ಗುರುವಾರ, ನವೆಂಬರ್ 15, 2018

ಸರಿತಪ್ಪರಿಮೆ

ನಮ್ಮ ಸುತ್ತ ಆಗುತ್ತಿರುವ ಆಗುಹಗಳು, ವಾದಗಳು, ವಿವಾದಗಳು ಮತ್ತು ಸರಿ/ತಪ್ಪುಗಳ ಬಗ್ಗೆ ಮಂದಿಯ ಮಾತುಕತೆಗಳನ್ನು ನೋಡಿದರೆ ನನಗೆ ಹೀಗನ್ನಿಸುತ್ತಿದೆ:-

ಎಲ್ಲ ಕೂಡಣಗಳಲ್ಲೂ/ಬುಡಕಟ್ಟುಗಳಲ್ಲೂ ತನ್ನಿಂತಾನೆ ಅರಿವಿಲ್ಲದೆಯೆ ಸರಿತಪ್ಪರಿಮೆ (ಮೊರಾಲಿಟಿ) ಬೆಳೆದು ಬಂದಿರುತ್ತದೆ. ಅಂದರೆ ಮನುಶ್ಯ ಬೇರೆ ಬೇರೆ ಸಂದರ್ಬಗಳಿಗೆ ಒಡ್ಡಿಕೊಂಡಾಗ ಬೇರೆ ಬೇರೆ ತೆರನಾದ ಕಲಿಕೆಗಳು ಅವಳಿಗೆ/ಅವನಿಗೆ ಆಗಿರುತ್ತದೆ. ಈ ಎಲ್ಲ ಕಲಿಕೆಯಿಂದ ಸರಿತಪ್ಪರಿಮೆ ತನ್ನನ್ನು ತಿದ್ದಿಕೊಳ್ಳುತ್ತಾ ಬೆಳೆದು ಬಂದಿದೆ.

ಆದರೆ ೨೦ನೇ ನೂರೇಡಿನಲ್ಲಿ ಪ್ರಪಂಚದ ಮಟ್ಟದಲ್ಲಿ ಹಲವು ದೊಡ್ಡ ದೊಡ್ಡ ಕಾದಾಟಗಳಾಗಿ ತುಂಬ ಸಾವು ನೋವು ಉಂಟಾದವು. ಹಿಂದೆಂದು ಕಂಡರಿಯದ ಅಂಡಲೆಯನ್ನು (ಹಿಂಸೆಯನ್ನು) ಎಸಗಲಾಯಿತು. ಈ ಪಾಡಿನಿಂದ ಹೊರಬರಲು ಹಲವು ಚಿಂತಕರು ಪ್ರಪಂಚದ ಮಟ್ಟದಲ್ಲಿ (ಎಂದೂ ಬದಲಾಗದ) ಸರಿತಪ್ಪರಿಮೆ ಎಂಬುದು ಇದೆಯೇ ಎಂದು ಯೋಚಿಸಲು ತೊಡಗಿದರು.

ಆಗ ಹುಟ್ಟಿಕೊಂಡಿದ್ದೇ ಇಲ್ಲವೆ ಮುನ್ನೆಲೆಗೆ ಬಂದಿದ್ದೆ ಲಿಬರಲ್ ಚಿಂತನೆ. ಅಂದರೆ ವ್ಯಕ್ತಿಯ ಮಟ್ಟದ ಗನತೆ ಮತ್ತು ವ್ಯಕ್ತಿಯ ಮಟ್ಟದ ಸ್ವಾತಂತ್ರ್ಯ ಕ್ಕೆ ಹೆಚ್ಚಿನ ಮನ್ನಣೆ ಕೊಡುವುದು. ಇವುಗಳು ಎಲ್ಲ ಹೊತ್ತಿಗೂ ಸಲ್ಲುವ ಬೆಲೆಗಳು(ಮೌಲ್ಯಗಳು) ಎಂಬುದು ಈ ಚಿಂತನೆಯ ಹುರುಳು. ಈ ಚಿಂತನೆಯ ಗುರಿ ಅಂಡಲೆಯನ್ನು ಇಲ್ಲವಾಗಿಸಸುವುದು. ಇದನ್ನು ಎತ್ತಿಹಿಡಿಯುವ ಏರ್ಪಾಟು ಇದ್ದರೆ ಇನ್ನು ಚೆಂದವೆಂದೂ ಹೆಚ್ಚಿನ ನಾಡುಗಳು ಇಂತಹ ಬೆಲೆಗಳ ಅಡಿಪಾಯ ಹಾಕಿಕೊಂಡು ಸಯ್ಪು ಬರಹವನ್ನು ( ಸಂವಿದಾನ) ಮಾಡಿಕೊಂಡವು. ಆದ್ದರಿಂದ ಇಂತಹ ಒಂದು ಸರಿತಪ್ಪರಿಮೆಯನ್ನು ಲಿಬರಲ್ ಸರಿತಪ್ಪರಿಮೆ/ಸಯ್ಪುಬರಹದ ಸರಿತಪ್ಪರಿಮೆ ಎಂದು ಮುಂದೆ ಬೆಳೆಸಲಾಯಿತು.

ಇಲ್ಲಿ ಗಮನಿಸಬೇಕಾದುದು, ಲಿಬರಲ್ ಸರಿತಪ್ಪರಿಮೆ ಎಂಬುದು ಕ್ರುತಕವಾದುದು. ಅದು ಹುಟ್ಟುವುದಕ್ಕೆ ಮುಂಚೆಯೇ ಕೂಡಣಗಳಲ್ಲಿ 'ಮಂದಿಯ ಸರಿತಪ್ಪರಿಮೆ' ಎಂಬುದು ಬೆಳೆದು ಬಂದಿತ್ತು. ಅಲ್ಲದೆ ಮಂದಿಯ ಸರಿತಪ್ಪರಿಮೆ ಎಂಬುದು ಸಹಜವಾಗಿ ಬೆಳೆದು ಬಂದಿದೆ.

ಇದರಲ್ಲಿ ಕ್ರುತಕ ಎಂದ ಕೂಡಲೆ ಲಿಬರಲ್ ಸರಿತಪ್ಪರಿಮೆಯನ್ನು ಅಲ್ಲಗಳೆಯುವಂತಿಲ್ಲ ಮತ್ತು ಸಹಜ ಎಂದ ಕೂಡಲೆ ಮಂದಿಯ ಸರಿತಪ್ಪರಿಮೆಯನ್ನು ಹೊಗಳಬೇಕಾಗಿಲ್ಲ. ಇವೆರಡಕ್ಕೂ ತಮ್ಮ ತಮ್ಮದೇ ಆದ ಪರಿಚೆಗಳಿವೆ. ತಮ್ಮ ತಮ್ಮ ಹೆಗ್ಗಳಿಕೆ ಮತ್ತು ಮಿತಿಗಳೂ ಇವೆ.

ಆದರೆ ಈಗ ತೊಂದರೆಯಾಗಿರುವುದು ಹೆಚ್ಚಿನೆಡೆಗಳಲ್ಲಿ ಮಂದಿಯ ಸರಿತಪ್ಪರಿಮೆಗೂ ಮತ್ತು ಲಿಬರಲ್ ಸರಿತಪ್ಪರಿಮೆಗೂ ತಿಕ್ಕಾಟ ಶುರುವಾಗಿದೆ. ಎರಡೂ ಸರಿತಪ್ಪರಿಮೆಗಳು 'ತಾನು ಮೇಲು' ಎಂದು ಮೇಲಾಟಕ್ಕೆ ಇಳಿದಂತೆ ಕಂಡುಬರುತ್ತಿದೆ. ಈ ಮೇಲಾಟದಿಂದ ಮಂದಿಯು ಗೊಂದಲಕ್ಕೆ ಒಳಗಾದಂತೆ ಕಂಡುಬರುತ್ತಿದ್ದಾರೆ.

ಮಂಗಳವಾರ, ನವೆಂಬರ್ 06, 2018

ವಿವಿದತೆ ಎಂದರೇನು? ಅದರ ಓದಿನಿಂದ ಆಗುವ ಬಳಕೆಗಳೇನು?

ವಿವಿದತೆ ಎಂದರೇನು? ಅದರ ಓದಿನಿಂದ ಆಗುವ ಬಳಕೆಗಳೇನು?
=======================================
ಬಾರತ ಎಂಬುದು ತುಂಬ ವಿವಿದತೆಯಿಂದ ಕೂಡಿದ ನೆಲ ಇಲ್ಲವೆ ಬೂಬಾಗ. ಈ ನೆಲದ ಮಟ್ಟದಲ್ಲೇ ಹಲವು ವಿವಿದತೆಗಳನ್ನು ನಾವು ಕಾಣಬಹುದು. ಹಿಮಾಲಯದ ಮಂಜಿನಿಂದ ಕನ್ಯಾಕುಮಾರಿಯ ಕಡಲ್ಕರೆಯವರೆಗೂ ಬೂವಿವಿದತೆ, ಪ್ರಾಣಿಗಳಲ್ಲಿ ವಿವಿದತೆ, ಮನುಶ್ಯರ ಮಯ್ಯಲ್ಲಿ ವಿವಿದತೆ, ನಡೆ-ನುಡಿಯಲ್ಲಿ ವಿವಿದತೆ, ತಿಂಡಿ-ತಿನುಸುಗಳಲ್ಲಿ ವಿವಿದತೆ, ಬಣ್ಣಗಳಲ್ಲಿ ವಿವಿದತೆ, ಆಚರಣೆಗಳಲ್ಲಿ ವಿವಿದತೆ, ನಂಬಿಕೆಗಳಲ್ಲಿ ವಿವಿದತೆ, ಬೆಳೆ/ಮಳೆಗಳಲ್ಲಿ ವಿವಿದತೆ, ಗಿಡ-ಮರಗಳ ವಿವಿದತೆ. ಇವೆಲ್ಲ ಹೊರಗೆ ಕಾಣುವ ವಿವಿದತೆಗಳು. ಇದಲ್ಲದೆ ಒಳಗಿನ ವಿವಿದತೆಗಳು ಅಂದರೆ ಚಿಂತನೆಗಳು ಕೂಡ ಇವೆ. ಬೇರೆ ಬೇರೆ ಸಂಪ್ರದಾಯಗಳು, ತತ್ವ ಶಾಸ್ತ್ರದ ಕವಲುಗಳು ಮತ್ತು ಅರಿವನ್ನು ಗಳಿಸುವ ಬೇರೆ ಬೇರೆ ದಾರಿಗಳು, ಬೇರೆ ಬೇರೆ ನೋಟಗಳು. ಹೀಗೆ ವಿವಿದತೆಯೇ ಮಯ್ವೆತ್ತಂತೆ ಈ ಬೂಬಾಗ ಇಲ್ಲವೆ ಜನಪದಗಳು(ಜನಪದ ಅಂದರೆ ಜನ ಮತ್ತು ಅವರು ಓಡಾಡುವ ಎಡೆ) ಕಂಡು ಬರುತ್ತದೆ. ಈ ವಿವಿದತೆಯು ಎಶ್ಟೊ ಕಡೆಗೆ ವೈರುದ್ಯತೆಗೂ ಎಡೆ ಮಾಡಿಕೊಡುತ್ತದೆ. ಅಂದರೆ ಕೆಲವು ಕಡೆ ಯಾವುದು ಒಪ್ಪಿತವೊ ಇನ್ನು ಕೆಲವು ಕಡೆ ಅದು ಒಪ್ಪಿತವಾಗುವುದಿಲ್ಲ.

ಹೀಗಿರುವಾಗ ಇಡೀ ಬಾರತಕ್ಕೆ ಕಾಮನ್ ಆಗಿರುವ ಯಾವುದಾದರೂ ಒಂದು ಅಂಶ ಇದೆಯೇ ಎಂಬ ಕೇಳ್ವಿ ಕೇಳಿಕೊಂಡರೆ ಅದಕ್ಕೆ ಉತ್ತರಿಸುವುದು ತುಂಬ ಕಶ್ಟವಾದ ಕೆಲಸ. ಯಾವುದಾದರೂ ಒಂದು ವಿಶಯವನ್ನು ತೆಗೆದುಕೊಂಡು ಇದು ಬಾರತಕ್ಕೆಲ್ಲ ಕಾಮನ್ ಎಂದೊಡನೆ ಅದನ್ನು ಯಾವುದಾದರೂ ಎತ್ತುಗೆ ಕೊಟ್ಟು ಅಲ್ಲಗಳೆಯಬಹುದು. ಆದರೆ ಕೆಲವು ವಿಶಯಗಳು ಬಾರತದ ಮಟ್ಟದಲ್ಲದೆ ವಿಶ್ವದ ಮಟ್ಟದಲ್ಲೂ ಕಾಮನ್ ಆಗಿರುವ ಅಂಶಗಳು ಇವೆ. ಅಂದರೆ ಮನುಶ್ಯರಿಗೆ ಇರುವುದು ಎರಡು ಕಯ್, ಎರಡು ಕಾಲು ಮತ್ತು ಒಂದು ಮೂಗು. -ಹೀಗೆ. ಆದರೆ ಇಂತಹ ಪ್ರಶ್ನೆಗಳಿಂದ ಪ್ರಪಂಚದಲ್ಲಿರುವ ಬೇರೆ ಬೇರೆ ವಿಶೇಶತೆಗಳೇನು ಎಂಬುದು ನಮಗೆ ತಿಳಿಯುವುದಿಲ್ಲ. ವಿಶೇಶತೆಗಳನ್ನು ತಿಳಿಯದಿರುವುದು ಅಂದರೇನು? ಪ್ರಪಂಚವನ್ನು ಇನ್ನು ಸರಿಯಾಗಿ ಇಲ್ಲವೆ ಆಳವಾಗಿ ತಿಳಿದುಕೊಂಡಿಲ್ಲ ಎಂಬುದೇ ಆಗಿದೆ.

ಎತ್ತುಗೆಗೆ, ಕನ್ನಡ ನುಡಿಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾದರೆ ಅದು ಹೇಗೆ ಹಿಂದಿ ಇಲ್ಲವೆ ತಮಿಳಿಗಿಂತ ಬೇರೆಯಾಗಿದೆ ಎಂಬುದೇ ಆಗಿದೆ. ಆದರೆ ಕನ್ನಡ ಮತ್ತು ತಮಿಳಿನಲ್ಲಿ ಹಲವು ಕಾಮನ್ ಎನಿಸಬಹುದಾದ ಹೋಲಿಕೆಗಳಿವೆ. ಆದರೆ ಇಂತಹ ಹೋಲಿಕೆಯಿಂದ ಕನ್ನಡದ ಇಲ್ಲವೆ ತಮಿಳಿನ ಅನನ್ಯತೆಯನ್ನು ಎತ್ತಿ ಹಿಡಿಯಲಾಗುವುದಿಲ್ಲ. ಇನ್ನು ತಿಳಿಯಾಗಿ ಹೇಳಬೇಕೆಂದರೆ ವಿವಿದತೆಯನ್ನು ಅರಿಯದೆ ಅನನ್ಯತೆಯನ್ನು ತಿಳಿಯಲು ಸಾದ್ಯವೇ ಇಲ್ಲ. ಇದನ್ನೇ ಪ್ರಾಣಿಗಳ ವಿಶಯದಲ್ಲೂ ಹೇಳಬಹುದು. ಹುಲಿ ಬೆಕ್ಕಿಗಿಂತ ಹೇಗೆ ಬೇರಾಗಿದೆ ಎಂಬುದನ್ನು ಆಳವಾಗಿ ಅರಿತುಕೊಂಡಾಗ ಹುಲಿಯ/ ಬೆಕ್ಕಿನ ಅನನ್ಯತೆಯನ್ನು ಸರಿಯಾಗಿ ತಿಳಿದುಕೊಳ್ಳಬಹುದು.

ಅನನ್ಯತೆಯನ್ನು ತಿಳಿದುಕೊಳ್ಳುವ ಗುರಿಯೇನು ಮತ್ತು ಅದರಿಂದಾಗುವ ಬಳಕೆಗಳೇನು ಎಂಬ ಕೇಳ್ವಿ ತಾನಾಗಿಯೇ ಮೂಡುತ್ತದೆ. ನಮ್ಮ ಸುತ್ತಲೂ ಇರುವ ಹಲವು ತೊಂದರೆಗಳಿಗೆ ನಾವು ಬಗೆಹರಿಕೆಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಯಾವುದೇ ವಿಶಯವಾಗಲಿ ಗೊಂದಲವಿಲ್ಲದ ರೀತಿಯಲ್ಲಿ ತಿಳಿದುಕೊಳ್ಳಬೇಕು ಎಂದರೆ ಆ ವಿಶಯದ ಇಲ್ಲವೆ ತೊಂದರೆಯ ಅನನ್ಯತೆಯನ್ನು ತಿಳಿದುಕೊಳ್ಳುವುದೇ ಆಗಿದೆ. ಯಾವುದೇ ತೊಂದರೆಗೆ ಬಗೆಹರಿಕೆಗಳನ್ನು ಕಂಡುಕೊಳ್ಳುವುದಕ್ಕೆ ಅಡಿಪಾಯ ಆ ತೊಂದರೆಯ ಸ್ವರೂಪವೇನು ಎಂಬುದೇ ಆಗಿದೆ. ಇಲ್ಲವೆ ಆ ತೊಂದರೆಗೆ ಸಂಬಂದಪಟ್ಟ ವಿಶಯಗಳ ಸ್ವರೂಪವೇನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗೆ ಅನನ್ಯತೆಯನ್ನು ತಿಳಿದುಕೊಳ್ಳದೆ ಕಂಡುಕೊಂಡ ಬಗೆಹರಿಕೆಗಳು ದಾರಿ ತಪ್ಪಿಸುತ್ತವೆಯೇ ಹೊರತು ಸರಿಯಾದ ದಿಕ್ಕಿನತ್ತ ನಮ್ಮನ್ನು ಕೊಂಡೊಯ್ಯುವುದಿಲ್ಲ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ ಎಲ್ಲೆಲ್ಲಿ ವಿವಿದತೆಯನ್ನು ಸರಿಯಾಗಿ ಅರಿತುಕೊಳ್ಳದೆ ಆಳ್ವಿಕೆಗಳು ಒತ್ತಾಯಪೂರ್ವಕವಾಗಿ ಏಕತೆಯನ್ನು ಹೇರಲು ಹೊರಟಿದ್ದರೊ ಅಲ್ಲೆಲ್ಲ ಅಂತಹ ಮೊಗಸು ಅಂಡಲೆ(ಹಿಂಸೆ)ಯಲ್ಲಿ ಕೊನೆಗೊಂಡಿದೆ. ಕೊನೆಗೆ ಅದು ತಿರುಗುಬಾಣವಾಗಿ ಅಂತಹ ಆಳ್ವಿಕೆಗಳನ್ನು ಕೊನೆಗಾಣಿಸಲಾಗಿದೆ.
ಆದ್ದರಿಂದ ವಿವಿದತೆಯನ್ನು ಅರಿಯುವುದು ಮತ್ತು ನಮ್ಮ ತೊಂದರೆಗಳಿಗೆ ವಿವಿದತೆಯ ಚೌಕಟ್ಟಿನಲ್ಲಿ ಬಗೆಹರಿಕೆಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು.

ಶುಕ್ರವಾರ, ಆಗಸ್ಟ್ 17, 2018

ಹೊಸಗಾಲದ ಸೂಳ್ನುಡಿಗಳು ಬೆಡಗು-ಬೆರಗು-ಬಯಲು - ಈ ಹೊತ್ತಗೆಯ ಬಗ್ಗೆ ಒಂದು ಮಾತುಕತೆ


ಬಿಡಿ-೧
ಹೊತ್ತಗೆಯ ಬಗ್ಗೆ ಕಿರು ಪರಿಚಯ, ಸೂಳ್ನುಡಿ ಎಂದರೇನು? ಅದು ಹೇಗೆ ಬೆಳೆದು ಬಂತು ? ಸೂಳ್ನುಡಿಗಳ ಮೂಲಕ ಬರಹಗಾರ ಏನನ್ನು ಹೇಳಲು ಹೊರಟಿದ್ದಾನೆ? ಅನುಬಾವ ಎಂದರೇನು? ಅನುಬವಕ್ಕಿಂತ ಅದು ಹೇಗೆ ಬೇರೆಯಾಗಿದೆ? - ಇವುಗಳು ಈ ಮಾತುಕತೆಯಲ್ಲಿ ಬಂದವು.




ಬಿಡಿ-೨
ಅಲ್ಲಮ ಮತ್ತು ಬಸವಣ್ಣನವರ ಕೆಲವು ಸೂಳ್ನುಡಿಗಳು, ಅಚ್ಚಗನ್ನಡ ಎಂದರೇನು? ಹೆಚ್ಚು ಹೆಚ್ಚು ಕನ್ನಡದ್ದೇ ಪದಗಳನ್ನು ಬಳಸಿರುವುದು ಏತಕ್ಕೆ?



ಶನಿವಾರ, ಏಪ್ರಿಲ್ 28, 2018

ಪಂಪ, ಆಂಡಯ್ಯ, ಬಸವಣ್ಣ ಮತ್ತು ಮಂಟೇಸ್ವಾಮಿ

ಪಂಪ, ಆಂಡಯ್ಯ, ಬಸವಣ್ಣ ಮತ್ತು ಮಂಟೇಸ್ವಾಮಿಯವರ #ಮಾದರಿ ಗಳನ್ನು ನಾನು ಈ ತೆರನಾಗಿ ಅರಿತುಕೊಂಡಿದ್ದೇನೆ.
ಪಂಪ - ದೇಸಿಯನ್ನು ಮಾರ್ಗಕ್ಕೆ ಒಗ್ಗಿಸುವುದು. ಪಂಪ ಎಶ್ಟು ಕನ್ನಡದ್ದೇ ಪದಗಳನ್ನು ಬಳಸುತ್ತಾನೊ ಅಶ್ಟೆ ತೊಡಕಾದ ಸಂಸ್ಕ್ರುತ ಪದಗಳನ್ನು ಬಳಸುತ್ತಾನೆ. ಇದು ಪಂಪನ ಹೊತ್ತನ್ನು ತೋರುತ್ತದೆ. ಕನ್ನಡವನ್ನು 'ಮಾರ್ಗ'ದ ಮಾದರಿಯ ಕಬ್ಬಗಳಿಗೆ ಹೊಂದಿಸುತ್ತಿದ್ದ ಹೊತ್ತದು.
ಆಂಡಯ್ಯ- ಕಡು ದೇಸಿಯನ್ನು ಮಾರ್ಗಕ್ಕೆ ಒಗ್ಗಿಸುವುದು. ಅಂದರೆ ಬರೀ ಕನ್ನಡದ್ದೇ ಆದ ಇಲ್ಲವೆ ತದ್ಬವಗಳನ್ನು ಪದಗಳನ್ನು ಬಳಸಿ 'ಮಾರ್ಗ'ದ ಮಾದರಿಯ ಕಬ್ಬಗಳಿಗೆ ಹೊಂದಿಸುವುದು. ಅಂದಿನ ಕಬ್ಬಿಗರು ಕನ್ನಡದ ಕಬ್ಬಗಳಲ್ಲಿ ತತ್ಸಮಗಳನ್ನು ಹೆಚ್ಚಾಗಿಯೇ ಬಳಸುತ್ತಿದ್ದುದರ ಇದಿರು ಸಿಡಿದೆದ್ದು 'ಕಬ್ಬಿಗರ ಕಾವನ್' ನೆಗಳಿದನು.
ಬಸವಣ್ಣ - ಬಸವಣ್ಣ ಇಲ್ಲವೆ ಶರಣರು ಒಂದು ಹೊಸ ದಾರಿಯನ್ನು ಹುಟ್ಟು ಹಾಕಿದರು. ಅಂದರೆ ದೇಸಿಯನ್ನು ಮಾರ್ಗಕ್ಕೆ ಹೊಂದಿಸದೆ' ದೇಸಿಯನ್ನೇ ಮಾರ್ಗ'ವನ್ನಾಗಿ ಮಾಡುವ ಮೊಗಸು ಅದು. ಅಂದರೆ 'ಮಾರ್ಗ' ಮಾದರಿಯ ಕಬ್ಬಗಳನ್ನು ಬದಿಗೆ ತಳ್ಳಿ ಕನ್ನಡದ್ದೇ ಮಾದರಿಯ ಸೂಳ್ನುಡಿಗಳನ್ನು ಅದರಲ್ಲೂ ಸಾಮಾನ್ಯ ಮಂದಿಯೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು.
ಮಂಟೇಸ್ವಾಮಿ - ಮೇಲೆ ತಿಳಿಸಿದ ಮಾದರಿಗಳಿಗಿಂತ ಮಂಟೇಸ್ವಾಮಿಯ ಮಾದರಿ ಬೇರೆಯಾಗಿದೆ. ಅದೇನೆಂದರೆ ಇಲ್ಲಿ 'ಮಾರ್ಗ'ವೇ ಇಲ್ಲ. ಇರುವುದೆಲ್ಲ ದೇಸಿ. ಅಂದರೆ 'ಬರಿಗೆತನ'ದ ಸೋಂಕು ಇದರಲ್ಲಿಲ್ಲ. ಇರುವುದೆಲ್ಲ ಬಾಯ್ತನದ ಕಟ್ಟಣೆಗಳೇ. ಒಂದು ತೆರನಾಗಿ 'ಮಾರ್ಗ'ವನ್ನು ಕಡೆಗಣಿಸಿ/ದಿಕ್ಕರಿಸಿದ ಮಾದರಿ ಇದು ಎಂದು ಹೇಳಬಹುದು. ಬಸವಣ್ಣನ ಹಾಗೆ ಪಾರ್ಮಲ್ ಆದ ಅನುಬವ ಮಂಟಪವನ್ನು ಮಂಟೇಸ್ವಾಮಿ ಕಟ್ಟಲಿಲ್ಲ.
ಇಲ್ಲಿ ಒಂದು ಮಾದರಿಯನ್ನು ಇನ್ನೊಂದು ಮಾದರಿಗೆ ಹೋಲಿಸ ಹೋಗಬಾರದು. ಯಾಕಂದರೆ ಇವೆರೆಲ್ಲರೂ ಕನ್ನಡದ ಹಿನ್ನಡವಳಿಯಲ್ಲಿ ಬೇರೆ ಬೇರೆ ಹೊತ್ತಿನಲ್ಲಿ ಬಂದವರು. ಆಯ ಹೊತ್ತಿಗೆ ತಕ್ಕಂತೆ ತಮ್ಮ ತಮ್ಮ ಕೆಲಸಗಳನ್ನು ಮಾಡಿದರು. ಇವರೆಲ್ಲರ ಕೊಡುಗೆಯಿಂದಲೇ ಕನ್ನಡವು ಇಂದು ಉಳಿದಿರುವುದು ಮತ್ತು ಹುರುಪು ತುಂಬುತ್ತಿರುವುದು.

ಗುರುವಾರ, ಏಪ್ರಿಲ್ 12, 2018

ಓಡುತಿಟ್ಟ(ಸಿನಿಮ) ಎಂದರೇನು? ಅದರ ಗುರಿ ಮತ್ತು ಪರಿಚೆಗಳೇನು?

ಓಡುತಿಟ್ಟ(ಸಿನಿಮ) ಎಂದರೇನು? ಅದರ ಗುರಿ ಮತ್ತು ಪರಿಚೆಗಳೇನು?
ನಮ್ಮಲ್ಲಿ 'ಸಿನಿಮ', 'ಮೂವಿ' ಮತ್ತು 'ಚಲನಚಿತ್ರ' ಎಂಬ ಪದಗಳು ಬಳಕೆಯಲ್ಲಿವೆ. ಇಶ್ಟು ದಿನವೂ ನಾನು ಅದನ್ನು ಹಾಗೆ ಬಳಸುತ್ತಿದ್ದೆ. ಆದರೆ ಆ ಪದಗಳಿಂದನೇ ಏನೊ ಅದು 'ಏನು' ಎಂಬ ಕೇಳ್ವಿಯೇ ನನ್ನಲ್ಲಿ ಮೂಡಿರಲಿಲ್ಲ. ಆದರೆ ಇತ್ತೀಚೆಗೆ ನಾನು 'ಓಡುತಿಟ್ಟ' ಎಂಬ ಪದವನ್ನು ಹೆಚ್ಚಾಗಿ ಬಳಸಲು ತೊಡಗಿದ್ದೇನೆ. ಈಗ 'ಓಡುತಿಟ್ಟ' ಎಂಬ ಪದದ ಮೂಲಕ ಅದು ಏನು ಎಂಬುದನ್ನು ಅರಿತುಕೊಳ್ಳಲು ಮೊಗಸುತ್ತಿದ್ದೇನೆ ಅಲ್ಲದೆ ಆದರ ಬಗ್ಗೆ ಕೇಳ್ವಿಗಳು ಮೂಡುತ್ತಿವೆ.
ಅಡಿಮಟ್ಟದಲ್ಲಿ ಸಿನಿಮಾ ಅಂದರೆ 'ಓಡುತ್ತಿರುವ ತಿಟ್ಟಗಳೇ'. ಬರೀ ಓಡುತ್ತಿರುವ ತಿಟ್ಟಗಳೇ?..ಅಲ್ಲ. ಓಡುತ್ತಿರುವ ತಿಟ್ಟಗಳ ಮೂಲಕ ಒಂದು ಕತೆ ಹೇಳುವುದು. ಇದೇ ಓಡುತಿಟ್ಟದ ಗುರಿ ಇಲ್ಲವೆ ಪರಿಚೆ. ಮೊದಮೊದಲು ಓಡುತಿಟ್ಟಗಳಲ್ಲಿ ಮಾತು ಇರಲಿಲ್ಲ. ಓಡುತಿಟ್ಟಗಳಿಗೆ ಆಮೇಲೆ ಮಾತನ್ನು ಹೊಂದಿಸಲಾಯಿತು. ಹಾಗಾಗಿ, ಓಡುತಿಟ್ಟದ ಬೆಳವಣಿಗೆ ಮಗುವಿನ ಹಾಗೆ ಆಗಿದೆ. ಅಂದರೆ ಪ್ರಪಂಚಕ್ಕೆ ಬಂದ ಕೂಡಲೆ ಮಗು ನೋಡುವುದನ್ನು (ಕಣ್ಣು ಬಿಡುವುದನ್ನು - ತಿಟ್ಟ) ಕಲಿಯುತ್ತದೆ, ಆಮೇಲೆ ಮಾತನ್ನು ಕಲಿಯುತ್ತದೆ.
ಓಡುತಿಟ್ಟಗಳಲ್ಲಿ ತಿಟ್ಟಗಳ ಮೂಲಕ ಯಾವುದೊ ಒಂದು ಸಯ್ಪು(ಮೌಲ್ಯ)ಗಳನ್ನು ನೋಡುಗನಿಗೆ ದಾಟಿಸುವುದು ಆ ಓಡುತಿಟ್ಟದ ಮಾಡುಗನ ಕೆಲಸ. ಅದು ತಿಟ್ಟದಲ್ಲಿ ಬಳಸಲಾಗಿರುವ ಬಣ್ಣ ಇಲ್ಲವೆ ವಸ್ತುಗಳಾಗಿರಬಹುದು. ಅಂದರೆ ಆ ತಿಟ್ಟಕ್ಕೆ ಮೀರಿದ ಹುರುಳನ್ನು ಅದಕ್ಕೆ ಕೊಡುವುದರ ಮೂಲಕ ನೋಡುಗನ ತಿಳಿವನ್ನು ಕೆಣಕುವುದು ಇಲ್ಲಿ ಓಡುತಿಟ್ಟ ಮಾಡುಗನ ಕೆಲಸ. ಹಾಗಾಗಿ ಓಡುತಿಟ್ಟವು ಹೆಚ್ಚಾಗಿ 'ತಿಟ್ಟ'ವನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಓಡುತಿಟ್ಟದಲ್ಲಿರುವ ಮಾತು ತಿಟ್ಟಕ್ಕೆ ಹೊಂದುವಂತೆ, ಹೆಚ್ಚೂ ಅಲ್ಲದೆ ಕಡಿಮೆಯೂ ಅಲ್ಲದೆ ಇರಬೇಕಾಗುತ್ತದೆ. ಸೀನ್(ತಿಟ್ಟ ನೋಟ)ಗಳು ನೋಡುಗನ ಮೇಲೆ ಬೀರುವ ಪ್ರಬಾವವನ್ನು ಹೆಚ್ಚಿಸಲು ತಿಟ್ಟದ ಜೊತೆಜೊತೆಗೆ ಹಿನ್ನೆಲೆ ಇನಿತವೂ ಮತ್ತು ಅದಕ್ಕೆ ತಕ್ಕಂತೆ ಮಾತುಗಳನ್ನು ತಿಟ್ಟಕ್ಕೆ ಹೆಣೆಯಬೇಕಾಗುತ್ತದೆ.
ಓಡುತಿಟ್ಟಗಳಿಗೂ ನಾಟಕಳಿಗೂ ಅಡಿಮಟ್ಟದಲ್ಲಿ ಬೇರೆತನವಿದೆ. ನಾಟಕದಲ್ಲಿ ಮಾತೇ ಮೊದಲು; ಮಾತೇ ಮುಕ್ಯ. ಯಾಕಂದರೆ ಅಲ್ಲಿ ತಿಟ್ಟವೇ ಇಲ್ಲ. ಇರುವುದೆಲ್ಲವೂ ನೋಟ. ಕೆಲವೊಮ್ಮೆ ತಿಟ್ಟ(ನಾಟಕದ ಸೀನರಿ)ವಿದ್ದರೂ ಅದು ಹಿನ್ನೆಲೆಯಲ್ಲಿ ಇರುತ್ತದೆ. ನೋಡುಗನ ಮುಂದೆ ಉಸಿರಾಡುವ ಮಂದಿಯೇ ನಾಟಕ ಆಡುತ್ತಿರುತ್ತಾರೆ. ಆದರೆ ಓಡುತಿಟ್ಟದಲ್ಲಿ ಇರುವುದೆಲ್ಲ 'ತಿಟ್ಟ'ವಶ್ಟೇ. ಆ ತಿಟ್ಟವನ್ನು ಹೇಗೆ ತಿದ್ದಿ ತೀಡಬಹುದೆಂಬುದು ಅದರ ಮಾಡುಗನ ತಿಳಿವಿಗೆ ಬಿಟ್ಟಿದ್ದು.
ಆದರೆ ಇಂಡಿಯಾದಲ್ಲಿ ಹೆಚ್ಚಾಗಿ ನಾಟಕ (ರಂಗಬೂಮಿ) ಆಡುತ್ತಿದ್ದವರು ಓಡುತಿಟ್ಟಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ; ಹಾಗಾಗಿ ಅವರು ಓಡುತಿಟ್ಟವು ನಾಟಕದ ಹೊರಚಾಚು ಎಂಬಂತೆ ಅಂದುಕೊಂಡಿದ್ದಾರೆ ಇಲ್ಲವೆ ಹಾಗೆ ನಡೆದು ಬಂದಿದೆ. ನಮ್ಮ ಓಡುತಿಟ್ಟಗಳಲ್ಲಿ ಹಾಡು ಮತ್ತು ಮಾತುಗಳು ಹೆಚ್ಚಾಗಿ ಕಾಣುತ್ತವೆ. ಇದು ಓಡುತಿಟ್ಟವನ್ನು ನಾಟಕದ ಒಯ್ಯುಗೆಗೆ ಒಗ್ಗಿಸುವ ಕೆಲಸದಂತೆ ತೋರುತ್ತದೆ. ಆದರೆ, ಹಿಂದೆ ಹೇಳಿದಂತೆ ಓಡುತಿಟ್ಟಗಳು ನಾಟಕಕ್ಕಿಂತ ಅಡಿಮಟ್ಟದಲ್ಲಿ ಬೇರೆಯಾಗಿದೆ. ಯಾವ ಓಡುತಿಟ್ಟದಲ್ಲಿ ತಿಟ್ಟಗಳೇ ಕತೆ ಹೇಳುತ್ತವೆಯೋ ಅದೇ ದಿಟವಾದ ಓಡುತಿಟ್ಟ. ಯಾವ ಓಡುತಿಟ್ಟಗಳಲ್ಲಿ ಮಾತುಗಳು ಇಲ್ಲವೆ ಹಾಡುಗಳು ಕತೆ ಹೇಳುತ್ತವೆಯೋ ಅದು ಓಡುತಿಟ್ಟದ ಅಡಿಮಟ್ಟದ ಪರಿಚೆಗಳಿಗೆ ಇದಿರಾಗಿದೆ. "ಯಾಕೆ ಹೀಗೆ" ಎಂಬ ಕೇಳ್ವಿಗೆ ಇನ್ನೊಂದು ನೆಲೆಯಲ್ಲಿ ಉತ್ತರವಿದೆ. ಅದೇನೆಂದು ಮುಂದೆ ನೋಡೋಣ
ನಮ್ಮ ಓಡುತಿಟ್ಟದಲ್ಲಿ ಮಾತು ಹೆಚ್ಚಾಗಿ ಏಕೆ ಕೇಳಿಬರುತ್ತದೆಯೆಂಬುದಕ್ಕೆ ತಿಟ್ಟ ಮತ್ತು ಸದ್ದು/ಉಲಿ ಎಂಬುವುಗಳು ಹೇಗೆ ನಮ್ಮ ಮೇಲೆ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ಸದ್ದು/ಮಾತು/ಉಲಿ ಇವುಗಳು ನಾವು ಏನನ್ನು ನೋಡುತ್ತಿದ್ದೇವೆಯೊ ಅದರ ಬಗ್ಗೆ ಹೆಚ್ಚಿನದನ್ನು ತಿಳಿಸಿಕೊಡುತ್ತದೆ.
ಎತ್ತುಗೆಗೆ: ಓಡುತಿಟ್ಟದಲ್ಲಿ ಒಬ್ಬ ಹುಡುಗನಿದ್ದು ಅವನು ಏನನ್ನಾದರೂ ಮಾತಾಡಿದರೆ ಅವನು ಮತಾಡಿದ ದಾಟಿಯ ಮೇಲೆ ಅವನು ಎಂತಹವನು ಎಂಬುದನ್ನು ಎಣಿಸುವುದಕ್ಕೆ ನೋಡುಗನಿಗೆ ಅನುವಿದೆ. ಆದರೆ ಆ ಹುಡುಗನು ಏನೂ ಮಾತಾಡದೇ ಇದ್ದರೆ ಅವನು ಹೇಗೆ ಕಾಣಿಸುತ್ತಿದ್ದ ಎಂಬುದರ ಮೇಲಶ್ಟೆ ಅವನು ಎಂತಹವನು ಎಂಬುದನ್ನು ಎಣಿಸುವುದಕ್ಕೆ ಸಾದ್ಯ.
ಅಂದರೆ ಹೆಚ್ಚು ಹೆಚ್ಚು ಮಾತಿದ್ದರೆ ನೋಡುಗನಿಗೆ ಹೆಚ್ಚು ಹೆಚ್ಚು ತಿಳಿಯುತ್ತದೆ ಅಂದರೆ ಓಡುತಿಟ್ಟವನ್ನು ಮತ್ತು ಅದರಲ್ಲಿರುವ ಕತೆಯನ್ನು ತಿಳಿದುಕೊಳ್ಳಲು ಅವನು ಹೆಚ್ಚು ಹೆಣಗಾಡಬೇಕಾಗಿಲ್ಲ. ಆದರೆ ಮಾತು ಕಮ್ಮಿ ಇರುವ ಓಡುತಿಟ್ಟಗಳಲ್ಲಿ ಕತೆಯು ಒಗಟು ಒಗಟಾಗಿರುತ್ತದೆ. ಆದ್ದರಿಂದ ಅದನ್ನು ತಿಳಿದುಕೊಳ್ಳಲು ಕಶ್ಟವಾಗುತ್ತದೆ. ಹೀಗೆ ಸುಲಬವಾಗಿ ತಿಳಿದುಕೊಳ್ಳಬಹುದಾದ ಓಡುತಿಟ್ಟಗಳು ಹೆಚ್ಚು ಮಂದಿಯನ್ನು ತಲುಪುತ್ತದೆ. ಹೆಚ್ಚು ಮಂದಿಯನ್ನು ತಲುಪುವ ಓಡುತಿಟ್ಟ ಸರಕಿನ ರೂಪವನ್ನು ಪಡೆಯುತ್ತದೆ. ಅಂದರೆ ಅದಕ್ಕೆ ಒಂದು ಮಾರುಕಟ್ಟೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಮಾತು ಹೆಚ್ಚಿರುವ ಓಡುತಿಟ್ಟಗಳನ್ನು ಮಾಡುವವರು ಹೆಚ್ಚು. ಅದೇ ಮಾತು ಕಮ್ಮಿ ಇರುವ ಓಡುತಿಟ್ಟಗಳನ್ನು ಮಾಡುವವರು ಕಡಿಮೆ ಇರುತ್ತಾರೆ. ಹಾಗಾಗಿ ಹೆಚ್ಚು ಮಂದಿಯನ್ನು ತಲುಪುವ ಓಡುತಿಟ್ಟವು 'ತಿಟ್ಟನಾಟಕ'ವಾಗಿ ಬದಲಾಗುತ್ತದೆ. ಅಂದರೆ ಈ ಕಡೆ ನಾಟಕವೂ ಇಲ್ಲ, ಆ ಕಡೆ ಓಡುತಿಟ್ಟವೂ ಅಲ್ಲ. ಇವೆರಡರ ಒಂದು ತೆರನಾದ ಬೆರಕೆಯಂತಾಗುತ್ತದೆ

ಶನಿವಾರ, ಮಾರ್ಚ್ 24, 2018

ಗ್ರೀಕರಲ್ಲಿ ಯಾಕೆ ಇಶ್ಟೊಂದು ಚಿಂತಕರು ಅಶ್ಟೊಂದು ಮೊದಲೇ ಹುಟ್ಟಿಕೊಂಡರು? ಬೇರೆಯವರಿಗೆ ಯಾಕೆ ಈ ಮಟ್ಟಕ್ಕೆ ಚಿಂತನೆ ನಡೆಸಲು ಆಗಲಿಲ್ಲ?


ಸೆಮಿಟಿಕ್ ನುಡಿಗಳಾದ ಅರೇಬಿಕ್ ಮತ್ತು ಹಿಬ್ರೂ ಕಂಡುಕೊಂಡ ಲಿಪಿಯಲ್ಲಿ ಬರೀ ಮುಚ್ಚುಲಿಯನ್ನಶ್ಟೆ(ಕಾನ್ಸೊನೆಂಟ್) ಬರೆಯಲಾಗುತ್ತಿತ್ತು. ತೆರೆಯುಲಿಯನ್ನು(ವೋವಲ್) ಬರಹದಲ್ಲಿ ತೋರಿಸುವ ಅನುವಿರಲಿಲ್ಲ.
ಎತ್ತುಗೆಗೆ, 'ಕನ್ನಡ' ಎಂಬುದನ್ನು ಹಿಬ್ರು ಲಿಪಿಯಲ್ಲಿ ಬರೆದರೆ 'ಕ್ ನ್ ನ್ ಡ್' ಎಂದಶ್ಟೇ ಬರೆಯಬಹುದು. ಸಂದರ್ಬ ಮತ್ತು ವಾಕ್ಯಗಳನ್ನು ನೋಡಿ ಪದ ಯಾವುದೆಂದು ಓದುಗನು ಊಹಿಸಬೇಕಾಗುತ್ತಿತ್ತು. ಹಿಬ್ರೂವನ್ನು ಈಗಲೂ ಹೀಗೆ ತೆರೆಯುಲಿಯಿಲ್ಲದೆ ಬರೆಯುತ್ತಿದ್ದಾರೆ.
ಆದರೆ ಗ್ರೀಕರು ಮುಚ್ಚುಲಿಯೊಂದಿಗೆ ತೆರೆಯುಲಿಯನ್ನು ತೋರಿಸುವ ಬರಹವನ್ನು ಕಂಡುಕೊಂಡರು. ಹಾಗಾಗಿ ಯಾವುದು ಮೊದಲು ಕಿವಿಗೆ 'ಸದ್ದು' ಇಲ್ಲವೆ 'ಉಲಿ'ಗಳಾಗಿತ್ತೊ, ಈಗ ಅದು *ನೆರೆಯಾಗಿ* ಕಣ್ಣಿನ 'ನೋಟ'ಕ್ಕೆ ಬದಲಾಗಿತ್ತು. ಇದರಿಂದಾಗಿ ಗ್ರೀಕರಿಗೆ ಚಿಂತನೆಯ ನೆಲೆಯಲ್ಲಿ ಬೇರೆಯವರಿಗಿಂತ ಮುಂದೆ ಬರಲು ಸಾದ್ಯವಾಯಿತು ಎಂದು ಹೇಳಲಾಗಿದೆ. ಇದರಿಂದಾಗಿ ಗೊತ್ತಿಲ್ಲದ ನುಡಿಯನ್ನೂ ಬರಹಕ್ಕೆ ಇಳಿಸಲು ಸಾದ್ಯವಾಯಿತು.
ಗ್ರ್ರೀಕರ ಈ ಲಿಪಿ ದೊಡ್ಡವರಿಗಲ್ಲದೆ ಮಕ್ಕಳಿಗೂ ಕಲಿತುಕೊಳ್ಳಲು ಸುಲಬವಾಗಿತ್ತು. ಹಾಗಾಗಿ ಗ್ರೀಕ್ ಲಿಪಿ ಒಂದು ಡೆಮಕ್ರಟಯ್ಸಿಂಗ್ ಲಿಪಿಯಾಗಿ ಹೊರಹೊಮ್ಮಿತು. ಪ್ಲೇಟೊ ಎಂಬ ಚಿಂತಕ ಬರುವ ಹೊತ್ತಿಗೆ ಗ್ರೀಕ್ ಲಿಪಿಯ ಬಳಕೆಯಾಗಿ ಮೂರು ನೂರು ವರುಶಗಳು ಸಂದಿತ್ತು. ಹಾಗಾಗಿ, ಗ್ರೀಕ್ ಜನಸಾಮಾನ್ಯರಲ್ಲಿ ಬರಹವು ದೊಡ್ಡ ಮಟ್ಟದಲ್ಲಿ ಬಳಸಲಾಗುತ್ತಿತ್ತು.
ಪ್ಲೇಟೊ ಆದ ಮೇಲೆ ಅರಿಸ್ಟಾಟಲ್ ಎಂಬ ದೊಡ್ಡ ಚಿಂತಕ ಮತ್ತು ಅರಿವಿನರಿಗ ಮುನ್ನೆಲೆಗೆ ಬರಲು ಗ್ರೀಕ್ ಬರಹಗಳು ಮತ್ತು ಅವುಗಳಿಂದಾದ ಪರಿಣಾಮಗಳು ದೊಡ್ಡ ಮಟ್ಟಿಗೆ ಕಾರಣವಾದವು.
(ವಾಲ್ಟರ್ ಆಂಗ್ ಅವರ ಹೊತ್ತಗೆಯಿಂದ ತಿಳಿದುಕೊಂಡಿದ್ದು)

ಮಿಲ್ಟ್ರಿ ಹೋಟೆಲ್' - ಹೇಗೆ ಬಂತು?

'ಮಿಲ್ಟ್ರಿ ಹೋಟೆಲ್' ಅಂತ ಬೋರ್ಡ್ ನೋಡಿರಬಹುದು. ಆದರಲ್ಲಿರುವ 'ಮಿಲ್ಟ್ರಿ' ಎಂಬ ಪದ ಹೇಗೆ ಬಂತು ಅಂತ ಯೋಚಿಸುತ್ತಿದ್ದಾಗ ಹೊಳೆದಿದ್ದು ಇಶ್ಟು.
ಇಂಗ್ಲಿಶಿನ 'ಮೀಟ್+ಈಟರಿ'(meat+eatery) ಎಂಬುದೇ ಕನ್ನಡದಲ್ಲಿ 'ಮಿಲ್ಟ್ರಿ' ಎಂದಾಗಿರಬಹುದೇ?
ಆದರೆ ದಿಟಕ್ಕೂ ಅದನ್ನು ಉಲಿಯುವಾಗ 'ಮಿಳ್ಟ್ರಿ' ಎಂದೇ ಆಗುತ್ತದೆ. ಯಾಕಂದರೆ 'ಟ್' ಹಿಮ್ಮಡಚುಲಿ ಇರುವುದರಿಂದ ಅಲ್ಲಿ 'ಳ'ಕಾರವೇ ಬರುತ್ತದೆ. (ಇನ್ನೊಂದು ಎತ್ತುಗೆಗೆ : ಇಡ್ಳಿ)
ಇನ್ನು ಟ/ಡ ಕಾರ 'ಳ'ಕಾರಕ್ಕೆ ತಿರುಗುವುದನ್ನು (ಕೂಡುಪದಗಳಲ್ಲಿ) ನಾವು ಕಾಣುತ್ತೇವೆ. ಎತ್ತುಗೆಗೆ: ಕಾಳ್ಗಿಚ್ಚು (ಕಾಡು+ಕಿಚ್ಚು)
ಹಾಗೆ ಇಲ್ಲಿ 'ಮೀಟ್' ಎಂಬುದರಲ್ಲಿರುವ 'ಟ್'ಕಾರ 'ಳ'ಕಾರಕ್ಕೆ ತಿರುಗಿದೆ. ಹಾಗಾಗಿ, ಮಿಳ್+ಈಟರಿ => ಮಿಳ್ಟ್ರಿ ಎಂದಾಗಿದೆ. ನಡುವೆ ಬರುವ ತೆರೆಯುಲಿಗಳು ಆಡುನುಡಿಯಲ್ಲಿ ಬೀಳುವುದನ್ನು ನಾವು ಕಂಡಿದ್ದೇವೆ. ಎತ್ತುಗೆಗೆ: ಬರುತ್ತಾ => ಬರ್ತಾ. (ಉ ಕಾರ ಬಿದ್ದು ಹೋಗಿದೆ)

ಮಾರ್ಗ-ದೇಸಿ

ನಾನು ತುಂಬ ಮೆಚ್ಚಿಕೊಳ್ಳುವ ಚಿಂತಕರಲ್ಲಿ ಡಿ.ಆರ್.ನಾಗರಾಜ್ ಅವರೂ ಒಬ್ಬರು. ಆದರೆ ಅವರ ಸಂಸ್ಕ್ರುತ ತುಂಬಿದ ಮಾತುಗಳು ಇಲ್ಲವೆ ಬರಹದ ಬಗ್ಗೆ ನನ್ನ ಒಪ್ಪಿಗೆಯಿಲ್ಲ.
ಮಾರ್ಗ-ದೇಸಿ ಎಂಬ ನಲ್ಬರಹದ ಕುರಿಪುಗಳ ಬಗ್ಗೆ ಮಾತಾಡುತ್ತಾ ಆಂಡಯ್ಯನ ಬಗ್ಗೆ ಮಾತು ಬಂದಾಗ ಅವನ ಮಾದರಿಯನ್ನು 'ಶುದ್ದ ದೇಸಿ' ಎಂದೂ ಮತ್ತು ಪಂಪನದ್ದು 'ಅದಿಕ್ರುತ ದೇಸಿ' ಎಂದು ಕರೆಯುತ್ತಾರೆ. ಪಂಪನ ಬಗ್ಗೆ ಅವರು ಹೇಳಿರುವುದು ನನಗೆ ಸರಿಯೆನಿಸುತ್ತದೆ. ಆದರೆ ಆಂಡಯ್ಯನ ಬಗ್ಗೆ ಅಶ್ಟು ಸರಿಯೆನಿಸಲಿಲ್ಲ. ಯಾಕಂದರೆ 'ಶುದ್ದ ದೇಸಿ' ಎಂದರೆ ನಾನು ಬಾಯ್ತನ ಮತ್ತು ಬಾಯ್ತನದಿಂದ ಹೊರಬಂದ ಮಾಳ್ಕೆಗಳು (ಎತ್ತುಗೆಗೆ ಮಲೆ ಮಾದಪ್ಪನ ಹಾಡು, ಮಂಟೇಸ್ವಾಮಿ ಹಾಡು) ಎಂದು ನಾನು ಅರಿತುಕೊಂಡಿದ್ದೇನೆ. ಅಲ್ಲದೆ ಅವನು ಬರೀ ಅಣ್ಣೆಗನ್ನಡದ ಪದಗಳನ್ನು ಬಳಸಿಲ್ಲ ಬದಲಾಗಿ 'ತದ್ಬವ'ಗಳನ್ನೂ ಬಳಸಿದ್ದಾನೆ. ತದ್ಬವ ಅಂದಾಗ ಅದಕ್ಕೊಂದು ತತ್ಸಮವೂ ಇರಬೇಕಲ್ಲವೆ? ಅಂದ ಮೇಲೆ ಆ ತತ್ಸಮವು 'ಮಾರ್ಗ' ವನ್ನು ಪ್ರತಿನಿದಿಸುತ್ತದೆಯಲ್ಲವೆ? ಅಲ್ಲದೆ ಚಂದಸ್ಸು ಮತ್ತಿನ್ನಿತರ ನಲ್ಬರಹದ ಇಟ್ಟಳಗಳಲ್ಲಿ ಪಂಪನಿಗೂ ಆಂಡಯ್ಯನಿಗೂ ಅಂತಹ ಬೇರ್ಮೆಗಳಿಲ್ಲ. ಆದ್ದರಿಂದ ಆಂಡಯ್ಯನದು ಕೂಡ ಡಿ.ಆರ್.ನಾಗರಾಜ್ ಅವರು ಹೇಳುವ ಮಾರ್ಗ ಮತ್ತು ದೇಸಿ ನಡುವಿನ ದಾರಿಯಾದ 'ಅದಿಕ್ರುತ ದೇಸಿ'ಯ ದಾರಿ ಎಂಬುದು ನನ್ನ ನಿಲುವು. ಆದರೆ, ಒಟ್ಟಂದದಲ್ಲಿ ಆಂಡಯ್ಯನ 'ಅದಿಕ್ರುತ ದೇಸಿ' ಪಂಪನ 'ಅದಿಕ್ರುತ ದೇಸಿ'ಗಿಂತ ಕನ್ನಡದ ಮಾತಿಗೆ ಹೆಚ್ಚು ಹತ್ತಿರ.

ಮಾತಿನ ಬಗ್ಗೆ ಕನ್ನಡದಲ್ಲಿರುವ ಮಾತುಗಳು

ಮಾತಿನ ಬಗ್ಗೆ ಕನ್ನಡದಲ್ಲಿರುವ ಮಾತುಗಳು:-
೧. ನಿಮ್ಮ ಮಗುವಿಗೆ ಮಾತು ಬಂತಾ?
೨. ನಮ್ಮ ಮಗುವಿಗೆ ಇನ್ನು ಮಾತು ಬಂದಿಲ್ಲ.
೩. ನಿಮ್ಮ ಮಗ ಈಗ ಮತಾಡ್ತಾನಾ?
೪. ನಮ್ಮ ಮಗಳು ಈಗ ಮಾತಾಡ್ತಳೆ
ನಮ್ಮ ಮಾತುಗಳಲ್ಲಿ ಇರುವಂತೆ 'ಮಾತು' ಎಂಬುದು 'ಬರುವುದು'/'ಆಡುವುದು'; ಕಲಿಯುವುದಲ್ಲ.
ಆದರೆ ಈಜು (ಎತ್ತುಗೆಗೆ) ಎಂಬುದು ಕಲಿಯುವುದು; ಬರುವುದಲ್ಲ.
ಇದೇ ಮಾತು ಮತ್ತು ಮತ್ತಿತರವುಗಳ ನಡುವೆ ಇರುವ ಬೇರೆತನ.

ನಾವು ಮಕ್ಕಳಿಗೆ ಯಾಕೆ ಕತೆಗಳನ್ನು ಹೇಳಬೇಕು? ಅದರಲ್ಲೂ ಎಂತಹ ಕತೆಗಳನ್ನು ಹೇಳಬೇಕು?

"ನಮಗಂತಲೇ ಮಾಡಿಟ್ಟ ಪಾಲು(ಪಾತ್ರ)ಗಳನ್ನು ಆತುಕೊಳ್ಳಲು ನಾವು ಈ ಕೂಡಣದಲ್ಲಿ ಹುಟ್ಟಿ ಬರುತ್ತೇವೆ. ಆದರೆ ನಮ್ಮ ಪಾಲು ಯಾವುದು ಅಂತ ಗೊತ್ತಿರುವುದಿಲ್ಲ, ಹಾಗಾಗಿ ಕೂಡಣದೊಂದಿಗೆ ಕೊಡುಕೊಳ್ಳುವಿಕೆ ಆಗುವುದರೊಂದಿಗೆ ನಮ್ಮ ಪಾಲು ಯಾವುದು ಎಂಬುದನ್ನು ಕಲಿಯಬೇಕಾಗುತ್ತದೆ. ಈ ಕಲಿಕೆಯಲ್ಲಿ ನಮಗೆ ಕತೆಗಳು ಬಲು ಮುಕ್ಯವಾದ ನೆರವನ್ನೀಯುತ್ತವೆ. "
- ಅಲಿಸ್ಡಯರ್ ಮ್ಯಾಕಿಂಟಯ್ರ್

ಮಾತು, ಬರಹ, ಕೊಳುಕೊಡೆ ಮತ್ತು ಆಳ್ಮೆ

ಬರಹ ಬರುವ ಮೊದಲು ನಮ್ಮಲ್ಲಿ ಎಲ್ಲ ಕೊಳುಕೊಡೆಗಳು(ಕಾಮರ್ಸ್) ಮಾತುಗಳ ಮೂಲಕವೇ ನಡೆಯುತ್ತಿತ್ತು. ಮಾತಿಗೆ ಅಶ್ಟು ಬೆಲೆ ಇತ್ತು. ಮಂದಿ 'ಮಾತು ಕೊಡು'ತ್ತಿದ್ದರು. ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೆಂದರೆ ಅದೊಂದು ಸಯ್ಪಿನ ಕೆಲಸವಾಗಿತ್ತು.
ಆದರೆ ಬರಹ ಬಂದ ಮೇಲೆ ಇಲ್ಲವೆ ಬರಹವನ್ನು ಹೆಚ್ಚು ಹೆಚ್ಚು ಬಳಸಲು ಶುರು ಮಾಡಿದ ಮೆಲೆ ಮಾತಿಗಿದ್ದ ಬೆಲೆ ಬರಹಕ್ಕೆ ಬಂತು. ಮಾತು ತನ್ನ ಬೆಲೆ ಕಳೆದುಕೊಂಡಿತು. ಆದರೆ ಯಾವುದೇ ನುಡಿಗೆ ಮಾತೇ ಮೊದಲು, ಮಾತಿಲ್ಲದ ಬರಹವಿಲ್ಲ. ಮಾತು ಕಿವಿಗೆ ಸಂಬಂದಪಟ್ಟಿದ್ದಾದರೆ ಬರಹ ಕಣ್ಣಿಗೆ ಸಂಬಂದಪಟ್ಟಿದ್ದು. ಮಾತು ತಾನಾಗಿಯೇ ಬರುವಂತ್ತದ್ದು; ಬರಹವನ್ನು ಕಲಿಯಬೇಕಾಗುತ್ತದೆ. ಆದರೂ ಬರಹಕ್ಕೇ ಯಾಕೆ ಇಶ್ಟೊಂದು ಬೆಲೆ?
೧. ಇತ್ತೀಚೆಗೆ ಹೆಚ್ಚು ಹೆಚ್ಚು ಕೊಳುಕೊಡೆಗಳು ನಡೆಯುತ್ತಿದೆಯಲ್ಲದೆ ಹಿಂದೆಂದಿಗಿಂತಲೂ ಬಿರುಸಾಗಿ ನಡೆಯುತ್ತಿದೆ. ಈ ಕೊಳುಕೊಡೆಗಳು ನಡೆಯಲು ಯಾವುದೇ ತೊಂದರೆ ಇರದಂತೆ ನೋಡಿಕೊಳ್ಳಲು ಅಚ್ಚುಕಟ್ಟಾದ ಏರ್ಪಾಟುಗಳು ಬೇಕಾಗುತ್ತವೆ. ಏರ್ಪಾಟುಗಳ ಅಡಿಮಟ್ಟದಲ್ಲಿ ಬರಹವೇ ಇರುತ್ತದೆ. ಅಂದರೆ ಕೊಡುಕೊಳೆಗಳ ಸರಿಯಾಗಿ ನಡೆಯಲು ಬೇಕಾದ ಕಟ್ಟಲೆಗಳನ್ನು ಬರೆದಿಡಬೇಕಾಗುತ್ತದೆ. ಅಲ್ಲದೆ ಕೊಳುಕೊಡೆಗಳು ಆಗಿರುವುದಕ್ಕೆ ನಿಂದರಿಕೆಯಾಗಿ ಅದನ್ನು ಬರಹಕ್ಕೆ ಇಳಿಸಬೇಕಾಗುತ್ತದೆ.
೨. ಒಮ್ಮೆ ಮೂಡಿಸಿದ ಬರಹ ಸಾವಿರಾರು/ನೂರಾರು ವರುಶಗಳ ವರೆಗೆ ಅಳಿಯದೇ ಇರುತ್ತದೆ. ಬರಹವನ್ನು ಯಾವಾಗ ಬೇಕಾದರೂ ತೆಗೆದು ಓದಬಹುದು. ಆದರೆ ಮಾತು ಬಾಯಲ್ಲಿ ಮೂಡುತ್ತಿರುವಂತೆಯೇ ಮಾಯವಾಗಿರುತ್ತದೆ.
೩. ಮಂದಿಯಾಳ್ವಿಕೆಯಲ್ಲಿ ಕೊಳುಕೊಡೆಯನ್ನು ಅಂಕೆಯಲ್ಲಿಡಲು ಇಲ್ಲವೆ ಸರಿಯಾಗಿ ನಡೆಸಲು ಆಳ್ಮೆಯ ಏರ್ಪಾಟನ್ನು ಕಟ್ಟಿಕೊಳ್ಳಲಾಗಿದೆ. ಇಲ್ಲೂ, ಆಳ್ಮೆಯ ಏರ್ಪಾಟುಗಳು ಬರಹದ ಮೇಲೆ ನಿಂತಿವೆ. ಅಂದರೆ ಯಾವುದೇ ನಾಡಿನ ಸಯ್ಪುಬರಹ( ರಿಟನ್ ಕಾನ್ಸ್ಟಿಟೂಶನ್) ಮತ್ತು ಕಾನೂನುಗಳನ್ನು (ಎತ್ತುಗೆ: ಇಂಡಿಯನ್ ಪೀನಲ್ ಕೋಡ್) ಬರೆದಿಡಲಾಗಿದೆಯೆ ಹೊರತು ಬಾಯಲ್ಲಿ ಇಲ್ಲ.
ಬರಹವಿಲ್ಲದೆ ಈ ಆಳ್ಮೆ ಮತ್ತು ಕೊಳುಕೊಡೆಯ ಏರ್ಪಾಟುಗಳು ಕೆಲಸ ಮಾಡಲು ಸಾದ್ಯವೇ ಇಲ್ಲ. ಮಂದಿಯಾಳ್ವಿಕೆಯಲ್ಲಿ ಆಳ್ಮೆ ಮತ್ತು ಕೊಡುಕೊಳೆಗಳೇ ಇಲ್ಲದೆ ಮಂದಿ ಬದುಕಲು ಸಾದ್ಯವೇ ಇಲ್ಲ ಅನ್ನುವಂತಾಗಿದೆ.
ಹಾಗಾಗಿ, ಬರಹಕ್ಕೆ ಹಿಂದೆಂದಿಗಿಂತಲೂ ಇಲ್ಲದ ಬೆಲೆ ಬಂದಿದೆ.

ತಾಯ್ನುಡಿ, ಕಲಿಕೆ ಮತ್ತು ಬರಹದ ನುಡಿ

ಹಿಂದೆಲ್ಲ ಕಲಿಕೆಯ ನುಡಿ ತಾಯ್ನುಡಿಗಿಂತ ಬೇರಾಗಿರಬೇಕು ಎಂಬ ನಂಬಿಕೆಯಿತ್ತು. ತಾಯ್ನುಡಿಯ ಪರಿಸರದ ಮಾತಿನ ಸಂದರ್ಬಗಳಲ್ಲಿ ಬಳಸುವ ಪದಗಳನ್ನು ಕಲಿಕೆಯ ಸಂದರ್ಬದಲ್ಲಿ ಬಳಸಿದರೆ ಕಲಿಕೆಗೆ ಸಿಗುವ ಸೀರಿಯಸ್ನೆಸ್ ಸಿಗುವುದಿಲ್ಲ ಎಂಬ ನಂಬಿಕೆ ಇತ್ತು. ಆದ್ದರಿಂದ ಮಾತಿನಲ್ಲಿರದ ಆದರೆ ಬರಹದ ನುಡಿಯಾಗಿ ಉಳಿದುಕೊಂಡಿರುವಂತಹ ನುಡಿಗಳಲ್ಲಿ ಅರಿಗರು ತಮ್ಮ ಅರಕೆಗಳ ಬಗ್ಗೆ ಬರೆಯತೊಡಗಿದರು.
ಆದ್ದರಿಂದಲೇ ನ್ಯೂಟನ್ ಕೂಡ ತನ್ನ 'ಪ್ರಿನ್ಸಿಪಿಯ ಮ್ಯಾದಮೆಟಿಕಾ' ಎಂಬುದನ್ನು ತನ್ನ ತಾಯ್ನುಡಿಯಾದ ಇಂಗ್ಲಿಶಿನಲ್ಲಿ ಬರೆಯದೇ ಲ್ಯಾಟಿನ್ನಿನಲ್ಲಿ ಹದಿನೇಳನೇ ನೂರೇಡಿನಲ್ಲಿ ಬರೆದ. ಆಗ ಲ್ಯಾಟಿನ್ ಬರಹದ ನುಡಿಯಾಗಿ ಮಾತ್ರ ಬಳಕೆಯಲ್ಲಿತ್ತು. ಅಂದರೆ ಇಂಗ್ಲಿಶಿನವರು ಕೂಡ ತಮ್ಮ ನುಡಿಯಾದ ಇಂಗ್ಲಿಶ್ ಅರಿಮೆ, ಕಲಿಕೆ ಇಲ್ಲವೆ ಅರಕೆಗಳಿಗೆ ತಕ್ಕ ನುಡಿಯಲ್ಲ ಎಂಬ ನಂಬಿಕೆ ಹೊಂದಿದ್ದರು.
ಆದರೆ ಈಗ ಇಪ್ಪತ್ತೊಂದನೇ ನೂರೇಡು ನೋಡಿ - ಮಾತಿನಲ್ಲೂ ಇಂಗ್ಲಿಶ್, ಕಲಿಕೆಯಲ್ಲೂ ಇಂಗ್ಲಿಶ್ ಮತ್ತು ಎಲ್ಲ ಅರಕೆ/ಅರಿಮೆ ಬರಹಗಳು ಕೂಡ ಇಂಗ್ಲಿಶಿನಲ್ಲೇ ಇದೆ.ಹಾಗೆ ನೋಡಿದರೆ ಲ್ಯಾಟಿನ್ ಪದಗಳನ್ನೂ ಕೂಡ ಈಗಿನ ಹೊಸಗಾಲದ ಅರಿಮೆಗಳಾದ ಎಣ್ಣುಕದರಿಮೆ/ ಸಾಪ್ಟ್ ವೇರ್ ಎಂಜಿನಿಯರಿಂಗಿನಲ್ಲಿ ಬಳಸುತ್ತಿಲ್ಲ. ಬದಲಾಗಿ ತುಂಬ ಸುಳುವಾದ ಇಂಗ್ಲಿಶ್ ಪದಗಳನ್ನು ಬಳಸಲಾಗುತ್ತಿದೆ.
ಹದಿನೇಳನೇ ನೂರೇಡಿನಲ್ಲಿ ಯಾವ ಇಂಗ್ಲಿಶಿನಲ್ಲಿ ಅರಿಮೆ ಆಗಲ್ಲ ಎಂದು ತಿಳಿದಿದ್ದರೊ ನಾವು, ಕನ್ನಡಿಗರು ಹಾಗೆ, ಈಗ ಇಪ್ಪತ್ತೊಂದನೇ ಕನ್ನಡದಲ್ಲಿ ಅರಿಮೆ ಆಗಲ್ಲ ಅಂತ ನಂಬಿದ್ದೇವೆ. ಆದರೆ,ಮೇಲೆ ತಿಳಿಸಿದ ಹಾಗೆ ಇದು ದಿಟವಲ್ಲ.

ಬಾಯ್ತನ-ಬರಿಗೆತನ

ಬಾಯ್ತನದಿಂದ ಬರಿಗೆತನಕ್ಕೆ ಬಂದಾಗ ನಾವು ನಮ್ಮ ಅರಿವಿಗೆ ಬಾರದಿರುವ ಕೆಲವನ್ನು ಗಳಿಸುತ್ತೇವೆ. ಹಾಗೆಯೇ ಕೆಲವನ್ನು ಬಿಟ್ಟುಕೊಡುತ್ತೇವೆ. ಬರಿಗೆತನಕ್ಕೆ ಬಂದವರು ಬಾಯ್ತನದ ಕಟ್ಟಣೆಗಳನ್ನು ಕಟ್ಟಲು ಹೋದರೆ ಅದು ಹೇರಿಕೊಂಡ ಬಾಯ್ತನದ ಕಟ್ಟಣೆಗಳಾಗುತ್ತವೆ. (Secondary orality) ಈಗಾಗಲೇ ಬರಿಗೆತನಕ್ಕೆ ಬಂದಿರುವವರಿಂದ ಬಾಯ್ತನದ ಕಟ್ಟಣೆಗಳನ್ನು ಕಟ್ಟಲು ಬರುವುದಿಲ್ಲ . ಬರಿಗೆತನಕ್ಕೆ ಬಂದವರು ನಲ್ಬರಹವನ್ನಶ್ಟೇ ಉಂಟುಮಾಡಬಲ್ಲವರು.

ಕೂಡಣದಲ್ಲಿ ಮಾರ್ಪಾಟು

ಶರಣರು ಬರುವ ಮುಂಚೆ ಈ ಪದಗಳಿಗೆ ಈ ಹುರುಳುಗಳಿದ್ದವು:-
೧. ಕಯ್ಲಾಸ - ಇದು ದೂರದಲ್ಲಿ ಎಲ್ಲಿಯೋ ಇರುವ ಶಿವನ ಮತ್ತು ಶಿವಗಣಗಳ ನೆಲೆ/ಬೆಟ್ಟ.
೨. ಮಾಯೆ - ಹೊನ್ನು, ಹೆಣ್ಣು ಮತ್ತು ಮಣ್ಣು - ಇವೆಲ್ಲ ಮಾಯೆಗಳು.

ಶರಣರು ಬಂದು ಈ ಪದಗಳಿಗಿದ್ದ ಹುರುಳುಗಳನ್ನೇ ಹೀಗೆ ಬದಲಾಯಿಸದರು:-
೧. ಕಯ್ಲಾಸ - ಕಯ್ಲಾಸ ದೂರದಲ್ಲಿ ಎಲ್ಲಿಯೋ ಇರುವ ಬೆಟ್ಟವಲ್ಲ. ನೀನು ಮಾಡುವ ಕಾಯಕವೇ ಕಯ್ಲಾಸ. ಕಯ್ಲಾಸ ಎಂಬುದು ನಿನ್ನ ದುಡಿಮೆಯಲ್ಲಿದೆ ಎಂದು ತೋರಿಸಿಕೊಟ್ಟರು.
೨. ಮಾಯೆ - ಹೊನ್ನು, ಹೆಣ್ಣು ಮತ್ತು ಮಣ್ಣುಗಳು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ. ಅಂದರೆ ಹೊರಗಿನವುಗಳಲ್ಲಿ ಮಾಯೆಯಿಲ್ಲ. ಬದಲಾಗಿ ಮಾಯೆಯೆಂಬುದು ನಿನ್ನ ಒಳಗೇ ಇದೆ.
ಹೀಗೆ ಈ ಪದಗಳ ಹುರುಳಿಸುವಿಕೆಯನ್ನೇ/ಅರ್ತಯ್ಸುವಿಕೆಯನ್ನೇ ಶರಣರು ಬದಲಿಸಿದರು.
ತಿರುಳು: ಕೂಡಣದ ಮಾರ್ಪಾಟುಗಳು ಬರೀ ಮೇಲ್ಮಟ್ಟದ ಮಾರ್ಪಾಟುಗಳಾಗಿರುವುದಿಲ್ಲ. ಬದಲಾಗಿ ಹೀಗೆ ಬೇರುಮಟ್ಟದಲ್ಲಿ, ಅಂದರೆ ಪದಗಳ ಹುರುಳೇ ಬದಲಾಗಿರುತ್ತವೆ. ಹೀಗೆ ಪದಗಳ ಹುರುಳುಗಳನ್ನೇ ಬೇರು ಮಟ್ಟದಲ್ಲಿ ಅಲುಗಾಡಿಸದೇ ಕೂಡಣದಲ್ಲಿ ಮಾರ್ಪಾಟುಗಳನ್ನು ತರಲಾಗುವುದಿಲ್ಲ.

ಒಳ್ಳೆಯದು - ?

ನಾವು ನಮ್ಮ ಚಿಂತನೆಗಳಿಂದ ಮಂದಿಯನ್ನು ಮುಟ್ಟುತ್ತೇವೆ/ಮುಟ್ಟಬಹುದು ಎಂದು ಅಂದುಕೊಳ್ಳುತ್ತೇವೆ. ಆದರೆ ನಮ್ಮ ಚಿಂತನೆಗಳನ್ನು ಸರಿಯಾಗಿ ಬಿಡಿಸಿ ಹೇಳುವುದು ಅವರ ಅರಿವಿಗೆ ಮುಟ್ಟುತ್ತದೆಯೇ ಹೊರತು ಅವರ ಗುಂಡಿಗೆಗಲ್ಲ. ಅರಿವಿಗೆ ಮುಟ್ಟಿದರೆ ಸಾಕು ಎಂದು ನಾವು ಅಂದುಕೊಳ್ಳುತ್ತೇವೆ, ಆದರೆ ಇದೇ ದೊಡ್ಡ ತಪ್ಪು.
ಇಂಗ್ಲಿಶಿನಲ್ಲಿ ಈ ಮಾತಿದೆ 'one thing is to know the good and other is to love it'.
ಅಂದರೆ 'ಮೊದಲು ಒಳ್ಳೇದು ಏನು ಎಂಬುದನ್ನು ಅರಿಯುವುದು, ಅರಿತ ಮೇಲೆ ಅದಕ್ಕೇ ಅಂಟಿಕೊಳ್ಳುವುದು ಮುಕ್ಯ'.
ಒಳ್ಳೆಯದು ಏನು ಎಂಬುದನ್ನು ಅರಿತು, ಆಮೇಲೆ ಸುಮ್ಮನಿದ್ದರೆ ಅದರಿಂದ ಏನೂ ಬಳಕೆಯಿಲ್ಲ. ಅದಕ್ಕೇ ಅಂಟಿಕೊಂಡಾಗ ಮಾತ್ರ ನಮ್ಮಿಂದ ಒಳ್ಳೆ ಕೆಲಸಗಳು ಆಗುತ್ತವೆ. ಅದಕ್ಕೆ ಅಂಟಿಕೊಳ್ಳುವುದು ಅಂದರೆ ಅದನ್ನು ನಮ್ಮ ಗುಂಡಿಗೆಯ ಒಳಕ್ಕೆ ಇಳಿಸಿಕೊಳ್ಳುವುದು. ನಮ್ಮ ಗುಂಡಿಗೆ ಬಯಸದ ಕೆಲಸವನ್ನು ನಾವು ಮಾಡುವುದಿಲ್ಲ.

ವೀರಶೈವ ಮತ್ತು ಲಿಂಗಾಯತ

ಪ್ರಜಾವಾಣಿಯಲ್ಲಿ ಬಂದ ಪ್ರೊ.ಶಾಶ್ವತ ಸ್ವಾಮಿ ಮುಕ್ಕುಂದಿಮಠ ರವರ ಬರಹಕ್ಕೆ ನಾನು ಕಳಿಸಿದ್ದ ಮಾರುಲಿಯನ್ನು ಇನ್ನು ಅವರು ಪ್ರಕಟಿಸಿಲ್ಲ. ಹಾಗಾಗಿ ಇಲ್ಲಿಯೇ ಹಾಕುತ್ತಿದ್ದೇನೆ.
ವೀರಶೈವ ಮತ್ತು ಲಿಂಗಾಯತ - ಎಂಬ ಈ ಎರಡು ಪದಗಳು ಹೇಗೆ ಸಂಸ್ಕ್ರುತ ಪದಗಳಲ್ಲ ಎಂಬುದನ್ನು ತೋರಿಸಿಕೊಡಲು ಮೊಗಸಿದ್ದೇನೆ.
====================
ದಿನಾಂಕ ೧ ಫೆಬ್ರುವರಿ ೨೦೧೮ ರ ಗುರುವಾರದಂದು ಪ್ರಕಟವಾದ ಪ್ರೊ.ಶಾಶ್ವತ ಸ್ವಾಮಿ ಮುಕ್ಕುಂದಿಮಠ ರವರ 'ಲಿಂಗರೂಪಿ ಶಿವ, ಶಿವರೂಪಿ ಲಿಂಗ: ವ್ಯತ್ಯಾಸವೇನಿಲ್ಲ!' ಎಂಬ ಬರಹಕ್ಕ ಪ್ರತಿಕ್ರಿಯೆ:-
ಶಾಶ್ವತ ಸ್ವಾಮಿಯವರು 'ವೀರಶೈವ ಲಿಂಗಾಯಿತ -ಅವರೆಡೂ ಸಂಸ್ಕೃತ ಪದಗಳು' ಎಂದು ಹೇಳಿದ್ದಾರೆ. ಆದರೆ ಇವುಗಳನ್ನು ಖಡಾಖಂಡಿತವಾಗಿ ಸಂಸ್ಕೃತ ಪದಗಳೆಂದು ಹೇಳಲಾಗದು.
ಮೊದಲಿಗೆ, ಶೈವ ಎಂಬುದರ ಅರ್ಥ ಶಿವನ ಇಲ್ಲವೆ 'ಶಿವ'ನಿಗೆ ಸಂಬಂಧಪಟ್ಟ ಎಂದಾಗಿದೆ. ಹಾಗಾಗಿ 'ಶಿವ' ಎಂಬ ಪದದ ಬಗ್ಗೆ ನೋಡೋಣ. 'ಶಿವ' ಎಂಬ ಪದದ ಮೂಲ ಕನ್ನಡ/ದ್ರಾವಿಡ ಪದವಾದ ಕೆಂಪು(ಕನ್ನಡ)=ಶಿವಪ್ಪು(ತಮಿಳು) ಎಂದು ಶಂ.ಬಾ.ಜೋಶಿ ಸೇರಿದಂತೆ ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಸಾಂಸ್ಕೃತಿಕವಾಗಿ ನೋಡಬೇಕೆಂದರೆ, ಹಳೇ ಮೈಸೂರಿನ ಪ್ರಾಂತ್ಯದಲ್ಲಿ ಇಂದಿಗೂ ಕೆಂಪಣ್ಣ, ಕೆಂಚಣ್ಣ, ಕೆಂಚಯ್ಯ, ಕೆಂಪ, ಕೆಂಪೇಗೌಡ, ಕೆಂಪರಾಜ ಎಂಬ ಹೆಸರುಗಳನ್ನು ಇಟ್ಟುಕೊಳ್ಳುವವರೂ ಇದ್ದಾರೆ. ಇದೆಲ್ಲ ಶಿವನ ಹೆಸರುಗಳೇ ಎಂಬ ನಂಬಿಕೆ ಇದೆ.
ಇನ್ನು ಭಾಷಾವಿಜ್ಞಾನದ ಅಡಿಯಲ್ಲಿ ಮಾತನಾಡಬೇಕೆಂದರೆ 'ಶಿವ' ಎಂಬುದು ಸಂಸ್ಕೃತ ಮೂಲದ ಪದವೇ ಆಗಿದ್ದರೆ ಅದರ ಸೋದರ ನುಡಿಗಳಾದ ಅವೆಸ್ತಾನ್, ಹಳೆ ಪರ್ಶಿಯನ್ನಿನಲ್ಲಿ ಇದಕ್ಕೆ ಜ್ಞಾತಿ(cognate) ಪದಗಳಿರಬೇಕಾಗಿತ್ತು; ಆದರೆ ಇಲ್ಲ. ಆದ್ದರಿಂದ 'ಶಿವ' ಎಂಬುದು ಸಂಸ್ಕೃತ ಮೂಲದ ಪದ ಎಂಬ ವಾದದ ಬಗ್ಗೆ ಅನುಮಾನಗಳು ಮೂಡುತ್ತವೆ. 'ವೀರ' ಎಂಬ ಪದವೂ ಹೀಗೆ ಕಗ್ಗಂಟಾಗಿದೆ. ಇದಕ್ಕೂ ಸಂಸ್ಕೃತದ ಸೋದರನುಡಿಗಳಲ್ಲಿ ಜ್ಞಾತಿ ಪದ ಸಿಗುವುದಿಲ್ಲ.
ಇನ್ನು 'ಲಿಂಗಾಯ್ತ/ಲಿಂಗಾಯತ' ಎಂಬ ಪದವನ್ನು ನೋಡೋಣ. ಇದರಲ್ಲಿ 'ಲಿಂಗ' ಎಂಬುದು ಪದ ಮತ್ತು 'ಆಯ್ತ/ಆಯತ' ಎಂಬುದು #ಕನ್ನಡದ್ದೇ ಆದ ಪ್ರತ್ಯಯ.
'ಲಿಂಗ' ಎಂಬ ಪದ ಇಂಡೊ-ಆರ್ಯನ್ ನುಡಿಗಳ ಪದವೇ ಅಲ್ಲ. ಇದು ಆಸ್ಟ್ರೊ-ಏಸಿಯಾಟಿಕ್(ಮುಂಡ) ನುಡಿಕುಟುಂಬಕ್ಕೆ ಸೇರಿದ ಪದ ಎಂದು Pre Aryan And Pre Dravidian In India by Sylvain Levi Jean Prazyluski ಎಂಬ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.
ಆಯ್ತ ಎಂಬ ಪದದ ಬಗ್ಗೆ ಪ್ರೊ.ಮರಿಯಪ್ಪ ಭಟ್ಟರ 'Revised & Enlarged Edition of Kittel's Kannada-English Dictionary' ಯಲ್ಲಿ ಕೊಟ್ಟಿರುವುದು ಹೀಗೆ:-
-ಆಯಿತ, ಆಯ್ತ, ಆಯತ - an affix for the formation of nouns - see ಪಸಾಯತ, ಲಿಂಗಾಯತ
[-ಆಯತವಾಗು to come upon. ಆಚಾರ ಅಂಗದ ಮೇಲೆ ಆಯತವಾದುದೇ ಇಷ್ಟಲಿಂಗ - ಚನ್ನಬಸವಣ್ಣನವರ ವಚನಗಳು - ೮೯೮ ( ಡಾ| ಆರ್.ಸಿ.ಹಿರೇಮಠ - ೧೯೬೫)]
ಹೀಗಾಗಿ 'ವೀರಶೈವ' ಸಂಸ್ಕೃತ ಪದ ಎಂದು ಹೇಳುವುದು ಕಷ್ಟವಾಗುತ್ತದೆ. ಇನ್ನು ಲಿಂಗಾಯ್ತದ ಬಗ್ಗೆ ಹೇಳಬೇಕೆಂದರೆ, ಆಸ್ಟ್ರೊ-ಏಸಿಯಾಟಿಕ್ ನುಡಿಕುಟುಂಬಕ್ಕೆ ಸೇರಿದ 'ಲಿಂಗ' ಎಂಬ ಪದಕ್ಕೆ 'ಆಯ್ತ/ಆಯತ' ಎಂಬ ಕನ್ನಡದ್ದೇ ಆದ ಪ್ರತ್ಯಯವನ್ನು ಸೇರಿಸಿ 'ಲಿಂಗಾಯ್ತ/ಲಿಂಗಾಯತ' ಎಂಬ ಪದವನ್ನು ಉಂಟುಮಾಡಲಾಗಿದೆ. ಅಲ್ಲದೆ ಮೇಲಿನ ಚನ್ನಬಸವಣ್ಣನ ವಚನವೂ ಕೂಡ ಇದೇ ಅರ್ಥವನ್ನು ಒಳಗೊಂಡಿದೆ.
ಒಟ್ಟಿನಲ್ಲಿ, ವೀರಶೈವ ಮತ್ತು ಲಿಂಗಾಯತ ಎಂಬುದು ಮೂಲದಲ್ಲಿ ಸಂಸ್ಕೃತ ಪದಗಳೇ ಅಲ್ಲ.

ತಹಿಸೀಲ್ದಾರ್

ತಹಿಸೀಲ್ದಾರ್(ಅರೇಬಿಕ್/ಪರ್ಶಿಯನ್) = ಗಡಿಯೆರೆಯ(ಕ)

Magistrate(E) = ದಂಡಾಧಿಕಾರಿ(ಸಂ) = ಆಡಳಿತದ ಮಣೆಗಾರ ಅಲ್ಲದೆ ತೀರ್ಪುಗಾರ (ಕ)

ಎಣ್ಣೆರ

ಅಷ್ಟಾಂಗ (ಸಂ) = ಎಂಟು+ನೆರ = ಎಣ್ನೆರ = ಎಣ್ಣೆರ (ಕ)
ಎರಡು ಕಯ್
ಎರಡು ಕಾಲು
ಎರಡು ತೋಳು
ಒಂದು ಎದೆ
ಒಂದು ಹಣೆ
--
ಇವೇ ಎಣ್ಣೆರ

ಕುವೆಂಪು

ಕುವೆಂಪುರವರ ಎಲ್ಲ ರಚನೆಗಳನ್ನು ನಾನು ಓದಿಲ್ಲ. ಆದರೆ ಕೆಲವರು ಹೇಳುವ ಹಾಗೆ ಕುವೆಂಪುರವರ ರಚನೆಗಳನ್ನು ಓದಿ ತಿಳಿದುಕೊಳ್ಳಲು ಕಶ್ಟ. ತಲೆ ಮೇಲೆ ಹೋಗುತ್ತದೆ ಎಂದು ಇನ್ನು ಕೆಲವರು ಹೇಳುತ್ತಾರೆ; ಇರಬಹುದು. ಆದರೆ ನಾನು ಕುವೆಂಪುರವರ ಈ ನಾಟಕಗಳನ್ನು ಓದಿದ್ದೇನೆ. ಓದಿದ್ದೇನೆ ಅನ್ನುವುದಕ್ಕಿಂತ ಒಳಗೆ ನಾಟುವಂತೆ ಓದಿದ್ದೇನೆ ಎನ್ನಬಹುದೇನೊ.
೧. ಜಲಗಾರ
ಚಿಕ್ಕವನಿದ್ದಾಗ ಓದಿದ್ದು; ಮತ್ತೆ ಮತ್ತೆ ಓದಿದ್ದೇನೆ. ಎಶ್ಟು ಸಲ ಓದಿದ್ದೇನೊ ತಿಳಿಯದು. ಇದರಲ್ಲಿ ಬರುವ ಹಲವು ಮಾತುಗಳು ಮತ್ತು ಸಂದರ್ಬಗಳಲ್ಲಿ ಕನ್ನಡದ ಮಣ್ಣಿನ ಸೊಗಡಿದೆ, ಚೆಲುವಿದೆ. ಕಡು ನೆಲಮಟ್ಟದಿಂದ ಬಂದ ಮಂದಿಯ ಹಾಡಿದೆ, ಬದುಕಿದೆ ಮತ್ತು ಅರಿವೂ ಇದೆ. ಕಂಡಿತ ಮಯ್-ಬಗೆಗಳನ್ನು ದಟ್ಟವಾಗಿ ತುಂಬುತ್ತದೆ. ನಲ್ಬರಹ ಅಂದರೆ ಹೀಗೆ ಇರಬೇಕು ಅಂತ ನನಗೆ ಬಹಳ ಸಲ ಅನ್ನಿಸಿದೆ.
೨. ಬೆರಳ್ ಗೆ ಕೊರಳ್
ಇದು ಇತ್ತೀಚೆಗೆ ಓದಿದ್ದು. ಇದರಲ್ಲಿ ಕುವೆಂಪು ಎಶ್ಟು ಕನ್ನಡ ಪರವಾಗಿ ನಿಂತುಬಿಡುತ್ತಾರೆ ಎಂದರೆ 'ಹಸ್ತಿನಪುರ' ಎಂಬ ಊರಿನ ಹೆಸರನ್ನೂ ಬಿಡಿವುದಿಲ್ಲ; ಕನ್ನಡವಾಗಿಸುತ್ತಾರೆ ಅಂದರೆ ಅದನ್ನು 'ಆನೆವೂರ್' ಎಂದು ಕರೆಯುತ್ತಾರೆ. ಅಲ್ಲದೆ, 'ಧನುರ್ವಿದ್ಯಾ' ಎಂಬ ಸಂಸ್ಕ್ರುತ ಪದವನ್ನು ಬಳಸದೆ 'ಬಿಲ್ಕಲ್ಪಿ' ಎಂದೇ ಅಣ್ಣೆಗನ್ನಡದ ಪದ ಬಳಸುತ್ತಾರೆ. ಏಕಲವ್ಯನೂ 'ಬಚ್ಚ' ಆಗಿಬಿಡುತ್ತಾನೆ. ಬೇಡರ ಬದುಕಿದೆ, ಚೆಲುವಿದೆ, ನೋವು ಮತ್ತು ನಲಿವುಗಳೂ ಇವೆ.
ಮೇಲಿನ ಎರಡೂ ನಾಟಕಗಳನ್ನು ನಾನು ಅರಗಸಿಕೊಂಡ ಬಗೆ ನನ್ನದೇ ಆದ ಬಗೆಯದ್ದು. ಇದರಲ್ಲಿ ಯಾರ ಮದ್ಯಸ್ತಿಕೆಯೂ ಇರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಯಾವ ವಿಮರ್ಶಕನ ಹಂಗೂ ಇಲ್ಲದೆ ಯಾರೂ ಬೇಕಾದರೂ ಇದನ್ನು ಓದಬಹುದು ಮತ್ತು ಅವರದೇ ಆದ ಬಗೆಯಲ್ಲಿ ಅರಗಿಸಿಕೊಳ್ಳಬಹುದು ಎಂದು ಕಂಡಿತ ಹೇಳಬಲ್ಲೆ.
ಹಾಗಾಗಿ, ಕುವೆಂಪುರವರನ್ನು ಜನಸಾಮಾನ್ಯರಿಗೆ ಎಟುಕದ ಕವಿ ಎಂದು ಜೆನರಲಯ್ಸ್ ಮಾಡುವುದು ಕಂಡಿತ ಸರಿಯಲ್ಲ. ಕುವೆಂಪುರವರು ಸೋಶಿಯೊ ಸೆಂಟ್ರಿಕ್ ಆದ ಪ್ರಬಾವವನ್ನು ಬೀರಲಿಲ್ಲ ಎನ್ನುವುದು ಅಶ್ಟು ಸರಿಯಲ್ಲ; ಒಪ್ಪಲಾಗದು.

ಸೋದರ ಅತ್ತೆ, ಸೋದರ ಮಾವ...

ತಮಿಳಿನಲ್ಲಿಲ್ಲದ ಕನ್ನಡದಲ್ಲಿ ಮಾತ್ರ ಇರುವ 'ಸೋದರ ಅತ್ತೆ', 'ಸೋದರ ಮಾವ', 'ಸೋದರ ಅಳಿಯ' ಎನ್ನುವ ಬಳಕೆ ಯಾಕೆ?
ಅತ್ತೆ, ಮಾವ, ಅಳಿಯ, ಸೊಸೆ ಎಂಬುದಕ್ಕೆ 'ಸೋದರ'( < ಸಹೋದರ) ಎಂಬ ಪರಿಚೆ ಪದವನ್ನು ಮಂದೆ ಸೇರಿಸಿರುವುದರ ಹಿನ್ನಲೆ ಏನು? ಯಾಕೆ ಈ 'ಸೋದರ' ಎಂಬುದನ್ನು ಸೇರಿಸಲಾಯಿತು? ಕೂಡಣದಲ್ಲಿ ಆದ ಯಾವ ಮಾರ್ಪಾಟನಿಂದ ಹೀಗೆ 'ಸೋದರ' ಎಂಬುದನ್ನು ಸೇರಿಸಬೇಕಾಗಿ ಬಂತು?
ಹೀಗೆ ನಾವು ಪದಗಳ ಬೆನ್ನಟ್ಟಿ ಹೋದರೆ ಕೂಡಣದಲ್ಲಿ ನಡೆದ ಮಾರ್ಪಾಟುಗಳ ಕತೆಗಳನ್ನು ಎಳೆ ಎಳೆಯಾಗಿ ಬಿಡಿಸಬಹುದು. ಕೂಡಣದ ಅರಿಮೆಗೆ ಈ ಪದಗಳ ಬೆಳವಣಿಗೆಯ ಬಗ್ಗೆ ತಿಳಿಯುವುದು ತುಂಬ ಮುಕ್ಯ. ಎಮ್.ಎನ್. ಶ್ರೀನಿವಾಸ್ ಅವರ ಹೊತ್ತಗೆ 'ಮ್ಯಾರೇಜ್ ಅಂಡ್ ಪ್ಯಾಮಿಲಿ ಇನ್ ಮಯ್ಸೂರ್'(೧೯೪೨) ಎಂಬ ಹೊತ್ತಗೆಯನ್ನು ಓದಿದಾಗ ಇದಕ್ಕೆ ಕೆಲವು ಉತ್ತರಗಳು ದೊರಕಿದವು.
ಈ ಮುಂಚೆ ಕನ್ನಡದ ಎಲ್ಲ ಜಾತಿಯವರಲ್ಲಿಯೂ (ಹಾರುವರನ್ನು ಸೇರಿಸಿ) ಮದುವೆಗಳು ಈಗಾಗಲೆ ಇರುವ ಮೊರೆಯಲ್ಲಿಯೇ (ರಕ್ತ ಸಂಬಂದಿ) ನಡೆಯುತ್ತಿತ್ತು ಅಂದರೆ 'ಕ್ರಾಸ್ ಕಸೀನ್ಸ್' ನಡುವೆ ಮದುವೆಗಳು ಏರ್ಪಡುತ್ತಿದ್ದವು. ಅಂದರೆ ಹೆಣ್ಣಾದರೆ ತನ್ನ ತಾಯಿಯ ತಮ್ಮನನ್ನೋ(ಸೋದರ ಮಾವ), ತಾಯಿಯ ಅಣ್ಣನ ಮಗನನ್ನೋ(ತಾಯಿಗೆ ಸೋದರ ಅಳಿಯ) , ಗಂಡಾದರೆ ತನ್ನ ತಂದೆಯ ತಂಗಿಯ ಮಗಳನ್ನೋ(ತಂದೆಗೆ ಸೋದರ ಸೊಸೆ) ಇಲ್ಲವೆ ತಾಯಿಯ ತಮ್ಮನ ಮಗಳನ್ನೋ(ತಾಯಿಗೆ ಸೋದರ ಸೊಸೆ) ಮದುವೆಯಾಗುತ್ತಿದ್ದರು.
ಸೋದರ ಮಾವಂದಿರೇ ಮಾವ ಆಗಿರುತ್ತಿದ್ದರು.(ಮಾವ ಅಂದರೆ ಹೆಣ್ಣು ಕೊಟ್ಟ ಮಾವ/ಗಂಡನ ತಂದೆ)
ಸೋದರ ಅತ್ತೆಯಂದಿರೇ ಅತ್ತೆ ಆಗಿರುತ್ತಿದ್ದರು.(ಅತ್ತೆ ಅಂದರೆ ಹೆಣ್ಣು ಕೊಟ್ಟ ಅತ್ತೆ/ಗಂಡನ ಅಮ್ಮ)
ಹಾಗಾಗಿ 'ಸೋದರ' ಎಂಬ ಪರಿಚೆ ಪದವೇ ಬೇಕಾಗಿರಲಿಲ್ಲ.
ಆದರೆ, ಯಾವಾಗ ಮದುವೆಗಳು ಈಗಾಗಲೆ ಇರುವ ಮೊರೆಯ ಆಚೆ ಆಗಲು ಶುರುವಾದವೊ ಆಗ 'ಸೋದರ ಮಾವ' ಮತ್ತು ಮಾವ(ಅಂದರೆ ಹೆಣ್ಣು ಕೊಟ್ಟ ಮಾವ) ಬೇರೆ ಬೇರೆ ಆದರು. ಈ ಬೇರೆತನವನ್ನು ತೋರಿಸಲು ಮಾವನ ಮುಂದೆ 'ಸೋದರ' ಎಂಬ ಪರಿಚೆ ಪದದ ಬಳಕೆ ಆಯಿತು. ಹೆಣ್ಣು ಕೊಟ್ಟ ಮಾವನನ್ನು 'ಮಾವ' ಎಂದಶ್ಟೆ ಉಳಿಸಿಕೊಳ್ಳಲಾಯಿತು.
ಇದೇ ವಿವರಣೆ ಅತ್ತೆ, ಅಳಿಯ, ಸೊಸೆ ಎಂಬ ಪದಗಳಿಗೂ ಒಪ್ಪುವುದು.
ಆದರೆ ಹೀಗೆ ಆಗಲು ಕಾರಣವೇನು ಎಂಬುದಕ್ಕೆ ಎಮ್.ಎನ್. ಶ್ರೀನಿವಾಸ್ ಅವರು ಕೊಡುವ ಕಾರಣ 'ಸಂಸ್ಕ್ರುತೀಕರಣ'. ಯಾಕಂದರೆ ಸೋದರ ಎಂಬುದು ಸಂಸ್ಕ್ರುತದ 'ಸಹೋದರ'(ಒಡಹುಟ್ಟಿದವನು) ಎಂಬ ಪದದಿಂದ ಬಂದಿದೆ. ಆದ್ದರಿಂದ ಇದು ಕನ್ನಡದ ಕೂಡಣ 'ಸಂಸ್ಕ್ರುತೀಕರಣ'ಗೊಂಡುದನ್ನು ತೋರಿಸುತ್ತದೆ ಎಂದು ಅವರು ಹೇಳುತ್ತಾರೆ.

ನೂರೊಂದ - ಕನ್ನಡದ್ದೇ ಹೆಸರು.

ಚನ್ನಪಟ್ಟಣದ ಹತ್ತಿರ ಇರುವ ಕಯ್ಲಂಚದಲ್ಲಿ ಮಯ್ಸೂರಿನ ದಳವಾಯಿಯಾಗಿದ್ದ ನಂಜರಾಜಯ್ಯನಿಗೂ ಮತ್ತು ಆರ್ಕಾಟಿನ ನವಾಬನಿಗೂ ನಡೆದ ಕಾದಾಟದಲ್ಲಿ ನಂಜರಾಜಯ್ಯನು ಗೆದ್ದನು - ಇದನ್ನು ಒಂದು ಕಟ್ಟೊರೆಯಲ್ಲಿ ಹಿಡಿದಿಟ್ಟ ಬರಹಗಾರನ ಹೆಸರು ನೂರೊಂದ.
ನೂರೊಂದು+ಅ = ನೂರೊಂದ #ಕನ್ನಡದ್ದೇ ಹೆಸರು.
["ಕಳಲೆ ರಾಜವಂಶ " - ಈ ಹೊತ್ತಗೆಯಿಂದ]

ಹುಬ್ಬಳ್ಳಿ - ಇದರ ಬೇರು?

ಹುಬ್ಬಳ್ಳಿ (ಹೊಸಗನ್ನಡ) < ಪೂವಳ್ಳಿ (ಹಳೆಗನ್ನಡ)
ಪೂ+ಪಳ್ಳಿ => ಪೂವಳ್ಳಿ (ಹೂವಿನ ಹಳ್ಳಿ)

ನಿಜಗುಣ ಶಿವಯೋಗಿ ಮತ್ತು ಅನುಬವಸಾರವು

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಹತ್ತಿರ ಇರುವ, ಚಿಲುಕವಾಡಿ ಎಂಬ ಹಳ್ಳಿಯ ಗುಡ್ಡದಲ್ಲಿದ್ದ ನಿಜಗುಣ ಶಿವಯೋಗಿಯವರ 'ಅನುಬವ ಸಾರವು' ಎಂಬ ನೆಗಳ್ತೆಯಿಂದ ಒಂದು ನಲ್ಸಾಲು. ಇವರು ಇದ್ದುದು ೧೭ನೇ ನೂರೇಡು ಎಂದು ಹೇಳಲಾಗಿದೆ.
"ಮುಗಿಲ್ ಓಡೆ ಚಂದ್ರಮನ್ ಮಿಗೆ ಓಡುವಂತಿರ್ಪ್ಪ ಬಗೆಯಲ್ಲದು ಓಡದಂತು, ಅಹಮಿನಿಂ ಜೀವನಿಗೆ ವಿಕಾರವೆ ಸಹಜವಲ್ಲ"
ಹೇಗೆ ಮುಗಿಲು ಓಡುತ್ತಿದ್ದರೂ ತಿಂಗಳೇ(ಚಂದ್ರನೇ) ಓಡುತ್ತಿರುವಂತೆ ಅನಿಸುತ್ತದೆಯೋ ಆದರೆ ದಿಟವಾಗಿಯೂ ತಿಂಗಳನು ಓಡುತ್ತಿರುವುದಿಲ್ಲ. ಹಾಗೆ ಕೊಬ್ಬಿನಿಂದಾಗಿ ಮನುಶ್ಯನಲ್ಲಿ ನೋವು, ನಿರಾಸೆಗಳು ಉಂಟಾಗುತ್ತದೆಯೇ ಹೊರತು ಅದು ಸಹಜವಲ್ಲ.
#ಕನ್ನಡದ್ದೇ ಪದ 'ಮಿಗೆ' ಬಳಕೆ ನೋಡಿ

ವಾನರ - ಇದರ ಬೇರು?

ಪಿ ಎಸ್ ಸುಬ್ರಹ್ಮಣ್ಯಮ್ ಅವರು 'ವಾನರ' ಎಂಬುದ ವಾಲ್+ ನರ ಎಂದು ಬಿಡಿಸಿದ್ದಾರೆ. ಅಂದರೆ ಬಾಲ ಇರುವ ಮನುಶ್ಯ.
ಇಲ್ಲಿ ವಾಲ್(ತ), ಬಾಲ(ಕ), ವಾಲಮು(ತೆ) - ಎಂಬ ಪದಗಳು ದ್ರಾವಿಡ ಬೇರು ಪದಗಳು ಎಂದು ಅವರು ಹೇಳಿದ್ದಾರೆ.
ಅಲ್ಲದೆ ಸಂಸ್ಕೃತದ 'ನರ ಇವ ವಾನರಃ' ಎಂಬ ಬಿಡಿಸಿಕೆ ತಪ್ಪು ಎಂದು ತೋರಿಸಿದ್ದಾರೆ

ತನ್ನೆದುರ‍್ತನ - ಏನು? ಎತ್ತ?

ನಾವು ಯಾವಾಗಲೂ ’ತನ್ನೆದುರ‍್ತನ’(contradiction) ಎಂಬುದೆ ಕೆಟ್ಟದ್ದು ಇಲ್ಲವೆ ತನ್ನೆದುರ‍್ತನವೇ ಒಂದು ದೊಡ್ಡ ತೊಂದರೆ ಎಂದು ಕಯ್ ಚೆಲ್ಲಿ ಕೂರುತ್ತೇವೆ. ಆದರೆ ತನ್ನೆದುರ‍್ತನ ಎಂಬುದು ನಮ್ಮ ಸುತ್ತಲ್ಲೆಲ್ಲಾ ಇದೆ.
ಎತ್ತುಗೆಗೆ, ಬೆಳಕು ಒಂದು ಅಲೆಯೂ ಹವ್ದು ಅಲ್ಲದೆ ತುಣುಕು ಹವ್ದು. ಆದರೆ ಹೇಗೆ ಅಲೆಯೂ ಆಗಿ ಮತ್ತು ತುಣುಕೂ ಆಗಿ ಅದು ಇರಲು ಸಾದ್ಯ ಎಂದು ನೀವು ಕೇಳಿದರೆ ಅಲ್ಲಿ ತನ್ನೆದುರ‍್ತನ ತಾನಾಗಿಯೇ ಉಂಟಾಗಿದೆ ಎಂದು ಹೇಳಬಹುದಶ್ಟೇ.
ಅಶ್ಟೇ ಏಕೆ, ನಮ್ಮೊಳಗೂ ಇಂತಹದ್ದೇ ಒಂದು ತನ್ನೆದುರ‍್ತನ ಇದೆ. ಅದೇನೆಂದರೆ, ನಮ್ಮ ಮಯ್ ಮತ್ತು ಬಗೆಗೂ ಇರುವ ತನ್ನೆದುರ‍್ತನ. ಬಗೆಗೆ ತನ್ನದೇ ಆದ ಇರುವಿಕೆ ಇಲ್ಲ. ಅದಕ್ಕೆ ಒಂದು ಮಯ್ ಬೇಕೇ ಬೇಕು. ಆದರೂ ನಮ್ಮ ಮಯ್ ಬೆಂಗಳೂರಿನ ದಾರಿಗಳಲ್ಲಿ ಓಡಾಡುತ್ತಿದ್ದಾಗ, ನಮ್ಮ ಬಗೆ ಇದರಿಂದ ತುಂಬ ದೂರವಿರುವ ಸ್ಯಾನ್ ಪ್ರಾನ್ಸಿಸ್ಕೊದ ದಾರಿಗಳಲ್ಲಿ ಅಲೆಯುತ್ತಿರಬಹುದು. ಮಯ್ ಒಂದೇ ಎಡೆಯಲ್ಲಿ ನೆಲೆ ನಿಂತಾಗಲೂ ಬಗೆಯು ಅಲೆಯುತ್ತಿರಬಹುದು. ಆದರೂ ಹೀಗೆ ಬಗೆಯನ್ನು ಒಂದು ಮಯ್ಯಲ್ಲಿ ಹಿಡಿದಿಟ್ಟಿದ್ದರೂ ಅದರ ಮೇಲೆ ಯಾವ ಕಟ್ಟನ್ನು ಹೇರಲಾಗುವುದಿಲ್ಲ. ಮಯ್ಯ ಮೇಲೆ ಬಗೆ ಗಮನ ಹರಿಸದಿದ್ದರೆ ಇಲ್ಲವೆ ಮಯ್ಯನ್ನು ಅಂಕೆಯಲ್ಲಿಟ್ಟಕೊಳ್ಳದಿದ್ದರೆ ನಮಗೆ ನಾವು ಕೆಲವು ತೊಂದರೆಗಳನ್ನು ತಂದೊಡ್ಡಿಕೊಳ್ಳಬಹುದು ಇಲ್ಲವೆ ಬೇರೆಯವರಿಗೆ ನಮ್ಮಿಂದ ತೊಂದರೆಯಾಗಬಹುದು.
ನಮ್ಮ ಹುಟ್ಟಿನ ಪಕ್ಕದಲ್ಲಿ ಸಾವು ಇದೆ ಎಂದು ತನ್ನರಕೆಗಾರರು ಹೇಳುವಾಗ ಸಾಯುವುದೇ ಇದ್ದರೆ ಹುಟ್ಟುವುದೇ ಯಾಕೆ? ಎಂಬ ’ತನ್ನೆದುರ‍್ತನ’ದ ಕೇಳ್ವಿಯನ್ನು ಕೇಳಬಹುದು. ಆದರೆ ನಮ್ಮ ಸುತ್ತಣ ಇರುವುದೇ ಹೀಗೆ; ಇದೇ ತೆರನಾದ ಹಲವು ಕೇಳ್ವಿಗಳನ್ನು ಹಾಲು-ತುಪ್ಪ, ಹೂವು-ಹಣ್ಣು ಇವೆಲ್ಲವುಗಳ ಬಗ್ಗೆ ಕೇಳಬಹುದು.
ಹಾಗಾದರೆ ಈ ತನ್ನೆದುರ‍್ತನದೊಂದಿಗೆ ಹೇಗೆ ಏಗುವುದು?
ಮೊದಲು, ತನ್ನೆದುರ‍್ತನವೇ ಒಂದು ತೊಂದರೆ ಎಂಬುದನ್ನು ನಮ್ಮ ಬಗೆಯಿಂದ ತೆಗೆದುಹಾಕಬೇಕು. ಆದರೆ ತನ್ನೆದುರ‍್ತನದಿಂದ ತೊಂದರೆಯಾಗಬಹುದು ಎಂಬುದನ್ನು ಅರಿತುಕೊಳ್ಳಬೇಕು. ನಾವು ಈ ’ತನ್ನೆದುರ‍್ತನ’ಗಳನ್ನು ಹೆಚ್ಚು ಹೆಚ್ಚು ಅರಿತುಕೊಂಡಶ್ಟು ಅದರಿಂದಾಗುವ ತೊಂದರೆಗಳನ್ನು ಇಲ್ಲವಾಗಿಸಬಹುದು ಇಲ್ಲವೆ ತಪ್ಪಿಸಬಹುದು.
ನಮ್ಮ ಸುತ್ತಲೂ ಕಟ್ಟಿಕೊಂಡಿರುವ ಏರ್ಪಾಟುಗಳಲ್ಲೂ ಇಂತಹದೇ ಹಲವು ತನ್ನೆದುರ‍್ತನಗಳು ಇವೆ. ಅದನ್ನು ನಾವು ಅರಿತುಕೊಂಡರೆ ಸುತ್ತಣವನ್ನು ನೋಡುವ ನೋಟವೇ ಬದಲಾಗುತ್ತದೆ. ಬದಲಾದ ನೋಟದಿಂದ ಕೆಲವು ಒಳನೋಟಗಳು ನಮಗೆ ದೊರೆಯುತ್ತವೆ.

'ಅಲ್ಲಮ' ಪದದ ಬೇರು

"ಅಲ್ಲಮ ಪ್ರಬು -ಚಿಂತನ "( ಸಂ: ಎಸ್.ಕೆ.ಕೊಪ್ಪಾ, ಕರ್ನಾಟಕ ಸಾಹಿತ್ಯ ಅಕಾಡೆಮಿ) ಎಂಬ ಹೊತ್ತಗೆಯಲ್ಲಿ ಎಸ್.ಎಮ್.ವಿ.ಸ್ವಾಮಿಯವರು 'ಅಲ್ಲಮ' ಪದದ ಬೇರು ಹುಡುಕಲು ತುಂಬ ಮೊಗಸಿದ್ದಾರೆ.
ಅವರು ಕೊಟ್ಟಿರುವುದು:-
೧. ಅಲ್ಲಾಹ್ (ಅರೇಬಿಕ್ ನುಡಿ) ಇಂದ ಬಂದಿದೆ - ಇದನ್ನು ಮೊದಲು ಕಿಟ್ಟೆಲ್ ತಮ್ಮ ಪದನೆರಕೆಯಲ್ಲಿ ಕೊಟ್ಟಿದ್ದರು, ಅದು ಅಶ್ಟು ಸರಿಯಾದ ಎಟಿಮಾಲಜಿ ಅಲ್ಲ ಅಂತ ಬಗೆದು ಮರಿಯಪ್ಪ ಬಟ್ಟರು ತಿದ್ದಿ ತೊಡ್ಡದು ಮಾಡುವಾಗ ಅದನ್ನು ತೆಗೆದಿದ್ದಾರೆ.
೨. ಅಲ್ಲ - ಇದು 'ಅಥರ್ವಣದ ವೇದ'ದಲ್ಲಿ ಬರುವ ಒಂದು ಪದ. ಬಹುಶಹ 'ಶಿವ' ಎಂಬುದು ಎಂದು.
೩. ಅಲ್ಲ - ಕನ್ನಡದ್ದೇ ಪದ 'ಅಲ್ಲ' ಇಂದ ಬಂದಿದೆ. ಅಂದರೆ ಇದ್ದರು ಇಲ್ಲದ ಹಾಗೆ ಇರುವವನು ಅಂದರೆ 'ದೇವರು' ಎಂದು ಬಿಡಿಸಿದ್ದಾರೆ.
----------------------
ನನಗೆ ಹೊಳೆದಿದ್ದು:-
----------------------
ಇವಿಶ್ಟರಲ್ಲಿ ೧, ೨ ನ್ನು ಅವರೇ ಸರಿಯಲ್ಲ ಎಂದು ಹೇಳಿದ್ದಾರೆ. ೩ ಕೂಡ ಅಶ್ಟು ಸರಿಯಲ್ಲವೆಂದು ನನಗೆ ಅನಿಸುತ್ತಿದೆ.
ಕನ್ನಡದಲಿ 'ಅಲ್ಲು' ಎಂಬ ಇನ್ನೊಂದು ಪದವಿದೆ. ಅಂದರೆ ಸೇರು, ಜೋಡಿಸು, ಹೊಂದು, ಹೆಣೆ ಎಂಬ ಹುರುಳುಗಳಿವೆ. ನಮಗೆ ಏನೇ ವಸ್ತು ಇಲ್ಲವೆ ವಿಶಯ ಇಶ್ಟವಾದಲ್ಲಿ ನನಗೆ ಅದು 'ಸೇರು'ತ್ತದೆ ಎಂದು ಹೇಳುತ್ತೇವೆ. ನಮಗೆಲ್ಲರಿಗೂ ನಮ್ಮ ಮಕ್ಕಳು ತುಂಬ ಇಶ್ಟವಾಗುತ್ತಾರೆ.
ಹಾಗಾಗಿ, ಮೊದಲೆಲ್ಲ ಒಲವಿನಿಂದ ಮುದ್ದಣ್ಣ, ಚಿಕ್ಕಣ್ಣ, ಕೂಸಣ್ಣ, ಕೂಸಮ್ಮ, ಕೂಸಪ್ಪ ಎಂದು ಹೆಸರಿಡುತ್ತಿದ್ದರು.
ಹಾಗೆಯೇ,
ಅಲ್ಲು+ಮ (ಅಮ್ಮ ಎಂಬುದರ ಅಡಕ ರೂಪ) = ಅಲ್ಲುಮ => ಅಲ್ಲಮ
ಅಲ್ಲಮ ಎಂದರೆ ಪ್ರೀತಿಪಾತ್ರ, ಒಲವಿಗೆ ತಕ್ಕವನು ಎಂದಾಗುತ್ತದೆ. ಚಿಕ್ಕ ಮಕ್ಕಳಿಗೆ ಹೀಗೆ ಹೆಸರಿಡುವುದು ಸಹಜವಾಗಿದೆ.
'ಮ' ಎಂಬುದು ಒಂದು ಗಂಗುರುತಿನ ಒಟ್ಟು ಇರಬಹುದು ಎತ್ತುಗೆಗೆ- ಆಣ್-ಮ(ruler)

ದಿಟವಾದ ಅರಿವಾಳು

ನಿಜಗುಣ ಶಿವಯೋಗಿಯ 'ಅನುಬವಸಾರವು' ಎಂಬ ನೆಗಳ್ತೆಯಿಂದ:-
"ಹೊಲಗೇರಿಯೊಳು ಕಾಶಿಯೊಳು(ವಾರಣಾಸಿಯೊಳು) ಮರೆವೆಯ ಅರಿವಿನೊಳು, ತಿಳಿ ದೇಹವಳಿಯಲು ಉಚ್ಚ ನೀಚತೆಗಳ ಅಂಡಲೆ ಇಲ್ಲವು ಆತ್ಮವು ಇದನು ಇಲ್ಲಿ"
ದಿಟವಾದ ಅರಿವಾಳಿಗೆ(ಆತ್ಮನಿಗೆ), ತಾನು ಹೊಲಗೇರಿಯೊಳಿದ್ದರೂ ಕಾಶಿಯೊಳಿದ್ದರೂ ಮರೆವೆಯ ಅರಿವೆನೊಳಿದ್ದರೂ, ದೇಹವು ಅಳಿಯಲೂ, ಯಾವುದೇ ತೆರನಾದ 'ಮೇಲು-ಕೀಳು' ಎಂಬ ಪೀಡೆ/ಹಿಂಸೆ(ಇದಕ್ಕೆ #ಕನ್ನಡದ್ದೇ ಪದ ಅಂಡಲೆ) ಇರುವುದಿಲ್ಲ/ತಗುಲುವುದಿಲ್ಲ.
ಯಾಕಂಡರೆ ಅರಿವಾಳಿಗೆ ಹೊಲಗೇರಿ, ಕಾಶಿ, ಅರಿವು, ಮರೆವು, ದೇಹದ ಅಳಿವು - ಇವುಗಳ ನಡುವೆ ಯಾವುದೇ ಬೇರೆತನವಿಲ್ಲ. ದಿಟವಾದ ಅರಿವಾಳು ಎಲ್ಲವನ್ನು ಸಮಾನವಾಗಿ ಕಾಣುತ್ತಾನೆ.
#ಕನ್ನಡದ್ದೇ ಪದ ಅಂಡಲೆ

ಕೇಳ್ ಕಲಿಗನೇ...

[ಹಿಂದೆ ನಿಜಗುಣ ಶಿವಯೋಗಿಯವರ 'ಅನುಬವಸಾರವು' ಎಂಬ ನೆಗಳ್ತೆಯ ಬಗ್ಗೆ ಬರೆದಿದ್ದೆ. ಅದರಲ್ಲಿ ಕೊಟ್ಟಿರುವ ನಾಲ್ಕು 'ಚಿತ್ತವೃತ್ತಿ'ಗಳನ್ನು ಆದಶ್ಟು ಸುಳುಗೊಳಿಸಿ ನನ್ನ ಅರಿವಿನ ಎಲ್ಲೆಗಾಗುವಶ್ಟು ತಿಳಿಗನ್ನಡಕ್ಕೆ ತಂದಿದ್ದೇನೆ]
ಕೇಳ್ ಕಲಿಗನೇ ನಮ್ಮ
ಒಳಗಿಗೆ ನಾಲ್ವಗೆಯುಂಟು
ಬೀದಿಕಸದವೊಲ್ ತಗಲದೆ
ಬದಲಾಗದಿರುವುದೇ ಮಾರಿಲಿಬಗೆ
ಕೊರಡಿದೋ ಆಳೋ ತಿಳಿಯದೆಂದು
ಅರಸುವ ಅಳವೇ ಹುಡುಕುಬಗೆ
ಇದನರಿದವನ್ ನಾನಿದು ಇದೆನಗೆ ಇದೆನ್ನದೆಂಬ
ಮರುಳಿನಲ್ಲಿರುವುದೇ ಸೊಕ್ಕುಬಗೆ
ಇದು ಕಳ್ಳನ್ನಲ್ಲ, ದಲ್ ಕೊರಡೇ ಎಂದು
ಇದಕೆ ಅದುಹಿಕೆ ಬೇಡೆಂಬ ಅರಿವೇ ತಿಳಿಬಗೆ
------------
ಅದುಹಿಕೆ (ಕ) = ಸಂಶಯ(ಸಂ)
ದಲ್ (ಕ) = ನಿಶ್ಚಯವಾಗಿ(ಸಂ) [ ನೀವು ಪಂಪ, ಕುವೆಂಪು ಅವರ ನೆಗಳ್ತೆಗಳನ್ನು ಓದಿದ್ದರೆ 'ದಲ್' ಪದ ಗೊತ್ತಿರುತ್ತದೆ]
ಒಳಗು(ಕ) = ಅಂತಃಕರಣ(ಸಂ)

ಓ ಕಾದಲೆ...

[ನಮ್ಮ ಕಾದಲನು ಕಾದಲೆಯನ್ನು ಕಳೆದುಕೊಂಡಿದ್ದಾನೆ. ಕಾದಲೆಯ ಅಗಲಿಕೆಯಿಂದಾಗಿ ಅವನು ಅಳಲ್ಗಡಲಿನಲ್ಲಿ ಮುಳುಗಿದ್ದಾನೆ. ಅವನ ಗುಂಡಿಗೆಯಿಂದ ಹೊಮ್ಮಿದ ಹಾಡಿದು. ಇದನ್ನು ತಮಿಳಿನ 'ಬಾಂಬೆ' ಎಂಬ ಓಡುತಿಟ್ಟದ 'ಕಣ್ಣಾಳನೇ' ಎಂಬ ಹಾಡಿನ ರಾಗದಲ್ಲಿ ಹಾಡಿಕೊಳ್ಳತಕ್ಕದ್ದು]
ಓ ಕಾದಲೆ
=======

ಕಣ್ಣಾದೆ..... ನೀ
ಓ ಕಾದಲೆ ಬಾಳಲ್ಲಿ ಬಣ್ಣವು ನೀ
ಎಣಿಸಿದ್ದೇ.......ನಾ
ಹಾಯಾಗಿ ಇರಬಹುದು ಎಂದೆಂದಿಗೂ
ಕಣ್ಣಲ್ಲೆ ಕಣ್ಣಿಟ್ಟು ಮಣ್ಣಾದೆ ನೀ
ಕಣ್ಣಾಗು ಕಣ್ಣೀರಿಗೇ...ಎ.ಎ || ಎರಡು ಸಲ||
ಕಣ್ಣಲ್ಲೂ ನೀ ಮಣ್ಣಲ್ಲೂ ನೀ
ಎಲ್ಲೆಲ್ಲೂ ನೀ ಕಾದಲೇ...ಎ

ಗುರು-ಲಿಂಗ-ಜಂಗಮ - ಒಂದು ಹೊಸನೋಟ


ಈ ಮೂರು ಪದಗಳು ಸದ್ಯಕ್ಕೆ ಲಿಂಗಾಯತ/ವೀರಶಯ್ವ ತತ್ವದ ನೆಲೆಯಲ್ಲಿ ಬಳಕೆಯಲ್ಲಿವೆ. ಆದರೆ ಇದನ್ನು ನಾವು ಹೊಸಗಾಲದ ಕೆಲವು ಕುರಿಪುಗಳ ಕಣ್ಣಿಂದ ನೋಡಬಹುದು, ಯಾಕಂದರೆ ನಮ್ಮ ಹಿನ್ನಡವಳಿಯಲ್ಲಿ ಈಗಾಗಲೆ ಕತೆಗಳನ್ನು ಒಡೆದು ಕಟ್ಟುವುದು ಎಡೆಬಿಡದೆ ನಡೆದುಕೊಂಡು ಬಂದಿದೆ. ಈ ಒಡೆದು-ಕಟ್ಟುವ ಕೆಲಸ ಮುಂದುವರೆಯುತ್ತಿರುವ ಒಂದು ಕೂಡಣದ ಕುರುಹು.
ಹೊಸಗಾಲದ ಮಂದಿಯಾಳ್ವಿಕೆಯ ನೆಲೆಯಲ್ಲಿ ವ್ಯಕ್ತಿ ಮಟ್ಟದ ಸ್ವತಂತ್ರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಯಾಕಂದರೆ ಲಿಬರಲ್ ಡೆಮಾಕ್ರಟಿಕ್ ತತ್ವಗಳ ಮೇಲೆ ಹೆಚ್ಚಿನ ಮಂದಿಯಾಳ್ವಿಕೆಗಳು ಇಂದು ಕೆಲಸ ಮಾಡುತ್ತಿವೆ.
'ಇಶ್ಟಲಿಂಗ' ಎಂಬ ಕುರಿಪು(ಕಾನ್ಸೆಪ್ಟ್) ವ್ಯಕ್ತಿಯ ಮಟ್ಟದ ಸ್ವತಂತ್ರವನ್ನು ಎತ್ತಿ ಹಿಡಿಯುವುದನ್ನು ಸೂಚಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಯಾಕಂದರೆ ಬಡವ-ಬಲ್ಲಿದ, ಗಂಡಸು-ಹೆಂಗಸು, ಮೇಲು-ಕೀಳು ಎಂಬುದನ್ನು ಲೆಕ್ಕಿಸದೆ ಎಲ್ಲರಿಗೂ ಇಶ್ಟಲಿಂಗದ ಪೂಜೆಗೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ, ಅದರ ಮೂಲಕ ತಮ್ಮ ತಮ್ಮ ತನ್ನರಕೆಯ ಹಾದಿಯನ್ನು ತಾವೇ ಹುಟ್ಟಿಹಾಕಿಕೊಳ್ಳುವ ಸ್ವತಂತ್ರವನ್ನು ವ್ಯಕ್ತಿಗೆ ಬಿಡಲಾಗಿದೆ. ಇಲ್ಲಿ ಯಾವುದೇ ಒತ್ತಾಯ ಮತ್ತು ಅಂಡಲೆಗೆ/ಹಿಂಸೆಗೆ ಎಡೆಯಿಲ್ಲ. ಹಾಗಾಗಿ ಇದು ಲಿಬರಲ್ ಡೆಮಾಕ್ರಟಿಕ್ ಚವ್ಕಟ್ಟಿನಲ್ಲಿ ಒಪ್ಪಿತವಾಗುತ್ತದೆ.
'ಗುರು' ಎಂಬುದು ಒಬ್ಬೊಬ್ಬ ವ್ಯಕ್ತಿಯ ಮಟ್ಟದ ಅರಿವನ್ನು ಗೌರವಿಸುವುದನ್ನು ಸೂಚಿಸುತ್ತದೆ; ಯಾಕಂದರೆ 'ಅರಿವೇ ಗುರು' ಎಂಬುದು ಶರಣರ ನಿಲುವು. ಅಂದರೆ ಲಿಂಗವು ವ್ಯಕ್ತಿಯ ಹೊರಗಿನ ಸ್ವತಂತ್ರಕ್ಕೆ ಒತ್ತು ಕೊಟ್ಟರೆ 'ಗುರು' ಎಂಬುದು ಒಳಗಿರುವ ಅರಿವಿಗೆ ಬೆಲೆ ಕೊಡುತ್ತದೆ. ಪ್ರತಿಯೊಬ್ಬ ಮನುಶ್ಯನಿಗೆ, ಯಾವುದೇ ಹಿನ್ನೆಲೆಯಿದ್ದರೂ, ಅವನಲ್ಲಿ 'ಅರಿವು' ಇದೆ ಎಂಬುದನ್ನು ಇಲ್ಲಿ ಗುರುತಿಸಲಾಗಿದೆ. ಹೀಗೆ ಗುರುತಿಸುವಿಕೆಯೇ ಇದರ ಹೆಗ್ಗಳಿಕೆ. ಅರಿವನ್ನು ಬಳಸಿಕೊಂಡು 'ಸೂಳ್ನುಡಿ'ಗಳನ್ನು ಕಟ್ಟಬೇಕೆಂಬುದೇ ಶರಣರ ಬಯಕೆ. ಇದರಂತೆ ನಾವು ಹಲವು ಬೇರೆ ಬೇರೆ ಹಿನ್ನೆಲೆಯುಳ್ಳ ಸೂಳ್ನುಡಿಕಾರರನ್ನು ಕಾಣಬಹುದು.
ಹೀಗೆ, ಶರಣ ತತ್ವದ ಮೊದಲ ಎರಡು ಕುರಿಪುಗಳು ಹೊಸಗಾಲದ 'ಲಿಬರಲ್ ಡೆಮೊಕ್ರಾಟಿಕ್'ನ ತತ್ವಗಳನ್ನು ಎತ್ತಿಹಿಡಿಯುತ್ತದೆ. ಅವೇನೆಂದರೆ ಪ್ರತಿಯೊಬ್ಬ ವ್ಯಕ್ತಿಗೆ ದೊರೆಯಬೇಕಾದ ಗೌರವ ಮತ್ತು ಸ್ವತಂತ್ರ. ಇವೇ ಲಿಬರಲ್ ಡೆಮೊಕ್ರಾಟಿಕ್ ತತ್ವಗಳ ಅಡಿಪಾಯವಾಗಿದೆ.
ಆದರೆ ಶರಣರು 'ಲಿಬರಲ್ ಡೆಮಕ್ರಾಟಿಕ್'ನಂತೆ ಗುರು-ಲಿಂಗ ಎಂಬ ಎರಡೇ ವ್ಯಕ್ತಿಮಟ್ಟದಲ್ಲಿರುವ ಕುರಿಪುಗಳನ್ನು ಕೊಟ್ಟಿಲ್ಲ. ಇವೆರಡಕ್ಕಿಂತಲೂ ಕೊಂಚ ಬೇರೆಯಾದ 'ಜಂಗಮ' ಎಂಬ ಕುರಿಪನ್ನು ನಮಗೆ ಕೊಟ್ಟಿದ್ದಾರೆ. ಹಿರಿಯ ಬರಹಗಾರರಾದ ಎಚ್ಚೆಸ್ಕೆಯವರು(ವಿಚಾರ ವಿಹಾರ) 'ಜಂಗಮ' ಎಂಬುದಕ್ಕೆ ದೊಡ್ದದಾದ ಹುರುಳಿದೆ ಅಂದರೆ ಅದಕ್ಕೆ 'ಸಮಾಜ', 'ಸುತ್ತಣ' ಎಂಬ ಹುರುಳಿದೆ ಎಂದು ಹೇಳಿದ್ದಾರೆ. ಯಾರೇ ಆದರೂ ತನ್ನ ಗೌರವ ಮತ್ತು ಸ್ವತಂತ್ರದ ಜೊತೆಗೆ ತನ್ನ ಸುತ್ತಣದ ಜೊತೆಗೆ ಒಂದು ಹೊಂದಾಣಿಕೆಯಲ್ಲಿ ಬದುಕು ನಡೆಸಬೇಕೆಂಬುದೇ ಇಲ್ಲಿ ಶರಣರ ಬಯಕೆಯಾಗಿದೆ. ಅಂದರೆ ನಮ್ಮ ಗಳಿಕೆಯನ್ನು ನಮ್ಮ ಸುತ್ತಣದ ಜೊತೆಗೆ ಹಂಚಿಕೊಂಡು ಹೊಂದಿಕೊಂಡು ಬಾಳ್ವಿಕೆ ನಡೆಸುವುದು; ಇದನ್ನೇ 'ದಾಸೋಹ' ಎಂದು ಬಗೆಯಬೇಕು. ಈ ದಾಸೋಹವೇ ವ್ಯಕ್ತಿಯ ಮತ್ತು ಸುತ್ತಣದ ನಂಟನ್ನು ಹಸನಾಗಿಸುತ್ತದೆ. ಹಾಗು ಇದು ಮುಂದುವರಿಸ್ಕೊಂಡು ಹೋಗಬಹುದಾದ ಅಲ್ಲದೆ ಗಟ್ಟಿಯಾದ ಸಮಾಜವನ್ನು ಕಟ್ಟಲು ಅನುವು ಮಾಡಿಕೊಡುತ್ತದೆ.
ಇಂದು, ನಮ್ಮ ಚಿಂತನೆಯಲ್ಲಿ ವ್ಯಕ್ತಿಯ ಮಟ್ಟದ ಹಕ್ಕುಗಳಿಗಶ್ಟೆ ಹೆಚ್ಚುಗಾರಿಕೆ ಕೊಟ್ಟಿದ್ದೇವೆ. ನಾವು, ಜಂಗಮ ಮತ್ತು ಅದಕ್ಕೆ ಅಂಟಿಕೊಂಡಿರುವ ದಾಸೋಹದ ಕುರಿಪುಗಳನ್ನು ಮರೆತಿದ್ದೇವೆ ಇಲ್ಲವೆ ಅದನ್ನು ನಡೆಸಲಾಗುತ್ತಿಲ್ಲ. ಕೂಡಲೆ ಎಚ್ಚೆತ್ತುಕೊಂಡು 'ಜಂಗಮ'ದ ಕಡೆ ನಮ್ಮ ಗಮನವನ್ನು ಹರಿಸಬೇಕಾಗಿದೆ. ಆವಾಗಲೇ, ನಾವು ಒಂದು ಹಸನಾದ ಮತ್ತು ದಿಟವಾಗಲೂ ಮುಂದುವರೆಯುತ್ತಿರುವ ಕೂಡಣದ ಕನಸನ್ನು ಕಾಣಬಹುದು.