ಹಿರಿಯ ನುಡಿಯರಿಗರಾದ ಡಾ| ಡಿ.ಎನ್.ಶಂಕರಬಟ್ಟರ ’ಕನ್ನಡ ಲಿಪಿ ಸುದಾರಣೆ’ಯ ಬಗ್ಗೆ ಚರ್ಚೆಗಳು ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ನುಡಿಯರಿಮೆಯ,ಸೊಲ್ಲರಿಮೆಯ ಮತ್ತು ಕೂಡಣದರಿಮೆಯ ಹಲವು ಕಾರಣಗಳನ್ನು ಕೊಟ್ಟು ಅವರು ಈಗಿರುವ ಕನ್ನಡದ ಲಿಪಿಯಲ್ಲಿರುವ ಮಹಾಪ್ರಾಣಗಳು, ಐ, ಔ, ವಿಸರ್ಗ(ಅಃ) ಮತ್ತು ಷ ಎಂಬ ಬರಿಗೆಗಳು ಬೇಕಾಗಿಲ್ಲವೆಂದು, ಅವನ್ನು ಕಯ್ಬಿಡುವುದೇ ಕನ್ನಡಕ್ಕೆ ಸರಿಯಾದ ದಾರಿ ಎಂದು ಹೇಳಿದ್ದಾರೆ. ಕೂಡಣದರಿಮೆಯ(sociology) ಕಣ್ಣಿನಿಂದ ನೋಡಿದರೆ ಇದು ಇನ್ನು ಹೆಚ್ಚು ಹೆಚ್ಚು ಸರಿಯೆನಿಸುತ್ತದೆ ಯಾಕಂದರೆ ಹೆಚ್ಚಿನ ಮಂದಿಯ ನಾಲಿಗೆಯಲ್ಲಿ ಈ ಮೇಲಿನ ಬರಿಗೆಗಳು ಬರುವುದೇ ಇಲ್ಲ. ಮಂದಿಯಾಳ್ವಿಕೆಯ ಪರ್ವಕಾಲದಲ್ಲಿರುವಾಗ ಹೆಚ್ಚಿನ ಮಂದಿಗೆ ತಕ್ಕಂತೆ ಕೂಡಣದಲ್ಲಿ ಕಲಿಕೆ, ಕೆಲಸ ಮತ್ತು ಕಟ್ಟಲೆಗಳು ಎಂಬ ಇನ್ನಿತರ ಏರ್ಪಾಟುಗಳು ಇರಬೇಕು. ಇದರಲ್ಲಿ ಬಲು ಮುಕ್ಯವಾದುದೇ ಕಲಿಕೆ. ಕಲಿಕೆ ಅಂದರೆ ನುಡಿಗಿರುವ ಬರಹವನ್ನು ಕಲಿಯುವುದು ಮತ್ತು ಆ ಬರಹದ ಮೂಲಕ ಅರಿಮೆಗಳನ್ನು ಪಡೆಯುವುದು. ಈ ಅರಿಮೆಗಳೇ ಮುಂದೆ ಮಂದಿಯ ದುಡಿಮೆಯಲ್ಲಿ ಬಳಕೆಗೆ ಬರುತ್ತದೆ. ದುಡಿಮೆಯಿಂದ ಏಳಿಗೆ ಹೊಂದಬೇಕಾದರೆ ಕಲಿಕೆಯು ಚೆನ್ನಾಗಿ ನಡೆದಿರಬೇಕು.
ಬಾರತದ ಅರುಬರಹದ(constitution) ಮೊದಲಲ್ಲೇ ಇರುವ ಮುಕ್ಯ ಅಂಶಗಳಲ್ಲಿ ಕೂಡಣದ ಸಾಟಿತನವೂ(social equality; The preamble of India constitution contains the phrase: “Equality- social political and economic) ಒಂದು. ಕೂಡಣದಲ್ಲಿ ಸಾಟಿತನವಿದ್ದರೆ ಅದು ಆಳ್ಮೆ(politics) ಮತ್ತು ಹಣಕಾಸಿನ(economic) ನೆಲೆಗಳಲ್ಲಿ ಸಾಟಿತನ ಮೂಡುವುದಕ್ಕೆ ನೆರವಾಗುತ್ತದೆ. ಹಾಗಾಗಿ ಕೂಡಣದಲ್ಲಿಯ ಸಾಟಿತನವೇ ತಳಮಟ್ಟದ ಸಾಟಿತನ ಎಂದು ಹೇಳಲಡ್ಡಿಯಿಲ್ಲ. ಹಾಗಾದರೆ ಕೂಡಣದಲ್ಲಿ ಸಾಟಿತನವನ್ನು ತರುವುದು ಹೇಗೆ ಎಂಬ ಕೇಳ್ವಿ ಬರುವುದು ಸಹಜ. ಕೂಡಣದಲ್ಲಿ ಸಾಟಿತನ ಮೊಳಕೆಯಲ್ಲಿಯೇ ಬರುವಂತೆ ಮಾಡುವುದರಲ್ಲಿ ಮುಕ್ಯವಾದುದು ಕಲಿಕೆ ಇಲ್ಲವೆ ಕಲಿಕೆಯೇರ್ಪಾಟು. ಯಾವ ನಾಡಿನ ಕಲಿಕೆಯೇರ್ಪಾಟಿನಲ್ಲಿ ಎಲ್ಲ ಮಕ್ಕಳಿಗೆ ಒಂದೇ ತೆರನಾದ ಮತ್ತು ಒಂದೇ ಮಟ್ಟದ ಅಂದರೆ ಮೇಲುಕೀಳು ಇಲ್ಲದ ಕಲಿಕೆಯೇರ್ಪಾಟಿಗೆ ಅವಕಾಶವಿರುತ್ತದೆಯೋ ಅಲ್ಲಿ ತಾನಾಗಿಯೇ ಸಾಟಿತನ ಮೂಡುತ್ತದೆ. ಕಲಿಕೆ ಮಾಡಲು ಬರುವ ಮಕ್ಕಳು ಬೇರೆ ಬೇರೆ ಕೂಡಣದ, ಹಣಕಾಸಿನ ಹಿನ್ನಲೆಯಿಂದ ಬಂದವರಾಗಿರುತ್ತಾರೆ. ಬೇರೆ ಬೇರೆ ಪರಿಸರದಲ್ಲಿ ಬೆಳೆದ ಮಕ್ಕಳು ಬೆರೆಯುವ ತಾಣವೇ ಕಲಿಕೆಮನೆ (school). ಇಂತಹ ಕಲಿಕೆಮನೆಗಳಲ್ಲಿ ಎಲ್ಲ ಬಗೆಯ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಲಿಕೆಯೇರ್ಪಾಟು ರೂಪಿಸಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಹೇಗಿರುತ್ತದೆ, ಅವರ ಒಳನುಡಿಯು(dialect) ಎಂತಹುದು, ಅವರ ಒಳನುಡಿಗೂ ಬರಹದ ನುಡಿಗೂ(written Language) ಎಂತಹ ನಂಟುಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತಿದ್ದರೆ ಮಕ್ಕಳ ಕಲಿಕೆಯು ಚೆನ್ನಾಗಿಯು ಮತ್ತು ಬೇಗನೆ ಆಗುತ್ತದೆ, ಮಕ್ಕಳಲ್ಲಿ ಕುರಿಪು(concept)ಗಳನ್ನು ಹಿಡಿಯುವ ಮತ್ತು ಅದನ್ನು ಅರಿತುಕೊಳ್ಳುವ ಅಳವು ಹೆಚ್ಚುತ್ತದೆ. ಹಾಗಾದರೆ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತೆ ಮಾಡುವ ಬಗೆ ಹೇಗೆ ಎಂಬ ಕೇಳ್ವಿ ತಾನಾಗಿಯೇ ಏಳುತ್ತದೆ. ಇದಕ್ಕೆ ನುಡಿಯರಿಮೆಯ ಇಲ್ಲವೆ ಸೊಲ್ಲರಿಮೆಯ ಮೊರೆ ಹೋಗಬೇಕಾಗುತ್ತದೆ. ಈ ಅರಿಮೆಗಳಿಂದ ದೊರೆಯುವ ಕಂಡುಕೊಳ್ಳುವಿಕೆಗಳನ್ನು ಕಲಿಕೆಯಲ್ಲಿ ಮತ್ತು ಕಲಿಕೆಮನೆಗಳಲ್ಲಿ ಒರೆಗೆ ಹಚ್ಚಬಹುದು. ಹೀಗೆ ಒರೆಗೆ ಹಚ್ಚಿದಾಗ ಮಕ್ಕಳ ಕಲಿಕೆಯ ಮೇಲಾಗುವ ಒಳ್ಳೆಯ ಪರಿಣಾಮಗಳನ್ನು ಗಮನಿಸಬಹುದು. ಇಂತಹ ಒಂದು ಕಂಡುಕೊಳ್ಳುವಿಕೆಯೇ ’ಲಿಪಿ ಸುದಾರಣೆ’.
ಲಿಪಿ ಸುದಾರಣೆ ಮಾಡುವುದರಿಂದ ಕೂಡಣದಲ್ಲಿರುವ ಹೆಚ್ಚಿನ ಮಂದಿಗೆ ಅನುಕೂಲವಾಗಲಿದೆ. ಹೆಚ್ಚಿನ ಮಂದಿಯ ಓದಿನಲ್ಲಿ(reading) ಇರದ ಬರಿಗೆಗಳನ್ನು (ಯಾವ ಬರಿಗೆಗಳು ಎಂಬುದನ್ನು ಮೇಲೆ ತಿಳಿಸಲಾಗಿದೆ) ಕಯ್ಬಿಡುವುದರಿಂದ ಕಲಿಕೆಯು ಸುಲಬಗೊಳ್ಳುತ್ತದೆ. ಮಕ್ಕಳು ಬೇಡದಿರುವ ಈ ಬರಿಗೆಗಳನ್ನು ಕಲಿಯುವ ಬದಲು ಆ ಹೊತ್ತನ್ನು ಕುರಿಪು(concept or subject) ಗಳನ್ನು ಕಲಿಯಲು ಬಳಸಿಕೊಳ್ಳಬಹುದು. ಕಲಿಕೆಯ ಬೇರುಮಟ್ಟದ ಗುರಿಯೇ ಕುರಿಪುಗಳನ್ನು ಇಲ್ಲವೆ ಅರಿಮೆಗಳನ್ನು ತಿಳಿದುಕೊಳ್ಳುವುದು. ಬರಹವೆಂಬುದು ಅರಿಮೆಯನ್ನು ಪಡೆಯಲು ಸಾದನವಶ್ಟೆ ಹಾಗಾಗಿ ಬರಹವನ್ನು ಕಲಿತುಕೊಳ್ಳಲು ಹೆಚ್ಚು ಹೊತ್ತನ್ನು ಕಳೆದಶ್ಟು ಕಲಿಕೆಯು ಕುಂಟಿತವಾಗುವುದು. ಇದರಿಂದ ತಿಳಿಯುವುದೇನೆಂದರೆ ಆದಶ್ಟು ಬರಹ(ಲಿಪಿ)ವೆಂಬುದು ಸುಲಬವಾಗಿದ್ದರೆ ಒಳ್ಳೆಯದು.
ಲಿಪಿಸುದಾರಣೆ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೇರಿಸುವುದರಲ್ಲಿ ನೆರವಾಗುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ಅದರಲ್ಲೂ ಸಂಸ್ಕ್ರುತದ ಇಲ್ಲವೆ ಇಂಗ್ಲಿಶ್ ಪರಿಸರವನ್ನು ಹೊಂದಿರದ ಮಕ್ಕಳಿಗೆ ಲಿಪಿಸುದಾರಣೆ ಎಂಬುದು ಒಂದು ವರದಾನವಂತಿದೆ. ಇಂದಿಗೂ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಕ್ಕಳು ಕನ್ನಡದ ಒಯ್ಯುಗೆ(medium)ಯಲ್ಲಿಯೇ ಓದುತ್ತಿದ್ದಾರೆ. ಅಂದರೆ ಈ ಲಿಪಿಸುದಾರಣೆ ತರುವುದರಿಂದ ಹೆಚ್ಚಿನ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೆತ್ತಬಹುದು. ಲಿಪಿ ಸುದಾರಣೆ ತರುವುದರಿಂದ ಎಲ್ಲ ಮಕ್ಕಳಿಗೂ ಅರಿಮೆಯನ್ನು ಪಡೆಯುವಲ್ಲಿ ಸಮಾನ ಅವಕಾಶವನ್ನು ಕೊಟ್ಟಂತಾಗುತ್ತದೆ. ಈಗಿರುವ ಸಿಕ್ಕಲುಬರಹವು ಆಗ ತಡೆಗೋಡೆಯಾಗಿ ನಿಲ್ಲುವುದಿಲ್ಲ. ಎಲ್ಲರಿಗೂ ಅರಿಮೆಯನ್ನು ಪಡೆಯುವ ಸಮಾನ ಅವಕಾಶವನ್ನು ನೀಡುವುದೇ ಮಂದಿಯಾಳ್ವಿಕೆಯ ಇಲ್ಲವೆ ಅರುಬರಹದ ಗುರಿಗಳಲ್ಲಿ ಮುಕ್ಯವಾದುದು. ಮಂದಿಯಾಳ್ವಿಕೆಯ ಏರ್ಪಾಟೂಗಳು ಹೆಚ್ಚು ಹೆಚ್ಚು ಬರಹದ ಮೇಲೆ ನಿಂತಿರುವ ಕಾರಣದಿಂದ, ಬರಹ ಗೊತ್ತಿಲದವರಿಗೆ ಬದುಕುವುದೇ ಕಶ್ಟವಾಗುವ ಈ ಹೊಸಗಾಲದಲ್ಲಿ ಲಿಪಿ ಸುದಾರಣೆ ಮಾಡುವುದರಿಂದ ನಿಕ್ಕಿಯಾಗಿ ಕೂಡಣದಲ್ಲಿ ಸಾಟಿತನವನ್ನು ತರಬಹುದು, ಆಗಲೆ ಮಂದಿಯಾಳ್ವಿಕೆಗೂ ಒಂದು ಬೆಲೆ ಬರುವುದು.
ಹೊಸ ಪದಗಳ ಪಟ್ಟಿ:-
ಕೂಡಣ - Society
ನುಡಿಯರಿಮೆ - Linguistics
ಸೊಲ್ಲರಿಮೆ - Grammar
ಕೂಡಣದರಿಮೆ - Sociology
ಅರುಬರಹ - Written Constitution(of a Nation)
ಒಯ್ಯುಗೆ - Medium
ಮಂದಿಯಾಳ್ವಿಕೆ - Democracy
ಆಳ್ಮೆ - Politics
ಹಣಕಾಸು - Economics
ಒಳನುಡಿ - Dialect
ಬರಹದ ನುಡಿ - Written Language
ಕುರಿಪು - Concept /Subject.
ಕಲಿಕೆಮನೆ - School
Photo Courtesy:
UWIC