ಶನಿವಾರ, ಮೇ 30, 2020

'ಮಾಡುತ್ತೇನೆ' - ಇದನ್ನು ಹೇಗೆ ಬಿಡಿಸುವುದು?

ಈಗಾಗಲೆ ಬೇರೆ ಬೇರೆ ನುಡಿಯರಿಗರು ಇದನ್ನು ಹೇಗೆ ಬಿಡಿಸಿದ್ದಾರೆ ಎಂಬುದನ್ನು ನೋಡೋಣ

ರಾ.ನರಸಿಂಹಾಚಾರ‍್ಯ :
   ಮಾಡು+ಉತು/ಉತ್ತ+ಇಹೆನು = ಮಾಡುತಿಹೆನು/ಮಾಡುತ್ತಿಹೆನು  [History of Kannada Language,1990]

ಆದ್ದರಿಂದ ಮಾಡುತ್ತೇನು ಎಂಬುದು ಮಾಡುತ್ತಿಹೆನು ಎಂಬುದರ ಆಡುಮಾತಿನ ರೂಪ ಎಂದಶ್ಟೇ ಹೇಳಿದ್ದಾರೆ. ಮಾಡುತ್ತೇನೆ [ಮಾಡುತ್ತೇನು+ಎ] ಎಂಬುದರಲ್ಲಿ ಇರುವ ಕೊನೆಯ 'ಎ'ಕಾರ ಒತ್ತಿ ಹೇಳುವುದಕ್ಕೋಸ್ಕರ ಎಂದಶ್ಟೇ ಹೇಳಿದ್ದಾರೆ.

ಬದ್ರಿರಾಜು ಕೆ.ಮೂರ್ತಿ:
   ಮಾಡ್+ಉತ್ತ್+ಏನೆ = ಮಾಡುತ್ತೇನೆ   [ The Dravidian Languages, 2003]

’ಉತ್ತ’ ಎಂಬುದು ಹೊತ್ತಿನ ಒಟ್ಟು
’ಎನು’ ಎಂಬುದನ್ನು ಅವರು ಗುರ್ತ-ಒರೆಣಿಕೆ-ಮಾತಾಳು (gender-number-person) ಒಟ್ಟು ಎಂದು ಗುರುತಿಸಿದ್ದಾರೆ. ಆದರೆ ಮಾಡುತ್ತೇನೆಯಲ್ಲಿ ಇರುವ ಏನು/ಏನೆ ಹೇಗೆ ಬಂತು ಎಂದು ಅವರು ತಿಳಿಸಿದಂತೆ ತೋರುತ್ತಿಲ್ಲ.

ತೀರಮೆ:-
      ರಾ.ನರಸಿಂಹಾಚಾರ್ಯರು ಹೇಳಿರುವ ಹಾಗೆ ಮಾಡು+ಉತ್ತ+ಇಹೆನು ಎಂಬುದನ್ನು ತೆಗೆದುಕೊಳ್ಳೋಣ. ಇದರಲ್ಲಿ ಇಹೆನು ಎಂಬುದು ಹಳಗನ್ನಡದ 'ಇರ‍್ಪೆನ್' (ಇರ್+ಪ್+ಎನ್) ಎಂಬುದರಿಂದ ಬಂದಿದೆ.

ಇದರಲ್ಲಿ ’ಇರ್’ ಎಂಬುದು ಎಸಕಪದ,
                 ’ಪ್’ ಎಂಬುದು ಹಿಂಬೊತ್ತಲ್ಲದ ಹೊತ್ತಿನ ಒಟ್ಟು ಮತ್ತು
                 ’ಎನ್’ ಎಂಬುದು  ಗುರ್ತ-ಒರೆಣಿಕೆ-ಮಾತಾಳು (gender-number-person) ಒಟ್ಟು

ಮಾಡುತ್ತಿಹೆನ್ ಎಂಬುದರಲ್ಲಿರುವ ’ಇಹೆನ್’ ಎಂಬುದರಲ್ಲಿ ’ಇ’ ಮತ್ತು ’ಹ್’ ಕಾರ ಎರಡೂ ಹೊಸಗನ್ನಡದಲ್ಲಿ ಬಿದ್ದುಹೋಗಿದೆ. ಈ ’ಹ್’ ಕಾರ ಬಿದ್ದುಹೋಗಿರುವುದರಿಂದ ಮುಂದಿದ್ದ ’ಎನ್’ ಎಂಬುದು ’ಏನ್’ ಆಗಿದೆ.

   ಮಾಡುತ್ತ+ಇ+ಹ್+ಎನ್ => ಮಾಡುತ್ತ+ಏನ್ => ಮಾಡುತ್ತೇನ್  ಎಂದಾಗಬೇಕಿತ್ತು. 

ಆದರೆ, ಮಾಡುತ್ತೇನ್ ಎಂಬುದು ಬಳಕೆಯಲ್ಲಿ ’ಮಾಡುವಿಕೆ’ಯ ನಿಕ್ಕಿತನವನ್ನು (certainty) ಕಳೆದುಕೊಂಡಿದೆ. ಆ ನಿಕ್ಕಿತನವನ್ನು ತಂದುಕೊಡಲು ’ಎ’ ಎಂಬುದನ್ನು ಸೇರಿಸಲಾಗಿದೆ.

          ಮಾಡುತ್ತೇನ್+ಎ => ಮಾಡುತ್ತೇನೆ

ಕಿಟ್ಟೆಲ್ ಪದನೆರಕೆಯಲ್ಲಿ ’ಎ’ ಅನ್ನು particle of emphasis ಎಂದು ಹೇಳಿದ್ದಾರೆ; ಅಂದರೆ ನಿಕ್ಕಿತನದ ಒಟ್ಟು.  ಎತ್ತುಗೆಗೆ: ನಾಲ್ಕೆ (ನಾಲ್ಕು+ಎ),  ಒರ‍್ವನೆ(ಒರ‍್ವನ್+ಎ),  ತಾನೆ(ತಾನ್+ಎ)

ಇದೇ ತರ ಮಾಡುತ್ತಾನೆ ಎಂಬುದನ್ನು ಹೀಗೆ ಬಿಡಿಸಬಹುದು:-

         ಮಾಡು+ಉತ್ತ+ಅಪ್ಪನ್ => ಮಾಡುತ್ತಪ್ಪನ್ => ಮಾಡುತ್ತಹನ್ => ಮಾಡುತ್ತಾನ್ =>ಮಾಡುತ್ತಾನೆ

ಕಾಮೆಂಟ್‌ಗಳಿಲ್ಲ: