ಬುಧವಾರ, ಅಕ್ಟೋಬರ್ 17, 2012

ಲಿಪಿ ಸುದಾರಣೆಯ ಗುರಿಗಳು ಮತ್ತು ಜಾರಿಗೆ ತರುವುದು

ಲಿಪಿ ಸುದಾರಣೆಯ ಗುರಿಗಳು :-

೧. ಮಹಾಪ್ರಾಣವನ್ನು ಇಲ್ಲಗೊಳಿಸುವುದಲ್ಲ. ಬದಲಾಗಿ ಕನ್ನಡ ಸಮಾಜದಲ್ಲಿ ಬಿತ್ತಲಾದ ಮಹಾಪ್ರಾಣದ ಬಗೆಗಿನ 'ಸುಳ್ಳು ಮೇಲರಿಮೆ'ಯನ್ನು ಹೋಗಲಾಡಿಸುವುದು. ಅದಕ್ಕಾಗಿ ಹೆಚ್ಚು ಹೆಚ್ಚು ಬರಹಗಳು ಮಹಾಪ್ರಾಣವಿಲ್ಲದೇ ಬರಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಮಂದಿಯು ಮಹಾಪ್ರಾಣ ಇಲ್ಲದೆ ಬರೆಯಬೇಕಾಗಿದೆ. ಏಕೆ ಹಾಗೆ ಬರೆಯಬೇಕು ಎಂಬುದರ ಬಗ್ಗೆ ಈಗಾಗಲೆ ಶಂಕರಬಟ್ಟರ ಹೊತ್ತಿಗೆಗಳಲ್ಲಿ ಮತ್ತು ಈ ಮಿಂಬರಹದಲ್ಲೂ ಕೂಡ ಹೇಳಲಾಗಿದೆ. 
 
೨. (೧) ರಲ್ಲಿ ಹೇಳಿರುವುದು ಷ, ವಿಸರ್ಗ(ಃ) ಗಳಿಗೂ ಒಪ್ಪುವುದು 
 
೩. ೧ ಮತ್ತು ೨ ಮಾಡುವುದರಿಂದ ೯೦% ಕನ್ನಡಿಗರಲ್ಲಿ ನಾವು ಕೀಳರಿಮೆಯನ್ನು ಹೋಗಲಾಡಿಸಬಹುದು. ಅಲ್ಲದೆ ಇವರನ್ನು ಹೆಚ್ಚು ಹೆಚ್ಚು ಬರಹದೆಡೆಗೆ ಸೆಳೆಯಬಹುದು. ಬರಹದ ಕಡೆಗೆ ಸೆಳೆದಾಗ ಅವರೇ ಮುಂದೆ ಚಿಂತನೆಯನ್ನು ಮಾಡಬಲ್ಲವರಾಗುತ್ತಾರೆ. ಚಿಂತನೆಯಿಂದ ಅವರು ತಮ್ಮ ಏಳಿಗೆಯ ದಾರಿಯನ್ನು ಕಂಡುಕೊಳ್ಳಬಲ್ಲರು. ಲಿಪಿಸುದಾರಣೆಯಿಂದ ಬರಹ ಗೊತ್ತಿಲ್ಲದವರ ಇಲ್ಲವೆ ಬರಹದಿಂದ ದೂರವುಳಿದವರ ಇಲ್ಲವೆ ಬರಹವನ್ನು ಚೆನ್ನಾಗಿ ತಿಳಿಯದವರಲ್ಲಿ ಒಂದು ದೊಡ್ಡ ಮಟ್ಟದ ಮಾರ್ಪಾಡು ಅಗಬಲ್ಲುದು ಎಂಬುದೇ ಇಲ್ಲಿ ಮುಕ್ಯ ಗುರಿ. ಹಲಜನರ ಏಳಿಗೆಯೇ ಮಂದಿಯಾಳ್ವಿಕೆಯ ಮುಕ್ಯ ಗುರಿ.
 
ಲಿಪಿಸುದಾರಣೆಯನ್ನು ಜಾರಿಗೆ ತರುವುದರ ಬಗ್ಗೆ:-
 
೧.ಲಿಪಿಸುದಾರಣೆಗೆ ತರುವುದು ತುಂಬ ಸುಲಬವಾಗಿದೆ ಯಾಕಂದರೆ ಇಲ್ಲಿ ಆಗಬೇಕಿರುವುದು ಬರಿಗೆಗಳನ್ನು ಬಿಡಬೇಕಾಗಿರುವುದು. ಇಲ್ಲಿ ಹೊಸದಾಗಿ ಕಲಿಯುವುದು ಏನೂ ಇಲ್ಲ. ಆಗಬೇಕಿರುವುದೆಲ್ಲ ಬರೀ ಬರಿಗೆಗಳನ್ನು ಬರಹದಿಂದ ಬಿಡಬೇಕಾಗಿರುವುದು. 
 
೨.  ಕೆಲವರಲ್ಲಿ ಲಿಪಿಸುದಾರಣೆಯನ್ನು ಬಿಟ್ಟು ಪದಕಟ್ಟಣೆಯನ್ನು ಮಾಡಬಹುದು ಎಂಬ ನಿಲುವು ಇದೆ. ಪದಕಟ್ಟಣೆ ಆಗಬೇಕಾಗಿರುವುದು ಅರಿಮೆಯ ಪದಗಳಿಗೆ ಮತ್ತು ಯಾವುದೇ ಹೊರನುಡಿಯ ಪದವಿರಲಿ ಈಗಾಗಲೆ ಕನ್ನಡಿಗರ ನಾಲಿಗೆಯು ಅದನ್ನು ಕನ್ನಡಕ್ಕೆ ಹೇಗೆ ಒಗ್ಗಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ಹೊಸಗಾಲದ ಅರಿಮೆಯ ನೆಲೆಯಲ್ಲಿ ಪದಕಟ್ಟಣೆ ಇಲ್ಲವೆ ಕನ್ನಡದ್ದೇ ಆದ ಪದಗಳನ್ನು ಉಂಟು ಮಾಡುವ ಕೆಲಸ ಕೆಲವೇ ಕನ್ನಡಿಗರಿಂದ ಅಗಬೇಕಾಗಿದೆ. ಇದರಲ್ಲಿ ಎಲ್ಲ ಕನ್ನಡಿಗರೂ ಕೊಡುಗೆಯನ್ನು ನೀಡಲಾರರು. ಉಳಿದ ಕನ್ನಡಿಗರು ಆ ಪದಗಳ ಬಳಕೆದಾರರು ಆಗಲು ಮಾತ್ರ ಸಾದ್ಯ ಆದರೆ ಲಿಪಿಸುದಾರಣೆ ಎಂಬುದು ಎಲ್ಲ ಕನ್ನಡಿಗರನ್ನು ನೇರವಾಗಿ ತಲುಪುವುದು. 'ಹೊಸಬರಹ'ದಲ್ಲಿ ಬರೆಯುವಾಗ ಹೆಚ್ಚು ಮಂದಿಗೆ ಒಂದು ತೆರನಾದ ಸರಪಳಿಯಿಂದ ಬಿಡಿಸಿದಂತೆ ಆಗುವುದು. ಹಾಗಾಗಿ, ಹೆಚ್ಚಿನ ಮಂದಿಯ ಒಳಿತನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇಲ್ಲಿ ಲಿಪಿಸುದಾರಣೆಯೇ ಮುಕ್ಯವಾಗಿ ಮತ್ತು ಬೇಗ ನಡೆಯಬೇಕಿರುವ ಕೆಲಸ ಎಂದು ನಮಗೆ ತಿಳಿಯುತ್ತದೆ. 

ಲಿಪಿ ಸುದಾರಣೆ ಎಂಬುದು ಸೊಲ್ಲರಿಮೆ ಇಲ್ಲವೆ ನುಡಿಯರಿಮೆಯಿಂದ ಬಂದ ಕಂಡುಕೊಳ್ಳುವಿಕೆಯಲ್ಲ, ಬದಲಾಗಿ ಕೂಡಣದರಿಮೆ( Sociology)ಯಿಂದ ದೊರೆತ ಕಂಡುಕೊಳ್ಳುವಿಕೆ. ಹಾಗಾಗಿ ಕೂಡಣವು (ಸಮಾಜವು) ಲಿಪಿ ಸುದಾರಣೆಯನ್ನು ಒಪ್ಪಿದರೆ ಆ ಕೂಡಣಕ್ಕೇ ಒಳಿತು.

ಕಾಮೆಂಟ್‌ಗಳಿಲ್ಲ: