ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸುವುದರಿಂದ ಪದಗಳ ಹಿಂದೆ ಅವಿತು ಮಾತಾಡುವ ಇಲ್ಲವೆ ಬರೆಯುವ ಚಾಳಿ ಹೆಚ್ಚಾಗುತ್ತಿದೆ/ಹೆಚ್ಚಾಗಿದೆ. ಎಶ್ಟೊ ಸಂಸ್ಕ್ರುತ ಪದಗಳನ್ನು ಹಿಂದೆ ಮುಂದೆ ನೋಡದೆ ಕುರುಡು ಕುರುಡಾಗಿ ಬಳಸುವುದರಿಂದ ನಮ್ಮ ಅರಿವಿನ ಅಳವಿಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ ಅಂತ ಅನಿಸುತ್ತದೆ. ಇದು ಬರೀ ಕನ್ನಡ-ಸಂಸ್ಕ್ರುತದ ಕೇಳ್ವಿಯಲ್ಲ ಬದಲಾಗಿ ಕನ್ನಡಿಗರ ಅರಿವಿನ ಕೇಳ್ವಿ. ಅರಿವನ್ನು ಹಿಗ್ಗಿಸಿಕೊಳ್ಳುವ ಕೇಳ್ವಿ.
ಎತ್ತುಗೆಗೆ: 'ಸಯ್-ಪು' ಬದಲು 'ನೀತಿ' ಎಂಬ ಪದ ಬಳಕೆಯಲ್ಲಿದೆ. 'ಸಯ್'(ಸೈ) ಎಂಬ ಪದ ಆಡುನುಡಿಯಲ್ಲಿ 'ಸರಿ'ಯಾಗಿರುವುದಕ್ಕೆ ಬಳಸುವ ಪದ (ಅವನು ಮಾಡಿದ್ದು ಸಯ್, ಅವನ್ ಎಲ್ಲಾದುಕ್ಕು ಸಯ್). ಆದರೆ 'ನೀತಿ' ಎಂಬ ಪದವನ್ನು ಒಡೆದು ತಿಳಿದುಕೊಳ್ಳುವ ಅಳವು ನಮಗಿಲ್ಲ ಯಾಕಂದರೆ ಅದು ಹೆರನುಡಿಯಿಂದ ಬಂದದ್ದು.