ಶನಿವಾರ, ಏಪ್ರಿಲ್ 28, 2018

ಪಂಪ, ಆಂಡಯ್ಯ, ಬಸವಣ್ಣ ಮತ್ತು ಮಂಟೇಸ್ವಾಮಿ

ಪಂಪ, ಆಂಡಯ್ಯ, ಬಸವಣ್ಣ ಮತ್ತು ಮಂಟೇಸ್ವಾಮಿಯವರ #ಮಾದರಿ ಗಳನ್ನು ನಾನು ಈ ತೆರನಾಗಿ ಅರಿತುಕೊಂಡಿದ್ದೇನೆ.
ಪಂಪ - ದೇಸಿಯನ್ನು ಮಾರ್ಗಕ್ಕೆ ಒಗ್ಗಿಸುವುದು. ಪಂಪ ಎಶ್ಟು ಕನ್ನಡದ್ದೇ ಪದಗಳನ್ನು ಬಳಸುತ್ತಾನೊ ಅಶ್ಟೆ ತೊಡಕಾದ ಸಂಸ್ಕ್ರುತ ಪದಗಳನ್ನು ಬಳಸುತ್ತಾನೆ. ಇದು ಪಂಪನ ಹೊತ್ತನ್ನು ತೋರುತ್ತದೆ. ಕನ್ನಡವನ್ನು 'ಮಾರ್ಗ'ದ ಮಾದರಿಯ ಕಬ್ಬಗಳಿಗೆ ಹೊಂದಿಸುತ್ತಿದ್ದ ಹೊತ್ತದು.
ಆಂಡಯ್ಯ- ಕಡು ದೇಸಿಯನ್ನು ಮಾರ್ಗಕ್ಕೆ ಒಗ್ಗಿಸುವುದು. ಅಂದರೆ ಬರೀ ಕನ್ನಡದ್ದೇ ಆದ ಇಲ್ಲವೆ ತದ್ಬವಗಳನ್ನು ಪದಗಳನ್ನು ಬಳಸಿ 'ಮಾರ್ಗ'ದ ಮಾದರಿಯ ಕಬ್ಬಗಳಿಗೆ ಹೊಂದಿಸುವುದು. ಅಂದಿನ ಕಬ್ಬಿಗರು ಕನ್ನಡದ ಕಬ್ಬಗಳಲ್ಲಿ ತತ್ಸಮಗಳನ್ನು ಹೆಚ್ಚಾಗಿಯೇ ಬಳಸುತ್ತಿದ್ದುದರ ಇದಿರು ಸಿಡಿದೆದ್ದು 'ಕಬ್ಬಿಗರ ಕಾವನ್' ನೆಗಳಿದನು.
ಬಸವಣ್ಣ - ಬಸವಣ್ಣ ಇಲ್ಲವೆ ಶರಣರು ಒಂದು ಹೊಸ ದಾರಿಯನ್ನು ಹುಟ್ಟು ಹಾಕಿದರು. ಅಂದರೆ ದೇಸಿಯನ್ನು ಮಾರ್ಗಕ್ಕೆ ಹೊಂದಿಸದೆ' ದೇಸಿಯನ್ನೇ ಮಾರ್ಗ'ವನ್ನಾಗಿ ಮಾಡುವ ಮೊಗಸು ಅದು. ಅಂದರೆ 'ಮಾರ್ಗ' ಮಾದರಿಯ ಕಬ್ಬಗಳನ್ನು ಬದಿಗೆ ತಳ್ಳಿ ಕನ್ನಡದ್ದೇ ಮಾದರಿಯ ಸೂಳ್ನುಡಿಗಳನ್ನು ಅದರಲ್ಲೂ ಸಾಮಾನ್ಯ ಮಂದಿಯೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು.
ಮಂಟೇಸ್ವಾಮಿ - ಮೇಲೆ ತಿಳಿಸಿದ ಮಾದರಿಗಳಿಗಿಂತ ಮಂಟೇಸ್ವಾಮಿಯ ಮಾದರಿ ಬೇರೆಯಾಗಿದೆ. ಅದೇನೆಂದರೆ ಇಲ್ಲಿ 'ಮಾರ್ಗ'ವೇ ಇಲ್ಲ. ಇರುವುದೆಲ್ಲ ದೇಸಿ. ಅಂದರೆ 'ಬರಿಗೆತನ'ದ ಸೋಂಕು ಇದರಲ್ಲಿಲ್ಲ. ಇರುವುದೆಲ್ಲ ಬಾಯ್ತನದ ಕಟ್ಟಣೆಗಳೇ. ಒಂದು ತೆರನಾಗಿ 'ಮಾರ್ಗ'ವನ್ನು ಕಡೆಗಣಿಸಿ/ದಿಕ್ಕರಿಸಿದ ಮಾದರಿ ಇದು ಎಂದು ಹೇಳಬಹುದು. ಬಸವಣ್ಣನ ಹಾಗೆ ಪಾರ್ಮಲ್ ಆದ ಅನುಬವ ಮಂಟಪವನ್ನು ಮಂಟೇಸ್ವಾಮಿ ಕಟ್ಟಲಿಲ್ಲ.
ಇಲ್ಲಿ ಒಂದು ಮಾದರಿಯನ್ನು ಇನ್ನೊಂದು ಮಾದರಿಗೆ ಹೋಲಿಸ ಹೋಗಬಾರದು. ಯಾಕಂದರೆ ಇವೆರೆಲ್ಲರೂ ಕನ್ನಡದ ಹಿನ್ನಡವಳಿಯಲ್ಲಿ ಬೇರೆ ಬೇರೆ ಹೊತ್ತಿನಲ್ಲಿ ಬಂದವರು. ಆಯ ಹೊತ್ತಿಗೆ ತಕ್ಕಂತೆ ತಮ್ಮ ತಮ್ಮ ಕೆಲಸಗಳನ್ನು ಮಾಡಿದರು. ಇವರೆಲ್ಲರ ಕೊಡುಗೆಯಿಂದಲೇ ಕನ್ನಡವು ಇಂದು ಉಳಿದಿರುವುದು ಮತ್ತು ಹುರುಪು ತುಂಬುತ್ತಿರುವುದು.

ಗುರುವಾರ, ಏಪ್ರಿಲ್ 12, 2018

ಓಡುತಿಟ್ಟ(ಸಿನಿಮ) ಎಂದರೇನು? ಅದರ ಗುರಿ ಮತ್ತು ಪರಿಚೆಗಳೇನು?

ಓಡುತಿಟ್ಟ(ಸಿನಿಮ) ಎಂದರೇನು? ಅದರ ಗುರಿ ಮತ್ತು ಪರಿಚೆಗಳೇನು?
ನಮ್ಮಲ್ಲಿ 'ಸಿನಿಮ', 'ಮೂವಿ' ಮತ್ತು 'ಚಲನಚಿತ್ರ' ಎಂಬ ಪದಗಳು ಬಳಕೆಯಲ್ಲಿವೆ. ಇಶ್ಟು ದಿನವೂ ನಾನು ಅದನ್ನು ಹಾಗೆ ಬಳಸುತ್ತಿದ್ದೆ. ಆದರೆ ಆ ಪದಗಳಿಂದನೇ ಏನೊ ಅದು 'ಏನು' ಎಂಬ ಕೇಳ್ವಿಯೇ ನನ್ನಲ್ಲಿ ಮೂಡಿರಲಿಲ್ಲ. ಆದರೆ ಇತ್ತೀಚೆಗೆ ನಾನು 'ಓಡುತಿಟ್ಟ' ಎಂಬ ಪದವನ್ನು ಹೆಚ್ಚಾಗಿ ಬಳಸಲು ತೊಡಗಿದ್ದೇನೆ. ಈಗ 'ಓಡುತಿಟ್ಟ' ಎಂಬ ಪದದ ಮೂಲಕ ಅದು ಏನು ಎಂಬುದನ್ನು ಅರಿತುಕೊಳ್ಳಲು ಮೊಗಸುತ್ತಿದ್ದೇನೆ ಅಲ್ಲದೆ ಆದರ ಬಗ್ಗೆ ಕೇಳ್ವಿಗಳು ಮೂಡುತ್ತಿವೆ.
ಅಡಿಮಟ್ಟದಲ್ಲಿ ಸಿನಿಮಾ ಅಂದರೆ 'ಓಡುತ್ತಿರುವ ತಿಟ್ಟಗಳೇ'. ಬರೀ ಓಡುತ್ತಿರುವ ತಿಟ್ಟಗಳೇ?..ಅಲ್ಲ. ಓಡುತ್ತಿರುವ ತಿಟ್ಟಗಳ ಮೂಲಕ ಒಂದು ಕತೆ ಹೇಳುವುದು. ಇದೇ ಓಡುತಿಟ್ಟದ ಗುರಿ ಇಲ್ಲವೆ ಪರಿಚೆ. ಮೊದಮೊದಲು ಓಡುತಿಟ್ಟಗಳಲ್ಲಿ ಮಾತು ಇರಲಿಲ್ಲ. ಓಡುತಿಟ್ಟಗಳಿಗೆ ಆಮೇಲೆ ಮಾತನ್ನು ಹೊಂದಿಸಲಾಯಿತು. ಹಾಗಾಗಿ, ಓಡುತಿಟ್ಟದ ಬೆಳವಣಿಗೆ ಮಗುವಿನ ಹಾಗೆ ಆಗಿದೆ. ಅಂದರೆ ಪ್ರಪಂಚಕ್ಕೆ ಬಂದ ಕೂಡಲೆ ಮಗು ನೋಡುವುದನ್ನು (ಕಣ್ಣು ಬಿಡುವುದನ್ನು - ತಿಟ್ಟ) ಕಲಿಯುತ್ತದೆ, ಆಮೇಲೆ ಮಾತನ್ನು ಕಲಿಯುತ್ತದೆ.
ಓಡುತಿಟ್ಟಗಳಲ್ಲಿ ತಿಟ್ಟಗಳ ಮೂಲಕ ಯಾವುದೊ ಒಂದು ಸಯ್ಪು(ಮೌಲ್ಯ)ಗಳನ್ನು ನೋಡುಗನಿಗೆ ದಾಟಿಸುವುದು ಆ ಓಡುತಿಟ್ಟದ ಮಾಡುಗನ ಕೆಲಸ. ಅದು ತಿಟ್ಟದಲ್ಲಿ ಬಳಸಲಾಗಿರುವ ಬಣ್ಣ ಇಲ್ಲವೆ ವಸ್ತುಗಳಾಗಿರಬಹುದು. ಅಂದರೆ ಆ ತಿಟ್ಟಕ್ಕೆ ಮೀರಿದ ಹುರುಳನ್ನು ಅದಕ್ಕೆ ಕೊಡುವುದರ ಮೂಲಕ ನೋಡುಗನ ತಿಳಿವನ್ನು ಕೆಣಕುವುದು ಇಲ್ಲಿ ಓಡುತಿಟ್ಟ ಮಾಡುಗನ ಕೆಲಸ. ಹಾಗಾಗಿ ಓಡುತಿಟ್ಟವು ಹೆಚ್ಚಾಗಿ 'ತಿಟ್ಟ'ವನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ. ಓಡುತಿಟ್ಟದಲ್ಲಿರುವ ಮಾತು ತಿಟ್ಟಕ್ಕೆ ಹೊಂದುವಂತೆ, ಹೆಚ್ಚೂ ಅಲ್ಲದೆ ಕಡಿಮೆಯೂ ಅಲ್ಲದೆ ಇರಬೇಕಾಗುತ್ತದೆ. ಸೀನ್(ತಿಟ್ಟ ನೋಟ)ಗಳು ನೋಡುಗನ ಮೇಲೆ ಬೀರುವ ಪ್ರಬಾವವನ್ನು ಹೆಚ್ಚಿಸಲು ತಿಟ್ಟದ ಜೊತೆಜೊತೆಗೆ ಹಿನ್ನೆಲೆ ಇನಿತವೂ ಮತ್ತು ಅದಕ್ಕೆ ತಕ್ಕಂತೆ ಮಾತುಗಳನ್ನು ತಿಟ್ಟಕ್ಕೆ ಹೆಣೆಯಬೇಕಾಗುತ್ತದೆ.
ಓಡುತಿಟ್ಟಗಳಿಗೂ ನಾಟಕಳಿಗೂ ಅಡಿಮಟ್ಟದಲ್ಲಿ ಬೇರೆತನವಿದೆ. ನಾಟಕದಲ್ಲಿ ಮಾತೇ ಮೊದಲು; ಮಾತೇ ಮುಕ್ಯ. ಯಾಕಂದರೆ ಅಲ್ಲಿ ತಿಟ್ಟವೇ ಇಲ್ಲ. ಇರುವುದೆಲ್ಲವೂ ನೋಟ. ಕೆಲವೊಮ್ಮೆ ತಿಟ್ಟ(ನಾಟಕದ ಸೀನರಿ)ವಿದ್ದರೂ ಅದು ಹಿನ್ನೆಲೆಯಲ್ಲಿ ಇರುತ್ತದೆ. ನೋಡುಗನ ಮುಂದೆ ಉಸಿರಾಡುವ ಮಂದಿಯೇ ನಾಟಕ ಆಡುತ್ತಿರುತ್ತಾರೆ. ಆದರೆ ಓಡುತಿಟ್ಟದಲ್ಲಿ ಇರುವುದೆಲ್ಲ 'ತಿಟ್ಟ'ವಶ್ಟೇ. ಆ ತಿಟ್ಟವನ್ನು ಹೇಗೆ ತಿದ್ದಿ ತೀಡಬಹುದೆಂಬುದು ಅದರ ಮಾಡುಗನ ತಿಳಿವಿಗೆ ಬಿಟ್ಟಿದ್ದು.
ಆದರೆ ಇಂಡಿಯಾದಲ್ಲಿ ಹೆಚ್ಚಾಗಿ ನಾಟಕ (ರಂಗಬೂಮಿ) ಆಡುತ್ತಿದ್ದವರು ಓಡುತಿಟ್ಟಗಳಲ್ಲಿ ಕೆಲಸ ಮಾಡುತ್ತಾ ಬಂದಿದ್ದಾರೆ; ಹಾಗಾಗಿ ಅವರು ಓಡುತಿಟ್ಟವು ನಾಟಕದ ಹೊರಚಾಚು ಎಂಬಂತೆ ಅಂದುಕೊಂಡಿದ್ದಾರೆ ಇಲ್ಲವೆ ಹಾಗೆ ನಡೆದು ಬಂದಿದೆ. ನಮ್ಮ ಓಡುತಿಟ್ಟಗಳಲ್ಲಿ ಹಾಡು ಮತ್ತು ಮಾತುಗಳು ಹೆಚ್ಚಾಗಿ ಕಾಣುತ್ತವೆ. ಇದು ಓಡುತಿಟ್ಟವನ್ನು ನಾಟಕದ ಒಯ್ಯುಗೆಗೆ ಒಗ್ಗಿಸುವ ಕೆಲಸದಂತೆ ತೋರುತ್ತದೆ. ಆದರೆ, ಹಿಂದೆ ಹೇಳಿದಂತೆ ಓಡುತಿಟ್ಟಗಳು ನಾಟಕಕ್ಕಿಂತ ಅಡಿಮಟ್ಟದಲ್ಲಿ ಬೇರೆಯಾಗಿದೆ. ಯಾವ ಓಡುತಿಟ್ಟದಲ್ಲಿ ತಿಟ್ಟಗಳೇ ಕತೆ ಹೇಳುತ್ತವೆಯೋ ಅದೇ ದಿಟವಾದ ಓಡುತಿಟ್ಟ. ಯಾವ ಓಡುತಿಟ್ಟಗಳಲ್ಲಿ ಮಾತುಗಳು ಇಲ್ಲವೆ ಹಾಡುಗಳು ಕತೆ ಹೇಳುತ್ತವೆಯೋ ಅದು ಓಡುತಿಟ್ಟದ ಅಡಿಮಟ್ಟದ ಪರಿಚೆಗಳಿಗೆ ಇದಿರಾಗಿದೆ. "ಯಾಕೆ ಹೀಗೆ" ಎಂಬ ಕೇಳ್ವಿಗೆ ಇನ್ನೊಂದು ನೆಲೆಯಲ್ಲಿ ಉತ್ತರವಿದೆ. ಅದೇನೆಂದು ಮುಂದೆ ನೋಡೋಣ
ನಮ್ಮ ಓಡುತಿಟ್ಟದಲ್ಲಿ ಮಾತು ಹೆಚ್ಚಾಗಿ ಏಕೆ ಕೇಳಿಬರುತ್ತದೆಯೆಂಬುದಕ್ಕೆ ತಿಟ್ಟ ಮತ್ತು ಸದ್ದು/ಉಲಿ ಎಂಬುವುಗಳು ಹೇಗೆ ನಮ್ಮ ಮೇಲೆ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ಸದ್ದು/ಮಾತು/ಉಲಿ ಇವುಗಳು ನಾವು ಏನನ್ನು ನೋಡುತ್ತಿದ್ದೇವೆಯೊ ಅದರ ಬಗ್ಗೆ ಹೆಚ್ಚಿನದನ್ನು ತಿಳಿಸಿಕೊಡುತ್ತದೆ.
ಎತ್ತುಗೆಗೆ: ಓಡುತಿಟ್ಟದಲ್ಲಿ ಒಬ್ಬ ಹುಡುಗನಿದ್ದು ಅವನು ಏನನ್ನಾದರೂ ಮಾತಾಡಿದರೆ ಅವನು ಮತಾಡಿದ ದಾಟಿಯ ಮೇಲೆ ಅವನು ಎಂತಹವನು ಎಂಬುದನ್ನು ಎಣಿಸುವುದಕ್ಕೆ ನೋಡುಗನಿಗೆ ಅನುವಿದೆ. ಆದರೆ ಆ ಹುಡುಗನು ಏನೂ ಮಾತಾಡದೇ ಇದ್ದರೆ ಅವನು ಹೇಗೆ ಕಾಣಿಸುತ್ತಿದ್ದ ಎಂಬುದರ ಮೇಲಶ್ಟೆ ಅವನು ಎಂತಹವನು ಎಂಬುದನ್ನು ಎಣಿಸುವುದಕ್ಕೆ ಸಾದ್ಯ.
ಅಂದರೆ ಹೆಚ್ಚು ಹೆಚ್ಚು ಮಾತಿದ್ದರೆ ನೋಡುಗನಿಗೆ ಹೆಚ್ಚು ಹೆಚ್ಚು ತಿಳಿಯುತ್ತದೆ ಅಂದರೆ ಓಡುತಿಟ್ಟವನ್ನು ಮತ್ತು ಅದರಲ್ಲಿರುವ ಕತೆಯನ್ನು ತಿಳಿದುಕೊಳ್ಳಲು ಅವನು ಹೆಚ್ಚು ಹೆಣಗಾಡಬೇಕಾಗಿಲ್ಲ. ಆದರೆ ಮಾತು ಕಮ್ಮಿ ಇರುವ ಓಡುತಿಟ್ಟಗಳಲ್ಲಿ ಕತೆಯು ಒಗಟು ಒಗಟಾಗಿರುತ್ತದೆ. ಆದ್ದರಿಂದ ಅದನ್ನು ತಿಳಿದುಕೊಳ್ಳಲು ಕಶ್ಟವಾಗುತ್ತದೆ. ಹೀಗೆ ಸುಲಬವಾಗಿ ತಿಳಿದುಕೊಳ್ಳಬಹುದಾದ ಓಡುತಿಟ್ಟಗಳು ಹೆಚ್ಚು ಮಂದಿಯನ್ನು ತಲುಪುತ್ತದೆ. ಹೆಚ್ಚು ಮಂದಿಯನ್ನು ತಲುಪುವ ಓಡುತಿಟ್ಟ ಸರಕಿನ ರೂಪವನ್ನು ಪಡೆಯುತ್ತದೆ. ಅಂದರೆ ಅದಕ್ಕೆ ಒಂದು ಮಾರುಕಟ್ಟೆ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಮಾತು ಹೆಚ್ಚಿರುವ ಓಡುತಿಟ್ಟಗಳನ್ನು ಮಾಡುವವರು ಹೆಚ್ಚು. ಅದೇ ಮಾತು ಕಮ್ಮಿ ಇರುವ ಓಡುತಿಟ್ಟಗಳನ್ನು ಮಾಡುವವರು ಕಡಿಮೆ ಇರುತ್ತಾರೆ. ಹಾಗಾಗಿ ಹೆಚ್ಚು ಮಂದಿಯನ್ನು ತಲುಪುವ ಓಡುತಿಟ್ಟವು 'ತಿಟ್ಟನಾಟಕ'ವಾಗಿ ಬದಲಾಗುತ್ತದೆ. ಅಂದರೆ ಈ ಕಡೆ ನಾಟಕವೂ ಇಲ್ಲ, ಆ ಕಡೆ ಓಡುತಿಟ್ಟವೂ ಅಲ್ಲ. ಇವೆರಡರ ಒಂದು ತೆರನಾದ ಬೆರಕೆಯಂತಾಗುತ್ತದೆ