ಮಂಗಳವಾರ, ಜೂನ್ 28, 2011

ಆರನೇ ತರಗತಿಯಿಂದ ಕಲಿಕೆಯಲ್ಲಿ ಇಂಗ್ಲಿಶ್ ಮಾಧ್ಯಮ- ಇದರ ಬಗ್ಗೆ

ಇಂದಿನ ಪ್ರಜಾವಾಣಿಯಲ್ಲಿ ಬಂದ ಡಾ ನಿರಂಜನಾರಾಧ್ಯ ಅವರ ’ಆಂಗ್ಲಭಾಷಾ ಭ್ರಮೆ ಮತ್ತು ಆಳುವ ಸರ್ಕಾರ ’ ಎಂಬ ಬರಹವನ್ನು ಬೆಂಬಲಿಸಿ ಈ ಪ್ರತಿಕ್ರಿಯೆ.
ತಾಯ್ನುಡಿಯಲ್ಲೆ ಎಲ್ಲ ಮಟ್ಟದ ಕಲಿಕೆಯೇ ಹೆಚ್ಚು ಪರಿಣಾಮಾಕಾರಿ ಎಂದು ಶಿಕ್ಷಣತಜ್ಞರು ಮತ್ತು ಭಾಷಾವಿಜ್ಞಾನಿಗಳು ಹೇಳಿರುವಾಗ ಕರ್ನಾಟಕ ಸರಕಾರ ಇಂಗ್ಲಿಶಿನಿಂದ ಮಾತ್ರ ಏಳಿಗೆ ಎಂದು ನಂಬಿರುವುದು ಮತ್ತು ಜನತೆಯನ್ನು ನಂಬಿಸುತ್ತಿರುವುದು ದುರಂತವೇ ಸರಿ. ಇಂಗ್ಲಿಶ್ ನುಡಿಯನ್ನು ಚೆನ್ನಾಗಿ ಕಲಿಯಬೇಕೆಂಬುದರಲ್ಲಿ ಎರಡು ಮಾತಿಲ್ಲ ಆದರೆ ಹೋಬಳಿ ಮಟ್ಟದಲ್ಲಿ ತಮ್ಮ ಪರಿಸರದಲ್ಲಿದ ಇಂಗ್ಲಿಶ್ ಮಾಧ್ಯಮದ ಮೂಲಕ ಕಲಿಕೆಯೇರ್ಪಾಡು ಮಾಡುವುದು ಅವೈಜ್ಞಾನಿಕ ಮಾತ್ರವಲ್ಲದೇ ಆಘಾತಕಾರಿಯೂ ಕೂಡ. ಯೂರೋಪಿನ ನಾಡುಗಳಲ್ಲಿ ಮೊದಲ ಕಲಿಕೆಯಲ್ಲದ ಉನ್ನತ ಮಟ್ಟದ ಕಲಿಕೆಯು(ಅಂದರೆ ಇಂಜಿನಿಯರಿಂಗ್ ಮತ್ತು ಮೆಡಿಕಲ್) ಕೂಡ ಅವರವರ ತಾಯ್ನುಡಿಯಲ್ಲೇ ಮಾಡುವ ಏರ್ಪಾಟು ಮಾಡಿಕೊಂಡಿರುವುದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅವರು ಬಹಳ ಮುಂದುವರೆದಿದ್ದಾರೆ. ಇದಕ್ಕೇ ಜರ್ಮನಿ, ಫಿನ್-ಲ್ಯಾಂಡ್, ಫ್ರಾನ್ಸ್ ದೇಶಗಳೇ ಅತ್ಯುತ್ತಮ ಉದಾಹರಣೆ.. ಪದೇ ಪದೇ ಕನ್ನಡ ಪರ ಸರ್ಕಾರ ಎಂದು ಘೋಷಿಸಿಕೊಳ್ಳುವ ಸರಕಾರವು ಮಾಧ್ಯಮಿಕ ಶಾಲೆಗಳನ್ನು ಆಂಗ್ಲ ಮಾಧ್ಯಮ ಮಾಡುವುದು ಯಾವ ’ಕನ್ನಡ ಪರ’ ನಡೆ ಎಂಬುದನ್ನು ಜನತೆಗೆ ತಿಳಿಯಪಡಿಸಲಿ. ಅಲ್ಲದೆ ಪಕ್ಕದ ತಮಿಳು ನಾಡಿನಲ್ಲೇ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಲಿಕೆಯನ್ನು ತಮಿಳು ಮಾಧ್ಯಮದಲ್ಲೇ ಮಾಡಲು ಮುಂದಾಗಿರುವಾಗ ಕರ್ನಾಟಕದ ಸರ್ಕಾರದ ಈ ನಡೆ ಅಚ್ಚರಿ ತಂದಿದೆ. ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲೂ ಉನ್ನತ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ನಡೆಯಬೇಕೆಂಬ ತೀರ್ಮಾನ ತೆಗೆದುಕೊಳ್ಳುವುದನ್ನ ಬಿಟ್ಟು ಮಾಧ್ಯಮಿಕ ಶಿಕ್ಷಣದಲ್ಲಿ ಇಂಗ್ಲಿಶ್ ಮಾಧ್ಯಮ ಹೇರುತ್ತಿರುವುದು ನಮ್ಮನ್ನು ಹಿಂದಕ್ಕೆ ತೆಗೆದುಕೊಂಡು ಹೋಗುವುದಲ್ಲದೆ ಏಳೆಗೆಯೆಡೆಗೆ ಕೊಂಡೊಯ್ಯುವುದಿಲ್ಲ. ಇಂಗ್ಲಿಶ್ ಪರಿಸರವಿಲ್ಲದ ಕಡೆ ಇಂಗ್ಲಿಶ್ ಮಾಧ್ಯಮದಿಂದ ನಯಾಪೈಸೆ ಉಪಯೋಗವಾಗಲಿ ಮತ್ತು ಏಳಿಗೆಯಾಗಲಿ ಆಗುವುದಿಲ್ಲ ಎಂಬುದನ್ನು ಸರ್ಕಾರವು ಇನ್ನಾದರೂ ಅರಿಯಬೇಕು. ಈಗಾಗಲೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಲಿಕೆಯೇರ್ಪಾಡು ಸರಿಯಿಲ್ಲದಿದ್ದರೆ ಅದನ್ನ ಮೇಲಕ್ಕೆ ಎತ್ತುವ ಮತ್ತು ಗುಣಮಟ್ಟವನ್ನು ಸುಧಾರಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕೆ ಹೊರತು ಇಂಗ್ಲಿಶ್ ಮಾಧ್ಯಮಕ್ಕೆ ಜೋತು ಬೀಳುವುದು ಎಷ್ಟು ಸರಿ? ಕನ್ನಡ ಮಾಧ್ಯಮದ ಕಲಿಕೆಯಲ್ಲಿ ನಂಬಿಕೆಯಿಲ್ಲದಿದ್ದ ಮೇಲೆ ಮಾನ್ಯ ಕಲಿಕೆಯ ಸಚಿವರಾದ ಶ್ರೀ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ತಮ್ಮ ಮಕ್ಕಳನ್ನೇ ಹತ್ತನೇ ತರಗತಿಯವರಿಗೆ ಕನ್ನಡ ಮಾಧ್ಯಮದಲ್ಲಿ ಓದಿಸಿದ್ದಾದರೂ ಏತಕ್ಕೆ? ಎಂಬುದನ್ನು ಮಾನ್ಯ ಸಚಿವರು ಜನತೆಗೆ ತಿಳಿಯಪಡಿಸಲಿ

ಕಾಮೆಂಟ್‌ಗಳಿಲ್ಲ: