ಹೆಗಲ ಮ್ಯಾಲೆ ನೇಗಿಲ ಹೊತ್ಕೊಂಡು
ಹೊಂಟ್ಯಾನ ಎನಗಂಡ ಹೊಲದೆಡೆಗೆ
ಹೊತ್ತು ಮುಳುಗೊ ಮುಂದ ಬಾರಪ್ಪ ಮನಿಗೆ
ಹೊಲದಲ್ಲಿ ಸ್ಯಾನೆ ಗೇಮೆ ಅಯ್ತೆಕಣಮ್ಮಿ
ಆಳು ಕಾಳು ಕಡ್ದಿನೆಲ್ಲ ಸಮರಿಯಲು
ಹೊತ್ತು ಮುಳುಗುವುದು ಎನ್ನೊಡತಿ
ಹೊತ್ತು ಮುಳುಗಿದ ಮ್ಯಾಲೆ ಗುಂಡಿಗಿ ನಡಗಯ್ತಿ
ನೀನಿಲ್ಲದ ಮನಿ ಹೂವಿಲ್ಲದ ಗಿಡದಂತಿ
ಲಗೂನ ಮನಿಗೆ ಬಂದ್ಸೇರು ನನಗೆ ನಿನ್ನ ಚಿಂತಿ
ಆಡಾಕ ಆಡ್ಮರಿಗಳು, ನೋಡಾಕ ಹೂದೊಟ
ಕೂಡಿ ಮಾತಾಡಾಕ ನೆರೆಹೊರೆಯವರ ಕೂಟ
ಹಂಗ್ಯಾಕ ಹುಲುಬುತಿ ನಾ ಬರಗಂಟ
ಗದ್ದೆಯ ತೆವರಿಯಲ್ಲಿ ನಲಿಯುತ ಬಂದವಳೆ
ಮುದ್ದೆ ಉಪ್ಪೆಸರು ಹೊತ್ತು ತಂದವಳೆ
ಯಾಕೀಟ್ ತಡವಾಯಿತು ನೀ ಹೇಳೆ
ಮನಿಯಾಗ ಮಗು ಅಳಾಕಹತ್ತಿತ್ತು
ಕಟ್ಟಿದ ಕರುವು ಹಗ್ಗವ ಬಿಡಿಸ್ಕೊಂಡಿತ್ತು
ಮಗುವನ್ನ ಮಲಗಿಸಿ, ಕರುವನ್ನ ಕಟ್ಟಾಕಿ
ಬರಾಕ ಹೊತ್ತಾತು, ಈ ಕೊಂಕು ಮಾತ್ಯಾಕ
2 ಕಾಮೆಂಟ್‌ಗಳು:
ಇದು ಬಡಗಣ, ತೆಂಕಣ ಎರಡೂ ಹಳ್ಳಿಗಳ ನುಡಿ ಬೆರೆತಂತೆ ಇದೆ ಅಲ್ಲವೆ.. ಅಂದರೆ.. ಬಡಗಣ ಹಳ್ಳಿ ನುಡಿ, ತೆಂಕಣ ಹಳ್ಳಿ ನುಡಿ ಹೆಚ್ಚು.. ಬೇರೆ ಬೇರೆ.. ಅದಿಕ್ಕೆ..
ಹವ್ದ..ಇದೇ ಕನ್ನಡ ನಾಡಿನ ದಿಟವಾದ 'ಒಂದುಗೂಡಿಕೆ'(ಏಕೀಕರಣ). ಈ ತೆರನಾದ ಹಾಡುಗಳಿಂದ ಒಗ್ಗಟ್ಟು ಮೂಡಲಿ ಎಂಬ ಹಾರಯ್ಕೆ ನನ್ನದು.
ಆದರೂ ತೆಂಕಣ, ಬಡಗಣ ಹಳ್ಳಿಗಳ ಮಾತಿನಲ್ಲಿ ನಾವಂದಿಕೊಂಡಶ್ಟು ಬೇರೆತನಗಳಿಲ್ಲ
ಬಡಗಣ ಹಳ್ಳಿ - ಅಯ್ತಿ
ತೆಂಕಣ ಹಳ್ಳಿ - ಅಯ್ತೆ
ಬಡಗಣ ಹಳ್ಳಿ - ಬಂದಾನ?
ತೆಂಕಣ ಹಳ್ಳಿ - ಬಂದಾನೊ
ಕಾಮೆಂಟ್ ಪೋಸ್ಟ್ ಮಾಡಿ