ಶನಿವಾರ, ಏಪ್ರಿಲ್ 28, 2018

ಪಂಪ, ಆಂಡಯ್ಯ, ಬಸವಣ್ಣ ಮತ್ತು ಮಂಟೇಸ್ವಾಮಿ

ಪಂಪ, ಆಂಡಯ್ಯ, ಬಸವಣ್ಣ ಮತ್ತು ಮಂಟೇಸ್ವಾಮಿಯವರ #ಮಾದರಿ ಗಳನ್ನು ನಾನು ಈ ತೆರನಾಗಿ ಅರಿತುಕೊಂಡಿದ್ದೇನೆ.
ಪಂಪ - ದೇಸಿಯನ್ನು ಮಾರ್ಗಕ್ಕೆ ಒಗ್ಗಿಸುವುದು. ಪಂಪ ಎಶ್ಟು ಕನ್ನಡದ್ದೇ ಪದಗಳನ್ನು ಬಳಸುತ್ತಾನೊ ಅಶ್ಟೆ ತೊಡಕಾದ ಸಂಸ್ಕ್ರುತ ಪದಗಳನ್ನು ಬಳಸುತ್ತಾನೆ. ಇದು ಪಂಪನ ಹೊತ್ತನ್ನು ತೋರುತ್ತದೆ. ಕನ್ನಡವನ್ನು 'ಮಾರ್ಗ'ದ ಮಾದರಿಯ ಕಬ್ಬಗಳಿಗೆ ಹೊಂದಿಸುತ್ತಿದ್ದ ಹೊತ್ತದು.
ಆಂಡಯ್ಯ- ಕಡು ದೇಸಿಯನ್ನು ಮಾರ್ಗಕ್ಕೆ ಒಗ್ಗಿಸುವುದು. ಅಂದರೆ ಬರೀ ಕನ್ನಡದ್ದೇ ಆದ ಇಲ್ಲವೆ ತದ್ಬವಗಳನ್ನು ಪದಗಳನ್ನು ಬಳಸಿ 'ಮಾರ್ಗ'ದ ಮಾದರಿಯ ಕಬ್ಬಗಳಿಗೆ ಹೊಂದಿಸುವುದು. ಅಂದಿನ ಕಬ್ಬಿಗರು ಕನ್ನಡದ ಕಬ್ಬಗಳಲ್ಲಿ ತತ್ಸಮಗಳನ್ನು ಹೆಚ್ಚಾಗಿಯೇ ಬಳಸುತ್ತಿದ್ದುದರ ಇದಿರು ಸಿಡಿದೆದ್ದು 'ಕಬ್ಬಿಗರ ಕಾವನ್' ನೆಗಳಿದನು.
ಬಸವಣ್ಣ - ಬಸವಣ್ಣ ಇಲ್ಲವೆ ಶರಣರು ಒಂದು ಹೊಸ ದಾರಿಯನ್ನು ಹುಟ್ಟು ಹಾಕಿದರು. ಅಂದರೆ ದೇಸಿಯನ್ನು ಮಾರ್ಗಕ್ಕೆ ಹೊಂದಿಸದೆ' ದೇಸಿಯನ್ನೇ ಮಾರ್ಗ'ವನ್ನಾಗಿ ಮಾಡುವ ಮೊಗಸು ಅದು. ಅಂದರೆ 'ಮಾರ್ಗ' ಮಾದರಿಯ ಕಬ್ಬಗಳನ್ನು ಬದಿಗೆ ತಳ್ಳಿ ಕನ್ನಡದ್ದೇ ಮಾದರಿಯ ಸೂಳ್ನುಡಿಗಳನ್ನು ಅದರಲ್ಲೂ ಸಾಮಾನ್ಯ ಮಂದಿಯೂ ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದು.
ಮಂಟೇಸ್ವಾಮಿ - ಮೇಲೆ ತಿಳಿಸಿದ ಮಾದರಿಗಳಿಗಿಂತ ಮಂಟೇಸ್ವಾಮಿಯ ಮಾದರಿ ಬೇರೆಯಾಗಿದೆ. ಅದೇನೆಂದರೆ ಇಲ್ಲಿ 'ಮಾರ್ಗ'ವೇ ಇಲ್ಲ. ಇರುವುದೆಲ್ಲ ದೇಸಿ. ಅಂದರೆ 'ಬರಿಗೆತನ'ದ ಸೋಂಕು ಇದರಲ್ಲಿಲ್ಲ. ಇರುವುದೆಲ್ಲ ಬಾಯ್ತನದ ಕಟ್ಟಣೆಗಳೇ. ಒಂದು ತೆರನಾಗಿ 'ಮಾರ್ಗ'ವನ್ನು ಕಡೆಗಣಿಸಿ/ದಿಕ್ಕರಿಸಿದ ಮಾದರಿ ಇದು ಎಂದು ಹೇಳಬಹುದು. ಬಸವಣ್ಣನ ಹಾಗೆ ಪಾರ್ಮಲ್ ಆದ ಅನುಬವ ಮಂಟಪವನ್ನು ಮಂಟೇಸ್ವಾಮಿ ಕಟ್ಟಲಿಲ್ಲ.
ಇಲ್ಲಿ ಒಂದು ಮಾದರಿಯನ್ನು ಇನ್ನೊಂದು ಮಾದರಿಗೆ ಹೋಲಿಸ ಹೋಗಬಾರದು. ಯಾಕಂದರೆ ಇವೆರೆಲ್ಲರೂ ಕನ್ನಡದ ಹಿನ್ನಡವಳಿಯಲ್ಲಿ ಬೇರೆ ಬೇರೆ ಹೊತ್ತಿನಲ್ಲಿ ಬಂದವರು. ಆಯ ಹೊತ್ತಿಗೆ ತಕ್ಕಂತೆ ತಮ್ಮ ತಮ್ಮ ಕೆಲಸಗಳನ್ನು ಮಾಡಿದರು. ಇವರೆಲ್ಲರ ಕೊಡುಗೆಯಿಂದಲೇ ಕನ್ನಡವು ಇಂದು ಉಳಿದಿರುವುದು ಮತ್ತು ಹುರುಪು ತುಂಬುತ್ತಿರುವುದು.

ಕಾಮೆಂಟ್‌ಗಳಿಲ್ಲ: