ಸೋಮವಾರ, ಜನವರಿ 23, 2012

ಬೈರಪ್ಪನವರೂ, ಸಂಸ್ಕ್ರುತವೂ




ಬೈರಪ್ಪನವರು ಮತ್ತೆ ಕನ್ನಡ,ಸಂಸ್ಕ್ರುತ ಮತ್ತು ಕನ್ನಡಿಗರ ಬಗ್ಗೆ ತಮ್ಮ ಅಣಿಮುತ್ತುಗಳನ್ನು ಉದುರಿಸಿದ್ದಾರೆ(ಮೇಲಿನ ಕನ್ನಡಪ್ರಬದ ವರದಿಯನ್ನು ನೋಡಿ). ಅದಕ್ಕೆ ಮತ್ತೆ ಇದರ ಬಗ್ಗೆ ಬರೆಯಲೇಬೇಕಾಗಿದೆ.

ಅಣಿಮುತ್ತುಗಳು ಹೀಗಿವೆ:-

"ಹೈಸ್ಕೂಲ್ ಪಟ್ಯದಲ್ಲಿ ಒಂದು ಬಾಶೆಯಾಗಿ ಸಂಸ್ಕ್ರುತವನ್ನು ಕಡ್ಡಾಯಗೊಳಿಸಬೇಕು"
ಮಂದಿಯಾಳ್ವಿಕೆ(democracy) ಇರುವ ನಮ್ಮ ನಾಡಿನಲ್ಲಿ ಹೀಗೆ ಕಡ್ಡಾಯವಾಗಿ ಒಂದು ಬಾಶೆಯನ್ನು ಹೇರುವುದು ಎಶ್ಟು ಸರಿ? ಅದೂ ಸಾಮಾನ್ಯ ಮಂದಿಗೆ ದೂರವಾಗಿರುವ ನುಡಿ ಮತ್ತು ಮಾತಿನಲ್ಲಿ ಬಳಕೆಯಲ್ಲಿಲ್ಲದ ನುಡಿ. ಇದರಿಂದ ಎಶ್ಟು ಮಂದಿಗೆ ಮುಂದೆ ಅವರ ಬದುಕಿನಲ್ಲಿ ಬಳೆಕೆಗೆ ಬರುತ್ತೆ. ಒಂದು ವೇಳೆ ಬಲವಂತವಾಗಿ ಹೇರಿದರೆ ಅವರು ಆ ನುಡಿಯನ್ನು( ಸಂಸ್ಕ್ರುತವನ್ನು) ಸರಿಯಾಗಿ ಕಲಿಯಬಲ್ಲರೆ? ಇದರ ಬಗೆಗಿನ ಅರಕೆಯ ಓದು( research study) ಆಗಿದಿಯೆ? ಆಗಿದ್ದರೆ ಆ ’ಸೀಳ್ನೋಟ’(analysis) ಏನು ಹೇಳುತ್ತದೆ ..ಇವುಗಳ ಬಗ್ಗೆ ಬೈರಪ್ಪನವರು ತಿಳಿದು ಈ ಮಾತುಗಳನ್ನು ಆಡಿದ್ದಾರೆಯೆ?. ಯಾವುದೇ ವಸ್ತುವನ್ನು ಇಲ್ಲವೆ ವಿಶಯವನ್ನು ಮಂದಿಯ ಮೇಲೆ ಕಡ್ಡಾಯಗೊಳಿಸುವುದು (ಆದರಲ್ಲೂ ಕ್ಲಿಶ್ಟವಾದ ಸಂಸ್ಕ್ರುತದಂತಹ ಬಾಶೆಯನ್ನು) ಮಂದಿಯಾಳ್ವಿಕೆಯ ಬಯಕೆ/ಆಶಯಗಳಿಗೆ ಹೊಂದುವುದಿಲ್ಲ.


"ಸಂಸ್ಕ್ರುತ ಬಾಶೆ ಕನ್ನಡಕ್ಕೆ ಪೂರಕ"
ಹೇಗೆ ಪೂರಕ? ಕನ್ನಡ ಒಂದು ದ್ರಾವಿಡ ನುಡಿ. ಸಂಸ್ಕ್ರುತ ಒಂದು ಇಂಡೊ-ಯೂರೋಪಿಯನ್ ನುಡಿ ಎಂದು ನುಡಿಯರಿಗರು ಸಾರಿ ಸಾರಿ ಹೇಳಿದ್ದಾರೆ. ಸಂಸ್ಕ್ರುತದಿಂದ ಪದಗಳನ್ನು ಎರವಲು ಪಡೆದುದರಿಂದ ಬೈರಪ್ಪನವರು ಈ ಮಾತನ್ನು ಹೇಳಿದ್ದರೆ ಈ ಮಾತು ಪರ್ಶಿಯನ್ ಮತ್ತು ಇಂಗ್ಲಿಶಿಗೂ ಒಪ್ಪುತ್ತದೆ.
ಮೇಲಿನ ದಾಟಿಯಲ್ಲೇ ’ಇಂಗ್ಲಿಶ್ ಬಾಶೆ ಕನ್ನಡಕ್ಕೆ ಪೂರಕ’ ಎಂದು ಇನ್ನೊಬ್ಬರು ಹೇಳಬಹುದು. ಹೀಗೆ(ಇಂಗ್ಲಿಶ್ ಬಾಶೆ ಕನ್ನಡಕ್ಕೆ ಪೂರಕ)ಹೇಳುವುದು ಎಶ್ಟು ಸುಳ್ಳೊ/ಪೊಳ್ಳೋ ಅಶ್ಟೆ ಸುಳ್ಳು/ಪೊಳ್ಳು ಸಂಸ್ಕ್ರುತ ಕನ್ನಡಕ್ಕೆ ಪೂರಕ ಎನ್ನುವ ಮಾತು.


"ಸಂಸ್ಕ್ರುತ ಅದ್ಯಯನ ಮಾಡಿದರೆ ಕನ್ನಡ ಗಟ್ಟಿಯಾಗುತ್ತದೆ"
ಇದನ್ನು ಕೇಳಿದಾಗ ನಮ್ಮ ಕಡೆಯ ಗಾದೆ/ನಾಣ್ಣುಡಿಯೊಂದು ನೆನಪಿಗೆ ಬಂತು - "ಎತ್ತಿಗೆ ಜರ ಬಂದ್ರೆ ಎಮ್ಮೆಗೆ ಬರೆ ಎಳೆದರಂತೆ’. ಸಂಸ್ಕ್ರುತದ ಅದ್ಯಯನ ಮಾಡಿದರೆ ಆ ಬಾಶೆ ಚೆನ್ನಾಗಿ ಒಲಿಯುತ್ತದೆಯೆ ಹೊರತು ಕನ್ನಡವು ಹೇಗೆ ಗಟ್ಟಿಯಾಗುತ್ತದೆ? ಬದಲಾಗಿ ಎಚ್ಚರವಹಿಸದಿದ್ದರೆ ಸಂಸ್ಕ್ರುತದ ಪ್ರಬಾವದಿಂದ ಅವರ ಕನ್ನಡವು ಹೆಚ್ಚು ಹೆಚ್ಚು ಕ್ರುತಕಗೊಳ್ಳಬಹುದು. ಸಂಸ್ಕ್ರುತದ ಎಲ್ಲ ಕಟ್ಟಲೆಗಳು ಕನ್ನಡಕ್ಕೂ ಇರಬೇಕೆನ್ನುವ ತಪ್ಪು ತಿಳಿವಳಿಕೆ ಮೂಡಬಹುದು. ಈ ಒಂದು ತಪ್ಪು ತಿಳಿವಳಿಕೆಯಿಂದಲೇ ಕನ್ನಡದ ಸೊಲ್ಲರಿಮೆಯನ್ನು/ವ್ಯಾಕರಣವನ್ನು ವಿವರಿಸುವಲ್ಲಿ ಈಗಾಗಲೆ ಹಲವು ತಪ್ಪುಗಳನ್ನು ಮಾಡಲಾಗಿದೆ. ಹಾಗಾಗಿ ಸಂಸ್ಕ್ರುತ ಅದ್ಯಯನ ಮಾಡುವುದರಿಂದ ಸಂಸ್ಕ್ರುತ ಚೆನ್ನಾಗಿ ಕಲಿಯಬಹುದೇ ಹೊರತು ಅದಕ್ಕಿಂತ ತೀರ ಬೇರೆಯಾಗಿರುವ(ಹಲವು ನೆಲೆಗಳಲ್ಲಿ ಅಂದರೆ ಸೊಲ್ಲರಿಮೆ, ನುಡಿಯರಿಮೆಯ ನೆಲೆಗಳಲ್ಲಿ) ಕನ್ನಡದ ಮೇಲೆ ಹಿಡಿತ ಪಡೆಯಲಾಗದು.

"ಶುದ್ದ ಕನ್ನಡ ಬರೆಯಲು, ಮಾತನಾಡಲು ಸಂಸ್ಕ್ರುತ ನೆರವಾಗುತ್ತದೆ"
ಯಾವುದು ಶುದ್ದ ಕನ್ನಡ ಎಂಬುದನ್ನು ಅವರು ವಿವರಿಸಿಲ್ಲವಾದುದರಿಂದ ಇದರ ಬಗ್ಗೆ ಹೇಳುವುದು ಕಶ್ಟ. ಸಂಸ್ಕ್ರುತ ಬೆರೆತ ಕನ್ನಡವನ್ನೇ ಶುದ್ದ ಕನ್ನಡ ಎಂದು ಬೈರಪ್ಪನವರು ತಿಳಿದಂತಿದೆ. ಹಾಗಿದ್ದರೆ ಕನ್ನಡಿಗರ ಮಾತಿನಲ್ಲಿ ಹೆಚ್ಚು ಹೆಚ್ಚು ಹಾಸುಹೊಕ್ಕಾಗಿರುವುದು ಅಣ್ಣೆಗನ್ನಡ/ಅಚ್ಚಗನ್ನಡವೇ ಹೊರತು ’ಶುದ್ದಗನ್ನಡ’ವಲ್ಲ.
ಹೆಚ್ಚು ಮಂದಿಗೆ ಬೈರಪ್ಪನವರು ಹೇಳುವ ’ಶುದ್ದಗನ್ನಡ’ ಅಂದರೆ ಸಂಸ್ಕ್ರುತ ಬೆರೆತ ಕನ್ನಡ ಬೇಕಾಗಿಲ್ಲ ಯಾಕಂದರೆ ಅದು ಹೆಚ್ಚು ಮಂದಿಯ ಬದುಕಿನಲ್ಲಿ ಅದು ಅಶ್ಟು ಬಳಕೆಗೆ ಬರುವುದಿಲ್ಲ.

"ಕಾರಣಾಂತರದಿಂದ ಸಂಸ್ಕ್ರುತ ಹೆಚ್ಚು ಕಲಿಯಲು ಆಗಲಿಲ್ಲ. ಆಗಿದ್ದರೆ ಇನ್ನಶ್ಟು ಉತ್ತಮವಾಗಿ ಬರೆಯುತ್ತಿದ್ದೆ"
ಸದ್ಯ...ಇವರು ಸಂಸ್ಕ್ರುತ ಹೆಚ್ಚು ಕಲಿಯದೇ ಇದ್ದುದು ಒಳ್ಳೆಯದೇ ಆಯಿತು. ಇಲ್ಲ ಅಂದರೆ ಹಾಸನದ ಆಡುಗನ್ನಡ ಸೊಂಪಾಗಿ ಬಳಕೆಯಾಗಿರುವ ’ ನಾಯಿನೆರಳು’, ’ಗ್ರುಹಬಂಗ’ , ’ಜಲಪಾತ’ ಎಂಬ ಕಾದಂಬರಿಗಳು ಅಶ್ಟು ಮಂದಿಯೊಲವನ್ನು ಗಳಿಸುತ್ತಿರಲಿಲ್ಲ. ಒಂದು ವೇಳೆ ಬೈರಪ್ಪನವರು ಇದನ್ನೆಲ್ಲ ಹೆಚ್ಚು ಸಂಸ್ಕ್ರುತ ಬೆರೆತ ಕನ್ನಡದಲ್ಲಿ ಬರೆದಿದ್ದರೆ ಶತಾವದಾನಿ ರಾ.ಗಣೇಶ್ ಅವರು ಎಶ್ಟು ಜನರನ್ನು ತಲುಪಿದ್ದಾರೊ ಅಶ್ಟೆ ಕಡಿಮೆ ಮಂದಿಯನ್ನು ಬೈರಪ್ಪನವರು ತಲುಪಿರುತ್ತಿದ್ದರು.