ಸೋಮವಾರ, ಡಿಸೆಂಬರ್ 17, 2012
ಬುಧವಾರ, ಅಕ್ಟೋಬರ್ 24, 2012
ಹೊಸಗನ್ನಡದಲ್ಲಿ ಮೂಗುಲಿಯ ಬೀಳುವಿಕೆ
ಮು= ಮುಚ್ಚುಲಿ(ವ್ಯಂಜನ, consonant)
ಉತೆ = ಉದ್ದ ತೆರೆಯುಲಿ(ದೀರ್ಗ ಸ್ವರ, long vowel)
ಮೂ= ಮೂಗುಲಿ (ಅನುನಾಸಿಕ, nasal)
ಎತ್ತುಗೆಗಳು:-
ಮುಉತೆಮೂಮುತೆ => ಮುಉತೆಮುತೆ
೧. ಸೋಂಕು = ಸ್+ಓ+೦+ಕ್+ಉ => ಸೋಕು
೨. ನಾಂಟು = ನ್+ಆ+ಣ್+ಟ್+ಉ => ನಾಟು
೩. ನಾಂಚು = ನ್+ಆ+ಣ್+ಚ್+ಉ => ನಾಚು
೪. ನಾಂದು = ನ್+ಆ+ನ್+ದ್+ಉ => ನಾದು
೫. ನೂಂಕು = ನ್+ಊ+೦+ಕ್+ಉ => ನೂಕು
೬. ದಾಂಟು = ದ್+ಆ+ಣ್+ಟ್+ಉ => ದಾಟು
೭. ದೂಂಟು = ದ್+ಊ+ಣ್+ಟ್+ಉ=> ದೂಟು , ದೂಡು
೮. ಮೀಂಟು = ಮ್+ಈ+ಣ್+ಟ್+ಉ=> ಮೀಟು
೯. ಮೂಂಗ = ಮ್+ಊ+೦+ಗ್+ಅ => ಮೂಗ
೧೦. ತಾಂಗು = ತ್+ಆ+೦+ಗ್+ಉ => ತಾಗು
ಆದರೆ ಮೂಗುಲಿಯನ್ನು ಬಿಡುವ ಮಾರ್ಪಾಡಿಗೆ ಒಳಗಾಗದ ಪದಗಳು ಹೊಸಗನ್ನಡದಲ್ಲಿ ಅಶ್ಟು ದಿನಬಳಕೆಗೆ ಬರದೇ ಹೋಯಿತು.
ಎತ್ತುಗೆಗೆ:
೧. ನೋಂಪು(ವ್ರತ) = ನ್+ಓ+ಮ್+ಪ್+ಉ.... ಹೆಚ್ಚು ಬಳಕೆಯಲ್ಲಿದ್ದರೆ ಇದೂ ಕೂಡ ನೋಪು ಆಗುತ್ತಿತ್ತೇನೊ ?!
೨. ಮಾಂಜು(heal) = ಮ್+ಆ+೦+ಜ್+ಉ
೩. ಪಾಂಗು (manner, form, shape, likeness)
೪. ಪಾಂಬೆ, ಪಾಣ್ಬೆ (ಕುಣಿತಗಾರ್ತಿ)
ಬುಧವಾರ, ಅಕ್ಟೋಬರ್ 17, 2012
ಲಿಪಿ ಸುದಾರಣೆಯ ಗುರಿಗಳು ಮತ್ತು ಜಾರಿಗೆ ತರುವುದು
೧. ಮಹಾಪ್ರಾಣವನ್ನು ಇಲ್ಲಗೊಳಿಸುವುದಲ್ಲ. ಬದಲಾಗಿ ಕನ್ನಡ ಸಮಾಜದಲ್ಲಿ ಬಿತ್ತಲಾದ ಮಹಾಪ್ರಾಣದ ಬಗೆಗಿನ 'ಸುಳ್ಳು ಮೇಲರಿಮೆ'ಯನ್ನು ಹೋಗಲಾಡಿಸುವುದು. ಅದಕ್ಕಾಗಿ ಹೆಚ್ಚು ಹೆಚ್ಚು ಬರಹಗಳು ಮಹಾಪ್ರಾಣವಿಲ್ಲದೇ ಬರಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಮಂದಿಯು ಮಹಾಪ್ರಾಣ ಇಲ್ಲದೆ ಬರೆಯಬೇಕಾಗಿದೆ. ಏಕೆ ಹಾಗೆ ಬರೆಯಬೇಕು ಎಂಬುದರ ಬಗ್ಗೆ ಈಗಾಗಲೆ ಶಂಕರಬಟ್ಟರ ಹೊತ್ತಿಗೆಗಳಲ್ಲಿ ಮತ್ತು ಈ ಮಿಂಬರಹದಲ್ಲೂ ಕೂಡ ಹೇಳಲಾಗಿದೆ.
೨. (೧) ರಲ್ಲಿ ಹೇಳಿರುವುದು ಷ, ವಿಸರ್ಗ(ಃ) ಗಳಿಗೂ ಒಪ್ಪುವುದು
೩. ೧ ಮತ್ತು ೨ ಮಾಡುವುದರಿಂದ ೯೦% ಕನ್ನಡಿಗರಲ್ಲಿ ನಾವು ಕೀಳರಿಮೆಯನ್ನು ಹೋಗಲಾಡಿಸಬಹುದು. ಅಲ್ಲದೆ ಇವರನ್ನು ಹೆಚ್ಚು ಹೆಚ್ಚು ಬರಹದೆಡೆಗೆ ಸೆಳೆಯಬಹುದು. ಬರಹದ ಕಡೆಗೆ ಸೆಳೆದಾಗ ಅವರೇ ಮುಂದೆ ಚಿಂತನೆಯನ್ನು ಮಾಡಬಲ್ಲವರಾಗುತ್ತಾರೆ. ಚಿಂತನೆಯಿಂದ ಅವರು ತಮ್ಮ ಏಳಿಗೆಯ ದಾರಿಯನ್ನು ಕಂಡುಕೊಳ್ಳಬಲ್ಲರು. ಲಿಪಿಸುದಾರಣೆಯಿಂದ ಬರಹ ಗೊತ್ತಿಲ್ಲದವರ ಇಲ್ಲವೆ ಬರಹದಿಂದ ದೂರವುಳಿದವರ ಇಲ್ಲವೆ ಬರಹವನ್ನು ಚೆನ್ನಾಗಿ ತಿಳಿಯದವರಲ್ಲಿ ಒಂದು ದೊಡ್ಡ ಮಟ್ಟದ ಮಾರ್ಪಾಡು ಅಗಬಲ್ಲುದು ಎಂಬುದೇ ಇಲ್ಲಿ ಮುಕ್ಯ ಗುರಿ. ಹಲಜನರ ಏಳಿಗೆಯೇ ಮಂದಿಯಾಳ್ವಿಕೆಯ ಮುಕ್ಯ ಗುರಿ.
ಲಿಪಿಸುದಾರಣೆಯನ್ನು ಜಾರಿಗೆ ತರುವುದರ ಬಗ್ಗೆ:-
೧.ಲಿಪಿಸುದಾರಣೆಗೆ ತರುವುದು ತುಂಬ ಸುಲಬವಾಗಿದೆ ಯಾಕಂದರೆ ಇಲ್ಲಿ ಆಗಬೇಕಿರುವುದು ಬರಿಗೆಗಳನ್ನು ಬಿಡಬೇಕಾಗಿರುವುದು. ಇಲ್ಲಿ ಹೊಸದಾಗಿ ಕಲಿಯುವುದು ಏನೂ ಇಲ್ಲ. ಆಗಬೇಕಿರುವುದೆಲ್ಲ ಬರೀ ಬರಿಗೆಗಳನ್ನು ಬರಹದಿಂದ ಬಿಡಬೇಕಾಗಿರುವುದು.
೨. ಕೆಲವರಲ್ಲಿ ಲಿಪಿಸುದಾರಣೆಯನ್ನು ಬಿಟ್ಟು ಪದಕಟ್ಟಣೆಯನ್ನು ಮಾಡಬಹುದು ಎಂಬ ನಿಲುವು ಇದೆ. ಪದಕಟ್ಟಣೆ ಆಗಬೇಕಾಗಿರುವುದು ಅರಿಮೆಯ ಪದಗಳಿಗೆ ಮತ್ತು ಯಾವುದೇ ಹೊರನುಡಿಯ ಪದವಿರಲಿ ಈಗಾಗಲೆ ಕನ್ನಡಿಗರ ನಾಲಿಗೆಯು ಅದನ್ನು ಕನ್ನಡಕ್ಕೆ ಹೇಗೆ ಒಗ್ಗಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ಹೊಸಗಾಲದ ಅರಿಮೆಯ ನೆಲೆಯಲ್ಲಿ ಪದಕಟ್ಟಣೆ ಇಲ್ಲವೆ ಕನ್ನಡದ್ದೇ ಆದ ಪದಗಳನ್ನು ಉಂಟು ಮಾಡುವ ಕೆಲಸ ಕೆಲವೇ ಕನ್ನಡಿಗರಿಂದ ಅಗಬೇಕಾಗಿದೆ. ಇದರಲ್ಲಿ ಎಲ್ಲ ಕನ್ನಡಿಗರೂ ಕೊಡುಗೆಯನ್ನು ನೀಡಲಾರರು. ಉಳಿದ ಕನ್ನಡಿಗರು ಆ ಪದಗಳ ಬಳಕೆದಾರರು ಆಗಲು ಮಾತ್ರ ಸಾದ್ಯ ಆದರೆ ಲಿಪಿಸುದಾರಣೆ ಎಂಬುದು ಎಲ್ಲ ಕನ್ನಡಿಗರನ್ನು ನೇರವಾಗಿ ತಲುಪುವುದು. 'ಹೊಸಬರಹ'ದಲ್ಲಿ ಬರೆಯುವಾಗ ಹೆಚ್ಚು ಮಂದಿಗೆ ಒಂದು ತೆರನಾದ ಸರಪಳಿಯಿಂದ ಬಿಡಿಸಿದಂತೆ ಆಗುವುದು. ಹಾಗಾಗಿ, ಹೆಚ್ಚಿನ ಮಂದಿಯ ಒಳಿತನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇಲ್ಲಿ ಲಿಪಿಸುದಾರಣೆಯೇ ಮುಕ್ಯವಾಗಿ ಮತ್ತು ಬೇಗ ನಡೆಯಬೇಕಿರುವ ಕೆಲಸ ಎಂದು ನಮಗೆ ತಿಳಿಯುತ್ತದೆ.
ಲಿಪಿ ಸುದಾರಣೆ ಎಂಬುದು ಸೊಲ್ಲರಿಮೆ ಇಲ್ಲವೆ ನುಡಿಯರಿಮೆಯಿಂದ ಬಂದ ಕಂಡುಕೊಳ್ಳುವಿಕೆಯಲ್ಲ, ಬದಲಾಗಿ ಕೂಡಣದರಿಮೆ( Sociology)ಯಿಂದ ದೊರೆತ ಕಂಡುಕೊಳ್ಳುವಿಕೆ. ಹಾಗಾಗಿ ಕೂಡಣವು (ಸಮಾಜವು) ಲಿಪಿ ಸುದಾರಣೆಯನ್ನು ಒಪ್ಪಿದರೆ ಆ ಕೂಡಣಕ್ಕೇ ಒಳಿತು.
ಶುಕ್ರವಾರ, ಅಕ್ಟೋಬರ್ 12, 2012
ಹಿಂಗೇರಿಯ ಹುಡುಗರ ಹಾಡು
ಇದು ಇಂಗ್ಲಿಶಿನ ಹಿಂಗೇರಿಯ ಹುಡುಗರ(Backstreet boys) ಹಾಡು. ಇದರ ಬೇರು ಇಂಗ್ಲಿಶ್ ಹಾಡು ಇಲ್ಲಿದೆ
ಒಂಟಿತನವೆಂದರೆ ಏನಂತ ತೋರೆನಗೆ
ಒಡೆದ ಗುಂಡಿಗೆಗೆ ಹಲವು ಒರೆಗಳು
ಈ ಕೆನ್ನೊಲವಿನಲ್ಲಿ ನೋಡಲಾರೆ
ಉಸಿರಾಡಲಾರೆ
ಬಾ ನನ್ನೊಂದಿಗೆ ನಡೆ, ನೋಡೋಣ
ಇರುಳಿನ ಸೊಡರುಗಳು ಬಲುಬೇಗನೆ
ಅಗುವವೇ ನೇಸರನ ಕದಿರುಗಳು
ನನ್ನ ತಣಿಸಲು
ನಿನ್ನೆಲ್ಲ ಬಯಕೆಗಳು ಈಡೇರುವವು
ಅಂತ ಅವು ಹೇಳುತಿವೆ
ಒಂಟಿತನವೆಂದರೆ ಏನಂತ ಹೇಳು ನನಗೆ
ಈ ಅನಿಸಿನಲ್ಲೇ ನಡೆಯಲೇ?
ನೀನಿರುವೆಡೆ ನಾನೇಕೆ ಇರಲಾರೆ
ಎನ್ನೆದೆಯಲೇನೊ ಕಳೆದುಹೋಗಿದೆ.
ಕೊನೆಗೊಳ್ಳದೀ ಬದುಕು ಸಾಗುತ್ತಿರುವುದು
ಕಲ್ಲುಗಳ ಕಣ್ಣು ಗಮನಿಸುತ್ತಿದೆ ತಿರುವುಗಳ
ಎವೆಯಿಕ್ಕದ ನೋಡುತ್ತಿದೆ ಹೇಳದೆ ಏನನ್ನೂ
ಕೊನೆಯಿಲ್ಲದ ಒಲವಿಗೆ ತಪ್ಪರಿವಿನ ದಾರಿಗಳು
ಅಂಕೆಯಿಲ್ಲ ಈ ಬಾಳಿಗೆ
ನೀ ಎನ್ನ ಜೊತೆಗಿರುವಿಯಾ?
ನಿನ್ನೆಲ್ಲ ಬಯಕೆಗಳು ಈಡೇರುವವು
ಅಂತ ಅವು ಹೇಳುತಿವೆ
ಎನ್ನ ತನ್ಮೆಯೆದೆ ಮಯ್ ಒಪ್ಪಿಸಲು
ಎಲ್ಲಿಗೂ ಓಡಲಾರೆ
ಹೋಗುವುದಕ್ಕೆ ಊರಿಲ್ಲ
ನಿನಗೆ ತಿಳಿಯದ ನಾನ್ ಹೇಗೆ
ಅನುಬವಿಸಲಿ
ಎನ್ನೆದೆಯಿಂದ ಕಳೆದುಹೋದೆ ಎಲ್ಲಿಗೆ
ಅಲ್ಲಿಗೇಕೆ ಬರಲಾರೆ ನಾನು
ಮಂಗಳವಾರ, ಅಕ್ಟೋಬರ್ 09, 2012
ಲಿಪಿ ಸುದಾರಣೆ ಮತ್ತು ಕೂಡಣದಲ್ಲಿ ಸಾಟಿತನ (equality in Society)
ಹಿರಿಯ ನುಡಿಯರಿಗರಾದ ಡಾ| ಡಿ.ಎನ್.ಶಂಕರಬಟ್ಟರ ’ಕನ್ನಡ ಲಿಪಿ ಸುದಾರಣೆ’ಯ ಬಗ್ಗೆ ಚರ್ಚೆಗಳು ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ನುಡಿಯರಿಮೆಯ,ಸೊಲ್ಲರಿಮೆಯ ಮತ್ತು ಕೂಡಣದರಿಮೆಯ ಹಲವು ಕಾರಣಗಳನ್ನು ಕೊಟ್ಟು ಅವರು ಈಗಿರುವ ಕನ್ನಡದ ಲಿಪಿಯಲ್ಲಿರುವ ಮಹಾಪ್ರಾಣಗಳು, ಐ, ಔ, ವಿಸರ್ಗ(ಅಃ) ಮತ್ತು ಷ ಎಂಬ ಬರಿಗೆಗಳು ಬೇಕಾಗಿಲ್ಲವೆಂದು, ಅವನ್ನು ಕಯ್ಬಿಡುವುದೇ ಕನ್ನಡಕ್ಕೆ ಸರಿಯಾದ ದಾರಿ ಎಂದು ಹೇಳಿದ್ದಾರೆ. ಕೂಡಣದರಿಮೆಯ(sociology) ಕಣ್ಣಿನಿಂದ ನೋಡಿದರೆ ಇದು ಇನ್ನು ಹೆಚ್ಚು ಹೆಚ್ಚು ಸರಿಯೆನಿಸುತ್ತದೆ ಯಾಕಂದರೆ ಹೆಚ್ಚಿನ ಮಂದಿಯ ನಾಲಿಗೆಯಲ್ಲಿ ಈ ಮೇಲಿನ ಬರಿಗೆಗಳು ಬರುವುದೇ ಇಲ್ಲ. ಮಂದಿಯಾಳ್ವಿಕೆಯ ಪರ್ವಕಾಲದಲ್ಲಿರುವಾಗ ಹೆಚ್ಚಿನ ಮಂದಿಗೆ ತಕ್ಕಂತೆ ಕೂಡಣದಲ್ಲಿ ಕಲಿಕೆ, ಕೆಲಸ ಮತ್ತು ಕಟ್ಟಲೆಗಳು ಎಂಬ ಇನ್ನಿತರ ಏರ್ಪಾಟುಗಳು ಇರಬೇಕು. ಇದರಲ್ಲಿ ಬಲು ಮುಕ್ಯವಾದುದೇ ಕಲಿಕೆ. ಕಲಿಕೆ ಅಂದರೆ ನುಡಿಗಿರುವ ಬರಹವನ್ನು ಕಲಿಯುವುದು ಮತ್ತು ಆ ಬರಹದ ಮೂಲಕ ಅರಿಮೆಗಳನ್ನು ಪಡೆಯುವುದು. ಈ ಅರಿಮೆಗಳೇ ಮುಂದೆ ಮಂದಿಯ ದುಡಿಮೆಯಲ್ಲಿ ಬಳಕೆಗೆ ಬರುತ್ತದೆ. ದುಡಿಮೆಯಿಂದ ಏಳಿಗೆ ಹೊಂದಬೇಕಾದರೆ ಕಲಿಕೆಯು ಚೆನ್ನಾಗಿ ನಡೆದಿರಬೇಕು.
ಬಾರತದ ಅರುಬರಹದ(constitution) ಮೊದಲಲ್ಲೇ ಇರುವ ಮುಕ್ಯ ಅಂಶಗಳಲ್ಲಿ ಕೂಡಣದ ಸಾಟಿತನವೂ(social equality; The preamble of India constitution contains the phrase: “Equality- social political and economic) ಒಂದು. ಕೂಡಣದಲ್ಲಿ ಸಾಟಿತನವಿದ್ದರೆ ಅದು ಆಳ್ಮೆ(politics) ಮತ್ತು ಹಣಕಾಸಿನ(economic) ನೆಲೆಗಳಲ್ಲಿ ಸಾಟಿತನ ಮೂಡುವುದಕ್ಕೆ ನೆರವಾಗುತ್ತದೆ. ಹಾಗಾಗಿ ಕೂಡಣದಲ್ಲಿಯ ಸಾಟಿತನವೇ ತಳಮಟ್ಟದ ಸಾಟಿತನ ಎಂದು ಹೇಳಲಡ್ಡಿಯಿಲ್ಲ. ಹಾಗಾದರೆ ಕೂಡಣದಲ್ಲಿ ಸಾಟಿತನವನ್ನು ತರುವುದು ಹೇಗೆ ಎಂಬ ಕೇಳ್ವಿ ಬರುವುದು ಸಹಜ. ಕೂಡಣದಲ್ಲಿ ಸಾಟಿತನ ಮೊಳಕೆಯಲ್ಲಿಯೇ ಬರುವಂತೆ ಮಾಡುವುದರಲ್ಲಿ ಮುಕ್ಯವಾದುದು ಕಲಿಕೆ ಇಲ್ಲವೆ ಕಲಿಕೆಯೇರ್ಪಾಟು. ಯಾವ ನಾಡಿನ ಕಲಿಕೆಯೇರ್ಪಾಟಿನಲ್ಲಿ ಎಲ್ಲ ಮಕ್ಕಳಿಗೆ ಒಂದೇ ತೆರನಾದ ಮತ್ತು ಒಂದೇ ಮಟ್ಟದ ಅಂದರೆ ಮೇಲುಕೀಳು ಇಲ್ಲದ ಕಲಿಕೆಯೇರ್ಪಾಟಿಗೆ ಅವಕಾಶವಿರುತ್ತದೆಯೋ ಅಲ್ಲಿ ತಾನಾಗಿಯೇ ಸಾಟಿತನ ಮೂಡುತ್ತದೆ. ಕಲಿಕೆ ಮಾಡಲು ಬರುವ ಮಕ್ಕಳು ಬೇರೆ ಬೇರೆ ಕೂಡಣದ, ಹಣಕಾಸಿನ ಹಿನ್ನಲೆಯಿಂದ ಬಂದವರಾಗಿರುತ್ತಾರೆ. ಬೇರೆ ಬೇರೆ ಪರಿಸರದಲ್ಲಿ ಬೆಳೆದ ಮಕ್ಕಳು ಬೆರೆಯುವ ತಾಣವೇ ಕಲಿಕೆಮನೆ (school). ಇಂತಹ ಕಲಿಕೆಮನೆಗಳಲ್ಲಿ ಎಲ್ಲ ಬಗೆಯ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಲಿಕೆಯೇರ್ಪಾಟು ರೂಪಿಸಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಹೇಗಿರುತ್ತದೆ, ಅವರ ಒಳನುಡಿಯು(dialect) ಎಂತಹುದು, ಅವರ ಒಳನುಡಿಗೂ ಬರಹದ ನುಡಿಗೂ(written Language) ಎಂತಹ ನಂಟುಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತಿದ್ದರೆ ಮಕ್ಕಳ ಕಲಿಕೆಯು ಚೆನ್ನಾಗಿಯು ಮತ್ತು ಬೇಗನೆ ಆಗುತ್ತದೆ, ಮಕ್ಕಳಲ್ಲಿ ಕುರಿಪು(concept)ಗಳನ್ನು ಹಿಡಿಯುವ ಮತ್ತು ಅದನ್ನು ಅರಿತುಕೊಳ್ಳುವ ಅಳವು ಹೆಚ್ಚುತ್ತದೆ. ಹಾಗಾದರೆ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತೆ ಮಾಡುವ ಬಗೆ ಹೇಗೆ ಎಂಬ ಕೇಳ್ವಿ ತಾನಾಗಿಯೇ ಏಳುತ್ತದೆ. ಇದಕ್ಕೆ ನುಡಿಯರಿಮೆಯ ಇಲ್ಲವೆ ಸೊಲ್ಲರಿಮೆಯ ಮೊರೆ ಹೋಗಬೇಕಾಗುತ್ತದೆ. ಈ ಅರಿಮೆಗಳಿಂದ ದೊರೆಯುವ ಕಂಡುಕೊಳ್ಳುವಿಕೆಗಳನ್ನು ಕಲಿಕೆಯಲ್ಲಿ ಮತ್ತು ಕಲಿಕೆಮನೆಗಳಲ್ಲಿ ಒರೆಗೆ ಹಚ್ಚಬಹುದು. ಹೀಗೆ ಒರೆಗೆ ಹಚ್ಚಿದಾಗ ಮಕ್ಕಳ ಕಲಿಕೆಯ ಮೇಲಾಗುವ ಒಳ್ಳೆಯ ಪರಿಣಾಮಗಳನ್ನು ಗಮನಿಸಬಹುದು. ಇಂತಹ ಒಂದು ಕಂಡುಕೊಳ್ಳುವಿಕೆಯೇ ’ಲಿಪಿ ಸುದಾರಣೆ’.
ಲಿಪಿ ಸುದಾರಣೆ ಮಾಡುವುದರಿಂದ ಕೂಡಣದಲ್ಲಿರುವ ಹೆಚ್ಚಿನ ಮಂದಿಗೆ ಅನುಕೂಲವಾಗಲಿದೆ. ಹೆಚ್ಚಿನ ಮಂದಿಯ ಓದಿನಲ್ಲಿ(reading) ಇರದ ಬರಿಗೆಗಳನ್ನು (ಯಾವ ಬರಿಗೆಗಳು ಎಂಬುದನ್ನು ಮೇಲೆ ತಿಳಿಸಲಾಗಿದೆ) ಕಯ್ಬಿಡುವುದರಿಂದ ಕಲಿಕೆಯು ಸುಲಬಗೊಳ್ಳುತ್ತದೆ. ಮಕ್ಕಳು ಬೇಡದಿರುವ ಈ ಬರಿಗೆಗಳನ್ನು ಕಲಿಯುವ ಬದಲು ಆ ಹೊತ್ತನ್ನು ಕುರಿಪು(concept or subject) ಗಳನ್ನು ಕಲಿಯಲು ಬಳಸಿಕೊಳ್ಳಬಹುದು. ಕಲಿಕೆಯ ಬೇರುಮಟ್ಟದ ಗುರಿಯೇ ಕುರಿಪುಗಳನ್ನು ಇಲ್ಲವೆ ಅರಿಮೆಗಳನ್ನು ತಿಳಿದುಕೊಳ್ಳುವುದು. ಬರಹವೆಂಬುದು ಅರಿಮೆಯನ್ನು ಪಡೆಯಲು ಸಾದನವಶ್ಟೆ ಹಾಗಾಗಿ ಬರಹವನ್ನು ಕಲಿತುಕೊಳ್ಳಲು ಹೆಚ್ಚು ಹೊತ್ತನ್ನು ಕಳೆದಶ್ಟು ಕಲಿಕೆಯು ಕುಂಟಿತವಾಗುವುದು. ಇದರಿಂದ ತಿಳಿಯುವುದೇನೆಂದರೆ ಆದಶ್ಟು ಬರಹ(ಲಿಪಿ)ವೆಂಬುದು ಸುಲಬವಾಗಿದ್ದರೆ ಒಳ್ಳೆಯದು.
ಲಿಪಿಸುದಾರಣೆ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೇರಿಸುವುದರಲ್ಲಿ ನೆರವಾಗುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ಅದರಲ್ಲೂ ಸಂಸ್ಕ್ರುತದ ಇಲ್ಲವೆ ಇಂಗ್ಲಿಶ್ ಪರಿಸರವನ್ನು ಹೊಂದಿರದ ಮಕ್ಕಳಿಗೆ ಲಿಪಿಸುದಾರಣೆ ಎಂಬುದು ಒಂದು ವರದಾನವಂತಿದೆ. ಇಂದಿಗೂ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಕ್ಕಳು ಕನ್ನಡದ ಒಯ್ಯುಗೆ(medium)ಯಲ್ಲಿಯೇ ಓದುತ್ತಿದ್ದಾರೆ. ಅಂದರೆ ಈ ಲಿಪಿಸುದಾರಣೆ ತರುವುದರಿಂದ ಹೆಚ್ಚಿನ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೆತ್ತಬಹುದು. ಲಿಪಿ ಸುದಾರಣೆ ತರುವುದರಿಂದ ಎಲ್ಲ ಮಕ್ಕಳಿಗೂ ಅರಿಮೆಯನ್ನು ಪಡೆಯುವಲ್ಲಿ ಸಮಾನ ಅವಕಾಶವನ್ನು ಕೊಟ್ಟಂತಾಗುತ್ತದೆ. ಈಗಿರುವ ಸಿಕ್ಕಲುಬರಹವು ಆಗ ತಡೆಗೋಡೆಯಾಗಿ ನಿಲ್ಲುವುದಿಲ್ಲ. ಎಲ್ಲರಿಗೂ ಅರಿಮೆಯನ್ನು ಪಡೆಯುವ ಸಮಾನ ಅವಕಾಶವನ್ನು ನೀಡುವುದೇ ಮಂದಿಯಾಳ್ವಿಕೆಯ ಇಲ್ಲವೆ ಅರುಬರಹದ ಗುರಿಗಳಲ್ಲಿ ಮುಕ್ಯವಾದುದು. ಮಂದಿಯಾಳ್ವಿಕೆಯ ಏರ್ಪಾಟೂಗಳು ಹೆಚ್ಚು ಹೆಚ್ಚು ಬರಹದ ಮೇಲೆ ನಿಂತಿರುವ ಕಾರಣದಿಂದ, ಬರಹ ಗೊತ್ತಿಲದವರಿಗೆ ಬದುಕುವುದೇ ಕಶ್ಟವಾಗುವ ಈ ಹೊಸಗಾಲದಲ್ಲಿ ಲಿಪಿ ಸುದಾರಣೆ ಮಾಡುವುದರಿಂದ ನಿಕ್ಕಿಯಾಗಿ ಕೂಡಣದಲ್ಲಿ ಸಾಟಿತನವನ್ನು ತರಬಹುದು, ಆಗಲೆ ಮಂದಿಯಾಳ್ವಿಕೆಗೂ ಒಂದು ಬೆಲೆ ಬರುವುದು.
ಹೊಸ ಪದಗಳ ಪಟ್ಟಿ:-
ಕೂಡಣ - Society
ನುಡಿಯರಿಮೆ - Linguistics
ಸೊಲ್ಲರಿಮೆ - Grammar
ಕೂಡಣದರಿಮೆ - Sociology
ಅರುಬರಹ - Written Constitution(of a Nation)
ಒಯ್ಯುಗೆ - Medium
ಮಂದಿಯಾಳ್ವಿಕೆ - Democracy
ಆಳ್ಮೆ - Politics
ಹಣಕಾಸು - Economics
ಒಳನುಡಿ - Dialect
ಬರಹದ ನುಡಿ - Written Language
ಕುರಿಪು - Concept /Subject.
ಕಲಿಕೆಮನೆ - School
Photo Courtesy: UWIC
ಭಾನುವಾರ, ಅಕ್ಟೋಬರ್ 07, 2012
ಮಂಟೇಸ್ವಾಮಿ ಕತೆ ಮತ್ತು ಕರ್ನಾಟಕದ ಒಗ್ಗಟ್ಟು
ಇಶ್ಟಾದರೂ ಮಂಟೇಸ್ವಾಮಿ ಜನಪದರ ಎಣಿಕೆಯ(ಊಹೆಯ) ದೇವನೊ ಇಲ್ಲವೊ ಹಿನ್ನಡವಳಿಯಲ್ಲಿ ದಿಟವಾಗಿ ಹಾದು ಬಂದವನೊ ಎಂಬುದನ್ನು ನಿಕ್ಕಿಯಾಗಿ ಯಾರು ಹೇಳುವುದಿಲ್ಲ. ಆದರೆ ಕೆಲವರು ಈತನ ಕಾಲ ೧೬ನೇ ನೂರೇಡು ಇರಬಹುದೆಂದು ಹೇಳಿದ್ದಾರೆ. ಅದು ದಿಟವೊ ಅಲ್ಲವೊ ಅದು ಇಲ್ಲಿ ಮುಕ್ಯವಲ್ಲ ಯಾಕಂದರೆ ಅದು ಬರೀ ಜನಪದೀಯವಾಗಿದ್ದರೂ ತೆಂಕು ಕರ್ನಾಟಕದಲ್ಲಿ ಮಂಟೇಸ್ವಾಮಿಯ ಕತೆ ಹೇಳುವವರಿಗೆ ಅಂದರೆ ನೀಲಗಾರರಿಗೆ(ನೀಲಗಾರರು ಇಂತಹ ಒಂದು ಬುಡಕಟ್ಟಿನವರು - ಇವರ ಕೆಲಸವೇ ಮಂಟೇಸ್ವಾಮಿ ಕತೆಯನ್ನು ಹಾಡುವುದು) ದೂರದ ಕಲ್ಯಾಣದ ಬಗ್ಗೆ ಹೇಗೆ ಗೊತ್ತಿತ್ತು? ಅದೂ ಅಲ್ಲದೆ ಅಶ್ಟು ದೂರದ ಕಲ್ಯಾಣವನ್ನೇ ಏಕೆ ಆಯ್ದುಕೊಂಡರು ಎಂಬುದು ಒಂದು ಗಳಿಗೆ ಸೋಜಿಗದಂತೆ ತೋರುವುದು. ಆದರೆ ಕಲ್ಯಾಣ ಎಂಬುದು ಬರೀ ಒಂದು ಊರಾಗಿ ಕನ್ನಡಿಗರಲ್ಲಿ ಉಳಿದಿಲ್ಲ ಅದೊಂದು ಸಿಡಿದೇಳುವಿಕೆಯ ನಡುವಣ( centre of Revolution)ವೆಂದೇ ಕನ್ನಡದ ಕೂಡಣದಲ್ಲಿ ಅಚ್ಚೊತ್ತಾಗಿದೆ. ಹಾಗಾಗಿ ಈ ಕನ್ನಡ ನೆಲದಲ್ಲಿ ತುಳಿತಕ್ಕೊಳಗಾದವರು ಎಲ್ಲೆ ಇರಲಿ ಅವರಿಗೆ ಕಲ್ಯಾಣ ಒಂದು ಬಯಕೆಬೆಟ್ಟವಾಗಿ ಕಾಣುತ್ತದೆ. ಕಲ್ಯಾಣ ಎಂದರೆ ಬಸವಣ್ಣ, ಕಲ್ಯಾಣ ಎಂದರೆ ಶರಣರು, ಕಲ್ಯಾಣ ಎಂದರೆ ವಚನ ಚಳುವಳಿ ಎಂಬುದು ಕನ್ನಡ ನಾಡಿನ ಮಂದಿಬಗೆಯಲ್ಲಿ ಅಚ್ಚೊತ್ತಿದೆ. ಹಾಗಾಗಿ ಇಲ್ಲಿ ಜನಪದೀಯರಿಗೆ ಕಲ್ಯಾಣದೊಂದಿಗೆ ತಳುಕು ಹಾಕಿಕೊಳ್ಳುವ ಕಡುಬಯಕೆ ಕಾಡುತ್ತದೆ. ಆ ಕಡುಬಯಕೆಯ ಕಡಲಿನಿಂದ ಎದ್ದು ಬಂದ ಹೊಸ ಅಲೆಯೇ ಈ ಮಂಟೇಸ್ವಾಮಿ ಎಂಬ ಜನಪದ ದೇವರು.
ಚಿಕ್ಕದಾಗಿ ಹೇಳುವುದಾದರೆ ಮಂಟೇಸ್ವಾಮಿ ಮತ್ತು ಅಲ್ಲಮಪ್ರಬು ಕಲ್ಯಾಣಕ್ಕೆ ಹೋಗಿ ಅಲ್ಲಿ ಬಸವಣ್ಣನ ’ಇಶ್ಟಲಿಂಗ’ ಚಳುವಳಿಯಲ್ಲಿರುವ ಪೊಳ್ಳುತನ ಇಲ್ಲವೆ ಇಶ್ಟಲಿಂಗವೂ ಕದಲಿಕೆಯನ್ನು(ಜಂಗಮತನವನ್ನು) ಕಳೆದುಕೊಳ್ಳುತ್ತಿರುವ ಒಂದು ಆಚರಣೆ ಎಂದು ಎಚ್ಚರಿಸುವುದೇ ಈ ಕತೆಯ ಒಂದು ಮುಕ್ಯ ಅಂಶ. ಕರ್ನಾಟಕದ ಒಗ್ಗಟ್ಟಿನ ಕಣ್ಣಿನಿಂದ ಮಂಟೇಸ್ವಾಮಿಯ ಕತೆಯನ್ನು ನೋಡಿದಾಗ ಇದು ತೆಂಕು ಕರ್ನಾಟಕದ ಜನಪದಕ್ಕೂ ಮತ್ತು ಇವತ್ತಿನ ಬಡಗು ಕರ್ನಾಟಕದ ತುತ್ತತುದಿಯಲ್ಲಿರುವ ಕಲ್ಯಾಣಕ್ಕೂ ಇರುವ ನಂಟನ್ನು ಎತ್ತಿ ಹಿಡಿಯುತ್ತದೆ. ತೆಂಕು ಕರ್ನಾಟಕದ ತುದಿಯಲ್ಲಿರುವ ಮಂಡ್ಯ/ಚಾಮರಾಜನಗದಲ್ಲಿರುವ ಜನಪದ ಹಾಡುಗಾರನಿಗೆ ಬಡಗು ಕರ್ನಾಟಕದ ಕಲ್ಯಾಣದ ಬಗ್ಗೆ ಅಶ್ಟು ಮಾಹಿತಿ ತಿಳಿದದ್ದಾದರೂ ಹೇಗೆ? ಅದೂ ಆ ಕಾಲದಲ್ಲಿ ಅಂದರೆ ಅರುಹು ಮತ್ತು ಸಾರಿಗೆ ಅಶ್ಟು ಬೆಳೆದಿಲ್ಲದ ಆ ಕಾಲದಲ್ಲಿ. ಅದಕ್ಕೇ ಕಾರಣವೇ ಕನ್ನಡ ನುಡಿ ಅಂದರೆ ಕನ್ನಡ ನುಡಿಯಲ್ಲಿ ಹೇಳಲಾದ ’ವಚನಗಳು’(ಆಮೇಲೆ ಇದನ್ನು ಬರಹ ರೂಪಕ್ಕೆ ಇಳಿಸಲಾಯಿತು)ಎಂದರ್ತ. ಹೇಗೆ ಕೂಡಣದ(ಸಮಾಜದ) ಕಟ್ಟ ಕಡೆಯ ಆಳಿಗೂ ವಚನಗಳು ಮುಟ್ಟಿತ್ತು ಎಂಬುದನ್ನು ಇದು ತೋರಿಸುತ್ತದೆ. ಅಲ್ಲದೆ ಈ ಕನ್ನಡದ ವಚನಗಳು ದೂರದ ಬೀದರಿನ ಕಲ್ಯಾಣವನ್ನು ಮತ್ತು ಚಾಮರಾಜನಗರದ ಕೊಳ್ಳೇಗಾಲವನ್ನು ಹತ್ತಿರ ತರುವ ಇಲ್ಲವೆ ಬೆಸೆಯುವ ಕೆಲಸವನ್ನು ಮಾಡಿತು ಎಂಬುದನ್ನು ಇದರಿಂದ ತಿಳಿಯಬಹುದು. ಹೇಗೆ ಒಂದು ನುಡಿಯು, ನೆಲದಳತೆಯಲ್ಲಿ ದೂರ ದೂರ ಇದ್ದ ಊರುಗಳನ್ನು ಮತ್ತು ಆ ಊರುಗಳ ಜನರನ್ನು ನಡವಳಿಯ ನೆಲೆಯಲಿ ಒಂದುಗೂಡಿಸುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ನುಡಿಗೂ ಮತ್ತು ನಡವಳಿಗೂ ಒಂದಕ್ಕೊಂದು ಬಿಡಿಸಿಕೊಳ್ಳಲಾರದಶ್ಟು ಹೆಣೆದುಕೊಂಡಿವೆ ಎಂಬ ಈ ಮಾತನ್ನು ಮಂಟೇಸ್ವಾಮಿಯ ಕತೆಯು ಒತ್ತಿ ಒತ್ತಿ ಹೇಳಿ ನಮಗೆ ಮನದಟ್ಟು ಮಾಡಿಸುತ್ತದೆ.
ಗುರುವಾರ, ಸೆಪ್ಟೆಂಬರ್ 20, 2012
Number plates, Majority and Democracy
(Photo Courtesy: Hariprasad Holla)
There was a discussion about the Kannada Number Plates for the vehicles in Karnataka.There were some arguments against it and for it. This made me to think further and deeper.
Today by and large we see 'English only' number plates in Karnataka and very few Kannada only number plates and very very few Kannada and English number plates. However Kannada is the majority Language of Karnataka and English is understood by only small number of people. There was an argument that Kannada number plates doesn't make practical sense. However the question is, for whome it impractical is unanswered; for what percentage of people its impractical its unanswered.
All over the world we have democracy built *primarily* based on welfare of Majority. One of the fundamental philosohpical principle of true democracy is to facilitate
'maximum comfort for maximum number of people'.
This should be guiding force for any nation or state in pursuit of true democracy. So coming back to Karnataka, Kannada is the preferred language of the majority of the people in Karnataka, becuase people feel comfort in that langauge. Similarly Tamil in Tamil Nadu and Telugu in Andhra Pradesh and so on. So if we say we are true democracy we can't dismember/ignore/discount the majority and impose minority language on the majority.
Kannadigas living in Karnataka are the natives(permanent)of this state and the majority of them who are born here, who grow up here and who die here. Minority immigrants will definitely miss one of these that is to say either they wouldn't be born here or they wouldn't grow here or they wouldn't die here. So, It does a lot of practical sense to build the system, be it political, economical for the natives i.e Kannadigas in Karnataka , Tamils in Tamil Naadu and Telugus in Andhra Pradesh and so on. It would be foolish/impractical if we try to build the systems for the minority immigrants because there is always an element of 'uncertainity' attached with immigrants. So one cannot waste the systems on minority immigrants. So more practical scenario would be for the immigrants to mingle with majority natives. Its only in the best interest of immigrants ot learn the language of natives because immigrants are in minority for the foreseeable future in Karnataka.
It would be disastrous to see a Kannadigas becoming minority in Karnataka and Tamils becoming minority in Tamil Naadu and so on. It defeats the whole purpose of the carving out 'Linguistic States' during the formation fo Indian Nation. The idea behind carving out the Linguistic States would be not just to preserve the Linguistic, Cultural diversity of India but also even strengthen it because that is only the way to go forward. That is the true democracy. That is only the way to uphold the true humanity and humanitarian values.
Not allowing Kannada Number(name) Plates in Karnataka, Not allowing Tamil number(name) plates in Tamil Nadu and Not allowing Telugu number(name) plates in Andhra Pradesh is truely 'Undemoratic' and it is fundamentally against the spirit and intentions of democracy and democratic values.
ಶನಿವಾರ, ಸೆಪ್ಟೆಂಬರ್ 15, 2012
ಆಡುನುಡಿಯ ಬೇರ್ಮೆಗಳು
ತಿಂಗಳು => ತಿಂಗ ( ಇತ್ತೀಚೆಗೆ ಕಂಡುಕೊಂಡಿದ್ದು ಇದೇ ರೀತಿ ದೂರದ ’ಕೊಡಗು ನುಡಿಯಲ್ಲೂ ತಿಂಗ ಅನ್ನುತ್ತಾರೆ ಅಂತ DED ನೋಡಿದ ಮೇಲೆ ತಿಳಿಯಿತು - Koḍ. tiŋga month.)
ಅವಳು => ಅವ ( ಹಾಗಾಗಿ ಅವನು ಎಂಬುದು ’ಅಂವ’/ಅಮ ಆಗುತ್ತದೆ)
ಬಂದಳು => ಬಂದ ( ಹಾಗಾಗಿ ಬಂದನು ಎಂಬುದು ಬಂದಂ, ಇಲ್ಲಿ ’ದಂ’ ಒಂದು ದ+ವಿಚಿತ್ರ ಮೂಗುಲಿ)
ಮಗಳು => ಮಗ ( ಹಾಗಾಗಿ ಮಗ ಎಂಬುದು ಮಗಂ, ಇಲ್ಲಿ ’ಗಂ’ ಎಂಬುದು ಗ+ವಿಚಿತ್ರ ಮೂಗುಲಿ)
ಹೋದಳು => ವಾದ ( ಹಾಗಾಗಿ ಹೋದನು ಎಂಬುದು ವಾದಂ, ಇಲ್ಲಿ ’ದಂ’ ಎಂಬುದು ದ+ವಿಚಿತ್ರ ಮೂಗುಲಿ)
ಆದರೆ ಇದು ಕೆಲವು ಕಡೆ ಆಗಿಲ್ಲ. ಅಂದರೆ ’ಳ’ಕಾರದ ಮುಂಚೆ ’ರ’ಕಾರ ಬಂದಿದ್ದರೆ ಅಲ್ಲಿ ’ರ’ಕಾರವು ಬಿದ್ದು ಹೋಗಿ ಇಮ್ಮಡಿ "ಳ"ಕಾರವಾಗಿದೆ
ಹೊರಳು => ವೊಳ್ಳು/ಒಳ್ಳು ( ಹೊರಳು ನಾಮಪದ (<ದೇ. ಪೊರಳು) ೧ ತಿರುವು, ಬಾಗು ೨ ಬದಲಾವಣೆ ೩ ಒಂದು ಬಗೆಯ ತಿರುಗುವ ಯಂತ್ರ)
ನೆರಳು => ನೆಳ್ಳು
ಕರಳು => ಕಳ್ಳು
ಉರುಳು => ಉಳ್ಳು
ತರಳು => ತಳ್ಳು
ಅರಳು => ಅಳ್ಳು/ಅಳ್
ಬೆರಳು => ಬೆಳ್ಳು
ಭಾನುವಾರ, ಸೆಪ್ಟೆಂಬರ್ 02, 2012
ಆಟದ ಒರೆಗಳು
೧. ಪೇಂದ (< ಪೇರಿಸಿಂದ) - ಸಮತಟ್ಟಾದ ನೆಲದ(ಮಣ್ಣಿನ) ಮೇಲೆ ಒಂದು ನಾಲ್ವದಿ ಆಕಾರದಲ್ಲಿ ಒಂದು ’ಪೇಂದ’ವನ್ನು ಬರೆದು ಅದರ ನಡುವಿನಲ್ಲಿ ಪೇರಿಸಿದ ಹಾಗೆ ಗೋಲಿಗಳನ್ನು ಇರಿಸಿಬೇಕು. ಇವೆಲ್ಲ ಸೇರಿ ಒಟ್ಟಿನಲ್ಲಿ ಅದನ್ನು ’ಪೇಂದ’ ಎನ್ನಲಾಗುತ್ತದೆ. ಪಾಪೆ ನೋಡಿ.
೨. ತೀಕು - ಗೋಲಿ ಆಟದಲ್ಲಿ ಸೋತವರು ಒಂದು ಕಯ್ಯನ್ನು ಬೆನ್ನ ಮೇಲೆ ಹಾಕಿ ಇನ್ನೊಂದು ಕಯ್ಯನ್ನು ಮುಶ್ಟಿಯಂತೆ ಮಾಡಿ ನೆಲದ ಮೇಲಿರುವ ಗೋಲಿಯನ್ನು ತೀಡಬೇಕು/ತಳ್ಳಬೇಕು.ಇದನ್ನೇ ’ತೀಕು’/ತೀಕಿಸುವುದು ಎನ್ನುತ್ತಾರೆ.
೩. ತುದಾಂಡಲ್(< ತುಪ್+ದಾಂಡಲ್??) - ದಾಂಡ್ಲನ್ನು ಕೆಳಗೆ ಹಾಕಿ ಅಳೆಯುವಾಗ ಹೇಳುವ ಒರೆ.
೪. ಉಡೀಸ್(< ಉಡಾಯಿಸು= ಹಾರಿಸು= ಚದುರಿಸು) - ಬಳಕೆ : ಕಾಲಿ ಪೇಂದ ಉಡೀಸ್ !!!! - ಮೇಲೆ ಹೇಳಿದ ಪೇಂದದಲ್ಲಿ ಇರುವ ಗೋಲಿಗಳನ್ನು ಚದುರಿಸಿ ಆ ನಾಲ್ವದಿಯ ಆಚೆಗೆ ಅಟ್ಟಿಸಿದಾಗ ಹೇಳುವ ಒರೆ.
೫. ಗಿಲ್ಲಿ(<ಕಿರುಲಿ) = ಚಿನ್ನಿ (<ಚಿಕ್ಕ) - ಬಳಕೆ: ಗಿಲ್ಲಿ-ದಾಂಡು ಆಡೋಣ ಬಾ
೬. ಗುನ್ನ (<ಗುಳಿ) - ಬಳಕೆ: ಅವನ ಬುಗುರಿಗೆ ಚೆನ್ನಾಗಿ ಗುನ್ನ ಹೊಡೆದೆವು
೭. ಇಂತಿ ( < ಹಿಂತಿ= ಹಿಂದಿರುವ ಗೋಲಿ) - ಬಳಕೆ: ವೊಡೆ ಇಂತಿ !
೮. ಮುಂತಿ( < ಮುಂತಿ= ಮುಂದಿರುವ ಗೋಲಿ) - ಬಳಕೆ: ವೊಡೆ ಮುಂತಿ!
ಬುಧವಾರ, ಆಗಸ್ಟ್ 15, 2012
ಕನ್ನಡದ ತೆರೆಯುಲಿಗಳ ಗುಂಪಿಸುವಿಕೆ
ಕನ್ನಡದ ತೆರೆಯುಲಿಗಳನ್ನು ಹೀಗೆ ಗುಂಪಿಸಬಹುದು:-
ಯ ಗುಂಪು: ಇ, ಎ(ಗಿಡ್ಡ); ಈ, ಏ (ಉದ್ದ)
ವ ಗುಂಪು : ಅ, ಉ, ಒ(ಗಿಡ್ಡ); ಆ, ಊ, ಓ(ಉದ್ದ)
ಹೀಗೆ ಗುಂಪಿಸಲು ದೂಸರೇನೆಂದರೆ ಸೇರಿಕೆಯಾಗುವಾಗ ಅವುಗಳಗಿರುವ ಗುಣ.
ಯ ಗುಂಪು:- ಸೇರಿಕೆಯಾಗುವೆಡೆ ಇ,ಎ ತೆರೆಯುಲಿಗಳು ’ಯ’ಕಾರಕ್ಕೆ ತಮ್ಮ ಒಲವನ್ನು ತೋರಿಸುತ್ತವೆ
ಬಂಡಿ+ಅಲ್ಲಿ = ಬಂಡಿಯಲ್ಲಿ (ಬಂಡಿವಲ್ಲಿ ಆಗಲ್ಲ) - ಇಲ್ಲಿ ’ಬಂಡಿ’ ಎಂಬುದನ್ನು ’ಬಂಡ್+ಇ’ ಎಂದು ಬಿಡಿಸಿದಾಗ ಅಲ್ಲಿರುವ ’ಇ’ ಕಾರ ಕಾಣಿಸುತ್ತದೆ.
ಬಂಡೆ+ಅನ್ನು = ಬಂಡೆಯನ್ನು ( ಬಂಡೆವನ್ನು ಆಗಲ್ಲ) - ಇಲ್ಲಿ ’ಬಂಡೆ’ ಎಂಬುದನ್ನು ’ಬಂಡ್+ಎ’ ಎಂದು ಬಿಡಿಸಿದಾಗ ಅಲ್ಲಿರುವ ’ಎ’ಕಾರ ಕಾಣಿಸುತ್ತದೆ.
ವ ಗುಂಪು:- ಸೇರಿಕೆಯಾಗುವೆಡೆ ಅ,ಉ ತೆರೆಯುಲಿಗಳು ’ವ’ಕಾರಕ್ಕೆ ತಮ್ಮ ಒಲವನ್ನು ತೋರಿಸುತ್ತವೆ
ದನ+ಅನ್ನು = ದನವನ್ನು (ದನಯನ್ನು ಆಗಲ್ಲ) - ಇಲ್ಲಿ ’ದನ’ ಎಂಬುದನ್ನು ’ದನ್+ಅ’ ಎಂದು ಬಿಡಿಸಿದಾಗ ಅಲ್ಲಿರುವ ’ಅ’ ಕಾರ ಕಾಣಿಸುತ್ತದೆ.
ಕರು+ಅನ್ನು = ಕರುವನ್ನು (ಕರುಯನ್ನು ಆಗಲ್ಲ) - ಇಲ್ಲಿ ’ಬಂಡೆ’ ಎಂಬುದನ್ನು ’ಕರ್+ಉ’ ಎಂದು ಬಿಡಿಸಿದಾಗ ಅಲ್ಲಿರುವ ’ಉ’ಕಾರ ಕಾಣಿಸುತ್ತದೆ.
ಕನ್ನಡದಲ್ಲಿ ಉದ್ದ ತೆರೆಯುಲಿಗಳಿಂದ ಕೊನೆಯಾಗುವ ಪದಗಳು ಕಡಿಮೆ ಎನ್ನಬಹುದು. ಇದ್ದರು ಅವುಗಳೊಂದಿಗೆ ಬೇರೆ ಪದಗಳು ಸೇರಿಕೆಯಾಗದೆ ಹಾಗೆ ಉಳಿಯುತ್ತವೆ. ಅದಕ್ಕಾಗಿ ಇಲ್ಲಿ ಅಂತಹ ಎತ್ತುಗೆಗಳನ್ನು ಕೊಟ್ಟಿಲ್ಲ/ಕೊಡಲಾಗುವುದಿಲ್ಲ.
ಇನ್ನೊ ಒ ಇಲ್ಲವೆ ಓ ಕಾರದಲ್ಲಿ ಕೊನೆಗೊಳ್ಳುವ ಪದಗಳು ಕಡಿಮೆ. ಆದರೆ ನಾವು ಆಡುನುಡಿಯ ಒಲವನ್ನು ಇಲ್ಲಿ ಗಮನಿಸಬಹುದು. ’ಒ’ ಇಲ್ಲವೆ ’ಓ’ಕಾರಗಳು ಕೂಡ ಆಡುಮಾತಿನಲ್ಲಿ ’ವ’ಕಾರಕ್ಕೆ ಮಾರ್ಪಾಟಾಗುವ ಒಲವನ್ನು ತೋರಿಸುತ್ತವೆ.
ಒತ್ತು <-> ವತ್ತು
ಒಪ್ಪು <-> ವಪ್ಪು
ಒರಟ <-> ವರಟ
ಓಲಗ <-> ವಾಲಗ
ಓಟ <-> ವಾಟ
ಓಲೆ <-> ವಾಲೆ
ಶುಕ್ರವಾರ, ಆಗಸ್ಟ್ 10, 2012
ಎರಡನೇ ಉಲಿಕಂತೆಯ ತೆರೆಯುಲಿಯ ಬಗ್ಗೆ
ಕನ್ನಡದ ಮೂರು ಬರಿಗೆಗಳ/ಉಲಿಕಂತೆಗಳ ಪದಗಳಲ್ಲಿ ಎರಡನೆ ಉಲಿಕಂತೆಯಲ್ಲಿರುವ ತೆರೆಯುಲಿಯು ಅಶ್ಟು ಮುಕ್ಯವಲ್ಲ ಅಂದರೆ
ಬಟ್ಟಲು = ಬಟ್ಟಿಲು ( ಟ್+ಟ್+ಇ)
ಮೆಟ್ಟಿಲು = ಮೆಟ್ಟಲು ( ಟ್+ಟ್+ಇ)
ಬಾಗಿಲು = ಬಾಗಲು ( ಗ್+ಇ)
ಕಾರಣ: ದಿಟವಾಗಲೂ ಈ ಎರಡನೇ ಬರಿಗೆ/ಉಲಿಕಂತೆಯಲ್ಲಿರುವ ತೆರೆಯುಲಿಯನ್ನು ನಾವು ಆಡುಮಾತಿನಲ್ಲಿ ಉಲಿಯುವುದೇ ಇಲ್ಲ.
ಬಟ್-ಲು = ಬಟ್ಲು
ಬಾಗ್-ಲು =ಬಾಗ್ಲು
ಊದ್-ಲು = ಊದ್ಲು
ಕೆಲವು ಕಡೆ ಎರಡನೇ ಉಲಿಕಂತೆಯನ್ನೇ(ತೆರೆಯುಲಿ+ಮುಚ್ಚುಲಿ) ಉಲಿಯುವುದೇ ಇಲ್ಲ.
'ರ್+ಅ' ಬಿದ್ದುಹೋಗಿದೆ.
ನೆರಳು = ನೆಳ್ಳು
ಹೊರಳು = ವೊಳ್ಳು
ನರಳು = ನಳ್ಳು
ಕರುಳು = ಕಳ್ಳು
ಹೀಗೆ ಇನ್ನು ಬೇರೆ ಬೇರೆ ಎತ್ತುಗೆಗಳು
ಮೆಂತೆಯ => ಮೆಂತ್ಯ
ತಿರುಳು:-
ಎರಡನೇ ಉಲಿಕಂತೆಯ ತೆರೆಯುಲಿಯೇ ಮಾತಿನಲ್ಲಿ ಬಿದ್ದು ಹೋಗುವಾಗ ಯಾವ ತೆರೆಯುಲಿ
ಅಲ್ಲಿ ಇದ್ದರೇನು? ಹಾಗಾಗಿಯೇ ಎರಡನೇ ಉಲಿಕಂತೆಯಲ್ಲಿರುವ ತೆರೆಯುಲಿ ಅಶ್ಟು ಅರಿದು ಅಲ್ಲ.
ಗಮನಿಸಿ: ಕೆಲವು ಕಡೆ ಮುಚ್ಚುಲಿಯು ಮಾತಿನಲ್ಲಿ ಬಿದ್ದು ಹೋಗುತ್ತದೆ
ಭಾನುವಾರ, ಆಗಸ್ಟ್ 05, 2012
ಕಲಿಕೆಯ ಕೇಳ್ವಿಗಳು
೧.ಕಲಿಮನೆಗಳಲ್ಲಿ ಏನನ್ನು ಕಲಿಸಬೇಕು ?
೨.ಕಲಿಮನೆಗಳಲ್ಲಿ ಯಾವ ಒಯ್ಯುಗೆಯಲ್ಲಿ(ಮಾದ್ಯಮ) ಕಲಿಸಬೇಕು?
ಕೆಲವರು ಮೊದಲ ಕೇಳ್ವಿ ತುಂಬ ಅರಿದಾದುದು(ಮುಕ್ಯವಾದುದು) ಎಂದು ನಂಬಿದ್ದಾರೆ. ಅಂತಹವರಿಗೆ ಎರಡನೇ ಕೇಳ್ವಿಯೂ ಇದೆ ಆದರೆ ಅದರ ಬಗ್ಗೆ ಅಶ್ಟು ಆಸಕ್ತಿ-ಹುರುಪಾಗಲಿ ಅವರಿಗೆ ಇದ್ದಂತೆ ಕಾಣುವುದಿಲ್ಲ. ಮೊದಲ ಕೇಳ್ವಿಯ ಬಗ್ಗೆ ತುಂಬ ತಲೆ ಕೆಡಿಸಿಕೊಂಡಂತೆ ಇದೆ. ಆದರೆ ದಿಟವಾಗಲೂ ಅವೆರಡು ಬೇರೆ ಬೇರೆಯಾಗಿ ನೋಡಬೇಕಾದ ಕೇಳ್ವಿಗಳಲ್ಲ. ಅವೆರಡೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಯಾಕಂದರೆ ನಾವು ಏನನ್ನು ಮೊದಮೊದಲು ಕಲಿಸಬಹುದು ಎಂಬುದು ಯಾವ ನುಡಿಯಲ್ಲಿ(ಮಾದ್ಯಮದಲ್ಲಿ) ಕಲಿಸುತ್ತೇವೆ ಎಂಬುದರ ಮೇಲೆ ನಿಂತಿದೆ. ನೆಲದ ಅರಿಗರೆಲ್ಲ ’ತಾಯ್ನುಡಿಯಲ್ಲೇ ಕಲಿಕೆ’ ಆದರೆ ಒಳ್ಳೆಯದು; ಅದರಿಂದ ಮಗುವಿಗೆ ’ತಾನಗಿಯೇ ಬಂದ ಸಲೆ’(natural advantage)ಯನ್ನು ಚೆನ್ನಾಗಿ ಬಳಸಿಕೊಂಡು ಬದುಕಿನಲ್ಲಿ ಮುಂದೆ ಬರಬಹುದು ಎಂದು ಹೇಳಿದ್ದಾರೆ.
ಕಲಿಯುವು ಮಗುವು ಕನ್ನಡವನ್ನು ಓದಲು ಬರೆಯಲು ಕಲಿತ ಮೇಲೆ ಅದರಿಂದ ದೊರೆತ ಅಳವನ್ನು ಬಳಸಿಕೊಂಡು ತನ್ನ ಸುತ್ತಲಿನ ಪರಿಸರವನ್ನು ಗಮನಿಸಲು ಅನುವಾಗುವಂತೆ ಕಲಿಕೆಯು ಇರಬೇಕಾಗುತ್ತದೆ. ಅಂದರೆ ಗಮನಿಕೆಯಿಂದ ದೊರೆತ ಅರಿವನ್ನು ಒರೆಗೆ ಹಚ್ಚುವ ಹಾಗೆ ಕಲಿಕೆಯಿದ್ದರೆ ಕಲಿತ್ತದ್ದು ತಲೆಗೆ ಹತ್ತುತ್ತದೆ. ಇದರಿಂದ ಅರಿವಿನ ಆಳವನ್ನು ಹಿಗ್ಗಿಸಿಕೊಳ್ಳಲು ಬರುತ್ತದೆ.
ಎತ್ತುಗೆಗೆ: ಮಯ್ಸೂರಿನಲ್ಲಿ ಓದುತ್ತಿರುವ ಮಗುವು ಮೊದಲ ೭ ತರಗತಿಗಳಲ್ಲಿ/ಏಡುಗಳಲ್ಲಿ ಮಯ್ಸೂರಿನ ಕೂಡಣದ, ಸೊಮ್ಮಿನ ಮತ್ತು ಹಿನ್ನಡವಳಿಯ ಪರಿಚಯವಾಗುವಂತೆ ಓದುಗೆಗಳು ಇರಬೇಕು. ಇದರಿಂದ ಓದಿದುದನ್ನು ಪಳಗಿಕೆಯ ಗಾಣೆ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಬಹುದು.
ಹೀಗೆ ಮಕ್ಕಳಿಗೆ ಎಲ್ಲವನ್ನು ಕನ್ನಡದಲ್ಲಿ ಕಲಿಯುವ ಏರ್ಪಾಟಾದಾಗ, ಇದಕ್ಕೆ ಹೊಂದುವ ಕಲಿಸುವ ಹೊಲುಬುಗಳನ್ನು ಕಂಡುಕೊಂಡಾಗ ’ಓದುಗೆ’ಗಳು ಕೂಡ ಅದಕ್ಕೆ ತಕ್ಕಂತೆ ತಾನಾಗಿಯೇ ಹೊಂದಿಕೊಳ್ಳುತ್ತವೆ. ಈಗಿನ ಓದುಗೆಗಳಲ್ಲಿರುವ ಕೆಲಸಕ್ಕೆ ಬಾರದಿರುವ ಪುರುಳುಗಳು(ವಿಶಯಗಳು) ಅಂದರೆ ಕನ್ನಡ ಸಮಾಜಕ್ಕೆ ತೀರ ದೂರವಿರುವ/ನಂಟಿರದ ಪುರುಳುಗಳು ಓದುಗೆಗಳಲ್ಲಿ ಉಳಿಯುವುದಿಲ್ಲ ಯಾಕಂದರೆ ದಿಟವಾದ ಕಲಿಕೆಗೆ ಇವುಗಳಿಂದ ಯಾವ ಬಳಕೆಯಿಲ್ಲ. ಹಾಗಾಗಿ ಕಲಿಕೆಯ ಹೊಲದಲ್ಲಿ ಅರಿದಾದ ಮಾರ್ಪಾಟುಗಳು ಆಗಿ ಕಲಿಕೆ ಎಂಬುದು ಎತ್ತರದ ಹೊರೆಯಾಗದೆ ಇನ್ನು ಹತ್ತಿರವಾಗುತ್ತದೆ. ಈ ಹತ್ತಿರವಾಗಿಸುವಿಕೆಯೇ ಕಲಿಕೆಯಲ್ಲಿ ಇಂದು ಆಗಬೇಕಾಗಿರುವುದು. ಈ ಹತ್ತಿರವಾಗಿಸುವಿಕೆಯಿಂದಲೇ ಮಕ್ಕಳು ತಮ್ಮ ಸುತ್ತಲಿನ ಕೂಡಣಕ್ಕೆ ಒಗ್ಗಿಕೊಳ್ಳುವುದು. ಕೂಡಣಕ್ಕೆ ಒಗ್ಗಿಕೊಂಡ ಮಕ್ಕಳು ಮುಂದೆ ಆ ಕೂಡಣಕ್ಕೆ ಆಸ್ತಿಯಾಗಬಲ್ಲರು ಮತ್ತು ಆ ಕೂಡಣಕ್ಕೆ ಕೊಡುಗೆಗಳನ್ನು ನೀಡಬಲ್ಲರು.
ಶುಕ್ರವಾರ, ಜುಲೈ 27, 2012
ಕನ್ನಡಿಗರು ಯಾಕೆ ಗರ ಮತ್ತು ಅರಿಲುಗಳಿಗೆ(ನಕ್ಶತ್ರ) ಹೆಸರಿಡಲಿಲ್ಲ?
ಕನ್ನಡದಲ್ಲಿ ’ನನ್’ ಎಂಬ ಪದಬೇರಿದೆ. ಅದರಿಂದ ಪದಗಳು ಯಾವುವು ಎಂಬುದನ್ನ ನೋಡೋಣ:-
ನನ್ + ಪು = ನಂಬು , ನಂಬು+ಇಕೆ = ನಂಬಿಕೆ (belief)
ನನ್+ ನಿ = ನನ್ನಿ (truth)
ನನ್+ಟ = ನಂಟ (relative)
ನಣ್+ಪು = ನಣ್ಪು (friendship)
ನಂಟರು ಎಂಬುದಕ್ಕೆ ನಾವು ಆಡುಮಾತಿನಲ್ಲಿ ’ಹತ್ತಿರ’ದವರು ಎಂದೂ ಕರೆಯುತ್ತೇವೆ. ಹತ್ತಿರದವರೇ ನಮಗೆ ಆಪ್ತರು,ಒಲವಿಗರು ಮತ್ತು ನೋವು-ನಲಿವಿನಲ್ಲಿ ಜೊತೆಯಿರುವವರು. ಅಂದರೆ ’ನಂಬಿಕೆ’ಗೆ ಪಾತ್ರರಾದವರು. ಈ ಮೇಲಿನ ಎಲ್ಲ ಪದಗಳಲ್ಲೂ ನನ್/ನಣ್ ಎಂಬುದು ’near' ಎಂಬ ಬೇರು ಹುರುಳೇ ಆಗಿದೆ. ಅಂದರೆ ಕನ್ನಡದಲ್ಲಿ ಮೊದಲಿನಿಂದಲೂ ’ಹತ್ತಿರ’ ಎಂಬುದನ್ನು ’ದಿಟ’(truth) ಎಂಬುದಕ್ಕೆ ತಳುಕು ಹಾಕುವ ಇಲ್ಲವೆ ಬೆಸೆಯುವ ಒಂದು ಸಂಪ್ರದಾಯ ಇದೆ. ಅದಕ್ಕೇ ಇರಬೇಕು ದೂರದಲ್ಲಿರುವ ವಸ್ತು ವಿಶಯಗಳು ಹಿಂದಿನ ಕನ್ನಡಿಗರನ್ನು ಅಶ್ಟು ಕಾಡಲಿಲ್ಲ. ಬಹುಶಹ ಅದರ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ದೂರದಲ್ಲಿರುವ ವಸ್ತುಗಳಾದ ಗ್ರಹ, ಅರಿಲುಗಳ ಗೋಜಿಗೆ ಕನ್ನಡಿಗರು ಹೋಗಲಿಲ್ಲ. ನಂಬಿಕೆಯೇ ಇಲ್ಲದ ವಸ್ತು-ವಿಶಯಗಳ ಬಗ್ಗೆ ಮಾತಾಡಿ/ಉಂಕಿಸಿ ಬಳಕೆಯೇನು? ಹಾಗಾಗಿ ದೂರದಲ್ಲಿ ಎಲ್ಲೋ ಇರುವ ಗ್ರಹ ಮತ್ತು ಅರಿಲುಗಳಿಗೆ ಹೆಸರು ಕೊಡುವುದಕ್ಕಿಂತ ಆಗ ತಲೆಮೆಯೆ ವಿಶಯಗಳು ಅವರಿಗೆ ಹೇರಳವಾಗಿದ್ದವು ಎಂಬುದು ನನ್ನ ಎಣಿಕೆ.
ಇಲ್ಲಿ ಇನ್ನೊಂದು ವಿಶಯ ತಿಳಿಯುವುದೇನೆಂದರೆ ಹೇಗೆ ನಮ್ಮ ಪದದ ಹುಟ್ಟುಗಳು/ಗುಟ್ಟುಗಳು ನಮ್ಮ ಅರಿಮೆಯ ಹೊನಲನ್ನು ಹರಿಯುವ ಬಗೆಯನ್ನು ತೀರ್ಮಾನಿಸುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಹಾಗಾಗಿ ನಮ್ಮ ಪದಗಳು ನಮ್ಮ ಹಿನ್ನಡವಳಿಗೆ ಕಯ್ ಹಿಡಿದಂತೆ. ಅದಕ್ಕಾಗಿಯೇ ಪದಗಳಲ್ಲಿರುವ ಒಳಗುಟ್ಟನ್ನು ಅರಿಯುವ ಬಗೆ(ಮನಸ್ಸು) ಮತ್ತು ಮೊಗಸು ಎರಡೂ ಮಾಡಬೇಕಾಗಿದೆ.
ಬುಧವಾರ, ಜೂನ್ 27, 2012
ಕನ್ನಡ ಮಾತಿಗೆ ಸಂಸ್ಕ್ರುತ ಅನಿವಾರ್ಯವಾಗಿರಲಿಲ್ಲ, ಇಂಗ್ಲಿಶೂ ಅನಿವಾರ್ಯವಲ್ಲ
ಮೊದಲಿಗೆ,
"ಒಂದು ಕಾಲದಲ್ಲಿ ಕನ್ನಡ ಬಾಶೆಗೆ ಸಂಸ್ಕ್ರುತ ಅನಿವಾರ್ಯ ಆಗಿತ್ತು. ಈಗ ಕನ್ನಡಕ್ಕೆ ಇಂಗ್ಲಿಶ್ ಅನಿವಾರ್ಯ ಬಾಶೆ ಅನಿಸಿದೆ."
ಇಲ್ಲಿ ಅನಂತಮೂರ್ತಿ(ಅ.ಮೂ)ಯವರು ಕನ್ನಡದ ’ಬರಹ’ದ ಬಗ್ಗೆ ಮಾತಾಡಿತ್ತಿರುವರೊ ಇಲ್ಲವೆ ’ಮಾತಿ’ನ ಬಗೆಗೊ ಎಂಬುದು ತಿಳಿಯಾಗಿಲ್ಲ. ಇರಲಿ; ಒಂದು ವೇಳೆ ಅವರು ಕನ್ನಡ ಮಾತಿನ ಬಗ್ಗೆ ಆಗಿದ್ದರೆ ಅವರ ನಿಲುವು ತಪ್ಪೆಂದು ಹೇಳಬೇಕಾಗುತ್ತದೆ. ಯಾಕಂದರೆ ಸಹಜವಾಗಿ ಯಾವುದೇ ಎರಡು ನುಡಿಗಳು ಒಟ್ಟಿಗೆ ಬಂದಾಗ ಹೇಗೆ ’ಕೊಡುಕೊಳು’ ಆಗುತ್ತದೆಯೋ ಹಾಗೆಯೇ ಕನ್ನಡ ಮತ್ತು ಸಂಸ್ಕ್ರುತದ ನಡುವೆ ಕೊಡುಕೊಳು ಆಗಿದೆ. ಅದರಂತೆಯೇ ಕನ್ನಡದಲ್ಲಿ ಸಂಸ್ಕ್ರುತದ ಕೆಲವು ಎರವಲು ಪದಗಳು ಸೇರಿಕೊಂಡಿವೆ. ಹಾಗೆಯೇ ಕನ್ನಡದಿಂದ ಸಂಸ್ಕ್ರುತಕ್ಕೂ ಕೆಲವು ಪದಗಳು ಹೋಗಿವೆ.ಎತ್ತುಗೆಗೆ: ಮೀನು.
ಇದನ್ನೇ ಮುಂದಿಟ್ಟುಕೊಂಡು ಕನ್ನಡಕ್ಕೆ ಮಾತಿಗೆ ಸಂಸ್ಕ್ರುತ ಬಾಶೆ ಅನಿವಾರ್ಯವಾಗಿತ್ತು ಅಂತ ಹೇಳುವುದು ಸರಿಯಲ್ಲ.
ಒಂದು ವೇಳೆ ಅ.ಮೂ ರವರು ಕನ್ನಡದ ಬರಹದ ಬಗ್ಗೆ ಮಾತನಾಡಿದ್ದರೆ ಅವರ ಈ ಮಾತು ಸರಿ ಎಂದು ಒಪ್ಪಿಕೊಳ್ಳಬಹುದು. ಆದರೆ ಅದನ್ನು ಹೀಗೆ ಎತ್ತಿ ಹೇಳುವುದು ಬೇಕಾಗಿರಲಿಲ್ಲ ಯಾಕಂದರೆ ತೀರ ಇತ್ತೀಚೆನವರೆಗೂ ’ಕನ್ನಡ ಬರಹ’ ಎಲ್ಲ ಕನ್ನಡ ಮಂದಿಯನ್ನು ತಲುಪಿರಲಿಲ್ಲ ಇಲ್ಲವೆ ಇನ್ನೂ ತಲುಪಿಲ್ಲ. ಯಾವ ವಸ್ತು( ಕನ್ನಡ ಬರಹ) ಹೆಚ್ಚಿನ ಕನ್ನಡ ಮಂದಿಯನ್ನು ತಲುಪಿಯೇ ಇಲ್ಲವೊ ಅದನ್ನು ಚರ್ಚೆ ಮಾಡಿ ಏನು ಬಳಕೆ? ’ಕನ್ನಡ ಬರಹ’ ಎನ್ನುವುದು ಮೇಲ್ವರ್ಗದವರ ಸೊತ್ತಾಗಿ ಇತ್ತು ಇನ್ನೂ ಇದೆ. ಕೆಲವು ಸಂಸ್ಕ್ರುತ ಬಲ್ಲವರು ಉಂಟು ಮಾಡಿದ ’ಕನ್ನಡ ಬರಹ’ವನ್ನು ಎತ್ತುಗೆಯನ್ನಾಗಿ ಮಾಡಿಕೊಂಡು ನಿಲುವನ್ನು ಮುಂದಿಡುವುದು ಎಶ್ಟು ಸರಿ? ಈ ರೀತಿಯ ಕನ್ನಡದ (ಮಾತು ಮತ್ತು ಬರಹ) ಬಗೆಗಿನ ಸೀಳುನೋಟಗಳು ನಮ್ಮನ್ನು ದಿಕ್ಕು ತಪ್ಪಿಸುತ್ತವೆ. ಅಲ್ಲದೆ ತಪ್ಪು ತಪ್ಪಾದ ನಿಲುವುಗಳತ್ತ ನಮ್ಮನ್ನು ಕೊಂಡೊಯುತ್ತವೆ.
ಎಂದಿಗೂ ಕನ್ನಡಕ್ಕೆ ( ಅಂದರೆ ಮಾತಿಗೆ...ಯಾಕಂದರೆ ಮಾತೇ ಇಲ್ಲಿ ಮೊದಲು ಮತ್ತು ಮುಕ್ಯ) ಸಂಸ್ಕ್ರುತ ಅನಿವಾರ್ಯವಾಗಿರಲಿಲ್ಲ. ಇಂಗ್ಲಿಶ್ ಕೂಡ ಅನಿವಾರ್ಯಾಗಿಲ್ಲ/ಅನಿವಾರ್ಯವಾಗೊಲ್ಲ. ಇದು ’ಬರಹ’ ಹುಟ್ಟಿಸಿರುವ ಒಂದು ಬ್ರಮೆಯಲ್ಲದೇ ಬೇರೇನಲ್ಲ.
"ನಾಡಿನ ಎಲ್ಲ ಮಕ್ಕಳು ಸರ್ಕಾರಿ ಶಾಲೆಗಲಲ್ಲಿ ಕಲಿಯುವಂತಹ ವ್ಯವಸ್ತೆ ನಿರ್ಮಾಣವಾಗಬೇಕು"
ಇದು ಒಂದು ತಿಳಿಹೇಳುವಿಕೆಯ ಮಾತಿನಂತೆ ಇದೆ. ಆದರೂ ಅ.ಮೂ.ರವರ ಒಳ್ಳೆಯ ಗುರಿ ಇಟ್ಟುಕೊಂಡು ಈ ಮಾತು ಹೇಳಿದ್ದಾರೆ. ಆದರೆ ಮಾನವ ಕಟ್ಟಿರುವ ’ಸರ್ಕಾರ’ ಎಂಬ ಏರ್ಪಾಟಿನಲ್ಲಿ ಕೆಲಸಗಳು ತುಂಬಾ ಮೆಲ್ಲಗೆ ನಡೆಯುತ್ತದೆ. ಅ.ಮೂ.ರವರ ಮಾತನ್ನು ಎಸಕಕ್ಕೆ ತರುವುದು ಅಶ್ಟು ಸುಲಬದ ಮಾತಲ್ಲ. ಹಾಗಾಗಿ ಇಂತಹ ಮಾತುಗಳು ಪೋಲಾಗಿ
ಗಾಳಿಯಲ್ಲಿ ತೇಲುತ್ತವೆಯಶ್ಟೆ. ಹಾಗಾದರೆ ಇದಕ್ಕೆ ಬಗೆಹರಿಕೆ ಏನು? ಅಂತ ಕೇಳ್ವಿ ನಮ್ಮ ಮುಂದೆ ಬರುತ್ತದೆ.
ಎಸಕಬಲ್ಲ(practicable) ಆಯ್ಕೆ ಯಾವುದೆಂದರೆ ಸರ್ಕಾರದ ಕಲಿಮನೆಗಳ ಜೊತೆಜೊತೆಗೆ ಕನ್ನಡ ಒಯ್ಯುಗೆಯಲ್ಲಿ ಮೇಲ್ಮಟ್ಟದ ಕಾಸಗಿ ಕಲಿಮನೆಗಳನ್ನು ಕಟ್ಟುವುದು. ಈಗ ಇಂಗ್ಲಿಶ್ ಒಯ್ಯುಗೆ ಬೇಕೆಂದು ಹಪಹಪಿಸುತ್ತಿರುವವರನ್ನು ಕನ್ನಡದ ಒಯ್ಯುಗೆಯೆಡೆಗೆ ಕೊಂಡೊಯ್ಯುವಶ್ಟು ಒಳ್ಳೆ ಕಲಿಮನೆಗಳನ್ನು ಕಟ್ಟಿದರೆ ಕಾಸಗಿ ಕಲಿಮನೆಗಳಿಗೆ ಮಂದಿ ಕಣ್ಣೆತ್ತಿಯೂ ನೋಡುವುದಿಲ್ಲ. ಇದಕ್ಕೆ ಕನ್ನಡದ ಬರಹವನ್ನು ನಲ್ಬರಹಕ್ಕೆ ಮೊಟಕುಗೊಳಿಸದೆ ಅರಿಮೆಯ ಬರಹವನ್ನಾಗಿ ಮಾರ್ಪಡಿಸಬೇಕು. ಅಂದರೆ ಕನ್ನಡದಲ್ಲೇ ಹೊಸಗಾಲದ ಅರಿಮೆಗಳು ಸಿಗುವಂತಾಗಬೇಕು. ಹಾಗೆ ಆಗಬೇಕಾದರೆ ಕನ್ನಡದ್ದೇ ಆದ ಪದಗಳು ಬೇಕು. ಈ ಪದಗಳಿಂದಾದ ಓದುಗೆಗಳು ಬೇಕು. ಇಂತಹ ಒಂದು ಕಲಿಕೆಯೇರ್ಪಾಡಿನಿಂದ ಹೊರಬರುವವರು ಮುಂದೆ ಕನ್ನಡದಲ್ಲೇ ಹೊಸ ಹೊಸ ಅರಿಮೆಗಳನ್ನು ಹುಟ್ಟಿಸಬಲ್ಲರು. ಈ ಅರಿಮೆಗಳಿಂದನೇ ಕನ್ನಡಿಗರು ಏಳಿಗೆಯೆಡೆಗೆ ನಡೆಯಬಲ್ಲರು. ಹೆರವರ ಜೊತೆ ಸಾಟಿಯಾಗಿ ನಿಲ್ಲಬಲ್ಲರು.
ಭಾನುವಾರ, ಜೂನ್ 24, 2012
ಚಿದಾನಂದ ಮೂರ್ತಿಯವರ ಬರಹಕ್ಕೆ ಇದಿರುಬರಹ
ಹಿರಿಯರಾದ ಚಿದಾನಂದ ಮೂರ್ತಿಗಳು ಹಲವು ವಿಶಯಗಳನ್ನು ತಮ್ಮ ಬರಹದಲ್ಲಿ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಹಲವು ಪೊಳ್ಳುತನದಿಂದ ಕೂಡಿರುವುದರಿಂದ ಇದರ ಬಗ್ಗೆ ಮರುನುಡಿಯಬೇಕಾಗಿದೆ.
೧. ಇಂಗ್ಲಿಶ್ ಸ್ಪೆಲ್ಲಿಂಗ್ ತೊಡಕಿದೆ. ಕನ್ನಡದಲ್ಲೂ ಇರಲಿ. ತಪ್ಪೇನು?
ಇಂಗ್ಲಿಶ್ ಎಂದಿಗೂ ಒಂದು ಪೊನೆಟಿಕ್ (ಉಲಿಕೆಗೆ ಅನುಗುಣವಾಗಿ) ನುಡಿಯಾಗಿರಲಿಲ್ಲ ಹಾಗಾಗಿ ಇಂಗ್ಲಿಶಿನಲ್ಲಿ ಹೇರಳ ಸ್ಪೆಲ್ಲಿಂಗ್ ತೊಡಕುಗಳು ಉಂಟಾಗಿವೆ. ಆದರೆ ಕನ್ನಡದಲ್ಲಿ ಅಂತಹ ದೊಡ್ಡ ಮಟ್ಟದ ಸ್ಪೆಲ್ಲಿಂಗ್ ತೊಡಕಿಲ್ಲ ಯಾಕಂದರೆ ಆ ತೊಡಕು ಇರುವುದು ಸಂಸ್ಕ್ರುತದಿಂದ ಎರವಲು ಪಡೆದ ಪದಗಳಿಗೆ ಮಾತ್ರ. ಆದರೆ ಇಂದಿನ ಕನ್ನಡ ಬರಹಗಳಲ್ಲಿ ಹೆಚ್ಚೆಚ್ಚು ಸಂಸ್ಕ್ರುತದ ಪದಗಳು ಕಾಲಿಡುತ್ತಿರುವುದರಿಂದ ಈ ಸ್ಪೆಲ್ಲಿಂಗ್ ತೊಡಕು ದೊಡ್ಡದಾಗಿ ಕಾಣಿಸುತ್ತದೆ. ಹಾಗಾಗಿ ಡಿ.ಎನ್. ಶಂಕರಬಟ್ಟರು ಈ ಎರಡು ಹೊಳಹುಗಳನ್ನು ಸೂಚಿಸಿದ್ದಾರೆ.
ಅ) ಕನ್ನಡ ಬರಹಗಳಲ್ಲಿ ಸಂಸ್ಕ್ರುತದ ಪದಗಳ ಬಳಕೆಯನ್ನು ತಗ್ಗಿಸುವುದು.
ಆ) ಈಗಿರುವ ಕನ್ನಡ ಬರಹದಲ್ಲಿರುವ ಬೇಡದಿರುವ ಕೆಲವು ಬರಿಗೆಗಳನ್ನು ಕನ್ನಡ ಬರಹಮಾಲೆಯಿಂಡ ಕಯ್ ಬಿಡುವುದು.
ಈ ಬರಿಗೆಗಳನ್ನು ಕಯ್ ಬಿಡುವ ಕೆಲಸವನ್ನು ಮಾಡಿದವರಲ್ಲಿ ಶಂಕರಬಟ್ಟರು ಮೊದಲಿಗರೇನಲ್ಲ.. ನಡುಗನ್ನಡದ ಕವಿ ಹರಿಹರ ಮೊದಲು ’ೞ’ ಮತ್ತು ’ಱ’ ಗಳನ್ನು ಕಯ್ ಬಿಟ್ಟು ಬರೆಯಲು ತೊಡಗಿ ಆಮೇಲೆ ಹೆಚ್ಚಿನವರು ಅವನ ದಾರಿಯನ್ನೇ ಪಾಲಿಸಿದರು. ಹಾಗಾಗಿ ಹೊಸಗನ್ನಡದಲ್ಲಿ ನಾವು ’ೞ’, ಮತ್ತು ’ಱ್’ ಗಳನ್ನು ಉಳಿಸಿಕೊಂಡಿಲ್ಲ. ಎಶ್ಟೊ ಕನ್ನಡಿಗರಿಗೆ ಈ ಬರಿಗೆಗಳ ಪರಿಚಯವೂ ಇಲ್ಲ. ಹಾಗಾಗಿ ಅಂತಹ ದೊಡ್ಡದಾದ ಆಬಾಸವಾಗಲಿ ಆಗುತ್ತಿದೆ ಎಂದು ಯಾರು ಹೇಳುತ್ತಿಲ್ಲ. ಹಳೆಗನ್ನಡವನ್ನು ಓದುವ ಕೆಲವೇ ಕೆಲವರು ’ಱ’ ಮತ್ತು ’ೞ’ ಗಳನ್ನು ತಿಳಿದುಕೊಂಡು ಓದುತ್ತಿದ್ದಾರೆ. ಮಹಾಪ್ರಾಣವನ್ನು ನಾವು ಇದೇ ರೀತಿ ಇರಿಸಬಹುದು. ಎಲ್ಲರೂ ಹೇಗೆ ಱ, ೞ ಹೇಗೆ ಕಲಿಯುತ್ತಿಲ್ಲವೊ ಹಾಗೆ ಎಲ್ಲರೂ ಮಹಾಪ್ರಾಣವನ್ನು ಕಲಿಯಬೇಕಾಗಿಲ್ಲ. ಇದಲ್ಲದೆ ಮಾತಿಗೆ ತಕ್ಕಂತೆ ತಮ್ಮ ಲಿಪಿಯನ್ನು ಅಣಿಗೊಳಿಸಿಕೊಂಡಿರುವ ಪಿನ್ನಿಶ್ ನುಡಿಯ ಬಗ್ಗೆ ಚಿ.ಮೂರವರು ತಿಳಿದುಕೊಂಡಿಲ್ಲ ಅಂತ ಕಾಣಿಸುತ್ತೆ. ಇದನ್ನು ಶಂಕರಬಟ್ಟರು ತಮ್ಮ ಹೊತ್ತಗೆಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂಗ್ಲಿಶಿನಂತೆ ಎಲ್ಲ ಪದಗಳಿಗೆ ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳವ ಗೊಡವೆ ಪಿನ್ನಿಶ್ ನುಡಿಯಲ್ಲಿ ಇಲ್ಲ. ಹಾಗಾಗಿ ಪಿನ್ನಿಶ್ ನುಡಿಯಲ್ಲಿ ಅವರು ಜಗತ್ತಿನಲ್ಲೇ ಮೇಲ್ಮಟ್ಟದ ಕಲಿಕೆಯೇರ್ಪಾಟನ್ನು ಕಟ್ಟಿದ್ದಾರೆ.
೨. ಮಹಾಪ್ರಾಣಗಳನ್ನು ಬಿಟ್ಟರೆ ಆಬಾಸವಾಗುತ್ತದೆ
ಚಿದಾನಂದ ಮೂರ್ತಿಯವರು ಬೇಕೆಂದೇ ಹಲವು ವಿಶಯಗಳನ್ನು ಮುಚ್ಚಿಟ್ಟಿದ್ದಾರೆ. ಡಿ.ಎನ್. ಶಂಕರಬಟ್ಟರು ಹೇಳಿರುವ ಬರಿಗೆಮಾಲೆಯನ್ನು ಹಳೆಗನ್ನಡ/ನಡುಗನ್ನಡದ ಕವಿಗಳು ಪಾಲಿಸಿದ್ದಾರೆ.
ಎತ್ತುಗೆಗೆ:
ಅ) ಕವಿರಾಜಮಾರ್ಗದಲಿ ’ದೋಸಮಿನಿತೆಂದು..." ಎಂಬ ಪದ್ಯವಿದೆ. ಗಮನಿಸಿ ಇದರಲ್ಲಿ ’ದೋಸ’ ಎಂದೇ ಬಳಸಲಾಗಿದೆಯೇ ಹೊರತು ’ದೋಷ’ ಎಂದು ಬಳಸಲಾಗಿಲ್ಲ. ’ಋಷಿ’ ಎಂದು ಈಗ ಬರೆಯಲಾಗುತ್ತಿರುವ ಪದವನ್ನು ಹಳೆಗನ್ನಡಲ್ಲಿ ’ರಿಸಿ’ ಎಂದೇ ಬರೆಯಲಾಗಿತ್ತಿತ್ತು, ಹಾಗಂತ ಕವಿರಾಜಮಾರ್ಗ ಇಲ್ಲವೆ ಇತರೆ ಓದುವಾಗ ಮಾನ್ಯ ಚಿದಾನಂದ ಮೂರ್ತಿಗಳಿಗೆ ಆಬಾಸವಾಗಲಿಲ್ಲವೇನೊ?
ಆ) ಆಂಡಯ್ಯನ ’ಕಬ್ಬಿಗರ ಕಾವ’ದ ಬಗ್ಗೆ ಹೊಸಗನ್ನಡದಲ್ಲಿ ಸೀಳುನೋಟದ ಹಲವು .ಕ್ರುತಿಗಳು ಬಂದಿದೆ. ಆದರೆ 'ಕಬ್ಬಿಗರ ಕಾವ'ದಲ್ಲಿ ಎಲ್ಲೂ ಮಹಾಪ್ರಾಣಗಳನ್ನು ಬಳಸಿಲ್ಲ. ’ಘೋಷಣೆ’ ಯನ್ನು ’ಗೋಸಣೆ’ ಎಂದೇ ಆಂಡಯ್ಯನು ಬರೆದಿರುವುದು. ಈ ರೀತಿ ಬರೆಯುವುದು ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಮತ್ತು ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡವನ್ನಾಗಿ ಮಾಡುವ ಮೊಗಸೇ ಆಗಿತ್ತು. ಹೀಗೆ ಆಂಡಯನನ್ನು ಓದುವಾಗ ಆಗದ ಆಬಾಸ ಈಗ ಏಕೆ ಆಗುತ್ತದೆ? ಚಿದಾನಂದ ಮೂರ್ತಿಯವರೇ ಇದಕ್ಕೆ ಉತ್ತರಕೊಡಬೇಕು. ಒಂದು ವೇಳೆ ಚಿದಾನಂದ ಮೂರ್ತಿಯವರಿಗೆ ಆಬಾಸವಾದರೂ ಎಲ್ಲ ಕನ್ನಡಿಗರಿಗೂ ಅದೇ ರೀತಿ ಆಬಾಸವಾಗುತ್ತದೆ ಎಂದು ಚಿದಾನಂದ ಮೂರ್ತಿಯವರು ಹೇಗೆ ಹೇಳುತ್ತಾರೆ?
ಇಶ್ಟಕ್ಕೂ ಮಹಾಪ್ರಾಣವಿರುವ ಒಂದೇ ಒಂದು ಕನ್ನಡದ್ದೇ ಆದ ಪದವನ್ನು ಚಿದಾನಂದ ಮೂರ್ತಿಯವರು ತೋರಿಸಿಕೊಡಲಿ.
೩. ಕನ್ನಡದಲ್ಲಿ ಉತ್ತಮ ಚಿಂತನೆ, ಬಾವನೆಗಳನ್ನು ವ್ಯಕ್ತ ಪಡಿಸಲಾರೆವು
ಯಾವುದೇ ಒಂದು ನುಡಿಗೆ ಅದರೇ ಆದ ಸೊಗಡು, ಹಿನ್ನಡವಳಿ ಇರುತ್ತದೆ. ಸಂಸ್ಕ್ರುತದಲ್ಲಿ ಹೊರತರುವ ಅನಿಸುಗಳು, ಉಂಕುಗಳು ಕನ್ನಡದಲ್ಲೂ ಇರಬೇಕೆನ್ನುವ ಒತ್ತಾಯವೇತಕ್ಕೆ? ಹಾಗೆ ಕನ್ನಡದಲ್ಲಿ ಹೊರತರುಬಹುದಾದ ವಿಶಯಗಳು ಸಂಸ್ಕ್ರುತದಲ್ಲಿ ತರಲಾಗುವುದಿಲ್ಲ. ’ಒಂದು’, ಎರಡು ಅಂತ ಸಂಸ್ಕ್ರುತದಲ್ಲಿ ಬರೆಯಲು ಆಗುವುದೇ ಇಲ್ಲ. ಅವನ್ನು ’ಓಂದು’ ಮತ್ತು ’ಏರಡು’ ಅಂತಲೇ ಸಂಸ್ಕ್ರುತದಲ್ಲಿ ಬರೆಯಬೇಕಾಗುತ್ತದೆ. ಇದನ್ನೇ ಮುಂದಿಟ್ಟುಕೊಂಡು ಸಂಸ್ಕ್ರುತದಲ್ಲಿ ಇಂತಹ ಸರಳ ವಿಶಯಗಳಾದ ಎಣಿಕೆಯನ್ನು ವ್ಯಕ್ತ ಪಡಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆಯೆ? ಆದ್ದರಿಂದ ಚಿದಾನಂದಮೂರ್ತಿಯವರು ಹೇಳುತ್ತಿರುವ ’ಕನ್ನಡದಲ್ಲಿ ಉತ್ತಮ ಭಾವನೆ ಮತ್ತು ಚಿಂತನೆಗಳನ್ನು ವ್ಯಕ್ತ ಪಡಿಸಲಾರೆವು’ ಎಂಬ ಮಾತಿನಲ್ಲಿ ಹುರುಳಿಲ್ಲ.
೪. ಸಂಸ್ಕ್ರುತದ ಮಂತ್ರಗಳನ್ನು ಸಂಸ್ಕ್ರುತದಲ್ಲಿರುವಂತೆ ನಾವು ಉಲಿಯದಿದ್ದರೂ ಬರೆಯಬೇಕು
ಚಿದಾನಂದ ಮೂರ್ತಿಯವರು ಹೇಳಿರುವ ಎಲ್ಲ ಮಂತ್ರಗಳು ಸಂಸ್ಕ್ರುತದ್ದವು ಕನ್ನಡದ್ದಲ್ಲ. ಇವನ್ನು ಹೆಚ್ಚು ಕನ್ನಡ ಮಂದಿಯೂ ತಮ್ಮ ದಿನಬಳಕೆಯಲ್ಲಿ ಬಳಸುವುದಿಲ್ಲ. ಕೆಲವರು ಬಳಸುತ್ತಿರುವವರು ಅದು ಸಂಸ್ಕ್ರುತದಲ್ಲಿ ಹೇಗಿದಿಯೋ ಹಾಗೆ ಓದುವುದಿಲ್ಲ ಇಲ್ಲವೆ ಉಲಿಯುವುದಿಲ್ಲ. ಆದರೂ ಒತ್ತಾಯಪೂರ್ವಕವಾಗಿ ಸಂಸ್ಕ್ರುತದಲ್ಲಿ ಹೇಗಿದಿಯೋ ಹಾಗೆ ಅದನ್ನ ಉಳಿಸಿಕೊಳ್ಳಬೇಕೆಂದು ಇವತ್ತಿನ ಕನ್ನಡ ಬರಹ ಬಲವಂತ ಪಡಿಸುತ್ತಿದೆ. ವಿಸರ್ಗದ ಬದಲಾಗಿ ’ಹ’ಕಾರವನ್ನೇ ಕನ್ನಡಿಗರು ಉಲಿಯುವುದು. ಕಿವಿಗೆ ’ಹ’ಕಾರ ಕೇಳಿದರೂ ಕಣ್ಣಿಗೆ ವಿಸರ್ಗವೇ ಏಕೆ ಕಾಣಿಸಬೇಕು? ಇನ್ನು ವಿಸರ್ಗವನ್ನು ಬಿಡುವುದರಿಂದ ಕನ್ನಡದ್ದೇ ಆದ ಪದಗಳಿಗೆ ಯಾವುದೇ ತೊಂದರೆಯಿಲ್ಲ.
೫. ಅಚ್ಚಗನ್ನಡದ ಪದಗಳ ಹುಟ್ಟು ವ್ಯರ್ತ ಕೆಲಸ ಎಂಬ ಉಪದೇಶ:
ಬರಿಗೆ, ಅರಿಮೆ ಮತ್ತು ಉಲಿಕೆ ಎಂಬ ಪದಗಳು ಉಂಟು ಮಾಡುವುದು ಬೇಕಾಗಿಲ್ಲ ಮತ್ತು ಇವು ಸಂಸ್ಕ್ರುತಕ್ಕಿಂತ ಕಟಿಣ ಎಂಬ ತಮ್ಮ ಅನಿಸಿಕೆಯನ್ನು ಅದೇಶವೆಂಬಂತೆ ಯಾವುದೇ ಕಾರಣ ಕೊಡದೇ ಹೊರಡಿಸಿದ್ದಾರೆ. ಎಲ್ಲರಿಗೂ ಸಾಮಾನ್ಯವಾಗಿ ಅರ್ತವಾಗುವ ಪದಗಳಾದ ಬರೆ, ಅರಿ ಮತ್ತು ಉಲಿ ಎಂಬ ಪದಗಳಿಂದ ಈ ಪದಗಳನ್ನು ಉಂಟುಮಾಡಲಾಗಿದೆ. ಕನ್ನಡಿಗರಿಗೆ ಕನ್ನಡಕ್ಕಿಂತ ಸಂಸ್ಕ್ರುತವೇ ಸುಲಬ ಎನ್ನುವ ಚಿ.ಮೂ ಅವರ ಮಾತನ್ನು ಯಾರಾದರೂ ಒಪ್ಪಲಾಗುತ್ತದೆಯೇ? ಆರಂಬಕಾರನಿಗೆ ಹೊಲ ಉಳುವುದು ಕಶ್ಟವೆ? ಕೋಗಿಲೆಗೆ ಇನಿದನಿ ಉಲಿಯುವುದು ಕಶ್ಟವೆ? ಹೂವಿಗೆ ಅರಳುವುದು ಕಶ್ಟವೆ? ಇದನ್ನು ಚಿ.ಮೂ ಅವರು ಕೊಂಚ ಯೋಚಿಸಲಿ. ಈ ರೀತಿ ಕನ್ನಡದಲ್ಲಿ ಪದವನ್ನು ಉಂಟು ಮಾಡದೇ ಸುಮ್ಮನೆ ’ಕನ್ನಡ! ಕನ್ನಡ!’ ಅಂತ ಬಡಿದುಕೊಳ್ಳುವುದರಲ್ಲಿ ಏನಿದೆ? ಚಿ.ಮೂ.ರವರು ಇಶ್ಟೊಂದು ಕನ್ನಡದ ಬಗೆಗಿನ ಅರಕೆಗಳನ್ನು ಮಾಡಿದ್ದು ಏತಕ್ಕೆ?
೬. ಕನ್ನಡ ಅತೀ ಎನಿಸುವಶ್ಟು ಸಂಸ್ಕ್ರುತದ ಎರವಲು ಪಡೆದಿಲ್ಲ
ಅವರ ಬರಹದ ತಲೆಬರಹದಲ್ಲಿ ಒಟ್ಟು ೬ ಪದಗಳಿವೆ ಅದರಲ್ಲಿ ೪ ಪದಗಳು(ಲಿಪಿ, ಸಂಸ್ಕರಣೆ,ಅನಗತ್ಯ,ಅಸಾಧ್ಯ) ಸಂಸ್ಕ್ರುತದ್ದು ಇನ್ನುಳಿದ ೨ ಕನ್ನಡದ್ದು ( ಕನ್ನಡ, ಮತ್ತು). ಅದನ್ನು ಹೀಗೆ ಬರೆಯಬಹುದಿತ್ತು ’ಕನ್ನಡ ಬರಹದಲ್ಲಿ ಮಾರ್ಪು ಬೇಕಾಗಿಲ್ಲ ಮತ್ತು ಆಗುವುದೂ ಇಲ್ಲ’. ಹೀಗೆ ಎಗ್ಗಿಲ್ಲದೆ ಸಂಸ್ಕ್ರುತದ ಎರವಲು ಪದಗಳನ್ನು ತಮ್ಮ ಬರಹದುದ್ದಕ್ಕೂ ಬಳಸಿರುವ ಚಿ.ಮೂ ಅವರು ’ಕನ್ನಡ ಅತೀ ಎನಿಸುವಶ್ಟು ಸಂಸ್ಕ್ರುತದ ಎರವಲು ಪಡೆದಿಲ್ಲ’ ಎಂದು ಹೇಗೆ ಹೇಳುತ್ತಾರೆ?
೭. ಕನ್ನಡಿಗರೆಲ್ಲರೂ ಈಗಿರುವ ಲಿಪಿ ಒಪ್ಪಿಕೊಂಡಿದ್ದಾರೆ.
ಮತ್ತೆ ಇವರು ಕನ್ನಡಿಗರಿಗೆ ಯಾವುದೇ ಕಾರಣ ಕೊಡದೇ ತಮ್ಮ ಆದೇಶವನ್ನು ಹೊರಡಿಸುತ್ತಿದ್ದಾರೆ. ಕೆಲವರು, ಅಂದರೆ ಸಂಸ್ಕ್ರುತ ಲಾಬಿಗಳು ಒಪ್ಪಿಕೊಂಡು ಹೇರಲಾದ ಲಿಪಿ ವ್ಯವಸ್ತೆಯನ್ನು ಸಾಮಾನ್ಯರು ಒಪ್ಪಿಕೊಂಡಿದ್ದಾರೆ ಎಂದು ಒಬ್ಬದಿಯ(one-sided) ಮಾತುಗಳನ್ನು ಚಿ.ಮೂರವರು ಮುಂದಿಟ್ಟಿದ್ದಾರೆ. ಆದರೆ ಈಗಲೂ ಕನ್ನಡ ಬರಹದಲ್ಲಿ ಆಗುತ್ತಿರುವ ’ತಪ್ಪು’ಗಳು ಅಂದರೆ ಸಂಸ್ಕ್ರುತದ ಪ್ರಕಾರ ಮಹಪ್ರಾಣ ಇರುವ ಕಡೆ ’ಮಹಾಪ್ರಾಣ’ ಇಲ್ಲದಿರುವುದು. ಮಹಾಪ್ರಾಣ ಇಲ್ಲದಿರುವ ಕಡೆ ಮಹಾಪ್ರಾಣ ಇರುವುದು ಗೊಂದಲವನ್ನು ಉಂಟುಮಾಡಿದೆ. ಈ ತರ ಕನ್ನಡಿಗರು ಮಹಾಪ್ರಾಣವನ್ನು ಒಪ್ಪದಿರುವಿಕೆಯನ್ನು ತೋರಿಸುತ್ತಲೇ ಇದ್ದಾರೆ.
ಕನ್ನಡ ಬರಹದಲ್ಲಿ ಹೆರನುಡಿಗಳನ್ನು ಉಲ್ಲೇಕ ಮಾಡುವುದು ತೀರ ವಿರಳ. ಅದಕ್ಕೋಸ್ಕರ ಕನ್ನಡಬರಹದಲ್ಲಿ ಮಹಾಪ್ರಾಣಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಎಶ್ಟು ಸರಿ. ನಮಗೆ ಬೇಕಾದ ಹಾಗೆ ನಮ್ಮ ಮನೆಯನ್ನು ಕಟ್ಟಿಕೊಳ್ಳುವುದು ವಾಡಿಕೆಯೇ ಹೊರತು ಹೆರವರಿಗೆ ಬೇಕಾದ ಹಾಗೆ ನಮ್ಮ ಮನೆಯನ್ನು ಕಟ್ಟಿಕೊಳ್ಳಲಾದೀತೆ?
ಕೊನೆಗೆ ಯಾವುದೇ ಅರಿಮೆಯ ಓಸುಗರಗಳನ್ನು ಕೊಡದೇ ’ಲಿಪಿ ಸುದಾರಣೆಯನ್ನು ಗಂಬೀರವಾಗಿ ಗಮನಿಸಬೇಕಾಗಿಲ್ಲ’ ಎಂದು ಹೇಳಿದ್ದಾರೆ. ಈಗಾಗಲೇ ಕನ್ನಡ ಬರಿಗೆ ಮಾಲೆಯು ಹಳೆಗನ್ನಡದಿಂದ ಹೊಸಗನ್ನಡಕ್ಕೆ ಮಾರ್ಪಾಗುತ್ತ ಬಂದಿದೆ. ಈ ಮಾರ್ಪಾಗುತ್ತಿರುವುದು ಕನ್ನಡಕ್ಕಿರುವ ಜೀವಂತಿಕೆಯನ್ನು ತೋರಿಸುತ್ತದೆ. ಹಾಗಾಗಿ ಹೊಸಗಾಲದ ಬೇಕು/ಬೇಡಗಳಿಗೆ ತಕ್ಕಂತೆ ಕನ್ನಡ ಬರಿಗೆಮಾಲೆಯನ್ನು ಅಣಿಗೊಳಿಸಿ ಹೊಸ ದಾರಿಯನ್ನು ತುಳಿಯುವ ಕನ್ನಡದ ಪರಂಪರೆಯನ್ನು ನಾವು ಮುಂದುವರೆಸಬೇಕಾಗಿದೆ. ಡಿ.ಎನ್. ಶಂಕರಬಟ್ಟರು ಹೇಳಿರುವ ಬರಹ ಮಾರ್ಪುಗಳನ್ನು ಅಳವಡಿಸಿದರೆ ಹೆಚ್ಚು ಕನ್ನಡಿಗರಿಗೆ ಬಳಕೆಯೇ ಹೊರತು ತೊಂದರೆಯಿಲ್ಲ ಎಂದು ದಾರಾಳವಾಗಿ ಮೇಲೆ ತಿಳಿಸಿದ ಕಾರಣಗಳಿಂದ ದಾರಳವಾಗಿ ನಾನು ಹೇಳಬಯಸುತ್ತೇನೆ.
ಬುಧವಾರ, ಜೂನ್ 13, 2012
'ಕನ್ನಡ ಮಾದ್ಯಮ' ಅನ್ನವೇ ಹೊರತು ಉಪ್ಪಿನಕಾಯಿಯಲ್ಲ
ಇತ್ತೀಚೆಗೆ ಸರಕಾರ ಇಂಗ್ಲಿಶ್ ಮಾದ್ಯಮದ ಕುರಿತು ತೆಗೆದುಕೊಂಡಿರುವ ನಿಲುವು ವೈಜ್ನಾನಿಕವಾಗಿ ಸರಿಯಾದುದಲ್ಲ. ದೂರದೃಶ್ಟಿಯಿಲ್ಲದೆ ತೆಗೆದುಕೊಂಡಿರುವ ನಿಲುವು ಇದಾಗಿದೆ. ಒಂದು ನಾಡಿನ ಕಲಿಕೆಯೇರ್ಪಾಡು ಕಟ್ಟುವಲ್ಲಿ ಅದನ್ನ ಕಟ್ಟುವವರ ದೂರದರ್ಶಿತ್ವ ಬಹು ಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಕಲಿಕೆಯೆಂಬುದನ್ನು ಪರಿಣಾಮಕಾರಿಯಾಗಿ ಮಾಡುವುದು ಅಶ್ಟು ಸುಲಬದ ಮಾತಲ್ಲ. ಇದಕ್ಕೆ ಹಲವು ಹಮ್ಮುಗೆಗಳನ್ನು ತಳಪಾಯದಿಂದ ಮಾಡಬೇಕಾಗುತ್ತದೆ. ಅದಕ್ಕಾಗಿ ಕಲಿಕೆಯರಿಗರು , ನುಡಿಯರಿಗರು ಮತ್ತು ಹಿರಿಯ ಚಿಂತಕರು ಕೂತು ಚರ್ಚೆ ನಡೆಸಬೇಕಾಗುತ್ತದೆ.ಆಂದಮೇಲೆ ಕಲಿಕೆಯರಿಗರು ಮತ್ತು ನುಡಿಯರಿಗರು ಈ ಕಲಿಕೆಯ ಮಾಧ್ಯಮನುಡಿಯ ಬಗ್ಗೆ ಏನು ಹೇಳುತ್ತಾರೆಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಜಗತ್ತಿನ ಎಲ್ಲ ಕಲಿಕೆಯರಿಗರು ಒಕ್ಕೊರಲಿನಲ್ಲಿ 'ತಾಯ್ನುಡಿಯಲ್ಲೇ(ಅದಕ್ಕೆ ಹತ್ತಿರವಿರುವ ಪರಿಸರದ ನುಡಿಯಲ್ಲೇ) ಕಲಿಕೆ' ನಡೆದರೆ ಆ ಮಕ್ಕಳ ಕಲಿಕೆ ಚೆನ್ನಾಗಿರುತ್ತದೆ ಮತ್ತು ಮುಂದೆ ಅವರು ಬದುಕಿನಲ್ಲಿ ಹೆಚ್ಚಿನದನ್ನು ಸಾದಿಸಬಹುದೆಂದು ಹೇಳುತ್ತಾರೆ. ಹೇಗೆ ನಾವು ಭೌತವಿಜ್ನಾನದ ವಿಶಯವನ್ನು ತಿಳಿದುಕೊಳ್ಳಲು ಭೌತವಿಜ್ನಾನಿಯ ನೆರವು ಪಡೆಯುತ್ತೇವೆಯೋ ಹಾಗೆ ಇಲ್ಲಿ ಕಲಿಕೆಯರಿಗರ(ಶಿಕ್ಶಣ ತಜ್ನರ) ಅಭಿಪ್ರಾಯ ಕೇಳಬೇಕಾಗುತ್ತದೆ ಯಾಕಂದರೆ ಅವರು ಈ ವಿಶಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುತ್ತಾರೆ ಮತ್ತು ಅದನ್ನು ಆಳವಾಗಿ ಅಭ್ಯಸಿಸಿರುತ್ತಾರೆ. ಇಂತಹ ಒಂದು ಸಿ.ಆರ್. ಚಂದ್ರಶೇಕರ್ ಅವರ ಬರಹ ಇತ್ತೀಚೆಗೆ ’ಸುಧಾ’ದಲ್ಲಿ ಪ್ರಕಟವಾಗಿತ್ತು.
ಬಡವರು, ದಲಿತರು ಇಂಗ್ಲಿಶ್ ಮಾಧ್ಯಮ ಕೇಳುತ್ತಿದ್ದಾರೆಅಶ್ಟೇ ಏಕೆ, ಪ್ರತಿ ಸಾಮಾನ್ಯ ಮನುಶ್ಯನಿಗೂ ತಾನು ಕೋಟಿ ಕೋಟಿ ಸಂಪಾದನೆ ಮಾಡಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಬಡವರು ಇಂಗ್ಲಿಶ್ ಮಾಧ್ಯಮ ಕೇಳುವುದು ತಪ್ಪಾ? ಅವರು ಮುಂದೆ ಬರಬಾರದೆ ಎಂಬ ಪ್ರಶ್ನೆಗಳನ್ನು ಇಂದು ಮುಂದಿಡಲಾಗುತ್ತಿದೆ. ಅದಕ್ಕೆ ಉತ್ತರ ಇಶ್ಟೆ. ಎಲ್ಲರೂ ಮುಂದೆ ಬರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲರೂ ಕೋಟಿ ಕೋಟಿ ಹಣ ಸಂಪಾದನೆ ಮಾಡಲಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಣ ಸಂಪಾದನೆಗೆ ನಾವು ಕಾನೂನುಬಾಹಿರ, ಅವೈಜ್ನಾನಿಕ ಮತ್ತು ಅನೈತಿಕ ದಾರಿ ಹಿಡಿಯುವುದು ಎಶ್ಟು ತಪ್ಪೊ ಹಾಗೆ ಬಡವರು ಮತ್ತು ಇಂಗ್ಲಿಶ್ ಪರಿಸರದಲ್ಲಿ ಇಲ್ಲದವರು(ಹೆಚ್ಚಿನ ಕನ್ನಡಿಗರು) ಇಂಗ್ಲಿಶ್ ಮಾದ್ಯಮವೆಂಬ 'ಅಡ್ಡದಾರಿ' ಹಿಡಿಯುವುದು ಅಶ್ಟೆ ತಪ್ಪು. ಯಾಕಂದರೆ ಪರಿಸರದಲ್ಲಿಲ್ಲದ ನುಡಿಯಲ್ಲಿ ಕಲಿಕೆ ಎಂದಿಗೂ ಏಳಿಗೆಯೆಡೆಗೆ ಕೊಂಡೂಯ್ಯುವುದಿಲ್ಲ ಎಂಬ ಮಾತು ಸೂರ್ಯನ ಬೆಳಕಿನಶ್ಟೆ ದಿಟ. ಆಗ ತಾನೆ ಹುಟ್ಟಿದ ಮಗುವಿಗೆ 'ಎದೆಹಾಲು' ಹೇಗೆ ಮುಖ್ಯವೋ ಹಾಗೆಯೇ ಕಲಿಕೆಗೆ ಹೋಗುವ ಮಗುವಿಗೆ ತಾಯ್ನುಡಿಯೆಂಬ ಎದೆಹಾಲು ಅಶ್ಟೆ ಮುಖ್ಯ. ಯಾಕೆ ನಾವು ಆಗ ತಾನೆ ಹುಟ್ಟಿದ ಮಗುವಿಗೆ ಪಿಜ್ಜಾ, ಬರ್ಗರ್ ಎಲ್ಲವನ್ನು ತಂದುಕೊಡುವುದಿಲ್ಲ. ಇವನ್ನು ಕೊಟ್ಟರೆ ಆಧುನಿಕತೆ/ಮುಂದುವರೆದಿರುವಿಕೆಯನ್ನು ಮಗುವಿಗೆ ಮೈಗೂಡಿಸದಂತಾವುದಿಲ್ಲವೆ? ಎಂಬ ಪ್ರಶ್ನೆ ಎಶ್ಟು ಅವೈಜ್ನಾನಿಕವೊ ಅಶ್ಟೆ
ಅವೈಜ್ನಾನಿಕ ಈ ಕನ್ನಡಿಗರ ಕಲಿಕೆಯಲ್ಲಿ ಇಂಗ್ಲಿಶ್ ಮಾದ್ಯಮವೆಂಬ ಪಿಜ್ಜ/ಬರ್ಗರ್.
ಕೆಲವು ಸಾಹಿತಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಕಳುಹಿಸುತ್ತಿಲ್ಲ..ಯಾಕೆ?:-ಈ ಮೇಲಿನ ಕೇಳ್ವಿಯನ್ನು ಮುಖ್ಯಮಂತ್ರಿಯವರು ಮೊದಲಾಗಿ ಎಲ್ಲರೂ ಕೇಳುತ್ತಿದ್ದಾರೆ. ಕೆಲವು ಬೆರೆಳೆಣಿಕೆಯ ಸಾಹಿತಿಗಳು ತಮ್ಮ ಮಕ್ಕಳನ್ನು'ಕನ್ನಡ ಮಾಧ್ಯಮ'ಕ್ಕೆ ಕಳುಹಿಸಿದಿದ್ದರೇನಂತೆ? 'ತಾಯ್ನುಡಿಯಲ್ಲೇ ಕಲಿಕೆಯು ಉತ್ತಮ' ಎಂಬ ದಿಟವನ್ನು ಅಳಿಸಲಾಗುವುದೇ ? ಒಬ್ಬ ಹೆಸರುವಾಸಿಯಾದ ವೈದ್ಯರನ್ನು ಒಬ್ಬ 'ಸಿಗರೇಟ್ ಸೇದುಗ'ಎಂದು ಕಾರಣ ಕೊಟ್ಟು ಅವರ ಮಾತುಗಳು/ಸಲಹೆಗಳನ್ನು ಅಲ್ಲಗಳೆಯಲಾಗುವುದೇ? ಮೊದಲು ನಾವು ಅರಿಗರು ಏನು ಹೇಳುತ್ತಿದ್ದಾರೆ ಎಂಬುದರ ಗಮನ ಕಡೆ ಹರಿಸಬೇಕೇ ಹೊರತು ಅವರ ವೈಯಕ್ತಿಕ ಚಟುವಟಿಕೆಗಳ ಕಡೆ ಅಲ್ಲ.
ಬರೀ ಬಡವರೇ ಯಾಕೆ ಕನ್ನಡ ಮಾಧ್ಯಮದಲ್ಲಿ ಓದಿ ಕನ್ನಡ ಉಳಿಸಬೇಕು?
.ಕನ್ನಡಿಗ ಯಾರೇ ಆಗಿರಲಿ ಬಡವನಾಗಿರಲಿ, ದಲಿತನಾಗಿರಲಿ ಮತ್ತು ಸಿರಿವಂತನಾಗಿರಲಿ ತಾನು 'ಕನ್ನಡ ಮಾಧ್ಯಮ'ದಲ್ಲಿ ಓದಿ ಕನ್ನಡ ಉಳಿಸುತ್ತೇನೆಂದು ಅಂದುಕೊಳ್ಳುವುದು ದೊಡ್ಡ ತಪ್ಪು. ಬದಲಾಗಿ ಕನ್ನಡ ಮಾಧ್ಯಮವು ಯಾವುದೇ ಕನ್ನಡಿಗನಿಗೆ ವಿಶಯವನ್ನು ಚೆನ್ನಾಗಿ ತಿಳಿಸಿಕೊಡುತ್ತದೆ. ಇದರಿಂದ ಕನ್ನಡಿಗರಿಗೇ ಹೆಚ್ಚು ಉಪಯೋಗವೇ ಹೊರತು ಕನ್ನಡಕ್ಕಲ್ಲ(The prime beneficiary is Kannadiga not Kannada). ಕನ್ನಡಿಗರಿಗೆ 'ಕನ್ನಡ' ಒಂದು ಉತ್ತಮ ಕಲಿಕೆಯ ಸಾಧನವಶ್ಟೆ. ಆ ಸಾಧನವನ್ನು ಬಳಸಿಕೊಂಡವರು ಹೆಚ್ಚಿನದನ್ನು ಸಾಧಿಸಬಹುದು. ಇಲ್ಲವಾದರೆ ಕನ್ನಡಿಗರಿಗೇನೆ ನಶ್ಟ ಹೊರತು ಕನ್ನಡಕ್ಕಲ್ಲ.
ಕನ್ನಡಿಗರೇ ಕನ್ನಡ ಮಾದ್ಯಮದಲ್ಲಿ ಓದದೇ ಮೇಲೆ ಕನ್ನಡವನ್ನು ಯಾತಕ್ಕೋಸ್ಕರ ಉಳಿಸಿಕೊಳ್ಳಬೇಕು? ಉಪ್ಪಿನಕಾಯಿ ಹಾಕಿಕೊಂಡು ನೆಕ್ಕುವುದಕ್ಕಾ? 'ಕನ್ನಡ ಉಳಿಸುವುದು' ಎನ್ನುವುದಕ್ಕೆ ಏನಾದರೂ ಅರ್ತ ಇದಿಯ?
'ಇಂಗ್ಲಿಶ್' ಏಳಿಗೆಯ ಶಾಶ್ವತ ಕುರುಹಲ್ಲ ..ಯಾಕೆ?ಇಂದು ಇಂಗ್ಲಿಶಿನಲ್ಲಿ ಹಲವು ಅರಿಮೆಗಳು ಹುಟ್ಟುತ್ತಿರುವುದರಿಂದ 'ಇಂಗ್ಲಿಶ್' ಅರಿಮೆಯ,ಏಳಿಗೆಯ ಕುರುಹು ಎಂದು ಎಲ್ಲರು ಭಾವಿಸಿರುವಂತಿದೆ. ಆದರೆ ೨೦ ವರ್ಶಗಳ ನಂತರ ಈ ಸ್ಥಿತಿ ಹೀಗೆ ಇರುತ್ತದೆ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಇಂಗ್ಲಿಶಿನ ಜಾಗಕ್ಕೆ 'ಚೈನೀಸ್' ಬಂದು ಕೂತುಕೊಳ್ಳಬಹುದು. ಆಗ ನಮ್ಮ ಸರ್ಕಾರ 'ಚೈನೀಸ್' ಮಾಧ್ಯಮಕ್ಕೆ ಮಣೆ ಹಾಕುತ್ತೇನೊ?! ಈ ರೀತಿಯ ರಿಯಾಕ್ಟಿವ್ ಕಲಿಕೆಯೇರ್ಪಾಡುಗಳು ನಮ್ಮನ್ನು ದಿಕ್ಕುಗೆಡಿಸುತ್ತದೆಯೇ ಹೊರತು ಏಳಿಗೆಯೆಡೆಗೆ ಕೊಂಡೊಯ್ಯುವುದಿಲ್ಲ.
ಯಾವುದೇ ನೋಟದಿಂದ ನೋಡಿದರೂ 'ತಾಯ್ನುಡಿಯಲ್ಲೇ ಕಲಿಕೆಯೇ ಉತ್ತಮ' ಎಂಬುದರಲ್ಲಿ ಎರಡು ಮಾತಿಲ್ಲ. ಈ ದಿಟವನ್ನು ಅರಿತು ಸರಕಾರ ಕರ್ನಾಟಕದಲ್ಲಿ ದೂರಾಲೋಚನೆಯ ಮತ್ತು ಮೇಲ್ಮಟ್ಟದ ಕಲಿಕೆಯೇರ್ಪಾಡು ಕಟ್ಟಿದರೆ ಒಳಿತು.
ಕಲಿಕೆಯೆಂಬ ಊಟದಲ್ಲಿ ಕನ್ನಡವು ಅನ್ನವೇ ಹೊರತು ಕೊಳೆಸಿದ ಉಪ್ಪಿನಕಾಯಿಯಲ್ಲ. ಅನ್ನ ತಿಂದೇ ಹೊಟ್ಟೆ ಹೊರೆಸುಕೊಳ್ಳಬೇಕೇ ಹೊರತು ಬರೀ ಉಪ್ಪಿನಕಾಯಿ ತಿನ್ನಕ್ಕಾಗಲ್ಲ ಎಂಬುದನ್ನು ನಾವು ಅರ್ತ ಮಾಡಿಕೊಂಡರೆ ಸಾಕು.
ಬುಧವಾರ, ಮೇ 23, 2012
ಕನ್ನಡ ಲಿಪಿ ಸುದಾರಣೆಗೆ ವಿರೋದ ಸಲ್ಲದು
ಸಾದ್ಯವೇ ಎಂದು ನೋಡಬೇಕಾಗುತ್ತದೆ. ಇದರಿಂದ ಬರಹದಲ್ಲಿ ಕೆಲವು ಮಾರ್ಪುಗಳನ್ನು ತಂದು ಅದರಿಂದ ಕಲಿಕಯನ್ನು ಉತ್ತಮಪಡಿಸಲಾಗುವುದಾದರೆ ನುಡಿಯರಿಮೆಯ ತಿಳವುಗಳನ್ನು ಲಿಪಿ ಸುದಾರಣೆಗ ಏಕೆ ಬಳಸಿಕೊಳ್ಳಬಾರದು? ಕಲಿಕೆ ಮತ್ತು ಅದರಿಂದ ಕಟ್ಟಿಕೊಳ್ಳಬಹುದಾದ ಬದಕನ್ನು ಹಸನು ಮಾಡಬಹುದಾದರೆ ಲಿಪಿ ಸುದಾರಣೇ ಏಕೆ ಬೇಡ? ಹೆಚ್ಚು ಮಂದಿಯ ಕಲಿಕೆಯನ್ನು ಸುಲಬ ಮಾಡುವ ಲಿಪಿ ಸುದಾರಣೆಯಿಂದ ಆಗುವ ಒಳಿತನ್ನು ನೋಡಿದಾಗ 'ಲಿಪಿ ಸಂಸ್ಕ್ರುತಿ'ಯ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು? ಇಶ್ಹ್ಟಕ್ಕೂ ಸಂಸ್ಕ್ರುತಿಯೆಂಬುದು ನಿಂತ ನೀರಲ್ಲ ಹರಿಯುವ ಹೊಳೆ ಇದ್ದ ಹಾಗೆ.
ನುಡಿಯರಿಮೆಯನ್ನು ಓದಿ ನಾವು ಲಿಪಿಯನ್ನು ಸುದಾರಣೆ ಮಾಡಬೇಕು ಎಂದು ತಿಳಿದುಕೊಂಡಿರುವಾಗ ಅದನ್ನು ಆಚರಣೆಗೆ ತರಲು ಏಕೆ ವಿರೋದ? ನುಡಿ ಮತ್ತು ನಡೆಯಲ್ಲಿ ಯಾಕೆ ಈ ಬೇರೆತನ. ಬಸವಣ್ಣನವರೇ ಒಂದು ವಚನದಲ್ಲಿ ಹೇಳಿರುವಂತೆ "ನುಡಿಯೊಳಗಾಗಿ ನಡೆಯದಿದ್ದವರ ಮೆಚ್ಚನಾ ಕೂಡಲಸಂಗಮದೇವ" ಎಂದು ಹೇಳಿಲ್ಲವೆ?
ಬಾಶೆಯ ಬೆಳವಣಿಗೆಯ ದ್ರುಶ್ಟಿಕೋನದಿಂದ ನೋಡಿದರೂ- ಬಾಶೆ ಬೆಳೆಯುವುದು ಹೆಚ್ಚು ಹೆಚ್ಚು ಮಂದಿ ಆ ಬಾಶೆಯ ಬರಹವನ್ನು ಕಲಿತಾಗಲೇ ಅಲ್ಲವೆ? ಲಿಪಿ ಸುದಾರಣೆಯಿಂದ ಕನ್ನಡ ಬರಹವು ಸುಲಬವಾಗುವುದರಿಂದ ಹೆಚ್ಚು ಹೆಚ್ಚು ಮಂದಿ ಚೆನ್ನಾಗಿ ಕನ್ನಡ ಬರಹವನ್ನು ಕಲಿಯಲು ಅನುವಾಗುತ್ತದೆ. ಇದರಿಂದ ಬಾಶೆಯ ಬೆಳವಣಿಗೆ ಕಂಡಿತ ಆಗುತ್ತದೆ.
ಒಂದು ವೇಳೆ ಲಿಪಿ ಸುದಾರಣೆ ಮಾಡದಿದ್ದರೆ ಏನಾಗುತ್ತದೆ ಎಂದು ಯೋಚಿಸಿದರೆ ಎಲ್ಲರು ಕನ್ನಡ ಬರಹವನ್ನು ಚೆನ್ನಾಗಿ ಕಲಿಯಲು ಆಗುವುದಿಲ್ಲ. ಆಗ ಬರಹ ಬಲ್ಲವರು ಮತ್ತು ಬರಹ ಬರದವರು ಎಂಬ ಎರಡು ಗುಂಪುಗಳಾಗಿ ಬರಹಬಲ್ಲವರ ಚಿಂತನೆ ಬರಹಬರದವರ ಚಿಂತನೆಗಿಂತ ಬೇರಾಗಿರುತ್ತದೆ. ಹಾಗಾಗಿ ಸಮಾಜದಲ್ಲಿ ಕಂದಕ ಮೂಡುತ್ತದೆ. ಹೀಗಾಗದಂತೆ ನೋಡಿಕೊಳ್ಳಲು ನಾವು ಲಿಪಿ ಸುದಾರಣೆಗೆ ತೆರೆದುಕೊಳ್ಳಬೇಕಾಗಿದೆ.
ಶನಿವಾರ, ಏಪ್ರಿಲ್ 14, 2012
'ದಶಮುಕ’ ಚೆನ್ನಾಗಿದೆ
ಇವತ್ ’ದಶಮುಕ’ ಸಿನಿಮಾ ನೋಡಿದೆ. ಸಿನಿಮಾ ತುಂಬ ಚೆನ್ನಾಗಿದೆ.
ಏನ್ ಚೆನ್ನಾಗಿದೆ:-
೧. ಕತೆ , ಅನಂತನಾಗ್ ಮತ್ತು ಅವಿನಾಶ್ ಅವರ ನಟನೆ
೨. ರವಿಚಂದ್ರನ್ ತಾವು ತೆಗೆದುಕೊಂಡಿರುವ ಪಾತ್ರದಿಂದ ನಿಮಗೆ ಅಚ್ಚರಿ ಮೂಡಿಸುತ್ತಾರೆ.
೩. ಅನಂತ್ ನಾಗ್- ಅಚ್ಯುತ್ ಅವರು ಅಲ್ಲಲ್ಲ್ ಕಚಗುಳಿ ಇಡುತ್ತಾರೆ....
೪. ಚೇತನ್ ಮತ್ತು ಅವರ ಒಡನಟಿ ಅಲ್ಲಲ್ಲಿ ಮನಕ್ಕೆ ತಂಪನ್ನೀಯುತ್ತಾರೆ.
೫. ಮಾತುಗಳು(ಸೂಳುನುಡಿ- dialogue) ಕಚಗುಳಿ ಕೊಡುವದಲ್ಲದೆ ಲಾಜಿಕ್ಕನ್ನು ಎತ್ತಿ ಹಿಡಿಯುತ್ತಾ ಹೋಗುತ್ತದೆ.
೬. ಎಲ್ಲರಿಗೂ ಅವರಿಗೆ ಒಗ್ಗುವ ಪಾತ್ರವನ್ನು ಕೊಡಲಾಗಿದೆ. ಹಾಗಾಗಿ ಸೀನುಗಳು ಸರಾಗವಾಗಿ ಸಾಗುತ್ತವೆ.
೭. ಅಶ್ಟೊಂದು ಪಾತ್ರಗಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ತೂಗಿಸಿಕೊಂಡು ಹೋಗುವುದು ಸುಲಬವಲ್ಲ.. ಹಾಗಾಗಿ ನಿರ್ದೇಶಕರು ಒಳ್ಳೆ ಕೆಲಸ ಮಾಡಿದ್ದಾರೆ ಅಂತ ದಾರಾಳ್ವಾಗಿ ಹೇಳಬಹುದು.
೮. ಕೊನೆಯಲ್ಲಿ ’ಕನ್ನಡ ನುಡಿ’ಯ ಬಗೆಗಿನ ಕಾಳಜಿ ತೋರುವ ಸಿನಿಮಾ ಹೇಗೆ ಕತೆಯನ್ನು ಕನ್ನಡತನಕ್ಕೆ ಜಾಣತನದಿಂದ ಒಗ್ಗಿಸಿದ್ದಾರೆ ಎಂಬುದು ಅರಿವಾದಾಗ ನಿಮಗೆ ಕುಶಿಯಾಗುತ್ತದೆ.
ಕೊನೆಯದಾಗಿ. ಹೇಗೆ ನಾವು ಯಾವುದೇ ವಿಶ್ಯವನ್ನು ನಮ್ಮ ಅನುಬವಗಳಿಂದ ಹೊರತಾಗಿ ನೋಡಬೇಕು ಮತ್ತು ಹಾಗೆ ನೋಡಿದಾಗ ಆ ವಿಶ್ಯಕ್ಕೆ ನ್ಯಾಯ ಒದಗಿಸಬಹುದು ಎಂಬುದು ಈ ಸಿನಿಮಾ ನೋಡಿ ಕಲಿಯಬಹುದು.ತುಂಬಾ ಚೆನ್ನಾಗಿದೆ...ಇದಕ್ಕೆ ಹಲಚುಕ್ಕಿಗಳು****** ..ನೋಡಲೇಬೇಕಾದ ಸಿನಿಮಾ. dont miss it
ಮಂಗಳವಾರ, ಫೆಬ್ರವರಿ 07, 2012
’ಪ್ರೌಡಶಾಲೆಯವರೆಗೂ ಸಂಸ್ಕೃತ ಕಡ್ಡಾಯ’-- ಬೇಕಾ ?
ಅಲ್ಲದೆ ಭೈರಪ್ಪನವರು ’ಸಂಸ್ಕೃತವನ್ನು ಕನ್ನಡ ವಿರೋಧಿ ಭಾಷೆ ಎಂದು ನೋಡಲಾಗಿದೆ’ ಎಂದು ಹೇಳಿರುವುದರಲ್ಲು ತಪ್ಪು ತಿಳುವಳಿಕೆಯಿದೆ ಯಾಕಂದರೆ ಶ್ರೀವಿಜಯ, ನಯಸೇನ ಮತ್ತು ಆಂಡಯ್ಯ ಇವರೆಲ್ಲರೂ ಆಗಿನ ಕಾಲದಲ್ಲಿ ಕನ್ನಡ ಬರಹದಲ್ಲಿ ಅತೀ ಎನ್ನಿಸುವಷ್ಟು ಸಂಸ್ಕ್ರುತವನ್ನು ಬೆರಸಿರುವುದನ್ನು ಗುರುತಿಸಿ ಅದು ಸರಿಯಲ್ಲ ಎಂದು ಹೇಳಿದ್ದರೆ ಹೊರತು ಯಾರೂ ಸಂಸ್ಕ್ರುತವನ್ನು ವಿರೋದಿಸಿಲ್ಲ. ಯಾವ ಬಾಶೆಯ ಮೇಲೂ ಅನಾದರ ತೋರಿಸುವುದು ಸರಿಯಲ್ಲ; ಹಾಗಂತ ನಮ್ಮದಲ್ಲದ ಬಾಶೆಯನ್ನು ನಾವು ಹೊತ್ತುಕೊಂಡು ಮೆರೆಸಬೇಕಾಗಿಲ್ಲ. ಕನ್ನಡಿಗರು ಸಂಸ್ಕ್ರುತದ ವಿಷಯದಲ್ಲಿ ತಟಸ್ಥ ಧೋರಣೆ ತೋರುತ್ತಾ ಕನ್ನಡದ ಕಸುವನ್ನು ಹೆಚ್ಚಿಸುವ ಕಡೆ ಗಮನ ಕೊಡುವುದು ಈಗ ತುರ್ತಾಗಿ ಆಗಬೇಕಾಗಿರುವುದು ಎಂದು ಹೇಳಬಯಸುತ್ತೇನೆ.
"ಸಂಸ್ಕ್ರುತವನ್ನು ಉಳಿಸುವ ಮೂಲಕ ನಾವು ಆ ಭಾಷೆಯನ್ನು ಉದ್ದಾರ ಮಾಡುತ್ತೇವೆ ಎಂಬ ಬ್ರಮೆಗಿಂತ ಆ ಮೂಲಕ ನಮ್ಮ ಉದ್ಧಾರ ಸಾದ್ಯವಿದೆ ಎಂಬ ಅರಿವಿನೊಂದಿಗೆ ಸಂಸ್ಕ್ರುತದ ಉಳಿವಿಗೆ ಮುಂದಾಗಬೇಕು"ಮೊದಲಿಗೆ ಭೈರಪ್ಪನವರೇ ಹೇಳಿರುವಂತೆ ದಕ್ಶಿಣ ಬಾರತದ ಬಾಸೆಗಳಿಗೆ ಸಂಸ್ಕ್ರುತ ಮೂಲವಲ್ಲ - ಹೀಗಿರುವಾಗ ನಾವು (ಕನ್ನಡಿಗರು) ಸಂಸ್ಕ್ರುತವನ್ನು ಏಕೆ ಉಳಿಸಬೇಕು? ಅದರಿಂದ ನಮ್ಮ ಉದ್ಧಾರ ಹೇಗ ಆಗುತ್ತೆ? ಬೇಕಾದರೆ ಉತ್ತರ ಬಾರತದವರು ಅದನ್ನು ಉಳಿಸಿಕೊಂದು ಉದ್ದಾರ ಹೊಂದಲಿ. ಈಗಾಗಲೆ ಉತ್ತರಾಕಂಡ ರಾಜ್ಯವು ಸಂಸ್ಕ್ರುತಕ್ಕೆ ಒತ್ತು ಕೊಟ್ಟಿದೆ. ಇಂದು ಬೆಂಗಳೂರಿನಲ್ಲಿರುವ ಹಲವು ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡುವ ಹಾಗಿಲ್ಲ. ಇಂತಹ ಪರಿಸ್ತಿತಿ ಇರುವಾಗ ನಮ್ಮ ಆದ್ಯತೆ ಕನ್ನಡವನ್ನು ಉಳಿಸಿ ಅದರಿಂದ ಏಳೆಗೆಯೆಡೆಗೆ ಹೋಗಬೇಕೇ ಹೊರತು ಸಂಸ್ಕ್ರುತದೆಡೆಗೆ ಅಲ್ಲ.
ಇವೆಲ್ಲಕ್ಕಿಂತ ಹೆಚ್ಚಾಗಿ ಒಂದು ಮಗುವು ಈಗಾಗಲೆ ಕನ್ನಡ, ಇಂಗ್ಲಿಶ್, ಹಿಂದಿ ಬಾಶೆಗಳನ್ನು ಕಲಿಯಬೇಕಾಗಿದೆ ಅದರ ಮೇಲೆ ಸಂಸ್ಕ್ರುತವನ್ನು ಕಡ್ಡಾಯ ಮಾಡಿ ಹೇರಿದರೆ ಆ ಮಕ್ಕಳ ಗತಿ ಏನು? ಯಾವುದನ್ನು ಸರಿಯಾಗಿ ಕಲಿಯಲು ಬಿಡದೆ ಮಕ್ಕಳನ್ನು ನಾವೇ ಎಡಬಿಡಂಗಿ ಮಾಡಿದಂತೆ ಆಗುವುದಿಲ್ಲವೆ?....ಇದರ ಬಗ್ಗೆ ಬೈರಪ್ಪನವರು ಕೊಂಚ ಉಂಕಿಸಲಿ !!
ಶನಿವಾರ, ಫೆಬ್ರವರಿ 04, 2012
ಕನ್ನಡದ ಒಳನುಡಿಗಳು ಮತ್ತು ಬರಹಗನ್ನಡ- ಎರಡು ಪಾಪೆಗಳು
ಸೋಮವಾರ, ಜನವರಿ 23, 2012
ಬೈರಪ್ಪನವರೂ, ಸಂಸ್ಕ್ರುತವೂ
ಬೈರಪ್ಪನವರು ಮತ್ತೆ ಕನ್ನಡ,ಸಂಸ್ಕ್ರುತ ಮತ್ತು ಕನ್ನಡಿಗರ ಬಗ್ಗೆ ತಮ್ಮ ಅಣಿಮುತ್ತುಗಳನ್ನು ಉದುರಿಸಿದ್ದಾರೆ(ಮೇಲಿನ ಕನ್ನಡಪ್ರಬದ ವರದಿಯನ್ನು ನೋಡಿ). ಅದಕ್ಕೆ ಮತ್ತೆ ಇದರ ಬಗ್ಗೆ ಬರೆಯಲೇಬೇಕಾಗಿದೆ.
ಅಣಿಮುತ್ತುಗಳು ಹೀಗಿವೆ:-
"ಹೈಸ್ಕೂಲ್ ಪಟ್ಯದಲ್ಲಿ ಒಂದು ಬಾಶೆಯಾಗಿ ಸಂಸ್ಕ್ರುತವನ್ನು ಕಡ್ಡಾಯಗೊಳಿಸಬೇಕು"
ಮಂದಿಯಾಳ್ವಿಕೆ(democracy) ಇರುವ ನಮ್ಮ ನಾಡಿನಲ್ಲಿ ಹೀಗೆ ಕಡ್ಡಾಯವಾಗಿ ಒಂದು ಬಾಶೆಯನ್ನು ಹೇರುವುದು ಎಶ್ಟು ಸರಿ? ಅದೂ ಸಾಮಾನ್ಯ ಮಂದಿಗೆ ದೂರವಾಗಿರುವ ನುಡಿ ಮತ್ತು ಮಾತಿನಲ್ಲಿ ಬಳಕೆಯಲ್ಲಿಲ್ಲದ ನುಡಿ. ಇದರಿಂದ ಎಶ್ಟು ಮಂದಿಗೆ ಮುಂದೆ ಅವರ ಬದುಕಿನಲ್ಲಿ ಬಳೆಕೆಗೆ ಬರುತ್ತೆ. ಒಂದು ವೇಳೆ ಬಲವಂತವಾಗಿ ಹೇರಿದರೆ ಅವರು ಆ ನುಡಿಯನ್ನು( ಸಂಸ್ಕ್ರುತವನ್ನು) ಸರಿಯಾಗಿ ಕಲಿಯಬಲ್ಲರೆ? ಇದರ ಬಗೆಗಿನ ಅರಕೆಯ ಓದು( research study) ಆಗಿದಿಯೆ? ಆಗಿದ್ದರೆ ಆ ’ಸೀಳ್ನೋಟ’(analysis) ಏನು ಹೇಳುತ್ತದೆ ..ಇವುಗಳ ಬಗ್ಗೆ ಬೈರಪ್ಪನವರು ತಿಳಿದು ಈ ಮಾತುಗಳನ್ನು ಆಡಿದ್ದಾರೆಯೆ?. ಯಾವುದೇ ವಸ್ತುವನ್ನು ಇಲ್ಲವೆ ವಿಶಯವನ್ನು ಮಂದಿಯ ಮೇಲೆ ಕಡ್ಡಾಯಗೊಳಿಸುವುದು (ಆದರಲ್ಲೂ ಕ್ಲಿಶ್ಟವಾದ ಸಂಸ್ಕ್ರುತದಂತಹ ಬಾಶೆಯನ್ನು) ಮಂದಿಯಾಳ್ವಿಕೆಯ ಬಯಕೆ/ಆಶಯಗಳಿಗೆ ಹೊಂದುವುದಿಲ್ಲ.
"ಸಂಸ್ಕ್ರುತ ಬಾಶೆ ಕನ್ನಡಕ್ಕೆ ಪೂರಕ"
ಹೇಗೆ ಪೂರಕ? ಕನ್ನಡ ಒಂದು ದ್ರಾವಿಡ ನುಡಿ. ಸಂಸ್ಕ್ರುತ ಒಂದು ಇಂಡೊ-ಯೂರೋಪಿಯನ್ ನುಡಿ ಎಂದು ನುಡಿಯರಿಗರು ಸಾರಿ ಸಾರಿ ಹೇಳಿದ್ದಾರೆ. ಸಂಸ್ಕ್ರುತದಿಂದ ಪದಗಳನ್ನು ಎರವಲು ಪಡೆದುದರಿಂದ ಬೈರಪ್ಪನವರು ಈ ಮಾತನ್ನು ಹೇಳಿದ್ದರೆ ಈ ಮಾತು ಪರ್ಶಿಯನ್ ಮತ್ತು ಇಂಗ್ಲಿಶಿಗೂ ಒಪ್ಪುತ್ತದೆ.
ಮೇಲಿನ ದಾಟಿಯಲ್ಲೇ ’ಇಂಗ್ಲಿಶ್ ಬಾಶೆ ಕನ್ನಡಕ್ಕೆ ಪೂರಕ’ ಎಂದು ಇನ್ನೊಬ್ಬರು ಹೇಳಬಹುದು. ಹೀಗೆ(ಇಂಗ್ಲಿಶ್ ಬಾಶೆ ಕನ್ನಡಕ್ಕೆ ಪೂರಕ)ಹೇಳುವುದು ಎಶ್ಟು ಸುಳ್ಳೊ/ಪೊಳ್ಳೋ ಅಶ್ಟೆ ಸುಳ್ಳು/ಪೊಳ್ಳು ಸಂಸ್ಕ್ರುತ ಕನ್ನಡಕ್ಕೆ ಪೂರಕ ಎನ್ನುವ ಮಾತು.
"ಸಂಸ್ಕ್ರುತ ಅದ್ಯಯನ ಮಾಡಿದರೆ ಕನ್ನಡ ಗಟ್ಟಿಯಾಗುತ್ತದೆ"
ಇದನ್ನು ಕೇಳಿದಾಗ ನಮ್ಮ ಕಡೆಯ ಗಾದೆ/ನಾಣ್ಣುಡಿಯೊಂದು ನೆನಪಿಗೆ ಬಂತು - "ಎತ್ತಿಗೆ ಜರ ಬಂದ್ರೆ ಎಮ್ಮೆಗೆ ಬರೆ ಎಳೆದರಂತೆ’. ಸಂಸ್ಕ್ರುತದ ಅದ್ಯಯನ ಮಾಡಿದರೆ ಆ ಬಾಶೆ ಚೆನ್ನಾಗಿ ಒಲಿಯುತ್ತದೆಯೆ ಹೊರತು ಕನ್ನಡವು ಹೇಗೆ ಗಟ್ಟಿಯಾಗುತ್ತದೆ? ಬದಲಾಗಿ ಎಚ್ಚರವಹಿಸದಿದ್ದರೆ ಸಂಸ್ಕ್ರುತದ ಪ್ರಬಾವದಿಂದ ಅವರ ಕನ್ನಡವು ಹೆಚ್ಚು ಹೆಚ್ಚು ಕ್ರುತಕಗೊಳ್ಳಬಹುದು. ಸಂಸ್ಕ್ರುತದ ಎಲ್ಲ ಕಟ್ಟಲೆಗಳು ಕನ್ನಡಕ್ಕೂ ಇರಬೇಕೆನ್ನುವ ತಪ್ಪು ತಿಳಿವಳಿಕೆ ಮೂಡಬಹುದು. ಈ ಒಂದು ತಪ್ಪು ತಿಳಿವಳಿಕೆಯಿಂದಲೇ ಕನ್ನಡದ ಸೊಲ್ಲರಿಮೆಯನ್ನು/ವ್ಯಾಕರಣವನ್ನು ವಿವರಿಸುವಲ್ಲಿ ಈಗಾಗಲೆ ಹಲವು ತಪ್ಪುಗಳನ್ನು ಮಾಡಲಾಗಿದೆ. ಹಾಗಾಗಿ ಸಂಸ್ಕ್ರುತ ಅದ್ಯಯನ ಮಾಡುವುದರಿಂದ ಸಂಸ್ಕ್ರುತ ಚೆನ್ನಾಗಿ ಕಲಿಯಬಹುದೇ ಹೊರತು ಅದಕ್ಕಿಂತ ತೀರ ಬೇರೆಯಾಗಿರುವ(ಹಲವು ನೆಲೆಗಳಲ್ಲಿ ಅಂದರೆ ಸೊಲ್ಲರಿಮೆ, ನುಡಿಯರಿಮೆಯ ನೆಲೆಗಳಲ್ಲಿ) ಕನ್ನಡದ ಮೇಲೆ ಹಿಡಿತ ಪಡೆಯಲಾಗದು.
"ಶುದ್ದ ಕನ್ನಡ ಬರೆಯಲು, ಮಾತನಾಡಲು ಸಂಸ್ಕ್ರುತ ನೆರವಾಗುತ್ತದೆ"
ಯಾವುದು ಶುದ್ದ ಕನ್ನಡ ಎಂಬುದನ್ನು ಅವರು ವಿವರಿಸಿಲ್ಲವಾದುದರಿಂದ ಇದರ ಬಗ್ಗೆ ಹೇಳುವುದು ಕಶ್ಟ. ಸಂಸ್ಕ್ರುತ ಬೆರೆತ ಕನ್ನಡವನ್ನೇ ಶುದ್ದ ಕನ್ನಡ ಎಂದು ಬೈರಪ್ಪನವರು ತಿಳಿದಂತಿದೆ. ಹಾಗಿದ್ದರೆ ಕನ್ನಡಿಗರ ಮಾತಿನಲ್ಲಿ ಹೆಚ್ಚು ಹೆಚ್ಚು ಹಾಸುಹೊಕ್ಕಾಗಿರುವುದು ಅಣ್ಣೆಗನ್ನಡ/ಅಚ್ಚಗನ್ನಡವೇ ಹೊರತು ’ಶುದ್ದಗನ್ನಡ’ವಲ್ಲ.
ಹೆಚ್ಚು ಮಂದಿಗೆ ಬೈರಪ್ಪನವರು ಹೇಳುವ ’ಶುದ್ದಗನ್ನಡ’ ಅಂದರೆ ಸಂಸ್ಕ್ರುತ ಬೆರೆತ ಕನ್ನಡ ಬೇಕಾಗಿಲ್ಲ ಯಾಕಂದರೆ ಅದು ಹೆಚ್ಚು ಮಂದಿಯ ಬದುಕಿನಲ್ಲಿ ಅದು ಅಶ್ಟು ಬಳಕೆಗೆ ಬರುವುದಿಲ್ಲ.
"ಕಾರಣಾಂತರದಿಂದ ಸಂಸ್ಕ್ರುತ ಹೆಚ್ಚು ಕಲಿಯಲು ಆಗಲಿಲ್ಲ. ಆಗಿದ್ದರೆ ಇನ್ನಶ್ಟು ಉತ್ತಮವಾಗಿ ಬರೆಯುತ್ತಿದ್ದೆ"
ಸದ್ಯ...ಇವರು ಸಂಸ್ಕ್ರುತ ಹೆಚ್ಚು ಕಲಿಯದೇ ಇದ್ದುದು ಒಳ್ಳೆಯದೇ ಆಯಿತು. ಇಲ್ಲ ಅಂದರೆ ಹಾಸನದ ಆಡುಗನ್ನಡ ಸೊಂಪಾಗಿ ಬಳಕೆಯಾಗಿರುವ ’ ನಾಯಿನೆರಳು’, ’ಗ್ರುಹಬಂಗ’ , ’ಜಲಪಾತ’ ಎಂಬ ಕಾದಂಬರಿಗಳು ಅಶ್ಟು ಮಂದಿಯೊಲವನ್ನು ಗಳಿಸುತ್ತಿರಲಿಲ್ಲ. ಒಂದು ವೇಳೆ ಬೈರಪ್ಪನವರು ಇದನ್ನೆಲ್ಲ ಹೆಚ್ಚು ಸಂಸ್ಕ್ರುತ ಬೆರೆತ ಕನ್ನಡದಲ್ಲಿ ಬರೆದಿದ್ದರೆ ಶತಾವದಾನಿ ರಾ.ಗಣೇಶ್ ಅವರು ಎಶ್ಟು ಜನರನ್ನು ತಲುಪಿದ್ದಾರೊ ಅಶ್ಟೆ ಕಡಿಮೆ ಮಂದಿಯನ್ನು ಬೈರಪ್ಪನವರು ತಲುಪಿರುತ್ತಿದ್ದರು.