ಗುರುವಾರ, ಅಕ್ಟೋಬರ್ 27, 2016

ಕನ್ನಡದ್ದೇ ಆದ ಅಳತೆಯ ಪದಗಳು

 ಇತ್ತೀಚಿನವರೆಗೂ ಅಂದರೆ ೧೦೦-೨೦೦ ವರುಶಗಳ ಕೆಳಗೆ ಬಳಸಲಾಗುತ್ತಿತ್ತು. ಕೆಲವನ್ನು ಇನ್ನೂ ಬಳಸಲಾಗುತ್ತಿದೆ.
ಉದ್ದ(ಹೂವು, ಬಟ್ಟೆ)-Length: ಮೊಳ, ಮಾರು ( 'ಅಡಿ' ಕನ್ನಡದ್ದೇ ಪದ ಆದರೂ ಅದು ಇಂಗ್ಲಿಶಿನ ಪೀಟ್ ಎಂಬುದರ ನುಡಿಮಾರು)
ದೂರ -Distance: ಹರದಾರಿ
ತೂಕ(ಬೆಳೆಗಳ)- Weight: ಕಂಡುಗ, ಹೇರು, ಕೊಳಗ, ಬಳಗ, ಸೇರು, ಪಾವು, ಚಟಾಕು
ಹೊತ್ತು- Time : ಎವೆಯಿಕ್ಕು (ನಾವು ಕಟ್ಟಿದ್ದು - ಎವೆಹೊತ್ತು)
ನೆಲವನ್ನು ಅಳೆಯುವ ಎಕರೆ/ಗುಂಟೆ ಎಂಬ ಅಳತೆಗಳು ಆಗ ಇರಲಿಲ್ಲ. ಆಗ ಎಕರೆ ಬದಲು ಕಂಡುಗ/ಸೇರುಗಳನ್ನೇ ಬಳಸುತ್ತಿದ್ದರು.
ಎತ್ತುಗೆಗೆ:
೧. ನನ್ನ ಹತ್ತಿರ ೧೦ ಕಂಡುಗ ರಾಗಿ ಬೆಳೆಯುವಶ್ಟು ನೆಲ/ಜಮೀನು ಇದೆ
೨. ಅವನ ಹತ್ತಿರ ೫೦ ಸೇರು ರಾಗಿ ಬಿತ್ತುವಶ್ಟು ನೆಲ/ಜಮೀನು ಇದೆ.

ಬೆಡಗು-ಬೆರಗು-ಬಯಲು

ಒಲವು ಬಯಲಾದೊಡೆ ಬೆಡಗು ಕಾಣಿರಯ್ಯ
ಬೆಡಗಿನಲ್ಲೊಂದು ಬೆಳಕ ಕಂಡೆನಯ್ಯ
ಒಳವು ಬಯಲಾದೊಡೆ ಬೆರಗು ಕಾಣಿರಯ್ಯ
ಬೆರಗಿನಲ್ಲಿ ಕರಗಿಹೋದೆನಯ್ಯ
ಬಯಲು ಬಯಲಾದೊಡೆ ಬಯಲೇ ಕಾಣಿರಯ್ಯ
ಬೆಡಗು ಬೆರಗು ಬಯಲೊಳಗಣದಿಂದ ಬಂದೊಡೆ ನೀವೇ ಅಯ್ಯ ಮತ್ತಿತಾಳಯ್ಯ

ಸೋಮವಾರ, ಅಕ್ಟೋಬರ್ 10, 2016

ಕೊಡಗಿನ 'ಚಾಯ್' ಮತ್ತು ಕನ್ನಡದ 'ಗಾಡಿ'

ಕೊಡಗು ನುಡಿಯ 'ಚಾಯ್' ಗೂ ಕನ್ನಡದ 'ಗಾಡಿ'ಗೂ ನಂಟಿದೆ ಎಂದು ನನಗೆ ಅನ್ನಿಸುತ್ತಿದೆ. ದ್ರಾವಿಡಿಯನ್ ಎಟಿಮಲಾಜಿಕಲ್ ಪದನೆರಕೆಯಲ್ಲಿ ಈ ಎರಡು ಪದಗಳನ್ನು ನಂಟಿಸಿಲ್ಲ. ಅದು ಬಿಟ್ಟುಹೋಗಿರಬಹುದು.
Koḍ. ca·y beauty; ca·ylï well (adv.); ca·yka·rë handsome man; fem. ca·ykarati. ? DED 2457

'ಗಾಡಿ' ಎಂಬ ಪದದಿಂದ ಉಂಟಾದ 'ಗಾಡಿಕಾರ'(ಕೊಡಗು: ಚಾಯ್ಕಾರೆ) ಮತ್ತು 'ಗಾಡಿಕಾರ್ತಿಯರ್'(ಕೊಡಗು:ಚಾಯ್ಕಾರತಿ) ಎಂಬ ಪದಗಳನ್ನು ನಾವು ಆಂಡಯ್ಯನ 'ಕಬ್ಬಿಗರ ಕಾವನ್' ಲ್ಲಿ ನೋಡಬಹುದು

ಜಿ.ವಿ.ಯವರ ನಿಗಂಟಿನಿಂದ
    ಗಾಡಿ ಹೆಸರುಪದ  (ದೇ) ೧ ಚೆಲುವು, ಸೊಬಗು, ಅಂದ ೨ ಚೆಲುವೆ, ಸುಂದರಿ

ಅರಿಮೆ-ಅರಿವು, ಜಾಣ್ಮೆ-ಬದುಕು

ಅರಿಮೆ ಎಂಬುದು ಒಪ್ಪ ಓರಣಿಸಿದ ಅರಿವು,ಜಾಣ್ಮೆ ಎಂಬುದು ಒಪ್ಪ ಓರಣಿಸಿದ ಬದುಕು.
                                                    -ಇಮಾನ್ಯುಯೆಲ್ ಕಂಟ್

ಕನ್ನಡಕ್ಕೆ ಕನ್ನಡವೇ ಸಾಟಿ

ಸಕ್ಕದವಿಲ್ಲದೆ ಕನ್ನಡ ತಲೆಯೆತ್ತಬಲ್ಲುದು
ಸಕ್ಕದವನು ಮೊದಲು ತುರುಕಿ ಬಳಿಕ
"ಸಕ್ಕದವನ್ನು ಕಿತ್ತುಹಾಕಿ!" ಎಂದು ಕೆಣಕುವವರು ನೀವೇ ಅಯ್ಯ
ನಿಮ್ಮ ನಿಮ್ಮ ಮಯ್ಯ ಸರಿಪಡಿಸಿಕೊಳ್ಳಿ
ನಿಮ್ಮ ನಿಮ್ಮ ಬಗೆಯ ಸರಿಪಡಿಸಿಕೊಳ್ಳಿ
ಕನ್ನಡಕ್ಕೆ ಕನ್ನಡವೇ ಸಾಟಿಯೆಂಬ ದಿಟವ ಅರಿಯಿರಯ್ಯ ಮತ್ತಿತಾಳಯ್ಯ

ಆಡಳಿತ ವಿಕೇಂದ್ರೀಕರಣವೇ ಮದ್ದು


ಹೊಸ ಮಕ್ಕಳ ಹಾಡು - ಗೊಂಟುಗಳನ್ನು ಕಲಿಸುವುದಕ್ಕೆ ಬರೆದದ್ದು


[ಇದನ್ನು ಹೇಳುವಾಗ ಮೆಲ್ಲಗೆ ರಾಗವಾಗಿ ಹಾಡತಕ್ಕದ್ದು]
ಬಾ ಬಾ ಮಂಗಣ್ಣ
ಮೂಲೆ ಕಲಿಯಲು ಬಾರಣ್ಣ ||
ಮುಂದಕ್ಕೆ ನೋಡು ಬಡಗಣ
ಹಿಂದಕ್ಕೆ ನೋಡು ತೆಂಕಣ
ಬಾ ಬಾ ಮಂಗಣ್ಣ.....
ಬಲಕ್ಕೆ ನೋಡು ಮೂಡಣ
ಎಡಕ್ಕೆ ನೋಡು ಪಡುವಣ
ಬಾ ಬಾ ಮಂಗಣ್ಣ
ಮೂಲೆ ಕಲಿಯಲು ಬಾರಣ್ಣ

ಕೂಳೆ ಮಯ್ - ಪದ ಬಳಕೆ

ಯಾವುದೇ ಬಟ್ಟೆಯನ್ನು (ಹೊಲೆದಿರುವ) 'inside out' ಮಾಡುವುದಕ್ಕೆ ನಾವು ’ಕೂಳೆ ಮಯ್’ ಅಂತಿವಿ
ಬಳಕೆ:-
೧. ಏ...ಬನಿಯನ್ ಕೂಳೆ ಮಯ್ ಮಾಡಿ ಹಾಕ್ಕೊಂಡಿದಿಯ!.... ಸರಿಯಾಗಿ ಹಾಕ್ಕೊ.
೨. ಇದನ್ನು ಕೂಳೆ ಮಯ್ ಮಾಡಿ ಹೊಲೆಯಿರಿ

ಹೆತ್ತಮಕ್ಕಳ್

ಹತ್ತಿ ಮರವ ಕಿತ್ತ ಹಣ್ಣನು
ಕಚ್ಚಿ ತಿನದಿದ್ದೊಡೆ
ಎತ್ತಿ ಮುದ್ದಾಡಲ್ ಮನೆಯೊಳ್
ಹೆತ್ತ ಮಕ್ಕಳ್ ಇಲದಿದ್ದೊಡೆ
ಮತ್ತೆಂತಯ್ಯ ನನ್ನ ಕಾಣ್ಕೆ ಮತ್ತಿತಾಳಯ್ಯ
ಎತ್ತೆತ್ತಲ್ ನಿನ್ನ ಕಾಣದಿದ್ದೊಡೆ

ತಮಿಳುನಾಡಿನ ಬಸ್ಸುಗಳಲ್ಲಿ ತಮಿಳು ನುಡಿಹಮ್ಮುಗೆ




ಇತ್ತೀಚೆಗೆ ತಮಿಳು ನಾಡಿನ ಮಂದಿಬಂಡಿಗಳಲ್ಲಿ ಸುತ್ತಾಟ ನಡೆಸಿದಾಗ ಅಲ್ಲಿ ’ತಮಿಳು ನುಡಿ ಹಮ್ಮುಗೆ’ ಚನ್ನಾಗಿ ನಡೆಸಿದ್ದಾರೆಂಬುದನ್ನು ಗಮನಿಸಿದೆ. ಅಂದರೆ
೧. ಹೆಚ್ಚು ಹೆಚ್ಚು ತಮಿಳಿನದ್ದೇ ಆದ ಸುಳುವಾದ ಪದಗಳನ್ನು ಬಳಸಿದ್ದಾರೆ.
೨. ಸಂಸ್ಕ್ರುತ ಮೂಲದ ಪದಗಳನ್ನು ತಮಿಳಿಗೆ ಹೊಂದುವ ತರದಲ್ಲಿ ’ತದ್ಬವ’ ಮಾಡಿಕೊಂಡು ಬಳಸಿದ್ದಾರೆ
ಕೆಲವು ಬಳಕೆಗಳನ್ನು ತಿಟ್ಟದಲ್ಲಿ ಸೆರೆಹಿಡಿದಿದ್ದೇನೆ. ಅವು ತಮಿಳು ಲಿಪಿಯಲ್ಲಿರುವುದರಿಂದ ಕನ್ನಡ ಲಿಪಿಯಲ್ಲಿ ಇಲ್ಲಿ ಕೊಟ್ಟಿದ್ದೇನೆ. ಅಲ್ಲದೆ ಅದರ ಕನ್ನಡ ನುಡಿಮಾರನ್ನು ಕೂಡ ಕೊಡುತ್ತಿದ್ದೇನೆ.
ಇದರಿಂದ ನಮ್ಮ ಕನ್ನಡ ನಾಡಿನ ಸಾರಿಗೆಯವರು ಕೊಂಚ ಎಚ್ಚತ್ತುಕೊಂಡು ಕನ್ನಡದ್ದೇ ಆದ ಪದಗಳನ್ನು ಬಳಸಲಿ ಎಂಬ ಕಳಕಳಿಯಿಂದ.
೧. ಮುದಲುದವಿಪ್ಪೆಟ್ಟಿ - ತಮಿಳು
ಮೊದಲಾರಯ್ಕೆ ಪೆಟ್ಟಿಗೆ - ಕನ್ನಡ
First Aid Box ಎಂಬುದಕ್ಕೆ ಅವರು ಬಳಸಿದ್ದಾರೆ. ಇದಕ್ಕೆ ಕನ್ನಡದಲ್ಲಿ ಈಗ ’ಪ್ರಥಮ ಚಿಕಿತ್ಸಾ ಪೆಟ್ಟಿಗೆ’ ಎಂದು ಬಳಸುತ್ತಿದ್ದಾರೆ. ಆದರೆ ಅದರ ಬದಲು ಸುಳುವಾದ ’ಮೊದಲಾರಯ್ಕೆ ಪೆಟ್ಟಿಗೆ’ ಎಂದು ಬಳಸಬಹುದು
೨.ಪಡಿಯಿಲ್ ನಿನ್ರು ಪಯಣಂ ಸೆಯ್ಯಾದೀರ‍್ಕಳ್ - ತಮಿಳು
ಮೆಟ್ಟಿಲಲ್ಲಿ ನಿಂತು ಪಯಣ(ವನ್ನು) ಮಾಡಬಾರದು - ಕನ್ನಡ
ಇದರಲ್ಲಿ ಸಂಸ್ಕ್ರುತದ ’ಪ್ರಯಾಣ’ ಎಂಬುದರ ಬದಲು ’ಪಯಣಂ’ ಎಂಬ ತದ್ಬವವನ್ನು ಬಳಸಿರುವುದನ್ನು ಗಮನಿಸಬಹುದು
೩. ಪೇರುಂದು ನಿನ್ರ ಪಿನ್ ಇರಂಕವುಮ್ - ತಮಿಳು
ಮಂದಿಬಂಡಿ ನಿಂತ ಮೇಲೆ ಇಳಿಯುವುದು/ಇಳಿಯಬೇಕು - ಕನ್ನಡ
’ಬಸ್’ ಎಂಬುದಕ್ಕೂ ’ಪೇರುಂದು’ ( ದೊಡ್ಡಬಂಡಿ) ಎಂಬ ತಮಿಳಿನದ್ದೇ ಆದ ಪದವನ್ನು ಉಂಟು ಮಾಡಿರುವುದನ್ನು ಗಮನಿಸಬಹುದು.

ಎರೆಯ-ಎರತಿ

ಶ್ರೀಮಾನ್, ಶ್ರೀಮತಿ ಬದಲು ಕನ್ನಡದ್ದೇ ಆದ ಎರೆಯ, ಎರತಿ ಬಳಸಬಹುದು.

ಹುರುಳು - eṟeya master, king, husband; eṟati a mistress

ಬಳಕೆ:-

೧. ತಮ್ಮ ಬರವನ್ನು ಎದುರುನೋಡುವವರು,
      ಎರತಿ ಮತ್ತು ಎರೆಯ _______


೨. ಇಲ್ಲಿ ನೆರೆದಿರುವ ಎಲ್ಲ ಎರತಿ ಮತ್ತು ಎರೆಯರೆಲ್ಲರಿಗು ತುಳಿಲ್

ಎರಡು ವಿಶಯಗಳು

'ನಮ್ಮ ಮೆಟ್ರೊ'ದಲ್ಲಿ ಇಂದು ಕಂಡಿದ್ದು. ನಾವು ಹೇಳುತ್ತಾ ಬಂದಿರುವ ಎರಡು ವಿಶಯಗಳನ್ನು 'ಸರಿ' ಎಂದು ಇದು ಎತ್ತಿ ತೋರಿಸುತ್ತಿದೆ.
೧. ಮಹಾಪ್ರಾಣದ ತೊಂದರೆ - ಇಲ್ಲಿ 'ಆದ್ಯತೆ' ಎಂಬುದನ್ನು 'ಆಧ್ಯತೆ' ಎಂದು ಬರೆಯಲಾಗಿದೆ. ಸಂಸ್ಕ್ರುತದ ಮೂಲ ಪದದಲ್ಲೇ ಮಹಾಪ್ರಾಣ ಇಲ್ಲ.
೨. Priority Seating ಗೆ ಸಂಸ್ಕ್ರುತದ 'ಆಧ್ಯತೆಯ ಆಸನ' ಎಂಬುದರ ಬದಲಾಗಿ ಎಲ್ಲರಿಗೂ ತಿಳಿಯುವ ಹಾಗೆ 'ಮೀಸಲು ಸೀಟು' ಇಲ್ಲವೆ 'ಮೀಸಲು ಕೂರ್ಕೆ' ಎಂದು ಮಾಡಬಹುದಿತ್ತು
ಮೊದಲನೆಯದು, ಕನ್ನಡಕ್ಕೆ ಬೇಡವಾದ ಮಹಾಪ್ರಾಣವನ್ನು ಕಯ್ಬಿಡುವುದು
ಎರಡನೆಯದು, ಕನ್ನಡದ್ದೇ ಆದ/ ಸುಳುವಾದ ಪದಗಳನ್ನು ಬಳಸುವುದು
ಇಶ್ಟೇ

ಬದುಕು - ಪದ ಬಳಕೆ

ಬದುಕು - ಇದನ್ನು 'ವಸ್ತು'/'ಆಸ್ತಿ' ಎಂಬ ಹುರುಳಿನಲ್ಲಿ ಬಳಸುವ ವಾಡಿಕೆ ನಮ್ಮ ಮಂಡ್ಯ-ಮಯ್ಸೂರಿನ ಹಳ್ಳಿಗಳಲ್ಲಿ ಬಳಕೆಯಲ್ಲಿದೆ.
೧. ನಮ್ ಮನೆ ಬದುಕು -ತಾಡ! ವೊಯ್ತುದೆ ಬತ್ತದೆ ಅನ್ನಂಗಿಲ್ಲ..ಎಂಗ್ ಬಿಸಾಕ್ ಅವ್ನೆ ನೋಡು...ವಸಿ ಗ್ಯಾನ ಇದ್ದದ
ಆದರೆ ಬರಹಗನ್ನಡದಲ್ಲಿ ಈ ಪದ ಹುಡುಕಿದರೂ ಸಿಗುವುದಿಲ್ಲ. ನಾವು ಈಗ ಇದನ್ನು ಬಳಸ ಹೋದರೆ 'ಸಂಸ್ಕ್ರುತದ ವಸ್ತು ಎಂಬ ಪದವನ್ನು ತೆಗೆದುಹಾಕಿ ಬದುಕು ಎಂಬ ಪದವನ್ನು ಬಳಸುತ್ತಿದ್ದೀರಿ..ಸಂಸ್ಕ್ರುತ ವಿರೋದಿ' ಎಂದು ಬೊಬ್ಬೆ ಹೊಡೆಯುತ್ತಾರೆ!!
ಇದರಿಂದಲಾದರೂ ತಿಳಿಯುವುದಿಲ್ಲವೆ? ಬರಹಗನ್ನಡ ಹೇಗೆ ಮಾತಿನಿಂದ ದೂರ ಹೋಗುತ್ತಿದೆ ಎಂಬುದು.

ಪಸ್ - ಪದ ಬಳಕೆ

ಮಯ್ಸೂರು-ಮಂಡ್ಯ ಕಡೆ 'ಪಸ್ಕಂಡದೆ' ಅಂದರೆ 'ಸವೆದು ಸವೆದು ಹರಿದು ಹೋಗಿದೆ' ಅಂತ ಹುರುಳಿದೆ.
ಎತ್ತುಗೆಗೆ:
೧. ನಿನ್ ಶರ್ಟಿನ ಮೊಳಸಂದೆ ತಂವು ಪಸ್ಕಂಡದೆ
೨. ಏನ್ ಇಂಗ್ ಪಸ್ಕಂಡದೆ ? ನೋಡ್ನಿಲ್ವ?

ಪದನೆರಕೆಯಲ್ಲಿ ಸಿಗದ ಪದಗಳು -ವದಗು

ಮಂಡ್ಯದಲ್ಲಿ 'ಓಡು' ಎಂಬುದಕ್ಕೆ 'ಒದಗು/ವದಗು' ( ವದೀಕ - ಹಿಂಬೊತ್ತಿನ ರೂಪ)ಬಳಸಲಾಗುತ್ತದೆ. ಆದರೆ ಇದನ್ನು ನಾನು ಯಾವ ಪದನೆರಕೆಯಲ್ಲೂ ಕಂಡಿಲ್ಲ.
೧. 'ವದೀಕ/ಒದೀಕ ಬಂದೆ' (ಓಡಿಕೊಂಡು ಬಂದೆ)
೨. 'ಒದಗು!! ಒದಗು!! ವೊಲ್ದೊಳಿಕೆ ಮರಿ ನುಕ್ಕಂಡವೆ' (ಓಡು! ಓಡು! ಹೊಲದೊಳಗೆ ಮರಿಗಳು ನುಗ್ಗಿಕೊಂಡಿವೆ)

ಹೀಗೊಂದು ಪೇಚಾಟ

ಮಯ್ಸೂರಿನ ಒಂದು ತಿಂಡಿಮನೆಯಲ್ಲಿ ಟೀ ತಗೊಂಡು ಹೀರುತ್ತಾ ಆಚೆ ಬಂದೆ. ಅಲ್ಲಿ ಇನ್ನು ಮೂರು ಮಂದಿ ಕೆಲವು ಹಾಳೆಗಳನ್ನು ಹಿಡಿದುಕೊಂಡು ಮಾತಾಡುತ್ತಿದ್ದರು. ಅದು ಯಾವುದೊ ಒರೆತದ 'ಕೇಳ್ವಿ ಹಾಳೆ' ಅಂತ ನನಗೆ ಅನ್ನಿಸಿತು.
ಕೊಂಚ ಹೊತ್ತಿನಲ್ಲೇ ಅವರು ಹಯ್ ಸ್ಕೂಲಿನ ಕಲಿಸುಗರು ಎಂಬುದು ತಿಳಿಯಿತು. ಹುರುಪು ತಾಳಲಾರದೆ ನಾನು ಹಾಳೆಗಳನ್ನು ಅವರಿಂದ ಕೇಳಿ ಪಡೆದು ಕಣ್ಣಾಡಿಸಿದೆ. ಅದು ಹತ್ತನೆಯ ತರಗತಿಯ ಕೇಳ್ವಿಹಾಳೆ ಎಂಬುದು ತಿಳಿಯಿತು.
ಅದರ ತಲೆಬರಹದಲ್ಲಿದ್ದ 'ಸಂಕಲನಾತ್ಮಕ ಮೌಲ್ಯಮಾಪನ' ಸಾಲನ್ನು ನೋಡಿ ಏನೂ ತಿಳಿಯದೆ ಪೇಚಿಗೆ ಸಿಲುಕಿದೆ. ತಡೆಯಲಾರದೆ ಆ ಮೂರು ಮಂದಿಯ ಕಡೆ ತಿರುಗಿ-
"ಏನ್ ಸಾರ್, ಇದು ಸಂಕಲನಾತ್ಮಕ ಮೌಲ್ಯಮಾಪನ ಅಂದ್ರೆ ..ಇದುವರೆಗೂ ನಾನು ಕೇಳೇ ಇಲ್ಲ" ಅಂದೆ.
ಆ ಮೂವರಲ್ಲಿ ಇಬ್ಬರು ಮುಕ-ಮುಕ ನೋಡಿಕೊಂಡರು. ಕೊಂಚ ಹೊತ್ತು ಅವರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ನನ್ನ ಹಾಗೆ ಅವರು ಪೇಚಿಗೆ ಸಿಲುಕಿಕೊಂಡರು ಅಂತ ನನಗೆ ಅನ್ನಿಸಿತು.
ಆ ಇಬ್ಬರು ಮೂರನೆಯವರನ್ನು ಕೇಳಿದರು ..ಆಗ ಆ ಮೂರನೆಯವರು-
"ಅದೇ ಸಾರ್, ಇಂಗ್ಲಿಶಲ್ಲಿ Summative Evaluation ಅಂತ ಹೇಳ್ತಿವಲ್ಲ..ಅದೇ"
ತುಂಬ ಪೇಚಿಗೆ ಸಿಲುಕಿದ್ದ ನನಗೆ ಕೊಂಚ ಉಸಿರಾಡಿದಂತಾಯಿತು.
ಇಂಗ್ಲಿಶ್ ಪದಗಳಿಗೆ ಸಂಸ್ಕ್ರುತ ಪದವನ್ನು ಕಟ್ಟಿ ಕನ್ನಡಕ್ಕೆ ತಂದಿದ್ದೇವೆ ಅಂತ ತಪ್ಪು ತಿಳಿವಳಿಕೆಯಲ್ಲಿ ತೇಲುತ್ತಾ..ಕನ್ನಡವನ್ನು ಕನ್ನಡಿಗರಿಂದ ಇನ್ನಶ್ಟು ದೂರ ಮಾಡುತ್ತ... ನಮ್ಮ ನಾಲಿಗೆ, ಮೆದುಳುಗಳನ್ನು ನಾವೇ ಕತ್ತರಿಸಿಕೊಳ್ಳುತ್ತಾ ಇದ್ದೀವೆ ಅಂತ ಅನ್ನಿಸಿತು.
ಅಶ್ಟು ಹೊತ್ತಿಗೆ ಟೀ ಮುಗಿದಿತ್ತು... ಹೊಟ್ಟೆಯಲ್ಲಿ ಬೇವಸವಾಯಿತು.

ಕಾಡಾರಂಬ ಮತ್ತು ನೀರಾರಂಬ

ನಂಜನಗೂಡಿನ ಹತ್ತಿರ ಇರುವ ಸುತ್ತೂರಿನಲ್ಲಿ ೧೫೮೬ ರಲ್ಲಿ ಕೆತ್ತಲಾಗಿದೆ ಎಂದು ಹೇಳಲಾದ ಈ ಕಲ್ಬರಹದಲ್ಲಿ 'ಕಾಡಾರಂಬ' ಮತ್ತು 'ನೀರಾರಂಬ' ಎಂಬ ಪದಗಳನ್ನು ಬಳಸಲಾಗಿದೆ.
ಕಾಡಾರಂಬ - Dry cultivation
ನೀರಾರಂಬ - Wet cultivation
ಅಂದರೆ ೧೬ನೇ ನೂರೇಡಿನ ಬರಹಗಳಲ್ಲೂ 'ವ್ಯವಸಾಯ', 'ಕೃಷಿ' ಎಂಬ ಸಂಸ್ಕ್ರುತ ಪದಗಳು ಬಳಕೆಯಲ್ಲಿರಲಿಲ್ಲ. ಅಂದಿಗೂ 'ಆರಂಬ' ಎಂಬ ಪದವೇ ಮಾತಿನಲ್ಲೂ ಬರಹದಲ್ಲೂ ಬಳಕೆಯಲ್ಲಿದ್ದಿರಬೇಕು


ಕಾರು ಮತ್ತು ಹಯನು

ಮಯ್ಸೂರು-ನಂಜನಗೂಡು-ಮಳವಳ್ಳಿ-ನರಸೀಪುರ-ಚಾಮರಜನಗರದ ಊರುಗಳಲ್ಲಿ ಸಿಕ್ಕಿರುವ ೧೫ ಮತ್ತು ೧೬ ನೇ ನೂರೇಡಿನ(ಅಂದರೆ ಕನ್ನಂಬಾಡಿ ಮತ್ತು ಕಬಿನಿ ಕಟ್ಟೆಗಳನ್ನು ಕಟ್ಟುವ ಮೊದಲೇ) ಕಲ್ಬರಹಗಳಲ್ಲಿ ಬತ್ತದ ಎರಡು ಬೆಳೆಯ ಬಗ್ಗೆ ಹೇಳಲಾಗಿದೆ. ಕಾರ್ ಬತ್ತ ಮತ್ತು ಹಯ್ನ್ ಬತ್ತ
೧. ಕಾರ್ ಬತ್ತ - ಹೆಸರು ಹೇಳುವಂತೆ ಮುಂಗಾರಿನ (ಮುನ್+ಕಾರ್) ಮಳೆಯ ಹುಯ್ಯುವ ಕಾಲದಲ್ಲಿ ಬೆಳೆಯುವ ಬತ್ತ (ಕಾರ್ತಿಕ ತಿಂಗಳಿ ಕಯ್ಯಿಗೆ ಬರುವ ಬೆಳೆ)
೨. ಹಯ್ನ್/ಅಯ್ನ್ ಬತ್ತ - ಮುಂಗಾರು ಮಳೆ ಇಲ್ಲದ ಹೊತ್ತಿನಲ್ಲಿ ಅಂದರೆ ಹಯ್ನ್/ಹಯಿನು ( < ಸಂ. ಪಯಸ್) ನೀರನ್ನು ಅಂದರೆ ಕೆರೆಯ ನೀರನ್ನು ಬಳಸಿಕೊಂಡು ಬೆಳೆಯುವ ಬತ್ತ (ವಯ್ಶಾಕ ತಿಂಗಳಿಗೆ ಕಯ್ಯಿಗೆ ಬರುವ ಬೆಳೆ)
ಅಂದರೆ ಸುಮಾರು ೧೫ನೇ ನೂರೇಡಿನಲ್ಲೇ ಕಾವೇರಿ-ಕಪಿಲೆಯ ಕಣಿವೆಯ ಈ ನಾಡಿನಲ್ಲಿ ಎರಡು ಬತ್ತದ ಬೆಳೆಯನ್ನು ತೆಗೆಯುತ್ತಿದ್ದರು ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು.

ಹಂಗಿಸು - ಇದರ ಬಗ್ಗೆ

ಹಂಗಿಸು/ಅಂಗಿಸು - ಇದ ಮಯ್ಸೂರು-ಮಂಡ್ಯದಲ್ಲಿ ಬಳಕೆಯಲ್ಲಿದೆ
೧. ಯಾಕ್ ಅಂಗ್ (ಹಂ)ಅಂಗಿಸ್ತಿಯ?
೨. ಹಂಗಿಸಿದರೂ ಮಂಗತನ ಬಿಡಲಿಲ್ಲ
೩. ಬೆಳೆ (i.e First crop or Kaaru Crop) ಹೊಗಳಿಸಿ ಉಣ್ಣಬೇಕು; ಹಯನು(i.e second crop) ಹಂಗಿಸಿ ಉಣ್ಣಬೇಕು
ಹಂಗಿಸು ಎಸಕಪದ
(ದೇ) ಮೂದಲಿಸು, ಹೀಯಾಳಿಸು, ಕೀಳಾಗಿ ಕಾಣು