ಸೋಮವಾರ, ಅಕ್ಟೋಬರ್ 10, 2016

ಹೀಗೊಂದು ಪೇಚಾಟ

ಮಯ್ಸೂರಿನ ಒಂದು ತಿಂಡಿಮನೆಯಲ್ಲಿ ಟೀ ತಗೊಂಡು ಹೀರುತ್ತಾ ಆಚೆ ಬಂದೆ. ಅಲ್ಲಿ ಇನ್ನು ಮೂರು ಮಂದಿ ಕೆಲವು ಹಾಳೆಗಳನ್ನು ಹಿಡಿದುಕೊಂಡು ಮಾತಾಡುತ್ತಿದ್ದರು. ಅದು ಯಾವುದೊ ಒರೆತದ 'ಕೇಳ್ವಿ ಹಾಳೆ' ಅಂತ ನನಗೆ ಅನ್ನಿಸಿತು.
ಕೊಂಚ ಹೊತ್ತಿನಲ್ಲೇ ಅವರು ಹಯ್ ಸ್ಕೂಲಿನ ಕಲಿಸುಗರು ಎಂಬುದು ತಿಳಿಯಿತು. ಹುರುಪು ತಾಳಲಾರದೆ ನಾನು ಹಾಳೆಗಳನ್ನು ಅವರಿಂದ ಕೇಳಿ ಪಡೆದು ಕಣ್ಣಾಡಿಸಿದೆ. ಅದು ಹತ್ತನೆಯ ತರಗತಿಯ ಕೇಳ್ವಿಹಾಳೆ ಎಂಬುದು ತಿಳಿಯಿತು.
ಅದರ ತಲೆಬರಹದಲ್ಲಿದ್ದ 'ಸಂಕಲನಾತ್ಮಕ ಮೌಲ್ಯಮಾಪನ' ಸಾಲನ್ನು ನೋಡಿ ಏನೂ ತಿಳಿಯದೆ ಪೇಚಿಗೆ ಸಿಲುಕಿದೆ. ತಡೆಯಲಾರದೆ ಆ ಮೂರು ಮಂದಿಯ ಕಡೆ ತಿರುಗಿ-
"ಏನ್ ಸಾರ್, ಇದು ಸಂಕಲನಾತ್ಮಕ ಮೌಲ್ಯಮಾಪನ ಅಂದ್ರೆ ..ಇದುವರೆಗೂ ನಾನು ಕೇಳೇ ಇಲ್ಲ" ಅಂದೆ.
ಆ ಮೂವರಲ್ಲಿ ಇಬ್ಬರು ಮುಕ-ಮುಕ ನೋಡಿಕೊಂಡರು. ಕೊಂಚ ಹೊತ್ತು ಅವರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ನನ್ನ ಹಾಗೆ ಅವರು ಪೇಚಿಗೆ ಸಿಲುಕಿಕೊಂಡರು ಅಂತ ನನಗೆ ಅನ್ನಿಸಿತು.
ಆ ಇಬ್ಬರು ಮೂರನೆಯವರನ್ನು ಕೇಳಿದರು ..ಆಗ ಆ ಮೂರನೆಯವರು-
"ಅದೇ ಸಾರ್, ಇಂಗ್ಲಿಶಲ್ಲಿ Summative Evaluation ಅಂತ ಹೇಳ್ತಿವಲ್ಲ..ಅದೇ"
ತುಂಬ ಪೇಚಿಗೆ ಸಿಲುಕಿದ್ದ ನನಗೆ ಕೊಂಚ ಉಸಿರಾಡಿದಂತಾಯಿತು.
ಇಂಗ್ಲಿಶ್ ಪದಗಳಿಗೆ ಸಂಸ್ಕ್ರುತ ಪದವನ್ನು ಕಟ್ಟಿ ಕನ್ನಡಕ್ಕೆ ತಂದಿದ್ದೇವೆ ಅಂತ ತಪ್ಪು ತಿಳಿವಳಿಕೆಯಲ್ಲಿ ತೇಲುತ್ತಾ..ಕನ್ನಡವನ್ನು ಕನ್ನಡಿಗರಿಂದ ಇನ್ನಶ್ಟು ದೂರ ಮಾಡುತ್ತ... ನಮ್ಮ ನಾಲಿಗೆ, ಮೆದುಳುಗಳನ್ನು ನಾವೇ ಕತ್ತರಿಸಿಕೊಳ್ಳುತ್ತಾ ಇದ್ದೀವೆ ಅಂತ ಅನ್ನಿಸಿತು.
ಅಶ್ಟು ಹೊತ್ತಿಗೆ ಟೀ ಮುಗಿದಿತ್ತು... ಹೊಟ್ಟೆಯಲ್ಲಿ ಬೇವಸವಾಯಿತು.

ಕಾಮೆಂಟ್‌ಗಳಿಲ್ಲ: