ಭಾನುವಾರ, ಜೂನ್ 24, 2012

ಚಿದಾನಂದ ಮೂರ್ತಿಯವರ ಬರಹಕ್ಕೆ ಇದಿರುಬರಹ


ಹಿರಿಯರಾದ ಚಿದಾನಂದ ಮೂರ್ತಿಗಳು ಹಲವು ವಿಶಯಗಳನ್ನು ತಮ್ಮ ಬರಹದಲ್ಲಿ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಹಲವು ಪೊಳ್ಳುತನದಿಂದ ಕೂಡಿರುವುದರಿಂದ ಇದರ ಬಗ್ಗೆ ಮರುನುಡಿಯಬೇಕಾಗಿದೆ.

೧. ಇಂಗ್ಲಿಶ್ ಸ್ಪೆಲ್ಲಿಂಗ್ ತೊಡಕಿದೆ. ಕನ್ನಡದಲ್ಲೂ ಇರಲಿ. ತಪ್ಪೇನು?
ಇಂಗ್ಲಿಶ್ ಎಂದಿಗೂ ಒಂದು ಪೊನೆಟಿಕ್ (ಉಲಿಕೆಗೆ ಅನುಗುಣವಾಗಿ) ನುಡಿಯಾಗಿರಲಿಲ್ಲ ಹಾಗಾಗಿ ಇಂಗ್ಲಿಶಿನಲ್ಲಿ ಹೇರಳ ಸ್ಪೆಲ್ಲಿಂಗ್ ತೊಡಕುಗಳು ಉಂಟಾಗಿವೆ. ಆದರೆ ಕನ್ನಡದಲ್ಲಿ ಅಂತಹ ದೊಡ್ಡ ಮಟ್ಟದ ಸ್ಪೆಲ್ಲಿಂಗ್ ತೊಡಕಿಲ್ಲ ಯಾಕಂದರೆ ಆ ತೊಡಕು ಇರುವುದು ಸಂಸ್ಕ್ರುತದಿಂದ ಎರವಲು ಪಡೆದ ಪದಗಳಿಗೆ ಮಾತ್ರ. ಆದರೆ ಇಂದಿನ ಕನ್ನಡ ಬರಹಗಳಲ್ಲಿ ಹೆಚ್ಚೆಚ್ಚು ಸಂಸ್ಕ್ರುತದ ಪದಗಳು ಕಾಲಿಡುತ್ತಿರುವುದರಿಂದ ಈ ಸ್ಪೆಲ್ಲಿಂಗ್ ತೊಡಕು ದೊಡ್ಡದಾಗಿ ಕಾಣಿಸುತ್ತದೆ. ಹಾಗಾಗಿ ಡಿ.ಎನ್. ಶಂಕರಬಟ್ಟರು ಈ ಎರಡು ಹೊಳಹುಗಳನ್ನು ಸೂಚಿಸಿದ್ದಾರೆ.

     ಅ) ಕನ್ನಡ ಬರಹಗಳಲ್ಲಿ ಸಂಸ್ಕ್ರುತದ ಪದಗಳ ಬಳಕೆಯನ್ನು ತಗ್ಗಿಸುವುದು.
     ಆ) ಈಗಿರುವ ಕನ್ನಡ ಬರಹದಲ್ಲಿರುವ ಬೇಡದಿರುವ ಕೆಲವು ಬರಿಗೆಗಳನ್ನು ಕನ್ನಡ ಬರಹಮಾಲೆಯಿಂಡ ಕಯ್ ಬಿಡುವುದು.

ಈ ಬರಿಗೆಗಳನ್ನು ಕಯ್ ಬಿಡುವ ಕೆಲಸವನ್ನು ಮಾಡಿದವರಲ್ಲಿ ಶಂಕರಬಟ್ಟರು ಮೊದಲಿಗರೇನಲ್ಲ.. ನಡುಗನ್ನಡದ ಕವಿ ಹರಿಹರ ಮೊದಲು ’ೞ’ ಮತ್ತು ’ಱ’ ಗಳನ್ನು ಕಯ್ ಬಿಟ್ಟು ಬರೆಯಲು ತೊಡಗಿ ಆಮೇಲೆ ಹೆಚ್ಚಿನವರು ಅವನ ದಾರಿಯನ್ನೇ ಪಾಲಿಸಿದರು. ಹಾಗಾಗಿ ಹೊಸಗನ್ನಡದಲ್ಲಿ ನಾವು ’ೞ’, ಮತ್ತು ’ಱ್’ ಗಳನ್ನು ಉಳಿಸಿಕೊಂಡಿಲ್ಲ. ಎಶ್ಟೊ ಕನ್ನಡಿಗರಿಗೆ ಈ ಬರಿಗೆಗಳ ಪರಿಚಯವೂ ಇಲ್ಲ. ಹಾಗಾಗಿ ಅಂತಹ ದೊಡ್ಡದಾದ ಆಬಾಸವಾಗಲಿ ಆಗುತ್ತಿದೆ ಎಂದು ಯಾರು ಹೇಳುತ್ತಿಲ್ಲ. ಹಳೆಗನ್ನಡವನ್ನು ಓದುವ ಕೆಲವೇ ಕೆಲವರು ’ಱ’ ಮತ್ತು ’ೞ’ ಗಳನ್ನು ತಿಳಿದುಕೊಂಡು ಓದುತ್ತಿದ್ದಾರೆ. ಮಹಾಪ್ರಾಣವನ್ನು ನಾವು ಇದೇ ರೀತಿ ಇರಿಸಬಹುದು. ಎಲ್ಲರೂ ಹೇಗೆ ಱ, ೞ ಹೇಗೆ ಕಲಿಯುತ್ತಿಲ್ಲವೊ ಹಾಗೆ ಎಲ್ಲರೂ ಮಹಾಪ್ರಾಣವನ್ನು ಕಲಿಯಬೇಕಾಗಿಲ್ಲ. ಇದಲ್ಲದೆ ಮಾತಿಗೆ ತಕ್ಕಂತೆ ತಮ್ಮ ಲಿಪಿಯನ್ನು ಅಣಿಗೊಳಿಸಿಕೊಂಡಿರುವ ಪಿನ್ನಿಶ್ ನುಡಿಯ ಬಗ್ಗೆ ಚಿ.ಮೂರವರು ತಿಳಿದುಕೊಂಡಿಲ್ಲ ಅಂತ ಕಾಣಿಸುತ್ತೆ. ಇದನ್ನು ಶಂಕರಬಟ್ಟರು ತಮ್ಮ ಹೊತ್ತಗೆಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂಗ್ಲಿಶಿನಂತೆ ಎಲ್ಲ ಪದಗಳಿಗೆ ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳವ ಗೊಡವೆ ಪಿನ್ನಿಶ್ ನುಡಿಯಲ್ಲಿ ಇಲ್ಲ. ಹಾಗಾಗಿ ಪಿನ್ನಿಶ್ ನುಡಿಯಲ್ಲಿ ಅವರು ಜಗತ್ತಿನಲ್ಲೇ ಮೇಲ್ಮಟ್ಟದ ಕಲಿಕೆಯೇರ್ಪಾಟನ್ನು ಕಟ್ಟಿದ್ದಾರೆ.

೨. ಮಹಾಪ್ರಾಣಗಳನ್ನು ಬಿಟ್ಟರೆ ಆಬಾಸವಾಗುತ್ತದೆ
ಚಿದಾನಂದ ಮೂರ್ತಿಯವರು ಬೇಕೆಂದೇ ಹಲವು ವಿಶಯಗಳನ್ನು ಮುಚ್ಚಿಟ್ಟಿದ್ದಾರೆ. ಡಿ.ಎನ್. ಶಂಕರಬಟ್ಟರು ಹೇಳಿರುವ ಬರಿಗೆಮಾಲೆಯನ್ನು ಹಳೆಗನ್ನಡ/ನಡುಗನ್ನಡದ ಕವಿಗಳು ಪಾಲಿಸಿದ್ದಾರೆ.
ಎತ್ತುಗೆಗೆ:
     ಅ) ಕವಿರಾಜಮಾರ್ಗದಲಿ ’ದೋಸಮಿನಿತೆಂದು..." ಎಂಬ ಪದ್ಯವಿದೆ. ಗಮನಿಸಿ ಇದರಲ್ಲಿ ’ದೋಸ’ ಎಂದೇ ಬಳಸಲಾಗಿದೆಯೇ ಹೊರತು ’ದೋಷ’ ಎಂದು ಬಳಸಲಾಗಿಲ್ಲ. ’ಋಷಿ’ ಎಂದು ಈಗ ಬರೆಯಲಾಗುತ್ತಿರುವ ಪದವನ್ನು ಹಳೆಗನ್ನಡಲ್ಲಿ ’ರಿಸಿ’ ಎಂದೇ ಬರೆಯಲಾಗಿತ್ತಿತ್ತು, ಹಾಗಂತ ಕವಿರಾಜಮಾರ್ಗ ಇಲ್ಲವೆ ಇತರೆ ಓದುವಾಗ ಮಾನ್ಯ ಚಿದಾನಂದ ಮೂರ್ತಿಗಳಿಗೆ ಆಬಾಸವಾಗಲಿಲ್ಲವೇನೊ?

    ಆ) ಆಂಡಯ್ಯನ ’ಕಬ್ಬಿಗರ ಕಾವ’ದ ಬಗ್ಗೆ ಹೊಸಗನ್ನಡದಲ್ಲಿ ಸೀಳುನೋಟದ ಹಲವು .ಕ್ರುತಿಗಳು ಬಂದಿದೆ. ಆದರೆ 'ಕಬ್ಬಿಗರ ಕಾವ'ದಲ್ಲಿ ಎಲ್ಲೂ ಮಹಾಪ್ರಾಣಗಳನ್ನು ಬಳಸಿಲ್ಲ. ’ಘೋಷಣೆ’ ಯನ್ನು ’ಗೋಸಣೆ’ ಎಂದೇ ಆಂಡಯ್ಯನು ಬರೆದಿರುವುದು. ಈ ರೀತಿ ಬರೆಯುವುದು ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಮತ್ತು ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡವನ್ನಾಗಿ ಮಾಡುವ ಮೊಗಸೇ ಆಗಿತ್ತು. ಹೀಗೆ ಆಂಡಯನನ್ನು ಓದುವಾಗ ಆಗದ ಆಬಾಸ ಈಗ ಏಕೆ ಆಗುತ್ತದೆ? ಚಿದಾನಂದ ಮೂರ್ತಿಯವರೇ ಇದಕ್ಕೆ ಉತ್ತರಕೊಡಬೇಕು. ಒಂದು ವೇಳೆ ಚಿದಾನಂದ ಮೂರ್ತಿಯವರಿಗೆ ಆಬಾಸವಾದರೂ ಎಲ್ಲ ಕನ್ನಡಿಗರಿಗೂ ಅದೇ ರೀತಿ ಆಬಾಸವಾಗುತ್ತದೆ ಎಂದು ಚಿದಾನಂದ ಮೂರ್ತಿಯವರು ಹೇಗೆ ಹೇಳುತ್ತಾರೆ?

ಇಶ್ಟಕ್ಕೂ ಮಹಾಪ್ರಾಣವಿರುವ ಒಂದೇ ಒಂದು ಕನ್ನಡದ್ದೇ ಆದ ಪದವನ್ನು ಚಿದಾನಂದ ಮೂರ್ತಿಯವರು ತೋರಿಸಿಕೊಡಲಿ.

೩. ಕನ್ನಡದಲ್ಲಿ ಉತ್ತಮ ಚಿಂತನೆ, ಬಾವನೆಗಳನ್ನು ವ್ಯಕ್ತ ಪಡಿಸಲಾರೆವು
ಯಾವುದೇ ಒಂದು ನುಡಿಗೆ ಅದರೇ ಆದ ಸೊಗಡು, ಹಿನ್ನಡವಳಿ ಇರುತ್ತದೆ. ಸಂಸ್ಕ್ರುತದಲ್ಲಿ ಹೊರತರುವ ಅನಿಸುಗಳು, ಉಂಕುಗಳು ಕನ್ನಡದಲ್ಲೂ ಇರಬೇಕೆನ್ನುವ ಒತ್ತಾಯವೇತಕ್ಕೆ? ಹಾಗೆ ಕನ್ನಡದಲ್ಲಿ ಹೊರತರುಬಹುದಾದ ವಿಶಯಗಳು ಸಂಸ್ಕ್ರುತದಲ್ಲಿ ತರಲಾಗುವುದಿಲ್ಲ. ’ಒಂದು’, ಎರಡು ಅಂತ ಸಂಸ್ಕ್ರುತದಲ್ಲಿ ಬರೆಯಲು ಆಗುವುದೇ ಇಲ್ಲ. ಅವನ್ನು ’ಓಂದು’ ಮತ್ತು ’ಏರಡು’ ಅಂತಲೇ ಸಂಸ್ಕ್ರುತದಲ್ಲಿ ಬರೆಯಬೇಕಾಗುತ್ತದೆ. ಇದನ್ನೇ ಮುಂದಿಟ್ಟುಕೊಂಡು ಸಂಸ್ಕ್ರುತದಲ್ಲಿ ಇಂತಹ ಸರಳ ವಿಶಯಗಳಾದ ಎಣಿಕೆಯನ್ನು ವ್ಯಕ್ತ ಪಡಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆಯೆ? ಆದ್ದರಿಂದ ಚಿದಾನಂದಮೂರ್ತಿಯವರು ಹೇಳುತ್ತಿರುವ ’ಕನ್ನಡದಲ್ಲಿ ಉತ್ತಮ ಭಾವನೆ ಮತ್ತು ಚಿಂತನೆಗಳನ್ನು ವ್ಯಕ್ತ ಪಡಿಸಲಾರೆವು’ ಎಂಬ ಮಾತಿನಲ್ಲಿ ಹುರುಳಿಲ್ಲ.

೪. ಸಂಸ್ಕ್ರುತದ ಮಂತ್ರಗಳನ್ನು ಸಂಸ್ಕ್ರುತದಲ್ಲಿರುವಂತೆ ನಾವು ಉಲಿಯದಿದ್ದರೂ ಬರೆಯಬೇಕು
ಚಿದಾನಂದ ಮೂರ್ತಿಯವರು ಹೇಳಿರುವ ಎಲ್ಲ ಮಂತ್ರಗಳು ಸಂಸ್ಕ್ರುತದ್ದವು ಕನ್ನಡದ್ದಲ್ಲ. ಇವನ್ನು ಹೆಚ್ಚು ಕನ್ನಡ ಮಂದಿಯೂ ತಮ್ಮ ದಿನಬಳಕೆಯಲ್ಲಿ ಬಳಸುವುದಿಲ್ಲ. ಕೆಲವರು ಬಳಸುತ್ತಿರುವವರು ಅದು ಸಂಸ್ಕ್ರುತದಲ್ಲಿ ಹೇಗಿದಿಯೋ ಹಾಗೆ ಓದುವುದಿಲ್ಲ ಇಲ್ಲವೆ ಉಲಿಯುವುದಿಲ್ಲ. ಆದರೂ ಒತ್ತಾಯಪೂರ್ವಕವಾಗಿ ಸಂಸ್ಕ್ರುತದಲ್ಲಿ ಹೇಗಿದಿಯೋ ಹಾಗೆ ಅದನ್ನ ಉಳಿಸಿಕೊಳ್ಳಬೇಕೆಂದು ಇವತ್ತಿನ ಕನ್ನಡ ಬರಹ ಬಲವಂತ ಪಡಿಸುತ್ತಿದೆ. ವಿಸರ್ಗದ ಬದಲಾಗಿ ’ಹ’ಕಾರವನ್ನೇ ಕನ್ನಡಿಗರು ಉಲಿಯುವುದು. ಕಿವಿಗೆ ’ಹ’ಕಾರ ಕೇಳಿದರೂ ಕಣ್ಣಿಗೆ ವಿಸರ್ಗವೇ ಏಕೆ ಕಾಣಿಸಬೇಕು? ಇನ್ನು ವಿಸರ್ಗವನ್ನು ಬಿಡುವುದರಿಂದ ಕನ್ನಡದ್ದೇ ಆದ ಪದಗಳಿಗೆ ಯಾವುದೇ ತೊಂದರೆಯಿಲ್ಲ.

೫. ಅಚ್ಚಗನ್ನಡದ ಪದಗಳ ಹುಟ್ಟು ವ್ಯರ್ತ ಕೆಲಸ ಎಂಬ ಉಪದೇಶ:
ಬರಿಗೆ, ಅರಿಮೆ ಮತ್ತು ಉಲಿಕೆ ಎಂಬ ಪದಗಳು ಉಂಟು ಮಾಡುವುದು ಬೇಕಾಗಿಲ್ಲ ಮತ್ತು ಇವು ಸಂಸ್ಕ್ರುತಕ್ಕಿಂತ ಕಟಿಣ ಎಂಬ ತಮ್ಮ ಅನಿಸಿಕೆಯನ್ನು ಅದೇಶವೆಂಬಂತೆ ಯಾವುದೇ ಕಾರಣ ಕೊಡದೇ ಹೊರಡಿಸಿದ್ದಾರೆ. ಎಲ್ಲರಿಗೂ ಸಾಮಾನ್ಯವಾಗಿ ಅರ್ತವಾಗುವ ಪದಗಳಾದ ಬರೆ, ಅರಿ ಮತ್ತು ಉಲಿ ಎಂಬ ಪದಗಳಿಂದ ಈ ಪದಗಳನ್ನು ಉಂಟುಮಾಡಲಾಗಿದೆ. ಕನ್ನಡಿಗರಿಗೆ ಕನ್ನಡಕ್ಕಿಂತ ಸಂಸ್ಕ್ರುತವೇ ಸುಲಬ ಎನ್ನುವ ಚಿ.ಮೂ ಅವರ ಮಾತನ್ನು ಯಾರಾದರೂ ಒಪ್ಪಲಾಗುತ್ತದೆಯೇ? ಆರಂಬಕಾರನಿಗೆ ಹೊಲ ಉಳುವುದು ಕಶ್ಟವೆ? ಕೋಗಿಲೆಗೆ ಇನಿದನಿ ಉಲಿಯುವುದು ಕಶ್ಟವೆ? ಹೂವಿಗೆ ಅರಳುವುದು ಕಶ್ಟವೆ? ಇದನ್ನು ಚಿ.ಮೂ ಅವರು ಕೊಂಚ ಯೋಚಿಸಲಿ. ಈ ರೀತಿ ಕನ್ನಡದಲ್ಲಿ ಪದವನ್ನು ಉಂಟು ಮಾಡದೇ ಸುಮ್ಮನೆ ’ಕನ್ನಡ! ಕನ್ನಡ!’ ಅಂತ ಬಡಿದುಕೊಳ್ಳುವುದರಲ್ಲಿ ಏನಿದೆ? ಚಿ.ಮೂ.ರವರು ಇಶ್ಟೊಂದು ಕನ್ನಡದ ಬಗೆಗಿನ ಅರಕೆಗಳನ್ನು ಮಾಡಿದ್ದು ಏತಕ್ಕೆ?

೬. ಕನ್ನಡ ಅತೀ ಎನಿಸುವಶ್ಟು ಸಂಸ್ಕ್ರುತದ ಎರವಲು ಪಡೆದಿಲ್ಲ
ಅವರ ಬರಹದ ತಲೆಬರಹದಲ್ಲಿ ಒಟ್ಟು ೬ ಪದಗಳಿವೆ ಅದರಲ್ಲಿ ೪ ಪದಗಳು(ಲಿಪಿ, ಸಂಸ್ಕರಣೆ,ಅನಗತ್ಯ,ಅಸಾಧ್ಯ) ಸಂಸ್ಕ್ರುತದ್ದು ಇನ್ನುಳಿದ ೨ ಕನ್ನಡದ್ದು ( ಕನ್ನಡ, ಮತ್ತು). ಅದನ್ನು ಹೀಗೆ ಬರೆಯಬಹುದಿತ್ತು ’ಕನ್ನಡ ಬರಹದಲ್ಲಿ ಮಾರ್ಪು ಬೇಕಾಗಿಲ್ಲ ಮತ್ತು ಆಗುವುದೂ ಇಲ್ಲ’. ಹೀಗೆ ಎಗ್ಗಿಲ್ಲದೆ ಸಂಸ್ಕ್ರುತದ ಎರವಲು ಪದಗಳನ್ನು ತಮ್ಮ ಬರಹದುದ್ದಕ್ಕೂ ಬಳಸಿರುವ ಚಿ.ಮೂ ಅವರು ’ಕನ್ನಡ ಅತೀ ಎನಿಸುವಶ್ಟು ಸಂಸ್ಕ್ರುತದ ಎರವಲು ಪಡೆದಿಲ್ಲಎಂದು ಹೇಗೆ ಹೇಳುತ್ತಾರೆ?

೭. ಕನ್ನಡಿಗರೆಲ್ಲರೂ ಈಗಿರುವ ಲಿಪಿ ಒಪ್ಪಿಕೊಂಡಿದ್ದಾರೆ.
ಮತ್ತೆ ಇವರು ಕನ್ನಡಿಗರಿಗೆ ಯಾವುದೇ ಕಾರಣ ಕೊಡದೇ ತಮ್ಮ ಆದೇಶವನ್ನು ಹೊರಡಿಸುತ್ತಿದ್ದಾರೆ. ಕೆಲವರು, ಅಂದರೆ ಸಂಸ್ಕ್ರುತ ಲಾಬಿಗಳು ಒಪ್ಪಿಕೊಂಡು ಹೇರಲಾದ ಲಿಪಿ ವ್ಯವಸ್ತೆಯನ್ನು ಸಾಮಾನ್ಯರು ಒಪ್ಪಿಕೊಂಡಿದ್ದಾರೆ ಎಂದು ಒಬ್ಬದಿಯ(one-sided) ಮಾತುಗಳನ್ನು ಚಿ.ಮೂರವರು ಮುಂದಿಟ್ಟಿದ್ದಾರೆ. ಆದರೆ ಈಗಲೂ ಕನ್ನಡ ಬರಹದಲ್ಲಿ ಆಗುತ್ತಿರುವ ’ತಪ್ಪು’ಗಳು ಅಂದರೆ ಸಂಸ್ಕ್ರುತದ ಪ್ರಕಾರ ಮಹಪ್ರಾಣ ಇರುವ ಕಡೆ ’ಮಹಾಪ್ರಾಣ’ ಇಲ್ಲದಿರುವುದು. ಮಹಾಪ್ರಾಣ ಇಲ್ಲದಿರುವ ಕಡೆ ಮಹಾಪ್ರಾಣ ಇರುವುದು ಗೊಂದಲವನ್ನು ಉಂಟುಮಾಡಿದೆ. ಈ ತರ ಕನ್ನಡಿಗರು ಮಹಾಪ್ರಾಣವನ್ನು ಒಪ್ಪದಿರುವಿಕೆಯನ್ನು ತೋರಿಸುತ್ತಲೇ ಇದ್ದಾರೆ.

ಕನ್ನಡ ಬರಹದಲ್ಲಿ ಹೆರನುಡಿಗಳನ್ನು ಉಲ್ಲೇಕ ಮಾಡುವುದು ತೀರ ವಿರಳ. ಅದಕ್ಕೋಸ್ಕರ ಕನ್ನಡಬರಹದಲ್ಲಿ ಮಹಾಪ್ರಾಣಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಎಶ್ಟು ಸರಿ. ನಮಗೆ ಬೇಕಾದ ಹಾಗೆ ನಮ್ಮ ಮನೆಯನ್ನು ಕಟ್ಟಿಕೊಳ್ಳುವುದು ವಾಡಿಕೆಯೇ ಹೊರತು ಹೆರವರಿಗೆ ಬೇಕಾದ ಹಾಗೆ ನಮ್ಮ ಮನೆಯನ್ನು ಕಟ್ಟಿಕೊಳ್ಳಲಾದೀತೆ?

ಕೊನೆಗೆ ಯಾವುದೇ ಅರಿಮೆಯ ಓಸುಗರಗಳನ್ನು ಕೊಡದೇ ’ಲಿಪಿ ಸುದಾರಣೆಯನ್ನು ಗಂಬೀರವಾಗಿ ಗಮನಿಸಬೇಕಾಗಿಲ್ಲ’ ಎಂದು ಹೇಳಿದ್ದಾರೆ. ಈಗಾಗಲೇ ಕನ್ನಡ ಬರಿಗೆ ಮಾಲೆಯು ಹಳೆಗನ್ನಡದಿಂದ ಹೊಸಗನ್ನಡಕ್ಕೆ ಮಾರ್ಪಾಗುತ್ತ ಬಂದಿದೆ. ಈ ಮಾರ್ಪಾಗುತ್ತಿರುವುದು ಕನ್ನಡಕ್ಕಿರುವ ಜೀವಂತಿಕೆಯನ್ನು ತೋರಿಸುತ್ತದೆ. ಹಾಗಾಗಿ ಹೊಸಗಾಲದ ಬೇಕು/ಬೇಡಗಳಿಗೆ ತಕ್ಕಂತೆ ಕನ್ನಡ ಬರಿಗೆಮಾಲೆಯನ್ನು ಅಣಿಗೊಳಿಸಿ ಹೊಸ ದಾರಿಯನ್ನು ತುಳಿಯುವ ಕನ್ನಡದ ಪರಂಪರೆಯನ್ನು ನಾವು ಮುಂದುವರೆಸಬೇಕಾಗಿದೆ. ಡಿ.ಎನ್. ಶಂಕರಬಟ್ಟರು ಹೇಳಿರುವ ಬರಹ ಮಾರ್ಪುಗಳನ್ನು ಅಳವಡಿಸಿದರೆ ಹೆಚ್ಚು ಕನ್ನಡಿಗರಿಗೆ ಬಳಕೆಯೇ ಹೊರತು ತೊಂದರೆಯಿಲ್ಲ ಎಂದು ದಾರಾಳವಾಗಿ ಮೇಲೆ ತಿಳಿಸಿದ ಕಾರಣಗಳಿಂದ ದಾರಳವಾಗಿ ನಾನು ಹೇಳಬಯಸುತ್ತೇನೆ.

1 ಕಾಮೆಂಟ್‌:

talegari (ತಾಳೆಗರಿ) ಹೇಳಿದರು...

ಚೀಮೂ ಅಂತವರಿಗೆ ಸಂಸ್ಕ್ರುತದ ದಾಸ್ಯ ಯಾಕೆ ಅಂತ ಆರ್ತಾಗಲ್ಲ. ಒಂದ್ಕಡೆ ಕನ್ನಡ ಉಳ್ಸಕ್ಕೆ ಹೋರಾಡ್ತಾರೆ (?), ಇನ್ನೊಂದ್ಕಡೆ ಕನ್ನಡದ natural ಬೆಳವಣಿಗೆ, ಬದಲಾವಣೆಗಳಿಗೆ ಕಾಲ್ ಅಡ್ಡಹಾಕ್ತಾರೆ.