ಶುಕ್ರವಾರ, ಜುಲೈ 10, 2026

'ಅರಿವಿಗೆ ಎಟಕದ ವ್ಯಾಕರಣ' - ಇರುವುದು ದಿಟವೆ?


 ಕೇಳ್ವಿಗಳು:-

೧) 'ಅರಿವಿಗೆ ಎಟಕದ' ಎಂದರೇನು? 

೨) ಇದು ದಿಟವಾಗಲು ಸಾದ್ಯವೆ?

೩) ಇದೆಲ್ಲ ಕೇವಲ ಊಹೆಯೆ? ಇದಕ್ಕೆ ಏನು ಪುರಾವೆ?

 ಅರಿವಿಗೆ ಎಟಕದ ಎಂದರೆ ನಮ್ಮ 'ಅರಿವಿನ'(conscious) ಆಚೆಗೆ ಇರುವಂತಹದ್ದು. ಅಂದರೆ ಇಂತಹ ಒಂದು ವ್ಯಾಕರಣ ನಮ್ಮೊಳಗೆ ಇದೆ ಎಂಬುದೇ ನಮಗೆ ಗೊತ್ತಿರುವುದಿಲ್ಲ. ಇದನ್ನು ನಾವು ಕೆಲವು ಎತ್ತುಗೆಗಳ ಮೂಲಕ ಅರಿಯೋಣ:-

 ನಾವು ಇಗ್ಗಾಲಿ(ಸ್ಕೂಟರ್, ಬಯ್ಕ್)ಗಳನ್ನು ಓಡಿಸುತ್ತೇವೆ. ಓಡಿಸುವುದನ್ನು ಕಲಿತ ಮೇಲೆ ಅದನ್ನು ಹೇಗೆ ಓಡಿಸಬಹುದೆಂಬುದಶ್ಟೆ ತಿಳಿದಿರುತ್ತದೆ. ಅದು ಹೇಗೆ ಕೆಲಸ ಮಾಡುತ್ತದೆ ಇಲ್ಲವೆ ಅದು ಕೆಟ್ಟು ಹೋದರೆ ಹೇಗೆ ಸರಿಪಡಿಸಬೇಕೆಂಬುದು(ರಿಪೇರಿ) ನಮಗೆ ತಿಳಿದಿರುವುದಿಲ್ಲ ಮತ್ತು ತಿಳಿಯಬೇಕಾಗಿಯೂ ಇಲ್ಲ. ಇಗ್ಗಾಲಿ ಕೆಟ್ಟು ಹೋದಾಗ ನಾವು ಮೆಕಾನಿಕ್ ಹತ್ತಿರ ಹೋಗುತ್ತೇವೆ; ಅವರು ಅದನ್ನು ಸರಿಪಡಿಸಿಕೊಡುತ್ತಾರೆ. 

ಅಂದರೆ ಇಗ್ಗಾಲಿಯು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ಅರಿಯದೆ ಅದನ್ನು ಸರಿಯಾಗಿ ಓಡಿಸಬಲ್ಲವರಾಗಿರುತ್ತೇವೆ. ಅಂದರೆ ಅದು ಹೇಗೆ ಕೆಲಸ ಮಾಡುತ್ತದೆ ಎಂಬುದು ನಮಗೆ ಯಾವಾಗಲು 'ಅರಿವಿಗೆ ಎಟಕದ ರೂಪ'ದಲ್ಲಿರುತ್ತದೆ, ಯಾಕಂದರೆ ನಾವು ಸರಿಯಾಗಿ ಇಗ್ಗಾಲಿ ಓಡಿಸುತ್ತಿರುತ್ತೇವೆ. ಅಲ್ಲದೆ, ಇಗ್ಗಾಲಿ ಓಡಿಸುವುದರಲ್ಲಿ ನುರಿತ ಮೇಲೂ ಕೂಡ ಅದು 'ಅರಿವಿಗೆ ಎಟಕದ ರೂಪ'ದಲ್ಲೇ ಇರುತ್ತದೆ. 

ಮೊದಲ ನುಡಿ ಕೂಡ ಹಾಗೆಯೇ ನುಡಿಯನ್ನು ಮಾತಿನಲ್ಲಿ ಸರಿಯಾಗಿ ಹೇಗೆ ಬಳಸಬೇಕೆಂಬುದು ನಮಗೆ ಗೊತ್ತು; ಆದರೆ ಅದರ ವ್ಯಾಕರಣ (ಸೊಲ್ಲರಿಮೆ) ನಮ್ಮ ಅರಿವಿಗೆ ಬರುವುದೇ ಇಲ್ಲ; ಬರಬೇಕಾಗಿಯೂ ಇಲ್ಲ. ಅಂದ ಮೆಲೆ ಆ ವ್ಯಾಕರಣ ನಮಗೆ 'ಅರಿವಿಗೆ ಎಟಕದ ರೂಪ'ದಲ್ಲಿದೆ ಎಂಬುದು ತನಗೆ ತಾನೆ ನಿಂದರಿಕೆಯಾಗುತ್ತದೆ. 

ಯಾರೇ ಆದರೂ ಮೊದಲನುಡಿಯನ್ನು ವ್ಯಾಕರಣಬದ್ದವಾಗಿ ಮಾತನಾಡುವುದು 'ಅರಿವಿಗೆ ಎಟಕದ ವ್ಯಾಕರಣ'ದ ಇರುವಿಕೆಯನ್ನು ತೋರಿಸುತ್ತದೆ.

ಎರಡನೇ ನುಡಿಯನ್ನು ತೆಗೆದುಕೊಳ್ಳೋಣ. ಎರಡನೇ ನುಡಿಯ ವ್ಯಾಕರಣ ಕಲಿಯದೆ ನಮಗೆ ಎರಡನೇ ನುಡಿಯನ್ನು ಮಾತನಾಡಲಾಗದು.  ಅಂದರೆ ಎರಡನೆ ನುಡಿಯನ್ನು ಕಲಿಯುವಾಗ ಎರಡನೇ ನುಡಿಯ ವ್ಯಾಕರಣವನ್ನು ಅರಿವಿಗೆ ತಂದುಕೊಳ್ಳದೆ ಅದನ್ನು ಮಾತನಾಡಲಾಗದು.

ಹೀಗೆ ಮೊದಲ ನುಡಿಯನ್ನು ಹೊರತುಪಡಿಸಿ ಅಂದರೆ ಎರಡನೆ, ಮೂರನೆ...ನುಡಿಯನ್ನು ಕಲಿಯಲು ವ್ಯಾಕರಣದ ಅರಿವನ್ನು ಗಳಿಸಬೇಕಾಗುತ್ತದೆ.

ಅಂದರೆ, ವ್ಯಾಕರಣ ಮಾತು ಬರುವುದಕ್ಕೆ ಒಂದು ಪ್ರೀಕಂಡೀಶನ್ ಆಗುತ್ತದೆ. ಮೊದಲ ನುಡಿಯೊಂದಿಗೆ ಹೋಲಿಸಿ ಕಲಿಯುವುದರಿಂದ ಇಲ್ಲವೆ ಮೊದಲ ನುಡಿಯ ಮೂಲಕ ಕಲಿಯುವುದರಿಂದ ಎರಡನೇ ನುಡಿಯ ವ್ಯಾಕರಣ ಅರಿವಿಗೆ ತಂದುಕೊಳ್ಳಬೇಕಾಗುತ್ತದೆ. 

ಅಂದರೆ, ಯಾವುದೇ ನುಡಿ ಬರುವುದಕ್ಕೂ/ಕಲಿಯುವುದಕ್ಕೂ ಅದರ ವ್ಯಾಕರಣ (ಪ್ರೀಕಂಡಿಶನ್) ಬೇಕೇ ಬೇಕು. ಮೊದಲ ನುಡಿಯಲ್ಲಿ ಆ ವ್ಯಾಕರಣ 'ಅರಿವಿಗೆ ಎಟಕದ ರೂಪ'ದಲ್ಲಿರುತ್ತದೆ. ಎರಡನೆ, ಮೂರನೆ... ನುಡಿಯಲ್ಲಿ ಅದನ್ನು ಅರಿವಿಗೆ ತಂದುಕೊಳ್ಳಬೇಕಾಗುತ್ತದೆ. ಇದೇ ನುಡಿಯ ಸೋಜಿಗ

ಕಾಮೆಂಟ್‌ಗಳಿಲ್ಲ: