ಮಂಗಳವಾರ, ನವೆಂಬರ್ 03, 2015

ನೆಲದ ಸೊಗಡು

ಮರಾಟಿನಾಡಿನಲ್ಲೊಂದು ಮನೆಯ ಮಾಡಿ ಮರಾಟಿ ಕಲಿಯದಿದ್ದೊಡೆ ಅದೆಂತಯ್ಯ?
ತಮಿಳುನಾಡಿನಲ್ಲೊಂದು ಮನೆಯ ಮಾಡಿ ತಮಿಳು ಕಲಿಯದಿದ್ದೊಡೆ ಅದೆಂತಯ್ಯ?
ಕನ್ನಡನಾಡಿನಲ್ಲೊಂದು ಮನೆಯ ಮಾಡಿ ಕನ್ನಡ ಕಲಿಯದಿದ್ದೊಡೆ ಅದೆಂತಯ್ಯ?
ಆಯ ನೆಲದ ಸೊಗಡಿಗೆ ಹೊಂದಿಕೊಂಡು ಬಾಳದ ಆ ಬಾಳು ಆ ಬದುಕು ಎಂತಯ್ಯ
ನಿಮ್ಮ ಆಣೆ! ಆ ಬದುಕಿಗೆ ಬೆಂಕಿ ಹಚ್ಚಯ್ಯ ಮತ್ತಿತಾಳಯ್ಯ
(ಅಕ್ಕನವರ ಸೂಳ್ನುಡಿಯನ್ನು ಬಳಸಿಕೊಂಡು...)

ಅರಿವು-ಮರೆತ

ಅರಿಯುವುದು ಮರೆಯುವುದಕ್ಕಲ್ಲವೆ?
ಮರೆಯುವುದು ಅರಿಯುವುದಕ್ಕಲ್ಲವೆ?
ಅರಿತು ಮರೆವ ಮರೆತು ಅರಿವ ಈ
ಪರಿಗೆ ಬೆರಗಾದೆ ಕಾಣಾ
ನೆರೆಯರಿತು-ಮರೆವ ಮರುಪಾಳಿಯಲಿ
ನಲುಗಬೇಕಲ್ಲವೆ?
ನಲುಗಿ ನಿಲ್ಲಬೇಕಲ್ಲವೆ ಮತ್ತಿತಾಳಯ್ಯ

"ನೆನೆವುದೆನ್ನ ಮನಂ ಬನವಾಸಿ ದೇಸಮಂ" - ಇದರ ಬಗ್ಗೆ

"ನೆನೆವುದೆನ್ನ ಮನಂ ಬನವಾಸಿ ದೇಸಮಂ" - ಇದರ ಬಗ್ಗೆ
------------------------------------------------------
ದೇಸಮಂ ಅನ್ನುವುದನ್ನು 'ದೇಸಮಮ್' ಎಂದು ಹಲವರು ಓದುತ್ತಾರೆ. ಆದರೆ ಅದು 'ದೇಸಮಮ್' ಅಲ್ಲ, 'ದೇಸಮನ್'
'ದೇಸಮನ್' ಬಿಡಿಸಿದರೆ 'ದೇಸಮ್+ಅನ್' ಅಂದರೆ ಹೊಸಗನ್ನಡದಲ್ಲಿ 'ದೇಸವನ್ನು' ಎಂದಾಗುತ್ತದೆ.
ಹೊಸಗನ್ನಡ: ಎನ್ನ ಮನವು ಬನವಾಸಿ ದೇಸವನ್ನು ನೆನೆಯುವುದು


ತೀರಮೆಗಳು:-
೧. ಹೊಸಗನ್ನಡದ 'ಅನ್ನು' ಎಂಬ ಪತ್ತುಗೆ ಒಟ್ಟು (ವಿಬಕ್ತಿ ಪ್ರತ್ಯಯ) ಹಳೆಗನ್ನಡದಲ್ಲಿ 'ಅನ್' ಎಂದಾಗಿತ್ತು.
೨. ಹಳಗನ್ನಡದಲ್ಲಿ '೦' ಎನ್ನು 'ನ್' ಎಂದು ಬರೆಯುವುದಕ್ಕೂ ಬಳಸಲಾಗಿದೆ.
ಹಳಗನ್ನಡದ 'ಅಮ್' ಎನ್ನುವುದು ಹೊಸಗನ್ನಡದಲ್ಲಿ 'ಅನ್ನು' ಆಗಿದೆ ಎಂದು ಕೆಲವರು ಹೇಳುತ್ತಾರೆ.
ಆದರೆ ಹಳಗನ್ನಡದ 'ಅನ್' ಎಂಬುದೇ ಹೊಸಗನ್ನಡದಲ್ಲಿ 'ಅನ್ನು' ಆಗಿರುವ ಸಾದ್ಯತೆ ಹೆಚ್ಚು ಕಾಣುತ್ತಿದೆ.
ಅನ್ (ಹ) -> ಅನ್ನು (ಹೊ) - ಇದಕ್ಕೆ ಹಲವು ಎತ್ತುಗೆಗಳನ್ನು ಕೊಡಬಹುದು.
ಕಣ್ (ಹ) -> ಕಣ್ಣು (ಹೊ)
ಪೊನ್(ಹ) -> ಹೊನ್ನು(ಹೊ)
ಕೊಲ್ (ಹ) -> ಕೊಲ್ಲು(ಹೊ)
ಹಳಗನ್ನಡಲ್ಲಿ ಅದು 'ಅಮ್' ಆಗಿದ್ದರೆ ಹೊಸಗನ್ನಡದಲ್ಲಿ ಅದು 'ಅಮ್ಮು' ಆಗಬೇಕಿತ್ತು

'ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿ

ತಮಿಳಿನ ’ತಿರುಕ್ಕುರಳ್’ ನಲ್ಲಿ ಕನ್ನಡದ ಆಡುನುಡಿಯಲ್ಲಿರುವ ಹಲವು ಪದಗಳು ಅದೇ ಹುರುಳಿನಲ್ಲಿ ಬಳಕೆಯಾಗಿವೆ. ಆದರೆ ಅಲ್ಲೆಲ್ಲ ತಮಿಳಿನ ಆಡುನುಡಿಯಲ್ಲಿರುವ ಪದಗಳು ಬಳಕೆಯಾಗಿಲ್ಲ. ತಮಿಳಿನ ಮೇಲೆ ಹಳಗನ್ನಡ ಒತ್ತು(influence) ಇತ್ತೇ ಎಂಬ ಕೇಳ್ವಿ ಇದರಿಂದ ಏಳುವುದು.
ಎತ್ತುಗೆಗೆ (ನನಗೆ ಕಂಡವು ಇಶ್ಟು..ಹುಡುಕಿದರೆ ಇನ್ನೂ ಸಿಗಬಹುದು):-
೧. ಮಕ್ಕಳ್ - ಇಂದಿನ ಕನ್ನಡದ ಆಡುನುಡಿಯಲ್ಲಿ ಇದನ್ನು ’children' ಎಂಬ ಹುರುಳಲ್ಲಿ ಬಳಸಲಾಗುತ್ತದೆ. ಇದೇ ಪದ ತಮಿಳಿನಲ್ಲಿ ’people' ಎಂಬ ಹುರುಳಿನಲ್ಲಿ ಇಂದು ಬಳಕೆಯಾಗುತ್ತಿದೆ. ಆದರೆ ತಿರುವಳ್ಳುವರ್ ಚಿಕ್ಕಮಕ್ಕಳ ಬಗ್ಗೆ ಮಾತು ಬಂದಾಗಲೆಲ್ಲಾ ಬಳಸುವುದು ’ಮಕ್ಕಳ್’ ಎಂದೇ.
೨ ಮನೆ - ಇಂದಿಗೂ ಕನ್ನಡದಲ್ಲಿ ’house/home' ಎಂಬ ಹುರುಳಿನಲ್ಲಿ ಬಳಕೆಯಲ್ಲಿದೆ. ಆದರೆ ತಮಿಳಿನ ಆಡುನುಡಿಯಲ್ಲಿ ’ವೀಟ್ಟು’ ಬಳಕೆಯಲ್ಲಿದೆ. ಆದರೆ ತಿರುವಳ್ಳುವರ್ ಬಳಸುವುದು ’ಮನೈ’ ಎಂದೇ.
೩. ನೀರ್ - ಇಂದಿಗೂ ಕನ್ನಡದಲ್ಲಿ ’water' ಎಂಬ ಹುರುಳಿನಲಿ ಬಳಕೆಯಲ್ಲಿದೆ. ಆದರೆ ತಮಿಳಿನಲ್ಲಿ ಇದಕ್ಕೆ ’ತಣ್ಣಿ’ ಎನ್ನುತ್ತಾರೆ. ಆದರೆ ತಿರುವಳ್ಳುವವರು ಬಳಸುವುದು ’ನೀರ್’ ಎಂದೇ.

ಹಿಂದೆ ತಿಳಿಸಿದಂತೆ ಮತ್ತಶ್ಟು ಸಿಕ್ಕ ಪದಗಳು:-
೪. ಕೆಯ್/ಗೆಯ್(ಮಾಡು) - ತಿರುವಳ್ಳುವರ್ ಬಳಸುವುದು ಇದಕ್ಕೆ ಸಾಟಿಯಾದ ತಮಿಳು ರೂಪ 'ಶೆಯ್'( ತೆಲುಗಿನ ಚೆಯ್/ಚೆಯ್ಯಿ). ತಪ್ಪಿಯೂ ತಿರುವಳ್ಳುವರ್ ಇವತ್ತಿನ ತಮಿಳಿನಲ್ಲಿ ಬಳಸುವ 'ಪಣ್' ಬಳಸುವುದೇ ಇಲ್ಲ. ಆದರೆ ಕನ್ನಡದಲ್ಲಿ ಇಂದಿಗೂ 'ಗೆಯ್',ಗೆಯ್ಮೆ, ಕೇಮೆ(ಕ್ಯಾಮೆ) ಬಳಸಲಾಗುತ್ತಿದೆ.
೫. ತಿನ್, ಉಣ್ - ತಿರುವಳ್ಳುವರ್ 'ತಿನ್' ಒಮ್ಮೆ ಮತ್ತು 'ಉಣ್' ಎಂಬುದನ್ನು ಹಲವು ಕಡೆ ಬಳಸಿದ್ದಾರೆ. ಇವತ್ತಿನ ತಮಿಳಿನಲ್ಲಿ 'ಸಾಪಟ್' ಹೆಚ್ಚಾಗಿ ಬಳಕೆಯಲ್ಲಿದೆ. ಆದರೆ ಕನ್ನಡದಲ್ಲಿ 'ಉಂಡ್ಯ', ತಿಂದ್ಯ, ಉಣ್ಣು (> ಊಟ), ತಿನ್ನು(>ತಿಂಡಿ, ತಿನಿಸು) ಬಳಕೆಗಳು ಹೆಚ್ಚಾಗಿ ಬಳಕೆಯಲ್ಲಿವೆ.