ಸೆಮಿಟಿಕ್ ನುಡಿಗಳಾದ ಅರೇಬಿಕ್ ಮತ್ತು ಹಿಬ್ರೂ ಕಂಡುಕೊಂಡ ಲಿಪಿಯಲ್ಲಿ ಬರೀ ಮುಚ್ಚುಲಿಯನ್ನಶ್ಟೆ(ಕಾನ್ಸೊನೆಂಟ್) ಬರೆಯಲಾಗುತ್ತಿತ್ತು. ತೆರೆಯುಲಿಯನ್ನು(ವೋವಲ್) ಬರಹದಲ್ಲಿ ತೋರಿಸುವ ಅನುವಿರಲಿಲ್ಲ.
ಎತ್ತುಗೆಗೆ, 'ಕನ್ನಡ' ಎಂಬುದನ್ನು ಹಿಬ್ರು ಲಿಪಿಯಲ್ಲಿ ಬರೆದರೆ 'ಕ್ ನ್ ನ್ ಡ್' ಎಂದಶ್ಟೇ ಬರೆಯಬಹುದು. ಸಂದರ್ಬ ಮತ್ತು ವಾಕ್ಯಗಳನ್ನು ನೋಡಿ ಪದ ಯಾವುದೆಂದು ಓದುಗನು ಊಹಿಸಬೇಕಾಗುತ್ತಿತ್ತು. ಹಿಬ್ರೂವನ್ನು ಈಗಲೂ ಹೀಗೆ ತೆರೆಯುಲಿಯಿಲ್ಲದೆ ಬರೆಯುತ್ತಿದ್ದಾರೆ.
ಆದರೆ ಗ್ರೀಕರು ಮುಚ್ಚುಲಿಯೊಂದಿಗೆ ತೆರೆಯುಲಿಯನ್ನು ತೋರಿಸುವ ಬರಹವನ್ನು ಕಂಡುಕೊಂಡರು. ಹಾಗಾಗಿ ಯಾವುದು ಮೊದಲು ಕಿವಿಗೆ 'ಸದ್ದು' ಇಲ್ಲವೆ 'ಉಲಿ'ಗಳಾಗಿತ್ತೊ, ಈಗ ಅದು *ನೆರೆಯಾಗಿ* ಕಣ್ಣಿನ 'ನೋಟ'ಕ್ಕೆ ಬದಲಾಗಿತ್ತು. ಇದರಿಂದಾಗಿ ಗ್ರೀಕರಿಗೆ ಚಿಂತನೆಯ ನೆಲೆಯಲ್ಲಿ ಬೇರೆಯವರಿಗಿಂತ ಮುಂದೆ ಬರಲು ಸಾದ್ಯವಾಯಿತು ಎಂದು ಹೇಳಲಾಗಿದೆ. ಇದರಿಂದಾಗಿ ಗೊತ್ತಿಲ್ಲದ ನುಡಿಯನ್ನೂ ಬರಹಕ್ಕೆ ಇಳಿಸಲು ಸಾದ್ಯವಾಯಿತು.
ಗ್ರ್ರೀಕರ ಈ ಲಿಪಿ ದೊಡ್ಡವರಿಗಲ್ಲದೆ ಮಕ್ಕಳಿಗೂ ಕಲಿತುಕೊಳ್ಳಲು ಸುಲಬವಾಗಿತ್ತು. ಹಾಗಾಗಿ ಗ್ರೀಕ್ ಲಿಪಿ ಒಂದು ಡೆಮಕ್ರಟಯ್ಸಿಂಗ್ ಲಿಪಿಯಾಗಿ ಹೊರಹೊಮ್ಮಿತು. ಪ್ಲೇಟೊ ಎಂಬ ಚಿಂತಕ ಬರುವ ಹೊತ್ತಿಗೆ ಗ್ರೀಕ್ ಲಿಪಿಯ ಬಳಕೆಯಾಗಿ ಮೂರು ನೂರು ವರುಶಗಳು ಸಂದಿತ್ತು. ಹಾಗಾಗಿ, ಗ್ರೀಕ್ ಜನಸಾಮಾನ್ಯರಲ್ಲಿ ಬರಹವು ದೊಡ್ಡ ಮಟ್ಟದಲ್ಲಿ ಬಳಸಲಾಗುತ್ತಿತ್ತು.
ಪ್ಲೇಟೊ ಆದ ಮೇಲೆ ಅರಿಸ್ಟಾಟಲ್ ಎಂಬ ದೊಡ್ಡ ಚಿಂತಕ ಮತ್ತು ಅರಿವಿನರಿಗ ಮುನ್ನೆಲೆಗೆ ಬರಲು ಗ್ರೀಕ್ ಬರಹಗಳು ಮತ್ತು ಅವುಗಳಿಂದಾದ ಪರಿಣಾಮಗಳು ದೊಡ್ಡ ಮಟ್ಟಿಗೆ ಕಾರಣವಾದವು.
(ವಾಲ್ಟರ್ ಆಂಗ್ ಅವರ ಹೊತ್ತಗೆಯಿಂದ ತಿಳಿದುಕೊಂಡಿದ್ದು)