ಬುಧವಾರ, ಅಕ್ಟೋಬರ್ 24, 2012

ಹೊಸಗನ್ನಡದಲ್ಲಿ ಮೂಗುಲಿಯ ಬೀಳುವಿಕೆ

ಯಾವುದೆ ಪದದಲ್ಲಿ ಎರಡನೇ ಮುಚ್ಚುಲಿಯಾಗಿ ಮೂಗುಲಿ ಬಂದಿದ್ದರೆ ಮತ್ತು ಅದಕ್ಕೆ ಮುನ್ನ ಉದ್ದ ತೆರೆಯುಲಿ ಇದ್ದರೆ ಆಗ ಹೊಸಗನ್ನಡದಲ್ಲಿ ಆ ಮೂಗುಲಿ ಬಿದ್ದು ಹೋಗಿದೆ. ಅಂದರೆ ’ಮುಉತೆಮೂಮುತೆ’ ಮಾದರಿಯ ಪದಗಳಲ್ಲಿ ಮೂಗುಲಿ ಬಿದ್ದು ಹೋಗಿದೆ. ಅಂದರೆ ಅದು ’ಮುಉತೆಮುತೆಮಾದರಿಯ ಪದವಾಗಿ ಮಾರ್ಪಾಡಾಗಿದೆ

ಮು= ಮುಚ್ಚುಲಿ(ವ್ಯಂಜನ, consonant)
ಉತೆ = ಉದ್ದ ತೆರೆಯುಲಿ(ದೀರ್ಗ ಸ್ವರ, long vowel)
ಮೂ= ಮೂಗುಲಿ (ಅನುನಾಸಿಕ, nasal)

ಎತ್ತುಗೆಗಳು:-
ಮುಉತೆಮೂಮುತೆ                     => ಮುಉತೆಮುತೆ
೧. ಸೋಂಕು = ಸ್+ಓ+೦+ಕ್+ಉ => ಸೋಕು
೨. ನಾಂಟು = ನ್+ಆ+ಣ್+ಟ್+ಉ => ನಾಟು
೩. ನಾಂಚು = ನ್+ಆ+ಣ್+ಚ್+ಉ => ನಾಚು
೪. ನಾಂದು = ನ್+ಆ+ನ್+ದ್+ಉ => ನಾದು
೫. ನೂಂಕು = ನ್+ಊ+೦+ಕ್+ಉ => ನೂಕು
೬. ದಾಂಟು = ದ್+ಆ+ಣ್+ಟ್+ಉ => ದಾಟು
೭. ದೂಂಟು = ದ್+ಊ+ಣ್+ಟ್+ಉ=> ದೂಟು , ದೂಡು
೮. ಮೀಂಟು = ಮ್+ಈ+ಣ್+ಟ್+ಉ=> ಮೀಟು
೯. ಮೂಂಗ = ಮ್+ಊ+೦+ಗ್+ಅ => ಮೂಗ
೧೦. ತಾಂಗು = ತ್+ಆ+೦+ಗ್+ಉ => ತಾಗು

ಆದರೆ ಮೂಗುಲಿಯನ್ನು ಬಿಡುವ ಮಾರ್ಪಾಡಿಗೆ ಒಳಗಾಗದ ಪದಗಳು ಹೊಸಗನ್ನಡದಲ್ಲಿ ಅಶ್ಟು ದಿನಬಳಕೆಗೆ ಬರದೇ ಹೋಯಿತು.

ಎತ್ತುಗೆಗೆ:

೧. ನೋಂಪು(ವ್ರತ) = ನ್+ಓ+ಮ್+ಪ್+ಉ.... ಹೆಚ್ಚು ಬಳಕೆಯಲ್ಲಿದ್ದರೆ ಇದೂ ಕೂಡ ನೋಪು ಆಗುತ್ತಿತ್ತೇನೊ ?!
೨. ಮಾಂಜು(heal) = ಮ್+ಆ+೦+ಜ್+ಉ
೩. ಪಾಂಗು (manner, form, shape, likeness)
೪. ಪಾಂಬೆ, ಪಾಣ್ಬೆ (ಕುಣಿತಗಾರ್ತಿ)

ಬುಧವಾರ, ಅಕ್ಟೋಬರ್ 17, 2012

ಲಿಪಿ ಸುದಾರಣೆಯ ಗುರಿಗಳು ಮತ್ತು ಜಾರಿಗೆ ತರುವುದು

ಲಿಪಿ ಸುದಾರಣೆಯ ಗುರಿಗಳು :-

೧. ಮಹಾಪ್ರಾಣವನ್ನು ಇಲ್ಲಗೊಳಿಸುವುದಲ್ಲ. ಬದಲಾಗಿ ಕನ್ನಡ ಸಮಾಜದಲ್ಲಿ ಬಿತ್ತಲಾದ ಮಹಾಪ್ರಾಣದ ಬಗೆಗಿನ 'ಸುಳ್ಳು ಮೇಲರಿಮೆ'ಯನ್ನು ಹೋಗಲಾಡಿಸುವುದು. ಅದಕ್ಕಾಗಿ ಹೆಚ್ಚು ಹೆಚ್ಚು ಬರಹಗಳು ಮಹಾಪ್ರಾಣವಿಲ್ಲದೇ ಬರಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಮಂದಿಯು ಮಹಾಪ್ರಾಣ ಇಲ್ಲದೆ ಬರೆಯಬೇಕಾಗಿದೆ. ಏಕೆ ಹಾಗೆ ಬರೆಯಬೇಕು ಎಂಬುದರ ಬಗ್ಗೆ ಈಗಾಗಲೆ ಶಂಕರಬಟ್ಟರ ಹೊತ್ತಿಗೆಗಳಲ್ಲಿ ಮತ್ತು ಈ ಮಿಂಬರಹದಲ್ಲೂ ಕೂಡ ಹೇಳಲಾಗಿದೆ. 
 
೨. (೧) ರಲ್ಲಿ ಹೇಳಿರುವುದು ಷ, ವಿಸರ್ಗ(ಃ) ಗಳಿಗೂ ಒಪ್ಪುವುದು 
 
೩. ೧ ಮತ್ತು ೨ ಮಾಡುವುದರಿಂದ ೯೦% ಕನ್ನಡಿಗರಲ್ಲಿ ನಾವು ಕೀಳರಿಮೆಯನ್ನು ಹೋಗಲಾಡಿಸಬಹುದು. ಅಲ್ಲದೆ ಇವರನ್ನು ಹೆಚ್ಚು ಹೆಚ್ಚು ಬರಹದೆಡೆಗೆ ಸೆಳೆಯಬಹುದು. ಬರಹದ ಕಡೆಗೆ ಸೆಳೆದಾಗ ಅವರೇ ಮುಂದೆ ಚಿಂತನೆಯನ್ನು ಮಾಡಬಲ್ಲವರಾಗುತ್ತಾರೆ. ಚಿಂತನೆಯಿಂದ ಅವರು ತಮ್ಮ ಏಳಿಗೆಯ ದಾರಿಯನ್ನು ಕಂಡುಕೊಳ್ಳಬಲ್ಲರು. ಲಿಪಿಸುದಾರಣೆಯಿಂದ ಬರಹ ಗೊತ್ತಿಲ್ಲದವರ ಇಲ್ಲವೆ ಬರಹದಿಂದ ದೂರವುಳಿದವರ ಇಲ್ಲವೆ ಬರಹವನ್ನು ಚೆನ್ನಾಗಿ ತಿಳಿಯದವರಲ್ಲಿ ಒಂದು ದೊಡ್ಡ ಮಟ್ಟದ ಮಾರ್ಪಾಡು ಅಗಬಲ್ಲುದು ಎಂಬುದೇ ಇಲ್ಲಿ ಮುಕ್ಯ ಗುರಿ. ಹಲಜನರ ಏಳಿಗೆಯೇ ಮಂದಿಯಾಳ್ವಿಕೆಯ ಮುಕ್ಯ ಗುರಿ.
 
ಲಿಪಿಸುದಾರಣೆಯನ್ನು ಜಾರಿಗೆ ತರುವುದರ ಬಗ್ಗೆ:-
 
೧.ಲಿಪಿಸುದಾರಣೆಗೆ ತರುವುದು ತುಂಬ ಸುಲಬವಾಗಿದೆ ಯಾಕಂದರೆ ಇಲ್ಲಿ ಆಗಬೇಕಿರುವುದು ಬರಿಗೆಗಳನ್ನು ಬಿಡಬೇಕಾಗಿರುವುದು. ಇಲ್ಲಿ ಹೊಸದಾಗಿ ಕಲಿಯುವುದು ಏನೂ ಇಲ್ಲ. ಆಗಬೇಕಿರುವುದೆಲ್ಲ ಬರೀ ಬರಿಗೆಗಳನ್ನು ಬರಹದಿಂದ ಬಿಡಬೇಕಾಗಿರುವುದು. 
 
೨.  ಕೆಲವರಲ್ಲಿ ಲಿಪಿಸುದಾರಣೆಯನ್ನು ಬಿಟ್ಟು ಪದಕಟ್ಟಣೆಯನ್ನು ಮಾಡಬಹುದು ಎಂಬ ನಿಲುವು ಇದೆ. ಪದಕಟ್ಟಣೆ ಆಗಬೇಕಾಗಿರುವುದು ಅರಿಮೆಯ ಪದಗಳಿಗೆ ಮತ್ತು ಯಾವುದೇ ಹೊರನುಡಿಯ ಪದವಿರಲಿ ಈಗಾಗಲೆ ಕನ್ನಡಿಗರ ನಾಲಿಗೆಯು ಅದನ್ನು ಕನ್ನಡಕ್ಕೆ ಹೇಗೆ ಒಗ್ಗಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ಹೊಸಗಾಲದ ಅರಿಮೆಯ ನೆಲೆಯಲ್ಲಿ ಪದಕಟ್ಟಣೆ ಇಲ್ಲವೆ ಕನ್ನಡದ್ದೇ ಆದ ಪದಗಳನ್ನು ಉಂಟು ಮಾಡುವ ಕೆಲಸ ಕೆಲವೇ ಕನ್ನಡಿಗರಿಂದ ಅಗಬೇಕಾಗಿದೆ. ಇದರಲ್ಲಿ ಎಲ್ಲ ಕನ್ನಡಿಗರೂ ಕೊಡುಗೆಯನ್ನು ನೀಡಲಾರರು. ಉಳಿದ ಕನ್ನಡಿಗರು ಆ ಪದಗಳ ಬಳಕೆದಾರರು ಆಗಲು ಮಾತ್ರ ಸಾದ್ಯ ಆದರೆ ಲಿಪಿಸುದಾರಣೆ ಎಂಬುದು ಎಲ್ಲ ಕನ್ನಡಿಗರನ್ನು ನೇರವಾಗಿ ತಲುಪುವುದು. 'ಹೊಸಬರಹ'ದಲ್ಲಿ ಬರೆಯುವಾಗ ಹೆಚ್ಚು ಮಂದಿಗೆ ಒಂದು ತೆರನಾದ ಸರಪಳಿಯಿಂದ ಬಿಡಿಸಿದಂತೆ ಆಗುವುದು. ಹಾಗಾಗಿ, ಹೆಚ್ಚಿನ ಮಂದಿಯ ಒಳಿತನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇಲ್ಲಿ ಲಿಪಿಸುದಾರಣೆಯೇ ಮುಕ್ಯವಾಗಿ ಮತ್ತು ಬೇಗ ನಡೆಯಬೇಕಿರುವ ಕೆಲಸ ಎಂದು ನಮಗೆ ತಿಳಿಯುತ್ತದೆ. 

ಲಿಪಿ ಸುದಾರಣೆ ಎಂಬುದು ಸೊಲ್ಲರಿಮೆ ಇಲ್ಲವೆ ನುಡಿಯರಿಮೆಯಿಂದ ಬಂದ ಕಂಡುಕೊಳ್ಳುವಿಕೆಯಲ್ಲ, ಬದಲಾಗಿ ಕೂಡಣದರಿಮೆ( Sociology)ಯಿಂದ ದೊರೆತ ಕಂಡುಕೊಳ್ಳುವಿಕೆ. ಹಾಗಾಗಿ ಕೂಡಣವು (ಸಮಾಜವು) ಲಿಪಿ ಸುದಾರಣೆಯನ್ನು ಒಪ್ಪಿದರೆ ಆ ಕೂಡಣಕ್ಕೇ ಒಳಿತು.

ಶುಕ್ರವಾರ, ಅಕ್ಟೋಬರ್ 12, 2012

ಹಿಂಗೇರಿಯ ಹುಡುಗರ ಹಾಡು


ಇದು ಇಂಗ್ಲಿಶಿನ ಹಿಂಗೇರಿಯ ಹುಡುಗರ(Backstreet boys) ಹಾಡು. ಇದರ ಬೇರು ಇಂಗ್ಲಿಶ್ ಹಾಡು ಇಲ್ಲಿದೆ

ಒಂಟಿತನವೆಂದರೆ ಏನಂತ ತೋರೆನಗೆ
   ಒಡೆದ ಗುಂಡಿಗೆಗೆ ಹಲವು ಒರೆಗಳು
     ಈ ಕೆನ್ನೊಲವಿನಲ್ಲಿ ನೋಡಲಾರೆ
             ಉಸಿರಾಡಲಾರೆ
ಬಾ ನನ್ನೊಂದಿಗೆ ನಡೆ, ನೋಡೋಣ
ಇರುಳಿನ ಸೊಡರುಗಳು ಬಲುಬೇಗನೆ
  ಅಗುವವೇ ನೇಸರನ ಕದಿರುಗಳು
            ನನ್ನ ತಣಿಸಲು
ನಿನ್ನೆಲ್ಲ ಬಯಕೆಗಳು ಈಡೇರುವವು
       ಅಂತ ಅವು ಹೇಳುತಿವೆ

ಒಂಟಿತನವೆಂದರೆ ಏನಂತ ಹೇಳು ನನಗೆ
    ಈ ಅನಿಸಿನಲ್ಲೇ ನಡೆಯಲೇ?
 ನೀನಿರುವೆಡೆ ನಾನೇಕೆ ಇರಲಾರೆ
 ಎನ್ನೆದೆಯಲೇನೊ ಕಳೆದುಹೋಗಿದೆ.

ಕೊನೆಗೊಳ್ಳದೀ ಬದುಕು ಸಾಗುತ್ತಿರುವುದು
ಕಲ್ಲುಗಳ ಕಣ್ಣು ಗಮನಿಸುತ್ತಿದೆ ತಿರುವುಗಳ
ಎವೆಯಿಕ್ಕದ ನೋಡುತ್ತಿದೆ ಹೇಳದೆ ಏನನ್ನೂ
ಕೊನೆಯಿಲ್ಲದ ಒಲವಿಗೆ ತಪ್ಪರಿವಿನ ದಾರಿಗಳು
            ಅಂಕೆಯಿಲ್ಲ ಈ ಬಾಳಿಗೆ
        ನೀ ಎನ್ನ ಜೊತೆಗಿರುವಿಯಾ?
    ನಿನ್ನೆಲ್ಲ ಬಯಕೆಗಳು ಈಡೇರುವವು
           ಅಂತ ಅವು ಹೇಳುತಿವೆ

ಎನ್ನ ತನ್ಮೆಯೆದೆ ಮಯ್ ಒಪ್ಪಿಸಲು
       ಎಲ್ಲಿಗೂ ಓಡಲಾರೆ
   ಹೋಗುವುದಕ್ಕೆ ಊರಿಲ್ಲ
ನಿನಗೆ ತಿಳಿಯದ ನಾನ್ ಹೇಗೆ
          ಅನುಬವಿಸಲಿ

ಎನ್ನೆದೆಯಿಂದ ಕಳೆದುಹೋದೆ ಎಲ್ಲಿಗೆ
    ಅಲ್ಲಿಗೇಕೆ ಬರಲಾರೆ ನಾನು

ಮಂಗಳವಾರ, ಅಕ್ಟೋಬರ್ 09, 2012

ಲಿಪಿ ಸುದಾರಣೆ ಮತ್ತು ಕೂಡಣದಲ್ಲಿ ಸಾಟಿತನ (equality in Society)

                                     
ಹಿರಿಯ ನುಡಿಯರಿಗರಾದ ಡಾ| ಡಿ.ಎನ್.ಶಂಕರಬಟ್ಟರ ’ಕನ್ನಡ ಲಿಪಿ ಸುದಾರಣೆ’ಯ ಬಗ್ಗೆ ಚರ್ಚೆಗಳು ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ನುಡಿಯರಿಮೆಯ,ಸೊಲ್ಲರಿಮೆಯ ಮತ್ತು ಕೂಡಣದರಿಮೆಯ ಹಲವು ಕಾರಣಗಳನ್ನು ಕೊಟ್ಟು ಅವರು ಈಗಿರುವ ಕನ್ನಡದ ಲಿಪಿಯಲ್ಲಿರುವ ಮಹಾಪ್ರಾಣಗಳು, ಐ, ಔ, ವಿಸರ್ಗ(ಅಃ) ಮತ್ತು ಷ ಎಂಬ ಬರಿಗೆಗಳು ಬೇಕಾಗಿಲ್ಲವೆಂದು, ಅವನ್ನು ಕಯ್ಬಿಡುವುದೇ ಕನ್ನಡಕ್ಕೆ ಸರಿಯಾದ ದಾರಿ ಎಂದು ಹೇಳಿದ್ದಾರೆ. ಕೂಡಣದರಿಮೆಯ(sociology) ಕಣ್ಣಿನಿಂದ ನೋಡಿದರೆ ಇದು ಇನ್ನು ಹೆಚ್ಚು ಹೆಚ್ಚು ಸರಿಯೆನಿಸುತ್ತದೆ ಯಾಕಂದರೆ ಹೆಚ್ಚಿನ ಮಂದಿಯ ನಾಲಿಗೆಯಲ್ಲಿ ಈ ಮೇಲಿನ ಬರಿಗೆಗಳು ಬರುವುದೇ ಇಲ್ಲ. ಮಂದಿಯಾಳ್ವಿಕೆಯ ಪರ್ವಕಾಲದಲ್ಲಿರುವಾಗ ಹೆಚ್ಚಿನ ಮಂದಿಗೆ ತಕ್ಕಂತೆ ಕೂಡಣದಲ್ಲಿ ಕಲಿಕೆ, ಕೆಲಸ ಮತ್ತು ಕಟ್ಟಲೆಗಳು ಎಂಬ ಇನ್ನಿತರ ಏರ್ಪಾಟುಗಳು ಇರಬೇಕು. ಇದರಲ್ಲಿ ಬಲು ಮುಕ್ಯವಾದುದೇ ಕಲಿಕೆ. ಕಲಿಕೆ ಅಂದರೆ ನುಡಿಗಿರುವ ಬರಹವನ್ನು ಕಲಿಯುವುದು ಮತ್ತು ಆ ಬರಹದ ಮೂಲಕ ಅರಿಮೆಗಳನ್ನು ಪಡೆಯುವುದು. ಈ ಅರಿಮೆಗಳೇ ಮುಂದೆ ಮಂದಿಯ ದುಡಿಮೆಯಲ್ಲಿ ಬಳಕೆಗೆ ಬರುತ್ತದೆ. ದುಡಿಮೆಯಿಂದ ಏಳಿಗೆ ಹೊಂದಬೇಕಾದರೆ ಕಲಿಕೆಯು ಚೆನ್ನಾಗಿ ನಡೆದಿರಬೇಕು.

         ಬಾರತದ ಅರುಬರಹದ(constitution) ಮೊದಲಲ್ಲೇ ಇರುವ ಮುಕ್ಯ ಅಂಶಗಳಲ್ಲಿ ಕೂಡಣದ ಸಾಟಿತನವೂ(social equality; The preamble of India constitution contains the phrase: “Equality- social political and economic) ಒಂದು. ಕೂಡಣದಲ್ಲಿ ಸಾಟಿತನವಿದ್ದರೆ ಅದು ಆಳ್ಮೆ(politics) ಮತ್ತು ಹಣಕಾಸಿನ(economic) ನೆಲೆಗಳಲ್ಲಿ ಸಾಟಿತನ ಮೂಡುವುದಕ್ಕೆ ನೆರವಾಗುತ್ತದೆ. ಹಾಗಾಗಿ ಕೂಡಣದಲ್ಲಿಯ ಸಾಟಿತನವೇ ತಳಮಟ್ಟದ ಸಾಟಿತನ ಎಂದು ಹೇಳಲಡ್ಡಿಯಿಲ್ಲ. ಹಾಗಾದರೆ ಕೂಡಣದಲ್ಲಿ ಸಾಟಿತನವನ್ನು ತರುವುದು ಹೇಗೆ ಎಂಬ ಕೇಳ್ವಿ ಬರುವುದು ಸಹಜ. ಕೂಡಣದಲ್ಲಿ ಸಾಟಿತನ ಮೊಳಕೆಯಲ್ಲಿಯೇ ಬರುವಂತೆ ಮಾಡುವುದರಲ್ಲಿ ಮುಕ್ಯವಾದುದು ಕಲಿಕೆ ಇಲ್ಲವೆ ಕಲಿಕೆಯೇರ್ಪಾಟು. ಯಾವ ನಾಡಿನ ಕಲಿಕೆಯೇರ್ಪಾಟಿನಲ್ಲಿ ಎಲ್ಲ ಮಕ್ಕಳಿಗೆ ಒಂದೇ ತೆರನಾದ ಮತ್ತು ಒಂದೇ ಮಟ್ಟದ ಅಂದರೆ ಮೇಲುಕೀಳು ಇಲ್ಲದ ಕಲಿಕೆಯೇರ್ಪಾಟಿಗೆ ಅವಕಾಶವಿರುತ್ತದೆಯೋ ಅಲ್ಲಿ ತಾನಾಗಿಯೇ ಸಾಟಿತನ ಮೂಡುತ್ತದೆ. ಕಲಿಕೆ ಮಾಡಲು ಬರುವ ಮಕ್ಕಳು ಬೇರೆ ಬೇರೆ ಕೂಡಣದ, ಹಣಕಾಸಿನ ಹಿನ್ನಲೆಯಿಂದ ಬಂದವರಾಗಿರುತ್ತಾರೆ. ಬೇರೆ ಬೇರೆ ಪರಿಸರದಲ್ಲಿ ಬೆಳೆದ ಮಕ್ಕಳು ಬೆರೆಯುವ ತಾಣವೇ ಕಲಿಕೆಮನೆ (school). ಇಂತಹ ಕಲಿಕೆಮನೆಗಳಲ್ಲಿ ಎಲ್ಲ ಬಗೆಯ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಲಿಕೆಯೇರ್ಪಾಟು ರೂಪಿಸಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಹೇಗಿರುತ್ತದೆ, ಅವರ ಒಳನುಡಿಯು(dialect) ಎಂತಹುದು, ಅವರ ಒಳನುಡಿಗೂ ಬರಹದ ನುಡಿಗೂ(written Language) ಎಂತಹ ನಂಟುಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತಿದ್ದರೆ ಮಕ್ಕಳ ಕಲಿಕೆಯು ಚೆನ್ನಾಗಿಯು ಮತ್ತು ಬೇಗನೆ ಆಗುತ್ತದೆ, ಮಕ್ಕಳಲ್ಲಿ ಕುರಿಪು(concept)ಗಳನ್ನು ಹಿಡಿಯುವ ಮತ್ತು ಅದನ್ನು ಅರಿತುಕೊಳ್ಳುವ ಅಳವು ಹೆಚ್ಚುತ್ತದೆ. ಹಾಗಾದರೆ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತೆ ಮಾಡುವ ಬಗೆ ಹೇಗೆ ಎಂಬ ಕೇಳ್ವಿ ತಾನಾಗಿಯೇ ಏಳುತ್ತದೆ. ಇದಕ್ಕೆ ನುಡಿಯರಿಮೆಯ ಇಲ್ಲವೆ ಸೊಲ್ಲರಿಮೆಯ ಮೊರೆ ಹೋಗಬೇಕಾಗುತ್ತದೆ. ಈ ಅರಿಮೆಗಳಿಂದ ದೊರೆಯುವ ಕಂಡುಕೊಳ್ಳುವಿಕೆಗಳನ್ನು ಕಲಿಕೆಯಲ್ಲಿ ಮತ್ತು ಕಲಿಕೆಮನೆಗಳಲ್ಲಿ ಒರೆಗೆ ಹಚ್ಚಬಹುದು. ಹೀಗೆ ಒರೆಗೆ ಹಚ್ಚಿದಾಗ ಮಕ್ಕಳ ಕಲಿಕೆಯ ಮೇಲಾಗುವ ಒಳ್ಳೆಯ ಪರಿಣಾಮಗಳನ್ನು ಗಮನಿಸಬಹುದು. ಇಂತಹ ಒಂದು ಕಂಡುಕೊಳ್ಳುವಿಕೆಯೇ ’ಲಿಪಿ ಸುದಾರಣೆ’.

         ಲಿಪಿ ಸುದಾರಣೆ ಮಾಡುವುದರಿಂದ ಕೂಡಣದಲ್ಲಿರುವ ಹೆಚ್ಚಿನ ಮಂದಿಗೆ ಅನುಕೂಲವಾಗಲಿದೆ. ಹೆಚ್ಚಿನ ಮಂದಿಯ ಓದಿನಲ್ಲಿ(reading) ಇರದ ಬರಿಗೆಗಳನ್ನು (ಯಾವ ಬರಿಗೆಗಳು ಎಂಬುದನ್ನು ಮೇಲೆ ತಿಳಿಸಲಾಗಿದೆ) ಕಯ್ಬಿಡುವುದರಿಂದ ಕಲಿಕೆಯು ಸುಲಬಗೊಳ್ಳುತ್ತದೆ. ಮಕ್ಕಳು ಬೇಡದಿರುವ ಈ ಬರಿಗೆಗಳನ್ನು ಕಲಿಯುವ ಬದಲು ಆ ಹೊತ್ತನ್ನು ಕುರಿಪು(concept or subject) ಗಳನ್ನು ಕಲಿಯಲು ಬಳಸಿಕೊಳ್ಳಬಹುದು. ಕಲಿಕೆಯ ಬೇರುಮಟ್ಟದ ಗುರಿಯೇ ಕುರಿಪುಗಳನ್ನು ಇಲ್ಲವೆ ಅರಿಮೆಗಳನ್ನು ತಿಳಿದುಕೊಳ್ಳುವುದು. ಬರಹವೆಂಬುದು ಅರಿಮೆಯನ್ನು ಪಡೆಯಲು ಸಾದನವಶ್ಟೆ ಹಾಗಾಗಿ ಬರಹವನ್ನು ಕಲಿತುಕೊಳ್ಳಲು ಹೆಚ್ಚು ಹೊತ್ತನ್ನು ಕಳೆದಶ್ಟು ಕಲಿಕೆಯು ಕುಂಟಿತವಾಗುವುದು. ಇದರಿಂದ ತಿಳಿಯುವುದೇನೆಂದರೆ ಆದಶ್ಟು ಬರಹ(ಲಿಪಿ)ವೆಂಬುದು ಸುಲಬವಾಗಿದ್ದರೆ ಒಳ್ಳೆಯದು.

         ಲಿಪಿಸುದಾರಣೆ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೇರಿಸುವುದರಲ್ಲಿ ನೆರವಾಗುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ಅದರಲ್ಲೂ ಸಂಸ್ಕ್ರುತದ ಇಲ್ಲವೆ ಇಂಗ್ಲಿಶ್ ಪರಿಸರವನ್ನು ಹೊಂದಿರದ ಮಕ್ಕಳಿಗೆ ಲಿಪಿಸುದಾರಣೆ ಎಂಬುದು ಒಂದು ವರದಾನವಂತಿದೆ. ಇಂದಿಗೂ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಕ್ಕಳು ಕನ್ನಡದ ಒಯ್ಯುಗೆ(medium)ಯಲ್ಲಿಯೇ ಓದುತ್ತಿದ್ದಾರೆ. ಅಂದರೆ ಈ ಲಿಪಿಸುದಾರಣೆ ತರುವುದರಿಂದ ಹೆಚ್ಚಿನ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೆತ್ತಬಹುದು. ಲಿಪಿ ಸುದಾರಣೆ ತರುವುದರಿಂದ ಎಲ್ಲ ಮಕ್ಕಳಿಗೂ ಅರಿಮೆಯನ್ನು ಪಡೆಯುವಲ್ಲಿ ಸಮಾನ ಅವಕಾಶವನ್ನು ಕೊಟ್ಟಂತಾಗುತ್ತದೆ. ಈಗಿರುವ ಸಿಕ್ಕಲುಬರಹವು ಆಗ ತಡೆಗೋಡೆಯಾಗಿ ನಿಲ್ಲುವುದಿಲ್ಲ. ಎಲ್ಲರಿಗೂ ಅರಿಮೆಯನ್ನು ಪಡೆಯುವ ಸಮಾನ ಅವಕಾಶವನ್ನು ನೀಡುವುದೇ ಮಂದಿಯಾಳ್ವಿಕೆಯ ಇಲ್ಲವೆ ಅರುಬರಹದ ಗುರಿಗಳಲ್ಲಿ ಮುಕ್ಯವಾದುದು. ಮಂದಿಯಾಳ್ವಿಕೆಯ ಏರ್ಪಾಟೂಗಳು ಹೆಚ್ಚು ಹೆಚ್ಚು ಬರಹದ ಮೇಲೆ ನಿಂತಿರುವ ಕಾರಣದಿಂದ, ಬರಹ ಗೊತ್ತಿಲದವರಿಗೆ ಬದುಕುವುದೇ ಕಶ್ಟವಾಗುವ ಈ ಹೊಸಗಾಲದಲ್ಲಿ ಲಿಪಿ ಸುದಾರಣೆ ಮಾಡುವುದರಿಂದ ನಿಕ್ಕಿಯಾಗಿ ಕೂಡಣದಲ್ಲಿ ಸಾಟಿತನವನ್ನು ತರಬಹುದು, ಆಗಲೆ ಮಂದಿಯಾಳ್ವಿಕೆಗೂ ಒಂದು ಬೆಲೆ ಬರುವುದು.

ಹೊಸ ಪದಗಳ ಪಟ್ಟಿ:-
ಕೂಡಣ - Society
ನುಡಿಯರಿಮೆ - Linguistics
ಸೊಲ್ಲರಿಮೆ - Grammar
ಕೂಡಣದರಿಮೆ - Sociology
ಅರುಬರಹ - Written Constitution(of a Nation)
ಒಯ್ಯುಗೆ - Medium
ಮಂದಿಯಾಳ್ವಿಕೆ - Democracy
ಆಳ್ಮೆ - Politics
ಹಣಕಾಸು - Economics
ಒಳನುಡಿ - Dialect
ಬರಹದ ನುಡಿ - Written Language
ಕುರಿಪು - Concept /Subject.
ಕಲಿಕೆಮನೆ - School 

Photo Courtesy: UWIC

ಭಾನುವಾರ, ಅಕ್ಟೋಬರ್ 07, 2012

ಮಂಟೇಸ್ವಾಮಿ ಕತೆ ಮತ್ತು ಕರ್ನಾಟಕದ ಒಗ್ಗಟ್ಟು

ಕರ್ನಾಟಕ ಜಾನಪದದ ತವರೂರು ಎಂಬುದನ್ನು ಎಲ್ಲರು ಬಲ್ಲವರೇ. ಈ ಜಾನಪದದಲ್ಲಿ ನಡೆಸುವ ಹುಡುಕಾಟಗಳು ಕರ್ನಾಟಕದ ದಿಟವಾದ ನಡವಳಿಯನ್ನು ಮತ್ತು ಕರ್ನಾಟಕದ ಹಲಮಂದಿಯ ಬದುಕಿನ ಬಗೆಯನ್ನು ಅರಿಯಲು ನೆರವೀಯಬಲ್ಲುದು. ತೆಂಕು ಕರ್ನಾಟಕದಲ್ಲಿ ಹೆಚ್ಚು ಮಂದಿಯೊಲವು ಗಳಿಸಿರುವುದು ಮಲೆಯ ಮಾದಪ್ಪ ಮತ್ತು ಮಂಟೇಸ್ವಾಮಿ ಎಂಬ ಜನಪದ ದೇವರುಗಳು. ಇವರಿಬ್ಬರು ಬುಡಕಟ್ಟಿನ ಜನಗಳು ಇರುವ ತಾವಿನಲ್ಲೇ ನೆಲೆಯೂರಿದರು ಎಂಬುದು ಗಮನಿಸಬೇಕಾದುದು. ಈ ಮಂಟೇಸ್ವಾಮಿಯವರ ಬಗ್ಗೆ ಹಲವು ಹೊತ್ತಿಗೆಗಳನ್ನು ಓದುತ್ತಿದ್ದಾಗ ಮಂಟೇಸ್ವಾಮಿಯವರು ದೂರದ ಬೀದರಿನ ಕಲ್ಯಾಣದಿಂದ ಬಂದವರೆಂದೂ ಮತ್ತು ಮಂಡ್ಯ, ಮಯ್ಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ದಲಿತರು, ಉಪ್ಪಾಲಿಗರು, ಗವ್ಡರು, ಲಿಂಗಾಯತರು ಮತ್ತು ಅರಸುಗಳು ಮೊದಲಾಂತೆ ಎಲ್ಲ ಜಾತಿಯ ಜನರ ಒಲವನ್ನು ಗಳಿಸಿ ’ದರೆಗೆ ದೊಡ್ಡವರು’ ಆದರು ಎಂಬುದು ತಿಳಿಯುತ್ತದೆ. 
       ಇಶ್ಟಾದರೂ ಮಂಟೇಸ್ವಾಮಿ ಜನಪದರ ಎಣಿಕೆಯ(ಊಹೆಯ) ದೇವನೊ ಇಲ್ಲವೊ ಹಿನ್ನಡವಳಿಯಲ್ಲಿ ದಿಟವಾಗಿ ಹಾದು ಬಂದವನೊ ಎಂಬುದನ್ನು ನಿಕ್ಕಿಯಾಗಿ ಯಾರು ಹೇಳುವುದಿಲ್ಲ. ಆದರೆ ಕೆಲವರು ಈತನ ಕಾಲ ೧೬ನೇ ನೂರೇಡು ಇರಬಹುದೆಂದು ಹೇಳಿದ್ದಾರೆ. ಅದು ದಿಟವೊ ಅಲ್ಲವೊ ಅದು ಇಲ್ಲಿ ಮುಕ್ಯವಲ್ಲ ಯಾಕಂದರೆ ಅದು ಬರೀ ಜನಪದೀಯವಾಗಿದ್ದರೂ ತೆಂಕು ಕರ್ನಾಟಕದಲ್ಲಿ ಮಂಟೇಸ್ವಾಮಿಯ ಕತೆ ಹೇಳುವವರಿಗೆ ಅಂದರೆ ನೀಲಗಾರರಿಗೆ(ನೀಲಗಾರರು ಇಂತಹ ಒಂದು ಬುಡಕಟ್ಟಿನವರು - ಇವರ ಕೆಲಸವೇ ಮಂಟೇಸ್ವಾಮಿ ಕತೆಯನ್ನು ಹಾಡುವುದು) ದೂರದ ಕಲ್ಯಾಣದ ಬಗ್ಗೆ ಹೇಗೆ ಗೊತ್ತಿತ್ತು? ಅದೂ ಅಲ್ಲದೆ ಅಶ್ಟು ದೂರದ ಕಲ್ಯಾಣವನ್ನೇ ಏಕೆ ಆಯ್ದುಕೊಂಡರು ಎಂಬುದು ಒಂದು ಗಳಿಗೆ ಸೋಜಿಗದಂತೆ ತೋರುವುದು. ಆದರೆ ಕಲ್ಯಾಣ ಎಂಬುದು ಬರೀ ಒಂದು ಊರಾಗಿ ಕನ್ನಡಿಗರಲ್ಲಿ ಉಳಿದಿಲ್ಲ ಅದೊಂದು ಸಿಡಿದೇಳುವಿಕೆಯ ನಡುವಣ( centre of Revolution)ವೆಂದೇ ಕನ್ನಡದ ಕೂಡಣದಲ್ಲಿ ಅಚ್ಚೊತ್ತಾಗಿದೆ. ಹಾಗಾಗಿ ಈ ಕನ್ನಡ ನೆಲದಲ್ಲಿ ತುಳಿತಕ್ಕೊಳಗಾದವರು ಎಲ್ಲೆ ಇರಲಿ ಅವರಿಗೆ ಕಲ್ಯಾಣ ಒಂದು ಬಯಕೆಬೆಟ್ಟವಾಗಿ ಕಾಣುತ್ತದೆ. ಕಲ್ಯಾಣ ಎಂದರೆ ಬಸವಣ್ಣ, ಕಲ್ಯಾಣ ಎಂದರೆ ಶರಣರು, ಕಲ್ಯಾಣ ಎಂದರೆ ವಚನ ಚಳುವಳಿ ಎಂಬುದು ಕನ್ನಡ ನಾಡಿನ ಮಂದಿಬಗೆಯಲ್ಲಿ ಅಚ್ಚೊತ್ತಿದೆ. ಹಾಗಾಗಿ ಇಲ್ಲಿ ಜನಪದೀಯರಿಗೆ ಕಲ್ಯಾಣದೊಂದಿಗೆ ತಳುಕು ಹಾಕಿಕೊಳ್ಳುವ ಕಡುಬಯಕೆ ಕಾಡುತ್ತದೆ. ಆ ಕಡುಬಯಕೆಯ ಕಡಲಿನಿಂದ ಎದ್ದು ಬಂದ ಹೊಸ ಅಲೆಯೇ ಈ ಮಂಟೇಸ್ವಾಮಿ ಎಂಬ ಜನಪದ ದೇವರು. 
        ಚಿಕ್ಕದಾಗಿ ಹೇಳುವುದಾದರೆ ಮಂಟೇಸ್ವಾಮಿ ಮತ್ತು ಅಲ್ಲಮಪ್ರಬು ಕಲ್ಯಾಣಕ್ಕೆ ಹೋಗಿ ಅಲ್ಲಿ ಬಸವಣ್ಣನ ’ಇಶ್ಟಲಿಂಗ’ ಚಳುವಳಿಯಲ್ಲಿರುವ ಪೊಳ್ಳುತನ ಇಲ್ಲವೆ ಇಶ್ಟಲಿಂಗವೂ ಕದಲಿಕೆಯನ್ನು(ಜಂಗಮತನವನ್ನು) ಕಳೆದುಕೊಳ್ಳುತ್ತಿರುವ ಒಂದು ಆಚರಣೆ ಎಂದು ಎಚ್ಚರಿಸುವುದೇ ಈ ಕತೆಯ ಒಂದು ಮುಕ್ಯ ಅಂಶ. ಕರ್ನಾಟಕದ ಒಗ್ಗಟ್ಟಿನ ಕಣ್ಣಿನಿಂದ ಮಂಟೇಸ್ವಾಮಿಯ ಕತೆಯನ್ನು ನೋಡಿದಾಗ ಇದು ತೆಂಕು ಕರ್ನಾಟಕದ ಜನಪದಕ್ಕೂ ಮತ್ತು ಇವತ್ತಿನ ಬಡಗು ಕರ್ನಾಟಕದ ತುತ್ತತುದಿಯಲ್ಲಿರುವ ಕಲ್ಯಾಣಕ್ಕೂ ಇರುವ ನಂಟನ್ನು ಎತ್ತಿ ಹಿಡಿಯುತ್ತದೆ. ತೆಂಕು ಕರ್ನಾಟಕದ ತುದಿಯಲ್ಲಿರುವ ಮಂಡ್ಯ/ಚಾಮರಾಜನಗದಲ್ಲಿರುವ ಜನಪದ ಹಾಡುಗಾರನಿಗೆ ಬಡಗು ಕರ್ನಾಟಕದ ಕಲ್ಯಾಣದ ಬಗ್ಗೆ ಅಶ್ಟು ಮಾಹಿತಿ ತಿಳಿದದ್ದಾದರೂ ಹೇಗೆ? ಅದೂ ಆ ಕಾಲದಲ್ಲಿ ಅಂದರೆ ಅರುಹು ಮತ್ತು ಸಾರಿಗೆ ಅಶ್ಟು ಬೆಳೆದಿಲ್ಲದ ಆ ಕಾಲದಲ್ಲಿ. ಅದಕ್ಕೇ ಕಾರಣವೇ ಕನ್ನಡ ನುಡಿ ಅಂದರೆ ಕನ್ನಡ ನುಡಿಯಲ್ಲಿ ಹೇಳಲಾದ ’ವಚನಗಳು’(ಆಮೇಲೆ ಇದನ್ನು ಬರಹ ರೂಪಕ್ಕೆ ಇಳಿಸಲಾಯಿತು)ಎಂದರ್ತ. ಹೇಗೆ ಕೂಡಣದ(ಸಮಾಜದ) ಕಟ್ಟ ಕಡೆಯ ಆಳಿಗೂ ವಚನಗಳು ಮುಟ್ಟಿತ್ತು ಎಂಬುದನ್ನು ಇದು ತೋರಿಸುತ್ತದೆ. ಅಲ್ಲದೆ ಈ ಕನ್ನಡದ ವಚನಗಳು ದೂರದ ಬೀದರಿನ ಕಲ್ಯಾಣವನ್ನು ಮತ್ತು ಚಾಮರಾಜನಗರದ ಕೊಳ್ಳೇಗಾಲವನ್ನು ಹತ್ತಿರ ತರುವ ಇಲ್ಲವೆ ಬೆಸೆಯುವ ಕೆಲಸವನ್ನು ಮಾಡಿತು ಎಂಬುದನ್ನು ಇದರಿಂದ ತಿಳಿಯಬಹುದು. ಹೇಗೆ ಒಂದು ನುಡಿಯು, ನೆಲದಳತೆಯಲ್ಲಿ ದೂರ ದೂರ ಇದ್ದ ಊರುಗಳನ್ನು ಮತ್ತು ಆ ಊರುಗಳ ಜನರನ್ನು ನಡವಳಿಯ ನೆಲೆಯಲಿ ಒಂದುಗೂಡಿಸುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ನುಡಿಗೂ ಮತ್ತು ನಡವಳಿಗೂ ಒಂದಕ್ಕೊಂದು ಬಿಡಿಸಿಕೊಳ್ಳಲಾರದಶ್ಟು ಹೆಣೆದುಕೊಂಡಿವೆ ಎಂಬ ಈ ಮಾತನ್ನು ಮಂಟೇಸ್ವಾಮಿಯ ಕತೆಯು ಒತ್ತಿ ಒತ್ತಿ ಹೇಳಿ ನಮಗೆ ಮನದಟ್ಟು ಮಾಡಿಸುತ್ತದೆ.