ಭಾನುವಾರ, ಮಾರ್ಚ್ 06, 2011

’ಪಡೆ’ದದ್ದು ಸಾಕು ಇನ್ಮೇಲೆ ’ಕೊಡೋ’ಣ

’ಇನ್ಪೋಸಿಸ್’ ಕಟ್ಟಿದ ಶ್ರೀ ನಾರಾಯಣ ಮೂರ್ತಿಯವರನ್ನು ’ವಿಶ್ವ ಕನ್ನಡ ಸಮ್ಮೇಳನ’ವನ್ನು ಉದ್ಘಾಟಕರನ್ನಾಗಿಸಿದ ವಿಷಯವನ್ನು ಇತ್ತೀಚೆಗೆ ತೀವ್ರ ಚರ್ಚೆಗೆ ಒಡ್ದಲಾಗಿದೆ. ಇದರ ಬಗ್ಗೆ ಒಂದೆರಡು ಮಾತು. ಮೂರ್ತಿಯವರು ಜಾಗತೀಕರಣದಿಂದಾಗುವ ಹೊಸ ಸಾಧ್ಯತೆಗಳನ್ನು ಚೆನ್ನಾಗಿ ಬಳಸಿಕೊಂಡು ಅರಿವಿನ ಮೇಲೆ(knowledge based) ಕಂಪನಿಗಳನ್ನ ಕಟ್ಟಿಜನರ ಹಣಕಾಸಿನ ಮಟ್ಟವನ್ನ ಹೆಚ್ಚಿಸಬಹುದೆಂದೂ ಅದರ ಮೂಲಕ ಬದುಕಿನ ಮಟ್ಟವನ್ನು ಸುಧಾರಿಸಬಹುದೆಂದು ತೋರಿಸಿಕೊಟ್ಟವರಲ್ಲಿ ಪ್ರಮುಖರು. ಇದಕ್ಕಾಗಿ ಅವರು ಅಬಿನಂದನಾರ್ಹರಲ್ಲದೆ ಇತರರಿಗೂ ಸ್ಪೂರ್ತಿಯ ಸೆಲೆಯಾಗಬಲ್ಲವರು. ಇದರಿಂದಾಗಿಯೇ ಮೂರ್ತಿಯವರು ಜಾಗತೀಕರಣದಿಂದ ಏನೆಲ್ಲ ’ಪಡೆ’ದು(ಇಂಗ್ಲಿಶ್, ಸಾಪ್ಟ್ ವೇರ್, ತಾಂತ್ರಿಕತೆ ಬಗೆಗಿನ ಅರಿವು ಇತ್ಯಾದಿ) ಕೊಳ್ಳಬಹುದೆಂದು ಚೆನ್ನಾಗಿ ತೋರಿಸಿಕೊಟ್ಟರು. ಈಗಲೂ ಹೆಚ್ಚಿನ ಜನರೂ ಜಾಗತೀಕರಣದಿಂದ ಆಗುವ ಬಳಕೆ ಇದೊಂದೆ ಅಂದರೆ ’ಪಡೆ’ಯುವುದೊಂದೇ ಎಂದು ತಿಳಿದಿದ್ದಾರೆ. ಅಂದರೆ ಇಂಗ್ಲಿಶಿನಿಂದಲೇ ನಮ್ಮ ಏಳಿಗೆ ಇಲ್ಲದಿದ್ದರೆ ನಾವು ಏಳಿಗೆ ಹೊಂದಲಾರೆವು ಎಂಬುದನ್ನ ’ಪಡೆ’ಯುವ ಗುಂಪಿನವರು ತಿಳಿದಿರುವಂತಿದೆ. ಆದರೆ ಜಾಗತೀಕರಣದಲ್ಲಿ ’ಕೊಡು’ವುದಕ್ಕೂ ಅಶ್ಟೆ ಅವಕಾಶಗಳಿವೆ ಎಂಬುದನ್ನ ನಾವು ಹೆಚ್ಚಾಗಿ ಗುರುತಿಸಿಲ್ಲ. ಇವತ್ತಿಗೂ ಜರ್ಮನಿ, ಜಪಾನ್ ಮತ್ತು ಇಸ್ರೇಲ ದೇಶಗಳು ತಮ್ಮಲ್ಲಿರುವ ಅರಿವನ್ನು ಇಂಗ್ಲಿಶಿನ ನೆರವಿಲ್ಲದೆ ತಮ್ಮ ತಮ್ಮ ತಾಯ್ನುಡಿಗಳ ಮೂಲಕ ಕಲಿತು
ಹೆಚ್ಚಿಸಿಕೊಂಡು ಇಡೀ ಪ್ರಪಂಚಕ್ಕೆ ಹೊಸ ಹೊಸ ಉತ್ಪನ್ನಗಳನ್ನ ’ಕೊಟ್ಟು’ ತಾಂತ್ರಿಕ ಹೆಚ್ಚುಗಾರಿಕೆಯನ್ನು ತೋರುತ್ತಿವೆ. ನಾವು (ಬಾರತ) ಇನ್ನು ಜಾಗತೀಕರಣದಿಂದ ’ಪಡೆ’ದುಕೊಳ್ಳುವುದರಲ್ಲಿ ಇದ್ದೀವೆಯೆ ಹೊರತು ’ಕೊಡು’ವುದಕ್ಕೆ ಮನಸ್ಸು ಮಾಡಿಲ್ಲ. ಹಾಗಾಗಿ ಮೂರ್ತಿಯವರು ಸಮ್ಮೇಳನದ ಉದ್ಗಾಟನೆ ಮಾಡುವ ನೆಪದಲ್ಲಾದರೂ ಸಾರ್ವಜನಿಕ ವಲಯದಲ್ಲಿ ಜಾಗತೀಕರಣಕ್ಕೆ ’ಕೊಡು’ವುದರ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಲಿ ಬಯಸುತ್ತೇನೆ

ಕಾಮೆಂಟ್‌ಗಳಿಲ್ಲ: