು ತಪ್ಪುಗಳನ್ನು ಎತ್ತಿ ತೋರಬೇಕಾಗಿದೆ.
ಇದಲ್ಲದೆ ಅವರು ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಲು ಯಾವ ನುಡಿಯರಿಗರ/ಭಾಷಾವಿಜ್ಞಾನಿಗಳ ಯಾವ ಕೆಲಸವನ್ನು ಉದಾಹರಿಸಿಲ್ಲ. ಇದರಿಂದಲೇ ಗೊತ್ತಾಗುವುದು ಅವರು ತಮ್ಮದೇ ಲೋಕದಲ್ಲಿ ಓಡಾಡುತ್ತಿದ್ದಾರೆ ಅಂತ.
ಇರಲಿ, ಕನ್ನಡದಲಿ ಲಿಪಿ ಸರಳಿಸುವಿಕೆಗೆ ತಮಿಳಿನ ’ಮಾದರಿ’ಯಾಗಿ ತೆಗೆದುಕೊಳ್ಳಲಾಗುವುದಿಲ್ಲ. ಲಿಪಿ ಸರಳ ಮಾಡಬೇಕೆನ್ನುವವರು ಕೂಡ ಅದನ್ನು ಯಾರೂ ಮಾದರಿಯಾಗಿ ತೆಗೆದುಕೊಂಡಿಲ್ಲ. ಯಾವುದೇ ಲಿಪಿ ಸರಳಿಸುವಿಕೆ ಆ ನುಡಿಯಾಡುವ ಮಂದಿಯ ’ಉಲಿಕೆ’ಯ ಓದಿನ ಮೇಲೆ ನಿಂತಿರುತ್ತದೆ. ಉಲಿಕೆಯಲ್ಲಿಲ್ಲದ/ಉಚ್ಚಾರಣೆಯಲ್ಲಿಲ್ಲದ ಆದರೆ ಬರವಣಿಗೆಯಲ್ಲಿರುವ ಅಕ್ಷರಗಳು ಹೊರೆಯಾಗುತ್ತದೆ. ಯಾಕಂದರೆ ಆ ನುಡಿಯಾಡುವವರು ಅದನ್ನು ಮಾತಿನಲ್ಲಿ ಎಂದು ಬಳಸುವುದೇ ಇಲ್ಲ. ಮೊದಲು ಹೊರೆಯಾಗಿ ಇದು ಕಂಡರೂ ಮುಂದೆ ಇದು ಹಲವು ಗೊಂದಲಕ್ಕೆಡೆ ಮಾಡುತ್ತವೆ. ಉದಾಹರಣೆಗೆ: ಕನ್ನಡಿಗರಲ್ಲಿ ಹೆಚ್ಚಿನವರು ಮಹಾಪ್ರಾಣ ಮತ್ತು ಅಲ್ಪಪ್ರಾಣವನ್ನು ತಮ್ಮ ಉಲಿಕೆಯಲ್ಲಿರುವ ಬೇರೆತನವನ್ನು ತೋರಿಸುವುದಿಲ್ಲ. ಆದ್ದರಿಂದ ಅವರ ಬರವಣಿಗೆಯಲ್ಲಿ ’ತಪ್ಪು’ಗಳು ಕಂಡುಬರುತ್ತದೆ. ಇದರಿಂದ ಹೆಚ್ಚಿನ ಕನ್ನಡಿಗರಿಗೆ ಇಂದಿನ ಬರಹವು ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಚೆನ್ನಾಗಿ ಮಾತು ಬಲ್ಲವರನ್ನು ಕೂಡ ’ಓಲೆ ಬರೆಯಿರಿ’ ಎಂದು ಹೇಳಿದಾಗ ದಿಗಿಲಿಗೆ ಒಳಗಾಗುತ್ತಾರೆ. ಇದಕ್ಕೆ ಈಗಿನ ಕನ್ನಡ ಬರಹದಲ್ಲಿರುವ ಹಲವು ಗೊಂದಲಗಳು ಮುಖ್ಯ ಕಾರಣ.

ಇನ್ನು ರವಿಕಿರಣ್ ಅವರು ಹೇಳುತ್ತಾರೆ: " ಸನ್ನಿಧಿ, ಮಂಟಪ, ಕೃಪಾನಿಧಿ, ಸೂರ್ಯ, ಸುಧಾ - ಇವುಗಳನ್ನು ಕನ್ನಡದಲ್ಲಿ ಹೇಗೆ ಉಚ್ಚರಿಸುತ್ತೇವೆಯೋ ಹಾಗೆ ಬರೆಯುತ್ತೇವೆ" - ಈ ವಾಕ್ಯದಲ್ಲಿ ತಪ್ಪಿದೆ. ದಿಟವಾಗಲೂ ಕನ್ನಡಿಗರೂ ಇದನ್ನು ಉಚ್ಚರಿಸುವುದು ಸನ್ನಿದಿ , ಮಣ್ಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ ಅಂತ. ಹಾಗಾಗಿ ನಾವು ಉಚ್ಚರಿಸಿದಂತೆ ಕನ್ನಡದಲ್ಲಿ ಬರೆಯುತ್ತಿಲ್ಲ. ಆದರೆ ಈ ತೊಂದರೆಯಿರುವುದು ಸಂಸ್ಕೃತ ಪದಗಳಿಗೆ ಮಾತ್ರ. ಕೆಲವು ಕಡೆ ಹೊರತುಪಡಿಸಿ ಕನ್ನಡದಲ್ಲಿ ಕನ್ನಡದ್ದೇ ಆದ ಪದಗಳನ್ನು ಉಚ್ಚರಿಸಿದಂತೆ ಬರೆಯಲಾಗುತ್ತಿದೆ. ಉದಾಹರಣೆಗೆ ಕನ್ನಡದಲ್ಲಿ ಅನುನಾಸಿಕಗಳನ್ನು ’೦’ ಗುರುತಿಸುವ ಅಭ್ಯಾಸ ಮೊದಲಿನಿಂದಲೂ ನಡೆದುಬಂದಿದೆ. ’ಗಣ್ಡ’ ಎಂದು ಉಲಿದರೂ ’ಗಂಡ’ ಎಂದೇ ಬರೆಯುವುದು. ’ಮಞ್ಚ’ ಎಂದು ಉಲಿದರೂ ’ಮಂಚ’ ಎಂದೇ ಬರೆಯುವುದು. ಆದರೆ ಇಲ್ಲಿ ಉಚ್ಚರಿಸದಂತೆ ಬರೆಯದಿರುವುದು, ಬರವಣಿಗೆಯನ್ನು ಸುಲಭ ಮಾಡುವುದೇ ಗುರಿಯಾಗಿದೆ. ಆದರೆ ಮಹಾಪ್ರಾಣಗಳು(ಖ,ಘ,ಛ,ಝ,ಠ,ಢ,ಥ,ಧ,ಫ,ಭ) ಮತ್ತು ಷ, ಃ, ಇವುಗಳು ಉಲಿಕೆಯಿಲ್ಲಿಲ್ಲದಿದ್ದರೂ ಅದನ್ನು ಬರವಣಿಗೆಯಲ್ಲಿ ಇಟ್ಟಿಕೊಂಡಿರುವುದೇಕೆ ಎಂಬ ಕೇಳ್ವಿ ಹಾಕಿಕೊಂಡರೆ, ಆಗ ತಿಳಿಯುವುದು ಇದು ಸಂಸ್ಕೃತ ಪದಗಳನ್ನು ಎರಡು ಸಾವಿರ ವರ್ಷಗಳ ಹಿಂದೆ ಹೇಗೆ ಬರೆಯಲಾಗುತ್ತಿತ್ತೊ ಅದನ್ನ ಹಾಗೆ ಉಳಿಸಿಕೊಳ್ಳಲು ಕನ್ನಡದ ಬರೆವಣಿಗೆಯ ಮೇಲೆ ಹೇರಿರುವ ಬೇಕಿಲ್ಲದ ಕಟ್ಟಲೆ ಎಂದು.

ಇನ್ನು " ೧. ತಮಿಳಿನಲ್ಲಿ ಮಹಾಪ್ರಾಣ ಬಿಟ್ಟರು. ನಾವು ಅದನ್ನೂ ಬಿಡಬಹುದು" ಎಂಬುದು ಹೇಗೆ ಹೇಳಿದರೊ ತಿಳಿದಿಲ್ಲ. ಕನ್ನಡದಲ್ಲೇ(ಮಾತಿನ) ಆಗಲಿ, ತಮಿಳಿನಲ್ಲೇ ಆಗಲಿ ಎಂದೂ ಮಹಾಪ್ರಾಣ ಇರಲಿಲ್ಲ, ಇನ್ನು ಬಿಡುವುದೆಲ್ಲಿಂದ ಬಂತು? ಇಲ್ಲಿ ಬರಹಗಾರರು ’ಮಾತು ಮತ್ತು ಬರಹ’ ನಡುವೆ ತುಂಬ ಗೊಂದಲಗೊಂಡಿದ್ದಾರೆ ಎನ್ನುವುದು ತಿಳಿಯದೇ ಇರದು. ಒಂದು ನುಡಿ/ಭಾಷೆಯೆಂದರೆ ಅದನ್ನ ’ಮಾತು’ ಎಂಬ ಅರ್ಥದಲ್ಲಿ ತೆಗೆದುಕೊಳ್ಳುವುದು ಸರಿ ಎಂದು ನುಡಿಯರಿಗರು ಹೇಳುತ್ತಾರೆ. ಮಾತಿಗೆ ಹೋಲಿಸಿದರೆ ’ಬರಹ’ ತೀರ ಇತ್ತೀಚಿನದು. ಅಲ್ಲದೆ ಮಾತಿಗಿರುವ ಸ್ವಾಭಾವಿಕತೆ ಬರಹಕ್ಕೆ ಇಲ್ಲ. ಬರಹ ಎಂದಿಗೂ ಕೃತಕ. ಹಾಗಾಗಿ ಒಂದು ನುಡಿಯನ್ನು ಚೆನ್ನಾಗಿ ಅರಿಯಬೇಕಿದ್ದರೆ ’ಮಾತಿನ’ ಬಗ್ಗೆ ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ಈ ಮಾತಿನ ಬಗೆಗಿನ ಸಂಶೋಧನೆಯಿಂದ ಹೊರ ಹೊಮ್ಮಿರುವುದೇ ಕನ್ನಡ ’ಲಿಪಿಕ್ರಾಂತಿ’ ಇಲ್ಲವೆ ’ಲಿಪಿ ಸರಳಿಸುವಿಕೆ’. ಲಿಪಿ ಸುದಾರಣೆ ಮಾಡಿದರೆ ಇವರು ಕೊಟ್ಟಿರುವ ಪದಗಳನ್ನು ಹೀಗೆ ಬರೆಯಬಹುದು :- ಸನ್ನಿದಿ, ಮಂಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ’. ಅದ್ದರಿಂದ ಇದು ಮಾತಿಗೆ ಹೆಚ್ಚು ಹತ್ತಿರವಾಗಿದೆಯಲ್ಲದೆ ಕೃತಕತೆಯು ಮಾಯವಾಗಿದೆ. ’೦’ ಅನ್ನು ಹೇಗೆ ಉಲಿಯಬೇಕೆಂಬುದು ಅದರ ಮುಂದಿನ ಅಕ್ಷರ ನಿರ್ಧರಿಸಿರುವುದರಿಂದ ಎಲ್ಲ ಅನುನಾಸಿಕ/ಮೂಗುಲಿಗಳಿಗೆ (ಪದದ ಮೊದಲು ಬರದಿದ್ದರೆ) ಅದನ್ನು ಬಳಸಲಾಗುತ್ತಿದೆ. (ಗಣ್ಡ = ಗಂಡ, ಹೆಞ್ಚು= ಹೆಂಚು, ಶಙ್ಕರ=ಶಂಕರ). ಈ ಸೊನ್ನೆಯನ್ನು (೦) ಹಾಗೆ ಉಳಿಸಿಕೊಳ್ಳಬೇಕೆಂದು ನುಡಿಯರಿಗರು ಹೇಳುತ್ತಾರೆ ಯಾಕಂದರೆ ಇದರಿಂದ ಕನ್ನಡ ಬರಹ ಸುಲಬವಾಗಿದೆ.
ಹಾಗೇನೆ ಮಹಾಪ್ರಾಣಗಳನ್ನು , ಷ, ಃ, ಇವುಗಳನ್ನು ಕೂಡ ಬಿಡಬಹುದು. ಇದರಿಂದ ಕನ್ನಡ ಬರಹ ಹೆಚ್ಚು ಸುಲಬ ಮತ್ತು ಗೊಂದಲರಹಿತವಾಗುತ್ತದೆ.


ಒತ್ತಕ್ಷರದ ಬಗ್ಗೆ ’ಲಿಪಿ ಸರಳಿಸುವಿಕೆ’ಯನ್ನು ಹಿಂದೆ ಬಿ.ಎಮ್.ಶ್ರೀಯವರು ಮೊದಲು ’ಕನ್ನಡ ಬಾವುಟ’ ಎಂಬ ಪುಸ್ತಕದಲ್ಲಿ ಬರೆದಿದ್ದರು. ಅದರ ಗುರಿ ಪುಸ್ತಕಗಳನ್ನು ’ಅಚ್ಚು’ ಮಾಡುವುದನ್ನು ಸುಲಬಗೊಳಿಸುವುದಲ್ಲದೇ ಬೇರೆ ಏನೂ ಇರಲಿಲ್ಲ. ಆದರೆ ಈಗ ಕಂಪ್ಯೂಟರ್ ಮತ್ತು ಪ್ರಿಂಟರ್ ತುಂಬ ಮುಂದುವರೆದಿರುವುದರಿಂದ ಆ ತೊಂದರೆಗಳಾವುವು ಇಲ್ಲ. ಹಾಗಾಗಿ ಒತ್ತಕ್ಷರಗಳನ್ನು ಉಳಿಸಿಕೊಳ್ಳುವುದಕ್ಕೇ ಯಾವುದೇ ಅಡ್ಡಿಯಿಲ್ಲ.

ಇನ್ನು ಕನ್ನಡ ತಮಿಳಿನಿಂದ ಬೇರ್ಪಟ್ಟು ಸಂಸ್ಕೃತದ ಕಡೆಗೆ ಹೋಗಿದೆ ಎನ್ನುವುದಕ್ಕೆ ಬರಹಗಾರರು ಯಾವುದೇ ಉಲಿಕೆಯರಿಮೆ(phonetics), ನುಡಿಯರಿಮೆ(Linguistics) ಮತ್ತು ಸೊಲ್ಲರಿಮೆ(grammar)ಗಳ ಪುರಾವೆಗಳನ್ನು ಒದಗಿಸಿಲ್ಲ. ಕೇವಲ ಕನ್ನಡ ಬರಹಗಳಲ್ಲಿ ಸಂಸ್ಕೃತ ಪದಗಳನ್ನು ಎರವಲು ಪಡೆದುದನ್ನು ನೋಡಿ ಹಾಗೆ ಅವರು ತಿಳಿದುಕೊಂಡಂತಿದೆ. ಮೊದಲೇ ಹೇಳಿದಂತೆ ಯಾವುದೇ ನುಡಿ/ಭಾಷೆಗೆ ’ಮಾತೇ’ ಆಧಾರ. ಹಾಗೆ ನೋಡಿದರೆ ಕನ್ನಡದ ಸೊಲ್ಲರಿಮೆ/ವ್ಯಾಕರಣ ಸಂಸ್ಕ್ರುತಕ್ಕಿಂತ ತಮಿಳಿಗೆ ಹತ್ತಿರವಾಗಿದೆ.

ಇಂಗ್ಲಿಶಿನಲ್ಲಿರುವ ’ಸ್ಪೆಲ್ಲಿಂಗ್’ ತೊಡಕು ಇಂದು ಆಳವಾಗಿ ಹಲವರನ್ನು ಕಾಡುತ್ತಿದೆ. ಅಮೆರಿಕಾದಲ್ಲಿ ಸ್ಪೆಲ್ಲಿಂಗ್ ಸಮಸ್ಯೆಯನ್ನು ಕಡಿಮೆ ಮಾಡಲು ಹಲವು ಸಂಶೋದನೆಗಳನ್ನು ಮಾಡಲಾಗುತ್ತಿದೆ. ಇವತ್ತು ಇಂಗ್ಲಿಶನ್ನು ಚೆನ್ನಾಗಿ ಓದಲು, ಬರೆಯಲು ಬೇಕೆಂದರೆ ಸುಮಾರು ೧೩೦೦೦ ಪದಗಳ ಸ್ಪೆಲ್ಲಿಂಗನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ ಆದರೆ ಫಿನ್ನಿಶ್(Finnish) ನುಡಿಯನ್ನು ಕಲಿಯಲು ಒಂದೇ ಒಂದು ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳಬೇಕಾಗಿಲ್ಲ. ಅಶ್ಟು ಚೆನ್ನಾಗಿ ಫಿನ್ನಿಶ್ ಬರಹವನ್ನು ಮಾಡಲಾಗಿದೆ. ಈ ಕಾರಣದಿಂದ ಪಿನ್ ಲ್ಯಾಂಡಿನಲ್ಲಿ ಜಗತ್ತಿನಲ್ಲೇ ಅತ್ಯುತ್ತಮವಾದ ’ಕಲಿಕೆ ವ್ಯವಸ್ಥೆ’ ಇದೆ. ರಾಜಕೀಯ, ಸಾಮಾಜಿಕ ಕಾರಣಗಳಿಂದ ಇಂಗ್ಲಿಶ್ ಬರಹ ಇಂದು ಹೆಚ್ಚು ಚಲಾವಣೆಯಲ್ಲಿರುವ ನುಡಿಯಾಗಿದ್ದರೂ ಅದರ ಬರಹ ವೈಜ್ಞಾನಿಕವಾಗಿಲ್ಲ ಎಂದು ಇದರಿಂದ ತಿಳಿಯಬಹುದು.

ಕೊನೆಗೆ ಬರಹಗಾರರು ಕನ್ನಡವನ್ನು ಬಲಪಡಿಸಬೇಕೆಂದು ಹೇಳುತ್ತಾರೆ ಅಲ್ಲದೆ ಲಿಪಿ ಸರಳಗೊಳಿಸುವುದರಿಂದ ’ಘನ’ವಾದುದನ್ನು ಕಳೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಹೇಗೆ ಬಲಪಡಿಸುವುದು ಎಂದು ಹೇಳುವುದಿಲ್ಲ. ಈಗಾಗಲೆ ಕನ್ನಡ ಬಲವಾಗಿದ್ದರೆ ಯಾಕೆ ಕನ್ನಡದಲ್ಲಿ ಹೊಸ ಅರಿವುಗಳು, ಹೊಸ ತಂತ್ರಜ್ಞಾನಗಳು ಹುಟ್ಟುತ್ತಿಲ್ಲ ? ಯಾವ ’ಘನ’ವನ್ನು ಕಳೆದುಕೊಳ್ಳುತ್ತೇವೆ ಎಂದು ಅವರು ಹೇಳುವುದಿಲ್ಲ. ಕನ್ನಡವನ್ನು ಬಲಪಡಿಸುವುದು ಅಂದರೆ ಕನ್ನಡದ್ದೇ ಸೊಗಡನ್ನು ಬಲಪಡಿಸುವುದು. ಕನ್ನಡದ್ದೇ ಆದ ಸೊಲ್ಲರಿಮೆಯನ್ನು/ವ್ಯಾಕರಣವನ್ನು ಗಮನಿಸಿವುದು ಮತ್ತು ಅದಕ್ಕೆ ಇಂಬು ಕೊಡುವುದು , ಹೊಸ ಹೊತ್ತಿಗೆ ಬೇಕಾದ ಕನ್ನಡದ್ದೇ ಆದ ಪದಗಳನ್ನುಂಟು ಮಾಡುವುದು ಅದರಿಂದ ಕಲಿಕೆಯನ್ನು ಇನ್ನು ಹೆಚ್ಚು ಚೆನ್ನಾಗಿ ಮಾಡುವುದು. ಕಲಿಕೆ ಚೆನ್ನಾಗಿ ಆದಾಗ ಜನರಿಗೂ ಕೂಡ ಹೊಸದನ್ನು ಸಾಧಿಸುವುದಕ್ಕಾಗುತ್ತದೆ. ಇದರಿಂದ ನಾಡ ಏಳಿಗೆ ಆಗುವುದರಲ್ಲಿ ಎರಡು ಮಾತಿಲ್ಲ.

11 ಕಾಮೆಂಟ್‌ಗಳು:

ಪ್ರಶಾಂತ ಸೊರಟೂರ ಹೇಳಿದರು...

ಭರತ್ ಅವರ ಅಭಿಪ್ರಾಯಗಳನ್ನು ಸಾರಾಸಗಟಾಗಿ ತಳ್ಳಿಹಾಕದೇ, ಈಗಿರುವ ಕನ್ನಡದ ಬರವಣಿಗೆಯನ್ನೇ ಮುಂದುವರಿಸುವುದು ಒಳಿತು ಅಂತಾ ನನಗನಿಸುತ್ತದೆ.
ಈಗಿರುವ ಕನ್ನಡದ ಬರವಣಿಗೆಯಲ್ಲಿ ಎಲ್ಲ ನುಡಿಗಳಿಗೆ ಹೋಲಿಸಿದರೆ ಕಡಿಮೆ ಗೊಂದಲಗಳು/ತೊಡಕುಗಳು ಇವೆ. [ಅಲ್ಲಲ್ಲಿ ಕಾಣುವ ತೊಡಕುಗಳು ನುಡಿಯ ವಿಸ್ತಾರವನ್ನು ನೋಡಿದರೇ ಏನೂ ಅಲ್ಲ]
"ಮಹಾಪ್ರಾಣ"ಗಳನ್ನು ಕನ್ನಡಿಗರು ಮಾತಿನಲ್ಲಿ ಬಳಸುವುದೇ ಇಲ್ಲ ಅನ್ನುವ ನಿಲುವಾಗಲಿ ಅಥವಾ "ಮಹಾಪ್ರಾಣ"ವಿಲ್ಲದೇ ಕನ್ನಡ ಬರವಣಿಗೆಯೇ ಇಲ್ಲ ಎಂಬುವ ಇನ್ನೊಂದು ನಿಲುವಾಗಲಿ ಪೂರ್ತಿಯಾಗಿ ನಿಜವಲ್ಲವೆನಿಸುತ್ತದೆ.
"ಮಹಾಪ್ರಾಣ"ಗಳನ್ನು ಈಗ ಬರವಣಿಗೆಯಲ್ಲಿ ಬಿಡುವುದಕ್ಕಿಂತ, ಮಾತಿನಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಪದಗಳನ್ನು ಬಳಸುತ್ತಾ ಹೋದಂತೆ, ತನ್ನಷ್ಟಕ್ಕೆ ತಾನೇ "ಮಹಾಪ್ರಾಣ"ಗಳು ಕಡಿಮೆಯಾಗುತ್ತವೆ/ಮಾಯವಾಗುತ್ತವೆ.
[ಭರತ್ ಅವರ ಈ ಬರವಣಿಗೆಯನ್ನೇ ಒಮ್ಮೆ ಓದಿದರೇ ಇದರ ಅರ್ಥವಾಗುತ್ತೆ, ಅವರು ಬಳಸಿದ ಅಚ್ಚ/ಸರಳ ಕನ್ನಡದ ಪದಗಳು, ಈಗಿನ ಬರವಣಿಗೆಯ ಕಟ್ಟಳೆಯನ್ನೇ ಬಳಸಿಕೊಂಡು, ಅನಗತ್ಯವಾಗಿ ನುಸುಳುವ "ಮಹಾಪ್ರಾಣದ" ಪದಗಳನ್ನು ಕೈಬಿಟ್ಟಿದ್ದರಿಂದ, ಹೇಳಬೇಕೆಂದಿದ್ದು ಯಾವುದೇ ಗೊಂದಲಗಳಿಲ್ಲದೇ ಓದುಗನನ್ನು ತಲುಪುವ ಶಕ್ತಿ ಹೊಂದಿದೆ]
ನನ್ನ ಅನಿಸಿಕೆಯಲ್ಲಿ, ಕನ್ನಡ ಲಿಪಿಯನ್ನು ಮಾರ್ಪಡಿಸುವ ಅಗತ್ಯವಿಲ್ಲದೇ ಇದ್ದರೂ ಕೆಲವೊಂದು ಮಾರ್ಪಾಡುಗಳನ್ನು ಮಾಡುವುದು ಅವಶ್ಯಕ ಅನಿಸಿದರೇ ಅದನ್ನು ಕೆಲವು/ಹಲವು ವರುಷಗಳ ನಂತರ ಚರ್ಚಿಸುವುದು ಒಳಿತು.
[ಇಂದು ಕನ್ನಡಿಗರು, ಕೆಲಸ/ದುಡ್ಡು/ಗೌರವ/ಕೀಳರಿಮೆ/ರಾಷ್ಟ್ರಭಾಷೆ/ಅಂತರಾಷ್ಟ್ರೀಯಭಾಷೆ... ಅಂತಾ ಯಾವುದ್ಯಾವುದೋ ಕಾರಣಗಳನ್ನು ಕೊಟ್ಟು ಕನ್ನಡದಿಂದ ದೂರವಾಗುತ್ತಿರುವಾಗ "ಲಿಪಿ"ಯ ಮಾರ್ಪಾಟು ಹೆಚ್ಚಿನ ಗೊಂದಲಗಳನ್ನು ಉಂಟುಮಾಡುತ್ತದೆ, ಕನ್ನಡದಿಂದ ಅವರನ್ನು ಇನ್ನೂ ದೂರ ಕರೆದೊಯ್ಯುತ್ತದೆ]

Unknown ಹೇಳಿದರು...

ಪ್ರಶಾಂತ್
ನಿಮ್ಮ ಅಬಿಪ್ರಾಯಗಳಿಗ ನನ್ನಿ.

"ಇಂದು ಕನ್ನಡಿಗರು, ಕೆಲಸ/ದುಡ್ಡು/ಗೌರವ/ಕೀಳರಿಮೆ/ರಾಷ್ಟ್ರಭಾಷೆ/ಅಂತರಾಷ್ಟ್ರೀಯಭಾಷೆ... ಅಂತಾ ಯಾವುದ್ಯಾವುದೋ ಕಾರಣಗಳನ್ನು ಕೊಟ್ಟು ಕನ್ನಡದಿಂದ ದೂರವಾಗುತ್ತಿರುವಾಗ "ಲಿಪಿ"ಯ ಮಾರ್ಪಾಟು ಹೆಚ್ಚಿನ ಗೊಂದಲಗಳನ್ನು ಉಂಟುಮಾಡುತ್ತದೆ, ಕನ್ನಡದಿಂದ ಅವರನ್ನು ಇನ್ನೂ ದೂರ ಕರೆದೊಯ್ಯುತ್ತದೆ"
ಇಲ್ಲಿ ನೀವು ಎರಡು ವಿಚಾರಗಳನ್ನು ಬೆರಸಿದ್ದೀರ
’ಲಿಪಿ ಸರಳಿಸುವಿಕೆ’ ನುಡಿಯರಿಮೆಯ ಆಳವಾದ ಓದಿನಿಂದ ಮುಂದೆ ಬಂದಿರುವ ವಿಚಾರ. ಇದನ್ನು ಬಳಕೆಗೆ ತರುವುದು ನುಡಿಯರಿಗರ ಕೆಲಸವಲ್ಲ...ಅದು ಆ ನುಡಿಯಾಡುವವರ ಕೆಲಸ.

ಇನ್ನು ’ಕನ್ನಡದಿಂದ ಅವರನ್ನು ಇನ್ನೂ ದೂರ ಮಾಡುತ್ತದೆ’ -- ಇದಕ್ಕೆ ನೀವು ಮಲೇಶಿಯಾದ ಎತ್ತೆಗೆಯನ್ನು ನೋಡಬಹುದು.
ಬಹುಪಾಲು ಕನ್ಸರ್ವೇಟಿವ್ ಮುಸ್ಲಿಂ ಇರುವ ಮಲೇಶಿಯಾದಲ್ಲಿ
ಪರ್ಶಿಯನ್/ಅರೇಬಿಕ್ ಲಿಪಿಯನ್ನು ಬಿಟ್ಟು ’ರೋಮನ್’ ಲಿಪಿಯನ್ನು ’ಮಲಯ್’ ಬಾಶೆಗೆ ಒಗ್ಗಿಸಲಾಗಿದೆ. ಇದರಿಂದ ಅಲ್ಲಿ ’ಬರಹಬಲ್ಲವರ’ ಎಣಿಕೆ ಹೆಚ್ಚಿದೆ.

ಮಲೇಶಿಯಾದಲ್ಲಿ ಆದುದು ನಮ್ಮಲ್ಲಿ ಏಕಾಗಬಾರದು ?

ಹೀಗೆ ಹಲವು ಎತ್ತುಗೆಗಳ ಪ್ರಪಂಚದ ಹಲವು ಕಡೆಯಿಂದ ಕೊಡಬಹುದು.

Sandeep Kambi ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಸಂದೀಪ್ ಹೇಳಿದರು...

ನಮ್ಮ ಲಿಪಿಯಲ್ಲಿರುವ ಹೊರೆಯನ್ನು ಕೆಳಗಿಳಿಸಲು ಬರಹದಲ್ಲಿ ಇರುವ ಎಲ್ಲ ಸಂಸ್ಕ್ರುತ ಪದರೂಪಗಳು ಮಾಯವಾಗುವ ವರೆಗೂ ಕಾಯಬೇಕಿಲ್ಲ. ಬರತ್ ಅವರು ಹೇಳಿದಂತೆ ಮಾತಿನಲ್ಲಿ ವಿಸರ್ಗವಾಗಲಿ, ಋಕಾರವಾಗಲಿ ಇಲ್ಲವೇ ಶ-ಷ ಕಾರಗಳ ಬೇರೆತನಗಳಾಗಲಿ ಇಲ್ಲ. ಇನ್ನು ಮಹಾಪ್ರಾಣಗಳು ಮರಾಠಿ / ಹಿಂದಿ ನುಡಿಗಳ ಪ್ರಬಾವದಿಂದ ಕೆಲವು ಒಳ ನುಡಿಗಳಲ್ಲಿ ಸ್ವಲ್ಪ ಮಟ್ಟಿಗೆ ಉಂಟಾದರೂ ಇವು ತೀರಾ ಕಡಿಮೆ. ಉಲಿಕೆಯಲ್ಲಿರದ ಇವುಗಳನ್ನು ಕಯ್ ಬಿಡುವುದೇ ಒಳ್ಳೆಯದು ಎಂಬುದು ನನ್ನ ಅನಿಸಿಕೆ ಕೂಡ

ಪ್ರಶಾಂತ ಸೊರಟೂರ ಹೇಳಿದರು...

ಭರತ್, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ನಿಮ್ಮ ಅನಿಸಿಕಗಳನ್ನು [ ] ದಲ್ಲಿ ಹಾಕಿ, ನನ್ನ ಅನಿಸಿಕೆಗಳನ್ನು ಮುಂದುವರೆಸಿದ್ದೇನೆ.
೧) [ಇಲ್ಲಿ ನೀವು ಎರಡು ವಿಚಾರಗಳನ್ನು ಬೆರಸಿದ್ದೀರ. ’ಲಿಪಿ ಸರಳಿಸುವಿಕೆ’ ನುಡಿಯರಿಮೆಯ ಆಳವಾದ ಓದಿನಿಂದ ಮುಂದೆ ಬಂದಿರುವ ವಿಚಾರ. ಇದನ್ನು ಬಳಕೆಗೆ ತರುವುದು ನುಡಿಯರಿಗರ ಕೆಲಸವಲ್ಲ...ಅದು ಆ ನುಡಿಯಾಡುವವರ ಕೆಲಸ. ಹಾಗಾಗಿ ಆ ನುಡಿಜನಾಂಗ ಅದು ಬೇಕು ಅಂದರೆ ಮಾಡಬಹುದು] --- ಇಲ್ಲಿ "ಕನ್ನಡತನದ" ಹಲವು ಕೊಂಡಿಗಳು ಬೆಸೆದುಕೊಂಡಿರುವುದರಿಂದ, ಹಲವನ್ನು ಬೆರೆಸದೇ ವಿಷಯವನ್ನು ಒಂಟಿಯಾಗಿ ನೋಡಲು ಆಗದು (ಕನ್ನಡಿಗರ ಬಾಳ್ವೆ,ನುಡಿಯರಿಗರ ಓದು, ಅದರ ಅಗತ್ಯ, ಇಂದಿನ ಪರಿಸ್ಥಿತಿ... ಹೀಗೆ ಹಲವಾರು ಕೊಂಡಿಗಳು). ಇಲ್ಲಿ ನುಡಿಜನಾಂಗಕ್ಕೆ/ಗವು ಬೇಕು-ಬೇಡ ಅಂತಾ ನಿರ್ಧರಿಸುವುದು ಹೇಗೆ? ಅದಕ್ಕೆ ಇಂತಹ ಈ ಚರ್ಚೆಗಳಲ್ಲವೇ.

೨) [ಇದಕ್ಕೆ ನೀವು ಮಲೇಶಿಯಾದ ಎತ್ತುಗೆಯನ್ನು ಕೊಡುತ್ತೆನಬಹುಪಾಲು ಕನ್ಸರ್ವೇಟಿವ್ ಮುಸ್ಲಿಂ ಇರುವ ಮಲೇಶಿಯಾದಲ್ಲಿ ಪರ್ಶಿಯನ್/ಅರೇಬಿಕ್ ಲಿಪಿಯನ್ನು ಬಿಟ್ಟು ’ರೋಮನ್’ ಲಿಪಿಯನ್ನು ’ಮಲಯ್’ ಬಾಶೆಗೆ ಒಗ್ಗಿಸಲಾಗಿದೆ. ಇದರಿಂದ ಅಲ್ಲಿ ’ಬರಹಬಲ್ಲವರ’ ಎಣಿಕೆ ಹೆಚ್ಚಿದೆ] ---
ದಯವಿಟ್ಟು ಕ್ಷಮಿಸಿ, ನಿಮ್ಮ ಆಶಯ ನನಗೆ ಇಲ್ಲಿ ಪೂರ್ತಿಯಾಗಿ ತಿಳಿಯಲಿಲ್ಲ. ಈಗಿನ ಬರವಣಿಗೆಯಿಂದ "ಮಹಾಪ್ರಾಣ"ಗಳನ್ನು ಬಿಡುವುದು ಒಳಿತು ಅನ್ನುವುದು ನಿಮ್ಮ ಅನಿಸಿಕೆಯೋ ಅಥವಾ ಇಂದಿನ ಇಡೀ ಕನ್ನಡದ ಲಿಪಿಯನ್ನು ಬಿಟ್ಟು ರೋಮನ್ (ಅದರಂತಹ) ಲಿಪಿಯನ್ನು ಬಳಸ ತೊಡಗುವುದೋ?
ರೋಮನ್ ಲಿಪಿಯನ್ನು ಬಳಸಿ ಮಲೇಶಿಯಾದಲ್ಲಿ "ಬರಹದರಿವು" ಹೆಚ್ಚಿಗೆ ಆಗಿರಬಹುದು ಆದರೆ ನಿಜವಾಗಿ ಆ ಜನಾಂಗವು ಹೊಸ-ಅರಿಮೆಗೆ/ಸಂಶೋಧನೆಗಳಿಗೆ ಹೆಸರುವಾಸಿಯಾಗಿದ್ದು ನಾನಂತೂ ಕೇಳಿಲ್ಲ.
ಅದೇ ಜಪಾನಿಗರು,ಚೀನಿಗರು ತಮ್ಮದೇ ಲಿಪಿ ಬಳಸಿ ಜಗದೆಲ್ಲೆಡೆ ಮಿಂಚುತ್ತಿಲ್ಲವೇ !

ಮುಖ್ಯವಾಗಿ ಈಗ ತೊಡಕಿರುವುದು ಕನ್ನಡ ಲಿಪಿಯಲ್ಲಿ ಅಲ್ಲವೇ ಅಲ್ಲ, ಅದೇನಿದ್ದರೂ ನಮ್ಮವರ ತಿಳುವಳಿಕೆಯಲ್ಲಿ, ಕನ್ನಡದ ಬಗೆಗಿನ ಕೀಳರಿಮೆಯಲ್ಲಿ, ಇಂಗ್ಲೀಷನಂತಹ ಭಾಷೆಗಳೆಡೆ ಅಗತ್ಯಕ್ಕಿಂತ ಹೆಚ್ಚಿಗೆ ಸೆಳೆತವಿರುವಲ್ಲಿ!
ಹಳ್ಳಿಯವರಿಗೆ "ಮಹಾಪ್ರಾಣ" ಉಲಿಯಲು ಆಗುವುದಿಲ್ಲ ಅನ್ನುವುದರಲ್ಲೇ ನನಗೆ ಪೂರ್ತಿ ನಂಬಿಕೆಯಿಲ್ಲ, ನಮ್ಮೂರ ಸುತ್ತ-ಮುತ್ತ ಪ್ರತಿದಿನದ "ಭಾರಿ ಛೋಲೋ ಇದ್ದೀ ಬಿಡು" ಅನ್ನುವ ಸಾಲುಗಳನ್ನು "ಬಾರಿ ಚೊಲೋ ಇದ್ದಿ ಬಿಡು" ಅಂತಾರೆ ಅಂತಾ ನನಗೆ ಯಾವತ್ತು ಕೇಳಿಸಿಲ್ಲ. ಆಡುನುಡಿಯಲ್ಲಿ "ಮಹಾಪ್ರಾಣ"ಗಳು ಕಡಿಮೆ ಇರಬಹುದೆನೋ ಆದರೇ ಇಲ್ಲವೇ ಇಲ್ಲ, ಅದಕ್ಕೆ ಅವನ್ನು ಬರವಣಿಗೆಯಲ್ಲಿ ಕೈಬಿಡಬೇಕು ಅನ್ನುವುದು ಅಷ್ಟು ಸರಿ ಅನಿಸೋಲ್ಲ.
(ನಾನು ಮೊದಲೇ ಹೇಳಿದಂತೆ, ಎಲ್ಲ ಕೊಂಡಿಗಳು ಬೆಸೆದುಕೊಂಡಿರುವುದರಿಂದ, ಇಲ್ಲಿ ಬರೀ ನುಡಿಯರಿಗರ ಅರಿಮೆಗಳ/ಅವರು ಓದಿನಿಂದ ಕಂಡುಕಂಡ ವಿಚಾರಗಳ ಬಗ್ಗೆ ಮಾತನಾಡುವುದು ಸಮಂಜಸವಲ್ಲವನಿಸುತ್ತದೆ)

.... ಒಟ್ಟಿನಲ್ಲಿ, ಕನ್ನಡದ ಈಗಿನ ಬರವಣಿಗೆಯನ್ನು ಮುಂದುವರೆಸಿಕೊಂಡು ಹೋಗಿ, ಹೆಚ್ಚೆಚ್ಚು ಅಚ್ಚ/ಸರಳ ಕನ್ನಡ ಪದಗಳನ್ನು ಬಳಸಿದರೇ ಹಳ್ಳಿಯವರು,ಪಟ್ಟಣದವರು,ಮಹಾನಗರದವರು ಎಲ್ಲರಿಗೂ ಒಪ್ಪುವ ಕನ್ನಡವಾಗಬಹುದು ಅನ್ನುವುದು ನನ್ನ ಅನಿಸಿಕೆ.

Unknown ಹೇಳಿದರು...

ಪ್ರಶಾಂತ್,
(ಅ) ಲಿಪಿ ಸರಳಿಸುವಿಕೆ ಬೇಕು/ಬೇಡ ..ಯಾವಾಗ ಮಾಡಬೇಕು ಎಂಬುದೇ ಬೇರೆ ಕೇಳ್ವಿ

(ಬ) ಲಿಪಿ ಸರಳಿಸುವಿಕೆ ಏಕೆ ಸರಿ ? ಇಲ್ಲವೆ ಏಕೆ ತಪ್ಪು ಎನ್ನುವುದೇ ಬೇರೆ ಕೇಳ್ವಿ...ಎರಡನ್ನು ಬೆರಸಿದರೆ ಗೊಂದಲವಾಗುತ್ತದೆ.

ಸದ್ಯಕ್ಕೆ ನಾನು (ಬ) ಬಗ್ಗೆ ಮಾತ್ರ ಮಾತನಾಡಲು ಬಯಸುತ್ತೇನೆ. ಲಿಪಿ ಸರಳಿಸುವಿಕೆಯೇ ಸರಿ ಎಂಬುದನ್ನನು ನಾನು ಬಲವಾಗಿ ನಂಬಿದ್ದೇನೆ. ಅದರಿಂದ ಆಗುವ ಒಳಿತಿನ ಬಗ್ಗೆ ನನ್ನ ಬ್ಲಾಗಿನಲ್ಲಿ ವಿವರಿಸಿದ್ದೇನೆ.

ಇನ್ನು ಮಲಯ್ ಎತ್ತುಗೆಯ ಬಗ್ಗೆ, ನಾನು ಮಲಯ್ ಮಾದರಿ ಅನುಸರಿಸಿ ರೋಮನ್ ಲಿಪಿ ಕನ್ನಡಕ್ಕೆ ತರಬೇಕೆಂದು ಹೇಳುತ್ತಿಲ್ಲ.. ನಾನು ಅದನ್ನ ಎತ್ತುಗೆಯಾಗಿ ಕೊಟ್ಟಿದ್ದು ಹೇಗೆ ಒಂದು ನುಡಿಜನಾಂಗ ಲಿಪಿ ಸರಳಿಸುವಿಕೆ/ಸುದಾರೆಣೆಗೆ ತೆರೆದುಕೊಂಡು ಏಳಿಗೆಯೆಡೆಗೆ ಹೋಗಿದೆ ಎಂಬುದನ್ನ ತಿಳಿಸಲು.
"ಇದರಿಂದ ಅಲ್ಲಿ ’ಬರಹಬಲ್ಲವರ’ ಎಣಿಕೆ ಹೆಚ್ಚಿದೆ" - ನಾನು ಬರೆದ ಈ ಸೊಲ್ಲು ತಮಗೆ ಅರ್ತವಾಗಿದೆ ಎಂದು ತಿಳಿದಿದ್ದೇನೆ. ಅಂದರೆ ಮಲೇಶಿಯದಲ್ಲಿ ಇದರಿಂದ ’ಸಾಕ್ಶರತೆ’ ಹೆಚ್ಚಿದೆ, ಲಿಪಿ ಸುದಾರಣೆ/ಬದಲಾವಣೆ ಯಿಂದ.

ಆದರೆ ಅಶ್ಟು ದೊಡ್ಡ ಮಟ್ಟದ ಬದಲಾವಣೆ ಕನ್ನಡಕ್ಕೆ ಬೇಕಾಗಿಲ್ಲ. ಈಗಿರುವ ಲಿಪಿಯನ್ನು ಹಾಗೆ ಉಳಿಸಿಕೊಂಡು ನಮಗೆ ಬೇಡದೇ ಇರುವ ಬರಿಗೆ/ಅಕ್ಶರಗಳನ್ನು ಬರಹದಲ್ಲಿ ಬಿಟ್ಟರೆ ಓದು-ಬರಹ ಹೆಚ್ಚು ಕನ್ನಡಿಗರಿಗೆ ಸುಲಬವಾಗುತ್ತದೆ. ಬರಹದಿಂದ ದೂರ ಉಳಿದವರನ್ನು ಇದರಿಂದ ಅದಕ್ಕೆ ಹತ್ತಿರ ತರಬಹುದು. ಇದರಿಂದ ಅವರ ಅರಿವನ್ನು/ಕಲಿಕೆಯನ್ನು ಹೆಚ್ಚಿಸಬಹುದು. ಇದೇ ಯಾವುದೇ ಜನಾಂಗಕ್ಕೆ ಬೇಕಾಗಿರುವುದು. ಕಲಿಕೆ ಅದರಿಂದ ದುಡಿಮೆ ಅದರಿಂದ ಏಳಿಗೆ.

ಇನ್ನು ಮಹಾಪ್ರಾಣದ ಬಗ್ಗೆ ಈಗಾಗಲೆ ನಾನು ಹೇಳಿರುವಂತೆ ****ಹೆಚ್ಚಿನ*** ಕನ್ನಡಿಗರಿಗೆ ಮಾಪ್ರಾಣ ಉಲಿಯಲು ಬರಲ್ಲ(ಅದರಿಂದ ಬರಹದಲ್ಲಿ ತೊಡಕು). ಹಾಗೆ ನೋಡಿದರೆ ಮಹಾಪ್ರಾಣ ಇರುವ ಒಂದೇ ಒಂದು ಕನ್ನಡ ***ಬೇರಿನ*** ಪದ ಇಲ್ಲ. ಇದ್ದರೆ ತಿಳಿಸಿ.

ಇದರಿಂದ ಹೆಚ್ಚಿನ ಕನ್ನಡಿಗರಿಗೆ ಒಳ್ಳೆಯದಾಗುವುದರಿಂದ ಕೆಲವು ಕನ್ನಡಿಗರು( ಇವರ ಎಣಿಕೆ ತೀರ ಕಡಿಮೆ) ಅದಕ್ಕೆ ಅಂದರೆ ಮಾಪ್ರಾಣ ಕೈ ಬಿಡುವುದುಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಅದೇ ಡೆಮಾಕ್ರಸಿಯ ಆಶಯ.

ಇನ್ನು ಷ, ಃ, ಞ್, ಙ್ ಇವುಗಳ ಬಗ್ಗೆ ನಿಮ್ಮ ತಕರಾರು ಏನಿಲ್ಲ ಅನ್ಕೊಂಡಿದ್ದೀನಿ.

ಶ ಮತ್ತು ಷ ನಡುವೆ ಉಲಿಕೆಯಲ್ಲಿರುವ ವೆತ್ಯಾಸವನ್ನು ನೀವು ಕ ನ್ನಡದಲ್ಲಿ ಎಮ್.ಎ ಮಾಡಿರುವವರನ್ನು ಕೇಳಿದರೂ ಅವರು ವಿವರಿಸಲಾರರು....ಆದರೆ ಇದು ಅವರ ತಪ್ಪಲ್ಲ. ಷ ದಿಟಕ್ಕೂ ಬೇಕಾಗಿಲ್ಲ.. ಹಳೆಗನ್ನಡದಲ್ಲೂ ಇದು ಇರಲಿಲ್ಲ. ಇದ್ದುದು ಬರೆ ’ಸ’ ಮಾತ್ರ.

m v srinivasa ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಪ್ರಶಾಂತ ಸೊರಟೂರ ಹೇಳಿದರು...

ಭರತ್,
*) "ಅನ್ವೇಷಣೆ"ಯನ್ನು, ಅನ್ವೇ(ಶ)ಸಣೆ ಅಂತಾ ಬಳಸುವ/ಬರೆಯುವ ಬದಲಾಗಿ "ಹುಡುಕು/ಹುಡುಕಾಟ"
*) "ಸಶೇಷ"ವನ್ನು "ಸಸೇಸ" ಬಳಸುವ/ಬರೆಯುವ ಬದಲಾಗಿ "ಇನ್ನೂ ಇದೆ/ಉಳಿದಿದೆ"
...... ಹೀಗೆ, ಕನ್ನಡ ಪದಗಳನ್ನು ಹೆಚ್ಚೆಚ್ಚು ಬಳಕೆ ಮಾಡಿದರೆ ಮಾತು/ಬರಹ ಎರಡರಿಂದ ಹೆಚ್ಚಿನ(?) ಕನ್ನಡಿಗರಿಗೆ ತೊಡಕಾಗಿರಬಹುದಾದ "ಮಹಾಪ್ರಾಣ"ಗಳು (ಒತ್ತುಲಿಗಳು) ತನ್ನ-ತಾನೇ ಕಡಿಮೆಯಾಗುವವು/ಮಾಯವಾಗುವವು.
ಕಡಿಮೆ ಬಳಸುವ ಬರಿಗೆಗಳನ್ನು ಬರವಣಿಗೆಯಿಂದ ಕೈಬಿಡುವ ಅಗತ್ಯವಿಲ್ಲ. ಇಂಗ್ಲೀಷನ್ನೂ ಸೇರಿಸಿ ಎಲ್ಲ ನುಡಿಗಳಲ್ಲಿ ಮಾತಿನಲ್ಲಿ ಕಡಿಮೆ ಬಳಕೆಯಲ್ಲಿರುವ ಬರಿಗೆಗಳನ್ನು ಬರಹದಿಂದ ಕೈಬಿಡುವುದಾಗಲಿ (X,Z..) ಅಥವಾ ಉಲಿಯುವಂತೆಯೇ ಬರೆಯುವುದಾಗಲಿ ಮಾಡೋಲ್ಲ. ಮಾತಿಗೂ ಮತ್ತು ಬರಹಕ್ಕೂ ವ್ಯತ್ಯಾಸ ಸಹಜ,ಅನಿವಾರ್ಯ. ಅವೆರಡಕ್ಕೂ ತನ್ನದೇ ಆದ ಗುರಿಗಳಿವೆ.
("ಮಾತು" ಆದಷ್ಟು ಉಲಿಯಲು ಸರಳವಾಗಬೇಕೆಂದುಕೊಂಡರೆ "ಬರಹ" ಬಗೆಯ-ಬಗೆಯ ಮಾತುಗಳಿಂದಾಗಿ ಆಗುವ ತೊಡಕನ್ನು ಕಡಿಮೆ ಮಾಡಲು ಒಂದೇ ತರನಾಗಿ ಇರಬೇಕೆಂದುಕೊಳ್ಳುತ್ತದೆ)
ಒಟ್ಟಿನಲ್ಲಿ, "ಶುದ್ಧ" ಕನ್ನಡವನ್ನು "ಸುದ್ದ" ಕನ್ನಡ ಮಾಡುವುದಕ್ಕಿಂತ "ಅಚ್ಚ" ಕನ್ನಡ ಮಾಡುವುದು ಸರಿಯಾದ ಹೆಜ್ಜೆ ಅನಿಸುತ್ತೆ.
.........ನಿಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಕ್ಕೆ ವಂದನೆಗಳು.

Unknown ಹೇಳಿದರು...

ಪ್ರಶಾಂತ್,
ನೀವು ಹೇಳುವುದೇ ಆದರೆ ಇನ್ನು ಚೆನ್ನ...
ಆದರೆ ಹಾಗೆ ಮಾಡಿದಾಗ ’purist' ಎಂಬ ಹಣೆಪಟ್ಟಿ ಕಟ್ಟುತ್ತಾರೆ. !!:(

ನನ್ನಿ,
ಬರತ್

ಪ್ರಶಾಂತ ಸೊರಟೂರ ಹೇಳಿದರು...

ಭರತ್,
"ಹಣೆಪಟ್ಟಿ" ಕಟ್ಟುವವರು ಕಟ್ಟಲಿಬಿಡಿ. ನಿಮ್ಮಂತೆ ಅಚ್ಚ/ಸರಳ ಕನ್ನಡ ಪದಗಳನ್ನು ಹುಟ್ಟುಹಾಕುವ ಕಸುವುಳ್ಳವರು ಕೆಲವು ಕನ್ನಡಿಗರಾದರೂ ಸಾಕು, ಹಣೆಪಟ್ಟಿ ಕಟ್ಟಿದವರೇ ಪಟ್ಟಿ ಬಿಚ್ಚುತ್ತಾರೆ ;-)
[ನೀವು ಬರವಣಿಗೆಯಲ್ಲಿ ಬಳಸಿದ/ಸುವ ಚೆನ್ನುಡಿಯ ಚೆಂದದ ಪದಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ನಾನು ಈ ಮಾತು ಹೇಳುತ್ತಿದ್ದೇನೆ]
ನಿಮ್ಮಂತೆ ಫೇಸಬುಕ್ ನಲ್ಲಿ ಸಿದ್ದರಾಜು ಬೋರೆಗೌಡ್ರು, ವಿವೇಕ್ ಶಂಕರ್.... ಅವರು ಬಳಸುವ ಕನ್ನಡ ಪದಗಳು ನನಗೆ ತುಂಬಾ ಇಷ್ಟ. [ಹೀಗೆ ಇನ್ನೂ ಹಲವಾರು ಕನ್ನಡಿಗರು ಇರಬಹುದು, ಹೆಸರಿಸದಿರುವುದು "ನನ್ನ" ಮಾಹಿತಿಯ ಕೊರತೆ ಅಷ್ಟೆ]
ಶ್ರೀ ಶಂಕರ ಭಟ್ ಅವರ "ಕನ್ನಡದ್ದೇ" ಪದಗಳ ಆಶಯ ನನಗೆ ಈ ಕಾರಣಕ್ಕೆ ತುಂಬಾ ಸೂಕ್ತವೆನಿಸುತ್ತೆ. ಅವರ "ಹೊಸಬರಹ" ನನಗೆ ಇಷ್ಟವಾಗದಿದ್ದರೂ ಅದರಾಚೆ ಅವರು ತೋರ್ಪಡಿಸುವ "ಕನ್ನಡದ್ದೇ" ಪದಬಳಕೆಯ ದಾರಿ ಅಹಾ ಎಷ್ಟೊಂದು ಸೊಗಸಲ್ಲವೇ. ಆಗ "ಹೊಸಬರಹ"ದ ಮಾತು ಮರೆತುಹೋಗಿ "ನುಡಿಯರಿಗರು", "ಭಾಷಾ ವಿಜ್ಞಾನಿಗಳಿಗಿಂತ" ನನಗೆ ಹೆಚ್ಚು ಹತ್ತಿರವಾಗುತ್ತಾರೆ :-)
"ಎಲ್ಲರ ಕನ್ನಡದ" (http://www.ellarakannada.org/ellarakannada.html) ಆಶಯವೂ ಇದೇ ಅನ್ಕೊಳ್ತಿನಿ.
ಈ ಮಿಂಬಲೆತಾಣದಿಂದ,
" ಕನ್ನಡವನಾಡುವ ಎಲ್ಲಾ ಜನರೂ ತಮ್ಮ ಬರಹಗಳಲ್ಲಿ ಬಳಸುವಂತಹ ಒಂದು ಒಳನುಡಿಯಿದೆ. ಅದೇ ಎಲ್ಲರಕನ್ನಡ.
ಎತ್ತುಗೆಗಾಗಿ, ಹುಬ್ಬಳ್ಳಿಯಿಂದ ಹೊರಬರುವ ಸಂಯುಕ್ತ ಕರ್ನಾಟಕದಲ್ಲಿ, ಬೆಂಗಳೂರಿನಿಂದ ಹೊರಬರುವ ಪ್ರಜಾವಾಣಿ ಇಲ್ಲವೇ ವಿಜಯಕರ್ನಾಟಕದಲ್ಲಿ, ಮತ್ತು ಉಡುಪಿಯಿಂದ ಹೊರಬರುವ ಉದಯವಾಣಿಯಲ್ಲಿ ಹೆಚ್ಚು ಕಡಿಮೆ ಒಂದೇ ಬಗೆಯ ಕನ್ನಡ ಬಳಕೆಯಾಗುತ್ತದೆ." "ಕರ್ನಾಟಕದಲ್ಲಿ ಎಲ್ಲರೂ ಓದಲು-ಬರೆಯಲು ಕಲಿಯುವ, ಮತ್ತು ತಮ್ಮ ಬರಹಗಳಲ್ಲಿ ಬಳಸಲು ಕಲಿಯುವ ಈ ಒಳನುಡಿಯನ್ನು ಇಲ್ಲಿ "ಎಲ್ಲರಕನ್ನಡ" ಎಂಬುದಾಗಿ ಹೆಸರಿಸಲಾಗಿದೆ"
---- ಬರಹ ಮತ್ತು ಮಾತಿನ ನಡುವೆ ಇರುವ ಸಹಜ ವ್ಯತ್ಯಾಸ, ಕನ್ನಡದ ಬಗೆ-ಬಗೆಯ ಒಳನುಡಿಗಳನ್ನು/ಪ್ರದೇಶಗಳನ್ನು/ಧರ್ಮಗಳನ್ನು/ಹಳ್ಳಿ-ಪಟ್ಟಣದವರನ್ನು ಬೆಸೆಯಲು "ಬರಹ" ರೂಪದ ಕನ್ನಡ ಒಂದೇ ಏಕೆ ಆಗಿರಬೇಕು ಎಂದು ಸರಿಯಾಗಿ ತಿಳಿದುಕೊಂಡವರಷ್ಟೇ ಈ ಮೇಲಿನ ಸಾಲುಗಳನ್ನು ಬರೆಯಲು ಸಾಧ್ಯ ! :-) ಅವರಿಗೆ/ಗುಂಪಿಗೆ ನನ್ನ ಧನ್ಯವಾದಗಳು.

m v srinivasa ಹೇಳಿದರು...

ಕನ್ನಡದ ಒತ್ತಕ್ಷರದ ಬಗ್ಗೆ ಮತ್ತು ಕನ್ನಡ ಲಿಪಿ ಸರಳೀಕರಣದ ಬಗ್ಗೆ ನನ್ನ ಲೇಖನಗಳನ್ನು ಓದಿ, ದಯವಿಟ್ಟು. ನಂತರ ನಿಮ್ಮ ಅನಿಸಿಕೆಯನ್ನು ನನ್ನಗೆ ತಿಳಿಸಬಹುದೇ?
mvsrinivasa.wordpress.com
mvsrinivasa.blogspot.com

ನಿಮ್ಮ ಉತ್ತರದ ನಿರೀಕ್ಷೆಯಲ್ಲಿ - ಮಿ.ವೆಂ. ಶ್ರೀನಿವಾಸ