ಬುಧವಾರ, ಏಪ್ರಿಲ್ 05, 2017

ಕನ್ನಡದಲ್ಲಿ ಸಂಸ್ಕ್ರುತ ಪದಗಳ ಬಳಕೆಯಿಂದಾಗುವ ತೊಂದರೆ

ಕನ್ನಡದಲ್ಲಿ ಸಂಸ್ಕ್ರುತ ಪದಗಳನ್ನು ಬಳಸುವುದರಿಂದ ಪದಗಳ ಹಿಂದೆ ಅವಿತು ಮಾತಾಡುವ ಇಲ್ಲವೆ ಬರೆಯುವ ಚಾಳಿ ಹೆಚ್ಚಾಗುತ್ತಿದೆ/ಹೆಚ್ಚಾಗಿದೆ. ಎಶ್ಟೊ ಸಂಸ್ಕ್ರುತ ಪದಗಳನ್ನು ಹಿಂದೆ ಮುಂದೆ ನೋಡದೆ ಕುರುಡು ಕುರುಡಾಗಿ ಬಳಸುವುದರಿಂದ ನಮ್ಮ ಅರಿವಿನ ಅಳವಿಗೆ ನಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆ ಅಂತ ಅನಿಸುತ್ತದೆ. ಇದು ಬರೀ ಕನ್ನಡ-ಸಂಸ್ಕ್ರುತದ ಕೇಳ್ವಿಯಲ್ಲ ಬದಲಾಗಿ ಕನ್ನಡಿಗರ ಅರಿವಿನ ಕೇಳ್ವಿ. ಅರಿವನ್ನು ಹಿಗ್ಗಿಸಿಕೊಳ್ಳುವ ಕೇಳ್ವಿ.
ಎತ್ತುಗೆಗೆ: 'ಸಯ್-ಪು' ಬದಲು 'ನೀತಿ' ಎಂಬ ಪದ ಬಳಕೆಯಲ್ಲಿದೆ. 'ಸಯ್'(ಸೈ) ಎಂಬ ಪದ ಆಡುನುಡಿಯಲ್ಲಿ 'ಸರಿ'ಯಾಗಿರುವುದಕ್ಕೆ ಬಳಸುವ ಪದ (ಅವನು ಮಾಡಿದ್ದು ಸಯ್, ಅವನ್ ಎಲ್ಲಾದುಕ್ಕು ಸಯ್). ಆದರೆ 'ನೀತಿ' ಎಂಬ ಪದವನ್ನು ಒಡೆದು ತಿಳಿದುಕೊಳ್ಳುವ ಅಳವು ನಮಗಿಲ್ಲ ಯಾಕಂದರೆ ಅದು ಹೆರನುಡಿಯಿಂದ ಬಂದದ್ದು.

ಪಡುವಣದ ಅರಿವಿನರಿಮೆ

ಪಡುವಣದೊಳ್ ಇರ್ ಗುಂಪು
ದೂಸರೊಲವಿಗರೊಂದು ಗುಂಪು
ಪಳಗೊಲವಿಗರೊಂದು ಗುಂಪು
ದೂಸರ್ಬಲ್ಮೆಯೊಂದೇ ಇರುವುದೆಂದು
ಪಳಿಗಿಕೆಯೊಂದೇ ಇರುವುದೆಂದು
ಪರಿಪರಿಯಾಗಿ ಈರ್ವರ್ ಕಿತ್ತಾಡುತಿರಲ್....
ಕಾಂಟನು ಬಂದು ಎರಡೂ ಬಗೆಗಳು
ಉಂಟೆಂದು ಹೇಳಲ್...ಆದರೆ
ದೂಸರ್ ಪಳಗಿಕೆಗೂ ಮಿಗಿಲೆಂದು
ಹೇಳಿ ಅರಿವಿನರಿಮೆಯಂ ಕೂರ್ ಅರುಹಿದನ್

'ಅಸಿ' ಬಗ್ಗೆ

ನಮ್ಮ ಮಯ್ಸೂರಿನ ಕಡೆ ಬಳಕೆಯಲ್ಲಿರುವ 'ವಸಿ'/'ಒಸಿ' ಎಂಬುದು 'ಅಸಿ' ಎಂಬುದರ ಇನ್ನೊಂದು ರೂಪ ಅಂತ ಅನ್ನಿಸುತ್ತಿದೆ.
೧. ಇನ್ನೊಸಿ ಸಾರು ಆಕಿ
೨. ಒಸಿ ಕೆಲಸ ಮಾಡುದ್ರ್ ಆಗ್ದಾ?

Ka. asi, asa thinness, leanness, slenderness, *minuteness* - DED 341

ಪಂಪನು 'ಅಸಿ' ಎಂಬ ಪದ ಬಳಕೆ ಮಾಡಿದ್ದಾನೆ.

'ಅನ್' ಬಗ್ಗೆ

ಹಿಂದೊಮ್ಮೆ, ಹಳಗನ್ನಡದಲ್ಲಿರುವ ಎರಡನೇ ವಿಬಕ್ತಿ 'ಅಮ್' ಅಲ್ಲ, 'ಅನ್' ಎಂಬುದಾಗಿ ಹೇಳಿದ್ದೆ. ಅದಕ್ಕೆ ಇನ್ನಶ್ಟು ನಿಂದರಿಕೆಗಳು 'ಪಂಪ ಬಾರತ' (ಡಿ.ಎಲ್.ನರಸಿಂಹಾಚಾರ್ ಅವರು ಬಿಡಿಸಿರುವುದು) ದಲ್ಲೇ ಸಿಕ್ಕಿತು
ಮನಂ = ಮನಸ್ಸನ್ನು ( ಇಲ್ಲಿ ಮನಂ ಎಂಬುದನ್ನು 'ಮನನ್' ಎಂದು ಓದಬೇಕು. ಮನಮ್ ಎಂದಲ್ಲ)
ತನುವನ್ = ತನುವನ್ನು(ದೇಹವನ್ನು)
ಸಂಸ್ಕ್ರುತದಲ್ಲಿ ಏಕವಚನ ದ್ವಿತೀಯ ವಿಬಕ್ತಿ ಪ್ರತ್ಯಯ 'ಅಮ್' ಎತ್ತುಗೆಗೆ: ಮಾತರಮ್ - ತಾಯಿಯನ್ನು, ಗ್ರಾಮಮ್ - ಹಳ್ಳಿಯನ್ನು
ಸಂಸ್ಕ್ರುತದ 'ಅಮ್' ಅನ್ನುವುದೇ ಕನ್ನಡದಲ್ಲಿದೆ ಎಂಬ ತಪ್ಪು ತಿಳಿವಳಿಕೆಯಿಂದಾಗಿ ಕನ್ನಡದಲ್ಲೂ 'ಅಮ್' ಇದೆ ಎಂದು ಹಬ್ಬಿಸಿದರು
ಹಳೆಗನ್ನಡದ 'ಅನ್' ಎಂಬುದೇ ಹೊಸಗನ್ನಡದಲ್ಲಿ 'ಅನ್ನು' ಆಗಿದೆ