ಮಂಗಳವಾರ, ಮಾರ್ಚ್ 15, 2011

ಯಾವ ಬಾಶೆಯೂ ಕೊಲೆಗಡುಕ ಅಲ್ಲ

ಶ್ರೀ ಜಿ.ವೆಂಕಟಸುಬ್ಬಯ್ಯನವರು ಪದೆ ಪದೆ ಇಂಗ್ಲಿಶ್ ’ಕೊಲೆಗಡುಕ’(ಇವತ್ತಿನ, ೧೫-೩-೨೦೧೧ ವರದಿಯ ಕೊಂಡಿ) ಭಾಷೆ ಎಂದು ಹೇಳುತ್ತಿರುವುದು ಸರಿಯಲ್ಲ. ಯಾಕಂದರೆ:-

ದಿಟವಾಗಲೂ ಯಾವುದೇ ನುಡಿ ತನ್ನಿಂತಾನೆ ಕೊಲೆಗಡುಕ ಬಾಶೆ ಆಗುವುದಿಲ್ಲ. ಈವೊತ್ತು ಇಂಗ್ಲಿಶಿಗೆ ಹೆಚ್ಚಿನ ಗೌರವ, ಮನ್ನಣೆ ಸಿಗುತ್ತಿರುವುದು ಕೇವಲ ಆ ಬಾಶೆಯಿಂದಲ್ಲ ಬದಲಾಗಿ ಅದರ ಮೂಲಕ ಹುಟ್ಟುತ್ತಿರುವ ಹೊಸ ಹೊಸ ಅರಿವಿನ ಪ್ರಕಾರಗಳಿಂದ.
ಇಂದು ಅರಿಮೆ ಮತ್ತು ಹೊಚ್ಚ ಹೊಸ ತಂತ್ರದರಿಮೆಗಳು ಹೆಚ್ಚಿನವು ಇಂಗ್ಲಿಶಿನಲ್ಲಿವೆ, ಹಾಗಾಗಿ ಈ ಆದುನಿಕ ಯುಗದಲ್ಲಿ ಇಂಗ್ಲಿಶ್ ಕಲಿತರೆ ಸುಲಬವಾಗಿ ಕೆಲಸ ಸಿಗುತ್ತದೆ ಮತ್ತು ಅದರಿಂದ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು. ಇದೊಂದೆ ಅಲ್ಲದೆ ಕೆಲವರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಇಂಗ್ಲಿಶ್ ಬಾಶೆ ಗೊತ್ತಿರುವವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಹೊಗಳಿಕೆ ದೊರೆಯುತ್ತಿದೆ. ನಾವು ನಮ್ಮ ಕನ್ನಡ ನುಡಿಯಲ್ಲಿ ಇವತ್ತಿನ ಜಗತ್ತಿಗೆ ಬೇಕಾದ ಹೊಸ ಹೊಸ ಅರಿವಿನ ಪ್ರಕಾರಗಳನ್ನು ಹುಟ್ಟು ಹಾಕದೆ ಇನ್ನು ಸಾಹಿತ್ಯ ಮತ್ತು ಕವನಕ್ಕೆ ಕನ್ನಡವನ್ನು ಸೀಮಿತಗೊಳಿಸಿ ತಪ್ಪು ಮಾಡುತ್ತಿದ್ದೇವೆ. ಹಾಗಾಗಿ ಇಂಗ್ಲಿಶ್ ನಮ್ಮ ಬದುಕಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಾ ಇದೆ. ಇದಕ್ಕಿರುವ ಉಪಾಯವೆಂದರೆ ಕನ್ನಡವನ್ನು ತಂತ್ರಗ್ನಾನದ ಮತ್ತು ಮಾರುಕಟ್ಟೆಯ ನುಡಿಯಾಗಿ ನಾವು ಬೆಳಸಬೇಕಾಗಿದೆ. ಹೊಸ ಜಗತ್ತಿನ ’ಬೇಕು’(ಅಗತ್ಯ)ಗಳಿಗೆ ನಾವು ಕನ್ನಡವನ್ನು ಅಣಿಗೊಳಿಸದೆ ಬರಿ ಇಂಗ್ಲಿಶನ್ನು ದೂರುವುದು ಸರಿಯಲ್ಲ. ನಾವು ಮಾಡಿದ ತಪ್ಪುಗಳಿಗೆಲ್ಲಾ ಇಂಗ್ಲಿಶನ್ನು ಹೊಣೆಯಾಗಿಸಿ ಅದರ ಮೇಲೆ ಗೂಬೆ ಕೂರಿಸುವುದು ಯಾವ ರೀತಿಯಲ್ಲೂ ಒಪ್ಪತಕ್ಕದ್ದಲ್ಲ.

[ಇದೇ ಬರಹ ಓಲೆಯಾಗಿ ೧೮ ಮಾರ್ಚ್ ೨೦೧೧ ಪ್ರಜಾವಾಣಿಯ ’ವಾಚಕರವಾಣಿ’ಯಲ್ಲಿ ಬಂದಿದೆ]

ಕಾಮೆಂಟ್‌ಗಳಿಲ್ಲ: