ಸೋಮವಾರ, ಜೂನ್ 01, 2015

ಸೂಳ್ನುಡಿಯ ಚಳವಳಿಯೇ ಮೊದಲ ತನ್ಮದಿಪು ಚಳವಳಿ

ಈಗಾಗಲೇ ಗೊತ್ತಿರುವಂತೆ ತಮಿಳುನಾಡಿನಲ್ಲಿ ಇಪ್ಪತ್ತನೇ ನೂರೇಡಿನಲ್ಲಿ ನಡೆದ ಚಳವಳಿಯನ್ನೇ ಮೊದಲ ’ತನ್ಮದಿಪು ಚಳವಳಿ’(Self-respect Movement) ಎಂದು ಬಗೆಯಲಾಗಿದೆ. ಅಲ್ಲದೆ, ತನ್ಮದಿಪು ಚಳವಳಿಯನ್ನು ಬರೀ ತಮಿಳುನಾಡಿಗೆ ತಳುಕು ಹಾಕಲಾಗುತ್ತದೆ. ಇದನ್ನು ದ್ರಾವಿಡ ಚಳವಳಿಯ ಒಂದು ಬಾಗವಾಗಿ ನೋಡಲಾಗುತ್ತದೆ. ಆದರೆ ಇದಕ್ಕೂ ಮುಂಚೆಯೇ ಕನ್ನಡನಾಡಿನಲ್ಲಿ ’ತನ್ಮದಿಪು ಚಳವಳಿ’ ನಡೆದಿತ್ತೆಂಬುದನ್ನು ಹೆಚ್ಚಿನ ಕೂಡಣದರಿಗರು ಗಮನಿಸಿದಂತಿಲ್ಲ. ಅಂದರೆ ಹನ್ನೆರಡನೇ ನೂರೇಡಿನಲ್ಲಿ ನಡೆದ ’ಸೂಳ್ನುಡಿ ಚಳವಳಿ’(ವಚನ ಚಳವಳಿ) ಯನ್ನು ಒಂದು ತನ್ಮದಿಪಿನ ಚಳವಳಿಯಾಗಿ ಬಗೆದ ಸೀಳುನೋಟಗಳು ಸಿಗುವುದಿಲ್ಲ.

ತಮಿಳುನಾಡಿನಲ್ಲಿ ಜರುಗಿದ ತನ್ಮದಿಪು ಚಳವಳಿಯ ಮುಕ್ಯ ಗುರಿಗಳಲ್ಲಿ ತಮಿಳು ಕೂಡಣದಲ್ಲಿ ಎಲ್ಲರನ್ನು ಸಮಾನರನ್ನಾಗಿ ಕಾಣುವುದು, ವ್ಯಕ್ತಿಯ ಹುಟ್ಟಿನಿಂದ ಏರ‍್ಪಟ್ಟ ಮೇಲು-ಕೀಳುಗಳನ್ನು ತೊಡೆದು ಹಾಕಿ ಸಾಮಾನ್ಯ ಮಂದಿಯನ್ನೂ ಚಿಂತನೆಗೆ ಒಡ್ಡಿ ಅವರವರ ಅರಿವಿಗೆ ತಕ್ಕಂತೆ ಬಾಳಲು ಅನುವು ಮಾಡಿಕೊಡುವುದೇ ಆಗಿತ್ತು. ತನ್ಮದಿಪು ಚಳವಳಿಯ ಮುಂದಾಳಾಗಿದ್ದ ಕನ್ನಡಿಗ ಪೆರಿಯಾರ್ ಅವರು ಈ ಚಳವಳಿಯನ್ನು ’ಅರಿವು ವಿಡುದಲಯ್ ಇಯಕ್ಕಂ’(ಅರಿವು ಬಿಡುಗಡೆಯ ಚಳವಳಿ) ಎಂದು ಕರೆದರು. ಪೆರಿಯಾರ್ ಅವರಿಗೆ ಗಾಂದಿ-ನೆಹರು ನಂಬಿದ್ದ ರಾಜಕೀಯ ಬಿಡುಗಡೆ(ಸ್ವರಾಜ್) ಗಿಂತ ’ಅರಿವಿನ ಬಿಡುಗಡೆ’ಯೇ ಮುಕ್ಯವಾಗಿತ್ತು. ಪ್ರತಿಯೊಬ್ಬ ಮನುಶ್ಯನು ತನ್ನ ಅರಿವನ್ನು ಬಳಸಿಕೊಂಡು ಕೂಡಣದಲ್ಲಿ ಗವ್ರವದಿಂದ ಬಾಳ್ವೆ ಮಾಡುವಂತಾಗಬೇಕೆಂಬುದೇ ಅವರ ಬಯಕೆಯಾಗಿತ್ತು. ತಮಿಳರ ಮದುವೆಗಳಿಂದ ಹಾರುವರನ್ನು ಮತ್ತು ಅವರು ಹೇಳುವ ಸಂಸ್ಕ್ರುತ ಮಂತ್ರಗಳನ್ನು ತೆಗೆದುಹಾಕಲಾಯಿತು. ಇದಲ್ಲದೆ ಬೇರೆ ಬೇರೆ ಜಾತಿಯ ಗಂಡು-ಹೆಣ್ಣುಗಳಿಗೆ ಮದುವೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡಲಾಯಿತು. ಗಂಡು-ಹೆಣ್ಣು, ಉಳ್ಳವ-ಇಲ್ಲದವ, ಮೇಲ್ಜಾತಿ-ಕೀಳ್ಜಾತಿ, ಹೀಗೆ ಎಲ್ಲ ತೆರನಾದ ಅಸಮಾನತೆಯನ್ನು ತೊಡೆದು ಹಾಕುವುದೇ ಈ ಚಳವಳಿಯ ಅಡಿಕಟ್ಟಲೆಗಳಾದವು. ಮಂದಿಯಲ್ಲಿ ಎಚ್ಚರಿಕೆ ಮೂಡಿಸಲು ತಮಿಳು ನುಡಿಯನ್ನು ಚೆನ್ನಾಗಿ ಬಳಸಿಕೊಳ್ಳಲಾಯಿತೆಂಬುದನ್ನು ಇಲ್ಲಿ ಗಮನಿಸಬಹುದು.

ಈಗ ಕನ್ನಡನಾಡಿನ ಹನ್ನೆರಡನೇ ನೂರೇಡಿಗೆ ಬರೋಣ. ಆಗ ನಡೆದ ಸೂಳ್ನುಡಿಯ ಚಳವಳಿ ಕನ್ನಡದ ಕೂಡಣದಲ್ಲಿ ಒಂದು ದೊಡ್ಡ ಅರಿವಿನ ಅಲೆಯನ್ನು ಎಬ್ಬಿಸಿತು. ಈ ಚಳವಳಿಯಲ್ಲಿ ಮುಕ್ಯವಾಗಿ ಸಂಸ್ಕ್ರುತ ಮತ್ತು ಸಂಸ್ಕ್ರುತದ ಸಾಹಿತ್ಯ ಪರಂಪರೆಯನ್ನು ದಿಕ್ಕರಿಸಿ ಕನ್ನಡದ್ದೇ ಆದ ’ಸೂಳ್ನುಡಿ’ ಬರಹಗಳನ್ನು ಮಾಡಲಾಯಿತು. ಇದರ ಮೂಲಕ ಹೊಸದೊಂದು ’ಸೂಳ್ನುಡಿಯ ವಾಡಿಕೆ’ಯನ್ನು ಹುಟ್ಟು ಹಾಕಲಾಯಿತು. ಅನುಬವ ಮಂಟಪವನ್ನು ಏರ‍್ಪಡಿಸಿ ಅದರ ಮೂಲಕ ಗಂಡು-ಹೆಣ್ಣು, ಉಳ್ಳವ-ಇಲ್ಲದವ, ಮೇಲ್ಜಾತಿ-ಕೀಳ್ಜಾತಿ ಎಂದೆಣಿಸದೇ ಎಲ್ಲರಿಗೂ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳುವ ಮತ್ತು ಚರ‍್ಚಿಸುವ ಅವಕಾಶವನ್ನು ಮಾಡಿಕೊಡಲಾಯಿತು. ಹಾಗಾಗಿ ಅನುಬವ ಮಂಟಪವು ಹೊಸಗಾಲದ ಮಂದಿಯಾಳ್ವಿಕೆಯ ಗುಣಲಕ್ಶಣಗಳನ್ನು ಹೊಂದಿತ್ತು ಎಂದು ಹೇಳಬಹುದು. ಜಾತಿಯೇರ‍್ಪಾಟಿನಿಂದ ಉಂಟಾದ ಮೇಲು-ಕೀಳನ್ನು ತೊಡೆದು ಹಾಕಲು ಬೇರೆ ಬೇರೆ ಜಾತಿಯ ಹೆಣ್ಣು-ಗಂಡುಗಳ ಮದುವೆಗೆ ಅನುವು ಮಾಡಿಕೊಡಲಾಯಿತು. ದೇಗುಲ ಸಂಸ್ಕ್ರುತಿಯನ್ನು ದಿಕ್ಕರಿಸಿ ’ದೇಹವನ್ನೇ ದೇಗುಲ’ವನ್ನಾಗಿ ಮಾಡಿ ಪ್ರತಿಯೊಬ್ಬ ಮನುಶ್ಯನ ತನ್ಮದಿಪನ್ನು(ಆತ್ಮಗವ್ರವ) ಎತ್ತಿ ಹಿಡಿಯಲಾಯಿತು. ದಾಸೋಹವನ್ನು ವಾಡಿಕೆಗೆ ತಂದು ಉಳ್ಳವ-ಇಲ್ಲದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲಾಯಿತು. ಅರಿವೇ ಗುರು, ಮಾತೆಂಬುದು ಜ್ಯೋತಿರ‍್ಲಿಂಗ ಎಂಬ ನುಡಿಗಟ್ಟುಗಳು ಮೊಳಗಿದವು.

ಹೀಗೆ ಸೂಳ್ನುಡಿಗಳನ್ನು ಅಡಿಗಲ್ಲಾಗಿ ನಿಲ್ಲಿಸಿ ಕಟ್ಟಿದ ಚಳವಳಿ ಕೂಡಣದ, ತನ್ನರಿಮೆಯ ಮತ್ತು ಹಣಕಾಸಿನ ಸುದಾರಣೆಗಳನ್ನು ನೇರವಾಗಿ ಇಲ್ಲವೆ ನೇರವಲ್ಲದ ತೆರದಲ್ಲಿ ತಂದು ಸಮಾನತೆಯ ಕೂಡಣವನ್ನು ಕಟ್ಟುವೆಡೆಗೆ ಹೆಜ್ಜೆ ಇಟ್ಟಿತು.
ಹಾಗಾಗಿ, ಹತ್ತು-ಹಲವು ಬಗೆಗಳಲ್ಲಿ ತಮಿಳುನಾಡಿನ ’ತನ್ಮದಿಪು ಚಳವಳಿ’ ಕನ್ನಡನಾಡಿನ ’ಸೂಳ್ನುಡಿ ಚಳವಳಿ’ಯನ್ನೇ ಹೋಲುತ್ತದೆಯಲ್ಲದೆ ನೇರವಾಗಿ ಇಲ್ಲವೆ ನೇರವಲ್ಲದ ತೆರದಲ್ಲಿ ಸೂಳ್ನುಡಿ ಚಳವಳಿಯ  ಪ್ರಬಾವಕ್ಕೆ ಒಳಗಾಗಿದೆಯೆಂಬುದನ್ನು ಮನಗಾಣಬಹುದು.  ಆದರೆ ಈ ಎರಡು ಚಳವಳಿಗಳಲ್ಲಿ ವ್ಯತ್ಯಾಸಗಳೂ ಇದ್ದವು ಎಂಬುದನ್ನು ಗಮನಿಸಬೇಕಾಗುತ್ತದೆ. ಸೂಳ್ನುಡಿಯ ಚಳವಳಿಯು ಎಲ್ಲರನ್ನು ಒಳಗೊಳ್ಳುವ ಮತ್ತು ಎಲ್ಲ ಜಾತಿಯ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಚಳವಳಿಯಾಗಿತ್ತು. ಆದರೆ ತಮಿಳುನಾಡಿನ ಚಳವಳಿ ಒಂದು ಹಂತದಲ್ಲಿ ಹಾರುವರನ್ನು ವಿರೋದಿಸುವ ಚಳವಳಿಯಾಗಿ ಮಾರ‍್ಪಟ್ಟಿತು. ಆದರೆ ಕನ್ನಡನಾಡಿನಲ್ಲಿ ಹೀಗಾಗಲಿಲ್ಲ ಎಂಬುದನ್ನು ಗಮನಿಸಬಹುದು.

ತೀರಮೆಗಳು
ಸಾಮಾನ್ಯವಾಗಿ ವಚನ ಚಳವಳಿಯನ್ನು ಕೇವಲ ಲಿಂಗಾಯಿತ/ವೀರಶಯ್ವಕ್ಕೆ ತಳುಕು ಹಾಕಲಾಗುತ್ತದೆ. ಆದರೆ ವಚನ ಚಳವಳಿಯು ಇದನ್ನು ಮೀರಿ ಬೆಳೆದಿತ್ತು ಬದಲಾಗಿ ಹೊಸದೊಂದು ಕೂಡಣವನ್ನು ಕಟ್ಟಿಕೊಳ್ಳುವೆಡೆಗೆ ನಡೆದಿತ್ತು ಎಂಬುದನ್ನು ಮನಗಾಣಬೇಕಾಗಿದೆ.  ಕನ್ನಡನಾಡಿನ ಸೂಳ್ನುಡಿಯ ಚಳವಳಿಯು ತೆಂಕಣದ ಅರಿವಿನ ಮರುಹುಟ್ಟಿಗೆ(renaissance) ಮುನ್ನುಡಿ ಬರೆಯಿತು ಎಂದರೆ ತಪ್ಪಾಗಲಾರದು. ಕೂಡಣದರಿಗರು ಮತ್ತು ಸೀಳ್ನೋಟಗಾರರು ’ಸೂಳ್ನುಡಿ ಚಳವಳಿ’ ಮತ್ತು ’ತನ್ಮದಿಪು ಚಳವಳಿ’ಗಳನ್ನು ಹೋಲಿಸಿ ಹೆಚ್ಚು ಹೆಚ್ಚು ಮರು ಓದಿಗೆ ಒಳಪಡಿಸಬೇಕಾಗಿದೆ. ಇದರಿಂದ ಹೊರಬರುವ ತೀರಮೆಗಳು ತೆಂಕಣದ ನಾಡಿನ ಕೂಡಣಗಳಲ್ಲಿ ಹೊಸ ಹೊಳಹುಗಳಿಗೆ ದಿಕ್ಕು ತೋರಬಲ್ಲವಾಗಿವೆ.
(ಮಾಹಿತಿ ಸೆಲೆ: http://en.wikipedia.org/wiki/Self-Respect_Movement)