ಶನಿವಾರ, ಮಾರ್ಚ್ 24, 2018

ಸೋದರ ಅತ್ತೆ, ಸೋದರ ಮಾವ...

ತಮಿಳಿನಲ್ಲಿಲ್ಲದ ಕನ್ನಡದಲ್ಲಿ ಮಾತ್ರ ಇರುವ 'ಸೋದರ ಅತ್ತೆ', 'ಸೋದರ ಮಾವ', 'ಸೋದರ ಅಳಿಯ' ಎನ್ನುವ ಬಳಕೆ ಯಾಕೆ?
ಅತ್ತೆ, ಮಾವ, ಅಳಿಯ, ಸೊಸೆ ಎಂಬುದಕ್ಕೆ 'ಸೋದರ'( < ಸಹೋದರ) ಎಂಬ ಪರಿಚೆ ಪದವನ್ನು ಮಂದೆ ಸೇರಿಸಿರುವುದರ ಹಿನ್ನಲೆ ಏನು? ಯಾಕೆ ಈ 'ಸೋದರ' ಎಂಬುದನ್ನು ಸೇರಿಸಲಾಯಿತು? ಕೂಡಣದಲ್ಲಿ ಆದ ಯಾವ ಮಾರ್ಪಾಟನಿಂದ ಹೀಗೆ 'ಸೋದರ' ಎಂಬುದನ್ನು ಸೇರಿಸಬೇಕಾಗಿ ಬಂತು?
ಹೀಗೆ ನಾವು ಪದಗಳ ಬೆನ್ನಟ್ಟಿ ಹೋದರೆ ಕೂಡಣದಲ್ಲಿ ನಡೆದ ಮಾರ್ಪಾಟುಗಳ ಕತೆಗಳನ್ನು ಎಳೆ ಎಳೆಯಾಗಿ ಬಿಡಿಸಬಹುದು. ಕೂಡಣದ ಅರಿಮೆಗೆ ಈ ಪದಗಳ ಬೆಳವಣಿಗೆಯ ಬಗ್ಗೆ ತಿಳಿಯುವುದು ತುಂಬ ಮುಕ್ಯ. ಎಮ್.ಎನ್. ಶ್ರೀನಿವಾಸ್ ಅವರ ಹೊತ್ತಗೆ 'ಮ್ಯಾರೇಜ್ ಅಂಡ್ ಪ್ಯಾಮಿಲಿ ಇನ್ ಮಯ್ಸೂರ್'(೧೯೪೨) ಎಂಬ ಹೊತ್ತಗೆಯನ್ನು ಓದಿದಾಗ ಇದಕ್ಕೆ ಕೆಲವು ಉತ್ತರಗಳು ದೊರಕಿದವು.
ಈ ಮುಂಚೆ ಕನ್ನಡದ ಎಲ್ಲ ಜಾತಿಯವರಲ್ಲಿಯೂ (ಹಾರುವರನ್ನು ಸೇರಿಸಿ) ಮದುವೆಗಳು ಈಗಾಗಲೆ ಇರುವ ಮೊರೆಯಲ್ಲಿಯೇ (ರಕ್ತ ಸಂಬಂದಿ) ನಡೆಯುತ್ತಿತ್ತು ಅಂದರೆ 'ಕ್ರಾಸ್ ಕಸೀನ್ಸ್' ನಡುವೆ ಮದುವೆಗಳು ಏರ್ಪಡುತ್ತಿದ್ದವು. ಅಂದರೆ ಹೆಣ್ಣಾದರೆ ತನ್ನ ತಾಯಿಯ ತಮ್ಮನನ್ನೋ(ಸೋದರ ಮಾವ), ತಾಯಿಯ ಅಣ್ಣನ ಮಗನನ್ನೋ(ತಾಯಿಗೆ ಸೋದರ ಅಳಿಯ) , ಗಂಡಾದರೆ ತನ್ನ ತಂದೆಯ ತಂಗಿಯ ಮಗಳನ್ನೋ(ತಂದೆಗೆ ಸೋದರ ಸೊಸೆ) ಇಲ್ಲವೆ ತಾಯಿಯ ತಮ್ಮನ ಮಗಳನ್ನೋ(ತಾಯಿಗೆ ಸೋದರ ಸೊಸೆ) ಮದುವೆಯಾಗುತ್ತಿದ್ದರು.
ಸೋದರ ಮಾವಂದಿರೇ ಮಾವ ಆಗಿರುತ್ತಿದ್ದರು.(ಮಾವ ಅಂದರೆ ಹೆಣ್ಣು ಕೊಟ್ಟ ಮಾವ/ಗಂಡನ ತಂದೆ)
ಸೋದರ ಅತ್ತೆಯಂದಿರೇ ಅತ್ತೆ ಆಗಿರುತ್ತಿದ್ದರು.(ಅತ್ತೆ ಅಂದರೆ ಹೆಣ್ಣು ಕೊಟ್ಟ ಅತ್ತೆ/ಗಂಡನ ಅಮ್ಮ)
ಹಾಗಾಗಿ 'ಸೋದರ' ಎಂಬ ಪರಿಚೆ ಪದವೇ ಬೇಕಾಗಿರಲಿಲ್ಲ.
ಆದರೆ, ಯಾವಾಗ ಮದುವೆಗಳು ಈಗಾಗಲೆ ಇರುವ ಮೊರೆಯ ಆಚೆ ಆಗಲು ಶುರುವಾದವೊ ಆಗ 'ಸೋದರ ಮಾವ' ಮತ್ತು ಮಾವ(ಅಂದರೆ ಹೆಣ್ಣು ಕೊಟ್ಟ ಮಾವ) ಬೇರೆ ಬೇರೆ ಆದರು. ಈ ಬೇರೆತನವನ್ನು ತೋರಿಸಲು ಮಾವನ ಮುಂದೆ 'ಸೋದರ' ಎಂಬ ಪರಿಚೆ ಪದದ ಬಳಕೆ ಆಯಿತು. ಹೆಣ್ಣು ಕೊಟ್ಟ ಮಾವನನ್ನು 'ಮಾವ' ಎಂದಶ್ಟೆ ಉಳಿಸಿಕೊಳ್ಳಲಾಯಿತು.
ಇದೇ ವಿವರಣೆ ಅತ್ತೆ, ಅಳಿಯ, ಸೊಸೆ ಎಂಬ ಪದಗಳಿಗೂ ಒಪ್ಪುವುದು.
ಆದರೆ ಹೀಗೆ ಆಗಲು ಕಾರಣವೇನು ಎಂಬುದಕ್ಕೆ ಎಮ್.ಎನ್. ಶ್ರೀನಿವಾಸ್ ಅವರು ಕೊಡುವ ಕಾರಣ 'ಸಂಸ್ಕ್ರುತೀಕರಣ'. ಯಾಕಂದರೆ ಸೋದರ ಎಂಬುದು ಸಂಸ್ಕ್ರುತದ 'ಸಹೋದರ'(ಒಡಹುಟ್ಟಿದವನು) ಎಂಬ ಪದದಿಂದ ಬಂದಿದೆ. ಆದ್ದರಿಂದ ಇದು ಕನ್ನಡದ ಕೂಡಣ 'ಸಂಸ್ಕ್ರುತೀಕರಣ'ಗೊಂಡುದನ್ನು ತೋರಿಸುತ್ತದೆ ಎಂದು ಅವರು ಹೇಳುತ್ತಾರೆ.

ಕಾಮೆಂಟ್‌ಗಳಿಲ್ಲ: