ಬುಧವಾರ, ಜೂನ್ 27, 2012

ಕನ್ನಡ ಮಾತಿಗೆ ಸಂಸ್ಕ್ರುತ ಅನಿವಾರ್ಯವಾಗಿರಲಿಲ್ಲ, ಇಂಗ್ಲಿಶೂ ಅನಿವಾರ್ಯವಲ್ಲ

ಯು. ಆರ್. ಅನಂತ ಮೂರ್ತಿಯವರು ಹೇಳಿರುವುದು ಪ್ರಜಾವಾಣಿಯಲ್ಲಿ ಮೇಲಿನ ಬರಹ ಹೊರಬಂದಿದೆ. ಅದಕ್ಕೆ ಇದಿರುಬರಹವಿದು. ಅನಂತಮೂರ್ತಿಯವರ ಕೆಲವು ಹೇಳಿಕೆಗಳು ಗೊಂದಲದಿಂದ ಕೂಡಿದೆ.

ಮೊದಲಿಗೆ,

"ಒಂದು ಕಾಲದಲ್ಲಿ ಕನ್ನಡ ಬಾಶೆಗೆ ಸಂಸ್ಕ್ರುತ ಅನಿವಾರ್ಯ ಆಗಿತ್ತು. ಈಗ ಕನ್ನಡಕ್ಕೆ ಇಂಗ್ಲಿಶ್ ಅನಿವಾರ್ಯ ಬಾಶೆ ಅನಿಸಿದೆ."

ಇಲ್ಲಿ ಅನಂತಮೂರ್ತಿ(ಅ.ಮೂ)ಯವರು ಕನ್ನಡದ ’ಬರಹ’ದ ಬಗ್ಗೆ ಮಾತಾಡಿತ್ತಿರುವರೊ ಇಲ್ಲವೆ ’ಮಾತಿ’ನ ಬಗೆಗೊ ಎಂಬುದು ತಿಳಿಯಾಗಿಲ್ಲ. ಇರಲಿ; ಒಂದು ವೇಳೆ ಅವರು ಕನ್ನಡ ಮಾತಿನ ಬಗ್ಗೆ ಆಗಿದ್ದರೆ ಅವರ ನಿಲುವು ತಪ್ಪೆಂದು ಹೇಳಬೇಕಾಗುತ್ತದೆ. ಯಾಕಂದರೆ ಸಹಜವಾಗಿ ಯಾವುದೇ ಎರಡು ನುಡಿಗಳು ಒಟ್ಟಿಗೆ ಬಂದಾಗ ಹೇಗೆ ’ಕೊಡುಕೊಳು’ ಆಗುತ್ತದೆಯೋ ಹಾಗೆಯೇ ಕನ್ನಡ ಮತ್ತು ಸಂಸ್ಕ್ರುತದ ನಡುವೆ ಕೊಡುಕೊಳು ಆಗಿದೆ. ಅದರಂತೆಯೇ ಕನ್ನಡದಲ್ಲಿ ಸಂಸ್ಕ್ರುತದ ಕೆಲವು ಎರವಲು ಪದಗಳು ಸೇರಿಕೊಂಡಿವೆ. ಹಾಗೆಯೇ ಕನ್ನಡದಿಂದ ಸಂಸ್ಕ್ರುತಕ್ಕೂ ಕೆಲವು ಪದಗಳು ಹೋಗಿವೆ.ಎತ್ತುಗೆಗೆ: ಮೀನು.

ಇದನ್ನೇ ಮುಂದಿಟ್ಟುಕೊಂಡು ಕನ್ನಡಕ್ಕೆ ಮಾತಿಗೆ ಸಂಸ್ಕ್ರುತ ಬಾಶೆ ಅನಿವಾರ್ಯವಾಗಿತ್ತು ಅಂತ ಹೇಳುವುದು ಸರಿಯಲ್ಲ.
ಒಂದು ವೇಳೆ ಅ.ಮೂ ರವರು ಕನ್ನಡದ ಬರಹದ ಬಗ್ಗೆ ಮಾತನಾಡಿದ್ದರೆ ಅವರ ಈ ಮಾತು ಸರಿ ಎಂದು ಒಪ್ಪಿಕೊಳ್ಳಬಹುದು. ಆದರೆ ಅದನ್ನು ಹೀಗೆ ಎತ್ತಿ ಹೇಳುವುದು ಬೇಕಾಗಿರಲಿಲ್ಲ ಯಾಕಂದರೆ ತೀರ ಇತ್ತೀಚೆನವರೆಗೂ ’ಕನ್ನಡ ಬರಹ’ ಎಲ್ಲ ಕನ್ನಡ ಮಂದಿಯನ್ನು ತಲುಪಿರಲಿಲ್ಲ ಇಲ್ಲವೆ ಇನ್ನೂ ತಲುಪಿಲ್ಲ. ಯಾವ ವಸ್ತು( ಕನ್ನಡ ಬರಹ) ಹೆಚ್ಚಿನ ಕನ್ನಡ ಮಂದಿಯನ್ನು ತಲುಪಿಯೇ ಇಲ್ಲವೊ ಅದನ್ನು ಚರ್ಚೆ ಮಾಡಿ ಏನು ಬಳಕೆ? ’ಕನ್ನಡ ಬರಹ’ ಎನ್ನುವುದು ಮೇಲ್ವರ್ಗದವರ ಸೊತ್ತಾಗಿ ಇತ್ತು ಇನ್ನೂ ಇದೆ. ಕೆಲವು ಸಂಸ್ಕ್ರುತ ಬಲ್ಲವರು ಉಂಟು ಮಾಡಿದ ’ಕನ್ನಡ ಬರಹ’ವನ್ನು ಎತ್ತುಗೆಯನ್ನಾಗಿ ಮಾಡಿಕೊಂಡು ನಿಲುವನ್ನು ಮುಂದಿಡುವುದು ಎಶ್ಟು ಸರಿ? ಈ ರೀತಿಯ ಕನ್ನಡದ (ಮಾತು ಮತ್ತು ಬರಹ) ಬಗೆಗಿನ ಸೀಳುನೋಟಗಳು ನಮ್ಮನ್ನು ದಿಕ್ಕು ತಪ್ಪಿಸುತ್ತವೆ. ಅಲ್ಲದೆ ತಪ್ಪು ತಪ್ಪಾದ ನಿಲುವುಗಳತ್ತ ನಮ್ಮನ್ನು ಕೊಂಡೊಯುತ್ತವೆ.

ಎಂದಿಗೂ ಕನ್ನಡಕ್ಕೆ ( ಅಂದರೆ ಮಾತಿಗೆ...ಯಾಕಂದರೆ ಮಾತೇ ಇಲ್ಲಿ ಮೊದಲು ಮತ್ತು ಮುಕ್ಯ) ಸಂಸ್ಕ್ರುತ ಅನಿವಾರ್ಯವಾಗಿರಲಿಲ್ಲ. ಇಂಗ್ಲಿಶ್ ಕೂಡ ಅನಿವಾರ್ಯಾಗಿಲ್ಲ/ಅನಿವಾರ್ಯವಾಗೊಲ್ಲ. ಇದು ’ಬರಹ’ ಹುಟ್ಟಿಸಿರುವ ಒಂದು ಬ್ರಮೆಯಲ್ಲದೇ ಬೇರೇನಲ್ಲ.

"ನಾಡಿನ ಎಲ್ಲ ಮಕ್ಕಳು ಸರ್ಕಾರಿ ಶಾಲೆಗಲಲ್ಲಿ ಕಲಿಯುವಂತಹ ವ್ಯವಸ್ತೆ ನಿರ್ಮಾಣವಾಗಬೇಕು"

ಇದು ಒಂದು ತಿಳಿಹೇಳುವಿಕೆಯ ಮಾತಿನಂತೆ ಇದೆ. ಆದರೂ ಅ.ಮೂ.ರವರ ಒಳ್ಳೆಯ ಗುರಿ ಇಟ್ಟುಕೊಂಡು ಈ ಮಾತು ಹೇಳಿದ್ದಾರೆ. ಆದರೆ ಮಾನವ ಕಟ್ಟಿರುವ ’ಸರ್ಕಾರ’ ಎಂಬ ಏರ್ಪಾಟಿನಲ್ಲಿ ಕೆಲಸಗಳು ತುಂಬಾ ಮೆಲ್ಲಗೆ ನಡೆಯುತ್ತದೆ. ಅ.ಮೂ.ರವರ ಮಾತನ್ನು ಎಸಕಕ್ಕೆ ತರುವುದು ಅಶ್ಟು ಸುಲಬದ ಮಾತಲ್ಲ. ಹಾಗಾಗಿ ಇಂತಹ ಮಾತುಗಳು ಪೋಲಾಗಿ
ಗಾಳಿಯಲ್ಲಿ ತೇಲುತ್ತವೆಯಶ್ಟೆ. ಹಾಗಾದರೆ ಇದಕ್ಕೆ ಬಗೆಹರಿಕೆ ಏನು? ಅಂತ ಕೇಳ್ವಿ ನಮ್ಮ ಮುಂದೆ ಬರುತ್ತದೆ.
ಎಸಕಬಲ್ಲ(practicable) ಆಯ್ಕೆ ಯಾವುದೆಂದರೆ ಸರ್ಕಾರದ ಕಲಿಮನೆಗಳ ಜೊತೆಜೊತೆಗೆ ಕನ್ನಡ ಒಯ್ಯುಗೆಯಲ್ಲಿ ಮೇಲ್ಮಟ್ಟದ ಕಾಸಗಿ ಕಲಿಮನೆಗಳನ್ನು ಕಟ್ಟುವುದು. ಈಗ ಇಂಗ್ಲಿಶ್ ಒಯ್ಯುಗೆ ಬೇಕೆಂದು ಹಪಹಪಿಸುತ್ತಿರುವವರನ್ನು ಕನ್ನಡದ ಒಯ್ಯುಗೆಯೆಡೆಗೆ ಕೊಂಡೊಯ್ಯುವಶ್ಟು ಒಳ್ಳೆ ಕಲಿಮನೆಗಳನ್ನು ಕಟ್ಟಿದರೆ ಕಾಸಗಿ ಕಲಿಮನೆಗಳಿಗೆ ಮಂದಿ ಕಣ್ಣೆತ್ತಿಯೂ ನೋಡುವುದಿಲ್ಲ. ಇದಕ್ಕೆ ಕನ್ನಡದ ಬರಹವನ್ನು ನಲ್ಬರಹಕ್ಕೆ ಮೊಟಕುಗೊಳಿಸದೆ ಅರಿಮೆಯ ಬರಹವನ್ನಾಗಿ ಮಾರ್ಪಡಿಸಬೇಕು. ಅಂದರೆ ಕನ್ನಡದಲ್ಲೇ ಹೊಸಗಾಲದ ಅರಿಮೆಗಳು ಸಿಗುವಂತಾಗಬೇಕು. ಹಾಗೆ ಆಗಬೇಕಾದರೆ ಕನ್ನಡದ್ದೇ ಆದ ಪದಗಳು ಬೇಕು. ಈ ಪದಗಳಿಂದಾದ ಓದುಗೆಗಳು ಬೇಕು. ಇಂತಹ ಒಂದು ಕಲಿಕೆಯೇರ್ಪಾಡಿನಿಂದ ಹೊರಬರುವವರು ಮುಂದೆ ಕನ್ನಡದಲ್ಲೇ ಹೊಸ ಹೊಸ ಅರಿಮೆಗಳನ್ನು ಹುಟ್ಟಿಸಬಲ್ಲರು. ಈ ಅರಿಮೆಗಳಿಂದನೇ ಕನ್ನಡಿಗರು ಏಳಿಗೆಯೆಡೆಗೆ ನಡೆಯಬಲ್ಲರು. ಹೆರವರ ಜೊತೆ ಸಾಟಿಯಾಗಿ ನಿಲ್ಲಬಲ್ಲರು.

2 ಕಾಮೆಂಟ್‌ಗಳು:

shravan ಹೇಳಿದರು...

ಇಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ಆಂಗ್ಲದ ಸಹಾಯದ ಅಗತ್ಯವಿದೆಯೋ , ಹಾಗೆ ಅಂದಿನ ವಿದ್ಯೆಯಾದ ಆಧ್ಯಾತ್ಮಿಕ ವಿದ್ಯೆಯಲ್ಲಿ ಸಂಸ್ಕೃತದ ಬಳಕೆ ಅತ್ಯನಿವಾರ್ಯವಾಗಿತ್ತು. . ಈಗಲೂ ವೈದಿಕ ಪರಿಭಾಷೆಯಲ್ಲಿ ಬಳಸುವ ಅನೇಕ ಪದಗಳಿಗೆ ಅಚ್ಚ ಕನ್ನಡದ ಪದಗಳ ಅಭಾವ ಎದ್ದುತೋರುತ್ತದೆ .. ಅಂದಿನ ಗುರುಕುಲಾದಿಗಳಲ್ಲಿ ಕಲಿಸುತ್ತಿದ್ದ ವಿದ್ಯೆಗೆ ಸಂಸ್ಕೃತವೂ ಹಾಗೂ ಆ ಪದಗಳನ್ನು ಬರೆಯಲು ಲಿಪಿಯಲ್ಲಿ ಅವಕಾಶವೂ ಅನಿವಾರ್ಯವಾಗಿತ್ತು.... ಈಗ z ಎಂಬ ಆಂಗ್ಲ ಶಬ್ದವನ್ನ ಬರೆಯಲು ಹೇಗೆ ಒಂದು ಚುಕ್ಕೆಯಿಡುವ ಮಾರ್ಪಾಟು ಮಾಡಿಕೊಂದಿದ್ದೀವೋ ಹಾಗೆ..... ಕನ್ನಡದ ಮೇಲೆ ಉಂಟಾಗಿರುವ ಸಂಸ್ಕೃತದ ಪ್ರಭಾವವನ್ನ ಅಲ್ಲಗೆಳೆಯುವ ಪ್ರಶ್ನೆಯೇ ಇಲ್ಲ..... ಅಚ್ಚ ಕನ್ನಡದ ಪದಗಳ ಬಳಕೆಯನ್ನು ಹೆಚ್ಚಿಸುವ ಪ್ರತ್ಯನವಾಗಬೇಕೆ ಹೊರತು ಸಂಸ್ಕೃತ ದ್ವೇಷವನ್ನು ಬೆಳೆಸಿಕೊಂಡರೆ ಹತ್ತಿದ ಇಚ್ಚಣಿಗೆಯನ್ನು ಒದ್ದಂತಾಗುತ್ತದೆ....

Badarinath Palavalli ಹೇಳಿದರು...

ಭಾಷಾ ಬೆಳವಣಿಗೆಗೆ ಹಳೆಯ ಸರಕೂ ಹೊಸ ಉಸಿರೂ ಅಷ್ಟೇ ಮುಖ್ಯವಾಗುತ್ತದೆ.

ಯಾವುದೇ ಭಾಷಾ ಪಾಕವು ಹಲ ಶತಮಾನಗಳ ನಿರಂತರತೆಯ ಸಂಕೇತ. ನಾಳೆ ಸೋಮವಾರದಿಂದಲೇ ಭಾಷೆ ತಿದ್ದಿ ಬಿಡೋಣ ಎನ್ನುವ ಬುದ್ಧಿಗೇಡಿ ಹೋರಾಟಗಾರರ ಬಗೆಗೆ ನನಗೆ ಖೇದವಿದೆ.

ಅದಕ್ಕೆ ಬದಲಾಗಿ, ಕನ್ನಡವನ್ನು ಬಹು ಸಂಖ್ಯಾತರ ಆಡು ಭಾಷೆ ಮಾಡುವುದು ಹೇಗೆ? ತಂತ್ರಜ್ಞಾನವನ್ನು ಕನ್ನಡಕ್ಕೆ ಒಗ್ಗಿಸುವುದು ಹೇಗೆ? ಎನ್ನುವ ಕಡೆ ಗಮನಹರಿಸಬೇಕಾಗಿದೆ.

ಮಿತ್ರರೇ, ನನ್ನ ಬ್ಲಾಗಿಗೂ ನಿಮಗೆ ಸ್ವಾಗತ.