ಹಳ್ಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹಳ್ಳಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮಾರ್ಚ್ 06, 2011

ಮರುಸೊಳ್ಳು/ಮರುಸೊಡರು ಅಂದರೇನು?

’ಮರ್ಸೊಳ್ಳು’, ’ಮರುಸೊಳ್ಳು’, ’ಮರುಸೊಡರು’ ಎಂಬ ಪದ ನಮ್ಮ ಕಡೆ ( ಮಯ್ಸೂರ್, ಮಂಡ್ಯ, ಚಾ.ನಗರ) ಬಳಕೆಯಲ್ಲಿದೆ.
ಮೊದಲೆಲ್ಲ ಮದುವೆ, ಹೆಸರಿಡುವುದು,ತೊಟ್ಟಿಲು ತರುವುದು ಮತ್ತಿತರ ಒಳ್ಳೆ ಕೆಲಸಗಳನ್ನು ಮನೆಯಲ್ಲೇ ನಡೆಸಲಾಗುತ್ತಿತ್ತು. ಆಗ ಮನೆಯಲ್ಲೇ ಆ ಹಬ್ಬದ ಇಲ್ಲವೆ ಒಳ್ಳೆಯ ಕೆಲಸದ ಹಗಲಿನಲ್ಲೂ ’ಸೊಡರು’/ದೀಪವನ್ನು (ಇದನ್ನು ದೀಪಾಲೆ ಕಂಬ ಅಂತನೂ ಹೇಳುತ್ತಾರೆ)ಹಚ್ಚಲಾಗುತ್ತಿತ್ತು.

ಒಳ್ಳೆ ದಿನದ(ಮದುವೆ ಇಲ್ಲವೆ ಹೆಸರಿಡುವುದು ಇಲ್ಲವೆ ತೊಟ್ಟಿಲು ತರುವುದು) ಮರುದಿನ ಕೆಲವು ಕಟ್ಟುಪಾಡುಗಳನ್ನು ನಮ್ಮ ಹಳ್ಳಿಯ ಮಂದಿ ಪಾಲಿಸುತ್ತಾರೆ. ಅವುಗಳಲ್ಲಿ
೧. ಆ ಒಳ್ಳೆಯ ಕೆಲಸದ ಮುಕ್ಯವಾದ ವ್ಯಕ್ತಿಗಳು ಅಂದರೆ ಮದುಮಕ್ಕಳು
೨. ತೊಟ್ಟಿಲು ತಂದ ಹಬ್ಬವಾದರೆ ಆ ಮಗುವು

’ಮರುಸೊಡರ’ನ್ನು ನೋಡಬಾರದು ಎಂಬ ನಂಬಿಕೆ ಇದೆ. ಅಂದರೆ ಸೊಡರು ಹಚ್ಚಿದ ದಿನದ ಮಾರನೆ ದಿನ ಆ ಸೊಡರು ಹಚ್ಚಿದ ಮನೆಯಲ್ಲಿ ಇರಬಾರದು ಅಂತ. ಹಾಗಾಗಿ ’ಮರುಸೊಡರು ನಾಳು’/ ಮರುಸೊಳ್ಳು/ಮರ್ಸೊಳ್ಳು ಎಂಬ ಪದ ಬಳಕೆಯಲ್ಲಿದೆ.

ಶುಕ್ರವಾರ, ಜನವರಿ 02, 2009

ಹಳ್ಳಿ-ಹಾಡು

ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು
ಹೊಂಟ್ಯಾನ ಎನಗಂಡ ಹೊಲದೆಡೆಗೆ
ಹೊತ್ತು ಮುಳುಗೊ ಮುಂದ ಬಾರಪ್ಪ ಮನಿಗೆ

ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆಕಣಮ್ಮಿ
ಆಳು ಕಾಳು ಕಡ್ದಿನೆಲ್ಲ ಸಮರಿಯಲು
ಹೊತ್ತು ಮುಳುಗುವುದು ಎನ್ನೊಡತಿ

ಹೊತ್ತು ಮುಳುಗಿದ ಮ್ಯಾಲೆ ಗುಂಡಿಗಿ ನಡಗಯ್ತಿ
ನೀನಿಲ್ಲದ ಮನಿ ಹೂವಿಲ್ಲದ ಗಿಡದಂತಿ
ಲಗೂನ ಮನಿಗೆ ಬಂದ್ಸೇರು ನನಗೆ ನಿನ್ನ ಚಿಂತಿ

ಆಡಾಕ ಆಡ್ಮರಿಗಳು, ನೋಡಾಕ ಹೂದೊಟ
ಕೂಡಿ ಮಾತಾಡಾಕ ನೆರೆಹೊರೆಯವರ ಕೂಟ
ಹಂಗ್ಯಾಕ ಹುಲುಬುತಿ ನಾ ಬರಗಂಟ

ಗದ್ದೆಯ ತೆವರಿಯಲ್ಲಿ ನಲಿಯುತ ಬಂದವಳೆ
ಮುದ್ದೆ ಉಪ್ಪೆಸರು ಹೊತ್ತು ತಂದವಳೆ
ಯಾಕೀಟ್ ತಡವಾಯಿತು ನೀ ಹೇಳೆ

ಮನಿಯಾಗ ಮಗು ಅಳಾಕಹತ್ತಿತ್ತು
ಕಟ್ಟಿದ ಕರುವು ಹಗ್ಗವ ಬಿಡಿಸ್ಕೊಂಡಿತ್ತು
ಮಗುವನ್ನ ಮಲಗಿಸಿ, ಕರುವನ್ನ ಕಟ್ಟಾಕಿ
ಬರಾಕ ಹೊತ್ತಾತು, ಈ ಕೊಂಕು ಮಾತ್ಯಾಕ