ಬುಧವಾರ, ಜೂನ್ 13, 2012

'ಕನ್ನಡ ಮಾದ್ಯಮ' ಅನ್ನವೇ ಹೊರತು ಉಪ್ಪಿನಕಾಯಿಯಲ್ಲ

ಮಾನ್ಯರೆ,
  ಇತ್ತೀಚೆಗೆ ಸರಕಾರ ಇಂಗ್ಲಿಶ್ ಮಾದ್ಯಮದ ಕುರಿತು ತೆಗೆದುಕೊಂಡಿರುವ ನಿಲುವು ವೈಜ್ನಾನಿಕವಾಗಿ ಸರಿಯಾದುದಲ್ಲ. ದೂರದೃಶ್ಟಿಯಿಲ್ಲದೆ ತೆಗೆದುಕೊಂಡಿರುವ ನಿಲುವು ಇದಾಗಿದೆ. ಒಂದು ನಾಡಿನ ಕಲಿಕೆಯೇರ್ಪಾಡು ಕಟ್ಟುವಲ್ಲಿ ಅದನ್ನ ಕಟ್ಟುವವರ ದೂರದರ್ಶಿತ್ವ ಬಹು ಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಕಲಿಕೆಯೆಂಬುದನ್ನು ಪರಿಣಾಮಕಾರಿಯಾಗಿ ಮಾಡುವುದು ಅಶ್ಟು ಸುಲಬದ ಮಾತಲ್ಲ. ಇದಕ್ಕೆ ಹಲವು ಹಮ್ಮುಗೆಗಳನ್ನು ತಳಪಾಯದಿಂದ ಮಾಡಬೇಕಾಗುತ್ತದೆ. ಅದಕ್ಕಾಗಿ ಕಲಿಕೆಯರಿಗರು , ನುಡಿಯರಿಗರು ಮತ್ತು ಹಿರಿಯ ಚಿಂತಕರು ಕೂತು ಚರ್ಚೆ ನಡೆಸಬೇಕಾಗುತ್ತದೆ.ಆಂದಮೇಲೆ ಕಲಿಕೆಯರಿಗರು ಮತ್ತು ನುಡಿಯರಿಗರು ಈ ಕಲಿಕೆಯ ಮಾಧ್ಯಮನುಡಿಯ ಬಗ್ಗೆ ಏನು ಹೇಳುತ್ತಾರೆಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.  ಜಗತ್ತಿನ ಎಲ್ಲ ಕಲಿಕೆಯರಿಗರು ಒಕ್ಕೊರಲಿನಲ್ಲಿ 'ತಾಯ್ನುಡಿಯಲ್ಲೇ(ಅದಕ್ಕೆ ಹತ್ತಿರವಿರುವ ಪರಿಸರದ ನುಡಿಯಲ್ಲೇ) ಕಲಿಕೆ' ನಡೆದರೆ ಆ ಮಕ್ಕಳ ಕಲಿಕೆ ಚೆನ್ನಾಗಿರುತ್ತದೆ ಮತ್ತು ಮುಂದೆ ಅವರು ಬದುಕಿನಲ್ಲಿ ಹೆಚ್ಚಿನದನ್ನು ಸಾದಿಸಬಹುದೆಂದು ಹೇಳುತ್ತಾರೆ. ಹೇಗೆ ನಾವು ಭೌತವಿಜ್ನಾನದ ವಿಶಯವನ್ನು ತಿಳಿದುಕೊಳ್ಳಲು ಭೌತವಿಜ್ನಾನಿಯ ನೆರವು ಪಡೆಯುತ್ತೇವೆಯೋ ಹಾಗೆ ಇಲ್ಲಿ ಕಲಿಕೆಯರಿಗರ(ಶಿಕ್ಶಣ ತಜ್ನರ) ಅಭಿಪ್ರಾಯ ಕೇಳಬೇಕಾಗುತ್ತದೆ ಯಾಕಂದರೆ ಅವರು ಈ ವಿಶಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುತ್ತಾರೆ ಮತ್ತು ಅದನ್ನು ಆಳವಾಗಿ ಅಭ್ಯಸಿಸಿರುತ್ತಾರೆ. ಇಂತಹ ಒಂದು ಸಿ.ಆರ್. ಚಂದ್ರಶೇಕರ್ ಅವರ ಬರಹ ಇತ್ತೀಚೆಗೆ ’ಸುಧಾ’ದಲ್ಲಿ ಪ್ರಕಟವಾಗಿತ್ತು.

ಬಡವರು, ದಲಿತರು ಇಂಗ್ಲಿಶ್ ಮಾಧ್ಯಮ ಕೇಳುತ್ತಿದ್ದಾರೆಅಶ್ಟೇ ಏಕೆ, ಪ್ರತಿ ಸಾಮಾನ್ಯ ಮನುಶ್ಯನಿಗೂ ತಾನು ಕೋಟಿ ಕೋಟಿ ಸಂಪಾದನೆ ಮಾಡಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಬಡವರು ಇಂಗ್ಲಿಶ್ ಮಾಧ್ಯಮ ಕೇಳುವುದು ತಪ್ಪಾ? ಅವರು ಮುಂದೆ ಬರಬಾರದೆ ಎಂಬ ಪ್ರಶ್ನೆಗಳನ್ನು ಇಂದು ಮುಂದಿಡಲಾಗುತ್ತಿದೆ.  ಅದಕ್ಕೆ ಉತ್ತರ ಇಶ್ಟೆ. ಎಲ್ಲರೂ ಮುಂದೆ ಬರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲರೂ ಕೋಟಿ ಕೋಟಿ ಹಣ ಸಂಪಾದನೆ ಮಾಡಲಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಣ ಸಂಪಾದನೆಗೆ ನಾವು ಕಾನೂನುಬಾಹಿರ, ಅವೈಜ್ನಾನಿಕ  ಮತ್ತು ಅನೈತಿಕ ದಾರಿ ಹಿಡಿಯುವುದು ಎಶ್ಟು ತಪ್ಪೊ ಹಾಗೆ ಬಡವರು ಮತ್ತು ಇಂಗ್ಲಿಶ್ ಪರಿಸರದಲ್ಲಿ ಇಲ್ಲದವರು(ಹೆಚ್ಚಿನ ಕನ್ನಡಿಗರು) ಇಂಗ್ಲಿಶ್ ಮಾದ್ಯಮವೆಂಬ 'ಅಡ್ಡದಾರಿ' ಹಿಡಿಯುವುದು ಅಶ್ಟೆ ತಪ್ಪು. ಯಾಕಂದರೆ ಪರಿಸರದಲ್ಲಿಲ್ಲದ ನುಡಿಯಲ್ಲಿ ಕಲಿಕೆ ಎಂದಿಗೂ ಏಳಿಗೆಯೆಡೆಗೆ ಕೊಂಡೂಯ್ಯುವುದಿಲ್ಲ ಎಂಬ ಮಾತು ಸೂರ್ಯನ ಬೆಳಕಿನಶ್ಟೆ ದಿಟ.  ಆಗ ತಾನೆ ಹುಟ್ಟಿದ ಮಗುವಿಗೆ  'ಎದೆಹಾಲು' ಹೇಗೆ ಮುಖ್ಯವೋ ಹಾಗೆಯೇ ಕಲಿಕೆಗೆ ಹೋಗುವ ಮಗುವಿಗೆ ತಾಯ್ನುಡಿಯೆಂಬ ಎದೆಹಾಲು ಅಶ್ಟೆ ಮುಖ್ಯ. ಯಾಕೆ ನಾವು ಆಗ ತಾನೆ ಹುಟ್ಟಿದ ಮಗುವಿಗೆ ಪಿಜ್ಜಾ, ಬರ್ಗರ್ ಎಲ್ಲವನ್ನು ತಂದುಕೊಡುವುದಿಲ್ಲ. ಇವನ್ನು ಕೊಟ್ಟರೆ ಆಧುನಿಕತೆ/ಮುಂದುವರೆದಿರುವಿಕೆಯನ್ನು ಮಗುವಿಗೆ ಮೈಗೂಡಿಸದಂತಾವುದಿಲ್ಲವೆ? ಎಂಬ ಪ್ರಶ್ನೆ ಎಶ್ಟು ಅವೈಜ್ನಾನಿಕವೊ ಅಶ್ಟೆ
ಅವೈಜ್ನಾನಿಕ ಈ ಕನ್ನಡಿಗರ ಕಲಿಕೆಯಲ್ಲಿ ಇಂಗ್ಲಿಶ್ ಮಾದ್ಯಮವೆಂಬ ಪಿಜ್ಜ/ಬರ್ಗರ್.

ಕೆಲವು ಸಾಹಿತಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಕಳುಹಿಸುತ್ತಿಲ್ಲ..ಯಾಕೆ?:-ಈ ಮೇಲಿನ ಕೇಳ್ವಿಯನ್ನು ಮುಖ್ಯಮಂತ್ರಿಯವರು ಮೊದಲಾಗಿ ಎಲ್ಲರೂ ಕೇಳುತ್ತಿದ್ದಾರೆ. ಕೆಲವು ಬೆರೆಳೆಣಿಕೆಯ ಸಾಹಿತಿಗಳು ತಮ್ಮ ಮಕ್ಕಳನ್ನು'ಕನ್ನಡ ಮಾಧ್ಯಮ'ಕ್ಕೆ ಕಳುಹಿಸಿದಿದ್ದರೇನಂತೆ? 'ತಾಯ್ನುಡಿಯಲ್ಲೇ ಕಲಿಕೆಯು ಉತ್ತಮ' ಎಂಬ ದಿಟವನ್ನು ಅಳಿಸಲಾಗುವುದೇ ? ಒಬ್ಬ ಹೆಸರುವಾಸಿಯಾದ ವೈದ್ಯರನ್ನು ಒಬ್ಬ 'ಸಿಗರೇಟ್ ಸೇದುಗ'ಎಂದು ಕಾರಣ ಕೊಟ್ಟು ಅವರ ಮಾತುಗಳು/ಸಲಹೆಗಳನ್ನು ಅಲ್ಲಗಳೆಯಲಾಗುವುದೇ? ಮೊದಲು ನಾವು ಅರಿಗರು ಏನು ಹೇಳುತ್ತಿದ್ದಾರೆ ಎಂಬುದರ ಗಮನ ಕಡೆ ಹರಿಸಬೇಕೇ ಹೊರತು ಅವರ ವೈಯಕ್ತಿಕ ಚಟುವಟಿಕೆಗಳ ಕಡೆ ಅಲ್ಲ.

ಬರೀ ಬಡವರೇ ಯಾಕೆ ಕನ್ನಡ ಮಾಧ್ಯಮದಲ್ಲಿ ಓದಿ ಕನ್ನಡ ಉಳಿಸಬೇಕು?
.ಕನ್ನಡಿಗ ಯಾರೇ ಆಗಿರಲಿ ಬಡವನಾಗಿರಲಿ, ದಲಿತನಾಗಿರಲಿ ಮತ್ತು ಸಿರಿವಂತನಾಗಿರಲಿ ತಾನು 'ಕನ್ನಡ ಮಾಧ್ಯಮ'ದಲ್ಲಿ ಓದಿ ಕನ್ನಡ ಉಳಿಸುತ್ತೇನೆಂದು ಅಂದುಕೊಳ್ಳುವುದು ದೊಡ್ಡ ತಪ್ಪು. ಬದಲಾಗಿ ಕನ್ನಡ ಮಾಧ್ಯಮವು ಯಾವುದೇ ಕನ್ನಡಿಗನಿಗೆ ವಿಶಯವನ್ನು ಚೆನ್ನಾಗಿ ತಿಳಿಸಿಕೊಡುತ್ತದೆ. ಇದರಿಂದ ಕನ್ನಡಿಗರಿಗೇ ಹೆಚ್ಚು ಉಪಯೋಗವೇ ಹೊರತು ಕನ್ನಡಕ್ಕಲ್ಲ(The prime beneficiary is Kannadiga not Kannada). ಕನ್ನಡಿಗರಿಗೆ 'ಕನ್ನಡ' ಒಂದು ಉತ್ತಮ ಕಲಿಕೆಯ ಸಾಧನವಶ್ಟೆ.  ಆ ಸಾಧನವನ್ನು ಬಳಸಿಕೊಂಡವರು ಹೆಚ್ಚಿನದನ್ನು ಸಾಧಿಸಬಹುದು. ಇಲ್ಲವಾದರೆ ಕನ್ನಡಿಗರಿಗೇನೆ ನಶ್ಟ ಹೊರತು ಕನ್ನಡಕ್ಕಲ್ಲ.
ಕನ್ನಡಿಗರೇ ಕನ್ನಡ ಮಾದ್ಯಮದಲ್ಲಿ ಓದದೇ ಮೇಲೆ ಕನ್ನಡವನ್ನು ಯಾತಕ್ಕೋಸ್ಕರ ಉಳಿಸಿಕೊಳ್ಳಬೇಕು? ಉಪ್ಪಿನಕಾಯಿ ಹಾಕಿಕೊಂಡು ನೆಕ್ಕುವುದಕ್ಕಾ?  'ಕನ್ನಡ ಉಳಿಸುವುದು' ಎನ್ನುವುದಕ್ಕೆ ಏನಾದರೂ ಅರ್ತ ಇದಿಯ?

'ಇಂಗ್ಲಿಶ್' ಏಳಿಗೆಯ ಶಾಶ್ವತ  ಕುರುಹಲ್ಲ ..ಯಾಕೆ?ಇಂದು ಇಂಗ್ಲಿಶಿನಲ್ಲಿ ಹಲವು ಅರಿಮೆಗಳು ಹುಟ್ಟುತ್ತಿರುವುದರಿಂದ 'ಇಂಗ್ಲಿಶ್' ಅರಿಮೆಯ,ಏಳಿಗೆಯ ಕುರುಹು ಎಂದು ಎಲ್ಲರು ಭಾವಿಸಿರುವಂತಿದೆ. ಆದರೆ ೨೦ ವರ್ಶಗಳ ನಂತರ  ಈ ಸ್ಥಿತಿ ಹೀಗೆ ಇರುತ್ತದೆ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಇಂಗ್ಲಿಶಿನ ಜಾಗಕ್ಕೆ 'ಚೈನೀಸ್' ಬಂದು ಕೂತುಕೊಳ್ಳಬಹುದು. ಆಗ ನಮ್ಮ ಸರ್ಕಾರ 'ಚೈನೀಸ್' ಮಾಧ್ಯಮಕ್ಕೆ ಮಣೆ ಹಾಕುತ್ತೇನೊ?! ಈ ರೀತಿಯ ರಿಯಾಕ್ಟಿವ್ ಕಲಿಕೆಯೇರ್ಪಾಡುಗಳು ನಮ್ಮನ್ನು ದಿಕ್ಕುಗೆಡಿಸುತ್ತದೆಯೇ ಹೊರತು ಏಳಿಗೆಯೆಡೆಗೆ ಕೊಂಡೊಯ್ಯುವುದಿಲ್ಲ.

ಯಾವುದೇ ನೋಟದಿಂದ ನೋಡಿದರೂ 'ತಾಯ್ನುಡಿಯಲ್ಲೇ ಕಲಿಕೆಯೇ ಉತ್ತಮ' ಎಂಬುದರಲ್ಲಿ ಎರಡು ಮಾತಿಲ್ಲ. ಈ ದಿಟವನ್ನು ಅರಿತು ಸರಕಾರ ಕರ್ನಾಟಕದಲ್ಲಿ ದೂರಾಲೋಚನೆಯ ಮತ್ತು ಮೇಲ್ಮಟ್ಟದ ಕಲಿಕೆಯೇರ್ಪಾಡು ಕಟ್ಟಿದರೆ ಒಳಿತು.
ಕಲಿಕೆಯೆಂಬ ಊಟದಲ್ಲಿ ಕನ್ನಡವು ಅನ್ನವೇ ಹೊರತು ಕೊಳೆಸಿದ ಉಪ್ಪಿನಕಾಯಿಯಲ್ಲ. ಅನ್ನ ತಿಂದೇ ಹೊಟ್ಟೆ ಹೊರೆಸುಕೊಳ್ಳಬೇಕೇ ಹೊರತು ಬರೀ ಉಪ್ಪಿನಕಾಯಿ ತಿನ್ನಕ್ಕಾಗಲ್ಲ ಎಂಬುದನ್ನು ನಾವು ಅರ್ತ ಮಾಡಿಕೊಂಡರೆ ಸಾಕು.

ಕಾಮೆಂಟ್‌ಗಳಿಲ್ಲ: