ಈವೊತ್ತಿನ((೬-೩-೨೦೧೧) ಸಾಪ್ತಾಹಿಕ ಪುರವಣಿಯಲ್ಲಿ ಬಂದಿರುವ ಬರಹಗಳಲ್ಲಿ ಆಗಿರುವ ತಪ್ಪುಗಳು ಮತ್ತು ಗೊಂದಲಗಳು ಎತ್ತಿ ತೋರಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ.
ಯು.ಬಿ.ಪವನಜ ಅವರ ಬರಹ(ನಮ್ಮ ಭಾಷೆಗೆ e ಭಾಷ್ಯ)ದಲ್ಲಿ " ಒಂದು ಭಾಷೆಯನ್ನು ವೈಜ್ಞಾನಿಕವಾಗಿ ವಿಂಗಡಿಸುವ ಸೂತ್ರವನ್ನು ಪ್ರಪಂಚದ ಯಾವುದೇ ಭಾಷೆಗೆ ಪ್ರಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ."
ಮೊದಲಿಗೆ, ಇಲ್ಲಿ ’ಪ್ರಪ್ರಥಮ’ ಎಂಬ ಪದದ ಬಳಕೆಯೇ ತಪ್ಪು ಯಾಕಂದರೆ ’ಪ್ರಥಮ’ ಇದು ಸಂಸ್ಕೃತ ಮೂಲದ ಪದ. ಕನ್ನಡದಲ್ಲಿ ಇರುವ ಪದಬಳಕೆಗಳಾದ ’ಮೊತ್ತಮೊದಲು’, ’ತುತ್ತತುದಿ’, ’ಕಟ್ಟಕಡೆ’ ಇವುಗಳಲ್ಲಿರುವ ಮೊದಲು, ಕಡೆ, ತುದಿ ಇವೆಲ್ಲ ಕನ್ನಡ ಬೇರಿನ ಪದಗಳು ಅದರ ನಿರುಕ್ತವನ್ನು ಹೀಗೆ ಬಿಡಿಸಬಹುದು.
ಮೊದಲು + ಮೊದಲು = ಮೊದಮೊದಲು ( ಇದನ್ನೇ ಒತ್ತಿ ಹೇಳಬೇಕಾದರೆ) => ಮೊತ್-ಮೊದಲು= ಮೊತ್ತಮೊದಲು. ಇಲ್ಲಿ ’ದ್’(ಕೊರಲಿಸಿದ)ಕ್ಕೆ ಬದಲಾಗಿ ಅದೇ ಗುಂಪಿನ ’ತ್’(ಕೊರಲಿಸದ) ಅಕ್ಷರವು ಬಂದಿದೆ. ಇದು ಕನ್ನಡದ್ದೇ ಆದ ಪದಗಳಿಗೆ ಒಗ್ಗುವ ಪದಬಳಕೆ. ಆದರೆ ಈ ಚಳಕ ಸಂಸ್ಕೃತ ಪದಗಳಾದ ’ಪ್ರಥಮ’ ಎಂಬುದಕ್ಕೆ ಒಗ್ಗುವುದಿಲ್ಲ. ಒಂದು ವೇಳೆ ಅದನ್ನ ಬಳಸಿದರೆ ಕನ್ನಡವೂ ಅಲ್ಲದ ಸಂಸ್ಕೃತವೂ ಅಲ್ಲದ ’ಎಡಬಿಡಂಗಿ’/’ತ್ರಿಶಂಕು’ ಪದಗಳೆಂದು ಕರೆಯಬೇಕಾಗುತ್ತದೆ.
ಎರಡನೆಯದಾಗಿ, ಇಲ್ಲಿ ’ವೈಙ್ಞಾನಿಕ ವಿಂಗಡಣೆ’ ಅಂದರೆ ಏನು ಎಂಬುದನ್ನ ಬರಹಗಾರರು ಹೇಳಿಲ್ಲ. ವೈಙ್ಞಾನಿಕವಾಗಿ ನೋಡಿದರೆ ಪಾಣಿನಿಯು ಬರೆದಿರುವ ವ್ಯಾಕರಣದಲ್ಲಿ ಲಿಂಗ ನಿರ್ಧರಿಸುವ ವಿಧಾನ ಸರಿಯಿಲ್ಲ. ದಾರಾ( ಹೆಂಡತಿ) ಎಂಬ ಪದ ’ಪುಲ್ಲಿಂಗ’ ಎಂದು ಹೇಳಲಾಗಿದೆ. (dara (p. 115) [ 2. dârá ] m. (gnly.) pl. wife: dârân pra kri, marry a wife). ಇದೇ ರೀತಿ ಸಂಸ್ಕೃತದ ವ್ಯಾಕರಣದಲ್ಲಿ ಆಗಿರುವ ಎಡವಟ್ಟುಗಳು ಹಲವಿವೆ. ಯಾವ ರೀತಿಯಲ್ಲಿ ಇದು ವೈಙ್ಞಾನಿಕ ?
ಹಾಗಾಗಿ ಆಯ ಭಾಷೆಯ ವ್ಯಾಕರಣ ಆ ಭಾಷೆಯ ಮಟ್ಟಿಗೆ ಸರಿಯಿರಬಹುದು. ಆದ್ದರಿಂದ ’ಒಂದು ಭಾಷೆಯನ್ನು ವೈಙ್ಜಾನಿಕವಾಗಿ ವಿಂಗಡಿಸುವ ಸೂತ್ರವನ್ನು ಯಾವುದೇ ಭಾಷೆಗೆ ಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ’ ಎಂದು ಹೇಳುವುದು ತಪ್ಪಾಗುತ್ತದೆ ಮತ್ತು ಹಲವು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ.
ಮೂರನಯದಾಗಿ, "ಆತನಿಗೆ ‘ಸಹಜಭಾಷಾ ಸಂಸ್ಕರಣೆ ಕ್ಷೇತ್ರದ ಜನಕ’ ಎಂಬ ಹೆಸರೂ ಇದೆ. "
ಪಾಣಿನಿಗೆ Natural Language Processing ಎಂದರೇನು ಎಂಬುದೇ ಗೊತ್ತಿರಲಿಲ್ಲ. ಇತ್ತೀಚೆಗೆ ಸುಮಾರು ೧೯೫೦ ರ ದಶಕದಲ್ಲಿ ಈ ಅರಿಮೆಯು ಅಂಬೆಗಾಲಿಡುತ್ತಿದ್ದುದನ್ನು ನಾವು wiki (http://en.wikipedia.org/wiki/Natural_language_processing) ಯಿಂದ ತಿಳಿದುಕೊಳ್ಳಬಹುದು. ಬರಹಗಾರರು ಹೇಗೆ ಪಾಣಿನಿಯನ್ನು ’ಸಂಸ್ಕರಣೆ ಕ್ಷೇತ್ರದ ಜನಕ’ ಎಂದು ಹೇಳಿದ್ದಾರೊ ತಿಳಿಯದು. ಇದಕ್ಕೆ ಅವರು ತಕ್ಕ ಪುರಾವೆಗಳನ್ನು ನೀಡಿಲ್ಲ.
ಇನ್ನು ಡಾ ಎ. ಸತ್ಯನಾರಾಯಣ ಅವರ ’ ಕನ್ನಡೀಕರಣ: ಆಗಿರುವುದೇನು? ಆಗಬೇಕಿರುವುದೇನು?’ ಎಂಬ ತಲೆಬರಹದಲ್ಲಿರುವ ’ಕನ್ನಡೀಕರಣ’ ಎಂಬ ಪದವೂ ತ್ರಿಶಂಕು/ಎಡಬಿಡಂಗಿ ಪದವಾಗಿದೆ.
ಕನ್ನಡ (ಕನ್ನಡದ್ದೇ ಆದ ಪದ) + ಕರಣ (ಸಂಸ್ಕೃತದ್ದೇ ಆದ ಪದ) => ಕನ್ನಡೀಕರಣ ಹೇಗೆ ಆಗುತ್ತದೆ? ಇದು ಯಾವ ಸಂಧಿ ಯಾರಿಗೆ ಗೊತ್ತು? ಇದರ ಬದಲು ಕನ್ನಡ+ಇಸು = ಕನ್ನಡಯಿಸು => ಕನ್ನಡಯ್ಸು=>ಕನ್ನಡಸು ಎಂಬ ಕನ್ನಡಕ್ಕೆ ಒಗ್ಗುವ ಪದವನ್ನು ಬಳಸಬಹುದು.
ಇದೇ ರೀತಿ ಇನ್ನೊಂದು ಪದ ಈಗಾಗಲೆ ಕನ್ನಡದಲ್ಲಿ ಬಳಕೆಯಲ್ಲಿದೆ , ಉದಾ: ಸೊಗ+ಇಸು = ಸೊಗಯಿಸು = ಸೊಗಸು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ