ಗುರುವಾರ, ನವೆಂಬರ್ 15, 2018

ಸರಿತಪ್ಪರಿಮೆ

ನಮ್ಮ ಸುತ್ತ ಆಗುತ್ತಿರುವ ಆಗುಹಗಳು, ವಾದಗಳು, ವಿವಾದಗಳು ಮತ್ತು ಸರಿ/ತಪ್ಪುಗಳ ಬಗ್ಗೆ ಮಂದಿಯ ಮಾತುಕತೆಗಳನ್ನು ನೋಡಿದರೆ ನನಗೆ ಹೀಗನ್ನಿಸುತ್ತಿದೆ:-

ಎಲ್ಲ ಕೂಡಣಗಳಲ್ಲೂ/ಬುಡಕಟ್ಟುಗಳಲ್ಲೂ ತನ್ನಿಂತಾನೆ ಅರಿವಿಲ್ಲದೆಯೆ ಸರಿತಪ್ಪರಿಮೆ (ಮೊರಾಲಿಟಿ) ಬೆಳೆದು ಬಂದಿರುತ್ತದೆ. ಅಂದರೆ ಮನುಶ್ಯ ಬೇರೆ ಬೇರೆ ಸಂದರ್ಬಗಳಿಗೆ ಒಡ್ಡಿಕೊಂಡಾಗ ಬೇರೆ ಬೇರೆ ತೆರನಾದ ಕಲಿಕೆಗಳು ಅವಳಿಗೆ/ಅವನಿಗೆ ಆಗಿರುತ್ತದೆ. ಈ ಎಲ್ಲ ಕಲಿಕೆಯಿಂದ ಸರಿತಪ್ಪರಿಮೆ ತನ್ನನ್ನು ತಿದ್ದಿಕೊಳ್ಳುತ್ತಾ ಬೆಳೆದು ಬಂದಿದೆ.

ಆದರೆ ೨೦ನೇ ನೂರೇಡಿನಲ್ಲಿ ಪ್ರಪಂಚದ ಮಟ್ಟದಲ್ಲಿ ಹಲವು ದೊಡ್ಡ ದೊಡ್ಡ ಕಾದಾಟಗಳಾಗಿ ತುಂಬ ಸಾವು ನೋವು ಉಂಟಾದವು. ಹಿಂದೆಂದು ಕಂಡರಿಯದ ಅಂಡಲೆಯನ್ನು (ಹಿಂಸೆಯನ್ನು) ಎಸಗಲಾಯಿತು. ಈ ಪಾಡಿನಿಂದ ಹೊರಬರಲು ಹಲವು ಚಿಂತಕರು ಪ್ರಪಂಚದ ಮಟ್ಟದಲ್ಲಿ (ಎಂದೂ ಬದಲಾಗದ) ಸರಿತಪ್ಪರಿಮೆ ಎಂಬುದು ಇದೆಯೇ ಎಂದು ಯೋಚಿಸಲು ತೊಡಗಿದರು.

ಆಗ ಹುಟ್ಟಿಕೊಂಡಿದ್ದೇ ಇಲ್ಲವೆ ಮುನ್ನೆಲೆಗೆ ಬಂದಿದ್ದೆ ಲಿಬರಲ್ ಚಿಂತನೆ. ಅಂದರೆ ವ್ಯಕ್ತಿಯ ಮಟ್ಟದ ಗನತೆ ಮತ್ತು ವ್ಯಕ್ತಿಯ ಮಟ್ಟದ ಸ್ವಾತಂತ್ರ್ಯ ಕ್ಕೆ ಹೆಚ್ಚಿನ ಮನ್ನಣೆ ಕೊಡುವುದು. ಇವುಗಳು ಎಲ್ಲ ಹೊತ್ತಿಗೂ ಸಲ್ಲುವ ಬೆಲೆಗಳು(ಮೌಲ್ಯಗಳು) ಎಂಬುದು ಈ ಚಿಂತನೆಯ ಹುರುಳು. ಈ ಚಿಂತನೆಯ ಗುರಿ ಅಂಡಲೆಯನ್ನು ಇಲ್ಲವಾಗಿಸಸುವುದು. ಇದನ್ನು ಎತ್ತಿಹಿಡಿಯುವ ಏರ್ಪಾಟು ಇದ್ದರೆ ಇನ್ನು ಚೆಂದವೆಂದೂ ಹೆಚ್ಚಿನ ನಾಡುಗಳು ಇಂತಹ ಬೆಲೆಗಳ ಅಡಿಪಾಯ ಹಾಕಿಕೊಂಡು ಸಯ್ಪು ಬರಹವನ್ನು ( ಸಂವಿದಾನ) ಮಾಡಿಕೊಂಡವು. ಆದ್ದರಿಂದ ಇಂತಹ ಒಂದು ಸರಿತಪ್ಪರಿಮೆಯನ್ನು ಲಿಬರಲ್ ಸರಿತಪ್ಪರಿಮೆ/ಸಯ್ಪುಬರಹದ ಸರಿತಪ್ಪರಿಮೆ ಎಂದು ಮುಂದೆ ಬೆಳೆಸಲಾಯಿತು.

ಇಲ್ಲಿ ಗಮನಿಸಬೇಕಾದುದು, ಲಿಬರಲ್ ಸರಿತಪ್ಪರಿಮೆ ಎಂಬುದು ಕ್ರುತಕವಾದುದು. ಅದು ಹುಟ್ಟುವುದಕ್ಕೆ ಮುಂಚೆಯೇ ಕೂಡಣಗಳಲ್ಲಿ 'ಮಂದಿಯ ಸರಿತಪ್ಪರಿಮೆ' ಎಂಬುದು ಬೆಳೆದು ಬಂದಿತ್ತು. ಅಲ್ಲದೆ ಮಂದಿಯ ಸರಿತಪ್ಪರಿಮೆ ಎಂಬುದು ಸಹಜವಾಗಿ ಬೆಳೆದು ಬಂದಿದೆ.

ಇದರಲ್ಲಿ ಕ್ರುತಕ ಎಂದ ಕೂಡಲೆ ಲಿಬರಲ್ ಸರಿತಪ್ಪರಿಮೆಯನ್ನು ಅಲ್ಲಗಳೆಯುವಂತಿಲ್ಲ ಮತ್ತು ಸಹಜ ಎಂದ ಕೂಡಲೆ ಮಂದಿಯ ಸರಿತಪ್ಪರಿಮೆಯನ್ನು ಹೊಗಳಬೇಕಾಗಿಲ್ಲ. ಇವೆರಡಕ್ಕೂ ತಮ್ಮ ತಮ್ಮದೇ ಆದ ಪರಿಚೆಗಳಿವೆ. ತಮ್ಮ ತಮ್ಮ ಹೆಗ್ಗಳಿಕೆ ಮತ್ತು ಮಿತಿಗಳೂ ಇವೆ.

ಆದರೆ ಈಗ ತೊಂದರೆಯಾಗಿರುವುದು ಹೆಚ್ಚಿನೆಡೆಗಳಲ್ಲಿ ಮಂದಿಯ ಸರಿತಪ್ಪರಿಮೆಗೂ ಮತ್ತು ಲಿಬರಲ್ ಸರಿತಪ್ಪರಿಮೆಗೂ ತಿಕ್ಕಾಟ ಶುರುವಾಗಿದೆ. ಎರಡೂ ಸರಿತಪ್ಪರಿಮೆಗಳು 'ತಾನು ಮೇಲು' ಎಂದು ಮೇಲಾಟಕ್ಕೆ ಇಳಿದಂತೆ ಕಂಡುಬರುತ್ತಿದೆ. ಈ ಮೇಲಾಟದಿಂದ ಮಂದಿಯು ಗೊಂದಲಕ್ಕೆ ಒಳಗಾದಂತೆ ಕಂಡುಬರುತ್ತಿದ್ದಾರೆ.

ಮಂಗಳವಾರ, ನವೆಂಬರ್ 06, 2018

ವಿವಿದತೆ ಎಂದರೇನು? ಅದರ ಓದಿನಿಂದ ಆಗುವ ಬಳಕೆಗಳೇನು?

ವಿವಿದತೆ ಎಂದರೇನು? ಅದರ ಓದಿನಿಂದ ಆಗುವ ಬಳಕೆಗಳೇನು?
=======================================
ಬಾರತ ಎಂಬುದು ತುಂಬ ವಿವಿದತೆಯಿಂದ ಕೂಡಿದ ನೆಲ ಇಲ್ಲವೆ ಬೂಬಾಗ. ಈ ನೆಲದ ಮಟ್ಟದಲ್ಲೇ ಹಲವು ವಿವಿದತೆಗಳನ್ನು ನಾವು ಕಾಣಬಹುದು. ಹಿಮಾಲಯದ ಮಂಜಿನಿಂದ ಕನ್ಯಾಕುಮಾರಿಯ ಕಡಲ್ಕರೆಯವರೆಗೂ ಬೂವಿವಿದತೆ, ಪ್ರಾಣಿಗಳಲ್ಲಿ ವಿವಿದತೆ, ಮನುಶ್ಯರ ಮಯ್ಯಲ್ಲಿ ವಿವಿದತೆ, ನಡೆ-ನುಡಿಯಲ್ಲಿ ವಿವಿದತೆ, ತಿಂಡಿ-ತಿನುಸುಗಳಲ್ಲಿ ವಿವಿದತೆ, ಬಣ್ಣಗಳಲ್ಲಿ ವಿವಿದತೆ, ಆಚರಣೆಗಳಲ್ಲಿ ವಿವಿದತೆ, ನಂಬಿಕೆಗಳಲ್ಲಿ ವಿವಿದತೆ, ಬೆಳೆ/ಮಳೆಗಳಲ್ಲಿ ವಿವಿದತೆ, ಗಿಡ-ಮರಗಳ ವಿವಿದತೆ. ಇವೆಲ್ಲ ಹೊರಗೆ ಕಾಣುವ ವಿವಿದತೆಗಳು. ಇದಲ್ಲದೆ ಒಳಗಿನ ವಿವಿದತೆಗಳು ಅಂದರೆ ಚಿಂತನೆಗಳು ಕೂಡ ಇವೆ. ಬೇರೆ ಬೇರೆ ಸಂಪ್ರದಾಯಗಳು, ತತ್ವ ಶಾಸ್ತ್ರದ ಕವಲುಗಳು ಮತ್ತು ಅರಿವನ್ನು ಗಳಿಸುವ ಬೇರೆ ಬೇರೆ ದಾರಿಗಳು, ಬೇರೆ ಬೇರೆ ನೋಟಗಳು. ಹೀಗೆ ವಿವಿದತೆಯೇ ಮಯ್ವೆತ್ತಂತೆ ಈ ಬೂಬಾಗ ಇಲ್ಲವೆ ಜನಪದಗಳು(ಜನಪದ ಅಂದರೆ ಜನ ಮತ್ತು ಅವರು ಓಡಾಡುವ ಎಡೆ) ಕಂಡು ಬರುತ್ತದೆ. ಈ ವಿವಿದತೆಯು ಎಶ್ಟೊ ಕಡೆಗೆ ವೈರುದ್ಯತೆಗೂ ಎಡೆ ಮಾಡಿಕೊಡುತ್ತದೆ. ಅಂದರೆ ಕೆಲವು ಕಡೆ ಯಾವುದು ಒಪ್ಪಿತವೊ ಇನ್ನು ಕೆಲವು ಕಡೆ ಅದು ಒಪ್ಪಿತವಾಗುವುದಿಲ್ಲ.

ಹೀಗಿರುವಾಗ ಇಡೀ ಬಾರತಕ್ಕೆ ಕಾಮನ್ ಆಗಿರುವ ಯಾವುದಾದರೂ ಒಂದು ಅಂಶ ಇದೆಯೇ ಎಂಬ ಕೇಳ್ವಿ ಕೇಳಿಕೊಂಡರೆ ಅದಕ್ಕೆ ಉತ್ತರಿಸುವುದು ತುಂಬ ಕಶ್ಟವಾದ ಕೆಲಸ. ಯಾವುದಾದರೂ ಒಂದು ವಿಶಯವನ್ನು ತೆಗೆದುಕೊಂಡು ಇದು ಬಾರತಕ್ಕೆಲ್ಲ ಕಾಮನ್ ಎಂದೊಡನೆ ಅದನ್ನು ಯಾವುದಾದರೂ ಎತ್ತುಗೆ ಕೊಟ್ಟು ಅಲ್ಲಗಳೆಯಬಹುದು. ಆದರೆ ಕೆಲವು ವಿಶಯಗಳು ಬಾರತದ ಮಟ್ಟದಲ್ಲದೆ ವಿಶ್ವದ ಮಟ್ಟದಲ್ಲೂ ಕಾಮನ್ ಆಗಿರುವ ಅಂಶಗಳು ಇವೆ. ಅಂದರೆ ಮನುಶ್ಯರಿಗೆ ಇರುವುದು ಎರಡು ಕಯ್, ಎರಡು ಕಾಲು ಮತ್ತು ಒಂದು ಮೂಗು. -ಹೀಗೆ. ಆದರೆ ಇಂತಹ ಪ್ರಶ್ನೆಗಳಿಂದ ಪ್ರಪಂಚದಲ್ಲಿರುವ ಬೇರೆ ಬೇರೆ ವಿಶೇಶತೆಗಳೇನು ಎಂಬುದು ನಮಗೆ ತಿಳಿಯುವುದಿಲ್ಲ. ವಿಶೇಶತೆಗಳನ್ನು ತಿಳಿಯದಿರುವುದು ಅಂದರೇನು? ಪ್ರಪಂಚವನ್ನು ಇನ್ನು ಸರಿಯಾಗಿ ಇಲ್ಲವೆ ಆಳವಾಗಿ ತಿಳಿದುಕೊಂಡಿಲ್ಲ ಎಂಬುದೇ ಆಗಿದೆ.

ಎತ್ತುಗೆಗೆ, ಕನ್ನಡ ನುಡಿಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾದರೆ ಅದು ಹೇಗೆ ಹಿಂದಿ ಇಲ್ಲವೆ ತಮಿಳಿಗಿಂತ ಬೇರೆಯಾಗಿದೆ ಎಂಬುದೇ ಆಗಿದೆ. ಆದರೆ ಕನ್ನಡ ಮತ್ತು ತಮಿಳಿನಲ್ಲಿ ಹಲವು ಕಾಮನ್ ಎನಿಸಬಹುದಾದ ಹೋಲಿಕೆಗಳಿವೆ. ಆದರೆ ಇಂತಹ ಹೋಲಿಕೆಯಿಂದ ಕನ್ನಡದ ಇಲ್ಲವೆ ತಮಿಳಿನ ಅನನ್ಯತೆಯನ್ನು ಎತ್ತಿ ಹಿಡಿಯಲಾಗುವುದಿಲ್ಲ. ಇನ್ನು ತಿಳಿಯಾಗಿ ಹೇಳಬೇಕೆಂದರೆ ವಿವಿದತೆಯನ್ನು ಅರಿಯದೆ ಅನನ್ಯತೆಯನ್ನು ತಿಳಿಯಲು ಸಾದ್ಯವೇ ಇಲ್ಲ. ಇದನ್ನೇ ಪ್ರಾಣಿಗಳ ವಿಶಯದಲ್ಲೂ ಹೇಳಬಹುದು. ಹುಲಿ ಬೆಕ್ಕಿಗಿಂತ ಹೇಗೆ ಬೇರಾಗಿದೆ ಎಂಬುದನ್ನು ಆಳವಾಗಿ ಅರಿತುಕೊಂಡಾಗ ಹುಲಿಯ/ ಬೆಕ್ಕಿನ ಅನನ್ಯತೆಯನ್ನು ಸರಿಯಾಗಿ ತಿಳಿದುಕೊಳ್ಳಬಹುದು.

ಅನನ್ಯತೆಯನ್ನು ತಿಳಿದುಕೊಳ್ಳುವ ಗುರಿಯೇನು ಮತ್ತು ಅದರಿಂದಾಗುವ ಬಳಕೆಗಳೇನು ಎಂಬ ಕೇಳ್ವಿ ತಾನಾಗಿಯೇ ಮೂಡುತ್ತದೆ. ನಮ್ಮ ಸುತ್ತಲೂ ಇರುವ ಹಲವು ತೊಂದರೆಗಳಿಗೆ ನಾವು ಬಗೆಹರಿಕೆಗಳನ್ನು ಕಂಡುಕೊಳ್ಳಬೇಕಾಗುತ್ತದೆ. ಯಾವುದೇ ವಿಶಯವಾಗಲಿ ಗೊಂದಲವಿಲ್ಲದ ರೀತಿಯಲ್ಲಿ ತಿಳಿದುಕೊಳ್ಳಬೇಕು ಎಂದರೆ ಆ ವಿಶಯದ ಇಲ್ಲವೆ ತೊಂದರೆಯ ಅನನ್ಯತೆಯನ್ನು ತಿಳಿದುಕೊಳ್ಳುವುದೇ ಆಗಿದೆ. ಯಾವುದೇ ತೊಂದರೆಗೆ ಬಗೆಹರಿಕೆಗಳನ್ನು ಕಂಡುಕೊಳ್ಳುವುದಕ್ಕೆ ಅಡಿಪಾಯ ಆ ತೊಂದರೆಯ ಸ್ವರೂಪವೇನು ಎಂಬುದೇ ಆಗಿದೆ. ಇಲ್ಲವೆ ಆ ತೊಂದರೆಗೆ ಸಂಬಂದಪಟ್ಟ ವಿಶಯಗಳ ಸ್ವರೂಪವೇನು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೀಗೆ ಅನನ್ಯತೆಯನ್ನು ತಿಳಿದುಕೊಳ್ಳದೆ ಕಂಡುಕೊಂಡ ಬಗೆಹರಿಕೆಗಳು ದಾರಿ ತಪ್ಪಿಸುತ್ತವೆಯೇ ಹೊರತು ಸರಿಯಾದ ದಿಕ್ಕಿನತ್ತ ನಮ್ಮನ್ನು ಕೊಂಡೊಯ್ಯುವುದಿಲ್ಲ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹೇಳಬೇಕೆಂದರೆ ಎಲ್ಲೆಲ್ಲಿ ವಿವಿದತೆಯನ್ನು ಸರಿಯಾಗಿ ಅರಿತುಕೊಳ್ಳದೆ ಆಳ್ವಿಕೆಗಳು ಒತ್ತಾಯಪೂರ್ವಕವಾಗಿ ಏಕತೆಯನ್ನು ಹೇರಲು ಹೊರಟಿದ್ದರೊ ಅಲ್ಲೆಲ್ಲ ಅಂತಹ ಮೊಗಸು ಅಂಡಲೆ(ಹಿಂಸೆ)ಯಲ್ಲಿ ಕೊನೆಗೊಂಡಿದೆ. ಕೊನೆಗೆ ಅದು ತಿರುಗುಬಾಣವಾಗಿ ಅಂತಹ ಆಳ್ವಿಕೆಗಳನ್ನು ಕೊನೆಗಾಣಿಸಲಾಗಿದೆ.
ಆದ್ದರಿಂದ ವಿವಿದತೆಯನ್ನು ಅರಿಯುವುದು ಮತ್ತು ನಮ್ಮ ತೊಂದರೆಗಳಿಗೆ ವಿವಿದತೆಯ ಚೌಕಟ್ಟಿನಲ್ಲಿ ಬಗೆಹರಿಕೆಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು.