ಶನಿವಾರ, ಸೆಪ್ಟೆಂಬರ್ 17, 2016

ಒಳ್ಳೆಯ ಬಾಳಾಟ ಎಂದರೇನು? ಹೇಗೆ?


 [ಈ ಬರಹದಲ್ಲಿ ಬರುವ ಬ್ರಾಹ್ಮಣ, ಶೂದ್ರ, ವೈಶ್ಯ ಮತ್ತು ಕ್ಶತ್ರಿಯ ಎಂಬ ಪದಗಳು ಯಾವುದೇ ವ್ಯಕ್ತಿ ಇಲ್ಲವೆ ಮಂದಿಗೆ ತಗುಲಿಹಾಕಿಕೊಂಡಿಲ್ಲ ಬದಲಾಗಿ ಅವುಗಳೆಲ್ಲವನ್ನು ಬೇರೆ ತೆರದಲ್ಲಿ ಇಲ್ಲಿ ನೋಡಲಾಗಿದೆ ಅಂದರೆ ಅವುಗಳನ್ನು ’ಕುರಿಪು’ಗಳು (concepts) ಎಂದು ಬಗೆದು ಈ ಬರಹವನ್ನು ಮಾಡಲಾಗಿದೆ]

ಅಡಿಮಟ್ಟದಲ್ಲಿ ಎಲ್ಲ ಮಾನವರು ಮಯ್(body) ಮತ್ತು ಮನಸ್ಸನ್ನು(mind) ಹೊಂದಿದವರಾಗಿದ್ದಾರೆಂದು ನಮಗೆಲ್ಲ ತಿಳಿದಿರುವ ವಿಶಯ. ನಾವು ನಮ್ಮ ಮಯ್ಯನ್ನು ಹದುಳವಾಗಿ ಇಟ್ಟುಕೊಳ್ಳಲು ಇಲ್ಲವೆ ಹಸಿವನ್ನು ನೀಗಿಕೊಳ್ಳಲು ನಮ್ಮ ನಮ್ಮ ಮಟ್ಟಿಗೆ ತಿಂಡಿ/ಊಟವನ್ನು ಮಾಡುತ್ತೇವೆ. ಹಾಗೆಯೇ ಮನಸ್ಸನ್ನು ಅಂಕೆಯಲ್ಲಿಟ್ಟುಕೊಳ್ಳಲು ಕೂಡಣದ ಮಟ್ಟದಲ್ಲಿ ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡು ಬದುಕು ನಡೆಸಿಕೊಂಡು ಬಂದಿದ್ದೇವೆ. ನಮ್ಮ ಸುತ್ತ ಇರುವ ಗಿಡ, ಮರ,ಕಾಡು, ಹೊಳೆ, ಗಾಳಿ, ಬೆಟ್ಟ, ಬೆಳೆ, ಕಾಳು, ಉಸುರಿಗಳು ಮತ್ತಿತರೆ ಬದುಕುಗಳು ನಮ್ಮನ್ನು ನೇರವಾಗಿ ಇಲ್ಲವೆ ನೇರವಲ್ಲದ ತರದಲ್ಲಿ ನಮ್ಮ ಊಟ-ತಿಂಡಿ, ನಡವಳಿಕೆ, ನಂಬಿಕೆಗಳ ಮೇಲೆ ತಮ್ಮ ಒತ್ತನ್ನು ಬೀರುತ್ತಾ ಬಂದಿವೆ. ಇತ್ತೀಚೆಗೆ, ಅಂದರೆ ೨೦-೩೦ ವರುಶಗಳಲ್ಲಿ ಕೂಡಣದ, ಹಣಕಾಸಿನ, ನಂಬಿಕೆಗಳ ಹೀಗೆ ಹತ್ತು ಹಲವು ವಲಯಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಕೆಲವರು ಈ ಬದಲಾವಣೆಗಳ ಪರವಿದ್ದರೆ ಇನ್ನು ಕೆಲವರು ಈ ಬದಲಾವಣೆಗಳ ಇದಿರಾಗಿ ನಿಂತಿದ್ದಾರೆ. ಹೆಚ್ಚಿನವರು ಈ ಬದಲಾವಣೆಗಳನ್ನು ಅರೆಬರೆ ತಿಳಿದುಕೊಂಡು ತೀರ ಗೋಜಿಗೆ ಹೋಗದೆ ಬರುವುದನ್ನು ಒಪ್ಪಿಕೊಂಡು ಹೊತ್ತನ್ನು ದೂಡುತ್ತಿದ್ದಾರೆ. ಈ ಬದಲಾವಣೆಗಳನ್ನು ಅರಿತುಕೊಳ್ಳಲು ಮತ್ತು ಅವುಗಳ ಮುಂದಿನ ಜಾಡನ್ನು ಪತ್ತೆ ಹಚ್ಚಲು ನಮಗೆ ಕೆಲವು ಕುರಿಪುಗಳ ನೆರವು ಬೇಕಾಗುತ್ತದೆ.  ಅಂತಹ ಕುರಿಪುಗಳ ಮೂಲಕ ಹೊಸನೋಟವನ್ನು ಮತ್ತು ಹೊಳಹುಗಳನ್ನು ನೀಡುವುದೇ ಈ ಬರಹದ ಮುಕ್ಯ ಗುರಿಯಾಗಿದೆ.

ಮೊದಲೇ ಹೇಳಿದಂತೆ ಬುಡಮಟ್ಟದಲ್ಲಿ ನಮಗಿರುವುದು ಮಯ್ ಮತ್ತು ಮನಸ್ಸು. ಅಂದರೆ ನಾವೆಲ್ಲರೂ ನಮ್ಮೊಳಗೆ ನಾವು ಶೂದ್ರ(body) ಮತ್ತು ಬ್ರಾಹ್ಮಣ(mind) ಎಂಬ ಕುರಿಪುಗಳನ್ನು ಒಳಗೊಂಡಿದ್ದೇವೆ. ನಮ್ಮ ಬದುಕನ್ನು ಚೆನ್ನಾಗಿ ನಡೆಸಲು ನಮಗೆ ಮಯ್ ಮತ್ತು ಮನಸ್ಸುಗಳೆರಡೂ ಬೇಕಾಗಿದೆಯಲ್ಲದೆ ಅವುಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ಒಂದು ತನ್ನೆದುರ‍್ತನವಿದೆ. ಅದೇನೆಂದರೆ ಒಂದಕ್ಕೆ ಗಮನ ಕೊಡಲು ಹೋದರೆ ಇಲ್ಲವೆ ಬಳಸಿಕೊಂಡರೆ ಇನ್ನೊಂದನ್ನು ಚನ್ನಾಗಿ ಬಳಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಆ ನಿಟ್ಟಿನಲ್ಲಿ ಇವುಗಳ ಬೇಕುಗಳು ಒಂದಕ್ಕೊಂದು ಇದಿರಾಗಿವೆ. ಎತ್ತುಗೆಗೆ, ನಾವು ಗುದ್ದಲಿ ತೆಗೆದುಕೊಂಡು ಹಳ್ಳವನ್ನು ತೋಡುವಾಗ ನಮಗೆ ಬೇರೆ ಚಿಂತನೆಗಳನ್ನು ನಡೆಸಲಾಗುವುದಿಲ್ಲ. ಅಂದರೆ ನಮ್ಮ ಮಯ್ಯನ್ನು ಹೆಚ್ಚು ಹೆಚ್ಚು ಬಳಸಿದಂತೆ, ದುಡಿಸಿಕೊಂಡಂತೆ ನಮ್ಮ ಮನಸ್ಸನ್ನು ಹೆಚ್ಚು ಹೆಚ್ಚು ಬಳಸಲಾಗುವುದಿಲ್ಲ. ಅಂದರೆ ದುಡಿಮೆಯನ್ನು ಮಾಡದೇ ನಮಗೆ ’ಹೇಳುವ’ವನೊಬ್ಬ ಬೇಕಾಗುತ್ತಾನೆ.  ಆ ಕಡೆಯಿಂದ ನೋಡಿದರೂ ಅಶ್ಟೆ, ಅಂದರೆ ನಾವು ಆಳವಾದ ಚಿಂತನೆಗಳನ್ನು ಗಮನವಿಟ್ಟು ಮಾಡಬೇಕಾಗಿ ಬಂದಾಗ ಯಾರೂ ಇಲ್ಲದೆ ಇರುವ ಒಂದು ಕಡೆ ಕುಳಿತು ಮಯ್ಯನ್ನು ಹೆಚ್ಚು ದುಡಿಸಿಕೊಳ್ಳದೇ ಇರಬೇಕಾಗುತ್ತದೆ. ಅಂದರೆ ನಮ್ಮೊಳಗಿರುವ ಶೂದ್ರ ಮತ್ತು ಬ್ರಾಹ್ಮಣಗಳೆಂಬ ಕುರಿಪುಗಳು ಅವುಗಳ ಬಳಕೆಯ ನೆಲೆಯಲ್ಲಿ ಒಂದಕ್ಕೊಂದು ಎದುರಾಗಿವೆ.

ಹಾಗಾದರೆ ನಾವು ಏನು ಮಾಡಬೇಕು? ಬರೀ ಮಯ್ಯನ್ನೇ ಬಳಸಿದರೆ ಮನಸ್ಸಿನ ಇಲ್ಲವೆ ಚಿಂತನೆಯ ಕಸುವನ್ನು ಚೆನ್ನಾಗಿ ಬಳಸಿಕೊಳ್ಳಲಾಗುವುದಿಲ್ಲ. ಇಲ್ಲವೆ ಮಯ್ಯನ್ನು ಬಳಸದೇ ಬರೀ ಮನಸ್ಸನ್ನು ಬಳಸುತ್ತಿದ್ದರೆ ನಮ್ಮ ಮಯ್ ಜಡ್ಡು ಹಿಡಿದು ಬೇನೆಗಳ ತುತ್ತಾಗುತ್ತದೆ. ನಾವು ದಿನಕ್ಕೆ ಒಂದು ಗಂಟೆ ನಡೆಯುವಶ್ಟಾದರೂ ಶೂದ್ರತನವನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಮಾಂಜುಗರು ಸಲಹೆ ನೀಡುತ್ತಾರೆ.  ತನ್ನೇಳಿಗೆ, ಮಯ್ಯೇಳಿಗೆ ಅಲ್ಲದೆ ಮತ್ತಿನ್ನಾವ ಕೋನದಿಂದ ನೋಡಿದರೂ ನಾವು ನಮ್ಮಲ್ಲಿರುವ ಶೂದ್ರ ಮತ್ತು ಬ್ರಾಹ್ಮಣ ಪರಿಚೆಗಳನ್ನು ಹದವಾಗಿ ಬೆರೆಸಿ ಜಾಣತನದಿಂದ ಅದನ್ನು ಬಳಸಿಕೊಳ್ಳಬೇಕಾಗುತ್ತದೆ.  ಇವೆರಡನ್ನು ಸರಿದೂಗಿಸುಕೊಂಡು ಹೋಗುವುದರಲ್ಲೇ ಇರುವುದು ಒಳ್ಳೆ ಬಾಳಾಟ ನಡೆಸುವ ಗುಟ್ಟು/ಜಾಣ್ಮೆ.

ಆದರೆ ಈಗ ನಡೆಯುತ್ತಿರುವುದೇ ಬೇರೆ. ಇತ್ತೀಚಿನ ೨೦-೩೦ ಏಡುಗಳಲ್ಲಿ ನಮ್ಮ ಮಯ್ಯ ಬಳಕೆ ತೀರ ಕಡಿಮೆಯಾಗಿದೆ ಅಲ್ಲದೆ ಮನಸ್ಸಿನ ಬಳಕೆ ಹೆಚ್ಚಾಗಿ ಹಲವು ಎಡವಟ್ಟುಗಳಿಗೆ ದಾರಿಮಾಡಿಕೊಟ್ಟಿದ್ದೇವೆ. ನಾವು ಹೇಗೆ ನಮ್ಮ ಸರಕೊಲವನ್ನು(materialism) ಇಲ್ಲವೆ ತೆವಲನ್ನು ತೀರಿಸಿಕೊಳ್ಳಬಹುದೆಂಬುದರ ಬಗ್ಗೆ ಹೆಚ್ಚು ಹೆಚ್ಚು ಚಿಂತನೆಯನ್ನು ನಡೆಸುತ್ತಿದ್ದೇವೆ. ಅಂದರೆ ನಮ್ಮಲ್ಲಿ ನಾವು ’ವೈಶ್ಯ’ (ಮಾರಾಟ, ವ್ಯಾಪಾರ, commerce) ಎಂಬ ಹೊಸ ಕುರಿಪನ್ನು ಬರಮಾಡಿಕೊಂಡಿದ್ದೇವೆ. ಈ ವೈಶ್ಯತನಕ್ಕೆ ಇಂಬುಕೊಡಲು ಇಲ್ಲವೆ ಅದನ್ನು ಕಾಪಾಡಿಕೊಂಡು ಹೋಗಲು ’ಕ್ಶತ್ರಿಯ’(ಆಳ್ಮೆ, ರಾಜಕೀಯ, politics) ಎಂಬ ಇನ್ನೊಂದು ಕುರಿಪನ್ನು ಸಾಕುತ್ತಿದ್ದೇವೆ. ಹೆಚ್ಚು ಹೆಚ್ಚು ಮಾರಾಟದಿಂದ ನಾವು ಸರಕುಗಳಿಗೆ ತೊತ್ತಾಗಿ ಸರಕುಗಳಲ್ಲಿ ’ದೈವತ್ವ’ವನ್ನು ಕಾಣಲು ಹೊರಟಿದ್ದೇವೆ. ಮಾರುಕಟ್ಟೆಯೇ ನೆಮ್ಮು, ಸರಕುಗಳೇ ದೇವರುಗಳು ಯಾಕಂದರೆ ಸರಕುಗಳಿಂದ ನಮಗೆ ಬೇಕಾದ ನಲಿವನ್ನು ಪಡೆದುಕೊಳ್ಳಬಹುದು ಎಂದು ನಾವು ನಂಬತೊಡಗಿದ್ದೇವೆ. ಮಾರುಕಟ್ಟೆಯಲ್ಲೇ ನಮ್ಮ ಎಲ್ಲ ತೊಂದರೆಗಳಿಗೆ, ಬೇಕುಗಳಿಗೆ ಬಗೆಹರಿಕೆಗಳು ಸಿಗುತ್ತವೆ ಎಂದು ನಂಬತೊಡಗಿದ್ದೇವೆ.

ಹೀಗೆ, ಮಾರಾಟ(ವೈಶ್ಯ) ಮತ್ತು ಆಳ್ಮೆ(ಕ್ಶತ್ರಿಯ) ನಮ್ಮ ಇಂದಿನ ಬದುಕಿನಲ್ಲಿ ಹೆಚ್ಚುಗಾರಿಕೆಯನ್ನು ಪಡೆಯತೊಡಗಿವೆ. ಆದ್ದರಿಂದ ನಾವು ಇಲ್ಲವೆ ನಮ್ಮಲ್ಲಿ ಹೆಚ್ಚಿನವರು ನಮ್ಮಲ್ಲಿರುವ ’ಶೂದ್ರ’ ಎಂಬ ಕುರಿಪನ್ನು ಕಡೆಗೆಣಿಸಲು ಇಲ್ಲವೆ ಮರೆಯಲು ಶುರು ಮಾಡಿದ್ದೇವೆ.  ’ಶೂದ್ರ’ತನವನ್ನು ಮರೆಯುವುದು ಎಂದರೆ, ನಮ್ಮ ಮಯ್ಯಿಗೆ ಬೇಕಾದ ದುಡಿಮೆಯನ್ನು ಕೊಡದೆ ಅದು ಹಲವು ಬೇನೆಗಳ ತವರೂರಾಗುವಂತೆ ನಡೆದುಕೊಳ್ಳುವುದು ಎಂದು. ಬೇನೆಗಳನ್ನು ಸರಿಪಡಿಸಲು ಆರಯ್ಕೆ ಮತ್ತು ಮದ್ದುಗಳ ಮಾರಾಟದ ಏರ‍್ಪಾಟನ್ನು ಮಾಡಿಕೊಂಡಿದ್ದೇವೆ. ಕಯ್ಗೆ, ಕಾಲಿಗೆ, ಕರುಳಿಗೆ, ಉಗುರಿಗೆ, ತೊಗಲಿಗೆ, ಕಿವಿಗೆ ಒಬ್ಬೊಬ್ಬರಂತೆ ಮದ್ದುಗಾರರು ಇಲ್ಲವೆ ಮದ್ದುಗಳು ಇಂದು ದೊರೆಯುತ್ತಾರೆ/ತ್ತವೆ.

ಇದಲ್ಲದೆ ನಾವು ನಮ್ಮೊಳಗಿರುವ ’ಬ್ರಾಹ್ಮಣ’ ಎಂಬ ಕುರಿಪನ್ನು ಕೂಡ ಸರಿಯಾಗಿ ಬಳಸಿಕೊಳ್ಳದೆ ಹುಚ್ಚು ಹೊಳೆಯಂತೆ ಎಲ್ಲೆಂದರಂತೆ ನಮ್ಮ ಚಿಂತನೆಯನ್ನು ಹರಿಯಬಿಡುತ್ತಿದ್ದೇವೆ. ನಮ್ಮ ಚಿಂತನೆಗಳನ್ನು ಸರಿಯಾದ ತೆರದಲ್ಲಿ ಮತ್ತು ಸರಿಯಾದ ಗುರಿಯೆಡೆಗೆ ಕೊಂಡೊಯ್ಯಲು ನಮಗೆ ಆಗುತ್ತಿಲ್ಲ ಯಾಕಂದರೆ ನಾವು ಸರಕುಗಳ ಹೊಳೆಯಲ್ಲಿ ಮತ್ತು ಬಂದವರ ಹಾಗೆ ತೇಲುತ್ತಿದ್ದೇವೆ. ಹಾಗಾಗಿ ನಾವು ದಿಕ್ಕೆಟ್ಟವರಂತೆ ನಡೆದುಕೊಳ್ಳಲು ತೊಡಗಿದ್ದೇವೆ. ಸರಕುಗಳು ನಮ್ಮನ್ನು ಕುಣಿಸುತ್ತಿವೆ. ನಾವು ಅವುಗಳ ತೊತ್ತಾಗುತ್ತಿದ್ದೇವೆ.

ನಮ್ಮೊಳಗಿನ ಬ್ರಾಹ್ಮಣವನ್ನು ನಾವು ತನ್ನೇಳಿಗೆ(ಅದ್ಯಾತ್ಮ)ಗೆ ಬಳಸಿಕೊಳ್ಳಬೇಕಾಗಿತ್ತು ಆದರೆ ನಮ್ಮ ಚಿಂತನೆಗಳು ಸರಕುಗಳು ಮತ್ತು ಅವುಗಳ ಮಾರಾಟದ ಏರ‍್ಪಾಟುಗಳು ಮತ್ತು ಹೆಚ್ಚು ಹೆಚ್ಚು ಮಂದಿಯನ್ನು ಕೊಳ್ಳುಗರನ್ನಾಗಿಸುವತ್ತ ಸಾಗಿದೆ.  ಹೊಸಗಾಲದ ಅರಿಮೆ ಮತ್ತು ಚಳಕಗಳನ್ನು ಇದಕ್ಕಾಗಿ ಸಿದ್ದಪಡಿಸಲಾಗುತ್ತಿದೆ. ಕೊಳ್ಳುಬಾಕತನವು ನಮ್ಮನ್ನೇ ಕೊಳ್ಳುವ ಮಟ್ಟಕ್ಕೆ ನಾವೇ ದೂಡಿಕೊಳ್ಳುತ್ತಿದ್ದೇವೆ. ಹೀಗಿರುವಾಗ ಇದಕ್ಕೆಲ್ಲ ಪರಿಹಾರವೇನು ಎಂಬ ಕೇಳ್ವಿ ತಾನಾಗಿಯೇ ಏಳುತ್ತದೆ.

ಈಗಾಗಲೆ ನಮ್ಮ ಹಿರಿಯರು ಇದಕ್ಕೆ ಸರಿಯಾದ ದಾರಿಯನ್ನು ಹಾಕಿಕೊಟ್ಟು ಹೋಗಿದ್ದಾರೆ. ಆದರೆ ನಾವು ಆ ದಾರಿಯನ್ನು ತುಳಿಯದೇ ಇದ್ದುದರಿಂದ ಅಲ್ಲಿ ಗಿಡ-ಗಂಟೆ, ಮುಳ್ಳು, ಸೆತ್ತೆ-ಸೆದೆಗಳು ಬೆಳೆದುಕೊಂಡಿದೆ. ಅದನ್ನು ನಾವು ಕಿತ್ತು ಹಾಕಿ ಆ ದಾರಿಯನ್ನು ಮತ್ತೆ ಅಣಿಗೊಳಿಸಕೊಳ್ಳಬೇಕು. ಆ ದಾರಿಯನ್ನು ತುಳಿದು ತುಳಿದು ಮಟ್ಟ ಮಾಡಿ ಮುಂದೆ ಬರುವವರು ಕೂಡ ಆ ದಾರಿಗೆ ಬರಲು ಅನುವು ಮಾಡಿಕೊಡಬೇಕು. ಹಾಗಾದರೆ ಆ ದಾರಿಯೇನು?

ನಾವು ಬರಮಾಡಿಕೊಂಡಿರುವ ವೈಶ್ಯ ಮತ್ತು ಕ್ಶತ್ರಿಯ ಎಂಬ ಕುರಿಪುಗಳನ್ನು ನಾವು ಕೊಂದು ಹಾಕಬೇಕು; ಇಲ್ಲವಾದರೆ ಅವುಗಳ ಒತ್ತರವನ್ನು ತುಂಬ ಕಡಿಮೆ ಮಾಡಬೇಕು. ನಮ್ಮಲ್ಲಿರುವ ಶೂದ್ರತನಕ್ಕೆ ನಾವು ಸರಿಯಾದ ಮನ್ನಣೆ ಕೊಡಬೇಕು. ನಮ್ಮಲ್ಲಿರುವ ಶೂದ್ರತನವನ್ನು ಉಳಿಸಿಕೊಳ್ಳಬೇಕಾದರೆ ತಕ್ಕಮಟ್ಟಿಗಾದರೂ ನಾವು ಮಯ್ ದುಡಿಮೆಯನ್ನು ಮಾಡಲೇಬೇಕು. ಇದರಿಂದ ಮಾತ್ರ ನಾವು ನಮ್ಮ ಮಯ್ಯನ್ನು ಹದುಳವಾಗಿ ಇಟ್ಟುಕೊಳ್ಳಬಹುದು. ನಮ್ಮಲ್ಲಿರುವ ಬ್ರಾಹ್ಮಣತನಕ್ಕೆ ಸರಿಯಾದ ದಿಕ್ಕು ಮತ್ತು ಗುರಿಗಳನ್ನು ತೋರಬೇಕು ಅಂದರೆ ಮನಸ್ಸನ್ನು ಹೆಚ್ಚು ತನ್ನೇಳಿಗೆಯೆಡೆಗೆ ಕೊಂಡೊಯ್ಯಬೇಕು.  ತನ್ನೇಳಿಗೆಯಲ್ಲಿ ತನ್ನ ಸುತ್ತಲಿನ ಏಳಿಗೆಯನ್ನು ಒಳಗೊಳ್ಳುವಂತೆ ಮಾಡಬೇಕು. ತನ್ನೇಳಿಗೆಯಲ್ಲಿ ನೆಮ್ಮದಿಯಿದೆ; ತಣಿವಿದೆ; ತಾಳ್ಮೆಯಿದೆ. ಇದನ್ನೇ ಹನ್ನೆರಡನೇ ನೂರೇಡಿನ ಶರಣರು ಮಾಡಿ ತೋರಿಸಿದರು. ಈ ವಚನವು ಇದೇ ಚಿಂತನೆಯನ್ನು ಎತ್ತಿಹಿಡಿಯುತ್ತದೆ.
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ  
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ 
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ 
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
ಇದಲ್ಲದೆ, ಶರಣರಲ್ಲಿನ ಕಾಯಕವೇ ಕೈಲಾಸ(ದುಡಿಮೆ), ದಾಸೋಹ( ಹೆಚ್ಚಿನ ಹಣವನ್ನು/ಗಳಿಕೆಯನ್ನು ಇಲ್ಲದವರ ಬಳಕೆಗೆ ಕೊಡುವುದು), ಹೆಚ್ಚು ಗಳಿಕೆಗೆ ಆಸೆ ಪಡದಿರುವುದು, ತನ್ನೇಳಿಗೆಯ ಮಾತುಗಳನ್ನು ವಚನಗಳ ಮೂಲಕ ಕೂಡಣದಲ್ಲಿ ಹಂಚಿಕೊಳ್ಳುವುದು – ಇವೆಲ್ಲದರ ಮೂಲಕ ಎಲ್ಲರೂ ಅವರವರ ಬ್ರಾಹ್ಮಣ ಮತ್ತು ಶೂದ್ರತನಗಳ ಹದವಾದ ಬೆರಕೆಯನ್ನು ಸಾದಿಸಿವುದು. ಇದೇ ಶರಣರು ಕಂಡುಕೊಂಡ ಹೊಳಹು ಇಲ್ಲವೆ ಬಗೆಹರಿಕೆ.

ಆದರೆ, ಹೊಸಗಾಲದ ಅಳ್ಮೆ ಮತ್ತು ಮಾರಾಟಗಳು ಮತ್ತು ಅವುಗಳು ಕಟ್ಟಿಕೊಂಡಿರುವ ಏರ‍್ಪಾಟುಗಳು ಬುಡಮಟ್ಟದಲ್ಲಿ ಮನುಶ್ಯತನವನ್ನು ಅಲುಗಾಡಿಸಲು ತೊಡಗಿವೆ. ಅಲ್ಲದೆ ಈ ಏರ‍್ಪಾಟುಗಳು ಈ ನೆಲದ ತುಂಬಿರುವ ಬೇರ‍್ಮೆಯ ಮತ್ತು ಹಲತನದ ಅಳಿವಿಗೆ ಕಾರಣವಾಗಿವೆ. ಹಾಗಾಗಿ ಈ ಏರ‍್ಪಾಟುಗಳು ನಮ್ಮನ್ನು ತನ್ನೇಳಿಗೆಯ ದಾರಿಯೆಡೆಗೆ ಹೋಗಲು ಬಿಡುತ್ತಿಲ್ಲ. ಹಾಗಾದರೆ, ಈ ಏರ‍್ಪಾಟುಗಳು ಏಕೆ ಏರ‍್ಪಡುತ್ತಿವೆ? ಹೊಸಗಾಲದ ಮಾರಾಟದ ಏರ‍್ಪಾಟುಗಳು ದುರಾಸೆಯನ್ನು ಸಲಹುತ್ತದೆ. ಹೆಚ್ಚು ಹೆಚ್ಚು ಮಂದಿ ಕೊಳ್ಳುಗರಾದಶ್ಟು ಮಾರುಕಟ್ಟೆಗೆ ಇಲ್ಲವೆ ಮರಾಟಗಾರರಿಗೆ ಗಳಿಕೆ. ಹೆಚ್ಚು ಹೆಚ್ಚು ಮಂದಿ ಬಂದಾಗ ಏರ‍್ಪಾಟುಗಳು ಬೇಕಾಗುತ್ತವೆ. ಮಾರಾಟವನ್ನು ಸಲಹಲು ಮತ್ತು ಕಾಪಾಡಿಕೊಂಡು ಹೋಗಲು ಆಳ್ಮೆಯು ಇಲ್ಲವೆ ಅದರ ಏರ‍್ಪಾಟುಗಳು ಕಾಲಿಡುತ್ತವೆ. ದುರಾಸೆಯನ್ನು ತೂಗಿಸಿಕೊಂಡು ಹೋಗಲು ಈ ಏರ‍್ಪಾಟುಗಳು ತಲೆಯೆತ್ತುತ್ತವೆ. ಹಾಗಾಗಿ, ಇಂತಹ ಏರ‍್ಪಾಟುಗಳು ಮಾನವೀಯತೆಗೆ ತಕ್ಕಮೆಯನ್ನು ಇಲ್ಲವೆ ಬೆಲೆಯನ್ನು ನೀಡುವುದಿಲ್ಲ. ಇಲ್ಲಿ ಮಾನವೀಯತೆಯೆಂದರೆ ಶೂದ್ರ ಮತ್ತು ಬ್ರಾಹ್ಮಣವನ್ನು ಹದವಾದ ತೆರೆದಲ್ಲಿ ಬಳಸಿಕೊಂಡು ಹೋಗುವ ಒಂದು ಪಾಡು ಎಂದು ತಿಳಿಯಬಹುದು