ಕೆಲವು ದಿನಗಳ ಹಿಂದೆ ಬೆಂಗಳೂರು ಪ್ರಸರಾಂಗದ ಮಳಿಗೆ(ಸೆಂಟ್ರಲ್ ಕಾಲೇಜು)ಗಳಿಂದ ಕೆಲವು ಹೊತ್ತಗೆಗಳನ್ನು ಕೊಂಡ್ಕೊಂಡೆ.
೧. ವೈದ್ಯಕ ಪದಗಳ ಹುಟ್ಟು ಮತ್ತು ರಚನೆ - ಡಾ ಡಿ.ಎಸ್. ಶಿವಪ್ಪ
೨. ವೈದ್ಯರನ್ನು ಯಾವಾಗ ಕಾಣಬೇಕು - ಡಾ ಡಿ.ಎಸ್. ಶಿವಪ್ಪ
೩. ಮೊಳೆ ರೋಗ ಮತ್ತು ಗುದದ ಇತರ ಕಾಯಿಲೆಗಳು - ಡಾ ಡಿ.ಎಸ್. ಶಿವಪ್ಪ
(೧) ನೇ ಹೊತ್ತಗೆಯ ಮುನ್ನುಡಿಯಲ್ಲಿ ಡಾಶಿವಪ್ಪನವರು ಬರೆದಿರುವ ಸಾಲುಗಳು ನನ್ನ ಗಮನ ಸೆಳೆದವು:-
" ಅರೆ ಶತಮಾನಕ್ಕೂ ಹಿಂದೆ ಮೈಸೂರು ವೈದ್ಯ ಕಾಲೇಜಿನಲ್ಲಿ ನಾನು ಅಂಗಕ್ರಿಯೆ ಶಾಸ್ತ್ರದ ವಿದ್ಯಾರ್ಥಿಯಾಗಿದ್ದಾಗ ಆ ವಿಷಯದ ಪರೀಕ್ಷೆ ಹತ್ತಿರವಾದಾಗ ಪ್ರಶ್ನೆಪತ್ರಿಕೆಯಲ್ಲಿ ಸಂಕ್ಷಿಪ್ತ ಟಿಪ್ಪಣಿಗಾಗಿ oestrogen, progesterone ಬರುವ ಸಂಭವದ ಸುಳಿವು ಸಿಕ್ಕಿತು. ನಾನು ಕೂಡಲೇ ಪುಸ್ತಕದಿಂದ ಅವುಗಳ ವಿಚಾರವಾಗಿ ವಿವರಗಳನ್ನು ಸಂಗ್ರಹಿಸಿದೆ. ಭರವಸೆಗಾಗಿ ನಮ್ಮ ತರಗತಿಯಲ್ಲಿ ಅತ್ಯಂತ ಮೇಧಾವಿ ಎನಿಸಿಕೊಂಡ ಸಹಪಾಠಿಗೆ ತೋರಿಸಿದಾಗ, ಎಲ್ಲ ಸರಿಯಾಗಿದೆ, ಆದರ ತಲೆಬರಹಗಳು ಅದಲುಬದಲಾಗಿವೆ ಎಂದಾಗ,
ನಾನು ಕೂಡಲೇ ಬದಲಾಯಿಸಿಬಿಟ್ಟೆ. ಏಕೆಂದರೆ ಆ ತಾಂತ್ರಿಕ ಪದಗಳು ನನಗೆ ಏನೂ ಅರ್ಥ ಕೊಡಲಿಲ್ಲ. ಆದರೀಗ ಗ್ರೀಕ್ oestrus ಅಂದರೆ ಬೆದೆಯಿಂದ oestrogen ಬೆದೆಜನಕವೆಂದೂ, ಲ್ಯಾಟಿನ್ನಿನ gestare ಅಂದರೆ (ಗರ್ಭದಲ್ಲಿ ಕೂಸನ್ನು) ಹೊರು ಎನ್ನುವುದಕ್ಕೆ
ಬಸಿರಿಗೆ ಅಣಿ ಮಾಡುವುದರಿಂದ progesterone ಬಸಿರಣಿಕವೆಂದೂ ಅಂದು ನನಗೆ ಗೊತ್ತಿದ್ದರೆ ನಾನು ಹಾಗೆ ಅದಲು ಬದಲು ಮಾಡುತ್ತಿರಲಿಲ್ಲ"
ಇದು ಓದಿದ ಮೇಲೆ ಶಿವಪ್ಪನವರು ಹೇಳಿರುವ ಹಾಗೆ ಬೆದೆಜನಕ ಮತ್ತು ಬಸಿರಣಿಕ ತೆರದ ಪದಗಳನ್ನು ಹುಟ್ಟಿಸಿ ಕನ್ನಡದಲ್ಲೇ MBBS ಮಾಡುವ ಹಾಗಿದ್ದರೆ ಎಶ್ಟು ಚೆನಾಗಿರುತ್ತಿತ್ತು ಅಂತ ಅನ್ನಿಸಿತು. ಹೇಗೆ ಪಾರಿಭಾಶಿಕ ಪದಗಳನ್ನು ಸುಲಬಗೊಳಿಸಿಕೊಳ್ಳುವುದರಿಂದ ಕಲಿಕೆಯ ವೇಗ ಮತ್ತು ಗುಣಮಟ್ಟ ಹೆಚ್ಚುತ್ತದೆ ಎಂಬುದಕ್ಕೆ ಶಿವಪ್ಪನವರ ಈ ಮೇಲಿನ ಪ್ರಸಂಗವೇ ಉದಾಹರಣೆಯಾಗಿದೆ ಎಂಬುದನ್ನ ನಾವು ಇದರಿಂದ ಅರಿತುಕೊಳ್ಳಬಹುದು.
ಅಲ್ಲಿ ಮಳಿಗೆಯವರನ್ನು ವಿಚಾರಿಸಿದಾಗ "ವೈದ್ಯಕ ಪದಗಳ ಹುಟ್ಟು ಮತ್ತು ರಚನೆ" -- ಈ ಹೊತ್ತಗೆಯನ್ನು ಮೈಸೂರಿನಿಂದ ಹಲವು ವೈದ್ಯರಗಳು ಬಂದು ೨೦-೩೦ ಹೊತ್ತಗೆಗಳನ್ನು ಒಮ್ಮೆಲೆ ಕೊಂಡು ಹೋಗುತ್ತಾರೆ ಮತ್ತು ಅವುಗಳನ್ನು ಆರೈಕೆಗಾರ್ತಿಯರಿಗೆ ಹಂಚುತ್ತಾರೆಂದು ತಿಳಿಸಿದರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ