ಮಂಗಳವಾರ, ಡಿಸೆಂಬರ್ 26, 2006

ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ

ನಮ್ಮ ದೇಶದಲ್ಲೆ ಬಹುಶಃ ಪ್ರಥಮ ಬಾರಿಗೆ ಸಾಮಾಜಿಕ, ಧಾರ್ಮಿಕ, ತಾತ್ವಿಕ, ಸಾಹಿತ್ಯಕ ಹಾಗು ರಾಜಕೀಯವಾಗಿ ಕ್ರಾಂತಿಯನ್ನುಂಟು ಮಾಡಿದ ಮಹಾನುಭಾವ ಬಸವಣ್ಣ. ಅವರ ಬಹು ದೊಡ್ಡ ಕೊಡುಗೆಗಳಲ್ಲಿ ವಚನ ಸಾಹಿತ್ಯವೂ ಒಂದು. ಅದರ ಬಗೆಗಿನ ಚಿಂತನೆ ಹಾಗು ಜಿಙ್ನಾಸೆಗಳು ಇಲ್ಲಿ ಮೂಡಿವೆ.

"ಎನಗಿಂತ ಕಿರಿಯರಿಲ್ಲ
ಶಿವಭಕ್ತರಿಗಿಂತ ಹಿರಿಯರಿಲ್ಲ ..."

ಈ ವಚನ ಎಷ್ಟು ಸರಳವಾಗಿದೆಯೊ ಅಷ್ಟೆ ಗಹನ ವಿಚಾರವನ್ನು ಒಳಗೊಂಡಿದೆ. ನೇರವಾಗಿ ಹೇಳುವುದಾದರೆ ಇದು ಬಸವಣ್ಣನವರ ಸರಳತೆ,ವಿನಮ್ರತೆ ಹಾಗು ವಿನಯತೆಗೆ ಕೈಗನ್ನಡಿಯಂತಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಬಸವಣ್ಣನವರು "ಶಿವಭಕ್ತರಿಗಿಂತ ಹಿರಿಯರಿಲ್ಲ..." ಎಂದು ಏಕೆ ಹೇಳುತ್ತಾರೆ ಶಿವನಿಗಿಂತ ಹಿರಿಯರಿಲ್ಲ ಎಂದು ಏಕೆ ಹೇಳಲಿಲ್ಲ? ಎಂಬುದು. ಅವರು ದೈವಕ್ಕಿಂತ ದೈವಭಕ್ತಿಯೇ ಹಿರಿದು, ಶುದ್ಧ ದೈವ ಭಕ್ತಿಯುಳ್ಳವನು ದೈವವನ್ನು ಮೀರಿಸಬಲ್ಲ ಎಂದು ನಂಬಿದ್ದರೆಂದು ಖಂಡಿತವಾಗಿ ಹೇಳಬಹುದು. ಈ ಮಾತನ್ನು ಬಹು ಮಟ್ಟಿನ ಆಸ್ತಿಕರು ಒಪ್ಪುತ್ತಾರೊ ತಿಳಿಯದು, ಆದರೂ ಬಸವಣ್ಣನವರ ಈ ನಿಲುವು ಹಿಂದು ಧರ್ಮದಲ್ಲಿ ಕ್ರಾಂತಿಕಾರಕ ಎಂದು ಹೇಳಬಹುದು. ಭಕ್ತಿಯು ಮುಕ್ತಿಯ ಸಾಧನವೊಂದೆ ಅಲ್ಲ ಬದುಕನ್ನು ಹಸನು ಮಾಡುವ ಶಕ್ತಿ ಹೊಂದಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

"ಉಳ್ಳವರು ಶಿವಾಲಯ ಮಾಡುವರಯ್ಯ
ನಾನೇನ ಮಾಡಲಿ ಬಡವನಯ್ಯ

ಎನ್ನ ಕಾಲೆ ಕಂಬವು
ದೇಹವೆ ದೇಗುಲ
ಶಿರವೆ ಹೊನ್ನ ಕಳಸವಯ್ಯ

ಸ್ಥಾವರಕ್ಕಳಿವಂಟು
ಜಂಗಮಕ್ಕಳಿವಿಲ್ಲ
ಅಯ್ಯ ಕೇಳಯ್ಯ ಕೂಡಲಸಂಗಯ್ಯ"

ನೇರ ಅರ್ಥ ಇದು ಒಬ್ಬ ಬಡವನ ನಿಸ್ಸಾಹಯಕತೆಯಾಗಿ ಕಾಣಬಹುದು ಆದರೆ ಇದು 'ದೇಹ'ವನ್ನೆ 'ದೇಗುಲ'ವನ್ನಾಗಿಸುವ ಉನ್ನತ ತತ್ವಯುಕ್ತ ವಾಣಿ. ಇದು ಬಹುಶಃ ಆಗಿನ ಕಾಲದ ಅಸ್ಪೃಷ್ಯತೆ, ಜಾತೀಯತೆಯಂತಹ ಕಂದಾಚಾರಗಳ ವಿಡಂಬಣೆಯಾಗಿ ಕೂಡ ಅರ್ಥೈಸಬಹುದು. ತಮ್ಮ ತಮ್ಮ ದೇಹದಲ್ಲಿ ದೇಗುಲವನ್ನು ಕಟ್ಟಿ ಶಿರದಲ್ಲಿ ಕಳಸವನ್ನು ಪ್ರತಿಷ್ಠಾಪಿಸಿ, ದೇಹದಲ್ಲಿ ದೇಗುಲವಿಲ್ಲದೆ ಪ್ರಾಪಂಚಿಕ ದೇಗುಲಗಳನ್ನು ಸಂದರ್ಶಿಸಿದರೆ ಯಾವ ದೇವನು ಒಲಿಯುವುದಿಲ್ಲ ಎಂಬ ನಿಲುವು ಅಭೂತಪೂರ್ವವಾದುದು. ಹಾಗೆಯೆ ಚಲನಶೀಲವಾದ ದೇಹವೆಂಬ[ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ] ದೇಗುಲಕ್ಕೆ ಅಳಿವಿಲ್ಲ ಆದರೆ ಜಡವಾಗಿರುವ ಪ್ರಾಪಂಚಿಕ ದೇಗುಲಗಳು ನಾಶವಾಗುವ ಸಾಧ್ಯತೆಗಳಿವೆ. ಯಾವುದೇ ಬಾಹ್ಯ ವಸ್ತು-ಆಚರಣೆಗಳಿಗಿಂತ ಮನುಷ್ಯನ ದೇಹ-ಮನಸ್ಸುಗಳು ಭಕ್ತಿಪಥಕ್ಕೆ ಬಹು ಮುಖ್ಯ ಎಂದು ಅರ್ಥೈಸಬಹುದಾಗಿದೆ.

ಕಾಮೆಂಟ್‌ಗಳಿಲ್ಲ: